ಎರಡು ವರ್ಷಗಳ ಹಿಂದೆ ‘ಫಿಲ್ಮ್ಸ್ ಡಿವಿಷನ್’ನವರು ಮಲಯಾಳದ ಸಿನಿಮಾ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರ ಕುರಿತು ಒಂದು ಸಾಕ್ಷ್ಯಚಿತ್ರ ಮಾಡಿಕೊಡಿ ಎಂದು ಕೇಳಿದಾಗ, ತಕ್ಷಣ ಒಪ್ಪುವ ಸ್ಥಿತಿಯಲ್ಲಿ ಗಿರೀಶ ಕಾಸರವಳ್ಳಿಯವರು ಇರಲಿಲ್ಲ. ಸಾಕ್ಷ್ಯಚಿತ್ರ ತಯಾರಿಕೆಯಲ್ಲಿ ತಮ್ಮ ಕೈ ಪಳಗಿಲ್ಲ ಎಂಬ ಅಳುಕು ಅವರಿಗಿತ್ತು. ಆದರೆ, ‘ಅವರೇ ಮಾಡಲಿ’ ಎಂದು ಅಡೂರರು ಪ್ರೀತಿಯಿಂದ ಒಪ್ಪಿಗೆ ಸೂಚಿಸಿದ ಮೇಲೆ ಇಲ್ಲವೆನ್ನಲು ಗಿರೀಶರಿಗೆ ಆಗಲಿಲ್ಲ.
ಈಗ ಸಾಕ್ಷ್ಯಚಿತ್ರ ತಯಾರಾಗಿದೆ. ಮೊದಲಿನಿಂದಲೂ ಅವರ ಸಿನಿಮಾಗಳನ್ನು ಸೂಕ್ಷ್ಮವಾಗಿ ‘ಸಿನಿಮಾ ವಿದ್ಯಾರ್ಥಿ’ಯಂತೆ ಗಮನಿಸುತ್ತಾ ಬಂದಿರುವ ಗಿರೀಶ ಕಾಸರವಳ್ಳಿ ಅವರಿಗೀಗ ಎರಡೆರಡು ಹೆಮ್ಮೆ. ಒಂದು– ತಮ್ಮಿಷ್ಟದ ನಿರ್ದೇಶಕರನ್ನು ಕುರಿತು ಸಾಕ್ಷ್ಯಚಿತ್ರ ರೂಪಿಸಿದ್ದು. ಇನ್ನೊಂದು– ಅಡೂರರ ಬದುಕಿಗೂ, ಕೇರಳದ ರಾಜಕೀಯಕ್ಕೂ, ಅವರ ಸಿನಿಮಾಗಳಿಗೂ ಇರುವ ಸಂಬಂಧಗಳ ಸೂಕ್ಷ್ಮವನ್ನು ಅರಿತದ್ದು. ಗಿರೀಶರು ತಮ್ಮ ಈ ಅನುಭವವನ್ನು ಬಿಡಿಬಿಡಿಯಾಗಿ ಹಂಚಿಕೊಂಡರು.
‘‘ಅಡೂರರು ಗಾಂಧಿಯನ್ನು ಓದಿಕೊಂಡಿದ್ದರೆನ್ನುವುದು ನನಗೆ ಗೊತ್ತಿತ್ತು. ಆದರೆ, ಅವರು ಗಾಂಧಿಗ್ರಾಮದಲ್ಲೇ ಓದಿದ್ದು ಎನ್ನುವುದು ಗೊತ್ತಿರಲಿಲ್ಲ. ಅವರ ಸಿನಿಮಾಗಳಲ್ಲಿ ಯಾಕೆ ‘ಫ್ಯೂಡಲ್ ಸೆಟ್ ಅಪ್’ ಇರುತ್ತದೆ ಎಂದು ಪದೇಪದೇ ಯೋಚಿಸಿದ್ದೆ. ಬಾಲ್ಯದ ನೆನಪು, ತಿಳಿವಳಿಕೆ, ಅಲ್ಲಿನ ಸಾಂಪ್ರದಾಯಿಕ ಕಲೆ ಎಲ್ಲವೂ ಕೊಟ್ಟ ದೃಷ್ಟಿಕೋನ ಅದು ಎನ್ನುವುದು ಸಾಕ್ಷ್ಯಚಿತ್ರಕ್ಕೆಂದು ಅವರನ್ನು ಮಾತನಾಡಿಸಿದಾಗಲೇ ಗೊತ್ತಾದದ್ದು’’ ಎನ್ನುವ ಗಿರೀಶರಿಗೆ, ಕಥಕ್ಕಳಿಗೂ ಕೇರಳದ ಸಂಸ್ಕೃತಿಗೂ ಇರುವ ಸಂಬಂಧ, ಅಲ್ಲಿನ ರಾಜಕೀಯ ಸೂಕ್ಷ್ಮಗಳು ಎಲ್ಲವೂ ಅಡೂರರಿಂದ ಇನ್ನೂ ಸ್ಪಷ್ಟವಾಗಿ ತಿಳಿದವಂತೆ.
