ADVERTISEMENT

ಅಂತರಂಗದ ಎಚ್ಚರ

ನನ್ನ ಅಂಬೇಡ್ಕರ್

ದೀಪಾ ಗಿರೀಶ್
Published 11 ಏಪ್ರಿಲ್ 2015, 19:30 IST
Last Updated 11 ಏಪ್ರಿಲ್ 2015, 19:30 IST

ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನನಗೆ ಅದರ ಆಚಾರ-ಆಲೋಚನೆಗಳಿಂದ ‘ಶೂದ್ರರು’ ಎಂಬ ಹಣೆಪಟ್ಟಿ ಹೊತ್ತ ಮಂದಿ ಅನುಭವಿಸುತ್ತಿದ್ದ ಅಸ್ಪೃಶ್ಯತೆ, ಅಸಮಾನತೆ, ಅನಾದರಗಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಅದರ ಕರಾಳ ಮುಖದ ಪರಿಚಯವಾದದ್ದು ನನ್ನನ್ನು ತಮ್ಮ ಸ್ವಂತ ಮಗಳಂತೆ ಕಾಣುತ್ತಿದ್ದ ತಾಯ್ತನದ ಪ್ರತಿರೂಪವಾದ ನಮ್ಮ ಮನೆಗೆಲಸದಾಕೆಯಿಂದ.

ಯಾವಾಗಲಾದರೊಮ್ಮೆ ನಾನು ಸ್ಕೂಲಿಗೆ ಹೋಗುವಾಗ ಬರುವಾಗ ಆಕೆಯನ್ನು ಹುಡುಕಿಕೊಂಡು ಅವರ ಕೆಲಸದ ಮನೆಗಳಿಗೆ ಹೋಗುತ್ತಿದ್ದೆ. ಅಲ್ಲೆಲ್ಲಾ ಅವರು ನನ್ನನ್ನು ತಮ್ಮ ಮಗಳೆಂದೇ ಹೇಳಿಕೊಂಡಿದ್ದರು. ನಾನು ಹಿಂದಿನ ಬಾಗಿಲಿನಿಂದ ನೇರವಾಗಿ ಅವರ ಮನೆಯ ಹಿತ್ತಲಿಗೆ ಹೋಗಬೇಕಿತ್ತು. ಅವರು ಮೂರಡಿ ಮೇಲಿನಿಂದ ನೀಡುವ ತಿಂಡಿ ತಿಂದು ‘ಮೀಸಲು’ ಲೋಟ ಒಡ್ಡಿ ಕಾಫಿ ಪಡೆದು ಕುಡಿಯಬೇಕಿತ್ತು. ಆಗೆಲ್ಲಾ ಆಗುತ್ತಿದ್ದ ಸಂಕಟ, ಅದೇ ಆಚರಣೆ ನಮ್ಮ ಮನೆಯಲ್ಲಿ ನಡೆಯುವಾಗ ಅನುಭವಕ್ಕೇ ಬಂದಿರಲಿಲ್ಲ.

ಒಮ್ಮೆಯಂತೂ ಟೆರೇಸಿನ ಮೇಲಿಂದ ಹಾರಿ ಬರುತ್ತಿದ್ದ ದುಪ್ಪಟ್ಟಾವನ್ನು ನೆಲಕ್ಕೆ ಬೀಳದಂತೆ ಓಡಿಹೋಗಿ ಹಿಡಿದು ತಂದುಕೊಟ್ಟರೆ, ನೇರವಾಗಿ ತುಂಬಿದ ಬಕೆಟ್ಟಿಗೆ ಅದ್ದಿಹೋದಳು ಆ ಮನೆ ಹೆಂಗಸು. ಅವತ್ತು ಅದೆಷ್ಟು ಕುದ್ದುಹೋಗಿದ್ದೆ ನಾನು..! ರಂಗಭೂಮಿ ಒಡನಾಟ ನನ್ನನ್ನು ಸಕಾಲದಲ್ಲಿ ಎಚ್ಚರಗೊಳ್ಳಲು ಸಹಾಯಮಾಡಿತು. ‘ಭಾವ್ರಿ’, ‘ಕೇಸರಿ ಬಿಳಿ ಹಸಿರು’, ’ದಂಡೆ’ಯಂಥ ನಾಟಕಗಳು, ಹಳ್ಳಿ ಹಳ್ಳಿಗಳಲ್ಲಿ ಹೊರಟ ಜಾಥಾ ವಾಸ್ತವ್ಯಗಳು ವಾಸ್ತವವನ್ನು ತಿಳಿಸಿಕೊಟ್ಟಿತು.

ಖೈರ್ಲಾಂಜಿ, ಕಂಬಾಲಪಲ್ಲಿ ಮಾರಣಹೋಮ ಕನಲಿಸಿತು. ವೈಚಾರಿಕ ಭಿನ್ನಾಭಿಪ್ರಾಯಗಳು ಹೊಸ ದಿಕ್ಕುಗಳನ್ನು ತೆರೆದಿಟ್ಟಿವು. ಇಂದು ನಾನು ಜಾತಿ ವಿನಾಶದ ಹಾದಿಯಲ್ಲಿ ಪ್ರಾಯೋಗಿಕವಾಗಿ ಒಡ್ಡಿಕೊಂಡವಳು, ಅಂತರ್ಜಾತಿ ವಿವಾಹ ಮನುಷ್ಯರ ನಡುವಿನ ಗೆರೆಗಳನ್ನು ಅಳಿಸಬಲ್ಲದು ಎಂದು ಕಂಡುಕೊಳ್ಳುವಲ್ಲಿ ಯಶಸ್ವಿಯಾದವಳು. ಬಿಡುಗಡೆಯ ಪ್ರಯತ್ನವೇ ಬದುಕಿನ ಮಾರ್ಗವೂ ಆಯಿತು. ಉಳ್ಳವರು-ಇಲ್ಲದವರ ನಡುವಿನ ಸಂಘರ್ಷ ಇನ್ನು ನೆನ್ನೆಯದಲ್ಲ.

ಕಾರ್ಮಿಕ ವಿಮೋಚನೆಯು ನಿರಂತರ ಹೋರಾಟದಲ್ಲಿ ಅಡಗಿದೆ ಎಂದು ಅಂಬೇಡ್ಕರ್ ಆದಿಯಾಗಿ ಅನೇಕರು ಪ್ರತಿಪಾದಿಸಿದ್ದಾರೆ.  ಈ ಆಶಯದ ಸೆಳೆತವು ದಲಿತರು ಹಾಗೂ ಇತರೆ ಹಿಂದುಳಿದ ವರ್ಗಕ್ಕೆ, ಅದರಲ್ಲೂ ಮಹಿಳೆಯರಿಗೆ ಪ್ರಧಾನವಾಗಿ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿರುವ ಬೆಂಗಳೂರಿನ ಗಾರ್ಮೆಂಟ್ ಉದ್ಯಮದ ಕಡೆ  ನನ್ನನ್ನು ಸೆಳೆಯಿತು. ಗಾರ್ಮೆಂಟ್ ಕಾರ್ಖಾನೆಗಳು ಶೋಷಣೆಯ ಕೂಪಗಳೂ ಆಗಿವೆ.

ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಹಲವು ವರ್ಷ ಜೊತೆಯಾಗಿ ಸಂವಿಧಾನದ ಆಶಯವನ್ನು ಎತ್ತಿಹಿಡಿಯಲು ಕೈಜೋಡಿಸಿದ್ದು ನನ್ನ ಬದುಕಿನ ಸಾರ್ಥಕ ದಿನಗಳು. ದಲಿತ ಅನುಕಂಪ ಶೋಷಣೆಯಷ್ಟೇ ಅಹಿತಕಾರಿ. ನನ್ನೊಳಗಿನ ದಲಿತ ಎಚ್ಚರಗೊಳ್ಳುವವರೆಗೆ ನನಗೆ ಅಂಬೇಡ್ಕರ್ ಕೇವಲ ಪರೀಕ್ಷಾರ್ಥ ಅಧ್ಯಯನದ ವಿಷಯವಷ್ಟೇ ಆಗಿದ್ದರು. ಈಗವರು ನನ್ನೊಳಗೂ ಇದ್ದಾರೆ! ಬುದ್ಧ ಕೇವಲ ಮೂರ್ತಿಯಾಗದೆ ಎದೆಯ ಮಾತೂ ಆಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT