ಮೈ ಕೊರೆಯುವ ಚಳಿ ಕಳೆದು ವಾತಾವರಣ ಕೊಂಚ ಬೆಚ್ಚಗಾಗುವ ಸಮಯ. ಅಂಧಕಾರದ ಅಪ್ಪುಗೆಯಲ್ಲಿ ಮುಳುಗಿಹೋಗಿದ್ದ ಭೂಮಿಯ ಮೇಲೆ ಸೂರ್ಯ ತನ್ನ ಕಿರಣಗಳನ್ನು ತೂರಿ ಕಚಗುಳಿಯಿಡುತ್ತಿದ್ದ ಹಾಗಿತ್ತು.
ದಿನವೂ ಸುರಿವ ಮಂಜಿನ ಮಳೆಯಿಂದ ಬೇಸತ್ತಿದ್ದ ಜನರು ದಪ್ಪ ದಪ್ಪ ಕೋಟುಗಳನ್ನು, ಕೈಚೀಲ, ಟೊಪ್ಪಿಗೆಗಳನ್ನು ಮನೆಯಲ್ಲೇ ಬಿಟ್ಟು ಹೊರಗೆ ಅಡಿಯಿಡಲಾರಂಭಿಸಿದ್ದರು. ಬೀಸುವ ಕಾಲದ ಗಾಳಿಗೆ ಗೋಡೆ ಮೇಲಿನ ದಿನದರ್ಶಿಕೆಯಲ್ಲಿ ಮಾರ್ಚ್ ತಿಂಗಳ ಪುಟ ಮಗುಚಿ ಏಪ್ರಿಲ್ ತಿಂಗಳು ತೆರೆದುಕೊಳ್ಳುತ್ತಿತ್ತು. ಅದು ವಸಂತನ ಋತುಗಾನದ ಹೊಸ ತಾನ ಕಿವಿಯಲ್ಲಿ ಮೊಳಗಿ ಕಣ್ಣುಗಳಲ್ಲಿ ಅರಳುವ ಸಮಯ.
ಯುರೋಪಿನ ದೇಶಗಳಲ್ಲಿ ವಸಂತನ ಆಗಮನ ಮೈಮರೆಸುವಷ್ಟು ನಿಚ್ಚಳವಾಗಿರುತ್ತದೆ. ಶೀತಕಾಲದ ಪ್ರಾರಂಭದಲ್ಲಿ ಎಲೆಗಳನ್ನೆಲ್ಲ ಉದುರಿಸಿಕೊಂಡು ಬೋಳಾಗಿರುವ ಮರಗಳು ಏಪ್ರಿಲ್ ತಿಂಗಳ ಕೊನೆಯಷ್ಟರಲ್ಲಿ ಹಸಿರು ಹಸಿರಾದ ಚಿಗುರುಗಳ ಹೊತ್ತು ನಿಲ್ಲುತ್ತವೆ. ತಿಂಗಳ ಹಿಂದೆ ಬೋಳು ಬೋಳಾಗಿದ್ದ ಭೂರಮೆಯ ತುಂಬ ಮೊಳಕೆಗಳೊಡೆದು ಬಣ್ಣಬಣ್ಣದ ಹೂಗಳು ನಳನಳಿಸುತ್ತವೆ. ಈ ಸಮಯದಲ್ಲಿ ಯಾವುದಾದರೂ ಉದ್ಯಾನಗಳಿಗೆ ಭೇಟಿ ನೀಡಬೇಕು. ಕಣ್ಮನ ತುಂಬಿಕೊಳ್ಳುವುದಲ್ಲದೆ ಕ್ಯಾಮೆರಾ ಕೂಡ ವರ್ಣಮಯ ಚಿತ್ರಗಳಿಂದ ತುಂಬಿಹೋಗುವುದರಲ್ಲಿ ಸಂದೇಹವಿಲ್ಲ.
ಸ್ವೀಡನ್‌ನಿಂದ ಬ್ರಸೆಲ್ಸ್‌ಗೆ...
ಬೆಲ್ಜಿಯಮ್ ದೇಶದ ರಾಜಧಾನಿಯಾದ ಬ್ರಸೆಲ್ಸ್‌ನಿಂದ ಸುಮಾರು 22ಕಿ.ಮೀ. ದೂರದಲ್ಲಿ ಹ್ಯಾಲ್ಲೇರ್ಬೋಸ್ ಎಂಬ ಅರಣ್ಯ ಪ್ರದೇಶವಿದೆ. ಅಲ್ಲಿ ಏಪ್ರಿಲ್ ತಿಂಗಳ ಕೊನೆಯಾರ್ಧದಲ್ಲಿ ನೀಲಿ ನೀಲಿ ಬಣ್ಣದ ಹೂಗಳು ಅರಳುತ್ತವೆ. ಈ ಪುಷ್ಪೋತ್ಸವವನ್ನು ವೀಕ್ಷಿಸಲು ಎಲ್ಲೆಡೆಯಿಂದ ಜನ ಆಗಮಿಸುತ್ತಾರೆ. ನಾವೂ ಈ ಅದ್ಭುತವನ್ನು ನೋಡಲು ಸ್ವೀಡನ್‌ನಿಂದ ಬೆಲ್ಜಿಯಂವರೆಗೂ ಹಾರಿದ್ದೆವು.
ಅಂದು ಶನಿವಾರ. ಬ್ರಸೆಲ್ಸ್‌ನ ಚಾರ್ಲೇರಾಯ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಬೆಳಿಗ್ಗೆ 10 ಗಂಟೆಯ ಆಸುಪಾಸು. ಕಪ್ಪು ಮೋಡಗಳು ಕವಿದು ಮಳೆ ಬರುವ ಸೂಚನೆಯಿತ್ತಿದ್ದವು. ಯೂರೋಪಿನಲ್ಲಿ ದಿನದಿಂದ ದಿನಕ್ಕೆ ಹವಾಮಾನ ಬದಲಾಗುತ್ತಿರುತ್ತದೆ. ಹತ್ತಿರದಲ್ಲಿದ್ದವರು ಮಳೆಯೋ ಬಿಸಿಲೋ ಎಂದು ನೋಡಿಕೊಂಡು ಭೇಟಿ ನೀಡಬಹುದಾದರೂ ದೂರದಿಂದ ಪ್ರಯಾಣಿಸುವವರಿಗೆ ಅಂತಹ ಅವಕಾಶವಿರುವುದಿಲ್ಲ. ತಿಂಗಳ ಮೊದಲು ವಿಮಾನ, ಹೋಟೆಲ್ ಎಂದು ಟಿಕೆಟ್ ಕಾಯ್ದಿರಿಸುವಾಗ ವಾತಾವರಣ ಹೇಗಿರಬಹುದೆಂಬ ಸಣ್ಣ ಸುಳಿವೂ ಇರಲಾರದು. ನಮ್ಮ ಅದೃಷ್ಟ ಕೆಟ್ಟಿತ್ತೆಂದೇ ಹೇಳಬೇಕು. ಪ್ರವಾಸದ ಮುಂದಿನ ನಾಲ್ಕು ದಿನಗಳೂ ಮಳೆಯಲ್ಲಿ ನೆನೆಯುತ್ತಾ, ಚಳಿಯಲ್ಲಿ ನಡುಗುತ್ತಲೇ ನಡೆಯಬೇಕಾಯಿತು.
ನಮ್ಮ ಪ್ರಯಾಣ ಪೂರ್ತಿಯಾಗಿ ಸಾರ್ವಜನಿಕ ಸಾರಿಗೆಗಳ ಮೇಲೆ ಅವಲಂಬಿತವಾಗಿತ್ತು. ವಿಮಾನ ನಿಲ್ದಾಣದಿಂದ ಬಸ್ಸು ಹಿಡಿದು ಬ್ರಸೆಲ್ಸ್-ಮಿಡಿ ಎನ್ನುವ ರೈಲು ನಿಲ್ದಾಣವನ್ನು ತಲುಪಿಕೊಂಡೆವು. ಅದು ಬೆಲ್ಜಿಯಮ್ ದೇಶದ ದಕ್ಷಿಣ ಭಾಗಗಳನ್ನು ತಲುಪಲು ಇರುವ ಮುಖ್ಯ ನಿಲ್ದಾಣ. ಅಲ್ಲಿಂದ ಹ್ಯಾಲ್ಲೇ ಎಂಬಲ್ಲಿಗೆ ರೈಲು ಹಿಡಿಯಬೇಕಾಗಿತ್ತು. ಎಲ್ಲಿ ಹೋಗಬೇಕು, ಟಿಕೆಟ್ ಎಲ್ಲಿ ಕೊಂಡುಕೊಳ್ಳಬೇಕು ಎಂದು ಗೊತ್ತಾಗದೆ ಮಾಹಿತಿ ಕೇಂದ್ರಕ್ಕೆ ಹೋದಾಗ ಅಲ್ಲಿದ್ದಾತನೊಬ್ಬ ನಮಗೆ ಹೋಗಿ ಬರುವ ಟಿಕೆಟ್ ಕೊಂಡುಕೊಳ್ಳಲು ಸಹಾಯ ಮಾಡಿದ.
