ADVERTISEMENT

ಇಂದು ಪ್ರಶ್ನಾರ್ಥಕ ಚಿಹ್ನೆ '?' ಯಕ್ಷಗಾನ

ಪ್ರಜಾವಾಣಿ ವಿಶೇಷ
Published 26 ಜುಲೈ 2024, 23:30 IST
Last Updated 26 ಜುಲೈ 2024, 23:30 IST
   

ಯಕ್ಷಗಾನವೆಂಬ ರಂಗ ಕಲೆಗೂ ಬದಲಾವಣೆಯ ಗಾಳಿ ಬೀಸಿ ಅದೆಷ್ಟೋ ವರ್ಷಗಳಾಗಿವೆ. ಇದೀಗ ವ್ಯಾಕರಣದಲ್ಲಿ ಬರುವ ವಿರಾಮ ಚಿಹ್ನೆಗಳಲ್ಲೊಂದಾದ ಪ್ರಶ್ನಾರ್ಥಕ ಚಿಹ್ನೆಯನ್ನೇ ಯಕ್ಷಗಾನ ಪ್ರಸಂಗವೊಂದಕ್ಕೆ ಹೆಸರು ಇರಿಸಲಾಗಿದೆ. ರಂಗಭೂಮಿಯಲ್ಲಿ ಈ ರೀತಿ ಚಿಹ್ನೆಯೇ ಹೆಸರು ಇರುವ ಕಲಾ ಪ್ರದರ್ಶನ ಬಹುಶಃ ಇದೇ ಮೊದಲು. ಹೆಸರಿಗೆ ತಕ್ಕಂತೆ ವಿನೂತನ ಸಂದೇಶ ಸಾರುವ ಸಾಮಾಜಿಕ ಕಥಾನಕವು ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮೇಳ ಹಾಗೂ ಅತಿಥಿ ಕಲಾವಿದರಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ (ಜು.27) ರಾತ್ರಿ ಯಕ್ಷ ಸಂಗಮ - ದಶಮ ಸಂಭ್ರಮ ಪ್ರಯುಕ್ತ ಪ್ರದರ್ಶನಗೊಳ್ಳಲಿದೆ.

ಈ ಪ್ರಸಂಗ ರಚಿಸಿದವರು ಈಗಾಗಲೇ ವಿನೂತನ ಸಾಮಾಜಿಕ ಕಥಾನಕಗಳನ್ನು ಯಕ್ಷಗಾನ ರಂಗಕ್ಕೆ ಕೊಟ್ಟಿರುವ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ. ಈ ಪ್ರಸಂಗವನ್ನು ಯಕ್ಷಗಾನ ರಂಗದಲ್ಲಿ ಹೊಸ ಕ್ರಾಂತಿ ಮಾಡಿ, ಇತ್ತೀಚೆಗಷ್ಟೇ ಅಗಲಿದ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಅರ್ಪಿಸಲಾಗಿದೆ. ಸಿನಿಮಾ ಕಥೆಗಳನ್ನು ಯಕ್ಷಗಾನ ರಂಗಕ್ಕೆ ಅಳವಡಿಸಿರುವ ದೇವದಾಸ್ ಈಶ್ವರಮಂಗಲ ಅವರ 92ನೇ ಕೃತಿ ಇದಾಗಿದ್ದು, ವ್ಯವಸಾಯಿ ಮೇಳಗಳ ಬೇಡಿಕೆಗೆ ಅನುಗುಣವಾಗಿ ಪ್ರಸಂಗ ರಚಿಸುವಲ್ಲಿ ಅವರು ಸಿದ್ಧಹಸ್ತರು ಬದುಕಿನಲ್ಲಿ ಏನು, ಹೇಗೆ, ಎತ್ತ, ಎಲ್ಲಿ, ಎಷ್ಟು ಇತ್ಯಾದಿಗಳೆಲ್ಲವೂ ಪ್ರಶ್ನಾರ್ಥಕವೇ ಆಗಿರುವುದರಿಂದ ಈ ಚಿಹ್ನೆಯನ್ನೇ ಪ್ರಸಂಗಕ್ಕೆ ಆಯ್ದುಕೊಳ್ಳಲಾಗಿದೆ ಎಂದಿದ್ದಾರೆ ಪ್ರಸಂಗಕರ್ತರು. ಭಾಗವತಿಕೆಯಲ್ಲಿ ಸಂತೋಷ್ ಕುಮಾರ್ ಆರ್ಡಿ ಮತ್ತು ಆನಂದ ಅಂಕೋಲ, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರೂರು ಮತ್ತು ಸೀತಾರಾಮ ಭಂಡಾರಿ ಗುಣವಂತೆ, ಚೆಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಮತ್ತು ಸುರೇಶ್ ಮೊಯಿಲಿ ಸಾಥ್ ನೀಡಲಿದ್ದಾರೆ. ನೀಲ್ಕೋಡು ಶಂಕರ ಹೆಗಡೆ, ಜಯರಾಮ ಕೊಠಾರಿ, ರಟ್ಟಾಡಿ ಶ್ರೀಕಾಂತ್ ಪೂಜಾರಿ, ಗಣೇಶ ಬೀಜಾಡಿ ಸ್ತ್ರೀವೇಷದಲ್ಲಿ, ರಮೇಶ್ ಭಂಡಾರಿ ಮೂರೂರು ಹಾಗೂ ದ್ವಿತೇಶ್ ಕಾಮತ್ ಹಿರಿಯಡ್ಕ ಅವರು ಹಾಸ್ಯ ಪಾತ್ರಗಳಲ್ಲಿರುತ್ತಾರೆ. ಜಲವಳ್ಳಿ ವಿದ್ಯಾಧರ ರಾವ್, ನರಸಿಂಹ ಗಾಂವ್ಕರ ಯಲ್ಲಾಪುರ, ನಾಗರಾಜ ಭಂಡಾರಿ ಗುಣವಂತೆ, ರಾಜೇಶ್ ಭಂಡಾರಿ ಗುಣವಂತೆ, ತನ್ಮಯ ಭಟ್ ಮಳ್ಳವಳ್ಳಿ, ಕೆ.ಜೆ.ಕಾರ್ತಿಕ್ ಹೆಗ್ಡೆ, ಅಜಿತ್ ಶೆಟ್ಟಿ ಯರುಕೋಣೆ, ಪ್ರಜ್ವಲ್ ಕುಮಾರ್, ಧನರಾಜ್ ಹೆಮ್ಮಾಡಿ ಅವರ ಮುಮ್ಮೇಳವಿದ್ದು, ಎಸ್.ಸುರೇಶ್ ಶೆಟ್ಟಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀಧರ್ ಭಟ್ ಕಾಸರಕೋಡು, ನಾಗರಾಜ್ ಭಟ್ ಕುಂಕಿಪಾಲ್ ಅವರು ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT