ADVERTISEMENT

ಆಧುನಿಕ ಕನ್ನಡದ `ಪೂರ್ಣಕುಂಭ'

ಡಾ.ಆರ್.ಲಕ್ಷ್ಮೀನಾರಾಯಣ
Published 2 ಫೆಬ್ರುವರಿ 2013, 19:59 IST
Last Updated 2 ಫೆಬ್ರುವರಿ 2013, 19:59 IST

`ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು', `ಬುದ್ಧಿ ಹೇಳಿದರೆ ಯುದ್ಧಕ್ಕೆ ಬಂದ', `ಹೋದಾಗ ಬಿಕ್ಕಿ ಬಿಕ್ಕಿ ಅತ್ತ, ಇದ್ದಾಗ ಕುಕ್ಕಿ ಕುಕ್ಕಿ ಕೊಂದ', `ಕಸಬು ಕಸಾಯಿ, ಹೆಸರು ದಯಾಮಯಿ'- ಇಂಥ ನೂರಾರು ಗಾದೆಗಳನ್ನು ಸೃಷ್ಟಿಸುವ ಮೂಲಕ `ಗಾದೆಗಳು ಸಮೂಹಸೃಷ್ಟಿ' ಎಂಬ ಸಾಮಾನ್ಯ ನಂಬಿಕೆಯನ್ನು ಸುಳ್ಳುಮಾಡಿದವರು ಪ್ರೊ. ಎಸ್.ವಿ. ಪರಮೇಶ್ವರಭಟ್ಟರು. `ಕನ್ನಡದ ಕಾಳಿದಾಸ' ಎನ್ನುವುದು ಅವರ ಹೆಸರಿಗೆ ಅಂಟಿರುವ ವಿಶೇಷಣ. ಅವರೀಗ ನಮ್ಮಂದಿಗೆ ಇದ್ದಿದ್ದರೆ ಇದೇ ಫೆಬ್ರುವರಿ 8ಕ್ಕೆ ತೊಂಬತ್ತೊಂಬತ್ತು ದಾಟಿ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದರು.

ಕವಿ, ವಿದ್ವಾಂಸ, ವಾಗ್ಮಿ, ಪ್ರಾಧ್ಯಾಪಕ, ಅನುವಾದಕ ಎಂದೆಲ್ಲ ಖ್ಯಾತರಾದ ಅವರು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಸರಸ, ಸಜ್ಜನಿಕೆ, ವಿನಯದ ಮೂಲಕ ಜನಮನ್ನಣೆ ಗಳಿಸಿದ್ದರು. ಅವರ ಸಹಜಸ್ಫೂರ್ತ ಹಾಸ್ಯ ಮತ್ತು ವಾಕ್ ಚಾತುರ್ಯವೂ ಜನಪ್ರಿಯ. ಅವರು ಸಹಸ್ರಾರು ಶಿಷ್ಯರ ಪ್ರೀತಿಯ ಪ್ರಾಧ್ಯಾಪಕರಾಗಿದ್ದರು.

ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರಭಟ್ಟರು, ಸದಾಶಿವರಾಯರು ಮತ್ತು ಲಕ್ಷ್ಮಮ್ಮನವರ ಪುತ್ರರಾಗಿ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿನಲ್ಲಿ 1914ರ ಫೆ.8ರಂದು ಜನಿಸಿದರು. ತೀರ್ಥಹಳ್ಳಿಯಲ್ಲಿ ಪ್ರೌಢ ವಿದ್ಯಾಭ್ಯಾಸ. ಬೆಂಗಳೂರು-ಮೈಸೂರಿನಲ್ಲಿ ಉನ್ನತ ವಿದ್ಯಾಭ್ಯಾಸದ ಸಂದರ್ಭದಲ್ಲಿ ಎ.ಆರ್.ಕೃಷ್ಣಶಾಸ್ತ್ರಿ, ವಿ.ಸೀತಾರಾಮಯ್ಯ, ಕೆ.ವೆಂಕಟರಾಮಪ್ಪ, ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ, ತೀ.ನಂ.ಶ್ರೀಕಂಠಯ್ಯ ಮತ್ತು ಡಿ.ಎಲ್. ನರಸಿಂಹಾಚಾರ್ ಅವರಂಥ ವಿದ್ವನ್ಮಣಿಗಳು ಗುರುಗಳಾಗಿ ದೊರೆತ ಭಾಗ್ಯ ಪರಮೇಶ್ವರ ಭಟ್ಟರದಾಗಿತ್ತು. ವಡ್ಸ್‌ವರ್ತ್ ಕವಿಯ ಮೈಕೇಲ್ ಕವನವನ್ನು `ಮಾಚಯ್ಯ' ಶೀರ್ಷಿಕೆಯಲ್ಲಿ ಅನುವಾದಿಸಿ ಶ್ರೀಯವರ ಸ್ವರ್ಣಪದಕ ಪಡೆದರು.

