ADVERTISEMENT

ಅನನ್ಯ ಕನಸುಗಾರ

ಎಚ್.ಎಸ್.ಸುಧೀರ
Published 2 ಆಗಸ್ಟ್ 2015, 15:00 IST
Last Updated 2 ಆಗಸ್ಟ್ 2015, 15:00 IST

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಿಧನದಿಂದ (ಜುಲೈ 27) ದೇಶ ನಿಜ ಅರ್ಥದಲ್ಲಿ ತನ್ನ ‘ಭಾರತ ರತ್ನ’ವನ್ನು ಕಳೆದುಕೊಂಡಿದೆ. ಅವರೊಬ್ಬ ಸಾಧಕರಾಗಿಯಷ್ಟೇ ಸಮಾಜಕ್ಕೆ ಮುಖ್ಯವಾಗಿರಲಿಲ್ಲ. ಕಲಾಂ ಅವರು ಅತ್ಯಂತ ಜನಪ್ರಿಯ ಹಾಗೂ ಮಕ್ಕಳ ಸ್ನೇಹಿ ವ್ಯಕ್ತಿಯಾಗಿದ್ದರು.

ರಾಷ್ಟ್ರಪತಿ ಪದವಿಗೆ ಏರಿದಾಗಲೂ ಅವರು ತಮ್ಮ ಸರಳತೆಯನ್ನು, ಜನಸಾಮಾನ್ಯರೊಂದಿಗಿನ ಒಡನಾಟವನ್ನು ಬಿಟ್ಟು ಕೊಟ್ಟಿರಲಿಲ್ಲ. ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಸಂದರ್ಭದಲ್ಲೂ ಕಲಾಂ ಮಣ್ಣಿಗೆ ಅಂಟಿಕೊಂಡೇ ಇದ್ದರು. ಜವಾಹರ್‌ಲಾಲ್‌ ನೆಹರೂ ಕುರಿತಂತೆ ‘ಚಾಚಾ ನೆಹರು’ ಎನ್ನುವ ಭಾವುಕ ವಿಶೇಷಣ ಚಾಲ್ತಿಯಲ್ಲಿದೆ. ಆದರೆ, ಕಲಾಂ ಅವರಂತೆ ಮಕ್ಕಳಲ್ಲಿ ಮಕ್ಕಳಾದ ಮತ್ತೊಬ್ಬ ನಾಯಕನನ್ನು ಭಾರತದಲ್ಲಿ ಮಾತ್ರವೇನು, ವಿಶ್ವದಲ್ಲೇ ಕಾಣುವುದು ಕಷ್ಟ. ಎಂಬತ್ತಮೂರರ ಈ ಹಿರಿಯನ ವ್ಯಕ್ತಿತ್ವದಲ್ಲೂ ಒಂದು ಮಗುತನವಿತ್ತು. ಅಂತೆಯೇ ರಾಜಕಾರಣದಲ್ಲಿ ಇದ್ದುಕೊಂಡೂ ರಾಜಕೀಯದ ಯಾವ ಸೋಗನ್ನೂ ಸೋಂಕನ್ನೂ ಅಂಟಿಸಿಕೊಳ್ಳದ ಹೆಚ್ಚುಗಾರಿಕೆ ಅವರದು.

ಕಲಾಂ ಅವರು ಮುಖ್ಯವಾಗಿ ಓರ್ವ ಬಾಹ್ಯಾಕಾಶ ವಿಜ್ಞಾನಿ. ಆದರೆ, ಬಾಹ್ಯಾಕಾಶ ಕ್ಷೇತ್ರಕ್ಕಷ್ಟೇ ಅವರ ಸಾಧನೆ ಸೀಮಿತ­ವಾಗಿರಲಿಲ್ಲ. ಎಂಜಿನಿಯರ್ ಆಗಿ ಮತ್ತು ಯೋಜನಾ ನಿರ್ವಹಣಾ ತಜ್ಞರ ರೂಪಗಳಲ್ಲೂ ಅವರು ಯಶಸ್ವಿಯಾಗಿದ್ದರು. ಕಲಾಂ ಅವರ ಕಾರ್ಯಗಳ ಫಲಶ್ರುತಿಯನ್ನು ದೇಶದ ಗೌರವ, ಪ್ರಗತಿ ಹಾಗು ರಕ್ಷಣೆಯನ್ನು ಎತ್ತಿಹಿಡಿದಿರುವಲ್ಲಿ ಕಾಣಬಹುದು.

ವಿಜ್ಞಾನ ಕ್ಷೇತ್ರಕ್ಕೆ ಸಬಲ ನಾಯಕತ್ವವನ್ನು ನೀಡಿದ ಪ್ರಮುಖರಲ್ಲಿ ಕಲಾಂ ಒಬ್ಬರು. ಬಹುಶಃ ಭಾರತ ಇಂದು ವೈಜ್ಞಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಕಲಾಂ ಅವರಂಥ ಕನಸುಗಾರರೂ ಕಾರಣ. ಹಾಗೆ ನೋಡಿದರೆ, ಕಲಾಂ ಅವರದು ಶೈಕ್ಷಣಿಕವಾಗಿ ಜನಪ್ರಿಯ ಮಾರ್ಗವೇನೂ ಅಲ್ಲ. ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 2೦ ಸಾವಿರ ಮಂದಿ ಪಿಎಚ್‌.ಡಿ. ಪದವಿ ಪಡೆಯುತ್ತಾರೆ. ಆದರೆ, ಅವರಿಗೆಲ್ಲ ಸೂಕ್ತವಾದ ಅವಕಾಶ ದೊರಕುತ್ತಿಲ್ಲ. ಇವರೆಲ್ಲ ಸ್ವತಂತ್ರವಾಗಿ ಸಂಶೋಧನೆ / ಅಧ್ಯಯನ ನಡೆಸಲು ಬೇಕಾದ ಅನುದಾನ ಇನ್ನೂ ವಿರಳ.

ಹಾಗಾಗಿ, ಇಂದು ಡಾಕ್ಟರೇಟ್ ಪದವಿ ಪಡೆದವರು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಕಲಾಂ ವಿಷಯದಲ್ಲಿ ಆದುದೇ ಬೇರೆ. ಅವರು ಇತರ ವಿಜ್ಞಾನಿಗಳಂತೆ ಡಾಕ್ಟರೇಟ್‌ ಪ್ರಬಂಧ ಬರೆದವರಲ್ಲ. ವೈಜ್ಞಾನಿಕ ಲೇಖನಗಳ ಗುಚ್ಛಗಳನ್ನು ಬರೆದವರೂ ಅಲ್ಲ.

ಕಲಾಂ ಅವರಿಗೆ ಹಲವಾರು ‘ಗೌರವ ಡಾಕ್ಟರೇಟ್‌’ಗಳು ದೊರಕಿದ್ದವೇ ಹೊರತು ಅವರು ಸ್ವತಂತ್ರವಾಗಿ ಬರೆದ/ ಮಂಡಿಸಿದ ಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಯಾವುದೇ ವಿಶ್ವವಿದ್ಯಾಲಯದಿಂದ ದೊರಕಿರಲಿಲ್ಲ. ಮತ್ತು ಅವರು ಇಂದಿನ ‘ವಿಜ್ಞಾನಿ’ಗಳ ರೀತಿ ವೈಜ್ಞಾನಿಕ ವಿದ್ವತ್ ಪ್ರಬಂಧಗಳನ್ನು ಪ್ರಕಟಿಸುವ ಓಟದಲ್ಲಂತೂ ಇರಲೇ ಇಲ್ಲ. ಹಾಗಾದರೆ ಅವರು ‘ವಿಜ್ಞಾನಿ’ ಆಗಿರಲಿಲ್ಲವೇ ಎಂಬ ಪ್ರಶ್ನೆ ಸಹಜ. ಕಲಾಂ ಅವರು ಒಬ್ಬ ಸಮರ್ಥ ವಿಜ್ಞಾನಿ ಎಂಬುದರಲ್ಲಿ ಸಂದೇಹವೇ ಇಲ್ಲ. ಅವರ ಆತ್ಮಚರಿತ್ರೆ ಓದಿದರೆ ಸಾಕು, ಇದಕ್ಕೆ ಹಲವಾರು ನಿದರ್ಶನಗಳು ಸಿಗುತ್ತದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ– ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೊಡುಗೆಯನ್ನು ಅಳೆಯುವ ಪ್ರಮಾಣ ಪ್ರಕಟಗೊಂಡ ಲೇಖನಗಳು ಮಾತ್ರವಲ್ಲ; ಅದಕ್ಕಿಂತಲೂ ಮುಖ್ಯವಾದುದು ವೈಜ್ಞಾನಿಕ ಸವಾಲನ್ನು ಹೇಗೆ ಭೇದಿಸುವುದು ಮತ್ತು ಅದನ್ನು ವಾಸ್ತವಿಕವಾಗಿ ಹೇಗೆ ಕಾರ್ಯಗತಗೊಳಿಸಬಹುದು ಎನ್ನುವುದು. ಕಲಾಂ ಅವರು ವೈಜ್ಞಾನಿಕವಾಗಿ ತೊಡಗಿಸಿಕೊಂಡಿದ್ದ ಕಾರ್ಯಗಳು ಕ್ಲಿಷ್ಟಕರವಾಗಿದ್ದರೂ, ಅವರು ಇವನ್ನೆಲ್ಲ ಕಾರ್ಯಗತ ಮಾಡುವುದರಲ್ಲಿ ಯಶಸ್ವಿಯಾಗಿದ್ದರು ಎನ್ನುವುದು ಗಮನಾರ್ಹ. ಅವರು ತೊಡಗಿಸಿಕೊಂಡ ಹಲವಾರು ಯೋಜನೆಗಳು ಜನಮುಖಿಯಾಗಿಯೇ ಇದ್ದುದು ಕೂಡ ಅವುಗಳ ಯಶಸ್ಸಿಗೊಂದು ಪ್ರಮುಖ ಕಾರಣವಾಗಿತ್ತು.

ವಿಜ್ಞಾನಿ ಮಾತ್ರವಲ್ಲ, ಕಲಾಂ ಅವರು ಒಬ್ಬ ದಾರ್ಶನಿಕ ಕೂಡ. ​೨೦೦೮ರಲ್ಲಿ ನಾನು ಪಿಎಚ್‌.ಡಿ. ಮುಗಿಸಿದಾಗ, ‘ಭಾರತೀಯ ವಿಜ್ಞಾನ ಸಂಸ್ಥೆ’ (ಐಐಎಸ್ಸಿ) ತನ್ನ ನೂರು ವರ್ಷದ ಸಂಭ್ರಮದಲ್ಲಿತ್ತು. ಅದರ ಶತಮಾನೋತ್ಸವ ಆಚರಣೆಯ ಉದ್ಘಾಟನಾ ಭಾಷಣದಲ್ಲಿ ಅಬ್ದುಲ್ ಕಲಾಂ ಅವರು ಒಂದು ಸೂಕ್ಷ್ಮವಾದ ಪ್ರಶ್ನೆ ಕೇಳಿದ್ದರು. ‘ಮುಂಬರುವ ವರ್ಷಗಳಲ್ಲಿ ಈ ಸಂಸ್ಥೆಯನ್ನು ಯಾವ ಕಾರಣಕ್ಕಾಗಿ ನೆನಪಿಸಿಕೊಳ್ಳಬೇಕು?’ ಎನ್ನುವ ಪ್ರಶ್ನೆಯದು.

ಇದಕ್ಕೆ ತಾವೇ ಉತ್ತರ ಸೂಚಿಸುವಂತೆ, ಅವರು ‘ಐಐಎಸ್ಸಿ’ಗೆ ಸಂಬಂಧಿಸಿದಂತೆ ತಮ್ಮ ‘ವಿಷನ್‌ ೨೦೩೦’ ಹಂಚಿಕೊಂಡಿದ್ದರು. ಅವರು ‘ಐಐಎಸ್ಸಿ’ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ‘ಪರಿವರ್ತನಾ’ ವೈಜ್ಞಾನಿಕ ಸಂಶೋಧನೆಗೆ ಕೇಂದ್ರವಾಗಬೇಕೆಂದು ಅಪೇಕ್ಷಿಸಿದರು. ಇದರ ಜೊತೆ ಹತ್ತು ನೊಬೆಲ್ ಪುರಸ್ಕೃತರನ್ನು ಸಂಸ್ಥೆ, ಹೊಂದಿದ್ದು ವಿಶಿಷ್ಟವಾದ ಪದವಿ ಕಾರ್ಯಕ್ರಮಗಳು ಮತ್ತು ಜಾಗತಿಕ ಶೈಕ್ಷಣಿಕ ಕೇಂದ್ರ ಇದಾಗಿರಬೇಕು ಎಂಬ ಕನಸುಗಳನ್ನು ಹಂಚಿಕೊಂಡಿದ್ದರು.

​ಇತ್ತೀಚೆಗೆ ಕಲಾಂ ಅವರು ‘ಐಐಎಸ್ಸಿ’ಗೆ ಬಂದಾಗ ಮತ್ತೊಮ್ಮೆ ತಮ್ಮ ಹಳೆಯ ಕನಸುಗಳನ್ನು ನೆನಪಿಸಿಕೊಂಡರು. ಬಹುಶಃ ಅವರ ಹಂಬಲದಂತೆ, ‘ಐಐಎಸ್ಸಿ’ಯಲ್ಲಿ ಪ್ರಸ್ತುತ ‘ಪರಿವರ್ತನಾ’ ವೈಜ್ಞಾನಿಕ ಸಂಶೋಧನೆ ಹಾಗೂ ಹಲವಾರು ವಿಷಯಗಳ ಸಮ್ಮಿಲನದಲ್ಲಿ ‘ಇಂಟರ್ ಡಿಸಿಪ್ಲಿನರಿ ರಿಸರ್ಚ್’ ಎಂಬ ವಿಭಾಗವೇ ಪ್ರಾರಂಭವಾಗಿದೆ.

