ADVERTISEMENT

ಅರ್ಥಪೂರ್ಣ ಕಲೆಗಾರಿಕೆಯ ದಾರ್ಶನಿಕ

ಡಾ.ಚಂದ್ರಶೇಖರ ಕಂಬಾರ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಪಂಡಿತ ರಾಜೀವ ತಾರಾನಾಥರು
ಪಂಡಿತ ರಾಜೀವ ತಾರಾನಾಥರು   

ಇದೇ 17ಕ್ಕೆ ಭಾರತದ ಶ್ರೇಷ್ಠ ಕಲಾವಿದ, ದೊಡ್ಡ ವಿಮರ್ಶಕ ರಾಜೀವ ತಾರಾನಾಥರಿಗೆ ಎಂಬತ್ತೈದು ತುಂಬುತ್ತದೆ. ಅವರ ಹುಟ್ಟುಹಬ್ಬದ ನೆಪದಲ್ಲಿ ಅವರನ್ನು ಕುರಿತ ಶಿಷ್ಯ, ಅಭಿಮಾನಿ, ಸ್ನೇಹಿತನಾಗಿ ಒಂದೆರಡು ಮಾತಾಡಬೇಕೆನಿಸಿ ಈ ಲೇಖನ ಬರೆಯುತ್ತಿದ್ದೇನೆ.

ಬದುಕಿನುದ್ದಕ್ಕೂ ಸರೋದ್, ಕಲೆ, ಸಾಹಿತ್ಯಗಳಲ್ಲೇ ಮುಳುಗಿ ಹಣ್ಣಾದ ರಾಜೀವ ಯಾವುದೋ ಕಾಯಿಲೆ ಒತ್ತಡಕ್ಕೆ ಒಳಗಾಗಿ ಹಾಸಿಗೆ ಹಿಡಿದವರು ನಿನ್ನೆ ಮೊನ್ನೆಯಷ್ಟೇ ಚೇತರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಶುಭಾಶಯಗಳಂದು ಈ ಎರಡು ಮಾತು. ಈಗ ರಾಜೀವ ತಾರಾನಾಥರ ತಂದೆ ಪಂಡಿತ ತಾರಾನಾಥರ ನೆನಪಾಗುವುದು ಸಹಜ. ನನ್ನ ತಂದೆ ಅವರ ಸಮಕಾಲೀನರು. ಆದರೆ ನನ್ನ ತಂದೆಯವರು ಹೇಳಿದ್ದೆಲ್ಲ ಕತೆಗಳು. ಕತೆಗಳೆಂದರೆ ಕತೆಗಳೇ– ಹೆಚ್ಚಿಲ್ಲ, ಕಮ್ಮಿಯಿಲ್ಲ, ಪಂಡಿತ ತಾರಾನಾಥರು ದೊಡ್ಡ ಅನುಭಾವಿಗಳು, ಭಕ್ತರು ಎಂದು ಹೇಳಿ, ಅವರು ನಡೆದಾಗ ಒಂದೇ ಹೆಜ್ಜೆ ಮೂಡುತ್ತಿತ್ತು!.. ಇತ್ಯಾದಿ.

