ಹೊಸ ಕ್ಯಾಲೆಂಡರ್ ವರ್ಷ ಆರಂಭವಾಗಲಿದೆ. ದೇಶದಲ್ಲಿ ಬದಲಾವಣೆಯ ಹೊಸ ಪರ್ವವೂ ಆರಂಭಗೊಂಡಿದೆ. ವೈಯಕ್ತಿಕ ಮಟ್ಟದಲ್ಲಿ ಹೇಳುವುದಾದರೆ ನನ್ನ ಮೂರನೆಯ ಕಾದಂಬರಿ ಅಚ್ಚಿಗೆ ಸಿದ್ಧವಾಗಿದೆ ಎಂಬುದು ಹರುಷ ನೀಡುತ್ತಿರುವ ಸಂಗತಿ. ಈ ವಸ್ತುವೂ ಅಧ್ಯಯನ, ಪ್ರವಾಸಗಳನ್ನು ಬೇಡಿದ್ದು, ‘ಕಶೀರ’ಕ್ಕಿಂತ ಭಿನ್ನವಾದ ಕಥಾಹಂದರವನ್ನು ಹೊಂದಿದೆ.
ಇನ್ನು ರಾಷ್ಟ್ರೀಯಮಟ್ಟದಲ್ಲಿ ಗಮನಿಸಿದರೆ, ಅನುಚ್ಛೇದ 370 ರದ್ದಾದದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರವಾಗಿ ತೀರ್ಪು ಬಂದಿರುವುದು ಚೇತೋಹಾರಿ ಸಂಗತಿಗಳು. ಚೇತೋಹಾರಿ ಎಂಬುದು ಹಿಂದೂಗಳಿಗೆ ಮಾತ್ರ ಅನ್ವಯವಾಗುವ ಭಾವವಲ್ಲ. ಸಮಸ್ತ ಭಾರತೀಯರೂ ಅನುಭವಕ್ಕೆ ತಂದುಕೊಳ್ಳಬೇಕಾದದ್ದು. ‘ವಸುಧೈವ ಕುಟುಂಬಕಂ’ ಎಂಬುದನ್ನು ಸ್ವಇಚ್ಛೆಯಿಂದ ಸಹಸ್ರಾರು ವರ್ಷಗಳಿಂದ ನಿರಂತರ ಪಾಲಿಸುತ್ತಲೇ ಬಂದಿರುವ ಈ ದೇಶವಾಸಿಗಳಲ್ಲಿ ಅಸಹಿಷ್ಣುತೆ ಎಂಬುದು ಕಿಂಚಿತ್ ಪ್ರಮಾಣದಲ್ಲಿದ್ದಿದ್ದರೂ ಭಾರತವಿಂದು ಅನ್ಯಮತೀಯರ ನೆಲೆವೀಡಾಗುತ್ತಿರಲಿಲ್ಲ. ಇಂಥ ಮಾದರಿ ದೇಶ ಜಗತ್ತಿನ ಬೇರೆಲ್ಲೂ ಇಲ್ಲವೆಂಬ ತಥ್ಯವನ್ನು ಗ್ರಹಿಸಲು ಇದು ಸಕಾಲ.
ಭಾರತವಿಡೀ ಒಗ್ಗೂಡಿ ಈ ದೇಶದ ಸಮಷ್ಟಿಪ್ರಜ್ಞೆಯನ್ನು ಜೀವಂತವಿರಿಸಬೇಕಾದರೆ ವ್ಯಷ್ಟಿಪ್ರಜ್ಞೆ ಹಿನ್ನೆಲೆಗೆ ಸರಿಯಬೇಕಾದುದು ಅವಶ್ಯ. ಈ ತತ್ತ್ವದ ಪ್ರತಿಪಾದನೆ ಹಾಗೂ ಅನುಷ್ಠಾನಗಳು ಸನಾತನ ಧರ್ಮದ ಜೀವಾಳವೇ ಆಗಿರುವುದರಿಂದ, ಮುಂಬರುವ ವರ್ಷಗಳಲ್ಲಿ, ವಿಶೇಷವಾಗಿ 2020ರಲ್ಲಿ ಇದರ ಅರಿವು ಹಾಗೂ ಅಳವಡಿಕೆಗಳು ಎಲ್ಲರಲ್ಲೂ ಮೂಡಿದರೆ ರಾಷ್ಟ್ರಹಿತ ನಿಶ್ಚಿತ.