​ಡಾ. ವಿಕ್ರಮ್ ಸಾರಾಭಾಯಿ, ಪ್ರೊ. ಸತೀಶ್ ಧವನ್ ಅವರುಗಳ ನಂತರ ನಮ್ಮ ದೇಶ ವೈಜ್ಞಾನಿಕ ಕ್ಷೇತ್ರದಲ್ಲಿ ಕಂಡ ಪ್ರಮುಖ ನಾಯಕರಲ್ಲಿ ಕಲಾಂ ಅವರೂ ಒಬ್ಬರು. ಸ್ವತಃ ಕಲಾಂ ಅವರೇ ಹಲವಾರು ಬಾರಿ ತಮ್ಮ ಗುರುಗಳನ್ನು ನೆನೆಯುತ್ತ, ಪ್ರೊ. ಧವನ್ ಅವರನ್ನು ತಪ್ಪದೇ ಸ್ಮರಿಸುತ್ತಿದ್ದರು. ಇವರೆಲ್ಲ ವೈಜ್ಞಾನಿಕ - ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮಾತ್ರವಲ್ಲದೇ ಯೋಜನಾ ನಿರ್ವಹಣೆಯಲ್ಲಿ ನಿಪುಣರು.

ಪ್ರೊ. ಧವನ್ ಅವರು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿಯೂ ಭಾರತೀಯ ಬಾಹ್ಯಾಕಾಶ ಮಂಡಳಿಯ ಅಧ್ಯಕ್ಷರಾಗಿ ಇಂದು ಮನೆ ಮಾತಾಗಿರುವ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೋ) ಅತ್ಯಂತ ಸಮರ್ಥವಾಗಿ ಬೆಳೆಯಲು ಸೂಕ್ತ ಬುನಾದಿಯನ್ನು ಹಾಕಿದ್ದರು. ಇದಕ್ಕೆ ಒಬ್ಬ ವ್ಯಕ್ತಿ ವಿಜ್ಞಾನಿಯಾಗಿಯೂ ಆಡಳಿತಾತ್ಮಕ ವ್ಯಕ್ತಿಯಾಗಿಯೂ ಯಶಸ್ವಿಯಾಗಿದ್ದರು. ಎರಡೂ ನೆಲೆಗಟ್ಟಿನಲ್ಲಿ ಯೋಜಿತ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಜಾಣ್ಮೆ ಅವರಲ್ಲಿತ್ತು. ಪ್ರೊ. ಧವನ್ ಅವರ ಮಾರ್ಗದರ್ಶನದಲ್ಲೇ ಬೆಳೆದ ಕಲಾಂ ಅವರೂ ತಮ್ಮ ಗುರುಗಳ ಗುಣಗಳನ್ನು ಮೆರೆದರು.

ಇದೇ ಗುಣ ಹಾಗು ಸಾಮರ್ಥ್ಯ ಉಳ್ಳ ನಾಯಕತ್ವದ ಕೊರತೆ ಇಂದು ದೇಶದ ಹಲವಾರು ವೈಜ್ಞಾನಿಕ ಸಂಸ್ಥೆಗಳನ್ನು ಕಾಡುತ್ತಿದೆ. ಒಬ್ಬ ವ್ಯಕ್ತಿ ವಿಜ್ಞಾನಿ ಆಗಿರುವುದರ ಜೊತೆಗೆ ಆಡಳಿತದಲ್ಲಿ ಸಮರ್ಥ ವ್ಯಕ್ತಿಯೂ ಆಗಿರುವುದು ಹೇಗೆ ಎನ್ನುವುದಕ್ಕೆ ಕಲಾಂ ಅವರ ಬದುಕೇ ಒಂದು ನಿದರ್ಶನದಂತಿದೆ. ಅವರ ಅಗಲಿಕೆಯಿಂದ ದೇಶದ ವೈಜ್ಞಾನಿಕ ಕ್ಷೇತ್ರ ಒಬ್ಬ ನಾಯಕ​​ನನ್ನು ಕಳೆದುಕೊಂಡಿದೆ. ​

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT