ಅವಳ ಎದೆಯೊಳಗೆ ಅದು ಹೇಗೆ ಬಂದು ಸೇರಿಕೊಂಡಿತೋ ಅವಳಿಗೂ ಗೊತ್ತಿಲ್ಲ.
ಉರಿದುರಿವ, ಕುದಿಕುದಿವ, ಸುಡುಸುಡುತ್ತಲೇ ಸಿಡಿವ ಆ ಗಾಳಿಗೋಲ ಯಾವುದೋ ಮೈಮರೆವೆಯಲ್ಲಿ ಸಾವಕಾಶ ಉಕ್ಕಿ ಬಂದು ಅವಳೆದೆಯಲ್ಲಿ ನೆಲೆಸಿತ್ತು. ಅವಳು ಸುಮ್ಮನೇ ಕುಳಿತಾಗಲೆಲ್ಲ ಅಲ್ಲಿಂದ ಸಾವಿರ ದನಿಗಳ ಆಕ್ರಂದನ ಒಕ್ಕೊರಲಿನಿಂದ ಕೇಳಿಸುವುದು. ಅದನ್ನು ತಪ್ಪಿಸಿಕೊಳ್ಳಲು ಅವಳು ತುಟಿಯ ಮೇಲೆ ಒಂದು ಹಾಡಿಟ್ಟುಕೊಂಡೇ ಮೈಮನಸ್ಸು ದಣಿವಷ್ಟು ದುಡಿವಳು.
ದಾರಿ ಗೀರಿ ಸೇರಿ ಸೋರಿ
ಏರಿ ಹಾರಿ ಬಂತು ಸವಾರಿ
ಅಂತೇನೋ ಶುರುವಾಗುವ ಆ ಗಾನವನ್ನು ಸಣ್ಣಗೆ ಗುನುಗುನಿಸುತ್ತಲೇ ಅವಳು ಒಂದು ಹೊರೆ ಕಟ್ಟಿಗೆ ಸೀಳುತ್ತಾಳೆ, ಗಡಗಡ ಸದ್ದು ಮಾಡುತ್ತ ಸಣ್ಣ ಬೆಂಕಿಯಲ್ಲಿ ಸಾರು ಕುದಿಸುತ್ತಾಳೆ, ಚುಕ್ಕೆ ಚುಕ್ಕೆ ಗೆರೆ ಸೇರಿಸಿ ಚಿತ್ರ ಬಿಡಿಸುತ್ತಾಳೆ, ದೂರದೂರಿನ ಅತಿಥಿಗಳು ಮನೆಗೆ ಬಂದರೆ ಅವರ ಒಳಉಡುಪನ್ನೂ ತಾನೇ ತೊಳೆಯುವಷ್ಟು ದೈನ್ಯದಿಂದ ಇಂಚಿಂಚೇ ಸವೆಯುತ್ತಾಳೆ. ಎಡ ಕಂಕುಳಲ್ಲಿ ಮಗಳನ್ನು ಸಿಕ್ಕಿಸಿಕೊಂಡೇ ಇಡೀ ಧರೆಯನ್ನು ಹೆಗಲಲ್ಲಿ ಹೊತ್ತುಕೊಂಡವಳಿಗೆ ದಿನದ ಕೊನೆಗೆ ದಣಿವಾಗಬೇಕು, ಕಣ್ಣಲ್ಲಿ ನಿದ್ದೆ ಒತ್ತಿ ಬರಬೇಕು, ಆ ಗಾಳಿಗೋಲದ ಸಂಕಟ ತುಸುವಾದರೂ ಮರೆಯಬೇಕು.
