ಅಜ್ಜಿ ನೀನೇ ಜಡೆ ಹಾಕು
ಅಮ್ಮ ಹಾಕಿದ್ದು ಸಾಕು.
ಸಿಕ್ಕು ಸಿಕ್ಕು ಸಿಕ್ಕು ಅಂತ
ಸಿಕ್ಕಾಪಟ್ಟೆ ರೇಗ್ತಾಳೆ
ಊರಿ ಊರಿ ತಲೆಬಾಚಿ
ನೆತ್ತೀನೆಲ್ಲ ನೋಯಿಸ್ತಾಳೆ.
ಅಜ್ಜಿ ನೀನೇ ಜಡೆ ಹಾಕು
ಅಮ್ಮ ಹಾಕಿದ್ದು ಸಾಕು.
ಕೂದ್ಲಿಗ್ ಎಣ್ಣೆ ಹಚ್ಚೋ ಬದ್ಲು
ಮುಖಕ್ಕೆಲ್ಲ ಮೆತ್ತತಾಳೆ
ತಲೆ ಅಲುಗಿದ್ ನೆವ ಹೇಳಿ
ಸೊಟ್ಟಗೆ ಬೈತಲೆ ತೆಗೀತಾಳೆ.
ಅಜ್ಜಿ ನೀನೇ ಜಡೆ ಹಾಕು
ಅಮ್ಮ ಹಾಕಿದ್ದು ಸಾಕು.
ಇಷ್ಟುದ್ದ ಪಟ್ಟಿ ಮಾಡಿ
ಬಾಚೋವಾಗ್ಲೇ ಬೈಯೋದು
ಆಟ ಆಟ ಆಟ ಅಂತ
ಲಂಗ ಹರ್ಕೊಂಡ್ ಬಂದಿದ್ದು
ಚಿನ್ನದ್ ಓಲೆ ಕಳೆದಿದ್ದು.
ಅಜ್ಜಿ ನೀನೇ ಜಡೆ ಹಾಕು
ಅಮ್ಮ ಹಾಕಿದ್ದು ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.