ಅಡಿಗರ ಕಾವ್ಯ ಕುರಿತ ನಾಟಕೀಯ ಬೆಳವಣಿಗೆಯೊಂದಕ್ಕೆ ನಾನು ಒಳಗಾದದ್ದನ್ನು ಇಲ್ಲಿ ಹೇಳಬೇಕು. ತಾತ್ವಿಕವಾಗಿ ನಾನು ಅಡಿಗ ಮತ್ತು ಎಲಿಯಟ್ಟರನ್ನು ವಿರೋಧಿಸುತ್ತಿದ್ದೆ. ಒಂದು ಸಂಜೆ ನಾನು ಅಡಿಗರ ಹೊಸ ಕವನಗಳನ್ನು ಮತ್ತು ಎಲಿಯಟ್ಟನ `ಪ್ರೆಲ್ಯೂಡ್ಸ್'ನ್ನು ಓದಿದೆ. ಅವು ನನ್ನನ್ನು ಆಳವಾಗಿ ಕಲಕಿದವು. ನನ್ನೊಳಗೆ ಗೊಂದಲ ಹುಟ್ಟಿತು. ನನ್ನ ಸಾಹಿತ್ಯಕ ಸಂವೇದನೆ ನನ್ನೆಲ್ಲ ಅಭಿಪ್ರಾಯಗಳನ್ನೂ ಮೀರಿತು. ನಿರಂಜನರಿಗೆ ಕೊಟ್ಟಿದ್ದ ನನ್ನ ಎಲ್ಲ ಲೇಖನಗಳನ್ನು ವಾಪಸ್ಸು ಪಡೆದೆ.
ಅಡಿಗರ ಜೊತೆ ನನ್ನ ಅಂತರಂಗವನ್ನು ಹಂಚಿಕೊಳ್ಳತೊಡಗಿದೆ. ಕಾಲೇಜಿನಲ್ಲಿ ಎಲಿಯೆಟ್, ಯೇಟ್ಸ್, ಪೌಂಡರ ಬಗ್ಗೆ ಚರ್ಚೆಗಳಾಗುತ್ತಿದ್ದವು. ನಮಗಿದ್ದ ಅಧ್ಯಾಪಕರುಗಳ ನಡುವಿನ ಸಾಹಿತ್ಯ ಚರ್ಚೆಯಿಂದಲೇ ನಮಗೆ ಸಾಕಷ್ಟು ಚಿಂತನೆಯ ವಿಚಾರಗಳು ದಕ್ಕುತ್ತಿದ್ದವು.
ಕಾಫಿಹೌಸಿನಲ್ಲಿ ಅಡಿಗರ ಕಾವ್ಯದ ಚರ್ಚೆ ನಡೆಯುತ್ತಿತ್ತು. ಅಡಿಗರು ಸಂಕೋಚದಿಂದಲೇ ತಮ್ಮ ಕೋಟಿನ ಜೇಬಿಗೆ ಕೈ ಹಾಕಿ ತಾವು ಬರೆದದ್ದನ್ನು ಓದಲು ಹಿಂಜರಿದು ಕೊಡುತ್ತಿದ್ದರು. ಅವರು ಎಂದೂ ತಮ್ಮ ಪದ್ಯಗಳನ್ನು ತಾವೇ ವಿವರಿಸುತ್ತಿರಲಿಲ್ಲ. ನನಗೆ ಅವರ ಕವನಗಳು ಇಷ್ಟವಾಗದಿದ್ದಾಗ ನೇರವಾಗಿ ಹೇಳಿಬಿಡುತ್ತಿದ್ದೆ, ಆಗ ಕೂಡ ಅವರು ವಾದಿಸುತ್ತಿರಲಿಲ್ಲ.
ಅವರ `ಭೂತ' ಕವನ ನನಗೆ `ಮಚ್ ಅಡೋ ಎಬೌಟ್ ನಥಿಂಗ್' ಥರ ಎನ್ನಿಸಿತ್ತು. ಅದನ್ನು ಅಡಿಗರಿಗೆ ಹೇಳಿದೆ ಕೂಡ. ಅವರು ನಕ್ಕು ಪದ್ಯವನ್ನು ಜೇಬಿಗಿಟ್ಟುಕೊಂಡರು. ಕೆಲವು ತಿಂಗಳುಗಳ ನಂತರ ನಾನು ಶಿವಮೊಗ್ಗದ `ಮೀನಾಕ್ಷಿ' ಹೋಟೆಲ್‌ನಲ್ಲಿ ಸ್ನಾನ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಆ ಕವನದ ಕೆಲವು ಸಾಲುಗಳು ನೆನಪಾದವು.
ಕವನದ ಅರ್ಥ ಥಟ್ ಎನ್ನುವಂತೆ ಏನನ್ನೋ ಹೊಳೆಯಿಸಿ ಮಾಯವಾಯಿತು. ಸ್ನಾನ ಮುಗಿಸಿ ಬಂದವನೆ ನಾನು ಆ ಪದ್ಯ ಕುರಿತು ನನಗನ್ನಿಸಿದ್ದನ್ನೆಲ್ಲ ಅಡಿಗರಿಗೆ ಪತ್ರ ಬರೆದೆ. ಇದು ಆದದ್ದು ನಾನು ಶಿವಮೊಗ್ಗದಲ್ಲಿ ಅಧ್ಯಾಪಕನಾಗಿದ್ದಾಗ.
ಗೋಪಾಲಕೃಷ್ಣ ಅಡಿಗರ ಪರಿಚಯ ಆಳವಾದ ಸಂಬಂಧವಾಗಿ ತಿರುಗುತ್ತಿದ್ದ ದಿನಗಳವು. ಮೈಸೂರಿನಲ್ಲಿದ್ದಾಗ ಅವರು ಪಂಚೆ ಉಟ್ಟು, ಮೇಲೆ ಕೋಟು ಹಾಕಿ, ಕೈಯಲ್ಲೊಂದು ಬ್ಯಾಗು ಹಿಡಿದು, ಬಸ್ಸಿನಲ್ಲಿ ಬರುತ್ತಿದ್ದರು. `ಇಂದ್ರಭವನ'ಕ್ಕೆ ಹೋಗಿ ತಮ್ಮ ಮಕ್ಕಳಿಗೆ ಇಷ್ಟದ ಸಿಹಿತಿಂಡಿ ಕೊಂಡು ಬ್ಯಾಗಿನಲ್ಲಿ ಹಾಕಿಕೊಂಡು ನೇರ `ಕಾಫಿಹೌಸ್'ಗೆ ಬರುತ್ತಿದ್ದರು.
ಅಲ್ಲಿ ಅವರಿಗಾಗಿ ನಾವೆಲ್ಲ ಕಾದಿರುತ್ತಿದ್ದೆವು. ಒಟ್ಟಾಗಿ ಕುಳಿತು ಮೇಲಿಂದ ಮೇಲೆ ಸಿಗರೇಟು ಸೇದುತ್ತ, ಒನ್ ಬೈ ಟು ಕಾಫಿ ಮೇಲಿಂದ ಮೇಲೆ ಕುಡಿಯುತ್ತ ಚರ್ಚೆಗಳು ನಡೆಯುತ್ತಿದ್ದವು. ಈ ಒನ್ ಬೈ ಟು ಕಾಫಿಯ ಮೇಲೆ ಆಗ ಬೀಚಿ ಮಾಡಿದ ಒಂದು ಜೋಕು ಪ್ರಸಿದ್ಧವಾಗಿತ್ತು. ಅದೇನಂದರೆ, ಮೊದಲು ಮೈಸೂರು ಅಂತಿದ್ದ ನಮ್ಮ ರಾಜ್ಯವನ್ನು `ಕರ್ನಾಟಕ' ಎಂದು ಮಾಡಬೇಕು ಎಂದು ತೀರ್ಮಾನವಾಯಿತಂತೆ.
ಆಗ ಡಿ.ವಿ.ಜಿ.ಯವರು ಎರಡು ಕರ್ನಾಟಕ ಮಾಡಬೇಕು ಎಂದು ವಾದಿಸಿದ್ದರಂತೆ. ನಾವು ಕಾಫಿಯನ್ನು ಒನ್ ಬೈ ಟು ಮಾಡಿದರೆ ಈ ಡಿ.ವಿ.ಜಿ. ಕರ್ನಾಟಕವನ್ನೂ ಒನ್ ಬೈ ಟು ಮಾಡುತ್ತಿದ್ದಾರೆ ಅಂತ ತಮಾಷೆ ಮಾಡುತ್ತಿದ್ದೆವು. ನನಗೂ ಆಗ ಬಹಳ ಸಿಗರೇಟು ಸೇದುವ ಹುಚ್ಚು. ನಾನು ಸಾಮಾನ್ಯವಾಗಿ ಬೆಂಕಿಪೊಟ್ಟಣ ಮರೆತು ಬರುತ್ತಿದ್ದೆ.
ಆಗ ಅಡಿಗರ ಹತ್ತಿರ ತೆಗೆದುಕೊಂಡು ಸಿಗರೇಟು ಹಚ್ಚಿಕೊಳ್ಳುತ್ತಿದ್ದೆ. ಅವರು ನಾನು ಹಚ್ಚುವುದನ್ನೇ ನೋಡುತ್ತ ಕಾದಿದ್ದು ಥಟ್ಟನೆ ಬೆಂಕಿಪೊಟ್ಟಣವನ್ನು ನನ್ನ ಕೈಯಿಂದ ತೆಗೆದುಕೊಳ್ಳುತ್ತಿದ್ದರು, ನಾನು ಅದನ್ನು ಜೇಬಿಗೆ ಹಾಕಿಕೊಂಡು ಮರೆತು ಹೋದ ಅನುಭವ ಅವರಿಗಿದ್ದದ್ದರಿಂದ.
ಒಂದು ದಿನ ಅಡಿಗರು ಹೀಗೆ ಬಂದವರು ಮಾತುಕತೆಯೆಲ್ಲ ಆದ ಮೇಲೆ ಬಸ್ಸಿಗೆ ಕಾದಿದ್ದರು. ನಾನೂ ಅವರ ಜೊತೆ ನಿಂತಿದ್ದೆ. ಅವರು ನನ್ನ ಕಡೆ ತಿರುಗಿ, `ನನ್ನ ಕ್ರಿಯೇಟಿವಿಟಿ ಹೊರಟುಹೋಯಿತು. ನನಗಿನ್ನು ಬರೆಯೋಕ್ಕಾಗಲ್ಲ. ಒಂದಕ್ಷರವೂ ಬರೆಯೋಕ್ಕೆ ಆಗುತ್ತಿಲ್ಲ ನನ್ನಿಂದ' ಅಂದರು. ಬಹಳ ಕಡಿಮೆ ಮಾತನಾಡುವ ಅಡಿಗರ ಈ ಮಾತು ನನ್ನನ್ನು ಒಂದು ಕ್ಷಣ ಗೊಂದಲಕ್ಕೊಳಗುಮಾಡಿತು.
ಅವರ ಮಾತಿನಲ್ಲಿ ದೈನ್ಯವಿರಲಿಲ್ಲ, ದುಃಖವಿರಲಿಲ್ಲ. ಏನೋ ಒಂದು ಸತ್ಯವನ್ನು ತಾವು ಗುರುತಿಸಿದವರ ಹಾಗಿತ್ತು ಅದು. ಇದಾದ ಒಂದು ವಾರದ ನಂತರ `ಕಾಫಿಹೌಸ್'ಗೆ ಬಂದಾಗ ನನ್ನ ಕೈಯಲ್ಲಿ ಒಂದು ಪದ್ಯವನ್ನು ಕೊಟ್ಟರು. ತಮಗೆ ಬರೆಯಲಾಗದಿದ್ದುದರ ಬಗ್ಗೆಯೇ ಬರೆದ ಪದ್ಯ ಅದು. `ನೀನೆಲ್ಲಿ ಈಗ ಹೆಗಲಿಗೆ ಹೆಗಲು ಕೊಟ್ಟವನು ಹಾಯನ್ನುರುಟುರುಟು ಊದಿದವನು...' ಎಂದು ಶುರುವಾಗುವ `ಕೂಪ ಮಂಡೂಕ' ಪದ್ಯ. ಇದು ಕನ್ನಡದ ಅತ್ಯಂತ ಶ್ರೇಷ್ಠ ಪದ್ಯಗಳಲ್ಲಿ ಒಂದು.
ತನ್ನನ್ನೇ ತಾನು ನಿರಾಕರಿಸಿಕೊಂಡು ಬರೆದ ಕನ್ನಡದ ಮೊದಲ ಲೇಖಕ ಅಡಿಗರು. ಅದಕ್ಕಾಗಿ ನನಗೆ ಅವರು ಇಷ್ಟ. ನಿನ್ನನ್ನು ನಂಬಿ ತಾನು ಮೋಸ ಹೋದೆ ಎಂಬುದು ಅಡಿಗರ ಪದ್ಯಗಳಲ್ಲಿರುವ ಒಂದು ಪ್ರಧಾನ ಭಾವ. ಅವರ `ಭೂಮಿಗೀತ'ದಿಂದಲೇ ಇದರ ಛಾಯೆ ಕಾಣಬಹುದು.
`ಕೂಪಮಂಡೂಕ'ದಲ್ಲೂ ಇದೇ ಭಾವ ಮೇಲುಗೈಯಾಗಿದೆ. ಇಂತಹ ಎಕ್ಸ್‌ಟ್ರೀಂ ಭಾವಗಳಲ್ಲಿ ಇದ್ದದ್ದರಿಂದಲೇ ಅವರು ಜನಸಂಘ ಸೇರಿದ್ದು. ಅವರು ಜನಸಂಘದಿಂದ ಬೆಂಗಳೂರಲ್ಲಿ ಚುನಾವಣೆಗೆ ನಿಂತಾಗ ಲಂಕೇಶರು ಅವರನ್ನು ಬೆಂಬಲಿಸಿ ಓಡಾಡಿದರು. ನಾನು ಅಡಿಗರನ್ನು ಆಗ ತಾತ್ವಿಕ ಕಾರಣಗಳಿಗಾಗಿ ವಿರೋಧಿಸಿದೆ.
ಶಿವಮೊಗ್ಗದಲ್ಲಿ ಕೆಲಸ ಮಾಡುವಾಗಲೆ ನನಗೆ ಎಂ.ಎ.ಗೆ ಪ್ರವೇಶ ದೊರಕಿತು. ರಜೆ ಹಾಕಿ ಮೈಸೂರಿಗೆ ಹೋದೆ. ಆಗೆಲ್ಲ ಎಂ.ಎ. ಒಂದು ವರ್ಷದ ಅವಧಿಯದ್ದಾಗಿತ್ತು. ಈ ದಿನಗಳಲ್ಲಿ ಒಮ್ಮೆ ಅಡಿಗರ ಹತ್ತಿರ ನನ್ನ ಒಂದು ಪದ್ಯವನ್ನು ತೆಗೆದುಕೊಂಡು ಹೋದೆ. ನಾನು ಆಡೆನ್‌ನ ಪ್ರಭಾವದಿಂದ ಬರೆದ ಪದ್ಯ ಅದು. ಅದನ್ನು ಓದಿ `ಒಂದು ಒಳ್ಳೆಯ ಪದ್ಯವನ್ನು ನೀನು ಬರೆದಿರೋದು ಈಗಲೆ' ಎಂದು ಹೇಳಿ ನನ್ನ ಪದ್ಯವನ್ನು ಹಿಂದಕ್ಕೆ ಕೊಟ್ಟರು.
ಇದಾದ ಎರಡು ಮೂರು ದಿನಗಳ ನಂತರ ಅವರು ಒಂದು ಪದ್ಯ ಬರೆದುಕೊಂಡು ಬಂದು ನನ್ನ ಕೈಯಲ್ಲಿ ಕೊಟ್ಟರು. ನನ್ನ ಇಡೀ ಪದ್ಯ ಅವರ ಪದ್ಯದೊಳಗಿತ್ತು. ನಾನು ಸಡಿಲವಾಗಿ ಬರೆದ ಸಾಲುಗಳನ್ನೆಲ್ಲ ಅವರು ಬಿಗಿಮಾಡಿದ್ದರು. ಅವರು ಬರೆದದ್ದು `ಪ್ರಾರ್ಥನೆ' ಪದ್ಯ.
ಯಾರಾದರೂ ನನ್ನ `ರಾಜನ ಹೊಸ ವರ್ಷದ ಪ್ರಾರ್ಥನೆ...' ಪದ್ಯವನ್ನೂ ಅಡಿಗರ ಪದ್ಯವನ್ನೂ ಅಕ್ಕ ಪಕ್ಕ ಇಟ್ಟು ಓದುವುದಾದರೆ ಸಾಹಿತ್ಯ ಅಧ್ಯಯನಕ್ಕೆ ಕುತೂಹಲಕಾರಿಯಾದ ವಿವರಗಳು ವಿಚಾರಗಳು ಸಿಗುತ್ತವೆ ಎಂದು ನನ್ನ ಭಾವನೆ. ನನ್ನ ಪ್ರಯತ್ನ `ಮೈನರ್', ಅಡಿಗರದ್ದು ನನ್ನಿಂದ ದೋಚಿ ಹುಟ್ಟಿದ `ಮೇಜರ್' ಪದ್ಯ.
ಅಡಿಗರ ಈ ಪದ್ಯದಲ್ಲಿ `ಮುಷ್ಟಿಮೈಥುನದಹಂಕಾರ ಕೆರಳಿಸಬೇಡ' ಎಂಬ ಮಾತಿದೆ. ಇದನ್ನು ಓದಿದ ಡಿ.ವಿ.ಜಿ.ಯವರು ಬಹಳ ಸಿಟ್ಟಾಗಿ ಇಂತಹ ಬರವಣಿಗೆಯನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಅಡಿಗರಿಗೆ `ನಿಮ್ಮ ಮೇಲೆ ಇಂಥದ್ದೊಂದು ದೂರು ಬಂದಿದೆ, ಇದಕ್ಕೇನು ಉತ್ತರ' ಎಂದು ಕೇಳಿ ಪತ್ರ ಬರೆದರು.
ಆಗ ಅಡಿಗರು `ಇದನ್ನು ಬರೆದವನು ನಾನು, ಇದಕ್ಕೆ ನಾನು ಸಮಜಾಯಿಷಿ ಕೊಡುವುದು ಸರಿಯಾಗಲಾರದು. ಈ ಪದ್ಯದ ಗುಣಮಟ್ಟ ಇತ್ಯಾದಿಗಳ ಬಗ್ಗೆ ತಿಳಿಯಬೇಕಿದ್ದರೆ ನನ್ನ ಸ್ನೇಹಿತರಾದ ಯು.ಆರ್. ಅನಂತಮೂರ್ತಿಯವರನ್ನು ಕೇಳಬೇಕಾಗಿ ಕೋರಿಕೆ' ಎಂದು ಬರೆದರು. ಈ ವಿಚಾರ ಇಲ್ಲಿಗೆ ನಿಂತುಹೋಯಿತು.
ಈ ಘಟನೆ ನಡೆದ ಆಸುಪಾಸಿನಲ್ಲಿ ತೀ.ನಂ.ಶ್ರೀ.ಯವರು ಒಮ್ಮೆ ಎಲ್ಲೋ ಸಿಕ್ಕಾಗ ನನಗೆ `ಅನಂತಮೂರ್ತಿ, ಈ ಅಡಿಗರ ಪದ್ಯಗಳಲ್ಲಿ ಭಾವವೇ ಮುಂದಾಗುತ್ತದೆ; ಕಾವ್ಯ ರಸವಾಗಬೇಕೇ ಹೊರತು ಭಾವದಲ್ಲೇ ಉಳಿಯಬಾರದು' ಎಂದರು. ಅದಕ್ಕೆ ನಾನು `ಅದು ಅವರವರ ಮನಸ್ಥಿತಿಯನ್ನು ಅವಲಂಬಿಸುತ್ತೆ ಅಲ್ಲವೇ ಸರ್? ನೀವು ಬಹಳ ಮಡಿವಂತ ಕುಟುಂಬದಲ್ಲಿ ಬೆಳೆದವರಾದರೆ ಮುಷ್ಟಿಮೈಥುನದಂತಹ ಪದವೇ ನಿಮ್ಮನ್ನು ಇರಿಸುಮುರಿಸು ಮಾಡುತ್ತೆ. ಭಾವ, ರಸ ಎನ್ನುವುದು ಅವರವರ ಸಬ್ಜೆಕ್ಟಿವಿಟಿ ಮೇಲೆ ಹೋಗುತ್ತದೆ' ಎಂದಿದ್ದೆ.
ಅವರು ವಯಸ್ಸು, ಅನುಭವದಲ್ಲಿ ನನಗಿಂತ ಬಹಳ ದೊಡ್ಡವರು. ಅವೆಲ್ಲ ಏನೇ ಇದ್ದರೂ ಆ ಕಾಲದಲ್ಲಿ ಇಂತಹ ಚರ್ಚೆಗಳು ಮುಕ್ತವಾಗಿ ನಡೆಯುತ್ತಿದ್ದವು. ಇದರಲ್ಲಿ ವೈಯಕ್ತಿಕ ಸಿಟ್ಟು, ಅಸಮಾಧಾನಗಳಿಗೆ ಜಾಗವಿರಲಿಲ್ಲ.
ಎಂ.ಎ.ಯಲ್ಲಿರುವಾಗ ನಾನು ಡಿ.ಎಚ್. ಲಾರೆನ್ಸ್ ಮೇಲೆ ಒಂದು ದೀರ್ಘ ಪ್ರಬಂಧ ಬರೆದೆ. ಆಗ ನಾವು ಎಂ.ಎ.ನಲ್ಲಿದ್ದವರು ಐದಾರು ಜನ ಮಾತ್ರ. ಒಂದು ಪತ್ರಿಕೆಗೆ ಮೂರು ಪ್ರಶ್ನೆಗಳಿರುತ್ತಿದ್ದವು. ನಾನು ಹೀಗೆ ಒಂದಕ್ಕೆ ಉತ್ತರ ಬರೆಯುವಾಗ ವಿಚಾರಗಳು ಹಾಗೇ ಉಕ್ಕಿದ ಹಾಗಾಗುತ್ತಿತ್ತು. ಒಂದು ಪೇಪರಿನ ಉತ್ತರವನ್ನು ಸಂಪೂರ್ಣ ಮಾಡಲಾಗದಿದ್ದಾಗ ಪೇಪರಿನ ಕೊನೆಯಲ್ಲಿ `ಇದರ ಉತ್ತರವನ್ನು ಮುಂದಿನ ಪತ್ರಿಕೆಯಲ್ಲಿ ಮುಂದುವರಿಸುತ್ತೇನೆ' ಎಂದು ಬರೆದು ಬಿಡುತ್ತಿದ್ದೆ.
ವೈವಾ ಮಾಡಲು ಬಂದವರು‘He is a special candidate for us' ಅಂದು, ನನ್ನ ಅಷ್ಟೂ ಪತ್ರಿಕೆಗಳನ್ನು ಇಟ್ಟುಕೊಂಡು ಹೇಗೆ ಒಂದು ಕಡೆ ಮುಗಿದದ್ದನ್ನು ಇನ್ನೊಂದರಲ್ಲಿ ಹೇಗೆ ಮುಂದುವರಿಸಿದ್ದೇನೆ ಎಂದು ಒಟ್ಟು ಮಾಡಿ ಓದಿದ್ದರು. ಎಂ.ಎ.ನಲ್ಲಿ ನನಗೆ `ಪೂರ್ಣಕೃಷ್ಣರಾವ್ ಚಿನ್ನದ ಪದಕ' ಬಂದಿತು.
ಮೆಡಲ್ ಪಡೆದವರಿಗೆಲ್ಲ ಕಾಲೇಜಿನಲ್ಲಿ ಸತ್ಕಾರ ಏರ್ಪಟ್ಟಿತ್ತು. ಅಂದು ನಾನು ಮಾತಾಡಬೇಕಿತ್ತು. ಯಾವುದೊ ಗುಂಗಿನಲ್ಲಿ ಈ ಸಮಾರಂಭವನ್ನೆ ಮರೆತು ಎಲ್ಲೋ ಗೆಳೆಯರ ಜೊತೆ ಮಾತನಾಡುತ್ತ ಕುಳಿತಿದ್ದು ಆಮೇಲೆ ಎಲ್ಲರಿಂದ ಬೈಸಿಕೊಂಡೆ. ಆಮೇಲೆ ಹಾಸನಕ್ಕೆ ಮತ್ತೆ ಉಪನ್ಯಾಸಕನಾಗಿ ಬಂದೆ.
ರಾಜೀವನ ಸಖ್ಯ
ಡಾಕ್ಟರೇಟ್ ನಂತರ ರಾಜೀವ ನನ್ನ ಜೊತೆ ಮೈಸೂರಿನ ರೀಜನಲ್ ಕಾಲೇಜಿನಲ್ಲಿ ಆನಂತರ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಅಫ್ ಇಂಡಿಯನ್ ಇಂಗ್ಲಿಷ್‌ನಲ್ಲಿ ಪ್ರೊಫೆಸರ್ ಆದ. ಈ ದಿನಗಳಲ್ಲಿ ರಾಜೀವ ನನ್ನ ಕತೆಗಳ ತೀವ್ರ ಓದುಗ. ಅವನೊಳಗಿನ ವಿಮರ್ಶಕ ನನ್ನೊಳಗಿನ ಕತೆಗಾರನನ್ನು ಎಚ್ಚರವಾಗಿಟ್ಟಿರುತ್ತಿದ್ದ. ಅವನು ಒಂದೊಂದು ಕತೆಯನ್ನ ಓದಿ ತನ್ನ ಅತೃಪ್ತಿಯನ್ನು ಹೇಳುತ್ತಾ ಹೋಗುತ್ತಿದ್ದ. ಅವನ ಅತೃಪ್ತಿಯ ಮೇಲೆ ನಾನು ಇನ್ನೊಂದು, ಮತ್ತೊಂದು ಕತೆ ಬರೆಯುತ್ತಿದ್ದೆ.
ಅವನು ಲೋಕಸಂಚಾರಿಯಾಗಿದ್ದ. ಸ್ಥಿರವಾಗಿ ಒಂದು ಕೆಲಸಕ್ಕೆ ಅಂಟಿಕೊಂಡಿದ್ದವನು ನಾನು. ಅವನು ನನಗೆ ಬಹಳ ವಿರುದ್ಧ ದಿಕ್ಕಿನಲ್ಲಿ ಇದ್ದ. ಆದರೆ ಅವನ ಮನಸ್ಸು ವಿಚಾರಗಳು ಬಹಳ ಪ್ರಖರವಾಗಿತ್ತು. ಅವನು ನನ್ನ `ಪ್ರಶ್ನೆ' ಸಂಕಲನಕ್ಕೆ ಬರೆದ ಮುನ್ನುಡಿ ಇವತ್ತಿಗೂ ಅತ್ಯುತ್ತಮ ಮುನ್ನುಡಿ. ನಾನು ಇಂಗ್ಲೆಂಡಿಗೆ ಓದಲು ಹೋದಾಗ ಅಲ್ಲಿ ಯಾವ ದೊಡ್ಡ ಚಿಂತಕರನ್ನು ನೋಡಿದರೂ, ನಮ್ಮ ರಾಜೀವನ ಹಾಗೆ ಇಲ್ಲ ಅನ್ನಿಸುತ್ತಿತ್ತು. ಅಂಥ ಒಬ್ಬ ಚಿಂತಕನ ಜೊತೆ ಬೆಳೆದಿದ್ದೇನೆ ಎನ್ನುವ ಅಭಿಮಾನ ಈಗಲೂ ನನ್ನೊಳಗಿದೆ.
ನನಗೆ ಅವನು ಏನು ಕೊಟ್ಟನೊ, ನನಗೆ ಅದನ್ನ ಅವನಿಗೆ ಕೊಡಲಿಕ್ಕೆ ಆಗಲಿಲ್ಲವೇನೋ ಎಂದು ನನ್ನ ಮನಸ್ಸು ಕೆಲವೊಮ್ಮೆ ಬಾಧಿಸುತ್ತದೆ. ಯಾಕೆಂದರೆ ನನಗೆ ಸಂಗೀತದ ಬಗ್ಗೆ ಅಷ್ಟು ಗೊತ್ತಿಲ್ಲ. ಇವತ್ತಿಗೂ ರಾಜೀವ್‌ಗೆ ಸಾಹಿತ್ಯದಲ್ಲಿ ಬಹಳ ಆಸಕ್ತಿ ಇದೆ. ಅವನು ಹೇಗೆ ಓದುತ್ತಿದ್ದ ಅನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಅಡಿಗರ `ಭೂಮಿಗೀತ'ದಲ್ಲಿ ಒಂದು ಪ್ರತಿಮೆ ಬರುತ್ತದೆ, ಅದು ಪಂಜರದ ಪ್ರತಿಮೆ. ಆ ಪಂಜರದಲ್ಲಿ ಒಂದು ಹಕ್ಕಿ ಇದೆ, ಹಕ್ಕಿಗೆ ಒಂದು ಕಾಳು ಹಾಕುವ ಬಟ್ಟಲಿದೆ.
`ರೆಕ್ಕೆ, ಕುಕ್ಕಿ ಪುಕ್ಕವ ಕಿತ್ತು ರಾಶಿ ಹಾಕಿದೆ ತಿಂಡಿ ತಟ್ಟೆಯೊಳಗೆ' ಎನ್ನುವ ಸಾಲು ಬರುತ್ತದೆ. ಕನ್ನಡದಲ್ಲಿ `ತಿಂಡಿ' ಅಂದರೆ ನಮ್ಮ ಮುದಕ್ಕಾಗಿ ಮಾಡುವ ಕೆಲಸ ಅಂತ ಅರ್ಥವಿದೆ. ಧಾರವಾಡದ ಕಡೆ ಸ್ವಲ್ಪ ಕಾಮುಕವಾದ ಅರ್ಥವೂ ಇದೆಯಂತೆ. `ರೆಕ್ಕೆ, ಪುಕ್ಕವ ಕಿತ್ತು ರಾಶಿ ಹಾಕಿದೆ ತಿಂಡಿ ತಟ್ಟೆಯೊಳಗೆ' ಎನ್ನುವಾಗ it has begun to enjoy self torture.ಇದನ್ನು ತಿಂಡಿ ಅನ್ನೋ ಶಬ್ದದಿಂದ ಅವರು ಸೂಚಿಸ್ತಾರೆ ನೋಡು' ಅಂತ ರಾಜೀವ ಹೇಳಿದ. ಈ ರೀತಿ ಅವನಿಗೆ ಕಾವ್ಯವನ್ನು ಓದುವ ಅಪರೂಪದ ಶಕ್ತಿಯಿತ್ತು.
ಕೆಲವು ವರ್ಷಗಳ ಕೆಳಗೆ ಹಲವು ಸಂಘಟನೆಗಳವರು ಸೇರಿ ನನಗೆ ಸನ್ಮಾನ ಮಾಡುವುದಕ್ಕೆ ನಿಶ್ಚಯ ಮಾಡಿದ್ದರು. ಸನ್ಮಾನ ಮಾಡಲು ಸುತ್ತೂರು ಸ್ವಾಮೀಜಿ ಬಂದಿದ್ದರು. ಅಂದಿನ ಸಭೆಯಲ್ಲಿ ರಾಜೀವ ಭಾಷಣ ಮಾಡಬೇಕಿತ್ತು. ರಾಜೀವ ಬಂದವನು ಮೈಕ್ ಎದುರಿಗೆ ನಿಂತ. ಮೈಕ್ ಕೆಟ್ಟು ಹೋಗಿತ್ತು. ಕಿರ‌್ರೋ ಎಂದು ಸದ್ದು ಮಾಡಲು ಶುರುಮಾಡಿತು. ರಾಜೀವ `ಸರಿ ಮಾಡ್ರಿ' ಅಂದ.
ಸರಿ ಮಾಡಿದರು, ಮತ್ತೆ ಮಾತನಾಡಬೇಕೆಂದು ಬಾಯಿ ತೆರೆದ, ಅದು ಮತ್ತೆ ಹಾಗೇ ಜೋರು ಸದ್ದು ಮಾಡಿತು. ಕೋಪಗೊಂಡವನೆ `ಏ ಹೋಗೋ, ಅನಂತ್ ಬರ‌್ತೀನೋ' ಅಂತ ಹೇಳಿ ಸೀದ ಸಭೆಯಿಂದ ಹೊರಟುಹೋಗಿ ಬಿಟ್ಟ. ಸುತ್ತೂರು ಸ್ವಾಮಿ, `ಇವರು ಇಷ್ಟು ಬೇಗ ತಮ್ಮ ತಾಳ್ಮೆ ಕಳಕೊಳ್ಳಬಾರದಿತ್ತು' ಅಂದರು.
ಇದು ನನಗೆ ಅವಮಾನ ಮಾಡಿದಂತೆ ಎಂದು ಅವನಿಗೆ ಅನ್ನಿಸಿರಲಿಲ್ಲ ಎನ್ನುವುದು ಬೇಸರ ತಂದಿತು. ಅವರಿವರ ಹತ್ತಿರ ನನ್ನನ್ನು ಬೈದು ಮಾತಾಡುತ್ತಾನೆ ರಾಜೀವ ಎಂದೂ ಕೇಳಿದ್ದೆ. ಈ ಬಗ್ಗೆ ಅವನನ್ನು ನೇರವಾಗಿ ಒಮ್ಮೆ ಕೇಳಿದೆ, ಅದಕ್ಕವನು `ಹೌದೊ... ಆದರೆ ಅದನ್ನೆಲ್ಲ ಹಚ್ಚಿಕೊಬೇಡ' ಎಂದು ನನ್ನ ತಬ್ಬಿಕೊಂಡ.
ರಾಜೀವನಿಗೆ ತನ್ನ ಗುರುಗಳ ಮೇಲೆ ಬಹಳ ವಿಶ್ವಾಸ. ಒಂದು ಸಾರಿ ಅವನು ನನ್ನ ಬಳಿ `ಅಲಿ ಅಕ್ಬರ್‌ಖಾನ್ ಎಷ್ಟು ದೊಡ್ಡ ಮನುಷ್ಯ ಅಂದ್ರೆ, ನಾನು ಎಷ್ಟು ಚೆನ್ನಾಗಿ ನುಡಿಸ್ತೀನಿ ಅಂತ ಅವರಿಗೆ ಗೊತ್ತು. ಆದರೆ ನಾನು ಹತ್ತು ಸಾರಿ ಮೀಟಿ ನುಡಿಸಿದ್ದನ್ನ, ಅವರು ಒಂದು ಸಾರಿ ಮೀಟಿ ನುಡಿಸ್ತಾರೆ. ಅವರು ಸಾಯದ ಹೊರತು ನಾನು ದೊಡ್ಡ ಸಂಗೀತಗಾರ ಆಗಲ್ಲ. ನನ್ನ ಗುರು ಸಾಯಬೇಕು' ಎಂದಿದ್ದ. ಅವನ ಈ ಮಾತು ಈಗಲೂ ನನ್ನೊಳಗೆ ಕಂಪನ ಉಂಟುಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.