1939ರಲ್ಲಿ ಮೈಸೂರಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಭಟ್ಟರು, ತುಮಕೂರು- ಶಿವಮೊಗ್ಗೆಗಳಲ್ಲಿ ಸೇವೆ ಸಲ್ಲಿಸಿ 1950ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿಗೆ ಬಂದರು. 1968ರವರೆಗೂ ಅಲ್ಲಿ ಮತ್ತು ಮಾನಸಗಂಗೋತ್ರಿಯಲ್ಲಿ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1968ರಲ್ಲಿ ಮಂಗಳೂರಿನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ತೆರಳಿ ಆರು ವರ್ಷಗಳ ಕಾಲ ಅಲ್ಲಿ ಬೋಧನೆ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ನಿವೃತ್ತಿಯ ನಂತರ ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಐದು ವರ್ಷ ಕೆಲಸ ಮಾಡಿ, `ರಸಋಷಿ ಕುವೆಂಪು' ಎಂಬ ಕುವೆಂಪು ಕೃತಿಗಳ ಸಮಗ್ರ ದರ್ಶನ ಮಾಡಿಸುವ ಬೃಹತ್ ಕೃತಿ ರಚಿಸಿದರು. ಆರೋಗ್ಯ ಅಷ್ಟೇನೂ ಸರಿ ಇಲ್ಲದಿದ್ದಾಗಲೂ `ಕವಿಕೌಮುದಿ', `ಭವಭೂತಿ ಸಂಪುಟ', `ಹರ್ಷ ಸಂಪುಟ', `ಸಂಜೆಮಲ್ಲಿಗೆ' ಕೃತಿಗಳನ್ನು ರಚಿಸುತ್ತ ಕೊನೆಯವರೆಗೂ ಕ್ರಿಯಾಶೀಲರಾಗಿಯೇ ಇದ್ದರು. ನಿಧನರಾದಾಗ (ಅ.27, 2000) ಅವರಿಗೆ ಎಂಬತ್ತೇಳು ವರ್ಷ.

ಎಸ್.ವಿ.ಪಿ. ಸಾಹಿತ್ಯ

ಎಸ್.ವಿ.ಪಿ. ಅವರದು ಗುಣ ಮತ್ತು ಗಾತ್ರ ಎರಡೂ ದೃಷ್ಟಿಯಿಂದಲೂ ಸಮೃದ್ಧ ಸಾಹಿತ್ಯ. ಅವರ ಸ್ವತಂತ್ರ ಕೃತಿಗಳಲ್ಲಿ ಕಾವ್ಯ, ವಚನ, ವಿಮರ್ಶೆ, ಗಾದೆ-ಒಗಟುಗಳಿವೆ. ಅನುವಾದ ಕೃತಿಗಳಲ್ಲಿ ಸಂಸ್ಕೃತದಿಂದ, ಇಂಗ್ಲಿಷಿನಿಂದ, ಪ್ರಾಕೃತದಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳಿವೆ. ಸಂಸ್ಕೃತದ ಮೇರು ಕವಿಗಳಾದ ಕಾಳಿದಾಸ, ಭಾಸ, ಭವಭೂತಿ, ಹರ್ಷ ಇವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ತಂದ ಸಾಧನೆ ಅವರದು.

ಎಸ್.ವಿ.ಪಿ. ಸಾಹಿತ್ಯಕ್ಷೇತ್ರ ಪ್ರವೇಶಿಸಿದ್ದು `ರಾಗಿಣಿ' ಕವನ ಸಂಕಲನದ ಮೂಲಕ, 1940ರಲ್ಲಿ. ಕುವೆಂಪು ಅವರ ಪದ್ಯರೂಪದ ಮುನ್ನುಡಿಯನ್ನು ಹೊತ್ತು ಹೊರಬಂದ ಈ ಕವನಸಂಕಲನದಲ್ಲಿ ನವೋದಯದ ಕನಸುಗಾರಿಕೆ, ಪ್ರಕೃತಿಪ್ರೇಮ, ಗಂಡು ಹೆಣ್ಣಿನ ಒಲವು, ಬದುಕಿನ ನೋವು ನಲಿವುಗಳೆಲ್ಲವೂ ಸುಕುಮಾರವಾದ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ. ಕುವೆಂಪು ಹೇಳುವಂತೆ ಅದರೊಳಾಡುತಿರುವುದು `ಬಾಳುವೆದೆಯುಸಿರು'... `ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ', `ತಿಳಿಮುಗಿಲತೊಟ್ಟಿಲಲಿ ಮಲಗಿದ್ದ ಚಂದಿರನ...' ಎನ್ನುವ ಜನಪ್ರಿಯ ಗೀತೆಗಳು ಈ ಸಂಕಲನದಲ್ಲಿವೆ.

ಕವಿಯಾಗಿ ಎಸ್.ವಿ.ಪಿ. ಅವರ ಬೆಳವಣಿಗೆಯನ್ನು ನಿಚ್ಚಳವಾಗಿ ತೋರುವ ಕೃತಿ `ಗಗನಚುಕ್ಕಿ'. ಮೂರನೆಯ ಕವನಸಂಕಲನವಾದ `ಅಂಚೆಯ ಪೆಟ್ಟಿಗೆ'ಯಲ್ಲಿ ಸಮಾಜದ, ದೇಶದ ಒಳಿತಿಗೆ ಕಾರಣರಾದ, ಭಾಷಾ ಸಾಹಿತ್ಯಗಳಿಗೆ ಅನುಪಮ ಸೇವೆ ಸಲ್ಲಿಸಿದ ಗಾಂಧಿ, ಬುದ್ಧ, ವೇದವ್ಯಾಸ, ವೆಂಕಣ್ಣಯ್ಯನವರು, ಮುಂತಾದ ಮಹನೀಯರನ್ನು ಕುರಿತ ಚೆಲುವಾದ ಸಾನೆಟ್‌ಗಳಿವೆ. ನಾಲ್ಕನೆಯ ಕವನಸಂಕಲನ `ಇಂದ್ರಗೋಪ'ದಲ್ಲಿ ಕೂಡ ಪ್ರಕೃತಿ ಚಿತ್ರಗಳೇ ಹೆಚ್ಚು. ದೈವಾರಾಧನೆ, ಅನುಭಾವದ ಕವನಗಳೂ ಇವೆ. `ಕೃಷ್ಣಮೇಘ' ಸಾಂಗತ್ಯಛಂದಸ್ಸಿನ ಐದು ದೀರ್ಘಕವನಗಳ ಗುಚ್ಛ.

ಈ ಸಂಕಲನದಲ್ಲಿನ `ಮೈಸೂರು ವಿಶ್ವವಿದ್ಯಾನಿಲಯದ ಚಿನ್ನದ ಹಬ್ಬ', `ಚಂದ್ರಲೋಕಕ್ಕೆ ಮನುಷ್ಯನ ಉಡ್ಯಾಣ', ಮೊದಲಾದ ದೀರ್ಘ ಕವನಗುಚ್ಛಗಳ ರಚನೆಯ ಮೂಲಕ ಕಾವ್ಯವಸ್ತುವಿಗೆ ಸಂಬಂಧಪಟ್ಟಂತೆ ಮಾಡಿರುವ ಪ್ರಯೋಗ ವಿಶಿಷ್ಟವಾದುದು. ಒಟ್ಟಾರೆ ಭಟ್ಟರ ಈ ಸ್ವತಂತ್ರ ಕವನಗಳ ಲೋಕ ಒಂದು ರಮ್ಯ, ಸೌಮ್ಯ ಪ್ರಪಂಚ. ಅಲ್ಲಿ ದುಷ್ಟತನ, ಕಷ್ಟಕಾರ್ಪಣ್ಯಗಳು, ದುಃಖದುಮ್ಮಾನ, ಸಾವು ಸೆಡವುಗಳಿಗೆ ಎಡೆಯಿಲ್ಲ. ಅಷ್ಟರಮಟ್ಟಿಗೆ ಅದೊಂದು ಮಿತಿ ಎನ್ನಬೇಕು.

ADVERTISEMENT

ಮುಕ್ತಕಗಳ ಮೌಲಿಕ ಕೊಡುಗೆ

`ತುಂಬೆ ಹೂ', `ಸುರಗಿ ಸುರಹೊನ್ನೆ', `ಇಂದ್ರಚಾಪ', `ಚಂದ್ರವೀಧಿ', `ಚಿತ್ರಪಥೆ', `ಮಳೆಬಿಲ್ಲು'- ಈ ಕಾವ್ಯ ಸಂಪುಟಗಳಲ್ಲಿ ಸಂಗ್ರಹಿತವಾಗಿರುವ ಸುಮಾರು ಮೂರು ಸಾವಿರ ಮುಕ್ತಕಗಳು ಭಟ್ಟರು ಕನ್ನಡಸಾಹಿತ್ಯಕ್ಕೆ ನೀಡಿದ ಮೌಲಿಕ ಕೊಡುಗೆಗಳು. ಕನ್ನಡದ ದೇಸೀ ಛಂದೋರೂಪಗಳಾದ ಏಳೆ, ತ್ರಿಪದಿ, ಸಾಂಗತ್ಯಗಳಲ್ಲಿ ಇವು ರಚಿತವಾಗಿವೆ. ಈ ಪ್ರಾಚೀನ ಛಂದೋರೂಪಗಳನ್ನು ಜೀರ್ಣೋದ್ಧಾರ ಮಾಡಿದ ಶ್ರೇಯಸ್ಸು ಅವರಿಗೇ ಸಲ್ಲಬೇಕು.

ಭಟ್ಟರ ಕಾವ್ಯಜೀವನದಲ್ಲಿ `ಇಂದ್ರಚಾಪ' ಒಂದು ಮಹತ್ತರ ಮೈಲಿಗಲ್ಲು. `ಸ್ವ ವಿಚಾರಲಹರಿ ಮತ್ತು ಸುಭಾಷಿತಸಾರ' ಎಂದು ಸಾರುವ ಇದರಲ್ಲಿ ಮೊದಲ ಮುನ್ನೂರು ಪದ್ಯಗಳಲ್ಲಿ ಕವಿಯ ವೈಯಕ್ತಿಕ ಬದುಕಿನ ಕಷ್ಟಕಾರ್ಪಣ್ಯಗಳ ವಿಷಾದಪೂರ್ಣ ಚಿತ್ರಣವಿದ್ದರೆ ಉಳಿದ ಒಂಬೈನೂರು ಪದ್ಯಗಳು ಸಂಸ್ಕೃತದಿಂದ, ಇಂಗ್ಲಿಷಿನಿಂದ ಅನುವಾದಿಸಿದವುಗಳ ಜೊತೆಗೆ ಸ್ವಂತದ ಸುಭಾಷಿತಗಳು, ಸರಸೋಕ್ತಿಗಳು, ಚಾಟೂಕ್ತಿಗಳು, ಆದಿಪ್ರಾಸರಹಿತವಾದ ಸರಸ ಸಾಂಗತ್ಯದ ರೂಪತಾಳಿವೆ. ಇವುಗಳಲ್ಲಿ ಕಲ್ಪನೆ, ವಿನೋದ, ಹಾಸ್ಯ, ಉಲ್ಲಾಸ, ರಸಿಕತೆ ಎಲ್ಲ ಇವೆ. ಉದಾಹರಣೆಗೆ ಒಂದೆರಡನ್ನು ನೋಡಬಹುದು:

ಮೇಲಕೆ ಹತ್ತಿರಿ ಮುಂದಕೆ ಬನ್ನಿರಿ
ಎಂದು ಕಂಡಕ್ಟರು ಕರೆಯೆ
ಉಳಿದೆಲ್ಲ ಕಡೆಯೊಳು ಹಿಂದಕೆ ತಳ್ಳಸಿ
ಕೊಂಡವನಾನಂದಕೆಣೆಯೆ.

ನೀವೊಂದು ಸೀರೆಯ ನೆನಗಾಗಿ ತಂದಂತೆ
ನಾ ಕಂಡೆ ಕನಸನು ನಿನ್ನೆ.
ನಾಳೆ ಆ ಸೀರೆಯ ನೀನುಟ್ಟು ನಲಿದಂತೆ
ಕನಸನು ಕಾಣೆನ್ನ ಚೆನ್ನೆ..

ಮೊದಲನೆಯ ಪದ್ಯದಲ್ಲಿ ಸಮಾಜದಲ್ಲಿ ಪ್ರತಿಭೆಗೆ ಬಂದ ದುರವಸ್ಥೆಯನ್ನು ಅನ್ಯೋಕ್ತಿಯ ರೂಪದಲ್ಲಿ ಹೇಳಲಾಗಿದೆ. ಎರಡನೆಯದರಲ್ಲಿ ಹಾಸ್ಯವಿದೆ, ಪರಿಹಾಸ್ಯವಿದೆ, ವ್ಯಂಗ್ಯವಿದೆ, ಬಡತನದ ಬವಣೆಗಳಿವೆ.

`ಚಂದ್ರವೀಧಿ' ಅವರ ಸ್ವತಂತ್ರ ಶೃಂಗಾರ ಮುಕ್ತಕಗಳ ಸಂಕಲನ. ತರುಣವಯಸ್ಸಿನ ದಂಪತಿಗಳ ಸಂಸಾರದ ಸರಸವಿರಸಗಳು, ಪ್ರಣಯಿಗಳ ಆಮೋದ ಪ್ರಮೋದಗಳು, ಲಜ್ಜೆ-ಭೀತಿಗಳು, ಮುನಿಸು ಕನಸುಗಳು, ವಿರಹ-ವಿಲಾಸಗಳು ಇಲ್ಲಿ ಸುಂದರ ಸಾಂಗತ್ಯಗಳಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ.

ಸಾಧನೆಯ ಸಿದ್ಧಿಶೃಂಗ

ಭಟ್ಟರು ಮುಕ್ತಕಗಳ ರಚನೆಯಲ್ಲಿ ಹೇಗೆ ಒಂದು ಎತ್ತರವನ್ನು ಮುಟ್ಟಿದರೋ ಅದಕ್ಕೂ ಒಂದು ಕೈ ಮಿಗಿಲು ಎನ್ನುವಂಥ ಎತ್ತರವನ್ನು ಮುಟ್ಟಿದ್ದು ವಚನಗಳ ರಚನೆಯಲ್ಲಿ. ಎಸ್.ವಿ. ರಂಗಣ್ಣ, ಬೇಂದ್ರೆ, ಕುವೆಂಪು, ಜ.ಚ.ನಿ., ಸಿದ್ದಯ್ಯ ಪುರಾಣಿಕರಂತೆ ಎಸ್.ವಿ.ಪಿ ಕೂಡ ಆಧುನಿಕ ಕಾಲದಲ್ಲಿ ವಚನರಚನೆಯಲ್ಲಿ ಸಿದ್ಧಹಸ್ತರು. 2100ರಷ್ಟಿರುವ ಅವರ ವಚನಗಳು `ಉಪ್ಪುಕಡಲು', `ಪಾಮರ', `ಉಂಬರ' ಎಂಬ ಮೂರು ಸಂಕಲನಗಳಲ್ಲಿ ಸಂಗ್ರಹಿತವಾಗಿವೆ. ವಿವಿಧ ಬಗೆಯ ಪ್ರಾಸಾನುಪ್ರಾಸಗಳಿಂದ, ಲಯಗಾರಿಕೆಯಿಂದ, ಪ್ರಾಚೀನರ ವಚನಗಳಿಗೆ ಹತ್ತಿರವಾದ ಇವು ಭಟ್ಟರ ಲೋಕಾನುಭವಕ್ಕೆ ಹಿಡಿದ ಕನ್ನಡಿಗಳಾಗಿವೆ. ಸರಳತೆ, ಸುಭಗತೆ, ಧ್ವನಿರಮ್ಯತೆಗಳಿಂದ ಇವು ಮುದನೀಡುತ್ತವೆ. ಹೊಸಕಾಲದ ಸಂವೇದನೆಗಳು ವಚನದ ರೂಪದಲ್ಲಿ ಸುಂದರವಾಗಿ ರೂಪುಗೊಂಡಿವೆ. ಹಾ.ಮಾ.ನಾಯಕರ ಮಾತಿನಲ್ಲಿ `ಉಪ್ಪುಕಡಲು ಆಧುನಿಕ ಕನ್ನಡದ ಶ್ರೇಷ್ಠ ಗ್ರಂಥ. ಅವರ ಪರಿಣತ ಕೃತಿ.'

ಅನುವಾದದ ಹೊಸ ಸೋಪಾನ

ಭಟ್ಟರ ಸ್ವಂತ ಸಾಹಿತ್ಯ ಸೃಷ್ಟಿಯಷ್ಟೇ ಅಥವಾ ಅದಕ್ಕೂ ಒಂದು ಕೈ ಮೇಲು ಎನ್ನುವ ಹಾಗೆ ಅವರ ಅನುವಾದ ಸಾಹಿತ್ಯವಿದೆ. ಸಂಸ್ಕೃತದ ಕಾಳಿದಾಸ, ಭಾಸ, ಭವಭೂತಿ, ಹರ್ಷ ಇವರುಗಳ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವುದೇ ಅಲ್ಲದೆ ಹಾಲನ `ಗಾಥಾ ಸಪ್ತಶತಿ', ಅಮರು ಕವಿಯ `ಅಮರುಶತಕ', ಭರ್ತೃಹರಿಯ `ಶತಕತ್ರಯ', ಜಯದೇವನ `ಗೀತಗೋವಿಂದ', ಕಲ್ಯ ಲಕ್ಷ್ಮೀನರಸಿಂಹಕವಿಯ `ಕವಿಕೌಮುದಿ', ಅಶ್ವಘೋಷನ `ಬುದ್ಧಚರಿತೆ'ಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹೀಗೆ ಇಷ್ಟೊಂದು ಸಂಸ್ಕೃತ ಕವಿ-ಕೃತಿಗಳನ್ನು ಒಬ್ಬರೇ ಅನುವಾದಿಸಿದ ಇನ್ನೊಂದು ಉದಾಹರಣೆ ಭಾರತದಲ್ಲಿಯೇ ಇಲ್ಲ. ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಲಲಿತವಾಗಿ ಸರಳವಾಗಿ, ಮಂದಾನಿಲ, ಲಲಿತ, ಉತ್ಸಾಹ, ಭಾಮಿನಿಯೇ ಮೊದಲಾದ ವಿವಿಧ ಬಗೆಯ ಲಯಗಳಲ್ಲಿ ಇವನ್ನು ಅನುವಾದಿಸಿದ್ದಾರೆ.

ಇಂಗ್ಲಿಷಿನಿಂದ ಅಡಿಸನ್, ಸ್ಟೀಲ್, ಚಾರ್ಲ್ಸ ಲ್ಯಾಂಬ್ ಮೊದಲಾದ ಇಂಗ್ಲಿಷ್‌ನ ಶ್ರೇಷ್ಠ  ಪ್ರಬಂಧಕಾರರ ಪ್ರಬಂಧಗಳನ್ನು `ಕೆಲವು ಇಂಗ್ಲಿಷ್ ಪ್ರಬಂಧಗಳು' ಹೆಸರಿನಲ್ಲಿ ಅನುವಾದಿಸಿದ್ದಾರೆ.

ರಸಜ್ಞ ವಿಮರ್ಶಕ

ಸೃಜನಶೀಲ ಸಾಹಿತ್ಯ ಮತ್ತು ಅನುವಾದಗಳಷ್ಟೇ ಅವರ ಗದ್ಯಸಾಹಿತ್ಯವೂ ವಿಪುಲವಾಗಿದೆ. ಭಾವಗೀತೆಯ ಲಕ್ಷಣಗಳನ್ನು ಸೋದಾಹರಣವಾಗಿ ನಿರೂಪಿಸುವ `ಭಾವಗೀತೆ' ಚಿಕ್ಕದಾದರೂ ಚೊಕ್ಕದಾದ ಕೃತಿ. `ಅಕ್ಕಮಹಾದೇವಿ', `ಸೀಳುನೋಟ' ಮತ್ತು ಇತರ ಕೃತಿಗಳು ಅವರ ಚಿಂತನದ ಗಾಢತೆ ಮತ್ತು ಮಂಥನದ ವೈಶಾಲ್ಯಕ್ಕೆ ನಿದರ್ಶನಗಳಾಗಿವೆ. `ರಸಋಷಿ' ಐದು ಸಂಪುಟಗಳಲ್ಲಿ ರಚಿತವಾಗಿದ್ದು ಕುವೆಂಪು ಸಮಗ್ರ ಕೃತಿಲೋಕಕ್ಕೆ ಸಹೃದಯರನ್ನು ಕರೆದೊಯ್ಯುವ ವಿವರಪೂರ್ಣ ಕೃತಿ. ವಿಮರ್ಶೆಯಲ್ಲಿ ಅವರದು ರಸವಿಮರ್ಶೆಯ ಹಾದಿ. ಕರ್ನಾಟಕದ ಕೆಲವೇ ಅತ್ಯುತ್ತಮ ವಾಗ್ಮಿಗಳಲ್ಲಿ ಅವರೊಬ್ಬರಾಗಿದ್ದರು. ಅವರ ವಾಗ್ಝರಿಯೆಂದರೆ ನಯವಾಗಿ ನವುರಾಗಿ ಎಳೆಎಳೆಯಾಗಿ ಉಪಮೆ, ರೂಪಕ, ಗಾದೆ, ಚಾಟುನುಡಿಗಳನ್ನು ಒಳಗೊಂಡು ಸಾಗುವ ಮಹಾನದಿಯ ಹಾಗೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪುರಸ್ಕಾರ, ಚಾವುಂಡರಾಯ ಪ್ರಶಸ್ತಿ, ಕುವೆಂಪು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, `ಪೂರ್ಣಕುಂಭ', `ಪರಮೇಶ್ವರ' ಅಭಿನಂದನಾ ಗ್ರಂಥಗಳ ಸಮರ್ಪಣೆ- ಇವು ಭಟ್ಟರ ಸಾಹಿತ್ಯ ಸಾಧನೆಗೆ ಸಂದಿರುವ ಕೆಲವು ಗೌರವಗಳು.

ಯಾವ ಸದ್ದುಗದ್ದಲವಿಲ್ಲದೆ ಅಬ್ಬರ ಆಡಂಬರಗಳಿಲ್ಲದೆ ತಾವಿದ್ದೆಡೆಯಲ್ಲಿಯೇ ಪರಮೇಶ್ವರ ಭಟ್ಟರು ಆಧುನಿಕ ಕನ್ನಡದ ದೀಪ ಬೆಳಗಿಸಿದವರು. ಈ ಆಚಾರ್ಯರನ್ನು ಅವರ ಶತಮಾನೋತ್ಸವ ವರ್ಷದಲ್ಲಿ ನೆನೆದು ಅವರ ಸಾಹಿತ್ಯಸೇವೆಗೆ ಕೃತಜ್ಞತೆ ಸಲ್ಲಿಸುವ ಸಾರ್ಥಕ ಕೆಲಸವನ್ನು ಕನ್ನಡದ ಜನ ಮತ್ತು ಸರ್ಕಾರ ಮಾಡಬೇಕಿದೆ. ಕುವೆಂಪು ಭಾಷಾಭಾರತಿ ಪರಮೇಶ್ವರಭಟ್ಟರ ಅನುವಾದಿತ ಕೃತಿಗಳ ಸಮಗ್ರ ಸಂಪುಟ ಪ್ರಕಟಿಸುವ ಯೋಜನೆ ಹಮ್ಮಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಟ್ಟರ ಸ್ವತಂತ್ರ ಕೃತಿಗಳ ಸಮಗ್ರ ಸಂಪುಟಗಳನ್ನು ಹೊರತರುವ ಯೋಜನೆ ಹಮ್ಮಿಕೊಳ್ಳುತ್ತದೆಂದು ಆಶಿಸೋಣ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.