1974 ಕನ್ನಡ ಸಾಹಿತ್ಯ ಲೋಕದ ಪಾಲಿಗೆ ಹಬ್ಬದ ವರ್ಷ. ಹೂತ ಹುಣಸಿಯಲ್ಲೂ ಕಾವ್ಯವನ್ನು ಕಾಣಿಸುವ ಕವಿ ದ.ರಾ. ಬೇಂದ್ರೆ ಅವರ ‘ನಾಕು ತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷವದು. ಪ್ರಶಸ್ತಿ ಎನ್ನುವುದು ವ್ಯಕ್ತಿಗತ ಸಂಭ್ರಮವಾಗದೆ ನಾಡಿನ ಸಂಭ್ರಮವಾಗಿ ರೂಪುಗೊಳ್ಳುತ್ತಿದ್ದ ದಿನಗಳವು.
ಬೇಂದ್ರೆಯವರಿಗೆ ದೊರೆತ ರಾಷ್ಟ್ರೀಯ ಮನ್ನಣೆಗೆ ಕನ್ನಡ ನಾಡು ಸಂಭ್ರಮಿಸಿತು. ಈ ಸಂದರ್ಭ ಕವಿ–ಕಾವ್ಯವನ್ನು ಗೌರವಿಸುವ ಸಂಭ್ರಮವಾಗಿ ಪರಿಣಮಿಸಿತು. ನಾಡಿನ ವಿವಿಧ ಭಾಗಗಳಲ್ಲಿ ವರಕವಿಗೆ ಅಭಿನಂದನೆ – ಗೌರವ ಸಮರ್ಪಣೆ ಕಾರ್ಯಕ್ರಮಗಳು ನಡೆದವು. ಅಂಥದೊಂದು ‘ನಾಗರೀಕ ಸನ್ಮಾನ’ದ ಅಭಿನಂದನಾ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು (ಮೇ 8, 1974). ಬೇಂದ್ರೆಯಜ್ಜನ ಮೇಲೆ ಅಭಿಮಾನದ ಪುಷ್ಪವೃಷ್ಟಿಯೇ ನಡೆಯಿತು.
ಆ ಅಭಿಮಾನದಲ್ಲಿ ತೋಯ್ದ ಕವಿಯ ಮುಖದಲ್ಲಿ ಬಣ್ಣಿಸಲಾಗದ ಕವಿತೆಯೊಂದು ಇರುವಂತಿದೆ. ಹಾಂ, ಈ ಹೂಮಳೆಯ ಹಿನ್ನೆಲೆಯಲ್ಲಿನ ಕೈಗಳು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರವು. ಅವರ ಪಕ್ಕದಲ್ಲಿ ಅಂದಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನಸ್ವಾಮಿ ಹಾಗೂ ಮೇಯರ್ ಟಿ.ಡಿ. ನಾಗಣ್ಣ (ಬಲಭಾಗದಲ್ಲಿ ಇರುವವರು) ಅವರನ್ನು ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.