ADVERTISEMENT

ಅಳಿದ ಮೇಲೆ ಉಳಿದ ‘ಗಾಂಧಿ’ಗಳು

ಪ್ರಜಾವಾಣಿ ವಿಶೇಷ
Published 1 ಅಕ್ಟೋಬರ್ 2018, 19:40 IST
Last Updated 1 ಅಕ್ಟೋಬರ್ 2018, 19:40 IST

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ (1869–-1948) ಅವರ ಸಾವಿನ ನಂತರವೂ ನಾಲ್ವರು ಗಾಂಧಿಗಳು ಬದುಕಿದರು. ಈ ನಾಲ್ವರೂ ತಂಟೆಕೋರರೇ, ಆದರೆ ಇವರು ಭಿನ್ನ ಜನರನ್ನು ಭಿನ್ನ ಕಾರಣಗಳಿಗಾಗಿ ಭಿನ್ನ ಬಗೆಗಳಲ್ಲಿ ಕಾಡಿದ್ದಾರೆ. ಹಾಗೆಯೇ ಜನರು ಈ ನಾಲ್ವರು ಗಾಂಧಿಗಳನ್ನೂ ತಮ್ಮದೇ ಆದ ಕಾರಣಗಳಿಗೆ ತಮ್ಮದೇ ಆದ ಬಗೆಗಳಲ್ಲಿ ಬಳಸುತ್ತಿದ್ದಾರೆ.

ಹುಟ್ಟಿ ಒಂದೂಕಾಲು ಶತಮಾನ ಉರುಳಿದ ನಂತರ, ಹಾಗೆಯೇ ಸತ್ತು ಅರ್ಧ ಶತಮಾನ ಕಳೆದ ನಂತರವೂ ಯಾರನ್ನಾದರೂ ಕಾಡುವುದು ಅಥವಾ ಯಾರಾದರೂ ಬಳಸಲು ಸಾಧ್ಯವಿರುವಂತೆ ಉಳಿದುಕೊಳ್ಳುವುದು ಸಣ್ಣ ಸಾಧನೆಯೇನಲ್ಲ. ಹಾಗೆ ನೋಡಿದರೆ ‘ನಿಜವಾಗಿ ಹೇಗಿದ್ದರು’ ಎಂಬುದರ ಬಗ್ಗೆ ನನಗೂ ಕಾಳಜಿಯೇನೂ ಇಲ್ಲ. ಅದನ್ನು ಬೌದ್ಧಿಕ ವಲಯದ ಚರ್ಚೆಗೆ ಬಿಟ್ಟು ಬಿಡೋಣ.

ವರ್ತಮಾನದ ರಾಜಕಾರಣ ಎಂಬುದು ಚರಿತ್ರೆ ‘ಸತ್ಯ’ಗಳಿಗೆ ಸಂಬಂಧಿಸಿದಲ್ಲ. ಅದು ನಮ್ಮ ನೆನಪುಗಳಲ್ಲಿರುವ ಭೂತಕ್ಕೆ ಸಂಬಂಧಿಸಿದ್ದು ಮತ್ತು ಈ ಸಾಮೂಹಿಕ ನೆನಪುಗಳನ್ನು ಆಧಾರವಾಗಿಟ್ಟುಕೊಂಡು ಭವಿಷ್ಯವನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದ್ದು. ಒಳ್ಳೆಯದಕ್ಕೋ ಕೆಟ್ಟದಕ್ಕೋ ಎಂಬುದಂತೂ ಗೊತ್ತಿಲ್ಲ. ಗಾಂಧಿ ನಮ್ಮ ಸಾಮೂಹಿಕ ನೆನಪಿನೊಳಕ್ಕೆ ಪ್ರವೇಶಿಸಿಬಿಟ್ಟಿದ್ದಾರೆ.

ನಾನು ಗಾಂಧೀವಾದಿಯಲ್ಲ. ಆದ್ದರಿಂದ ನನ್ನ ಅಭಿಪ್ರಾಯಗಳು ಮುಖ್ಯವಾಗಬೇಕಿಲ್ಲ. ಆದರೆ ‘ಗಾಂಧೀವಾದ’ ಎಂಬುದು ಗಾಂಧಿಗಿಂತ ದೊಡ್ಡದು ಎಂಬುದು ನನ್ನ ಗ್ರಹಿಕೆ. ಗಾಂಧಿ ತಮ್ಮ ತತ್ವಗಳಿಗೆ ಅನುಗುಣವಾಗಿ ಬದುಕಲಿಲ್ಲ. ಅದಕ್ಕೆ ಮುಖ್ಯ ಕಾರಣ ಅವರೊಬ್ಬ ಸಕ್ರಿಯ ರಾಜಕಾರಣಿ. ರಾಜಕಾರಣದ ಕೆಲಸವೇ ಸಿದ್ಧಾಂತ ಮತ್ತು ನೈತಿಕ ಪರಿಶುದ್ಧತೆಯನ್ನು ತೆಳುಗೊಳಿಸುವುದು. ನನಗಿಷ್ಟವಾದ ಪ್ರಯೋಗವೊಂದನ್ನು ಬಳಸುವುದಾದರೆ (ಆರ್ನಾಲ್ಡ್ ಟಾಯ್ನ್‌ಬಿಯಿಂದ ಎರವಲು ಪಡೆದದ್ದು)– “ರಾಜಕಾರಣದ ಕೊಳಚೆಯೊಳಗೆ ಬದುಕಲು ಸಿದ್ಧನಿದ್ದ ಏಕೈಕ ಪ್ರವಾದಿ ಗಾಂಧಿ”. ಆದ್ದರಿಂದಲೇ ಗಾಂಧಿಗೆ ನೂರಕ್ಕೆ ನೂರರಷ್ಟು ಗಾಂಧೀವಾದಿಯಾಗಿರಲು ಸಾಧ್ಯವಿರಲಿಲ್ಲ. ಯಾರಾದರೂ ನಾನು ಸಂಪೂರ್ಣ ಗಾಂಧಿವಾದಿಯಾಗಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡರೆ ಅದು ಗಾಂಧೀಜಿಗೆ ಸಲ್ಲಿಸುವ ಅರ್ಥಪೂರ್ಣ ಗೌರವ.

ನಾನಿಲ್ಲಿ ಚರ್ಚಿಸಲು ಹೊರಟಿರುವ ಗಾಂಧಿಗಳು ಯಾರೆಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ. ಇವರೆಲ್ಲಾ ವೆಬೇರಿಯನ್ ಮಾಪನ ಮಾದರಿಗಳು. ಈ ಮಾದರಿಗಳು ವಿಶ್ಲೇಷಣೆಗೆ ಬಳಕೆಯಾಗುವ ಪರಿಕರಗಳಾದ್ದರಿಂದ ಇವು ವ್ಯಕ್ತಿತ್ವದ ವ್ಯಂಗ್ಯಚಿತ್ರಗಳಂತೆಯೂ ಕಾಣಿಸುತ್ತವೆ. ಅಂದರೆ ಇವು ವಾಸ್ತವ ಚಿತ್ರಣಗಳಲ್ಲ ಹಾಗೆಂದು ಇವು ಅಸತ್ಯವೂ ಅಲ್ಲ. ಈ ವಿಷಯದಲ್ಲಿ ನಾನು ಗೆಳೆಯ ಮತ್ತು ಸಹೋದ್ಯೋಗಿ ಡಿ.ಆರ್. ನಾಗರಾಜ್ ಅವರಿಂದ ಪ್ರಭಾವಿತನಾಗಿದ್ದೇನೆ. ವಿಲಿಯಂ ಬ್ಲೇಕ್‌ನ ಹಾದಿಯನ್ನು ಅನುಸರಿಸಿದ ಅವರು ‘ಶೈಲೀಕೃತ ಉತ್ಪ್ರೇಕ್ಷೆ’ ಜ್ಞಾನದೆಡೆಗಿನ ಹಾದಿಯೂ ಆಗಬಹುದೆಂಬುದು ಭಾವಿಸಿದ್ದರು.

ಈಗ ನಾವು ಬದುಕಿನ ಗಾಂಧಿಗಳ ವಿಚಾರಕ್ಕೆ ಬರೋಣ. ಇವರೆಲ್ಲರೂ ಚಿರಪರಿಚಿತರೇ. ಅವ್ಯಕ್ತವಾಗಿರುವ ಅರಿವನ್ನು ಇಲ್ಲಿ ವ್ಯಕ್ತಗೊಳಿಸುವುದಷ್ಟೇ ನಾನು ಮಾಡುತ್ತಿರುವ ಕೆಲಸ. ಒಬ್ಬ ಮನಃಶ್ಶಾಸ್ತ್ರಜ್ಞನಾಗಿರುವ ನನಗೆ ನಿಮಗೊಂದು ಎಚ್ಚರಿಕೆ ನೀಡಬೇಕಾದ ಜವಾಬ್ದಾರಿಯೂ ಇದೆ. ಅವ್ಯಕ್ತವಾಗಿರುವ ವಿಚಾರವನ್ನು ವ್ಯಕ್ತಗೊಳಿಸಿಬಿಟ್ಟರೆ ಅದನ್ನು ಸ್ವೀಕರಿಸುವುದು ಹೆಚ್ಚಿನ ಸಂದರ್ಭಗಳಲ್ಲಿ ಬಹಳ ನೋವಿನದ್ದೂ ಆಗಿಬಿಡಬಹುದು.

ಮೊದಲನೆಯ ಗಾಂಧಿ ಭಾರತೀಯ ಪ್ರಭುತ್ವ ಮತ್ತು ಭಾರತೀಯ ರಾಷ್ಟ್ರೀಯತೆಯ ಗಾಂಧಿ. ಈ ಗಾಂಧಿಯನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ. ಬಹುಶಃ ಗಾಂಧಿಗೂ ಈ ಗಾಂಧಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತೇನೋ. ಆದರೆ ಬಹಳಷ್ಟು ಜನ ಈ ಗಾಂಧಿಯನ್ನಷ್ಟೇ ಸಹಿಸಿಕೊಳ್ಳಬಹುದು ಎಂದು ಭಾವಿಸುತ್ತಾರೆ. ಹಾಗಾಗಿಯೇ ಈ ಗಾಂಧಿಯ ಜೊತೆ ಆರಾಮದಲ್ಲಿ ಬದುಕುತ್ತಿದ್ದಾರೆ.
ಸ್ವಾತಂತ್ರ್ಯಾನಂತರ ರಾಷ್ಟ್ರಪಿತನ ರಾಜಕೀಯ ಅಸ್ತಿತ್ವ, ಅವರ ನೆನಪು, ಅವರ ಬರಹಗಳೆಲ್ಲವೂ ಆಗಷ್ಟೇ ಜನ್ಮತಳೆದಿದ್ದ ಭಾರತೀಯ ಪ್ರಭುತ್ವಕ್ಕೆ ಸಮಸ್ಯೆಯಂತೆ ಕಾಣಿಸುತ್ತಿತ್ತು.

ADVERTISEMENT

ಹಾಗೆಯೇ ಪ್ರಭುತ್ವದ ಆಶ್ರಯವಿರುವ ಸ್ಥಳಗಳ ಸುತ್ತ ನೊಣಗಳಂತೆ ಸುಳಿದಾಡುವುದರಲ್ಲಿ ವಿಶೇಷ ಪರಿಣತಿಯಿದ್ದ ಬುದ್ಧಿಜೀವಿಗಳಿಗೂ ಗಾಂಧಿ ಒಂದು ತೊಂದರೆಯೇ. ಗಾಂಧೀಜಿಯ ಅರಾಜಕ ನಿಲುವುಗಳಷ್ಟೇ ಅವರಿಗೆ ಸಮಸ್ಯೆಯಾಗಿರಲಿಲ್ಲ. ಸಾರ್ವಜನಿಕ ಮತ್ತು ಖಾಸಗಿ, ಧಾರ್ಮಿಕತೆ ಮತ್ತು ಧರ್ಮ ನಿರಪೇಕ್ಷತೆ, ಭೂತ ಮತ್ತು ವರ್ತಮಾನಗಳ ನಡುವಣ ಗೆರೆಗಳನ್ನೇ ನಿರಾಕರಿಸುವ ಗಾಂಧೀಜಿಯ ನಡವಳಿಕೆಯೂ ಅವರ ಮಟ್ಟಿಗೆ ಒಂದು ದೊಡ್ಡ ತಂಟೆಯೇ ಆಗಿಬಿಟ್ಟಿತ್ತು.

ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಕಾಡಿದ್ದ ಅದೇ ಸಮಸ್ಯೆಗಳು ಈ ಬುದ್ಧಿಜೀವಿಗಳನ್ನೂ ಕಾಡುತ್ತಿತ್ತು. ‘ಒಬ್ಬ ಅನನುಭವಿ ರಾಜಕಾರಣಿ ಮತ್ತು ಹುಚ್ಚನಿಂದ ಭಾರತವನ್ನು ರಕ್ಷಿಸುವುದಕ್ಕಾಗಿ ನಾನೀ ಪಿತೃಹತ್ಯೆಯನ್ನು ಮಾಡಿದೆ’ ಎಂದು ಗೋಡ್ಸೆ ಸ್ಪಷ್ಟವಾಗಿ ಹೇಳಿದ್ದ. ಗಾಂಧಿಯನ್ನು ಭಾರತದ ರಾಷ್ಟ್ರ ಪ್ರಭುತ್ವದ ಸಂಕೇತವನ್ನಾಗಿ ಉಳಿಸಿಕೊಂಡೇ ಆರು ಅಡಿ ಆಳದಲ್ಲಿ ಹೂತುಬಿಡುವ ಆಸೆ ಪ್ರಭುತ್ವದ ಆಶ್ರಯಕ್ಕೆ ಹಾತೊರೆಯುತ್ತಿದ್ದ ಬುದ್ಧಿಜೀವಿಗಳಿಗೂ ಇತ್ತು.

ಈ ಗಾಂಧಿಯ ಎದೆಮಟ್ಟದ ಪ್ರತಿಮೆಯೊಂದು ದೆಹಲಿಯಲ್ಲಿ ಐದನೇ ಜಾರ್ಜ್‌ನ ಪ್ರತಿಮೆಯನ್ನು ತೆರವುಗೊಳಿಸುವುದರಿಂದ ಸಿಗುವ ಸ್ಥಳದಲ್ಲಿ ಪ್ರತಿಷ್ಠಾಪನೆಯಾಗಲಿದೆಯಂತೆ. ಇದರೊಂದಿಗೆ ಕುಸಿಯುತ್ತಿರುವ ಮೊದಲ ಗಣರಾಜ್ಯದಲ್ಲಿ ಗಾಂಧಿಯ ಕೊನೆಯ ಪಟ್ಟಾಭಿಷೇಕ ನಡೆದಂತಾಗುತ್ತದೆ. ಅಷ್ಟೇ ಅಲ್ಲ ಮಧ್ಯಮ ವರ್ಗದ ದುರಂತ ನಾಯಕನಾಗಿರುವ ಸುಭಾಶ್‌ಚಂದ್ರ ಬೋಸ್ ಎರಡನೆಯ ಮಹಾಯುದ್ಧದ ಸಮಯದಲ್ಲಿ ತಮ್ಮ ಇಂಡಿಯನ್ ನ್ಯಾಷನಲ್ ಆರ್ಮಿಯ ಬ್ರಿಗೇಡ್ ಒಂದಕ್ಕೆ ಗಾಂಧಿಯ ಹೆಸರಿಟ್ಟ ತಮಾಷೆಯ ನಂತರದ ಅತಿ ದೊಡ್ಡ ತಮಾಷೆ ಎಂಬ ಖ್ಯಾತಿಗೂ ಈ ಪ್ರತಿಮೆ ಭಾಜನವಾಗುತ್ತದೆ.

ಭಾರತೀಯ ಪ್ರಭುತ್ವದ ಸ್ಥಾನಮಾನ ನಿರಂತರವಾಗಿ ಕೆಳಗಿಳಿಯುತ್ತಿರುವುದು, ಪಾಶ್ಚಾತ್ಯೀಕರಣಗೊಂಡ ಭಾರತೀಯ ರಾಷ್ಟ್ರೀಯತೆಯ ಹಲವು ಆವೃತ್ತಿಗಳು ಸಾಂಸ್ಕೃತಿಕ ಅನನ್ಯತೆಯ ದೃಢೀಕರಣದ ಹೆಸರಿನಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವುದರ ಪರಿಣಾಮವಾಗಿ ಮೊದಲ ಬಗೆಯ ಗಾಂಧಿಯ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಗೋಡ್ಸೆಗೆ ಮಾಡಲು ಸಾಧ್ಯವಾಗದೇ ಇದ್ದುದನ್ನು ಹಿಂದುತ್ವ ಮತ್ತು ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಾಗಿ ಬದಲಾದ ಬಾಳ್ ಠಾಕ್ರೆ ಮತ್ತು ಎಲ್.ಕೆ. ಆಡ್ವಾಣಿ (ಇಬ್ಬರೂ ಹಿಂದಿ ಸಿನಿಮಾ ಅಭಿಮಾನಿಗಳು) ಮಾಡಿದರು.

ಎರಡನೇ ಗಾಂಧಿ ಗಾಂಧೀವಾದಿಗಳ ಗಾಂಧಿ. ಈ ಗಾಂಧಿಗೆ ಈಗ ತೀವ್ರತರ ರಕ್ತಹೀನತೆ ಬಾಧಿಸಿದೆ. ಗಾಂಧೀವಾದಿಗಳ ಗಾಂಧಿ ಆಗೀಗ ತಾತನಂತೆ ಪ್ರೀತಿಸಬಹುದಾದ ವ್ಯಕ್ತಿತ್ವವುಳ್ಳವರು, ಸಾರ್ವಜನಿಕ ಮಾತುಕತೆಗಳಲ್ಲಿ ಈ ಗಾಂಧಿಯ ದಯಾಪೂರ್ಣ ಉಪಸ್ಥಿತಿ ಇದೆ. ಈ ಗಾಂಧಿಯದ್ದು ತಲೆ ಚಿಟ್ಟು ಹಿಡಿಸುವಂಥ ವ್ಯಕ್ತಿತ್ವವೂ ಹೌದು. ವಿಕ್ಟೋರಿಯನ್ ಮೌಲ್ಯಗಳ ಅಪರವತಾರದಂತೆ ಕಾಣಿಸುವ ಈ ಗಾಂಧಿ ಭಾರತದಲ್ಲಿ ತಪ್ಪಿ ಹುಟ್ಟಿದ್ದಾರೇನೋ ಅನ್ನಿಸಿಬಿಡುತ್ತದೆ. ಈ ಗಾಂಧಿ ನಿಂಬೆಹಣ್ಣಿನ ಪಾನಕ ಕುಡಿಯುತ್ತಾರೆ. ಕೈಮಗ್ಗದ ಖಾದಿ ತೊಡುತ್ತಾರೆ.

ಈ ವಿಷಯದಲ್ಲಿ ಭಾರತೀಯ ಪ್ರಭುತ್ವದ ಗಾಂಧಿಗಿಂತ ಈ ಗಾಂಧೀವಾದಿಗಳ ಗಾಂಧಿ ಭಿನ್ನ. ಪ್ರಭುತ್ವದ ಗಾಂಧಿ ಕೋಕಾ-ಕೋಲಾ ಕುಡಿಯುವುದಿಲ್ಲ. ಆದರೆ ಭಾರತೀಯ ಮೂಲದ ಕಂಪೆನಿ ತಯಾರಿಸಿದ ಕೋಕಾ-ಕೋಲಾದ ರುಚಿಯನ್ನೇ ಹೋಲುವ ಕ್ಯಾಂಪ ಕೋಲಾ ಕುಡಿಯುತ್ತಾರೆ. ಈ ಗಾಂಧಿ ಮಾಡದೇ ಇರುವ ಮತ್ತೊಂದು ಕೆಲಸವೆಂದರೆ ರಾಜಕಾರಣ. ಹೌದು ಈ ಗಾಂಧಿ ರಾಜಕಾರಣವನ್ನು ಮುಟ್ಟುವುದೂ ಇಲ್ಲ. ಹಾಗೆ ನೋಡಿದರೆ ಈ ಗಾಂಧಿಗೆ ರಾಜಕೀಯವನ್ನು ಮುಟ್ಟುವುದು ಸಾಧ್ಯವೂ ಇಲ್ಲ.

ಹಾಗೇನಾದರೂ ಮಾಡಿದರೆ ಭಾರತ ಸರ್ಕಾರ ಈ ಗಾಂಧಿಯ ಹೆಸರಿರುವ ಆಶ್ರಮಗಳಿಗೆ ನೀಡುತ್ತಿರುವ ಅನುದಾನ, ಖಾದಿಗೆ ದೊರೆಯುತ್ತಿರುವ ಸಬ್ಸಿಡಿ ಮತ್ತು ಆಚರಣಾತ್ಮಕ ಗಾಂಧಿ ವಿಚಾರ ಸಂಕಿರಣಗಳೆಲ್ಲವೂ ನಿಂತು ಹೋಗಿಬಿಡುತ್ತವೆ. ಈ ಅವತಾರದಲ್ಲಿಯೂ ಗಾಂಧೀಜಿ ಆಗೀಗ ರಾಜಕೀಯ ಪ್ರವೇಶಿಸುವುದುಂಟು. ಹೇಗೆಂದರೆ ಒಂದು ಸಭೆ ಸೇರಿಸಿ ರಾಜಕೀಯ ಕ್ಷೇತ್ರದ ಅಪರಾಧೀಕರಣವನ್ನು ಖಂಡಿಸುವುದು ಇತ್ಯಾದಿಗಳ ಮೂಲಕ.

ಈ ಬಗೆಯ ಸಭೆ ಮತ್ತು ವಿಚಾರ ಸಂಕಿರಣಗಳಲ್ಲಿ ಎಲ್ಲರೂ ಬಂದು ಯಾರ ಹೆಸರನ್ನೂ ಹೇಳದೆ, ಯಾವ ಪಕ್ಷದ ಹೆಸರನ್ನೂ ಪ್ರಸ್ತಾಪಿಸದೆ, ಭಾರತದ ವರ್ತಮಾನದ ಸ್ಥಿತಿಗಾಗಿ ಕಣ್ಣೀರು ಸುರಿಸುತ್ತಾರೆ. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಎಲ್ಲರೂ ಸಂತೋಷಿತರಾಗಿರುತ್ತಾರೆ. ಅಪರಾಧಿಗಳೊಂದಿಗೆ ಸಂಪರ್ಕದಲ್ಲಿರುವ ರಾಜಕಾರಣಿಗಳು ಕೂಡಾ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಪ್ಪಾಳೆ ತಟ್ಟುತ್ತಾರೆ.
ಗಾಂಧೀವಾದಿಗಳ ಗಾಂಧಿ ವಿಶ್ವದಾದ್ಯಂತ ಪ್ರವಾಸ ಮಾಡಿ ಗಾಂಧೀವಾದ ಮತ್ತು ಗಾಂಧೀ ಚಿಂತನೆಯನ್ನು ಬೋಧಿಸುತ್ತಾರೆ. ಈ ಗಾಂಧಿ ಗಾಂಧೀವಾದಿಗಳ ಮೂಲಕ ಯಾವತ್ತೂ ಭಾರತೀಯರನ್ನು ಉದ್ದೇಶಿಸಿ ಮಾತನಾಡುವುದು ಬಹಳ ಕಡಿಮೆ. ಇದು ಸಹಜ ಕೂಡಾ.

ಏಕೆಂದರೆ ಭಾರತದಲ್ಲಿ ಅವರಿಗಿರುವ ಕೇಳುಗರ ಸಂಖ್ಯೆ ಯಾವತ್ತೂ 20–25ನ್ನು ಮೀರುವುದಿಲ್ಲ. ಈ 20–25 ಮಂದಿ ಕೂಡಾ ಭಾಷಣದ ಆರಂಭದಲ್ಲೇ ಸುಸ್ತಾದವರಂತೆ, ಆಸಕ್ತಿ ಇಲ್ಲದವರಂತೆ, ನಿದ್ರಿಸಲು ಬಂದವರಂತೆ ಕಾಣಿಸುತ್ತಿರುತ್ತಾರೆ. ಅವರು ಬರುವುದೇ ‘ನಾವಲ್ಲಿ ಇರಬೇಕು’ ಎಂಬ ಕಾರಣಕ್ಕೆ. ಅದೇಕೆಂದರೆ ‘ನಾವಲ್ಲಿ ಇಲ್ಲದಿದ್ದರೆ ಚೆನ್ನಾಗಿರುವುದಿಲ್ಲ’ ಎಂಬ ಅವರ ಭಾವದಿಂದ. ಇಂಥ ಗಾಂಧೀವಾದಿಗಳ ಸರಾಸರಿ ವಯಸ್ಸು ಈಗ 110 ವರ್ಷದಷ್ಟಿದೆ. ಅವರನ್ನು ಆಲಿಸಲು ಬರುವವರ ಸರಾಸರಿ ವಯಸ್ಸು ಸುಮಾರು 85 ವರ್ಷಗಳು.

ಈ ಸ್ಥಿತಿಗೆ ಗಾಂಧೀವಾದಿಗಳು ನೀಡುವ ಕಾರಣ ಭಾರತೀಯರು ಗಾಂಧೀಜಿಯನ್ನು ಮರೆತದ್ದು. ಆದರೆ ಈ ಗಾಂಧೀವಾದಿಗಳ ಬಗ್ಗೆ ಅಷ್ಟೇನೂ ಗೌರವವಿಲ್ಲದವರು ನೀಡುವ ಕಾರಣ ಬೇರೆಯೇ ಇದೆ– ಈ ಗಾಂಧಿವಾದಿಗಳು ಗಾಂಧಿಯನ್ನೂ ಭಾರತೀಯರನ್ನು ಮರೆತರು. ಈ ಕಾರಣವನ್ನು ಮುಂದಿಡುವವರು ಸುಂದರ್ ಲಾಲ್ ಬಹುಗುಣ ಮತ್ತು ಬಾಬಾ ಅಮ್ಟೆಯವರನ್ನು ತೋರಿಸಿ, ಹಗಲು-ರಾತ್ರಿ ಗಾಂಧಿಯ ಮೇಲೆ ಆಣೆ ಇಡುವವರಿಗೆ ಈ ದಾರಿಯೂ ಇತ್ತಲ್ಲ ಎನ್ನುತ್ತಾರೆ.

ಮೂರನೇ ಗಾಂಧಿ ಚಿಂದಿಕೊಳಕರಂತೆ, ತಿಕ್ಕಲರಂತೆ ಮತ್ತು ಸ್ಥಿರತೆಯಿಲ್ಲದವರಂತೆ ಹೊರಜಗತ್ತಿಗೆ ಕಾಣಿಸಿಕೊಳ್ಳುವವರ ಗಾಂಧಿ. ಈ ಗಾಂಧಿ ಆಮದಿತ ಸ್ಕಾಚ್ ವ್ಹಿಸ್ಕಿಗಿಂತ ಹೆಚ್ಚಾಗಿ ಕೋಕಾ–ಕೋಲಾವನ್ನು ವಿರೋಧಿಸುತ್ತಾರೆ. ಅಷ್ಟೇ ಅಲ್ಲ, ಆಮದಿತ ಕೋಕಾ-ಕೋಲಾಕ್ಕಿಂತ ದೇಶೀ ತಯಾರಿಕೆಯ ಕೋಕಾ-ಕೋಲಾ ಹೆಚ್ಚು ಅಪಾಯಕಾರಿ ಎಂಬ ನಿಲುವಿನವರು. ಅವರ ವಿರೋಧವಿರುವುದು ಬಹುವಾಗಿ ಯಾಂತ್ರೀಕರಣಗೊಂಡ ಆಹಾರ ತಯಾರಿಕೆಯ ರಾಚನಿಕತೆಯ ಬಗ್ಗೆ.

ರಾಷ್ಟ್ರೀಯತೆಯ ಹೆಸರಿನಲ್ಲಿ ಇಂಥ ರಚನೆಗಳು ಭಾರತೀಯ ಆರ್ಥಿಕತೆಯೊಳಗೆ ಪ್ರವೇಶ ಪಡೆದು ಸಿದ್ಧ ಆಹಾರ ಪದಾರ್ಥಗಳ ಉತ್ಪಾದನೆ ಆರಂಭವಾಗುವುದು ಬಹಳ ಅಪಾಯಕಾರಿ ಎಂಬುದು ಈ ಗಾಂಧಿಯ ನಿಲುವು. ಹುಸಿ ರಾಷ್ಟ್ರೀಯತೆಗಳಿಗೆ ಈ ಗಾಂಧಿ ಮಣಿಯುವುದಿಲ್ಲ. ಈತ ಕೋಕಾ-ಕೋಲಾವನ್ನು ಆಮದು ಮಾಡಿಕೊಳ್ಳಲು ಮನಸ್ಸು ಮಾಡಿಯಾನೇ ಹೊರತು ಕ್ಯಾಂಪ-ಕೋಲಾದಂಥ ದೇಶೀ ಕೋಲಾಗಳ ಉತ್ಪಾದನೆಯನ್ನು ಒಪ್ಪಲಾರ.

‘ಹಿಂದ್ ಸ್ವರಾಜ್’ನ ಈ ಗಾಂಧಿ ಬಹಳ ತಂಟೆಕೋರ. ವಂದನಾ ಶಿವ ಅವರು ಬೇವಿನ ಪೇಟೆಂಟ್ ಪಡೆದ ಕಂಪೆನಿಯ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದಾಗ ಅವರೊಳಗೆ ಇದ್ದದ್ದು ಇದೇ ಗಾಂಧಿ. ನರ್ಮದಾ ಬಚಾವೋ ಆಂದೋಲನಕ್ಕೆ ಮೇಧಾ ಪಾಟ್ಕರ್ ಅವರನ್ನು ಪ್ರೇರೇಪಿಸಿದ್ದು, ಆಪರೇಷನ್ ಫ್ಲಡ್, ಹಸಿರು ಕ್ರಾಂತಿ, ಗೋವಾದಲ್ಲಿ ಪ್ರವಾಸೋದ್ಯಮದ ವಿರುದ್ಧ ಹೋರಾಡುವಂತೆ ಕ್ಲಾಡ್ ಆಲ್ವಾರಿಸ್ ಅವರನ್ನು ಪ್ರೇರೇಪಿಸಿದ್ದೂ ಇದೇ ಗಾಂಧಿಯೇ. ತಮ್ಮ ಎಂಬತ್ತನೇ ವಯಸ್ಸಿನಲ್ಲಿ ಭಾರತ ಸರ್ಕಾರದ ಪರಮಾಣು ಇಲಾಖೆಯ ಹುಚ್ಚುತನವನ್ನು ವಿರೋಧಿಸುವ ಕೆಚ್ಚನ್ನು ಸಾಹಿತಿ, ಚಿಂತಕ ಶಿವರಾಮ ಕಾರಂತರಲ್ಲಿ ತುಂಬಿದ್ದು ಈ ಗಾಂಧಿಯೇ.

ಈ ಗಾಂಧಿಗೆ ವಿಚಿತ್ರ ಮಾನ್ಯತೆಗಳಿವೆ. ಅಷ್ಟೇ ಅಲ್ಲ ತನ್ನ ನಿಲುವನ್ನು ಸಂಶಯದಿಂದ ಕಂಡು ಟೀಕಿಸಿದಂಥ ವಿ.ಎಂ. ತಾರ್ಕುಂಡೆ, ಮಾರ್ಕ್ಸ್ ವಾದಿ ಸುನಿಲ್ ಸಹಸ್ರಬುದ್ಧೆ, ಅಷ್ಟೇಕೆ ಪಾಕಿಸ್ತಾನಿಗಳಾದ ಅಸ್ಮಾ ಜಹಾಂಗೀರ್ ಮತ್ತು ತಾರಿಕ್ ಬನೂರಿ ಜೊತೆಗೂ ಈ ಗಾಂಧಿ ಇರುತ್ತಾರೆ. ಈ ಗಾಂಧಿಯ ಜೊತೆಗೆ ಇರುವವರ ಸರಾಸರಿ ವಯಸ್ಸು 40 ವರ್ಷಗಳು. ಇದು ಇನ್ನೂ ಕಡಿಮೆಯಾಗುತ್ತಿತ್ತು. ಆದರೆ ಇನ್ನು ಯುವ ಹೃದಯಿಗಳೇ ಆಗಿರುವ ರಜನಿ ಕೊಥಾರಿ ಮತ್ತು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಕೂಡಾ ಈ ಗಾಂಧಿಯ ಜೊತೆಗೆ ಇರುವುದರಿಂದ ಸರಾಸರಿ ವಯಸ್ಸು ಹೆಚ್ಚಾಗಿಬಿಟ್ಟಿದೆ. ಈ ಗಾಂಧಿ ಮತ್ತು ಅವನ ಗೆಳೆಯರು ಭಾರತೀಯ ಪ್ರಭುತ್ವಕ್ಕೆ, ಅದರ ಅಧಿಕೃತ ಭದ್ರತಾ ಆಸಕ್ತಿಗಳು ಮತ್ತು ವೈಜ್ಞಾನಿಕ ಸಂಸ್ಥೆಗಳ ಮಟ್ಟಿಗೆ ಯಾವತ್ತೂ ಒಂದು ತಲೆನೋವೇ.

ಈ ಗಾಂಧಿ ಮತ್ತು ಅವರ ಗೆಳೆಯರ ವಿಷಯದಲ್ಲಿ ನನಗೊಂದು ವೈಯಕ್ತಿಕ ಪಾಲಿದೆ. ನನ್ನ ಬದುಕಿನಲ್ಲಿ ನಾನು ಮಾಡಿದ ಕೆಲವು ಕೆಲಸಗಳನ್ನು ಗಾಂಧಿಯ ಈ ಗೆಳೆಯರು ಇನ್ನೂ ಚೆನ್ನಾಗಿ ಮಾಡುತ್ತಿದ್ದಾರೆ. ಈ ಚಿಂದಿಕೊಳಕರ ಪಕ್ಷ ದೊಡ್ಡದಾಗಿ ಶಕ್ತವಾಗಿ ಬೆಳೆಯುತ್ತಿದೆ. ನನ್ನ ಸಾವಿನ ನಂತರವೂ ನಾನು ಹೇಳುತ್ತಿದ್ದ ಮಾತುಗಳನ್ನು ಹೆಚ್ಚು ಸ್ಪಷ್ಟವಾಗಿ ಹೇಳುವವರಿರುತ್ತಾರೆ ಮತ್ತು ನಾನು ಮಾಡುತ್ತಿದ್ದ ಕೆಲಸಗಳನ್ನು ನನಗಿಂತ ಹೆಚ್ಚು ಚೆನ್ನಾಗಿ ಮಾಡುವವರಿರುತ್ತಾರೆಂಬ ನಂಬಿಕೆ ನನ್ನಲ್ಲಿ ಮೂಡುತ್ತಿದೆ. ನನ್ನ ಸಾವಿನ ನಂತರವೂ ನನ್ನ ಶತ್ರುಗಳನ್ನು ಕಾಡಬಹುದೆಂಬುದು ನನ್ನನ್ನು ರೋಮಾಂಚನಗೊಳಿಸುತ್ತಿದೆ.

ಈ ಗಾಂಧಿ ಖಾದಿ ಧರಿಸುವುದಿಲ್ಲ, ಮದ್ಯಪಾನವನ್ನು ತ್ಯಜಿಸುವುದಿಲ್ಲ. ಸಾಮಾನ್ಯವಾಗಿ ಈ ಗಾಂಧಿಯ ಉಡುಪು ನೀಲಿ ಬಣ್ಣದ ಜೀನ್ಸ್ ಮತ್ತು ಖಾದಿ ಕುರ್ತಾ. ಈ ಕುರಿತಂತೆ ‘ಇಂಡಿಯಾಟುಡೇ’ಯಲ್ಲಿ ಬರೆದ ರಮಣೀಂದರ್ ಸಿಂಗ್ ಅವರನ್ನು ಸಂತೋಷ ಪಡಿಸುವುದಕ್ಕಾಗಿ ಈ ಗಾಂಧಿಯ ಬಗಲಲ್ಲಿ ಒಂದು ಚೀಲವೂ ಇರುತ್ತದೆ ಎಂದು ಭಾವಿಸೋಣ. ಈ ಗಾಂಧಿಗೆ ಗುಜರಾತಿನಲ್ಲಿರುವ ತನ್ನ ಹುಟ್ಟೂರಿನ ಜೊತೆಗಿನ ಸಂಬಂಧ ತೆಳುವಾಗುತ್ತಿದೆ ಎಂದು ಹಲವರು ಅನುಮಾನಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಆ ರಾಜ್ಯ ಗಾಂಧಿಯನ್ನು ನಿರಾಕರಿಸಬಹುದು ಇಲ್ಲವೇ ಗಾಂಧಿಯೇ ಆ ಕೆಲಸ ಮಾಡಬಹುದು.

ಈ ಗಾಂಧಿ ಮತ್ತು ಅವರ ದುಷ್ಟ ಗೆಳೆಯರು ಮುಂದಿನ ದಿನಗಳಲ್ಲಿ ವೈಚಾರಿಕರೂ ಸುಶಿಕ್ಷಿತರೂ ಬುದ್ಧಿವಂತೂ ಆದ ಭಾರತೀಯರ ಮಟ್ಟಿಗೆ ಒಂದು ಕಿರಿಕಿರಿಯಾಗುವುದು ಖಂಡಿತ. ಥೈವಾನ್‌ನ ಮಾನವ ಶಾಸ್ತ್ರಜ್ಞ ಹಾಗೂ ಹೋರಾಟಗಾರ ಫ್ರೆಡ್ ಚ್ಯು ‘ಎಲ್ಲೆಲ್ಲಿಗೆ ನಾಗರಿಕತೆ ಹೋಯಿತೋ ಅಲ್ಲಿಗೆಲ್ಲಾ ಸಿಫಿಲಿಸ್ ರೋಗವನ್ನು ಕೊಂಡೊಯ್ದಿತ್ತು’ ಎಂಬ ಗಾದೆಯನ್ನು ನೆನಪಿಸಿಕೊಂಡು, ಎಲ್ಲೆಲ್ಲಿಗೆ ಜಾಗತೀಕರಣ ಹೋಗುತ್ತದೆಯೋ ಅಲ್ಲಿಗೆಲ್ಲಾ ರಾಜಕೀಯ ಹೋರಾಟವೂ ಹೋಗುತ್ತದೆ, ಸರ್ಕಾರೇತರ ಸಂಸ್ಥೆಗಳೂ ಹೋಗುತ್ತವೆ, ಸಹಜವಾಗಿಯೇ ಜೋಲಾವಾಲ ಗಾಂಧಿಯೂ ಹೋಗುತ್ತಾರೆ ಮತ್ತು ತಮ್ಮ ತಂಟೆ ಆರಂಭಿಸುತ್ತಾರೆ. ಜಾಗತೀಕರಣದ ಪ್ರತಿಪಾದಕರು ಮತ್ತು ಬೃಹತ್ ಉದ್ಯಮಿಗಳು ಕಣ್ಣೀರು ತುಂಬಿಕೊಂಡು ಜಾಗತೀಕರಣದ ಗುಪ್ತ ವೆಚ್ಚಗಳೆಷ್ಟೆಂದು ಅರಿಯುತ್ತಾರೆ. ಈ ಜಾಗತೀಕರಣ ಗುಪ್ತ ವೆಚ್ಚಗಳನ್ನು ಹೆಚ್ಚಿಸುವವರನ್ನು ನಾನು ಗುಟ್ಟಾಗಿ ಮೆಚ್ಚುತ್ತೇನೆ.

ನಾಲ್ಕನೇ ಗಾಂಧಿ ಸಾಮಾನ್ಯ ಬಗೆಯಲ್ಲಿ ಓದಿ ಸಿಕ್ಕ ಗಾಂಧಿ ಅಲ್ಲ. ಕೇಳಿಸಿಕೊಂಡು ಸಿಕ್ಕ ಗಾಂಧಿ. ಅದೂ ಎರಡು ಅಥವಾ ಮೂರನೆಯವರ ಬಾಯಿಂದ ಕೇಳಿ ಸಿಕ್ಕ ಗಾಂಧಿ. ಮಾರ್ಟಿನ್ ಲೂಥರ್ ಕಿಂಗ್‌ನಂಥ ವಿಶೇಷ ಪ್ರಕರಣಗಳಲ್ಲಿ ಮಾತ್ರ ಓದಿ ಸಿಕ್ಕ ಗಾಂಧಿ. ಇದೇ ಪಟ್ಟಿಯಲ್ಲಿ ಬರುವ ಉಳಿದ ಅನೇಕರಿಗೆ ಗಾಂಧಿ ಏನು ಬರೆದಿದ್ದಾರೆಂಬುದೂ ಗೊತ್ತಿಲ್ಲ. ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಗಾಂಧಿ ಕುರಿತಂತೆ ಅವರ ನಿಲುವು ಈ ಮೊದಲು ಕೇರಳದ ಮಾರ್ಕ್ಸವಾದಿ ರಾಜಕಾರಣಿ ಎ.ಕೆ. ಗೋಪಾಲನ್‌ಗೆ (ಎ.ಕೆ.ಜಿ.) ಮಾರ್ಕ್ಸ್ ಬಗ್ಗೆ ಇದ್ದಂಥ ನಿಲುವು. ಎ.ಕೆ.ಜಿ. ‘ಒಮ್ಮೆ ನಾನು ಮಾರ್ಕ್ಸ್‌ನನ್ನು ಓದಿಲ್ಲ. ಓದಿದ್ದರೆ ಆತ ನನಗೆ ಅರ್ಥವಾಗುತ್ತಲೂ ಇರಲಿಲ್ಲ’ ಎಂದಿದ್ದರಂತೆ. ಆದರೆ ಎ.ಕೆ.ಜಿ. ಮಾರ್ಕ್ಸ್್‌ವಾದಿಯಾಗಿಯೇ ಉಳಿದರು.

ಈ ಗಾಂಧಿಯನ್ನು ‘ಪೌರಾಣಿಕ’ ಗಾಂಧಿ ಎಂದು ಕರೆಯಬಹುದೇನೋ. ಈ ಗಾಂಧಿ ನಿಜ ಬದುಕಿನಲ್ಲಿದ್ದ ಗಾಂಧಿಗಿಂತ ಭಿನ್ನವಾಗಿ ತಮ್ಮ ತತ್ವ ಸಿದ್ಧಾಂತಗಳಿಗೆ ಅನುರೂಪನಾಗಿಬಿಡುತ್ತಾರೆ ಎಂದು ಪರಿಸರ ಚಳವಳಿ, ಅಣು ಸ್ಥಾವರ ವಿರೋಧಿ ಚಳವಳಿ, ಸ್ತ್ರೀವಾದಿ ಚಳವಳಿಗಳಲ್ಲಿರುವ ಗಾಂಧೀ ಅಭಿಮಾನಿಗಳು ಹೇಳುತ್ತಾರೆ. ಅವರ ಬದುಕಿನ ‘ವಾಸ್ತವ’ಗಳನ್ನು ಗಾಂಧಿಯ ಸಿದ್ಧಾಂತಗಳಿಂದ ಪಡೆದು ಅವುಗಳನ್ನು ಹೊಸ ಪುರಾಣದಂತೆ ಜಗತ್ತಿನಾದ್ಯಂತ ಪಸರಿಸಲಾಗುತ್ತಿದೆ.

ಕೆಲ ವರ್ಷಗಳ ಹಿಂದೆ ರಿಚರ್ಡ್ ಅಟೆನ್‌ಬರೋ ನಿರ್ಮಿಸಿದ ‘ಗಾಂಧಿ’ ಚಲನಚಿತ್ರದ ಜನಪ್ರಿಯತೆಯಿಂದ ವಿಚಲಿತನಾದ ಅಮೆರಿಕನ್ ಅಂಕಣಕಾರ ರಿಚರ್ಡ್ ಗ್ರೇನಿಯರ್, ಗಾಂಧಿಯ ಬದುಕು ಮತ್ತು ಸಿದ್ಧಾಂತದ ಮಧ್ಯೆ ಇದ್ದ ವ್ಯತ್ಯಾಸವನ್ನು ಎತ್ತಿ ತೋರಿಸಿ ಗಾಂಧಿಯ ತಪ್ಪುಗಳತ್ತ ಬೊಟ್ಟು ಮಾಡಿದರು. ಆದರೆ ಈ ಪ್ರಯತ್ನ ವ್ಯರ್ಥವಾಯಿತು.

ಪೋಲೆಂಡ್‌ನ ಕಾರ್ಮಿಕರು 1980ರಲ್ಲಿ ತಮ್ಮ ಸರ್ವಾಧಿಕಾರಿ ಆಡಳಿತದ ವಿರುದ್ಧ ಸಿಡಿದೆದ್ದಾಗ ಲೆಖ್ ವಲೇಸಾರನ್ನು ತಮ್ಮ ಗಾಂಧಿ ಎಂಬ ವಿಶೇಷಣದಲ್ಲಿ ಗುರುತಿಸಿಕೊಂಡರು. ವೋಡ್ಕಾ ಕುಡಿಯುವ, ಒರಟಾಗಿ ಮಾತನಾಡುವ ಈ ಕಾರ್ಮಿಕ ನಾಯಕನಿಗೆ ತನ್ನ ಅನುಯಾಯಿಗಳು ಬಳಸುವ ವಿಶೇಷಣವನ್ನು ಅರಗಿಸಿಕೊಳ್ಳಲು ಕಷ್ಟವಾಗಿರಬಹುದು. ಆದರೆ ಆ ಕಾರ್ಮಿಕರಿಗೆ ಗಾಂಧಿ ಮತ್ತು ಅವರ ನಾಯಕನ ನಡುವೆ ಇದ್ದ ಐತಿಹಾಸಿಕವಾಗಿ ಪರಿಶೀಲಿಸಲು ಸಾಧ್ಯವಿರುವ ಹೋಲಿಕೆಗಳು ಸ್ವಲ್ಪವೂ ಮುಖ್ಯವಾಗಿರಲಿಲ್ಲ.

ಅವರು ತಮಗೇನು ಬೇಕು ಎಂಬುದನ್ನು ಹೇಳುತ್ತಿದ್ದರು. ಹಾಗೆಯೇ ಆಧುನಿಕ ತಂತ್ರಜ್ಞಾನ ಮತ್ತು ಪ್ರಭುತ್ವದ ಶಕ್ತಿಯ ಬೆಂಬಲದೊಂದಿಗೆ ಸರ್ವಾಧಿಕಾರಿಗಳು ಮತ್ತು ಅವರ ಅಧಿಕಾರ ಶಾಹಿಯನ್ನು ವಿರೋಧಿಸುವುದಕ್ಕೆ ಗಾಂಧಿ ಹೇಗೆ ತಮ್ಮ ಅಹಿಂಸೆಯೆಂಬ ಅಸ್ತ್ರದ ಮೂಲಕ ಒಂದು ಸಂಕೇತವಾದರು ಎಂಬುದನ್ನು ಪೋಲೆಂಡ್‌ನ ಕಾರ್ಮಿಕರು ತೋರಿಸಿಕೊಡುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಗಾಂಧಿ ಎಂದರೆ ಎಲ್ಲಾ ಅನ್ಯಾಯಗಳ ವಿರುದ್ಧದ ಹೋರಾಟದ ಸಂಕೇತ. ಫಿಲಿಪ್ಪೀನ್ಸ್‌ನಲ್ಲಿ ಬೆನಿಟೋ ಅಕ್ವಿನೋ ಹತ್ಯೆಯಾದಾಗ ಮನಿಲಾದ ಬೀದಿಯಲ್ಲಿದ್ದ ಪ್ರತಿಭಟನೆಕಾರರು ‘ಬೆನಿಟೋ ನಮ್ಮ ಗಾಂಧಿ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಇದೆಲ್ಲಾ ಕೇವಲ ಕಾಕತಾಳೀಯ ಅನ್ನಿಸಬಹುದು. ತಮ್ಮನ್ನು ಆಳುತ್ತಿರುವ ಸೇನಾ ಸರ್ವಾಧಿಕಾರದ ವಿರುದ್ಧ ಬರ್ಮಾದ ವಿದ್ಯಾರ್ಥಿಗಳು ಸಿಡಿದೆದ್ದಾಗಲೂ ಅವರಿಗೆ ನೆನಪಾದದ್ದೂ ಗಾಂಧಿಯೇ. ಇಲ್ಲಿ ನಾಯಕತ್ವ ಸ್ಥಾನದಲ್ಲಿದ್ದದ್ದು ಆಂಗ್ ಸಾನ್ ಸ್ಯೂಕಿ. ಗಾಂಧಿ ಎಂಬ ಬಿರುದು ಅನೇಕರನ್ನು ಅಲಂಕರಿಸಿದೆ. ಈ ಪಟ್ಟಿಯಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರಿಂದ ಆರಂಭಿಸಿ ನೆಲ್ಸನ್ ಮಂಡೇಲಾ ತನಕದ ಹಲವು ವ್ಯಕ್ತಿತ್ವಗಳಿವೆ.

ಈ ನಾಲ್ಕನೇ ಗಾಂಧಿ ಪ್ರಪಂಚದ ನೀಚ ಬೀದಿಗಳಲ್ಲಿ ತಿರುಗಾಡುತ್ತಾ ಅಲ್ಲಿರುವ ಪಟ್ಟಭದ್ರರ ಎದೆ ನಡುಗಿಸುತ್ತಿರುತ್ತಾರೆ. ಕ್ರೂರಿ ಸರ್ವಾಧಿಕಾರಿಗಳು ಈ ಆಯುಧಗಳೇ ಇಲ್ಲದ ಹೋರಾಟಗಾರರನ್ನು ತಪ್ಪಾಗಿ ಅಂದಾಜಿಸುತ್ತಾರೆ. ವೃತ್ತಿಪರ ಕ್ರಾಂತಿಕಾರಿಗಳೂ ಅಷ್ಟೇ ಆಯುಧವಿಲ್ಲದ ಈ ಸಂತನನ್ನು ತಮಾಷೆ ಮಾಡುತ್ತಾರೆ. ಆದರೆ ಇಬ್ಬರೂ ತಮ್ಮ ತಪ್ಪು ಅಂದಾಜುಗಳಿಗೆ ಬೆಲೆ ತೆರುತ್ತಾರೆ.

ಸರ್ವಾಧಿಕಾರಿಗಳು ತಮ್ಮ ವಿರುದ್ಧ ನಡೆದ ಕ್ರಾಂತಿಗಳು ಭಾರೀ ಯಶಸ್ಸು ಪಡೆದದ್ದು ನಿಜವಾದರೂ ದೂರ ಭವಿಷ್ಯದಲ್ಲಿ ಸೋಲುತ್ತವೆ ಎಂಬುದನ್ನು ಅರಿತು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಕ್ರಾಂತಿಗಳು ಮಕ್ಕಳನ್ನು ಭೌತಿಕವಾಗಿ ಮತ್ತು ನೈತಿಕವಾಗಿ ತಿಂದುಬಿಡುತ್ತವೆ. ಈ ಕ್ರಾಂತಿಕಾರಿಗಳೆಲ್ಲಾ ಈಗ ಮಧ್ಯವಯಸ್ಸು ದಾಟಿರುವ, ಸಿನಿಕ ಅಕಾಡೆಮಿಶಿಯನ್‌ಗಳು. ಅವರು ತಮ್ಮ ಕರ್ತವ್ಯಗಳಿಲ್ಲದ ಪದವಿಗೆ ದೊರೆಯುತ್ತಿರುವ ಸಂಬಳವನ್ನು ಖರ್ಚು ಮಾಡುತ್ತಿರುವವರು.

ಇವರು ತಮ್ಮ ಸಮಾಧಾನಕ್ಕೆ ಗಾಂಧೀವಾದದ ಐತಿಹಾಸಿಕ ಮಿತಿಗಳ ಕುರಿತಂತೆ ಒಂದು ವಿಚಾರ ಸಂಕಿರಣ ಸಂಘಟಿಸಿ ಚರ್ಚಿಸಬಹುದು. ಈ ವಿಚಾರ ಸಂಕಿರಣ ಮುಗಿಯುವ ಹೊತ್ತಿಗೆ ಈ ಪೌರಾಣಿಕ ಗಾಂಧಿ ಪ್ರಪಂಚದಲ್ಲಿರುವ ಹೊಸ ಕೊಳಚೆ ಪ್ರದೇಶಗಳಿಗೆ ಪ್ರವೇಶಿಸಿ ಹೊಸ ಹೋರಾಟಗಳನ್ನು ಸಂಘಟಿಸುವುದರಲ್ಲಿ ಮಗ್ನನಾಗಿರುತ್ತಾರೆ.

ನಾನೀಗ ನಿಮಗೆ ನಾಲ್ಕು ಗಾಂಧಿಗಳನ್ನು ಕೊಟ್ಟಿದ್ದೇನೆ. ನನ್ನ ಆಯ್ಕೆಯನ್ನೂ ಹೇಳಿದ್ದೇನೆ. ನೀವು ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳಬಹುದು. ಹಾಗೆಂದು ನಿಮ್ಮ ಆಯ್ಕೆ ಈ ನಾಲ್ಕರಲ್ಲಿ ಒಂದಾಗಿರಬೇಕಾಗಿಲ್ಲ. ಬಹುಶಃ ಅದೇ ಅತ್ಯಂತ ಬುದ್ಧಿವಂತ ನಿರ್ಧಾರವಾಗಿಬಹುದು. ಗಾಂಧಿ ಅಪಾಯಕಾರಿ. ಇದೆಲ್ಲದರ ಬದಲಿಗೆ ಹಲವರು ಮಾಡುವಂತೆ ನಿಮ್ಮ ಆಫೀಸು ಅಥವಾ ಮನೆಯಲ್ಲಿ ಗಾಂಧಿಯದ್ದೊಂದು ಫೋಟೊ ತೂಗು ಹಾಕಿ. ಗಾಂಧಿ ಜಯಂತಿಯ ರಜೆಯಂದು ಮಕ್ಕಳನ್ನು ಕರೆದುಕೊಂಡು ಒಂದು ಪಿಕ್‌ನಿಕ್ ಹೋಗಿಬನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.