ಸುಂದರರಾಯರ ಹೆಂಡತಿ ಸುಲೋಚನಕ್ಕ ಅಳಿಲು ಸಾಕ್ಲಿಕ್ಕೆ ಸುರು ಮಾಡಿದ್ದೇ ಒಂದು ಗಮ್ಮತ್ತಿನ ಕತೆ. ಅದು ಎಂತದು ಅಂದ್ರೆ, ಬೊಂಬಾಯಿಯ ಒಂದು ತುದಿ ದಹಿಸರ್‌ನಲ್ಲಿ ಸ್ವಂತ ಫ್ಲ್ಯಾಟ್ ತೆಕ್ಕೊಂಡ್ರು. ಫ್ಲ್ಯಾಟ್‌ಗೆ ಬಂದದ್ದೇ ತಡ, ಸುಲೋಚನಕ್ಕನಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಗಿತ್ತು.
ಯೆಂತಕ್ಕೆ ಅಂದ್ರೆ ಮೊದ್ಲು ಅವ್ರು ವಿಲೆಪಾರ್ಲೆಯಲ್ಲಿ ಬ್ಯಾಂಕಿನವರ ಕ್ವಾರ್ಟರ್ಸ್‌ನಲ್ಲಿ ಇದ್ರು. ಆಗ ಫ್ಲ್ಯಾಟಿನಲ್ಲಿ ಇದ್ದವರೆಲ್ಲ ಊರಿನವರೆ, ಬೆಳಿಗ್ಗೆ ಎದ್ದ ಕೂಡ್ಳೆ ‘ದಾನಿ? ಎಂಚ ವಿಲ್ಲರ್?’ (ಹೇಗಿದ್ದೀರಿ?) ಅಂತೆಲ್ಲ ಕೇಳ್ಳಿಕ್ಕೆ ಲೈಕ್ ಆಗ್ತಿತ್ತು. ಆದ್ರೆ ಸ್ವಂತ ಫ್ಲ್ಯಾಟ್ ಕಂಡಾಬಟ್ಟೆ ದೂರ, ಒಂದು. ಎರಡ್ನೇದ್ದು ,ಅದ್ರಲ್ಲಿ ಇದ್ದವ್ರೆಲ್ಲ ಸಿಂಧಿಗಳು, ಗುಜರಾತಿಗಳು. ಹೀಗಾಗಿ ಮಾತಾಡ್ಳಿಕ್ಕೆ ಯಾರು ಸಾ ಸಮಾ ಜೋಡಿ ಸಿಕ್ಕಿರ್‍ಲಿಲ್ಲ. ಗಂಡ ಬೆಳಿಗ್ಗೆ ಆರೂವರೆಗೆ ಎದ್ದು ಹೋದ್ರೆ ಬ್ಯಾಂಕಿನ ಕೆಲಸ ಮುಗಿಸಿ ಬರ್‍ತಾ ಇದ್ದದ್ದು ರಾತ್ರಿ ಒಂಬತ್ತು–ಒಂಬತ್ತೂವರೆಗೆ. ಮಗ ತನ್ನ ಎಂಜಿನಿಯರಿಂಗ್ ಮಾಡ್ಳಿಕ್ಕೆ ಹಾಸ್ಟೆಲ್ ಸೇರಿದ್ದ. ಮಗಳು ದಹಿಸರ್‌ನಿಂದ ಅಪ್ ಆ್ಯಂಡ್ ಡೌನ್ ಮಾಡ್ಳಿಕ್ಕೆ ಕಷ್ಟ ಆಗ್ತದೆ ಅಂತ ಪಿಜಿಯಲ್ಲಿ ಇದ್ಲು. ಅವಳು ನರ್ಸ್ ಟ್ರೈನಿಂಗಿಗೆ ಸೇರಿದ್ದಿದ್ಲು. ಹೀಗಾಗಿ ಸುಲೋಚನಕ್ಕ ಒಬ್ರೇ ಮನೆಯಲ್ಲಿ. ಟೈಂ ಪಾಸ್ ಮಾಡುದು ಕಂಡಾಬಟ್ಟೆ ಕಷ್ಟ ಆಗ್ತಿತ್ತು.
ಒಂದು ದಿವಸ ಅವರು ಗಂಡ ಆಫೀಸಿಗೆ ಹೋದ್ಮೇಲೆ ಬಾಲ್ಕನಿಯಲ್ಲಿ ಕೂತು ತಿಂಡಿ ತಿಂತಾ ಇದ್ರು. ಅಲ್ಲಿ ಚರಪರ ಸೌಂಡಾಯ್ತು. ಯೆಂತ ಅಂತ ನೋಡ್ತಾರೆ, ಎರಡು ಅಳಿಲುಗಳು. ಹತ್ತಿರ ಇದ್ದ ಚಿಕ್ಕು ಮರದಿಂದ ಸರ್ತ ಇವರ ಬಾಲ್ಕನಿಗೆ ಬಂದಿದ್ದವು. ಇವರು ತಿಂಡಿ ತಿನ್ನುದನ್ನೇ ನೋಡ್ತಾ ಕೂತಿದ್ದವು. ಪಾಪ ಹಸಿವು ಆಗಿರ್‍ಬೇಕು ಅಂತ ಎಣಿಸಿ ಒಳಗೆ ಹೋಗಿ ಇಡ್ಳಿ ತಂದು ಚೂರು ಮಾಡಿ ಹಾಕಿದ್ರು. ಅವೆರಡೂ ಗಬಗಬ ತಿಂದವು. ಅವು ತಿಂತಾ ಇರುದು ನೋಡಿ ಇನ್ನೊಂದು ಅಳಿಲು ಬಂತು. ಅದಕ್ಕೂ ಹಾಕಿದ್ರು. ಅದು ತಿನ್ಲಿಲ್ಲ. ‘ನಿಂಗೆ ಯೆಂತ ಬೇಕು? ಇಡ್ಳಿ ಮೆಚ್ಚುದಿಲ್ವಾ?’ ಅಂತ ಕೇಳಿದವರು, ಅಡಿಗೆ ಮನೆಗೆ ಹೋಗಿ ಬಿಸ್ಕಿಟ್, ರಸ್‌್ಕ ಎಲ್ಲ ತಂದು ಹಾಕಿದ್ರು. ಅದು ತಿನ್ಲಿಲ್ಲ. ಕಡೆಗೆ ಜೋಳದ ತೆನೆ ಇದ್ದದ್ದು ನೆನಪಾಗಿ ಅದ್ರ ಕಾಳು ಬಿಡಿಸಿ ಹಾಕಿದ್ರು. ಆ ಅಳಿಲು ತಿಂದಿತು. ‘ಪಾಪ... ತುಂಬ ಹಸಿವಾಗಿತ್ತ ಯೇನ ಅಲ್ವಾ?’ ಅಂತ ಕೇಳಿದ್ರು. ಅವು ಗಬಗಬ ತಿಂದವು.
ರಾತ್ರಿ ಗಂಡ ಬ್ಯಾಂಕಿನಿಂದ ಬಂದ ನಂತ್ರ ಅಳಿಲುಗಳು ಬಂದ ಕತೆ ಹೇಳಿದ್ರು. ಅವ್ರು ಕಿವಿ ಮೇಲೆ ಹಾಕ್ಕೊಳ್ಳೇ ಇಲ್ಲ. ಮರುದಿವಸ ಗಂಡ ಆಫೀಸಿಗೆ ಹೋದ ನಂತ್ರ ಬೆಳಿಗ್ಗೆ ಒಂಬತ್ತು ಗಂಟೆಗೇ ಕಾದು ಕೂತ್ರು. ಅವ್ರು ಎಣಿಸಿದ ಹಾಗೇ ಆಯ್ತು. ಹತ್ತು ಗಂಟೆಯ ಹೊತ್ತಿಗೆ ಕರೆಕ್ಟಾಗಿ ಎರಡು ಅಳಿಲುಗಳು ಬಂದವು. ಅವ್ರು ಹಾಕಿದ ದೋಸೆದ್ದು ಚೂರು ತಿಂದವು. ಮೊದಲು ಬಂದ ಎರಡೂ ತಿಂದವು. ಮೂರನೇದ್ದು ಆಮೇಲೆ ಬಂತು. ಅದಕ್ಕೆ ಜೋಳ ಹಾಕಿದ್ರು. ತಿಂದಿತು. ಆ ದಿವಸವೂ ರಾತ್ರಿ ಗಂಡನಿಗೆ ಈ ವಿಷಯ ಹೇಳಿದ್ರು. ಅವರಿಂದ ಯೆಂತ ರಿಯಾಕ್ಷನ್ನೂ ಬರ್‍ಲಿಲ್ಲ.
ಒಂದೆರಡು ದಿನ ಕಳ್ದ ಮೇಲೆ ಆ ಮೂರು ಅಳಿಲುಗಳು ಮನೆಯ ಒಳಗೇ ಬರ್‍ಲಿಕ್ಕೆ ಸುರು ಮಾಡಿದವು. ‘ಮಕ್ಕಳೇ ಒಳಗೆ ಬಂದವ್ರು ಗಲಾಟೆ ಮಾಡ್ಬೇಡಿ ಆಯ್ತಾ’ ಅಂತ ಅವ್ರು ಅವುಗಳ ಹತ್ರ ಮಾತಾಡ್ತಿದ್ರು. ಆವತ್ತು ಸಂಡೇ. ರಾಯರು ಮನೆಯಲ್ಲೇ ಇದ್ರು. ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಮನೆಯ ಒಳಗೆ ಬಂದ ಅಳಿಲುಗಳು ರಾಯರನ್ನು ಕಂಡು ವಾಪಸ್ ಬಾಲ್ಕನಿಗೆ ಹೋದವು. ‘ನೋಡುವ... ನೀವು ಸ್ವಲ್ಪ ಒಳಗೆ ಹೋಗಿ. ಪಾಪ ಅವು ನಿಮ್ಮನ್ನು ಕಂಡು ಹೆದ್ರಿದ್ದಾವೆ. ನಿಮ್ಮ ಗುರ್ತ ಇಲ್ಲ ಅವಕ್ಕೆ’ ಅಂತ ಹೇಳಿ ರಾಯರನ್ನು ಬೆಡ್‌ರೂಮಿಗೆ ಕಳಿಸಿದ್ರು. ‘ಅವು ಬಂದು ಹೋಗುವ ತನಕ ಹೊರಗೆ ಬರ್‍ಬೇಡಿ’ ಅಂತ ಹೇಳಿದ್ರು. ಅವ್ರು ಬೆಡ್‌ರೂಮಿಗೆ ಹೋದ ನಂತ್ರ ‘ಬಲೇ ಜೋಕುಳೇ’ (ಬನ್ನಿ ಮಕ್ಕಳೇ) ಅಂತ ಅವುಗಳನ್ನು ಕರುದ್ರು. ಅವು ಬಂದು ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದ ಚೌಚೌ, ಬಿಸ್ಕಿಟ್ ಎಲ್ಲ ತಿನ್ಲಿಕ್ಕೆ ಸುರು ಮಾಡಿದವು. ‘ಹೌದಾ... ಇಲ್ಲಿ ನೋಡಿ... ಎಷ್ಟು ಚೆಂದ ತಿಂತಾ ಇದ್ದಾವೆ ಅಂತ’ ಗಂಡನ ಹತ್ರ ಹೇಳಿದ್ರು. ನೋಡ್ಳಿಕ್ಕೆ ಅಂತ ಅವರು ಹೊರಗೆ ಬಂದ್ರು. ಅವು ಹೆದ್ರಿ ಓಡಿದವು. ‘ಸ್ವಲ್ಪ ಬರ್‍ಬಾರ್ದಾ... ಮಾರ್ರೆ... ಅವು ಹೆದ್ರಿ ಓಡಿ ಹೋದವು’ ಅಂತ ಗಂಡನಿಗೆ ಬೈದ್ರು. ರಾಯರಿಗೆ ಇವ್ಳಿಗೆ ತಂಗಿಂತ ಅಳಿಲುಗಳೇ ಹೆಚ್ಚಾಯ್ತಾ ಅಂತ ಅನಿಸಿತು.
ಒಂದು ದಿವಸ ಆಫೀಸಿನಿಂದ ಮನೆಗೆ ಬಂದ್ಮೇಲೆ ಅದೇ ವಿಷಯ ತೆಕ್ಕೊಂಡು ಹೆಂಡತಿಯನ್ನು ಚುಚ್ಚಿದ್ರು. ‘ನಿಂಗೆ ನಂಗಿಂತ ಆ ಅಳಿಲುಗಳೇ ಹೆಚ್ಚಾದವು ಅಲ್ವಾ? ಸಿಗುವ ಒಂದು ಸಂಡೇ ಕೂಡ ಪುರ್ಸೊತ್ತಲ್ಲಿ ಮನೇಲ್ಲಿ ಇರ್‍ಲಿಕ್ಕೆ ಕೊಡತಾದಿಲ್ಲ ನೀನು, ಅಲ್ವಾ?’ ಅಂತ ಬೈದ್ರು. ಅದಕ್ಕೆ ಸುಲೋಚನಕ್ಕ, ‘ನಾನಾದ್ರೂ ಯೆಂತ ಮಾಡ್ಳಿ? ಮಕ್ಳು ಇಬ್ರೂ ಪರಾಶ್ರಯದಲ್ಲಿ ಇದ್ದಾರೆ. ನೀವು ಒಂದು ಬೆಳಿಗ್ಗೆ ಆರೂವರೆಗೆ ಹೋದ್ರೆ ಬರುವಾಗ ರಾತ್ರಿ ಆಗ್ತದೆ. ದಿನ ಇಡೀ ನಾಲ್ಕು ಗೋಡೆ ಮಧ್ಯೆ ಯಾರ ಸಂಪರ್ಕವೂ ಇಲ್ಲದೆ ಈ ಫ್ಲ್ಯಾಟಿನಲ್ಲಿ ಹೇಗೆ ಇರ್‍ಲಿ? ಯಾವ ಜನ್ಮದಲ್ಲಿ ನನ್ನ ಮಕ್ಳಾಗಿದ್ದವೋ ಏನೋ, ಈಗ ನಂಗೆ ಅವೇ ಮಕ್ಳು. ಹೊಟ್ಟೆ ತುಂಬಿದ ಮೇಲೆ ಅವುಗಳ ಖುಷಿ ನೋಡ್ಬೇಕು... ಅದನ್ನು ನೋಡುದೇ ಒಂದು ಚೆಂದ. ಬೇಕಾದ್ರೆ ನೀವು ರಜೆ ಇದ್ದಾಗ ಅವುಗಳಿಗೆ ಆಹಾರ ಕೊಟ್ಟು ನೋಡಿ. ಆಮೇಲೆ ನಿಮಿಗೂ ಅವುಗಳು ಫ್ರೆಂಡ್ ಆಗ್ತವೆ. ಬ್ಯಾಂಕು, ರೈಲಲ್ಲಿ ಓಡಾಡುದು, ಹಣ ಸಂಪಾದನೆ ಯೆಂತದೂ ಬೇಡ ಅನ್ನಿಸ್ತದೆ’ ಅಂತ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದ್ರು.
ರಾಯರಿಗೆ ಯೆಂತ ಅನಿಸಿತಾ ಏನಾ, ಒಂದು ಸಂಡೇ ಹೆಂಡತಿ ಒಟ್ಟಿಗೆ ಅಳಿಲುಗಳಿಗೆ ಆಹಾರ ಕೊಟ್ರು. ಸುರುಸುರುವಿಗೆ ಅವು ಹೆದ್ರುತ್ತಿದ್ದವು. ಆಮೇಲೆ ತಿನ್ಲಿಕ್ಕೆ ಸುರು ಮಾಡಿದವು ರಾಯರ ಕೈಯಿಂದ. ಮರುದಿವಸೂ ಎಂಥದೋ ಕಾರಣಕ್ಕೆ ರಜೆ ಇತ್ತು. ಅವತ್ತೂ ಅಳಿಲು ಸೇವೆ ಮಾಡಿದ್ರು ಗಂಡ ಹೆಂಡತಿ. ರಾಯರಿಗೆ ಹೆಂಡತಿ ಹೇಳಿದ್ದು ಸರಿ ಅನಿಸಿತು. ಎಂಥದೋ ಗಮ್ಮತ್ತಾಗ್ತಿತ್ತು.
ಮರುದಿವಸ ಬ್ಯಾಂಕಿಗೆ ಹೋದವರು ಕಲೀಗ್‌್ಸ ಹತ್ರ ಅಳಿಲುಗಳ ಸುದ್ದಿ ಹೇಳಿದ್ದು. ಯಾರೂ ಅಂಥ ಇಂಟ್ರೆಸ್‌್ಟ ತೋರಿಸ್ಲಿಲ್ಲ. ಆದ್ರೆ ರಾಯರಿಗೆ ಮಾತ್ರ ಒಂದು ರೀತಿ ಚೋದ್ಯ ಆಗಿತ್ತು. ಹಾಗಾಗಿ ಡೈಲಿ ರಾತ್ರಿ ಹೆಂಡತಿಯ ಹತ್ರ ಅಳಿಲುಗಳ ಸುದ್ದಿ ಕೇಳ್ಳಿಕ್ಕೆ ಸುರು ಮಾಡಿದ್ರು.
ಈ ನಡುವೆ ಮಗಳು ನರ್ಸ್ ಟ್ರೈನಿಂಗ್ ಮಾಡ್ತಾ ಇದ್ದವ್ಳು ಅವ್ಳ ಲೆಕ್ಚರರ್ ಅನ್ನೇ ಲವ್ ಮಾಡಿ ಮದುವೆ ಮಾಡ್ಕೊಂಡು ಒಂದು ದಿವಸ ರಾಯರ ಮೊಬೈಲಿಗೆ ಮೆಸೇಜ್ ಮಾಡಿದ್ಲು. ರಾಯರಿಗೆ ಒಂದು ನಮೂನಿ ಶಾಕ್ ಆಯ್ತು. ಸುಲೋಚನಕ್ಕನಿಗೆ ಯೆಂತ ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ. ಮಗ ಎಂಜಿನಿಯರಿಂಗ್ ಮುಗಿಸಿದವ, ‘ಜಾಬ್ ಸರ್ಚ್ ಮಾಡ್ಬೇಕು, ಎಬ್ರಾಡಿಗೆ ಹೋಗ್ಬೇಕು, ದುಡ್ಡು ಕೊಡಿ’ ಅಂತ ಬಂದು ಬಂದು ಕೇಳ್ಳಿಕ್ಕೆ ಸುರು ಮಾಡಿದ. ಇಷ್ಟು ಸಾಲದು ಅಂತ ಬ್ಯಾಂಕಿನಲ್ಲಿ ಬೇರೆ ಬೇರೆ ವಿಷಯಗಳಿಗೆ ಕಿರಿಕಿರಿ ಸುರುವಾಯ್ತು. ಇದೆಲ್ಲದ್ರಿಂದ ಬೇಜಾರಾಗಿ ರಾಯರು ಅದೆಂಥದೋ ವಿಆರ್‌ಎಸ್ ಸ್ಕೀಂ ಬಂದಾಗ ಕೆಲಸಕ್ಕೆ ಟಾಟಾ ಬೈ ಬೈ ಹೇಳಿದ್ರು. ಇನ್ನುಳಿದ ಆಯುಷ್ಯದಲ್ಲಿ ಹೆಂಡತಿ ಒಟ್ಟಿಗೆ ಇದ್ದುಕೊಂಡು ಅಳಿಲು ಸಾಕುದೇ ಕ್ಷೇಮ ಅಂತ ಎಣಿಸಿದ್ರು. ಬ್ಯಾಂಕಿನಿಂದ ರಿಟೈರ್ ಆದ ಮರುದಿವ್ಸದಿಂದ ಹೆಂಡತಿ ಒಟ್ಟಿಗೆ ಅಳಿಲಿಗೆ ಆಹಾರ ಕೊಡುದು, ಅವುಗಳನ್ನು ಕೈಮೇಲೆ ಹತ್ತಿಸಿಕೊಳ್ಳುದು ಎಲ್ಲ ಮಾಡ್ಳಿಕ್ಕೆ ಸುರು ಮಾಡಿದ್ರು.
ಒಂದು ದಿವಸ ಅಳಿಲುಗಳಿಗೆ ಆಹಾರ ಕೊಡ್ತಾ ಇದ್ದಾಗ, ‘ಇವಕ್ಕೆ ಯೆಂತಾದ್ರೂ ಹೆಸ್ರು ಇಡ್ಬೇಕಲ್ವಾ?’ ಅಂತ ಹೆಂಡತಿಯ ಹತ್ರ ಕೇಳಿದ್ರು. ‘ನಾವು ನಮ್ಮ ಮಾಣಿಯನ್ನು ಚಿಕ್ಕ ಇದ್ದಾಗ ಚಿನ್ನು ಅಂತ ಕರೀತಾ ಇದ್ದದ್ದಲ್ವಾ? ಅದೇ ಹೆಸ್ರಿಂದ ಕರಿಯುವ’ ಅಂದ್ರು ಹೆಂಡತಿ. ‘ಆಯ್ತು... ಹಾಗೇ ಕರಿಯುವ, ಇನ್ನೊಂದನ್ನು ಮಗ್ಳು ಸಣ್ಣ ಇರುವಾಗ ಸಿಂಚು ಅಂತ ಕರ್‍ದ ಹಾಗೆ ಅದೇ ಹೆಸ್ರಿಂದ ಕರಿಯುವ’ ಅಂದ್ರು ರಾಯರು. ‘ಎರಡಕ್ಕೆ ಹೆಸ್ರು ಆಯ್ತು. ಮೂರನೇದ್ದು ಪುಸ್ಕಂತ ಬಂದು ಪುಸ್ಕಂತ ಹಾರಿಹೋಗ್ತದೆ. ಅದಕ್ಕೆ ಯೆಂತ ಹೆಸರು?’
‘ಅದನ್ನು ಮಿಂಚು ಅಂತ ಕರೀವ, ಆಗದಾ?’ ಅಂದ್ರು ರಾಯರು. ‘ಆದೀತು’ ಅಂದ್ರು ಹೆಂಡತಿ. ಆಮೇಲೆ ತನ್ನಷ್ಟಕ್ಕೆ ಸುಲೋಚನಕ್ಕ ‘ಚಿನ್ನು ಸಿಂಚು ಮಿಂಚು ಚಿನ್ನು ಸಿಂಚು ಮಿಂಚು’ ಅಂತ ಬಾಯಿಪಾಠ ಮಾಡುವವರ ಹಾಗೆ ಹೇಳಿಕೊಳ್ಳಿಕ್ಕೆ ಸುರು ಮಾಡಿದ್ರು. ಹೀಗೆ ಸುಲೋಚನಕ್ಕ ಸುಂದರರಾಯ ದಂಪತಿಗಳು ಅಳಿಲು ಸೇವೆ ಮಾಡ್ಳಿಕ್ಕೆ ಸುರು ಮಾಡಿದ್ರು.
ಫಸ್‌್ಟ ಫಸ್ಟಿಗೆ ಫ್ಲ್ಯಾಟಿನವ್ರಿಗೆ ಗಂಡ ಹೆಂಡತಿಯ ಕೆಲಸ ವಿಚಿತ್ರವಾಗಿ ಕಾಣ್ತಿತ್ತು. ಅವ್ರೆಲ್ಲ ಪುಕುಳಿ ಬಾಯಿ ಇಲ್ಲದೆ ಮಾತಾಡ್ತಿದ್ರು. ಊರಿನವ ಒಬ್ಬ ಆ ಫ್ಲ್ಯಾಟಿನಲ್ಲಿ ಇದ್ದವ, ‘ಈ ಪ್ರಾಯದಲ್ಲಿ ಇವ್ರಿಗೆ ಬೇರೆ ಕೆಲಸ ಇಲ್ಲ ಮಾರ್ರೆ, ಜೋಳ ಎಲ್ಲಿ ಸಿಗ್ತದೆ ಅಂತ ಇಡೀ ದಹಿಸರ್, ಬೊರಿವಿಲಿ ಸುತ್ತಾಡ್ತಾರೆ. ಜೋಳ ಯೆಂತಕ್ಕೆ ಅಂತ ನಾನು ಕೇಳಿದ್ರೆ ಅಳಿಲಿಗೆ ಹಾಕ್ಲಿಕ್ಕೆ ಅಂತ ಹೇಳ್ತಾರೆ. ಇಂಥ ಮರ್ಲರನ್ನು ನಾನು ನೋಡ್ಳಿಲ್ಲ’ ಅಂತ ಹೇಳಿ ಎಲ್ಲರ ಎದ್ರೇ ಇನ್ಸಲ್‌್ಟ ಮಾಡಿದ್ದ. ಆದ್ರೆ ಅವ್ರಿಬ್ರೂ ಜಾಸ್ತಿ ತಲೆ ಕೆಡಿಸಿಕೊಳ್ಳಿಲ್ಲ. ಎಲ್ಲಿಯೂ ಮನೆ ಬಿಟ್ಟು ಹೋಗ್ತಿರ್ಲಿಲ್ಲ. ಒಮ್ಮೆ ಹೋಗುವ ಪ್ರಸಂಗ ಬಂದ್ರೂ, ‘ಹತ್ತು ಗಂಟೆಗೆ ಸರಿಯಾಗಿ ಅಳಿಲುಗಳು ಒಳಗೆ ಬರ್‍ತವೆ. ಅವುಗಳಿಗೆ ಇದಿಷ್ಟು ತಿಂಡಿ ಹಾಕಿ’ ಅಂತ ಅಕ್ಕ ಪಕ್ಕದವ್ರಿಗೆ ಹೇಳಿ ಮನೇದ್ದು ಬೀಗದಕೈ ಕೊಟ್ಟು, ಬಾಲ್ಕನಿದ್ದು ಬಾಗಿಲು ಓಪನ್ನೇ ಇಟ್ಟು ಹೋಗ್ತಿದ್ರು.
ಅಕ್ಕಪಕ್ಕದವ್ರು ಸುರು ಸುರುವಿಗೆ ಅನುಮಾನ ವ್ಯಕ್ತಪಡಿಸ್ತಿದ್ರು. ಯಾವಾಗ ಇವರ ಅಳಿಲುಸೇವೆಯ ವಿಷಯ ಪೇಪರ್‌ನಲ್ಲಿ, ಟಿ.ವಿ. ಚಾನೆಲ್‌ಗಳಲ್ಲಿ ಬಂತೋ ಆವಾಗ ಒಪ್ಪಿಕೊಳ್ಳಿಕ್ಕೆ ಸುರು ಮಾಡಿದ್ರು. ‘ಹ್ಹೆ... ಹ್ಹೆ... ನೆಕ್‌್ಸ್ಟ ಟೈಂ ಕೋಯಿ ಚ್ಯಾನೆಲ್ ವಾಲೆ ಆಯೇತೋ ಹಮಾರಾ ಇಂಟರ್‌ವ್ಯೂ ಭೀ ಲೇನೇ ಕೇಲಿಯೇ ಪೂಛೀಯೇ... ಹಂ ಆಪ್‌ಕೆ ಫೇವರ್ ಒಪಿನೀಯನ್ ದೇತೇ ಹೇಂ’ ಎಂದೆಲ್ಲ ಹೇಳ್ಳಿಕ್ಕೆ ಸುರು ಮಾಡಿದ್ರು.
ಅವತ್ತು ಯುಗಾದಿ. ಮಗ ಮಧ್ಯಾಹ್ನ ಊಟಕ್ಕೆ ಬಂದಿದ್ದ. ‘ನಾನೂ ಬಂದ್ರೂ ನಿಮಿಗೆ ಆ ಅಳಿಲುಗಳೇ ಹೆಚ್ಚು ಅಲ್ವಾ? ನನ್ನ ಲೈಫ್ ಇನ್ನೂ ಸೆಟ್ಳ್ ಆಗ್ಲಿಲ್ಲ. ಅಬ್ರಾಡಿಗೆ ಹೋಗ್ಬೇಕು, ದೊಡ್ಡ ಕಂಪೆನಿಯಲ್ಲಿ ಕೆಲಸಕ್ಕೆ ಸೇರ್ಬೇಕು ಅಂತೆಲ್ಲ ನಾನು ಎಣಿಸ್ತಾ ಇದ್ರೆ ನಿಮಿಗೆ ಅದ್ರದ್ದು ಯಾವ ಮಂಡೆ ಬಿಸಿಯೂ ಇಲ್ಲ ಅಲ್ವಾ? ಒಂದು ದಿನ ಆದ್ರೂ ಮಗಾ ನಿಂಗೆ ಹಣ ಬೇಕಾ? ನಿನ್ನ ಬದುಕಿನ ಕತೆ ಏನು ಅಂತ ವಿಚಾರಿಸಿದ್ದೀರಾ? ಅವಳು ನೋಡಿದ್ರೆ ಹೇಳದೇ ಕೇಳದೇ ಮದುವೆ ಮಾಡ್ಕೊಂಡ್ಳು. ನಿಮಿಗೆ ಅದ್ರ ಖರ್ಚೂ ಉಳಿತು ಅಂತ ಖುಷಿ ಅಲ್ವಾ? ಯೆಂತ ಮಾಡ್ತೀರಿ ಬಂದ ಪೆನ್‌ಷನ್ ಹಣ ಎಲ್ಲ? ನಂಗೆ ಯಾಕೆ ಕೊಡೂದಿಲ್ಲ?’ ಅಂತೆಲ್ಲ ಊಟ ಆದ್ಮೇಲೆ ಕೂಗಾಡಿದ. ಗಂಡ ಹೆಂಡತಿ ಹೆಚ್ಚು ಯೆಂತದೂ ಅವನ ಹತ್ರ ಮಾತಾಡ್ಳಿಲ್ಲ. ‘ನಂದೇನಿದ್ರೂ ಸ್ವಯಾರ್ಜಿತ. ನಿಂಗೆ ಅದ್ರಲ್ಲಿ ಬಿಲ್ಲಿ ಕಾಸೂ ಸಿಗೂದಿಲ್ಲ ಗೊತ್ತಾಯ್ತಾ’ ಅಂತ ಅಳಿಲಿಗೆ ಮರುದಿವಸ ಹಾಕ್ಲಿಕ್ಕೆ ಬೇಕಾದ ಜೋಳದ ತೆನೆ ಬಿಡಿಸ್ತಾ ರಾಯರು ಹೇಳಿದ್ರು. ಇನ್ನೇನು ಮಗ ಕೂಗಾಡಿ ಹಾರಾಡಿ ಎಲ್ಲ ಮಾಡ್ಬೇಕು ಅನ್ನುವಾಗ ಕಾಲಿಂಗ್ ಬೆಲ್ ಆಯ್ತು.
ರಾಯರು ಹೋಗಿ ಬಾಗಿಲು ತೆಗೆದ್ರು. ನೋಡಿದ್ರೆ ಬಿಲ್ಡಿಂಗಿನ ಸೊಸೈಟಿಯ ಪ್ರೆಸಿಡೆಂಟ್, ಕಾರ್ಯದರ್ಶಿ ಮತ್ತೊಂದಿಬ್ರು ಅಕ್ಕಪಕ್ಕದವರು ಹಾಗೂ ಸೂಟು ಬೂಟುಧಾರಿ ಒಬ್ಬ. ಹೀಗೆ ನಾಲ್ಕೈದು ಮಂದಿ ಬಂದಿದ್ರು. ‘ಬನ್ನಿ ಬನ್ನಿ... ಒಳಗೆ ಬನ್ನಿ’ ಅಂತ ರಾಯರ ಉಪಚಾರ. ‘ಯೆಂತ ವಿಷಯ? ಯೇನು ಬಂದದ್ದು?’ ಅಂತ ಪ್ರೆಸಿಡೆಂಟಿನ ಹತ್ರ ಕೇಳಿದ್ರು. ಅವ ಸೆಕ್ರೆಟರಿಯ ಮುಖ ನೋಡಿದ. ಅವ ಗಂಟಲು ಸರಿಪಡಿಸಿಕೊಂಡು ಹೀಗೆ ಹೇಳಿದ.
‘ನೋಡಿ... ಮಿಸ್ಟರ್ ರಾವ್, ಇವ್ರು ಹೀರಾಚಂದ್ ಅಂತ ದೊಡ್ಡ ಬಿಲ್ಡರ್‌್ಸ’ ಅಂತ ಹೇಳಿದ ಕೂಡಲೆ ಸೂಟು ಬೂಟುಧಾರಿ ಕೈ ಮುಗಿದ. ಮತ್ತೆ ಸೆಕ್ರೆಟರಿ ಮುಂದುವರಿಸಿದ. ‘ನೋಡಿ ರಾವ್... ನಮ್ಮ ಬಿಲ್ಡಿಂಗಿನ ಒಳಬದಿಗೆ ಒಂದಷ್ಟು ಮರಗಳು ಉಂಟು ನೋಡಿ... ಚಿಕು, ಷೇರು, ಪನಾಸ್, ಕಾಜೂ... ಎಲ್ಲ... ಅವನ್ನೆಲ್ಲ ಕಡ್ದು ಆ ಜಾಗದಲ್ಲಿ ಇನ್ನೊಂದು ಫ್ಲ್ಯಾಟ್ ಎಬ್ಬಿಸುದೂಂತ ಫ್ಲ್ಯಾನ್ ಮಾಡಿದ್ದಾರೆ. ಅದಕ್ಕೆ ಅವ್ರು ನಮಿಗೆ ನಾಲ್ಕು ಕೋಟಿ ಆಫರ್ ಮಾಡಿದ್ದಾರೆ. ನಾವು ಹದಿನೈದು ಮನೆಯವ್ರು ಅದನ್ನು ಈಕ್ವಲ್ ಆಗಿ ಹಂಚಿಕೊಂಡ್ರೆ ಆಯ್ತು. ಅದಕ್ಕೆ ಅವ್ರು ಪೇಪರ್‍ಸೆಲ್ಲ ರೆಡಿ ಮಾಡಿಕೊಂಡು ತಂದಿದ್ದಾರೆ. ನಾವು ಹದ್ನಾಕು ಮನೆಯವ್ರು ಸೈನ್ ಹಾಕಿದ್ದೇವೆ. ನಿಮ್ಮದು ಒಂದು ಸೈನ್ ಆದ್ರೆ ನೆಕ್‌್ಸ್ಟ ವೀಕೇ ಅವ್ರು ಕೆಲ್ಸ ಸುರು ಮಾಡ್ತಾರೆ’.
‘ಇಲ್ಲ... ಇಲ್ಲ... ಇವ್ರು ಸೈನ್ ಹಾಕೂದಿಲ್ಲ!’ ಸುಲೋಚನಕ್ಕ ಒಂದೇ ಸರ್ತಿ ಕೂಗಿದ್ರು.
‘ನೋಡಿ ಮಾಯಿ... ಅಲ್ಲಿ ಇರೂದು ಕೆಲಸಕ್ಕೆ ಬಾರದ ಮರಗಳು. ಇಷ್ಟಕ್ಕೂ ನಾವು ಸೊಸೈಟಿಯ ಎದುರಿಗಿರುವ ಪಾರ್ಕ್, ಬ್ಯಾಡ್ಮಿಂಟನ್ ಕೋರ್ಟ್, ಸ್ವಿಮ್ಮಿಂಗ್‌ಪೂಲ್ ಅವುಗಳನ್ನು ಯಾವುದನ್ನೂ ಮುಟ್ಟೂದಿಲ್ಲ. ಮರಗಳನ್ನು ಮಾತ್ರ ಕಡೀತೇವೆ... ಅವುಗಳಿಂದ ಯಾವುದೇ ಫಾಯಿದೆ ಇಲ್ಲ’.
‘ನೋಡಿ... ಮರಗಳು ಕೆಲಸಕ್ಕೆ ಬಾರದವು ಅಲ್ಲ, ಅವುಗಳಲ್ಲಿ ನಮ್ಮ ಜೀವವೇ ಉಂಟು. ಕೆಲವು ಸಮಯದಿಂದ ನಮ್ಮ ಚಿನ್ನು, ಸಿಂಚು, ಮಿಂಚು ಅವುಗಳ ಮುಖಾಂತರವೇ ಮನೆಯ ಒಳಗೆ ಬರ್‍ತಾ ಇದ್ದದ್ದು. ನೀವು ಅವುಗಳನ್ನು ಕಡ್ದು ಹಾಕಿದ್ರೆ ಅವುಗಳ ಗತಿ? ಇಲ್ಲ ಇಲ್ಲ... ನಾನು ಖಂಡಿತ ಸೈನ್ ಹಾಕೂದಿಲ್ಲ’ ಖಡಕ್ಕಾಗಿ ಹೇಳಿದ್ರು ರಾಯರು.
‘ಅರೇ ಭಾಯಿ... ಯೇ ಲಾಖೋಂಕಾ ಬಾತ್ ಹೈ... ನಿಮಿಗೆ ಆ ಅಳಿಲುಗಳು ಅಷ್ಟು ಇಂಪಾರ್ಟೆಂಟ್ ಆಗಿದ್ರೆ ಪಂಜರದಲ್ಲಿ ಇಟ್ಟು ಸಾಕಿ. ನೀವು ಒಬ್ರು ಸೈನ್ ಹಾಕ್ಲಿಲ್ಲ ಅಂದ್ರೆ ನಮಿಗೆ ಯಾರಿಗೂ ಪೈಸಾ ಸಿಗೂದಿಲ್ಲ. ಹಾಗೆಲ್ಲ ಮಾಡ್ಬೇಡಿ ರಾಯ್ರೇ... ಸೈನ್ ಹಾಕಿ... ಅಳಿಲು ಏನು ಆದ್ಮೀನಾ?’ ಅಂದ ಬಿಲ್ಡಿಂಗಿನವ ಒಬ್ಬ. ಅವನ ಮುಸುಂಟಿಗೆ ಎರ್‍ಡು ಬಿಡ್ಬೇಕು ಅಂತ ಎಣಿಸಿದ್ರು ರಾಯರು. ಗರ್ವ ಬಂದ್ರೂ ತೋರಿಸಿಕೊಳ್ಳದೆ, ‘ಇಲ್ಲ ಇಲ್ಲ ನಾನು ಸೈನ್ ಹಾಕೂದಿಲ್ಲ. ಅಷ್ಟೆಲ್ಲ ದುಡ್ಡು ನಂಗೆ ಬೇಕಾಗಿಯೂ ಇಲ್ಲ’ ಅಂದ್ರು.
ಅಷ್ಟು ಹೊತ್ತಿಗೆ ಮಗ, ‘ನೋಡಿ... ನನ್ನ ಅಪ್ಪನಿಗೆ ಇತ್ತಿತ್ಲಾಗಿ ಮಂಡೆ ಬಿಂಗ್ರಿಯಾಗಿದೆ. ಮಗಳು ಹೇಳದೆ ಕೇಳದೆ ಮದುವೆ ಮಾಡ್ಕೊಂಡ್ಳು ಅಂತ ಮಂಡೆ ಬಿಸಿ ಮಾಡ್ಕೊಂಡಿದ್ದಾರೆ. ಅದಕ್ಕೇ ಅವ್ರನ್ನು ಬ್ಯಾಂಕಿನವ್ರೇ ಮನೆಗೆ ಕಳ್ಸಿದ್ದಾರೆ. ಅವ್ರ ಕೆಲಸದ ರೀತಿ ಸರಿ ಇಲ್ಲ ಅಂತ ಎಲ್ರಿಗೂ ಅಲ್ಲಿ ಗೊತ್ತಾಗಿದೆ. ನನ್ನ ಹತ್ರ ಅದಕ್ಕೆ ಸಂಬಂಧಪಟ್ಟ ಡಾಕ್ಯುಮೆಂಟ್‌್ಸ ಉಂಟು. ಅಮ್ಮನಿಗೆ ಈ ಲೀಗಲ್ ಮ್ಯಾಟರ್‌್ಸ ಅರ್ತ ಆಗೂದಿಲ್ಲ. ಹಾಗಾಗಿ ಅವ್ರ ಹತ್ರ ಹೇಳಿ ಪ್ರಯೋಜನ ಇಲ್ಲ. ಯಾವ ಪೇಪರ್ ಹೇಳಿ, ಅಪ್ಪನ ಬದಲಿಗೆ ನಾನೇ ಸೈನ್ ಮಾಡ್ತೇನೆ. ಅದೇನು ಎಮೌಂಟ್ ಉಂಟಾ ನಂಗೇ ಕೊಡಿ’ ಅಂದ. ಸೊಸೈಟಿಯವ್ರು, ‘ಓ... ಹೌದಾ... ವೆರಿಸ್ಯಾಡ್... ಸೋ ಪಿಟಿ’ ಅಂತ ಹೇಳ್ತಾ ಎಗ್ರಿಮೆಂಟ್ ಪೇಪರ್‌್ಸ ಕೊಟ್ರು. ಮಗನೇ ಚಕಚಕನೆ ಸೈನ್ ಹಾಕಿದ. ‘ಇನ್ನು ಎರಡು ದಿನದಲ್ಲಿ ನಿಮ್ಮ ಹಣ ನಿಮಿಗೆ ತಲುಪಿಸ್ತೇವೆ’ ಅಂತ ಹೇಳಿದವರೇ ಅವರೆಲ್ಲ ಹೋದ್ರು. ‘ನಿಮ್ಮಿಂದಾಗಿ ಎಬ್ರಾಡಿಗೆ ಹೋಗ್ಲಿಕ್ಕೆ ಅನುಕೂಲ ಆಯ್ತು... ಥ್ಯಾಂಕ್‌್ಸ’ ಎಂದ ಮಗ. ಹಣ ಬಂದ ತಕ್ಷಣ ಮಗ ಹಿಡ್ಕೊಂಡು ಮನೆ ಬಿಟ್ಟು ಹೋದ. ಗಂಡ ಹೆಂಡತಿ ಯೆಂತದೂ ಮಾತಾಡ್ಳಿಲ್ಲ.
* * *
ಬಿಲ್ಡರ್‌್ಸ ಮರಗಳನ್ನು ಮಟ್ಟ ಮಾಡುವ ದಿನ ಬಂತು. ಬೆಳಿಗ್ಗೆ ಬೆಳಿಗ್ಗೆಯೇ ಬುಲ್ಡೋಜರುಗಳು ಬಂದವು. ಏಳು ಏಳೂವರೆಗೆ ಕೆಲಸ ಶುರು ಮಾಡಿದುವು. ನೋಡ್ತಾ ಇದ್ದ ಹಾಗೆ ಪೇರಳೆ, ಸಂಪಗೆ, ಹಲಸು, ಗೇರು, ತೆಂಗು, ಗೋಳಿ, ಕಡೆಗೆ ಚಿಕ್ಕುವಿಗೆ ಮರವೂ ಕಡ್ದು ಬಿತ್ತು. ಚಿಕ್ಕು ಮರ ಕಡಿಯುದನ್ನು ನೋಡ್ಳಿಕ್ಕಾಗದೆ ಗಂಡ ಹೆಂಡತಿ ಬೆಡ್‌ರೂಮಿನಲ್ಲಿ ಕೂತಿದ್ರು. ‘ಅಯ್ಯೋ... ನಮ್ಮ ಮಕ್ಳು ಇನ್ನು ಮನೆಗೆ ಬರುದಿಲ್ಲಲ್ಲಾ? ಯೆಂತ ಮಾಡ್ಳಿ ನಾನು?’ ಅಂತ ಸುಲೋಚನಕ್ಕ ಅಳ್ತಾ ರಾಯರ ಬಳಿ ಕೇಳ್ತಿದ್ರು.
ಒಂಬತ್ತು ಗಂಟೆಯ ಹೊತ್ತಿಗೆ ಎಲ್ಲ ಮರಗಳನ್ನು ಕಡ್ದು ಆಗಿತ್ತು. ಎಷ್ಟೋ ಹಕ್ಕಿಗಳು ಕಿಚ ಪಿಚ ಹೇಳ್ತಾ ಹಾರಾಡ್ತಾ ಇದ್ದವು. ಕೆಲವುದ್ರ ಗೂಡುಗಳು ಬಿದ್ದಿತ್ತು. ಮೊಟ್ಟೆಗಳು ಒಡ್ಡಿದ್ದವು. ಅವುಗಳ ಹಾರಾಟ ಚೀರಾಟ ಎಲ್ಲ ಇತ್ತು. ಅವತ್ತು ಗಂಡ ಹೆಂಡತಿಗೆ ತಿಂಡಿ ಗಂಟಲಲ್ಲಿ ಇಳಿಲಿಲ್ಲ. ಹತ್ತು ಗಂಟೆ ಆಯ್ತು. ಇಲ್ಲ... ಅಳಿಲುಗಳ ಸುದ್ದಿ ಇಲ್ಲ. ಹತ್ತೂವರೆ ಹನ್ನೊಂದು... ಊಹುಂ ಬರುವ ಲಕ್ಷಣವೇ ಇಲ್ಲ. ಬಾಲ್ಕನಿ ನೋಡುದು, ದೊಡ್ಡದಾಗಿ ಸ್ವಾಸ ಬಿಡುದು– ಗಂಡ ಹೆಂಡತಿಗೆ ಅದೇ ಕೆಲಸ ಆಯ್ತು. ಹನ್ನೊಂದೂವರೇ ಹೊತ್ತಿಗೆ, ‘ಎಲ್ಲಿ ಹೋದುವಾ ಏನಾದುವಾ ನನ್ನ ಮಕ್ಕಳು’ ಅಂತ ಕಣ್ಣಲ್ಲಿ ನೀರು ತುಂಬಿಕೊಂಡು ಬಾಲ್ಕನಿಯ ಕಡೆ ನೋಡ್ತಾ ಬೆಂಡೆ ಕಟ್ ಮಾಡ್ತಾ ಇದ್ದ ಸುಲೋಚನಕ್ಕ ತಮ್ಮ ಬೆರಳನ್ನೂ ಕತ್ತರಿಸಿಕೊಂಡು ‘ಅಯ್ಯಮ್ಮಾ’ ಅಂತ ಚೀರಿ ಚೂರಿಯನ್ನು ಕೆಳಗೆ ಬಿಸಾಡಿದ್ರು. ಬೆಡ್‌ರೂಮಿನಲ್ಲಿದ್ದ ರಾಯರು, ‘ಯೆಂತ ಆಯ್ತೆ?’ ಅಂತ ಕೂಗಿಕೊಂಡು ಬಂದ್ರು. ನೋಡ್ತಾರೆ ರಾಮಾರಕ್ತ. ಕೂಡ್ಳೆ ಬೆರಳನ್ನು ತನ್ನ ಬಾಯಲ್ಲಿ ಇಟ್ಟುಕೊಂಡ್ರು. ಸ್ವಲ್ಪ ಕಾಫಿಪುಡಿ ತಂದು ಬಟ್ಟೆ ಇಟ್ಟು ಕಟ್ಟಿ, ‘ಸ್ವಲ್ಪ ಹೊತ್ತು ಸುಮ್ಮನೆ ಕೂತ್ಕೊ. ನಾನು ಬೆಂಡೆ ಕಟ್ ಮಾಡ್ತೇನೆ’ ಅಂತ ಹೇಳಿ ಬಿದ್ದಿದ್ದ ಚೂರಿ ಹೆಕ್ಲಿಕ್ಕೆ ಅಂತ ಬಗ್ಗಿದ್ರು.
ಬಗ್ಗಿದವರೇ, ‘ಸುಲೋಚನಾ ಇಲ್ಲಿ ನೋಡು! ಬೇಗ ಬಾ’ ಅಂತ ಕೂಗಿದ್ರು. ‘ಯೆಂತದೂ... ಯೆಂತ ಉಂಟು ಅಲ್ಲಿ?’ ಅಂತ ಕೇಳ್ತಾ ಸುಲೋಚನಕ್ಕ ಸಾ ಬಗ್ಗಿ ನೋಡ್ತಾರೆ, ಸೋಫಾದ ಅಡಿಯಲ್ಲಿ ಚಿನ್ನು, ಸಿಂಚು ಮಿಂಚು! ‘ಓ ಮಕ್ಕಳೇ....ಓ ಮೋಕೆಯ ಮಕ್ಕಳೇ... ನೀವು ಇಲ್ಲಿ ಕೂತಿದ್ದೀರಾ... ಬನ್ನಿ ಬನ್ನಿ’ ಅಂದವರೇ ಎರಡು ಅಳಿಲುಗಳನ್ನು ಕೈಗೆ ತೆಕ್ಕೊಂಡ್ರು. ಇನ್ನೊಂದನ್ನು ರಾಯರು ಎತ್ತಿಕೊಂಡ್ರು. ಅವು ನಡುಗ್ತಾ ಇದ್ದವು. ಗಂಡ ಹೆಂಡತಿಯ ಕಣ್ಣುಗಳಿಂದ ಬಿದ್ದ ನೀರಿಂದ ಅವು ಚಂಡಿ ಆಗಿದ್ದವು. ‘ನಮ್ಮ ಮಕ್ಕಳು ಮಲಗಿದ್ದ ತೊಟ್ಳಲ್ಲೇ ಇವನ್ನು ಇನ್ನು ಮೇಲೆ ಇಟ್ಟು ಸಾಕುವ’ ಅಂದ್ರು ಸುಲೋಚನಕ್ಕ, ರಾಯರು ಖುಷಿಯಿಂದ ತೊಟ್ಳು ರೆಡಿ ಮಾಡ್ಳಿಕ್ಕೆ ಹೋದ್ರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.