ಒಂದು ಪಟ್ಟಣದಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಇದ್ದ. ಅವನಿಗೆ ಹುಟ್ಟಿನಿಂದಲೂ ಬಯಲಲ್ಲಿ ಆಟವಾಡಿಯೇ ಗೊತ್ತಿರಲಿಲ್ಲ. ಮನೆ ಬಿಟ್ಟರೆ ಶಾಲೆ, ಶಾಲೆ ಬಿಟ್ಟರೆ ಮನೆ; ಎರಡೇ ಅವನ ಲೋಕ. ಸಿರಿವಂತರ ಶಾಲೆಯಲ್ಲಿ ಓದಿದವನು, ಎಲ್‌ಕೆಜಿಯಿಂದ ಇಂಜಿನಿಯರಿಂಗ್ ಮುಗಿಸುವವರೆಗೂ ತರಗತಿಗೆಲ್ಲ ಫಸ್ಟು ರ್ಯಾಂಕು ಬರುತ್ತಿದ್ದ.
ಅವನ ಮನೆಮಾತು ಕೊಂಕಣಿ. ಶಾಲೆಯಲ್ಲಂತೂ ಬರೀ ಇಂಗ್ಲಿಷು. ಹಾಗಾಗಿ ಕನ್ನಡ ಬರುತ್ತಿರಲಿಲ್ಲ. ಚೆನ್ನಾಗಿ ಓದಿ ಇಂಜಿನಿಯರ್ ಆದ್ಮೇಲೆ ಒಂದಷ್ಟು ವರ್ಷ ವಿದೇಶದಲ್ಲಿ ಕೆಲ್ಸ ಮಾಡಿ ಭಾರತಕ್ಕೆ ಮರಳಿದ್ದ. ಆದರೆ, ಭಾರತದಲ್ಲಿ ಕೆಲ್ಸ ಮಾಡ್ತಾ ಮಾಡ್ತಾ ಬೇಜಾರು ಬಂದ್ಬಿಡ್ತು. ನನ್ನದೂ ಒಂದು ಜೀವನಾನಾ? ಅಂತ ಬೇಸತ್ತು ಕೆಲಸಕ್ಕೆ ರಾಜಿನಾಮೆ ಕೊಟ್ಟ. ಒಂದು ದಿನ ಲಾಂಗ್‌ಡ್ರೈವ್ ಹೋಗಿಬರೋಣ ಅಂತ ಕಾರು ಹತ್ತಿ ಹೊರಟ.
ದಾರೀಲಿ ಹೋಗ್ತಾ ಇರೋವಾಗ ಒಂದು ಚೆಂದದ ಹಳ್ಳಿ ಕಾಣಿಸ್ತು. ಕಾರು ನಿಲ್ಲಿಸಿ ಕಾರಿನಿಂದ ಇಳಿದು ನಡೆದುಕೊಂಡು ಹೋಗುತ್ತಿರುವಾಗ ಒಂದಷ್ಟು ಚಿಕ್ಕ-ಚಿಕ್ಕ ಹುಡುಗರು ಲಗೋರಿ ಆಡುತ್ತಾ ಇದ್ದರು. ಧೂಳಲ್ಲಿ ಆಡ್ತಾ ಇರುವ ಮಕ್ಕಳನ್ನು ನೋಡಿ ಹೇಸಿಗೆ ಪಟ್ಟು ಹುಡುಗರು ಆಡೋಕಂತ ಒಂದರ ಮೇಲೊಂದು ಇಟ್ಟ ಕಲ್ಲುಗಳನ್ನು ಸೊಕ್ಕಿನಿಂದ, ಒದ್ದುಕೊಂಡು ಹೋದ. ತಮಗೆ ಬೈದುದ್ದಕ್ಕೆ ಮಕ್ಕಳಿಗೆ ತುಂಬಾ ಸಿಟ್ಟು ಬಂತು. ಇವನ್ಯಾರು ಹೊಸಬ ಈ ಊರಿಗೆ ಬಂದ್ದಿದಾನಲ್ಲ..? ಅಂತ ಅವನ ಬೆನ್ನು ಹಿಡಿದರು.
ಸುಂದರವಾದ ಗುಲಾಬಿ ತೋಟವೊಂದರತ್ತ ನಡೆದ ಇಂಜಿನಿಯರ್ರು, ತೋಟದ ಮಾಲಿಕನ ಹತ್ತಿರ, ಸರ್ ಪ್ಲೀಸ್ ಗೀವ್ ಮಿ ಸಮ್ ವರ್ಕ್ ಇನ್ ಯುವರ್ ಪಾರ್‍ಮ್ ಅಂದ. ಮಾಲಿಕನಿಗೆ ಏನೂ ಅರ್ಥವಾಗಲಿಲ್ಲ. ಅಲ್ಲೇ ಇದ್ದ ಮಕ್ಕಳು, ಇವರಿಗೆ ನಿಮ್ಮ ತೋಟದಲ್ಲಿ ಏನಾದ್ರೂ ಕೆಲಸ ಕೊಡಬೇಕಂತೆ ಅಂದರು. ಮಾಲಿಕ ಇಂಜಿನಿಯರ್ನತ್ತ ತಿರುಗಿ, ತೋಟದಲ್ಲಿ ಬೆಳೆದಿರುವ ಕಳೆಯನ್ನೆಲ್ಲ ಕಿತ್ತು ಬಿಸಾಡು ಅಂದ. ಇಂಜಿನಿಯರನಿಗೆ ಸರಿಯಾಗಿ ಕನ್ನಡ ಬರುವುದಿಲ್ಲವಲ್ಲಾ? ಕೊಂಕಣಿ ಭಾಷೆಯಲ್ಲಿ ಕಳೆ ಅಂದರೆ ಹೂವಿನ ಮೊಗ್ಗು ಅಂತ ಅರ್ಥ.
ಶ್ರದ್ಧೆಯಿಂದಲೇ ತೋಟದಲ್ಲಿರುವ ಚಿಕ್ಕ ದೊಡ್ಡ ಮೊಗ್ಗುಗಳೆಲ್ಲವನ್ನೂ ಒಂದೂ ಬಿಡದೆ ಕಿತ್ತು ಬಿಸಾಡಿದ. ಸ್ವಲ್ಪ ಹೊತ್ತಲ್ಲಿ ಮಾಲಿಕ ಬಂದ. ತೋಟದಲ್ಲಿ ಒಂದು ಗುಲಾಬಿ ಮೊಗ್ಗೂ ಇಲ್ಲ. ಸಿಟ್ಟು, ದುಃಖ ಎಲ್ಲ ಒಟ್ಟಿಗೆ ಬಂದು ಇಂಜಿನಿಯರ್‌ಗೆ ಹೊಡೆದು ಕೆಲಸದಿಂದ ಕಿತ್ತುಹಾಕಿದ. ಇಂಜಿನಿಯರ್ರಿನ ಪಾಡು ನೋಡಿ ಮಕ್ಕಳಿಗೆ ಜೋರಾಗಿ ನಗು ಬಂದಿತಾದರೂ, ಊರ ಪಟೇಲರ ಮನೆಯಲ್ಲಿ ಕೆಲಸ ಕೊಡಿಸುತ್ತೇವೆಂದು ಕರೆದೊಯ್ದರು.
ಪಟೇಲರ ಹೆಂಡತಿ ಬಾವಿಯಿಂದ ನೀರು ಸೇದಿ ಹಂಡೆಗಳಿಗೆ ತುಂಬುವ ಕೆಲಸ ಕೊಟ್ಟಳು. ಇಂಜಿನಿಯರು ಕೊಡವನ್ನು ಹಗ್ಗಕ್ಕೆ ಕಟ್ಟಿ ಹಗ್ಗದ ಇನ್ನೊಂದು ತುದಿಯನ್ನು ಹಿಡಿಯದೆ ಸುಂಯ್ಯನೆ ಬಾವಿಗೆ ಬಿಟ್ಟ. ಹಗ್ಗ ಸಮೇತವಾಗಿ ಕೊಡ ನೀರಿನಾಳ ಸೇರಿತು. ಅಯ್ಯೋ ನನ್ನ ಕೊಡ ಮತ್ತು ಹಗ್ಗ ಎಂದು ಕೂಗುತ್ತ ಬಂದ ಪಟೇಲರ ಹೆಂಡತಿ ಈ ಕೊಡ ಮತ್ತು ಹಗ್ಗದ ದುಡ್ಡನ್ನು ತೀರಿಸುವವರೆಗೆ ನೀನಿಲ್ಲಿ ದುಡಿಯಲೇಬೇಕು ಎಂದು ತಾಕೀತು ಮಾಡಿ ಮತ್ತೊಂದು ಸ್ಟೀಲಿನ ಕೊಡ ಮತ್ತು ಹಗ್ಗ ಕೊಟ್ಟಳು.