ಸುಮಾರು 1963– 64 ಇದ್ದಿರಬಹುದು. ನಾನಾಗ ಸಾಗರದಲ್ಲಿ ಕೆಲಸಕ್ಕಿದ್ದೆ. ಅಡಿಗರು ನನ್ನ ಪ್ರಾಂಶುಪಾಲರಾಗಿದ್ದರು. ಶಿವಮೊಗ್ಗದಲ್ಲಿದ್ದ ಲಂಕೇಶ್, ಮೈಸೂರಲ್ಲಿದ್ದ ಅನಂತಮೂರ್ತಿ ಒಂದೆರಡು ಬಾರಿ ಅಡಿಗರನ್ನು ನೋಡಲು ಬಂದಿದ್ದರು. ನನಗಾಗಲೇ ಧಾರವಾಡದ ಅಟ್ಟದ (ಜೀಬಿಯವರ ಆಫೀಸು) ಪರಿಚಯವಾಗಿ ಒಂದು ಕಡೆ ಕುರ್ತಕೋಟಿಯವರು ನನ್ನ ಕಾವ್ಯದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದರು. ಹೀಗಾಗಿ ನಾನಾಗಲೇ ಉದಯೋನ್ಮುಖ ಕವಿಯಾಗಿ ನಾಡಿನ ಗಮನ ಸೆಳೆದ ಕವಿಯಾಗಿದ್ದೆ. ರಾಜೀವ ತಾರಾನಾಥರನ್ನು ನೋಡಿರಲಿಲ್ಲ. ಆದರೆ ನವ್ಯರೆಲ್ಲ ಸಡಗರದ ಶಬ್ದಗಳಲ್ಲಿ ಅವರನ್ನು ಮೆಚ್ಚಿಕೊಂಡ, ಅವರನ್ನು ಬಲ್ಲೆವೆಂಬ, ಅವರೊಂದಿಗೆ ಖುದ್ದಾಗಿ ಮಾತಾಡಿದ್ದೇವೆಂಬ ಧಿಮಾಕಿನಲ್ಲಿದ್ದರು.

ADVERTISEMENT

ಅಕಸ್ಮಾತ್ ಎಂಬಂತೆ ನಾನು ಧಾರವಾಡಕ್ಕೆ ಬಂದಾಗ ಅಟ್ಟದ ಮೇಲೆ ರಾಜೀವ್ ಅವರ ದರ್ಶನವಾಯಿತು. ಕೂತ ಕುರ್ಚಿ ಸಾಲದೆಂಬಂತೆ, ಹೊಂದಾಣಿಕೆ ಮಾಡಿಕೊಂಡು ಕೂತಂತೆ ಕಾಣುತ್ತಿದ್ದ ಎತ್ತರವಾದ ಬೆಟ್ಟದಂಥ ಆಳು. ಪರಿಚಯವಾದ ಮೇಲೆ ತೇಜಸ್ಸನ್ನು ಉಕ್ಕಿಸುವಂಥ ಅವರ ಕಣ್ಣುಗಳನ್ನು ಎದುರಿಸುತ್ತಾ ಕೂತೆ. ಆಗಲೇ ಅವರು ಕುರ್ತಕೋಟಿ ಅವರೊಂದಿಗೆ ಭಾರೀ ಸಂಭಾಷಣೆಯಲ್ಲಿ ತೊಡಗಿದ್ದರು. ನೀವೂ ಕೇಳ್ರಿ ಎಂದು ನನಗೆ ಹೇಳಿ ತಮ್ಮ ಮಾತುಗಳನ್ನು ಮುಂದುವರೆಸಿದರು. ಕುರ್ತಕೋಟಿ ಅವರಂಥ ಪಂಡಿತ ವಾಗ್ಮಿಗಳೇ ತದೇಕ ಧ್ಯಾನದಿಂದ ರಾಜೀವ್ ಮಾತು ಕೇಳಿಸಿಕೊಳ್ಳುತ್ತಿದ್ದರೆ ಇನ್ನು ಜಿ.ಬಿ. ಜೋಶಿ ಮತ್ತು ನನ್ನಂಥವರು ಯಾವ ಲೆಕ್ಕ? ಆ ದಿನ ಅವರ ವಾದ ಅದ್ಭುತವಾಗಿತ್ತು.

ರಾಜೀವ್ ಪಶ್ಚಿಮ ದೇಶಗಳ ಮತ್ತು ಭಾರತೀಯ ಸಾಹಿತ್ಯ– ಸಂಸ್ಕೃತಿಗಳ ಬಗ್ಗೆ ಮಾತನಾಡುತ್ತಿದ್ದರು. ಎರಡು ಮಹಾಯುದ್ಧಗಳನ್ನು ಕಂಡ ಪಶ್ಚಿಮ ದೇಶಗಳು ರಾಷ್ಟ್ರೀಯತೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದರೆ ನಾವು ರಾಷ್ಟ್ರೀಯತೆಗಾಗಿ ಹೋರಾಡಿ ಆಗ ತಾನೇ ಸ್ವಾತಂತ್ರ್ಯ ಪಡೆದ ಕಾಲಘಟ್ಟ ಅದು. ಬ್ರಿಟಿಷರು ಈ ದೇಶಕ್ಕೆ ಬಂದು ಮೆಕಾಲೆ ನೇತೃತ್ವದಲ್ಲಿ ಇಂಗ್ಲಿಷ್ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿದಾಗಲೇ (1856) ಈ ದೇಶದ ದೈವನಿರ್ಣಯ ಆಗಿಬಿಟ್ಟಿತ್ತು. ಆಡಳಿತ ಭಾಷೆ ಆದುದೇ ಸರಿ. ಅದು ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ಸಂಸ್ಕೃತದಲ್ಲಿ ಇದ್ದ ನಮ್ಮ ವಿದ್ಯೆಯೆಲ್ಲ ಹುಸಿ ಎಂದು, ಇಂಗ್ಲಿಷಿನಲ್ಲೇ ಇದ್ದದ್ದು ಮಾತ್ರ ವಿದ್ಯೆ ಎಂದು ಹೇಳಿದ್ದು ಒಂದಾದರೆ, ನಾವು ಅದನ್ನು ಅಕ್ಷರಶಃ ನಂಬಿದ್ದು ಎರಡನೇ ಆಶ್ಚರ್ಯ. ಆಗಿನಿಂದಲೇ ನಾವು ಪಶ್ಚಿಮ ಬುದ್ಧಿಯವರು ಆದೆವು ಮತ್ತು ಈಗಲೂ! ಜೊತೆಗೆ ಬ್ರಿಟಿಷರು ಕೋರ್ಟು, ಕಚೇರಿ, ಟ್ರೇನು, ಶಿಕ್ಷಣ ಹೀಗೆ ಅಸಂಖ್ಯಾತ ಸಂಸ್ಥೆಗಳನ್ನು ಕಟ್ಟಿ ಅದಿಲ್ಲದ ನಾವು ಕೀಳರಿಮೆಯಿಂದ ಕೊರಗುವಂತೆ ಮಾಡಿದರು.

ಅದೇ ದಿನ ರಾಜೀವ್ ಇನ್ನೂ ಒಂದು ವಿಷಯ ಹೇಳಿದ್ದು ನನಗೆ ನೆನಪು ಇದೆ. ಅದು ಇತಿಹಾಸಕ್ಕೆ ಸಂಬಂಧಪಟ್ಟದ್ದು. ಬ್ರಿಟಿಷರು ಹಿಸ್ಟರಿ (history) ಅಂತ ಪ್ರಚುರಪಡಿಸಿದ ಕಲ್ಪನೆ ನಮ್ಮಲ್ಲಿರಲಿಲ್ಲ.  ನಮ್ಮಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯತ್ತು ಎಂಬ ಮೂರು ಭಾಗಗಳಿದ್ದರೂ ನಮ್ಮದು ಕಾಲವೆಂಬ ಅಖಂಡ ಕಲ್ಪನೆಯಾದುದರಿಂದ ಪುರಾಣ ಕಾಲದ ದೇವರು ನಮಗೆ ಈಗಲೂ ಪ್ರಸ್ತುತರಾಗುತ್ತಾರೆ. ಈ ಕಾರಣದಿಂದ ಬ್ರಿಟಿಷರ ಕಾಲವೆಂದರೆ ಅದು ಭೂತಕಾಲವನ್ನು ವರ್ತಮಾನದಿಂದ ಬೇರ್ಪಡಿಸಿ ಎರಡರ ಮಧ್ಯೆ ದೂರವನ್ನು ನಿರ್ಮಿಸುತ್ತದೆ.

ಅಂದು ಇಂಗ್ಲಿಷ್ ವಿಷಯವನ್ನು ಕಲಿಸುವ ಅಧ್ಯಾಪಕರೇ ಸಾಹಿತ್ಯವನ್ನೂ ಕಲಿಸುವವರಾದ್ದರಿಂದ ಬಹು ಬೇಗನೆ ನಮ್ಮ ಕವಿಗಳು ಬ್ರಿಟಿಷರ ಕಲ್ಪನೆಗಳಿಂದ ಪ್ರಭಾವಿತರಾದರು. ಅದರಲ್ಲೂ ಇಂಗ್ಲಿಷ್ ಸಾಹಿತ್ಯಕ್ಕೆ ಮಾರುಹೋದ ನಮ್ಮ ಇಂಗ್ಲಿಷ್ ಪಂಡಿತ ಕವಿಗಳು ಅನಾಥಪ್ರಜ್ಞೆಯನ್ನು ಅನುಭವಿಸತೊಡಗಿದರು. ಆದರೆ ಅದೇ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ರಾಜೀವ್, ಎರಡು ಮಹಾಕಾವ್ಯಗಳ- ಭಾಸಾ, ಭವಭೂತಿ, ಕಾಳಿದಾಸಾದಿ ಕವಿಗಳಿಂದ ಶ್ರೀಮಂತವಾದ,ದೇಶೀ ಭಾಷೆಗಳ ಸಾಹಿತ್ಯ ಪರಂಪರೆ ಇದ್ದ ನಮ್ಮ ಕವಿಗಳೆಲ್ಲಾ, ಅದನ್ನೆಲ್ಲಾ ಕ್ಷಣಾರ್ಧದಲ್ಲಿ ಮರೆತು ಅನಾಥಪ್ರಜ್ಞೆಯನ್ನು ಅನುಭವಿಸುವುದಕ್ಕೆ ಆಳವಾದ ಕಾರಣಗಳೇನೆಂದು ಶೋಧಿಸುತ್ತಿದ್ದರು. ನಾವು ಸಾಹಿತ್ಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಯೋಚಿಸುತ್ತಿದ್ದರೆ ರಾಜೀವ್ ಭಾರತೀಯ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸುತ್ತಿದ್ದರು.

ಕುರ್ತಕೋಟಿ ಮತ್ತು ರಾಜೀವ್ ಅವರಿಬ್ಬರಲ್ಲಿ ಕುರ್ತಕೋಟಿ ಅವರ ಯಾವ್ಯಾವ ಪ್ರಶ್ನೆಗಳಿಗೆ ರಾಜೀವ್ ಏನೇನು ಉತ್ತರಿಸಿದರೆಂದು ನನಗೆ ಅಷ್ಟಾಗಿ ನೆನಪಿಲ್ಲ. ಕುರ್ತಕೋಟಿ ಅವರು ಬಹಳ ಬಿಸಿ ಬಿಸಿಯಾಗಿ ಚರ್ಚಿಸಿದರು. ಚಕಮಕಿ ಕಡೆದಂತೆ ಇಬ್ಬರ ವಾಗ್ವಾದದಲ್ಲಿ ಸಿಡಿದ ಕಿಡಿಗಳೆಷ್ಟೋ ಬೆಂಕಿಯಾಗಿ ಹೊತ್ತಿಕೊಂಡು ಕಾಲಕ್ಕೆ ತಕ್ಕಂತೆ ಆಗಾಗ ಇನ್ನೇನೋ ಮಾತುಕತೆಗಳಾಗಿ ನನ್ನಿಂದ ಹೊರಬಿದ್ದಿವೆ. ಒಟ್ಟಿನಲ್ಲಿ ಆ ದಿನ ನನಗೆ ಭಾರತೀಯ ಬರವಣಿಗೆಯ ಅರ್ಥವಂತಿಕೆಗೆ ಇನ್ನೂ ಭಿನ್ನವಾದ ಉಪಯುಕ್ತವಾದ ಕ್ಷಿತಿಜವಿದೆಯೆಂದು ಅರ್ಥವಾಯಿತು.

ರಾಜೀವ್ ಧಾರವಾಡದಲ್ಲಿ ಮನೆ ಕೂಡ ಮಾಡಿದ್ದರು. ಆ ದಿನ ರಾತ್ರಿ ಇಬ್ಬರೇ ನಡೆದುಕೊಂಡು ಅವರ ಮನೆಗೆ ಹೋದೆವು. ಮನೆ ತಲುಪಿದಾಗ 11 ಆಗಿರಬಹುದು. ಇಬ್ಬರಿಗೂ ಹಸಿವಾಗಿತ್ತು. ಮನೆಯಲ್ಲಿ ಏನೂ ಇರಲಿಲ್ಲ, ಎರಡು ಒಣ ಬ್ರೆಡ್ ಚೂರು ಬಿಟ್ಟು. ಅದನ್ನೆ ನೀರಲ್ಲಿ ಅದ್ದಿ ತಿಂದು ಮತ್ತೆ ಮಾತು ಮುಂದುವರೆಸಿದೆವು. ಗುರುವಿನಂತೆ ಅವರು ಹೇಳುವುದು ನಾನು ಪ್ರಶ್ನಿಸುತ್ತಾ ಸ್ವೀಕರಿಸುವುದು. ಯಾವಾಗ ಮಲಗಿದೆವೆಂದು ಗೊತ್ತಿಲ್ಲ.

ಅಲ್ಲಿಯೇ ಅವರು ಹೇಳಿದರು ನಗರಕ್ಕೆ ಇತಿಹಾಸವಿದ್ದರೆ ಹಳ್ಳಿಗೆ ನೆನಪುಗಳು ಇರುತ್ತವೆ ನೆನಪುಗಳು ಸೃಜನಶೀಲವಾಗಿರುವಂತೆ ಇತಿಹಾಸವಿರುವುದಿಲ್ಲ. ಅದು ಬರಡು. ತನ್ನನ್ನು ತಾನು ರಿಪೀಟ್ ಮಾಡಿಕೊಳ್ಳುವುದಕ್ಕೂ ನಾಚಿಕೊಳ್ಳುತ್ತದೆ.

ಹೀಗೆ ಭೇಟಿಯಾದಾಗೊಮ್ಮೆ ನಾವು ಬಿತ್ತಿ ಬೆಳೆದುಕೊಳ್ಳಬಹುದಾದ ಬೀಜದ ಮಾತುಗಳನ್ನು ಸಿಡಿಸುತ್ತಲೇ ಇರುತ್ತಾರೆ. ಇಷ್ಟವಿದ್ದವರು ನಮ್ಮ ತಾಕತ್ತಿಗೆ ಒಗ್ಗುವಷ್ಟನ್ನು ಅವರಿಂದ ಪಡೆಯುತ್ತಲೇ ಇರುತ್ತಾರೆ. ನನ್ನ ಪ್ರಕಾರ ಸುಮಾರು ಭಾರತೀಯ ಸಾಹಿತಿಗಳ ಜೊತೆಗಿನ ನನ್ನ ಸಂಪರ್ಕ ನೆನಪಿಸಿಕೊಂಡು ಹೇಳುತ್ತೇನೆ: ರಾಜೀವ್ ಎಲ್ಲಾ ಬರಹಗಾರರಿಂದ ಭಿನ್ನವಾಗಿ ಅರ್ಥಪೂರ್ಣವಾಗಿ ಕಲೆಗಾರಿಕೆಯ ಒಟ್ಟೂ ಆಳಗಲಗಳನ್ನು ಬಲ್ಲ ದಾರ್ಶನಿಕರಾಗಿ ಅಧಿಕಾರದಿಂದ ಮಾತನಾಡಬಲ್ಲ ಸದ್ಯದ ಒಬ್ಬನೇ ಒಬ್ಬ ವ್ಯಕ್ತಿ ಎಂದು ನನಗೆ ಅನಿಸುತ್ತದೆ.

ರಾಜೀವ್ ನಮ್ಮ ದೇಶದ ಬಹುದೊಡ್ಡ ಕಲಾವಿದ, ಸರೋದ್ ವಾದನದ ಮೂಲಕ ಬಹುದೊಡ್ಡ ಘರಾನಾದ ಉತ್ತರಾಧಿಕಾರಿ. ಪ್ರಪಂಚದ ತುಂಬ ದೊಡ್ಡ ಘರಾನಾವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ, ಅಲಿ ಅಕ್ಬರ್ ಖಾನರ ದೊಡ್ಡ ಶಿಷ್ಯ, ದೊಡ್ಡ ಉಸ್ತಾದ್ ಪಂಡಿತ್ ರಾಜೀವ ತಾರಾನಾಥ್. ನನಗೆ ಸಂಗೀತಶಾಸ್ತ್ರ ಅಷ್ಟಾಗಿ ತಿಳಿಯದು, ಆದರೆ ಉತ್ತಮ ಸಂಗೀತವನ್ನು ಪಂಡಿತರಿಗಿಂತ ಚೆನ್ನಾಗಿ ಆಸ್ವಾದಿಸಬಲ್ಲೆ. ಎಲ್ಲಾ ಕಲೆಗಳಲ್ಲಿ ಸಂಗೀತವೇ ಶ್ರೇಷ್ಠವಾದ ಕಲೆ. ಯಾಕೆಂದರೆ ರಸಾನುಭವ ಸ್ಪಷ್ಟವಾಗಿ ಅನುಭವಕ್ಕೆ ಬರುವಂತೆ ಮಾಡುವ ಕಲೆ ಅದೊಂದೇ. ಸಂಗೀತಕ್ಕೆ ಶಬ್ಧಾರ್ಥ ಸೂತಕವಿಲ್ಲ. ಇದೇನು ನನ್ನ ಮಾತಲ್ಲ ದೊಡ್ಡವರೇ ಹೇಳಿದ್ದು. ನಮ್ಮ ಅನುಭವಕ್ಕೂ ಬಂದಿರುವಂತಾದ್ದು. ತಾರಾನಾಥರ ಬಗ್ಗೆ ನಾನು ಈ ಪರಿ ಮಾತಾಡುತ್ತಿರುವುದೂ ಕೂಡ ಅಂತಹ ಅನುಭವದಿಂದಲೇ.

ರಾಜೀವ್ ಇಂಗ್ಲಿಷ್ ಎಂ.ಎ., ಪಿಎಚ್.ಡಿ. ಮುಗಿಸಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಅಲಿ ಅಕ್ಬರ್‌ಖಾನ್ ಅವರ ಸರೋದ್ ವಾದನದ ಕಾರ್ಯಕ್ರಮ ಇತ್ತು. ಅದನ್ನು ಕೇಳಿದ್ದೇ ಎಷ್ಟು ಪ್ರಭಾವಿತರಾದರೆಂದರೆ ಮಾರನೇ ದಿನವೇ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೊಲ್ಕತ್ತೆಗೆ ಪ್ರಯಾಣಿಸಿದರು.

ಮುಂದೆ ರಾಜೀವ್ ದೊಡ್ಡ ಗುರುವಿನ ದೊಡ್ಡ ಶಿಷ್ಯನಾಗಿ ಇವತ್ತು ಸದರಿ ಘರಾನಾದ ದೊಡ್ಡ ಉಸ್ತಾದನಾಗಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಶಿಷ್ಯರನ್ನು ಪಡೆದು ಆ ಘರಾನಾದ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ. ಜೊತೆಗೆ ಅಲಿ ಅಕ್ಬರ್ ಖಾನರ ಜೊತೆಗಾರರಾದ ಅನ್ನಪೂರ್ಣಾದೇವಿ ಪಂಡಿತ ರವಿಶಂಕರ್ ಅವರ ಸ್ನೇಹವನ್ನು ಜೀರ್ಣಿಸಿಕೊಂಡಿದ್ದಾರೆ. ನನ್ನ ಚಕೋರಿಯಲ್ಲಿ ಮುಖ್ಯ ಪಾತ್ರವಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಸಂಗೀತ ಸಾಧನೆಯ ಬಗ್ಗೆ ಅವರ ಶಿಷ್ಯೆ ಕೃಷ್ಣಾ ಮನವಳ್ಳಿ ಅವರು ಚೆನ್ನಾಗಿ ಹೇಳಬಲ್ಲರು.

ರಾಜೀವ್‌ಜೀ ನಮ್ಮ ಮಧ್ಯೆ ನೂರು ವರ್ಷಗಳ ಕಾಲ ಇದ್ದು, ನಮ್ಮ ಕಲೆ– ಸಾಹಿತ್ಯಗಳಿಗೆ ಮಾರ್ಗದರ್ಶನ ಮಾಡುತ್ತಿರಲಿ ಎಂದು ಹಾರೈಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.