ಹೀಗಿರುವಾಗ ಅವಳು ಮಗಳನ್ನೂ ತನ್ನಂತೆಯೇ ಬೆಳೆಸಿದಳು. ತನ್ನ ಸುಖದ ಕಲ್ಪನೆಯನ್ನೇ ಮಗಳಲ್ಲೂ ತುಂಬಿದಳು. ರಸ್ತೆಯ ಅಂಚಿನಲ್ಲಿ ಬೇಲಿಗೆ ತಾಕಿಯೇ ಹೇಗೆ ನಡೆಯಬೇಕೆಂದೂ, ಯಾರ ಕಣ್ಣಲ್ಲೂ ಹೇಗೆ ಕಣ್ಣಿಡಬಾರದೆಂದೂ, ಬಾಗಿಸಿದರೆ ಹೇಗೆ ಬಿಲ್ಲಿನಂತೆ ಬಾಗಬೇಕೆಂದೂ, ಗಿಡವಾಗಿ ಬಗ್ಗದ್ದು ಮರವಾಗಿ ಹೇಗೆ ಬಗ್ಗಲಾರದೆಂದೂ, ಒಮ್ಮೆಯೂ ಹೇಗೆ ದನಿ ಎತ್ತರಿಸದೇ ಬಾಳಬೇಕೆಂದೂ, ಕೋಪ ಎಂಬ ಭಾವವೇ ಒಂದು ಮಿಥ್ಯವೆಂದೂ, ಸೋಲೇ ಗೆಲುವೆಂದೂ, ಬಂಧನವೇ ಬಿಡುಗಡೆಯೆಂದೂ ನಂಬಿಸಿ ಮಗಳನ್ನು ಪಳಗಿಸಿದಳು. ಜೊತೆಗೆ ತನ್ನ ಎದೆಯೊಳಗೆ ಉರಿವ ಆ ಗಾಳಿಗೋಲವನ್ನೂ ಮಗಳಿಗೆ ಉಡುಗೊರೆಯಾಗಿ ರವಾನಿಸಿದಳು.
ಅಂದಿನಿಂದ ತಾಯಿ ಮಗಳಿಬ್ಬರೂ ಸಮಯ ಸಿಕ್ಕಾಗಲೆಲ್ಲ ಊರ ಹೊರಗಿನ ಬೆಟ್ಟ ಹತ್ತಿ ಕುಳಿತುಕೊಳ್ಳುತ್ತಾರೆ. ಬೆಟ್ಟದ ಅಂಚಿಗೆ ನಿಂತು ಕೈಗಳನ್ನು ಚಾಚಿ ಹಾರಲು ಪ್ರಯತ್ನಿಸುತ್ತಾರೆ. ಆ ಗಾಳಿಗೋಲದ ಸುಡುವ ಸಂಕಟವನ್ನು ಮನದಣಿಯೆ ಹಂಚಿಕೊಳ್ಳುತ್ತಾರೆ.
ಯಾವಾಗಲೋ ಒಮ್ಮೆ ಬೇಸತ್ತಾಗ ‘ಈ ಉರಿ ತಡೀಲಾರೆ ಆಯಿ, ನನಗ ತಣ್ಣಗ ಇರಲಿಕ್ಕ ಬಿಡು. ವಾಪಸ್ ತೊಗೋ ಇದನ್ನ’ ಅಂತ ಮಗಳು ಹಟ ಹಿಡಿದರೆ, ತಾಯಿ ತನಗದು ಕೇಳಿಸಲೇ ಇಲ್ಲ ಎಂಬಂತೆ ನಟಿಸುವಳು. ಆಗೆಲ್ಲ ಅವರಿಗೆ ಎಲ್ಲೋ ತಪ್ಪಿರುವುದು ಹೌದು, ಆದರೆ ಎಲ್ಲಿ ಅಂತ ಬೆರಳು ಮಾಡಿ ತೋರಲೇ ಸಾಧ್ಯವಾಗಲಾರದಷ್ಟು ಆಳವಾದ ಕಂದಕದಲ್ಲಿ ಬಿದ್ದಂತೆ ಭಾಸವಾಗುವುದು.
ಉರಿಯುತ್ತುರಿಯುತ್ತಲೇ ಆ ಗಾಳಿಗೋಲವನ್ನು ಎದೆಯಿಂದ ಎದೆಗೆ ದಾಟಿಸುತ್ತ ನಡೆದಾಗ ಮುಂದೊಮ್ಮೆ ಆ ಮಗಳ ಮಗಳ ಮಗಳಿಗೆ ಪಕ್ಕೆಯಲ್ಲಿ ಜೀವಂತ ರೆಕ್ಕೆ ಮೂಡುವುದು. ಅವಳ ತಾಯಿಯ ತಾಯಿಯ ತಾಯಿಯ ಎದೆಯಲ್ಲಿ ಹುಟ್ಟಿದ ಗಾಳಿಗೋಲವೇ ಆ ರೆಕ್ಕೆಗಳಿಗೆ ಬಲ ಕೊಟ್ಟು ಆಗಸಕ್ಕೆ ನೆಗೆವ ಹಗುರವ ದಯಪಾಲಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.