ವೈಕಂ, ವಾಸುದೇವನ್ ನಾಯರ್ ಮೊದಲಾದ ಸಾಹಿತಿಗಳ ಮೂಲಕ ಗಿರೀಶರಿಗೆ ಒದಗಿಬಂದಿದ್ದ ಕೇರಳದ ಜ್ಞಾನದ ಶಾಖೆಗಳನ್ನು ಅಡೂರರ ಒಡನಾಟ ವಿಸ್ತರಿಸಿರುವುದೂ ನಿಜ.
ಸಿನಿಮಾದ ಪರಿಭಾಷೆ ಹಾಗೂ ಕಟ್ಟುವ ಕ್ರಮವನ್ನು ಕೇಂದ್ರವಾಗಿ ಇಟ್ಟುಕೊಂಡು ಅಡೂರರ ಕುರಿತು ಸಾಕ್ಷ್ಯಚಿತ್ರ ತಯಾರಿಸಲು ಹೊರಟ ಗಿರೀಶರಿಗೆ ಮೊದಲಿಗೆ ನಿರ್ದಿಷ್ಟ ಚೌಕಟ್ಟೇನೂ ಇರಲಿಲ್ಲ. ಮೊದಲಿನಷ್ಟು ಆರೋಗ್ಯ ಸರಿಯಿಲ್ಲದ ಅಡೂರರನ್ನು ಮಾತಿಗೆ ಕೂರಿಸಿ, ತಮ್ಮ ಸಾಕ್ಷ್ಯಚಿತ್ರದ ವಸ್ತುಕೇಂದ್ರದ ವಿಷಯ ಮೊಗೆಯಲು ಕೆಲವು ಸೆಷನ್ನುಗಳೇ ಬೇಕಾದವು.
ಗಿರೀಶರು ಹೇಳುವಂತೆ ಸಿನಿಮಾ ತಯಾರಿಕೆಯ ಮಾದರಿಯಲ್ಲೂ ಅಡೂರರದ್ದು ತಮ್ಮ ತದ್ವಿರುದ್ಧ ಮಾದರಿ. ಅವರನ್ನು ‘ಮಿನಿಮಲಿಸ್ಟ್’ ಎಂದೇ ಗಿರೀಶರು ಕರೆಯುವುದು. ದೃಶ್ಯಗಳನ್ನು ಕಡಿಮೆ ವಿವರಗಳಲ್ಲಿ, ಅತಿ ಕಡಿಮೆ ಭಾವುಕತೆಯಿಂದ ಕಟ್ಟಿ ಕೊಡುತ್ತಾ, ಎಲ್ಲವನ್ನೂ ಸೂಚ್ಯವಾಗಿಯೂ ಸೂಕ್ಷ್ಮವಾಗಿಯೂ ತೋರುವ ಕ್ರಮ ಅವರದ್ದು. ಅದೇ ತಮ್ಮದು ‘ಕುವೆಂಪು ಪರಂಪರೆ’ ಎಂದು ಗಿರೀಶರು ಕರೆದುಕೊಳ್ಳುತ್ತಾರೆ.
‘ಎಂಥ ಸನ್ನಿವೇಶದಲ್ಲಿಯೂ ರಸ್ತೆ ಪಕ್ಕದ ಗರಿಕೆ ಹುಲ್ಲಿನ ಸೌಂದರ್ಯವನ್ನೂ ನೋಡುವ ವ್ಯವಧಾನದ ಕ್ರಮವಿದು’ ಎಂದು ಡಿ.ಆರ್. ನಾಗರಾಜ್ ಒಂದೆಡೆ ಕುವೆಂಪು ಕಾದಂಬರಿಗಳನ್ನು ಕುರಿತು ಹೇಳಿದ್ದಾರೆ. ಅದನ್ನು ನೆನಪಿಸಿಕೊಳ್ಳುವ ಗಿರೀಶರಿಗೆ, ಆಲೋಚನೆಯೇ ಅನುಭವ ಆಗಬೇಕು ಎಂದು ಪರಿಭಾವಿಸಿರುವ ತಮಗೂ ಆಲೋಚನೆ ಸೂಚ್ಯವಾಗಿಯೂ ಸೂಕ್ಷ್ಮವಾಗಿಯೂ ಅಭಿವ್ಯಕ್ತಗೊಳ್ಳಬೇಕೆಂದು ಬಯಸುವ ಅಡೂರರಿಗೂ ಇರುವ ವ್ಯತ್ಯಾಸ ಆಸಕ್ತಿಕರವಾಗಿ ಕಂಡಿದೆ. ಆ ವ್ಯತ್ಯಾಸದ ಹುಡುಕಾಟವಾಗಿಯೂ ಅವರಿಗೆ ಸಾಕ್ಷ್ಯಚಿತ್ರ ತಯಾರಿಕೆ ಒದಗಿಬಂದಿತು.
ಗಿರೀಶರೇನೋ ಅಡೂರರ ಸಿನಿಮಾಗಳಿಗೂ ತಮ್ಮ ಸಿನಿಮಾಗಳಿಗೂ ಇರುವ ವ್ಯತ್ಯಾಸವನ್ನು ಹೀಗೆ ಗುರ್ತಿಸುತ್ತಾರೆ. ಅದೇ, ಅಡೂರರಿಗೆ ಗಿರೀಶರ ಸಿನಿಮಾಗಳ ಬಗ್ಗೆ ಎಂಥ ಅಭಿಪ್ರಾಯವಿದೆ ಎನ್ನುವುದು ಕುತೂಹಲ. ಅದಕ್ಕೆ ಗಿರೀಶರು ಕೊಟ್ಟ ಉತ್ತರವಿದು: ‘‘ಅವರು ತಮ್ಮ ಕೆಲವು ಸಂದರ್ಶನಗಳಲ್ಲಿ ಹೇಳಿರುವಂತೆ, ಭಾರತೀಯ ಸಿನಿಮಾ ನಿರ್ದೇಶಕರಲ್ಲಿ ನಾನೂ ಪ್ರಮುಖ. ಗುಣಮಟ್ಟದ ಸ್ಥಿರತೆಯಿಂದ, ಅಭಿವ್ಯಕ್ತಿಯ ಹೊಸ ದಾರಿಗಳ ಅನ್ವೇಷಣೆಯೊಂದಿಗೆ ಸಿನಿಮಾಗಳನ್ನು ನಾನು ಮಾಡುತ್ತೇನೆ ಎಂದು ಅವರು ಗುರ್ತಿಸಿದ್ದಾರೆ. ಅವರಿಗೆ ನನ್ನ ‘ಕನಸೆಂಬೋ ಕುದುರೆಯನೇರಿ’ ಸಿನಿಮಾ ತುಂಬಾ ಇಷ್ಟ. ದೇಶದ ಹತ್ತು ಪ್ರಮುಖ ಸಿನಿಮಾಗಳನ್ನು ಪಟ್ಟಿ ಮಾಡಿ ಎಂದರೆ, ಅದನ್ನು ಅವರು ತಪ್ಪದೇ ಉಲ್ಲೇಖಿಸುತ್ತಾರೆ. ನಂತರ ಅವರಿಗೆ ಇಷ್ಟವಾದ ನನ್ನ ಸಿನಿಮಾ ‘ನಾಯಿ ನೆರಳು’. ನಿರೂಪಣಾ ಮಾದರಿಯನ್ನು ಅವರು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಎನ್ನುವುದಕ್ಕೂ ಇದು ಉದಾಹರಣೆ ಇರಬಹುದು’’.
ಅಡೂರರ ಸಿನಿಮಾಗಳಲ್ಲಿ ‘ಮುಗಾಮುಗಂ’, ‘ಅನಂತರಂ’ ಗಿರೀಶರಿಗೆ ತುಂಬಾ ಇಷ್ಟವಾದವು. ಎಡಪಕ್ಷಗಳು ಛಿದ್ರವಾಗುವುದನ್ನು ರಾಜಕೀಯ ವಿಶ್ಲೇಷಣೆಯಂತೆ ತೋರಿಸದೆ, ರೂಪಕವಾಗಿ ನೋಡಿರುವ ರೀತಿ ಅವರಿಗೆ ‘ಮುಗಾಮುಗಂ’ (ಮುಖಾಮುಖಿ) ಇಷ್ಟವಾಗಲು ಕಾರಣ. ಆ ಸಿನಿಮಾದ ಮುಖ್ಯಪಾತ್ರ ಶ್ರೀಧರನ್ ಆದರ್ಶಗಳನ್ನು ಇಟ್ಟುಕೊಂಡು ಬದುಕಿದವನು, ಆಮೇಲೆ ನಿಗೂಢ ವ್ಯಕ್ತಿಯಾಗುತ್ತಾನೆ. ಅದು ಆದರ್ಶ–ಕನಸು, ಆದರ್ಶ–ವಾಸ್ತವದ ನಡುವಿನ ವ್ಯತ್ಯಾಸದ ರೂಪಕದಂತೆ ಕಾಣಿಸುತ್ತದೆ. ಎಡಪಕ್ಷಗಳ ಸ್ಥಿತಿಗತಿಗಷ್ಟೇ ಸೀಮಿತಗೊಳ್ಳದೆ ಎಲ್ಲಾ ಆದರ್ಶಗಳ ಸ್ಥಿತಿಯೂ ಅದೇ ಆಗಿರಬಹುದೇನೋ ಎಂದು ಸಾಧ್ಯತೆಯನ್ನು ವಿಸ್ತೃತಗೊಳಿಸಿ ತೋರುವ ಮಾದರಿ ಅದು ಎಂದು ತಮ್ಮ ಚಿಂತನೆಯನ್ನು ಗಿರೀಶರು ಹಂಚಿಕೊಳ್ಳುತ್ತಾರೆ.
ಗಿರೀಶರು ಎರಡು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾರೆ. ಒಂದು– ಅನಂತಮೂರ್ತಿ ಅವರನ್ನು ಕುರಿತಾದದ್ದು. ಇನ್ನೊಂದು– ಅಡೂರರ ಸಿನಿಮಾದ ‘ಇಮೇಜ್’ಗಳನ್ನು ಬಗೆಯುವ ಯತ್ನದ್ದು. ಎರಡರಲ್ಲಿ ಅನಂತಮೂರ್ತಿ ಅವರನ್ನು ಕುರಿತ ಸಾಕ್ಷ್ಯಚಿತ್ರ ಹೆಚ್ಚು ಸವಾಲಿನದ್ದಾಗಿತ್ತಂತೆ. ಅನಂತಮೂರ್ತಿ ಒಳ್ಳೆಯ ಮಾತುಗಾರ ಆಗಿದ್ದುದುದು ಒಂದು ಬಗೆಯಲ್ಲಿ ಅನುಕೂಲವೇ ಹೌದಾಗಿತ್ತು. ಆದರೆ, ಬರಹಗಾರರಷ್ಟೇ ಅಲ್ಲದೆ ಚಿಂತಕರಾಗಿ, ಯೋಚನಾಕ್ರಮವನ್ನೇ ತಿದ್ದಬಲ್ಲ ವ್ಯಕ್ತಿಯಾಗಿ ಅವರಿಗಿರುವ ದೊಡ್ಡ ಹಂದರವನ್ನು ‘ಸಾಕ್ಷ್ಯಚಿತ್ರ’ದ ಚೌಕಟ್ಟಿಗೆ ಒಗ್ಗಿಸುವುದು ಕಷ್ಟವಿತ್ತಂತೆ. ಅಡೂರರು ವಸ್ತುಕೇಂದ್ರವಾಗಿ ಮಾತನಾಡಿದ್ದರಿಂದ ‘ಸಾಕ್ಷ್ಯಚಿತ್ರ’ಕ್ಕೆ ತಂತಾನೇ ಒಂದು ಗತಿ ಪ್ರಾಪ್ತವಾಯಿತು ಎನ್ನುತ್ತಾರೆ.
‘ಪ್ಲೇಯಿಂಗ್ ಟು ದಿ ಗ್ಯಾಲರಿ’ ರೀತಿಯ ಇಂಗ್ಲಿಷ್ ಮಾತನಾಡದ ಅಡೂರರು, ತಮ್ಮ ನೆಲದಲ್ಲಿ ‘ಬೇರು ಬಿಟ್ಟುಕೊಂಡೇ’ ಮಾತನಾಡುವ ಶೈಲಿಯವರು. ಅದನ್ನು ಅದೇ ಹದದಲ್ಲಿ ಹಿಡಿದಿಡುತ್ತಾ, ಐದು ಅಧ್ಯಾಯಗಳಾಗಿ ಸಾಕ್ಷ್ಯಚಿತ್ರವನ್ನು ಗಿರೀಶರು ವಿಂಗಡಿಸಿದರು. ಕೊನೆಗೆ ಎಲ್ಲವನ್ನೂ ‘ಬಿಂಬಗಳು । ಪ್ರತಿಬಿಂಬಗಳು’ (ಇಮೇಜಸ್ । ರಿಫ್ಲೆಕ್ಷನ್ಸ್) ಎಂಬ ಸೂತ್ರದಿಂದ ಕಟ್ಟಿಕೊಟ್ಟರು. ಅಡೂರರ ಸಿನಿಮಾ ತಯಾರಿಕೆಯ ತತ್ತ್ವಗಳು, ರೂಪಕಗಳನ್ನು ಕಟ್ಟುವ ಕ್ರಮ ಎಲ್ಲವನ್ನು ಮೊಗೆಯುವ ತಮ್ಮ ಉತ್ಸಾಹಕ್ಕೆ ‘ಸಾಕ್ಷ್ಯಚಿತ್ರ’ದ ಫಲ ಸಂದ ಹೆಮ್ಮೆ ಈಗ ಗಿರೀಶರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.