ಇಂಜಿನಿಯರು ಈಬಾರಿ ಬಹಳ ಜೋಪಾನದಿಂದ ಕೊಡಕ್ಕೆ ಹಗ್ಗ ಕಟ್ಟಿ ಹಗ್ಗದ ಇನ್ನೊಂದು ತುದಿಯನ್ನು ಗಟ್ಟಿಯಾಗಿ ಹಿಡಿದು ನಿಂತ. ಕೊಡ ಬುಳುಬುಳು ಸದ್ದುಮಾಡುತ್ತ ತುಂಬಿಕೊಳ್ಳುತ್ತಿದ್ದುದನ್ನು ಬಗ್ಗಿ ನೋಡಿದ. ನಂತರ ಹಗ್ಗದ ತುದಿಯನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ನೀರೆಳೆಯಲು ಬಾರದೆ ಹಿಂದೆ ಹಿಂದೆ ಹೆಜ್ಜೆಯಿಡುತ್ತ ಹೋದ. ಕೊಡ ಮೇಲೆ ಬಂದು ರಾಟೆಯ ಬಳಿ ನೇತಾಡತೊಡಗಿತು. ಇವನು ಕೈಯಲ್ಲಿ ಹಗ್ಗದ ತುದಿಯನ್ನು ಹಿಡಿದುಕೊಂಡೇ ಕೊಡವನ್ನು ಇಳಿಸಲು ಮುಂದೆ-ಮುಂದೆ ಹೋದ.
ಅವನು ಮುಂದೆ ಹೋದಂತೆಲ್ಲ ಕೊಡವೂ ಬಾವಿಯೊಳಕ್ಕೆ ಇಳಿಯುತ್ತಿತ್ತು. ಹಿಂದೆ ಸರಿದಂತೆಲ್ಲ ಕೊಡ ಮೇಲೆ ಬರುತ್ತಿತ್ತು. ಒಂದು ಉಪಾಯ ಮಾಡುತ್ತೇನೆಂದುಕೊಂಡು ಹಗ್ಗದ ತುದಿಯನ್ನು ಅಲ್ಲೇ ಇದ್ದ ದನವೊಂದರ ಕಾಲಿಗೆ ಕಟ್ಟಿ ರಾಟೆಯ ಬಳಿಗೆ ಕೊಡವನ್ನಿಳಿಸಲು ಹೋದ. ಅಷ್ಟರಲ್ಲಿ ದನ ತನ್ನ ಕಾಲಿಗೆ ಹಗ್ಗ ಕಟ್ಟಿದ್ದರಿಂದ ಭಯಗೊಂಡು ಅವನು ಮುಂದೆ ಬಂದರೆ ಹಾಯಲು ಹಿಂದೆ ಬಂದರೆ ಒದೆಯಲು ಪ್ರಯತ್ನಿಸುತ್ತ ಅತ್ತಿಂದಿತ್ತ ಓಡಾಡತೊಡಗಿತು. ಇದರಿಂದ ಸ್ಟೀಲಿನ ಕೊಡ ಬಾವಿಯ ಮೇಲೆ ಕೆಳಗೆ ಇಳಿಯುತ್ತ ಬಾವಿಯ ಕಲ್ಲಿಗೆ ಬಡಿಯತೊಡಗಿತು. ಮಕ್ಕಳಿಗೋ ಇವನ ಸ್ಥಿತಿ ಕಂಡು ಸಿಕ್ಕಾಪಟ್ಟೆ ನಗು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಪಟೇಲರ ಹೆಂಡತಿ ಸಿಟ್ಟಿನಲ್ಲಿ ಬೈಯ್ಯುತ್ತ ದನದ ಕಾಲಿಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ಕೊಡವನ್ನು ಇಳಿಸಿಕೊಂಡಳು.