ಈ ರೀತಿ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವಾಗ ಹೋಗುವ ಹಾಗೂ ಬರುವ ಚೀಟಿಯನ್ನು ಒಟ್ಟಿಗೆ ಕೊಂಡರೆ ಒಳಿತು. ಕೆಲವೊಮ್ಮೆ ನಾವು ಹೋಗಿ ಇಳಿಯುವ ಜಾಗದಲ್ಲಿ ಟಿಕೆಟ್ ಕೊಂಡುಕೊಳ್ಳುವ ಸೌಲಭ್ಯ ಇಲ್ಲದೆಯೂ ಇರಬಹುದು. ಆ ಅಪರಿಚಿತ ಜಾಗದಲ್ಲಿ ಹುಡುಕಲು ಕಷ್ಟವಾಗಬಹುದು. ಅಲ್ಲದೆ ದಿನಕ್ಕೆ ಒಂದೆರಡು ಬಸ್ಸುಗಳು ಮಾತ್ರವೇ ಇದ್ದಲ್ಲಿ ಅದು ತುಂಬಿಕೊಂಡು ಹಿಂತಿರುಗಲು ಸ್ಥಳಾವಕಾಶ ಇಲ್ಲದಿರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಅಂತೂ ಅಲ್ಲೇ ಹತ್ತಿರದಲ್ಲಿದ್ದ ಹ್ಯಾಲ್ಲೇ ಸೇರಿಕೊಂಡೆವು. ಮುಂದೆ ಬಸ್ ಹತ್ತಿ ಕುಳಿತರೆ ನಮ್ಮ ಗಮ್ಯವಾಗಿದ್ದ ಹ್ಯಾಲ್ಲೇರ್ಬೋಸ್ ಹತ್ತು ನಿಮಿಷಗಳ ದಾರಿಯಷ್ಟೆ. ಈ ಎರಡು ವಾರಗಳು ಹ್ಯಾಲ್ಲೇ ಮತ್ತು ಹ್ಯಾಲ್ಲೇರ್ಬೋಸ್ ನಡುವೆ ಪ್ರತಿ ಅರ್ಧಗಂಟೆಗೊಮ್ಮೆ ಉಚಿತವಾಗಿ ಪ್ರಯಾಣಿಕರನ್ನು ಅತ್ತಿಂದಿತ್ತ ಹೊತ್ತೊಯ್ಯಲು ಬಸ್ ಸಂಚಾರವಿತ್ತು.
ಅಲ್ಪಾಯುಷಿ ಸುಕುಮಾರಿಗಳು!
ಹ್ಯಾಲ್ಲೇರ್ಬೋಸ್ ಎಂದರೆ ಡಚ್ ಭಾಷೆಯಲ್ಲಿ ಹ್ಯಾಲ್ಲೇ ಅರಣ್ಯ ಎಂಬರ್ಥ ನೀಡುತ್ತದೆ. ಚಳಿಗಾಲ ಕಳೆದ ಮೇಲೆ ಅಲ್ಲಿರುವ ಎತ್ತರೆತ್ತರದ ಮರಗಳು ಇನ್ನು ಎಲೆಗಳಿಲ್ಲದೆ ಬರಿದಾಗಿರುವ ಸಮಯದಲ್ಲಿ ಸೂರ್ಯನ ಬೆಳಕು ನೆಲತಾಕುತ್ತದೆ. ಆಗ ನೆಲಕ್ಕೆ ನೇರಳೆ ಬಣ್ಣದ ಹೊದಿಕೆ ಹೊದೆಸಿದಷ್ಟು ಒತ್ತೊತ್ತಾಗಿ ಬ್ಲೂಬೆಲ್ಸ್ (Hyacinthoides non-scripta) ಎಂಬ ಹೂಗಳು ಅರಳುತ್ತವೆ. ಇವುಗಳ ಆಯಸ್ಸು ಒಂದೆರಡು ವಾರಗಳಷ್ಟೇ! ನಿಧಾನವಾಗಿ ಮರಗಳು ಚಿಗುರಿ ಎಲೆಗಳಿಂದ ತುಂಬಿಕೊಂಡು ಸೂರ್ಯನ ಬೆಳಕು ಈ ಹೂಗಳನ್ನು ತಲುಪದಂತಾದಾಗ ಈ ಸುಕುಮಾರಿ ಬ್ಲೂಬೆಲ್ಸ್‌ಗಳ ಕಥೆ ಮುಗಿಯುತ್ತದೆ.
ಮಟ ಮಟ ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಹ್ಯಾಲ್ಲೇರ್ಬೋಸ್‌ನಲ್ಲಿ ಇಳಿದಾಗ ಅಲ್ಲಿದ್ದ ಸಹಾಯಕರು ನಮಗೊಂದು ನಕಾಶೆ ಕೊಟ್ಟು ದಪ್ಪವಾಗಿ ತೀಡಿದ್ದ ನೇರಳೆ ಗೆರೆಯನ್ನು ಹಿಂಬಾಲಿಸಿದಲ್ಲಿ ಹೆಚ್ಚಿನ ಸಂಖ್ಯೆಯ ಹೂಗಳನ್ನು ಕಾಣಬಹುದೆಂದು ವಿವರಿಸಿದರು. ಕೆಲ ಹೆಜ್ಜೆಗಳು ಮುಂದುವರಿಯುವಷ್ಟರಲ್ಲಿ ನೆಲಕ್ಕೆ ಬಣ್ಣದ ರಂಗೋಲಿ ಇಟ್ಟಂತೆ ಸ್ಪಷ್ಟವಾಗಿ ಈ ನೀಲಿ ಸುಂದರಿಯರ ಜಾಡು ಕಂಡಿತು. ಜೊತೆಗೆ ಮೆಲುವಾದ ಸುವಾಸನೆಯೂ ಮೂಗಿಗೆ ತಾಕಿತು. ತಿಳಿಹಸಿರು ಚಿಗುರುಗಳ ಹಿನ್ನೆಲೆಯಲ್ಲಿ ನೇರಳೆ ಬಣ್ಣ ಚಂದವಾಗಿ ಹೊಂದಿಕೊಂಡು ಅದ್ಭುತ ದೃಶ್ಯವನ್ನು ಸೃಜಿಸಿತ್ತು. ಫೋಟೊ ತೆಗೆದುಕೊಳ್ಳಲು ಹೇಳಿ ಮಾಡಿಸಿದಂತಿದ್ದ ಆ ಜಾಗದಲ್ಲಿ ಕೂತಲ್ಲಿ ನಿಂತಲ್ಲಿ ನಾನು ಛಾಯಾಚಿತ್ರ ತೆಗೆಸಿಕೊಂಡದ್ದು ಸುಳ್ಳಲ್ಲ.
ನಾವು ಏಪ್ರಿಲ್ ತಿಂಗಳ ಕೊನೆಯ ಶನಿವಾರ ಅಲ್ಲಿದ್ದೆವು. ಅಷ್ಟರಲ್ಲಾಗಲೇ ಹೂಗಳು ಸೊರಗಲು ಆರಂಭಿಸಿದ್ದವು. ಆದರೂ ಸೂರ್ಯರಶ್ಮಿ ಮರಗಳೆಲೆಗಳ ನಡುವೆ ತೂರಿಕೊಂಡು ಈ ಹೂಗಳನ್ನು ತಲುಪಲು ಶತಪ್ರಯತ್ನ ಮಾಡುತ್ತಿರುವಂತೆ ಇತ್ತು. ಅಲ್ಲಲ್ಲಿ ಹಕ್ಕಿಗಳಿಂಚರ ಕೇಳಿಬರುತ್ತಿತ್ತು. ಕೆಲವು ಹಕ್ಕಿಗಳು ಸಂಗಾತಿ ಹುಡುಕುವ ಉತ್ಸಾಹದಲ್ಲಿದ್ದರೆ ಇನ್ನು ಕೆಲವು ಗೂಡು ಕಟ್ಟುವ ತರಾತುರಿಯಲ್ಲಿದ್ದವು. ಇನ್ನು ಕೆಲವಕ್ಕೆ ಹೊಟ್ಟೆಯದೇ ಯೋಚನೆ. ಅಲ್ಲಲ್ಲಿ ಜಿಂಕೆಗಳನ್ನು ನೋಡುವ ಸಾಧ್ಯತೆ ಇತ್ತಾದರೂ ನಮ್ಮ ಕಣ್ಣಿಗೆ ಅವು ಬೀಳಲಿಲ್ಲ. ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಆ ಕಾಡನ್ನು ಆದಷ್ಟು ಸುತ್ತಿ ವಾಪಸಾಗಿ ಹ್ಯಾಲ್ಲೇಗೆ ಹಿಂತಿರುಗಲು ಕಾಯುತ್ತಿದ್ದ ಬಸ್ಸಿನಲ್ಲಿ ಹತ್ತಿ ಕುಳಿತು ಸ್ವಲ್ಪ ಹೊಟ್ಟೆ ತುಂಬಿಸಿಕೊಂಡೆವು. ಮನಸ್ಸು ಮಾತ್ರ ಈ ಅಪೂರ್ವ ದೃಶ್ಯಗಳಿಗೆ ಸಾಕ್ಷಿಯಾದ ಹರ್ಷದಿಂದ ತುಂಬಿಕೊಂಡಿತ್ತು.
**
ಹೋಗುವುದು ಹೇಗೆ?
ಬೆಲ್ಜಿಯಂ ದೇಶದ ರಾಜಧಾನಿಯಾದ ಬ್ರಸೆಲ್ಸ್‌ನಿಂದ ಸುಮಾರು 22 ಕಿ.ಮೀ. ದೂರದಲ್ಲಿದೆ ಈ ಸ್ಥಳ. ಒಂದು ಆಯ್ಕೆ ಎಂದರೆ ಬ್ರಸೆಲ್ಸ್‌ನಿಂದ ರೈಲು ಹಿಡಿದು ಹ್ಯಾಲ್ಲೇ ತಲುಪಿ ಅಲ್ಲಿಂದ ಬಸ್ ಮೂಲಕ ಹ್ಯಾಲ್ಲೇರ್ಬೊಸ್ ಸೇರಬಹುದು. ಅಥವಾ ಅಲ್ಲಿ ಬೈಸಿಕಲ್ ಬಾಡಿಗೆಗೆ ದೊರೆಯುತ್ತದೆ. ಅದನ್ನು ಉಪಯೋಗಿಸಿಕೊಳ್ಳಬಹುದು. ಇಲ್ಲವೇ ಕಾರಿನಲ್ಲಿ ಸಹ ಹ್ಯಾಲ್ಲೇರ್ಬೊಸ್ ತಲುಪಲು ಸಾಧ್ಯವಿದೆ.
**
ಯಾವ ಸಮಯ?
ಹ್ಯಾಲ್ಲೇರ್ಬೊಸ್ ಒಳಪ್ರವೇಶಿಸಲು ಯಾವುದೇ ಪ್ರವೇಶ ಧನವಿಲ್ಲ. ಹೂಗಳು ಅರಳುವ ಸಮಯ ಹೆಚ್ಚು ಕಡಿಮೆ ಏಪ್ರಿಲ್ ತಿಂಗಳ ಕೊನೆಯ ಎರಡು ವಾರಗಳು. ಆದರೆ ಆ ವರ್ಷ ಚಳಿ ಹೇಗಿದೆ, ಎಷ್ಟಿದೆ ಎನ್ನುವುದರ ಮೇಲೆ ಕೆಲ ದಿನಗಳು ಆಚೀಚೆಯಾಗುವುದುಂಟು. ಹ್ಯಾಲ್ಲೇರ್ಬೊಸ್ ಅವರ ಜಾಲತಾಣ https://www.hallerbos.be ನಲ್ಲಿ ಬಹಳಷ್ಟು ಉಪಯುಕ್ತ ವಿಷಯಗಳಿವೆ. ಪ್ರತಿ ವರ್ಷ ಹೂವು ಬಿಡುವ ಕಾಲಕ್ಕೆ ಅದರ ಕುರಿತ ಮಾಹಿತಿಗಳನ್ನೂ, ವಿಡಿಯೊಗಳನ್ನೂ ಇಲ್ಲಿ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.