ಸರ್ಕಾರ, ದೇಶದ ಸರ್ವಾಂಗೀಣ ಅಭ್ಯುದಯವನ್ನು ಗಮನದಲ್ಲಿರಿಸಿಕೊಂಡು ಇನ್ನಷ್ಟು ಮಾರ್ಪಾಡುಗಳನ್ನು ಮಾಡಬಹುದು. ಹೊಸ ನೀತಿ-ನಿಯಮಗಳನ್ನು ರೂಪಿಸಬಹುದು. ವಿರೋಧಿಸುವ ಸಲುವಾಗಿ ವಿರೋಧಿಸಬೇಕೆಂಬ, ಕಲ್ಲು ತೂರಿ, ಬೆಂಕಿ ಹೊತ್ತಿಸಿ, ಹಿಂಸೆಯೇ ವಿಜೃಂಭಿಸುವಂತೆ ಮಾಡಬೇಕೆಂಬ ಮನಸ್ಸುಗಳು ಆತ್ಮಾವಲೋಕನ ಮಾಡಿಕೊಳ್ಳುವುದೊಳಿತು. ಇಂಥ ನೇತ್ಯಾತ್ಮಕ ಆಲೋಚನೆ, ಕ್ರಿಯೆಗಳು, ಭಾರತಕ್ಕೆ ಅಭಿವೃದ್ಧಿ ಪಥವನ್ನು ಕಾಣಿಸುವ ಬದಲು ಹಿಂಸೆಯ ಕರಿನೆರಳಿನಲ್ಲಿ ಬೆಂದು ಕರಟುವಂತೆ ಮಾಡುತ್ತವೆ. ಇದರ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಉಂಟಾಗಿ, ವ್ಯಕ್ತಿಗಳು ಪರಸ್ಪರರನ್ನು ಸಂದೇಹ, ವೈಷಮ್ಯಗಳಿಂದ ಕಾಣುವಂತಾಗುತ್ತದೆ.
ಬಹುಮುಖ್ಯವಾಗಿ, ಮಾನವ ಸಂಬಂಧಗಳೇ ಮೂಲದ್ರವ್ಯವಾದ ಸಾಹಿತ್ಯದ ಮೇಲೆ ಉಂಟಾಗುವ ಪರಿಣಾಮವೆಂಥದ್ದು? ಇಂಥ ಹಿಂಸಾತ್ಮಕ ನೆಲೆ, ಮನಸ್ಥಿತಿಗಳಲ್ಲಿ ರಚಿಸಲ್ಪಡುವ ಬರಹಗಳು ಯಾವ ಸಾಮಾಜಿಕ, ವ್ಯಕ್ತಿಗತ ಮೌಲ್ಯಗಳನ್ನು ಬಿಂಬಿಸಿಯಾವು? ನಮ್ಮ ಸಮಕಾಲೀನವಾಗಿದ್ದ ಬಹುತೇಕ ನಾಗರಿಕತೆಗಳು ಸರ್ವನಾಶವಾಗಿರುವ ಈ ಹೊತ್ತಿನಲ್ಲಿ ಅಸ್ತಿತ್ವ ಉಳಿಸಿಕೊಂಡಿರುವವರು ನಾವು ಮಾತ್ರ ಎಂಬುದು ಉತ್ಪ್ರೇಕ್ಷೆಯಲ್ಲ. ದೇಶವಿದ್ದರೆ ನಾವು. ವೈರುಧ್ಯ, ವೈಮನಸ್ಸುಗಳು ಕರಗಿ ಸತ್ಯಾನ್ವೇಷಣೆಯೇ ಎಲ್ಲರ ಗುರಿಯಾಗಲಿ ಎಂಬುದೇ ಆಶಯ.
- ಸಹನಾ ವಿಜಯಕುಮಾರ್, ಲೇಖಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.