ಸ್ಟೀಲಿನ ಕೊಡ ನೆಗ್ಗುನೆಗ್ಗಾಗಿತ್ತು. ಈ ಕೊಡದ ಬೆಲೆಯನ್ನೂ ಕೆಲಸ ಮಾಡಿ ತೀರಿಸುವಂತೆ ಹೇಳಿ, ಗಂಡನನ್ನು ಕರೆದು ಇಂಜಿನಿಯರನ ಲೀಲೆಯನ್ನೆಲ್ಲ ತಿಳಿಸಿದಾಗ ಪಟೇಲರು ದನಗಳಿಗೆ ಹುಲ್ಲು ಮೇಯಿಸುವ ಕೆಲಸ ಕೊಟ್ಟರು. ಆದರೆ ಅವನು ಅದೊಂದು ಗೋಮಾಳವೆಂದು ಭಾವಿಸಿ, ಬೆಳೆದುನಿಂತಿದ್ದ ಜೋಳದ ಹೊಲದಲ್ಲಿ ದನಗಳನ್ನು ಮೇಯಲು ಬಿಟ್ಟ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಪಟೇಲರು, ತಮ್ಮ ಜೋಳದ ಹೊಲವನ್ನು ಮೇಯುತ್ತಿರುವ ದನಗಳನ್ನು ನೋಡಿ ಹಲ್ಲು ಕಡಿಯುತ್ತ, ಗೋಮಾಳದಲ್ಲಿ ಮೇಯಿಸುವುದು ಬಿಟ್ಟು ಇಡೀ ವರ್ಷದ ನನ್ನ ಶ್ರಮವನ್ನು ಹಾಳು ಮಾಡಿದೆಯಲ್ಲ ಎಂದು ದೊಣ್ಣೆ ಹಿಡಿದು ಹೊಡೆಯಲು ಬಂದರು. ಅದನ್ನು ನೋಡಿದ ಹುಡುಗರು, ಕೈ ಮುಗಿಯುತ್ತ ಅವನನ್ನು ಹೊಡೆಯಬೇಡಿ, ಕ್ಷಮಿಸಿಬಿಡಿ. ಪಾಪ ಅವನಿಗೆ ಕೆಲಸವೆಂದರೆ ಏನೆಂದೇ ಗೊತ್ತಿಲ್ಲ ಎಂದು ಪಟೇಲರನ್ನು ವಿನಂತಿಸಿದರು. ಹುಡುಗರ ಮಾತನ್ನು ಕೇಳಿ ಪಟೇಲರು ದೊಣ್ಣೆಯನ್ನು ಎಸೆದು ಹೊರಟುಹೋದರು.
ಇಂಜಿನಿಯರಿಗೆ ಈಗ ತನ್ನ ತಪ್ಪಿನ ಅರಿವಾಗಿತ್ತು. ಹುಡುಗರಿಗೆ ಕೈಮುಗಿದು, ನಾನು ಬಾಲ್ಯವನ್ನೇ ಅನುಭವಿಸಿಲ್ಲ. ರ್‍ಯಾಂಕ್ ಪಡೆಯುವ ಓಟದಲ್ಲಿ ಜೀವನವನ್ನೇ ಕಳೆದುಕೊಂಡಿದ್ದೇನೆ. ನನಗೆ ಹೊರ ಜಗತ್ತಿನ ಪರಿಚಯವೇ ಇಲ್ಲ. ಎಂದು ಇಂಗ್ಲಿಷಿನಲ್ಲಿ ಹೇಳುತ್ತ ಗೊಳೋ ಅಂತ ಅತ್ತ. ಹುಡುಗರು ಚಿಂತೆ ಮಾಡಬೇಡಿ ನಾವಿದ್ದೇವಲ್ಲ. ನಿಮಗೆಲ್ಲ ಕಲಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.