ADVERTISEMENT

ಆಡಾಡತ ಆಯುಷ್ಯ | ‘ಗೋಕರ್ಣ’ ಎಂಬ ಅಡ್ಡ ಹೆಸರನ್ನು ಬಿಟ್ಟು, ‘ಕಾರ್ನಾಡ’ ಆದ ಪ್ರಸಂಗ

ಗಿರೀಶ ಕಾರ್ನಾಡ
Published 10 ಜೂನ್ 2019, 8:22 IST
Last Updated 10 ಜೂನ್ 2019, 8:22 IST
   

1940ರ ಸುಮಾರಿಗೆ ಬಾಪ್ಪಾ ಒಂದು ದಿನ ಭಾಲಚಂದ್ರನನ್ನು ಸಮೀಪ ಕರೆದು, ‘ನನಗೆ ವಯಸ್ಸಾಯಿತು. ಮುಪ್ಪಿನಲ್ಲಿ ಈ ನಾಲ್ಕು ಮಕ್ಕಳು ಹುಟ್ಟಿವೆ. ನೀನೇ ನಿನ್ನ ತಮ್ಮ-ತಂಗಿಯಂದಿರನ್ನು ನೋಡಿಕೊಳ್ಳಬೇಕು’ ಎಂದು ಕೇಳಿಕೊಂಡರು. ‘ಗೋಕರ್ಣ’ ಎಂಬ ಅಡ್ಡ ಹೆಸರನ್ನು ಬಿಟ್ಟು, ‘ಕಾರ್ನಾಡ’ ಎಂಬ ಅಡ್ಡ ಹೆಸರನ್ನು ಬಳಸಿಕೊಂಡು ಕಾರ್ನಾಡ ಕುಟುಂಬದಲ್ಲಿ ಒಂದಾಗಬಾರದೇಕೆ ಎಂದು ಕೇಳಿಕೊಂಡರು. ನಾವು ನಂಬಿದ್ದ ಇತಿಹಾಸದ ಪ್ರಕಾರ ಭಾಲಚಂದ್ರ ಕೂಡಲೆ ಒಪ್ಪಿಕೊಂಡ. ‘ಭಾಲಚಂದ್ರ ಆತ್ಮಾರಾಮ ಗೋಕರ್ಣ’ ಇದ್ದವ ‘ಭಾಲಚಂದ್ರ ರಘುನಾಥ ಕಾರ್ನಾಡ’ ಆಗಿ ಕಾರ್ನಾಡ ಕುಟುಂಬದಲ್ಲೇ ಕರಗಿಹೋದ. ಪುಣೆಯ ಎಂಜಿನಿಯರಿಂಗ್ ಕಾಲೇಜಿಗೆ ಹೋಗಿ ಪ್ರಥಮ ಶ್ರೇಣಿಯಲ್ಲಿ ಪಾಸಾದ. ‘ನೌಕರಿ ಹಿಡಿಯಬೇಡೋ! ಏನಾದರೂ ಸ್ವತಂತ್ರ ಹೊಸ ಉದ್ಯೋಗವನ್ನು ಆರಂಭಿಸು’ ಎಂದು ಆಯೀ ದುಂಬಾಲು ಬಿದ್ದರೂ, ಅದನ್ನು ತಿರಸ್ಕರಿಸಿ, ಐ.ಆರ್.ಎಸ್. (ಇಂಡಿಯನ್ ರೇಲ್ವೆ ಸರ್ವಿಸ್) ಸೇರಿಕೊಂಡ. ಧಾರವಾಡದ ಗಣ್ಯ ವಕೀಲರಾದ ನಾರಾಯಣರಾವ್ ಕೊಪ್ಪೀಕರರ ಸುಂದರ ಮಗಳಾದ ಸುಮನಳನ್ನು ಪ್ರೀತಿಸಿದ. ವರಿಸಿದ. ಈಶಾನ್ಯ ಪ್ರಾಂತಕ್ಕೆ ಹೋಗಿ ರೈಲು ಸೇವೆ ಸೇರಿದ.

ಹೀಗೆ ಅಲ್ಲಿ-ಇಲ್ಲಿ ಎದ್ದ ಅಲೆಗಳೆಲ್ಲ ಶಾಂತವಾಗಿ ಕೊನೆಗೂ ಕಾರ್ನಾಡ ಕುಟುಂಬದ ಜೀವನ ಬಾಪ್ಪಾ ಬಯಸಿದ ನೆಮ್ಮದಿಯನ್ನು ಕಂಡಿತು.ಆದರೆ ಭಾಲಚಂದ್ರನಿಗೆ ಮಕ್ಕಳಾಗಿ, ಅವರು ರಜದಲ್ಲಿ ಧಾರವಾಡಕ್ಕೆ ಬಂದಾಗ ಅವರಿಗೆ ನಮ್ಮ ಮನೆಗಿಂತ ಹೆಚ್ಚಾಗಿ ತಾಯಿಯ ತಂದೆಯ ಮನೆ ಸಮೀಪವಾಗಿತ್ತು. ಅಲ್ಲಿಂದ ಸಣ್ಣ ದನಿಯಲ್ಲಿ ಪ್ರಶ್ನೆಗಳು ಕೇಳಿಬರಲಾರಂಭಿಸಿದವು. ‘ಭಾಲಚಂದ್ರ ಅಡ್ಡ ಹೆಸರನ್ನು ಬದಲಾಯಿಸಿದ್ದೇಕೆ?’ ‘ಅವನು ಸ್ವೇಚ್ಛೆಯಿಂದ ಬದಲಾಯಿಸಿದನೋ ಅವನ ಮೇಲೆ ಮತ್ತೆ ಒತ್ತಡ ಹಾಕಲಾಯಿತೋ?’ ನಮಗೆ, ಅಂದರೆ ಕಾರ್ನಾಡ ಬಂಧು ಭಗಿನಿಗಳಿಗೆ ಇದೇನೂ ಮಹತ್ವದ ಪ್ರಶ್ನೆಯಾಗಿರಲಿಲ್ಲ. ತನಗೆ ಆ ವಿಷಯದಲ್ಲಿ ಅತೃಪ್ತಿಯಿದೆ ಎಂದು ಭಾಲಚಂದ್ರ ತನ್ನ ವರ್ತನೆಯಲ್ಲಿ ಎಂದೂ ಯಾವೊಂದು ಬಗೆಯಿಂದಲೂ ಸೂಚಿಸಿರಲಿಲ್ಲ. ಅಲ್ಲದೆ ಭಾಲಚಂದ್ರ ಅಡ್ಡ ಹೆಸರನ್ನು ಬದಲಾಯಿಸುವುದರಿಂದ ಬಾಪ್ಪಾಗಾಗಲಿ ಅವನ ಮಕ್ಕಳಿಗಾಗಲಿ ಯಾವುದೇ ಲಾಭವಿರಲಿಲ್ಲ. ಆದ್ದರಿಂದ ಅವನ ಮಕ್ಕಳಿಂದ ಈ ಪ್ರಶ್ನೆ ನೇರವಾಗಿ, ಪರೋಕ್ಷವಾಗಿ ಮತ್ತೆ ಮತ್ತೆ ಕೇಳಿ ಬರಲಾರಂಭಿಸಿದಾಗ ನಮ್ಮೆಲ್ಲರಲ್ಲಿ ಕಿರಿಕಿರಿ ಉಂಟಾಗಹತ್ತಿತು.

ಆಯೀ ಮತ್ತು ಆಕೆಯ ಬೀಗತಿಯ ನಡುವೆ ಬುಸುಗುಡುತ್ತಿದ್ದ ದುಸುಮುಸಿ ಈ ಪ್ರಶ್ನೆಯ ಮುಖಾಂತರ ಹೊರಹೊಮ್ಮಲಾರಂಭಿಸಿತು.ಭಾಲಚಂದ್ರನ ಅತ್ತೆ-ಮಾವಂದಿರೇ ಮೊಮ್ಮಕ್ಕಳಿಗೆ ‘ಹಚ್ಚಿಕೊಡುತ್ತಿದ್ದಾರೆ’ ಎಂದು ಆಯೀ ನಂಬಲಾರಂಭಿಸಿದಳು. ಈ ಚಿಟುಗುಮುಳ್ಳಾಡಿಸುವ ಕ್ರಿಯೆಯಲ್ಲಿ ರಾವಬಹಾದ್ದೂರ್ ಕೊಪ್ಪೀಕರರ ಮನೆಯಲ್ಲಿ ನೆಲೆಸಿರುವ ಭಾಲಚಂದ್ರನ ಚಿಕ್ಕಪ್ಪಂದಿರ ಪಾಲೂ ಇದೆ ಎಂಬ ಬಗ್ಗೆ ಆಯೀಗೆ ಸಂದೇಹವಿರಲಿಲ್ಲ. (ಬಾಪ್ಪಾ ಆ ಸಮಸ್ಯೆಯೇ ಇಲ್ಲವೆಂಬಂತೆ ಆ ಕಡೆಗೆ ದುರ್ಲಕ್ಷ್ಯ ಮಾಡಿದರು).

ಆಯೀಯ ಸಂದೇಹ ಸುಳ್ಳಾಗಿರಲಿಲ್ಲವೆಂಬುದಕ್ಕೆ ಬಹಳ ವರ್ಷಗಳ ಮೇಲೆ ನಮಗೆ ಪುರಾವೆ ಸಿಕ್ಕಿತು.1990ರ ಸುಮಾರಿಗೆ ಭಾಲಚಂದ್ರನ ಹಿರಿಯ ಮಗಳಾದ ನಿಲೀಮಾಗೆ ಯಾವುದೋ ಕಾರಣಕ್ಕಾಗಿ ಜನ್ಮದಾಖಲೆಯ ಪತ್ರ (birth certificate) ಬೇಕಾಯಿತು. ಆಗ ಅವಳು ವಿದೇಶದಲ್ಲಿದ್ದುದರಿಂದ ನಾನೇ ಅವಳ ಪರವಾಗಿ ಧಾರವಾಡ ಮುನಿಸಿಪಾಲಿಟಿಯಲ್ಲಿ ಅರ್ಜಿ ಹಾಕಿದೆ. ಆದರೆ ಕೈಗೆ ಬಂದ ಸರ್ಟಿಫಿಕೇಟನ್ನು ನೋಡಿ ನಾನು ಸ್ತಂಭೀಭೂತನಾದೆ. ಏಕೆಂದರೆ ಅದರಲ್ಲಿ ಭಾಲಚಂದ್ರನ ಹೆಸರು ‘ಭಾಲಚಂದ್ರ ರಘುನಾಥ ಕಾರ್ನಾಡ’ ಎಂದಿರದೆ ‘ಭಾಲಚಂದ್ರ ಆತ್ಮಾರಾಮ ಗೋಕರ್ಣ’ ಎಂದಿತ್ತು. ವಿಚಾರಣೆ ಮಾಡಿದಾಗ ನಾವು ಕಂಡು ಹಿಡಿದದ್ದು ಇಷ್ಟು: ಭಾಲಚಂದ್ರನ ಹೆಂಡತಿ ಹೆರಿಗೆಗಾಗಿ ಧಾರವಾಡಕ್ಕೆ ಬಂದಾಗ ಮೇಲುಸ್ತುವಾರಿ ನಡೆಸಿದ್ದು ಭಾಲಚಂದ್ರನ ಸೋದರತ್ತೆ ಡಾ. ಉಮಾಬಾಯಿ ಕೊಪ್ಪೀಕರ್. ಮುನಿಸಿಪಾಲಿಟಿಗೆ ಹೋಗಿ ಜನ್ಮದಾಖಲೆ ಮಾಡಿಸಿದವ ಭಾಲಚಂದ್ರನ ಇಬ್ಬರು ಚಿಕ್ಕಪ್ಪಂದಿರಲ್ಲೊಬ್ಬ. ಆತನಿಗೆ ಭಾಲಚಂದ್ರನ ನಾಮಪಲ್ಲಟದಿಂದ ಹೊಟ್ಟೆ ಉರಿಯುತ್ತಿರಬೇಕು. ಆದ್ದರಿಂದ ಯಾರಿಗೂ ಹೇಳದೆ ಅವನ ಅಡ್ಡ ಹೆಸರನ್ನು ‘ಗೋಕರ್ಣ’ ಎಂದೇ ದಾಖಲೆ ಮಾಡಿಬಿಟ್ಟಿದ್ದ. ನಲವತ್ತು ವರ್ಷ ಆ ಕುಚೋದ್ಯ ಮುನಿಸಿಪಾಲಿಟಿ ಫೈಲುಗಳಲ್ಲಿ ಅಡಗಿಕೊಂಡಿದ್ದು, ಈಗ ಹೊರಗೆ ಬಂದು, ಕಾರ್ನಾಡ ಕುಟುಂಬದತ್ತ ಮುಷ್ಟಿ ಹೊರಳಿಸಿ ‘ಲವಡ’ ತೋರಿಸುತ್ತಿತ್ತು.

ಆದರೂ ಈ ಪ್ರಶ್ನೆ ಕಾಲನ ಒಡಲನ್ನು ಸೇರಿ ಮಾಯವಾಗುತ್ತದೆ ಎಂದು ನಾನು ನಂಬಿದ್ದೆ. ಏಕೆಂದರೆ ಭಾಲಚಂದ್ರನ ಮಕ್ಕಳು ವಿಶ್ವದಾದ್ಯಂತ ಹರಡಿ, ಅವರಿಗೆ ಮಕ್ಕಳಾಗಿ ಎಲ್ಲರೂ ಕಾರ್ನಾಡರಾಗೇ ಬಾಳುತ್ತಿದ್ದರು. ಆದರೆ ನಮ್ಮ ಕುಟುಂಬ ವ್ಯವಸ್ಥೆಯ ಗಂಟು ಒಳಗಂಟುಗಳಲ್ಲಿ, ಒಳನಾಳಗಳಲ್ಲಿ ಯಾವ ಕುದಿತ ಯಾವಾಗ ಒಡೆದು ಹೊರಹೊಮ್ಮೀತೆಂದು ಹೇಳಲಾಗುವದಿಲ್ಲ.

2001ರಲ್ಲಿ ಭಾಲಚಂದ್ರ ಎಂಭತ್ತು ತಲುಪಿದಾಗ ಅವನ ಹುಟ್ಟುಹಬ್ಬವನ್ನು ಭರ್ಜರಿ ಹಂತದಲ್ಲಿ ಆಚರಿಸಬೇಕು ಎಂದು ಅವನ ಮಕ್ಕಳು ನಿರ್ಧರಿಸಿದರು. ನಮ್ಮ ಎಲ್ಲ ದೂರದ ಸಮೀಪದ ಸಂಬಂಧಿಕರನ್ನು ಕರೆದು ಮುಂಬೈಯಲ್ಲೊಂದು ದೊಡ್ಡ ಔತಣ ಏರ್ಪಡಿಸಲಾಯಿತು. (ನಾನು ಆಗ ಲಂಡನ್ನಿನಲ್ಲಿದ್ದೆ).

ಅಲ್ಲಿ ತನ್ನ ತಂದೆಯ ಬಗ್ಗೆ ಮಾತನಾಡುತ್ತ ಭಾಲಚಂದ್ರನ ಕಿರಿಯ ಮಗಳು (ವಯಸ್ಸು ಐವತ್ತು) ಭಾವನಾವಿವಶಳಾಗಿ ಅವನ ಬಾಲ್ಯ ಎಷ್ಟು ಕಷ್ಟಕಾರ್ಪಣ್ಯಗಳಿಂದ ತುಂಬಿತ್ತು. ಅವನಿಗೆ ಹೇಗೆ ಯಾರಿಂದಲೂ ಸಹಾಯ ಸಿಗಲಿಲ್ಲ ಎಂದು ಮೊರೆಯಿಟ್ಟಳು. ಇದನ್ನು ಕೇಳಿ ನನ್ನ ಅಣ್ಣ ವಸಂತನಿಗೆ (ವಯಸ್ಸು ಅರವತ್ತೆಂಟು) ನೋವಾಯಿತು. ಮಾರನೆಯ ದಿನವೇ ಭಾಲಚಂದ್ರನಿಗೆ, ಪತ್ರ ಬರೆದು ‘ಬಾಪ್ಪಾ ನಿನಗಾಗಿ ಎಷ್ಟೆಲ್ಲ ಮಾಡಿದರು. ನಿನ್ನನ್ನು ನೋಡಿಕೊಂಡರು. ನೀನು ‘ಕಾರ್ನಾಡ’ ಹೆಸರನ್ನು ಸ್ವೇಚ್ಛೆಯಿಂದ ಒಪ್ಪಿಕೊಂಡಿರುವುದೇ ನಿನ್ನ ಹಾಗೂ ಅವರ ನಡುವಿದ್ದ ಆತ್ಮೀಯತೆಗೆ ಸಾಕ್ಷಿ. ನಿನ್ನ ಮಗಳು ಬಾಪ್ಪಾನ ಪ್ರೀತಿಯನ್ನು ಈ ರೀತಿ ಬಹಿರಂಗವಾಗಿ ಹರಿದು ಚಿಂದಿ ಮಾಡಬಾರದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ.

ಬರೆಯಬಾರದಿತ್ತು. ಪ್ರತಿಯೊಂದು ಕುಟುಂಬದಲ್ಲಿ ಅವರವರ ಇತಿಹಾಸ ಪುರಾಣ ಕತೆಗಳು ಹುತ್ತದಲ್ಲಿ ಓಡಾಡುತ್ತಿರುವ ಹಾವಿನ ಮರಿಗಳಂತೆ ವಿಲವಿಲ ಓಡಾಡುತ್ತಿರುತ್ತವೆ. ವಸಂತ ಅದನ್ನು ಕೆಣಕದೆ ಬಿಟ್ಟಿದ್ದರೆ ಚೆನ್ನಾಗಿತ್ತೇನೋ. ಎಂದೂ ಕೋಪಗೊಳ್ಳದ ಭಾಲಚಂದ್ರನ ಕೋಪ ಭುಗಿಲೆದ್ದಿತು. ಕೆರಳಿ ಪ್ರತ್ಯುತ್ತರ ಬರೆದ:

‘ನನ್ನ ಮಕ್ಕಳ ಬಗ್ಗೆ ನಿಮಗೆ ಯಾರಿಗೂ ಪ್ರೀತಿಯೇ ಇಲ್ಲ. ನನ್ನ ಅಡ್ಡ ಹೆಸರನ್ನು ಬದಲಾಯಿಸಿಕೊಳ್ಳಲಿಕ್ಕೆ ನಾನು ಸಿದ್ಧನಾಗಿರಲಿಲ್ಲ. ಬಾಪ್ಪಾ ಹಾಗೆ ಸೂಚಿಸಿದಾಗ ನನಗೆ shock ಆಯಿತು. ಏನು ಮಾಡಬೇಕೆಂದು ತೋಚದೆ ಧಿಙ್ಮೂಡನಾದೆ. ಕೊಪ್ಪೀಕರ್ ದೇವರಾಯಕಾಕಾನ ಹತ್ತಿರ ಹೋಗಿ ಕೇಳಿಕೊಂಡೆ. ಅವರು “ಅಡ್ಡ ಹೆಸರು ಬದಲಾದರೇನಂತೆ? ಡಾಕ್ಟರರೇ ಪ್ರೀತಿಯಿಂದ ಕೇಳಿದಾಗ ನೀನೇಕೆ ಒಲ್ಲೆ ಅನಬೇಕು? ಒಪ್ಪಿಕೊಂಡು ಬಿಡು” ಎಂದರು. “ಬೇರೆಯಾಗಿ ಇರುವುದರಿಂದ ಏನು ಪ್ರಯೋಜನ?” ಎಂದು ಸಮಾಧಾನಪಡಿಸಿದರು. ನಾನು ಮನಸ್ಸಿಲ್ಲದ ಮನಸ್ಸಿಂದ ಒಪ್ಪಿಕೊಳ್ಳಲೇಬೇಕಾಯಿತು. ಆದರೆ ನನಗೆ ನಾನು “ಕಾರ್ನಾಡ” ಎಂದು ಎಂದೂ ಅನಿಸಿಲ್ಲ.

‘ಬಾಪ್ಪಾ ನನಗೆ ತುಂಬ ಮಮತೆ ತೋರಿಸಿದರು, ನನ್ನ ಜೊತೆಗೆ ಪ್ರೀತಿಯಿಂದಲೇ ನಡೆದುಕೊಂಡರು ನಿಜ. ಆದರೆ ನನ್ನ ಶಿಕ್ಷಣದ ಖರ್ಚನ್ನು ಅವರು ನೋಡಿಕೊಳ್ಳಲಿಲ್ಲ. ದೇವರಾಯರೇ ನೋಡಿಕೊಂಡರು’ ಎಂದು ಸ್ಪಷ್ಟವಾಗಿ ಬರೆದ.ಈಗ ಆ ಬಗ್ಗೆ ಯೋಚಿಸಿದಾಗ ದೇವರಾಯರಾದರೂ ಬೇರೆ ಯಾವ ಮಾರ್ಗ ಸೂಚಿಸುವದು ಸಾಧ್ಯವಿತ್ತು ಎನಿಸುತ್ತದೆ. ಅವರಿಗೆ ಸ್ವತಃ ಭಾಲಚಂದ್ರ ತನ್ನ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂದೆನಿಸಿದರೂ, ಹಾಗೆ ಬಾಯಿಬಿಟ್ಟು ಹೇಳಿ, ಡಾಕ್ಟರ್ ಕಾರ್ನಾಡರಂಥ ಪ್ರತಿಷ್ಠಿತ, ಸಾಮಾಜಿಕವಾಗಿ ಸಮರ್ಥನಾಗಿರುವ ಸರಕಾರಿ ನೌಕರನನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಿತ್ತೇ? ಅವರು ಸಾಮಾಜಿಕವಾಗಿ ಅಪೇಕ್ಷಿತವಾಗಿರುವ ಸುರಕ್ಷಿತವಾಗಿರುವ ಉತ್ತರವನ್ನೇ ಕೊಟ್ಟರು.
ಇನ್ನು ಆ ಕಾಲದಲ್ಲಿ ಇಪ್ಪತ್ತು ವರ್ಷದ ಹುಡುಗನೊಬ್ಬ ಹಿರಿಯರೆಲ್ಲರನ್ನು ಪ್ರತಿಭಟಿಸುವದು ಸಾ
ಧ್ಯವೇ ಇರಲಿಲ್ಲ. ಅಂಥ ‘ಒರಟುತನ’ ಭಾಲಚಂದ್ರನಲ್ಲೂ ಇರಲಿಲ್ಲ. ಅವನು ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ನೇರ ಸಂಘರ್ಷದಿಂದ ತಲೆ ತಪ್ಪಿಸಿ ಬಾಳಿದ ವ್ಯಕ್ತಿ. (ಆ ದೃಷ್ಟಿಯಿಂದ ಆಯೀಗಿಂತ ಹೆಚ್ಚಾಗಿ ಬಾಪ್ಪಾನನ್ನು ಹೋಲುತ್ತಿದ್ದ.) ಅವನಂಥ ತರುಣನಿಗೆ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸುವ ಆಕಾಂಕ್ಷೆ ಇರಬಹುದು ಎಂಬ ಮಾತೇ ಆ ಯುಗದ ಜನರಿಗೆ ಅರ್ಥವಾಗುತ್ತಿತ್ತೋ ಇಲ್ಲವೋ. ಆಪ್ತರ, ಹಿರಿಯರ, ಸಾಮಾಜಿಕರ ಸೌಕರ್ಯಕ್ಕೆ ಹೊಂದಿಕೊಂಡು ಬಾಳುವದೇ ಆದರ್ಶವಾಗಿತ್ತು.

ಈ ಪತ್ರ ವ್ಯವಹಾರವಾದ ಬಳಿಕ ಭಾಲಚಂದ್ರ ಹಾಗೂ ವಸಂತರಲ್ಲಿ ಮಾತುಕತೆ ನಿಂತು ಹೋಯಿತು. ಅರವತ್ತೆಂಟು ವರ್ಷ ಅಣ್ಣ ತಮ್ಮಂದಿರಾಗಿ ಒಲುಮೆಯಿಂದ ಬಾಳಿದ ಈ ಈರ್ವರಲ್ಲಿ ಕಹಿ ಮಂಜು ಗಡ್ಡೆಗಟ್ಟಿತು.ಒಂದೆರಡು ವರ್ಷಗಳಲ್ಲೇ ಭಾಲಚಂದ್ರನಿಗೆ ಗಂಟಲಿನ ಕ್ಯಾನ್ಸರ್ ಆಗಿರುವದು ಪತ್ತೆ ಆಯಿತು. ಆತನ ವಾಚೆ ನಿಂತು ಹೋಯಿತು. ತನ್ನ ಕೊನೆಯ ಕಾಲದಲ್ಲೊಂದು ದಿನ ಭಾಲಚಂದ್ರ ವಸಂತನನ್ನು ಮನೆಗೆ ಕರೆಸಿ ತನ್ನ ಪಕ್ಕದಲ್ಲೇ ಕೂರಿಸಿಕೊಂಡು ಗಟ್ಟಿಯಾಗಿ ಅವನ ಕೈ ಹಿಡಿದುಕೊಂಡಿದ್ದ.

ಸಾರಸ್ವತರಲ್ಲಿ ಸಾರ್ವಜನಿಕವಾಗಿ ಗುಪ್ತವಾಗಿ ಕಣ್ಣೀರಿಡುವದು ಅಸಭ್ಯತೆಯ ಲಕ್ಷಣವೆಂದು ಎಣಿಸಲಾಗುತ್ತದೆ.ನಮ್ಮಲ್ಲಿ ದೈನಂದಿನ ಜೀವನದಲ್ಲಿ ಗುಪ್ತವಾಗಿ ಹರಿಯುವ ಕೌಟುಂಬಿಕ ಸಂಬಂಧಗಳ ಬಣ್ಣಬಣ್ಣಗಳು ಒಮ್ಮೆಲೆ ಹೊರಹೊಮ್ಮಿ ಕಣ್ಣು ಕುಕ್ಕಿಸುವದು ಜನ್ಮ, ವಿವಾಹ ಇಲ್ಲವೆ ಮೃತ್ಯು ಈ ಮೂರು ಸಂದರ್ಭಗಳಲ್ಲಿ. ಆಗ ಕುಟುಂಬದವರೆಲ್ಲ ಒಂದುಗೂಡುತ್ತಾರೆ. ಸಂತೋಷದಲ್ಲಿ, ದುಃಖದಲ್ಲಿ, ಯಾವುದೋ ಒಂದುಗೂಡಿಸುವ ಆಚರಣೆಯಲ್ಲಿ, ಕುಟುಂಬದ ಒಕ್ಕಟ್ಟನ್ನು ಪುನಃ ಸಂಸ್ಥಾಪನೆಗೊಳಿಸುತ್ತಾರೆ. ಆದ್ದರಿಂದಲೇ ವರ್ಷಗಟ್ಟಲೆ ಹುದುಗಿಕೊಂಡಿರುವ ಭಾವನೆಗಳು ಆಸ್ಫೋಟವಾಗಲಿಕ್ಕೂ ಅದು ಬರೆದಿಟ್ಟ ಗಳಿಗೆಯಾಗುತ್ತದೆ. ಸಂದ ಸಂಗತಿಗಳು ಹೊಸ ವೇಷ ತೊಟ್ಟು ರಂಗವನ್ನೇರುತ್ತವೆ.

ಬಾಪ್ಪಾ 1978ರಲ್ಲಿ ತೊಂಬತ್ತನೆಯ ವಯಸ್ಸಿಗೆ ತೀರಿಕೊಂಡರು. ಸುದ್ದಿ ಕೇಳಿದೊಡನೆ ಭಾಲಚಂದ್ರ ವಸಂತ ಧಾರವಾಡಕ್ಕೆ ಧಾವಿಸಿ ಬಂದರು.ಬಾಪ್ಪಾ ನಾಸ್ತಿಕರು. ವೈದಿಕ ಬ್ರಾಹ್ಮಣರನ್ನು ಕಂಡರೆ ತಿರಸ್ಕಾರ. ‘ನಾನು ಸತ್ತಾಗ ಈ ಕಳ್ಳರಿಗೆ ಮನೆಯಲ್ಲಿ ಕಾಲಿಡಗೊಡಬೇಡ’ ಎಂದು ತಾಕೀತು ಹಾಕಿದ್ದರು. ಅವರ ಆದೇಶದ ಪ್ರಕಾರ ಯಾವುದೇ ವೈದಿಕ ವಿಧಿಯಿಲ್ಲದೆ ಶವಸಂಸ್ಕಾರವಾಯಿತು. ಸಂಸ್ಕಾರದ ಪ್ರಶ್ನೆಯೇ ಇಲ್ಲವಾದ್ದರಿಂದ ಭಾಲಚಂದ್ರ ಅಗ್ನಿ ಕೊಟ್ಟದ್ದು ಟಿಪ್ಪಣಿಯಿಲ್ಲದೆ ಸಾಗಿ ಹೋಯಿತು.

ಆದರೆ ಮನೆಯಲ್ಲಾಗಬೇಕಾದ ವಿಧಿಗಳೆಲ್ಲ ಶಾಸ್ತ್ರೋಕ್ತವಾಗಿ ಆಗಬೇಕು ಎಂದು ಆಯೀ ಪಟ್ಟು ಹಿಡಿದಳು. ‘ಹೋದವರು ಹೋದರು. ಇರುವವರು ಒಂದು ಶುಚಿ ಭಾವದಿಂದ ಬದುಕಬೇಕಲ್ಲ. ಹೊಸ ಜೀವನ ಆರಂಭವಾಗಬೇಕು, ಶಾಂತಿಯಾಗಬೇಕು’ ಎಂದು ವಾದಿಸಿದಳು. ಅಂದರೆ ಹೋಮ, ಪಿತೃದಾನ ಎಲ್ಲ ಆಗಬೇಕು. ಆಗ ತರ್ಪಣ ಯಾರು ಕೊಡಬೇಕು ಎಂಬ ಪ್ರಶ್ನೆ ಎದ್ದಿತು. ಆ ಅಧಿಕಾರ ಎಲ್ಲಕ್ಕೂ ಕಿರಿಯ ಇಲ್ಲವೆ ಎಲ್ಲಕ್ಕೂ ಹಿರಿಯ ಮಗನಿರುತ್ತದೆ. ಆದರೆ ನಾನೂ ನಾಸ್ತಿಕ. ‘ಒಲ್ಲೆ’ ಎಂದು ಕೈಯೆತ್ತಿ ಬಿಟ್ಟೆ. ಹಾಗಾದರೆ ವಸಂತ ಹೋಮ ಮಾಡಬೇಕಾಗಿತ್ತು. ಆದರೆ ನಾನು ವಸಂತನಿಗೆ ಹೇಳಿದೆ: ‘ನಮ್ಮ ಚಿಕ್ಕಂದಿನಿಂದ ನಾವು ಭಾಲಚಂದ್ರನೇ ಬಾಪ್ಪಾನ ಹಿರಿಯ ಮಗ ಎಂದು ನಂಬಿ ಬಂದಿದ್ದೇವೆ. ಅವನೂ ತನ್ನ ಹೆಸರನ್ನು ಬದಲಾಯಿಸಿ, ತನ್ನ ತಂದೆಯ ಹೆಸರು ಬಿಟ್ಟು, ಬಾಪ್ಪಾನ ಹೆಸರನ್ನು ಬಳಸಿದ್ದಾನೆ. ಆದ್ದರಿಂದ ಅವನೇ ಹಿರಿಯ ಮಗನ ಅಧಿಕಾರದಿಂದ ಈ ವಿಧಿ ಮಾಡುವದು ಯೋಗ್ಯ’ ಎಂದೆ. ವಸಂತ ಕೂಡಲೆ ಒಪ್ಪಿದ.

ಈ ನಿರ್ಣಯಕ್ಕೆ ಹೋಮ ನಡೆಸಿಕೊಡಲು ಬಂದ ಪುರೋಹಿತರಿಂದ, ಹಾಗೂ ನಮ್ಮ ನೆರೆಹೊರೆಯ ಒಬ್ಬಿಬ್ಬರು ಗಣ್ಯರಿಂದ ಕಟುವಾದ ವಿರೋಧ ಬಂದಿತು. ನಾನು ಜಗ್ಗಲಿಲ್ಲ. ಆಯೀ ಕೂಡ ನನ್ನನ್ನು ಮೂಲೆಗೆ ಕರೆದುಕೊಂಡು ಹೋಗಿ, ‘ಇದು ತಪ್ಪಲ್ಲವೆ? ಅವನನ್ನು ನಾವು ದತ್ತು ಕೂಡ ತೆಗೊಂಡಿರಲಿಲ್ಲ’ ಎಂದಳು. ‘ಅದು ನಿಮ್ಮ ತಪ್ಪು. ಅವನ ಹೆಸರನ್ನು ಮಾತ್ರ ಬದಲಾಯಿಸುವ ಬದಲಾಗಿ ಅವನನ್ನು ದತ್ತಕ
ತೆಗೆದುಕೊಂಡುಬಿಟ್ಟರಾಗುತ್ತಿತ್ತಲ್ಲ’ ಎಂದೆ. ಆಕೆ ಸುಮ್ಮನಾದಳು.

ಭಾಲಚಂದ್ರ ಒಪ್ಪಿದ. ವಿಧಿ ಸಾಂಗವಾಗಿಯೇ ಮುಗಿಯಿತು. ವೈಕುಂಠ ಸಮಾರಾಧನೆ ಆಯಿತು. ಮಾರನೆಯ ದಿವಸ ಹೋಮಕುಂಡವನ್ನು ರಚಿಸಿದ್ದ ಕೋಣೆಯನ್ನು ಹಸನಗೊಳಿಸುವ ಕೆಲಸ ನಡೆದಿತ್ತು. ನಾನು ಅಲ್ಲೇ ನಿಂತು ಮೇಲ್ವಿಚಾರಣೆ ನಡೆಸುತ್ತಿದ್ದೆ. ಆಗ ಹೋಮದಿಂದ ಕೊಂಚ ದೂರ, ಭಾಲಚಂದ್ರ ತನ್ನ ಪಿತೃಗಳಿಗೆ ತರ್ಪಣ ನೀಡಿದ ದಿಕ್ಕಿನಲ್ಲಿ, ಕಪಾಟಿನ ಮರೆಯಲ್ಲಿ ಏನೋ ವಸ್ತು ಕಾಣಿಸಿತು. ಹೋಗಿ ತೆಗೆದು ನೋಡಿದೆ.

ಒಂದು ಗ್ರೂಪ್ ಫೋಟೋ. ನಾಲ್ಕೈದು ಸದ್ಗೃಹಸ್ತರು 1940ರ ಮಾದರಿಯ ಸೂಟು ಟೈ ಧರಿಸಿಕೊಂಡು ಸಾಲಾಗಿ ಕುರ್ಚಿಗಳ ಮೇಲೆ ಕೂತಿದ್ದಾರೆ. ಅದರಲ್ಲಿ ಇಬ್ಬರನ್ನು ಗುರುತಿಸಿದೆ. ಭಾಲಚಂದ್ರನ ಚಿಕ್ಕಪ್ಪಂದಿರು.ನಾನು ದಿಗಿಲಾಗಿ ಪರೀಕ್ಷಿಸಿದೆ. ಭಾಲಚಂದ್ರನ ತಂದೆ ಆ ಫೋಟೋದಲ್ಲಿ ಇರುವದು ಅಸಾಧ್ಯವಾಗಿತ್ತು. ಏಕೆಂದರೆ ಅವನು 1921ರಲ್ಲೇ ತೀರಿಕೊಂಡಿದ್ದ. ಇದು 1940ರ ಸುಮಾರಿಗೆ ಗೋಕರ್ಣ ಕುಟುಂಬದವರು ತೆಗೆಸಿಕೊಂಡ ಗ್ರೂಪ್ ಫೋಟೋ.

ಆ ಫೋಟೋ ಆ ಕುಟುಂಬವನ್ನು ಪ್ರತಿನಿಧಿಸುತ್ತದೆ ಎಂಬುದು ಸ್ಪಷ್ಟವಾಗಿತ್ತು. ಅದು ನಮ್ಮ ಮನೆಯಲ್ಲಿ ಹೇಗೆ ಬಂತು? ಅಲ್ಲದೆ ಭಾಲಚಂದ್ರ ತನ್ನ ತಂದೆಗೆ ಅರ್ಘ್ಯ ಕೊಡುವ ದಿಕ್ಕಿನಲ್ಲಿ ಇದನ್ನು ತಂದು ಇಟ್ಟವರಾರು? ಎಂದು ಸೋಜಿಗಪಡುತ್ತ ನಿಂತೆ. ಭಾಲಚಂದ್ರನೇ ಇದನ್ನು ಮಾಡಿರಬಹುದೇ ಎಂಬ ಯೋಚನೆ ಬಂದು ಸಿಟ್ಟು-ಜಿಗುಪ್ಸೆಯಿಂದ ಕಸಿವಿಸಿಯಾದೆ.

ಆಗಲೇ ಆಯೀ ಅಲ್ಲಿಗೆ ಬಂದಳು. ನನ್ನ ಕೈಯಲ್ಲಿದ್ದ ಫೋಟೋ ನೋಡಿ ಯಾವುದೇ ರೀತಿಯ ಪ್ರತಿಕ್ರಿಯೆ ತೋರಿಸದೆ ಅದನ್ನು ನನ್ನ ಕೈಯಿಂದ ತೆಗೆದುಕೊಂಡು, ‘ಒಳಗಿಡಬೇಕಲ್ಲ’ ಎಂದೇನೇನೋ ಗೊಣಗುತ್ತ ಅದನ್ನು ಒಳಗೆ ತೆಗೊಂಡು ಹೋದಳು.ಆ ಬಳಿಕ ಆ ಫೋಟೋ ನಾನು ನಮ್ಮ ಮನೆಯಲ್ಲೆಂದೂ ಕಂಡಿಲ್ಲ.

(ಗಿರೀಶ ಕಾರ್ನಾಡ ಅವರ ಆತ್ಮಕಥೆ, ಆಡಾಡತ ಆಯುಷ್ಯದಿಂದ ಆಯ್ದ ಭಾಗ. ಅಕ್ಟೋಬರ್ 23, 2010ರಲ್ಲಿ ಮೊದಲ ಬಾರಿಗೆ ‘ಮುಕ್ತಛಂದ’ದಲ್ಲಿ ಪ್ರಕಟವಾಗಿದ್ದ ಬರಹ)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.