ಧೋ ಮಳೆ... ತಣ್ಣನೆ ಹಿತಾನುಭವ ನೀಡುವ ಸುಳಿಗಾಳಿ... ಬೆಳಗಿನ ಚುಮುಚುಮು ಚಳಿಗೆ ದೇಹ ಬೆಚ್ಚಗೆ ಮಾಡುವ, ಮನಸಿಗೂ ಆಹ್ಲಾದಕರ ಹಿತವೆಸುವ ಒಂದು ಕಪ್ ಕಾಫಿ... ಕಿವಿಗೆ ಏನೋ ಒಂದು ಬಗೆಯ ಆನಂದ ಕೊಡುವ ಜೀರುಂಡೆಯ ಝೇಂಕಾರ... ಬೆಟ್ಟದಿಂದ ಹಾಲು ಚೆಲ್ಲಿದಂತೆ ಧರೆಗಿಳಿಯುವ ಬೆಳ್ನೊರೆಯ ಜಲಪಾತ... ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಣ್ಮನ ಸೆಳೆಯುವ, ಹಸಿರು ಜರತಾರಿ ಸೀರೆ ಧರಿಸಿದಂತೆ ಭಾಸವಾಗುವ ಭೂರಮೆ... ಕಣ್ಣಿಗೆ ಹಬ್ಬವನ್ನುಂಟುಮಾಡುವ ಖಗಮೃಗಗಳು... ಎಲ್ಲೆಡೆ ಹಸಿರು ಮೊಗೆವ ಕಾನನ, ಅದಕ್ಕೆ ಹೊಂದಿಕೊಂಡಂತೆ ಗಿರಿಕಂದರಗಳ ಮಗ್ಗುಲಲ್ಲಿ ಹಸಿರನ್ನೇ ನೆಲಕ್ಕೆ ಹೊದಿಸಿದಂತಹ ಕಾಫಿ, ಮೆಣಸು, ಚಹಾ ತೋಟಗಳು... ಇದು ಧರೆ ಮೇಲಿನ ನಿಜವಾದ ಸ್ವರ್ಗವಲ್ಲದೆ ಮತ್ತೇನು? ಇಂತಹ ಭೂಲೋಕದ ಮೇಲಿನ ಸರ್ಗವೇ ನಮ್ಮ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಕಾಫಿ ನಾಡು ಚಿಕ್ಕಮಗಳೂರು.
ಹೌದು... ಬಹುತೇಕ ಮಲೆನಾಡು ಪ್ರದೇಶದಿಂದಲೇ ಆವರಿಸಿರುವ, ಕಾಫಿ ನಾಡು ಎಂದೇ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನಲ್ಲಿ ಈಗ ಪ್ರಕೃತಿ ಮಾತೆ ಹಸಿರುಟ್ಟು ನಳನಳಿಸುತ್ತಿದ್ದಾಳೆ. ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಭೂರಮೆಯ ಕಣ್ತುಂಬಿಕೊಳ್ಳಲು ಇದು ಸಕಾಲ. ಮಳೆ, ಬೆಟ್ಟಗುಡ್ಡ, ಮೋಡ, ಮಂಜು, ನೀರ ಝರಿ ಎಲ್ಲವೂ ಪುಳಕದ ಅನುಭವವನ್ನೇ ನೀಡುತ್ತವೆ.
ಬೇಸಿಗೆ ದಿನಗಳಿಗಳಿಂತ ಮುಂಗಾರು ಮಳೆಗಾಲದ ದಿನಗಳಲ್ಲಿ ದೂರದ ನಗರಗಳಿಂದ, ರಾಜ್ಯಗಳಿಂದ, ದೇಶಗಳಿಂದ ಜನರು ದಂಡಿಯಾಗಿ ಬರುತ್ತಾರೆ. ವಾರಾಂತ್ಯದ ದಿನಗಳಂತೂ ನಗರವಾಸಿಗಳು, ಟೆಕಿಗಳಿಂದ, ಖಾಸಗಿ ಕಂಪನಿ ಉದ್ಯೋಗಿಗಳಿಂದ ಜಿಲ್ಲೆಯ ಪ್ರವಾಸಿ ತಾಣಗಳು ತುಂಬಿ ತುಳುಕುತ್ತವೆ.
ದಂಡಿ ದಂಡಿ ಜನರು, ವಾಹನಗಳ ಸಾಲು ನೋಡಿ ಸ್ಥಳೀಯರಿಗೆ ಎಷ್ಟೋ ಸಲ ‘ಇದೇನು ಇವರಿಗೆ ಇಂಥ ಹುಚ್ಚು’ ಅನಿಸುವುದೂ ಉಂಟು. ಇದು ಹುಚ್ಚಲ್ಲ! ಮನಸು ದೂರ ತೀರ ಬಯಸುವಾಗ, ನಿಸರ್ಗ ಸಿರಿ ಕೈಬೀಸಿ ಕರೆವಾಗ, ಅವರು ಬರುವುದರಲ್ಲಿ ಅಚ್ಚರಿಪಡುವಂತಹುದು ಏನೂ ಇಲ್ಲ ಎನಿಸುತ್ತದೆ ಪ್ರಕೃತಿಯ ಸೊಬಗಿನ ಸೆಳೆತ ಬಲ್ಲವರಿಗೆ.
ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳೂ ನಗರದ ಐ.ಜಿ.ರಸ್ತೆ, ಎಂ.ಜಿ.ರಸ್ತೆ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೊರಗಿನ ವಾಹನಗಳು ಪಾರ್ಕಿಂಗ್ ಜಾಗಗಳಲ್ಲಿ ಕಿಕ್ಕಿರಿದು ನಿಲ್ಲುವುದನ್ನು ನೋಡಿ ವಾರದಲ್ಲಿ ಎರಡು ದಿನಗಳು ಯಾವಾಗಲೂ ನಮ್ಮವಲ್ಲ (ಪ್ರವಾಸಿಗರಿಗೆ ಮೀಸಲು) ಎಂದುಕೊಳ್ಳುವುದನ್ನು ಸ್ಥಳೀಯರ ಬಾಯಿಂದಲೂ ಅನೇಕ ಸಲ ಕೇಳಿದ್ದೇನೆ.
ಆದರೆ, ರಾಜಧಾನಿಯ ಟೆಕಿಗಳಲ್ಲಿ, ಖಾಸಗಿ ಕಂಪನಿ ಉದ್ಯೋಗಿಗಳಲ್ಲಿ ಒಮ್ಮೆ ಭೇಟಿ ಕೊಟ್ಟವರೇ ವರ್ಷದಲ್ಲಿ ಹತ್ತಾರು ಬಾರಿ ಚಿಕ್ಕಮಗಳೂರಿನ ರಮ್ಯತಾಣಗಳಿಗೆ ಮಗದೊಮ್ಮೆ ಭೇಟಿ ಕೊಡುವುದನ್ನು ಕೇಳಿದಾಗ ಇಲ್ಲೇನಿದೆ ಅಂಥ ಹೊಸತು? ಅಂಥ ಆಕರ್ಷಣೆ? ಎನಿಸುತ್ತಿದ್ದುದು ಉಂಟು.
ಕಾಫಿನಾಡಿನಲ್ಲಿ ಹುಟ್ಟಿ ಬೆಳೆದು, ಶಿಕ್ಷಣ, ಉದ್ಯೋಗ, ವ್ಯವಹಾರ ನಿಮಿತ್ತ ದೂರದ ಊರುಗಳಲ್ಲಿ ನೆಲೆ ನಿಂತವರಿಗೆ ‘ಎಂಥ ಸ್ವರ್ಗ ಬಿಟ್ಟು ಬಂದೀವಲ್ಲ’ ಎನ್ನುವ ವೇದನೆಯೂ ಆಗುತ್ತಿರಬಹುದು. ಮಾಲಿನ್ಯಗೊಂಡಿರುವ ನಗರಗಳಲ್ಲಿ ಉಸಿರುಗಟ್ಟುವ ಜೀವನ ನಡೆಸುವ ನಗರವಾಸಿಗಳು ಜಗತ್ತಿನ ‘ಶುದ್ಧ ಆಮ್ಲಜನಕ’ ಉತ್ಪತ್ತಿಯ ಕೆಲವೇ ಕೆಲವು ತಾಣಗಳ ಪೈಕಿ ಒಂದೆನಿಸಿರುವ ಚಿಕ್ಕಮಗಳೂರನ್ನು ಅರಸಿ ಬರುತ್ತಿದ್ದಾರೆ. ಒತ್ತಡದ ಬದುಕು ಸಾಗಿಸುವವರಿಗೆ ದೇಹ, ಮನಸಿಗೆ ಚೈತನ್ಯ ಮರಳಿ ಪಡೆಯಲು ಇದೊಂದು ರೀತಿಯಲ್ಲಿ ‘ಪ್ರಕೃತಿ ಚಿಕಿತ್ಸಾ ಕೇಂದ್ರ’ದಂತೆ.
ದೂಳು, ಹೊಗೆ, ಮಲಿನ ಗಾಳಿ, ಉಸಿರುಗಟ್ಟಿಸುವ ಟ್ರಾಫಿಕ್ ಕಿರಿಕಿರಿ, ಬಿಸಿಲ ಧಗೆಗೆ ಒಮ್ಮೊಮ್ಮೆ ಕಾದ ಬಾಣಲೆಯಂತೆ ಕಾಣಿಸುವ ಬೆಂಗಳೂರಿನಲ್ಲಿ ದಿನ ಕಳೆಯುವಾಗ ಬಿಟ್ಟುಬಂದ ಊರು ‘ಮಲೆನಾಡು’ ಮತ್ತೆ ಮತ್ತೆ ಸೆಳೆಯುತ್ತದೆ. ರಾಜಧಾನಿಯಲ್ಲಿ ವಾರ ಕಳೆಯುವುದರೊಳಗೆ ಎಲ್ಲಿಯಾದರೂ ಮರಗಿಡ, ಗಿರಿ ಶಿಖರ, ನೀರ ತೊರೆ, ಬಾನಾಡಿ, ವನ್ಯಜೀವಿಗಳ ಸಾಮೀಪ್ಯವನ್ನು ಅರಸುವಂತೆ ಮಾಡುತ್ತದೆ.
ಬೆಳೆಯುತ್ತಿದೆ ಪ್ರವಾಸೋದ್ಯಮ
ಜಿಲ್ಲೆಗೆ ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಬರಿ ಹತ್ತು ಹದಿನೈದು ವರ್ಷಗಳ ಹಿಂದಕ್ಕೆ ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಕಾಫಿ ನಾಡು ಹಿಂದೆಂದಿಗಿಂತಲೂ ಪ್ರವಾಸೋದ್ಯಮಕ್ಕೆ ಹೆಚ್ಚು ತೆರೆದುಕೊಂಡಿದೆ. ಇನ್ನಷ್ಟು ತೆರೆದುಕೊಳ್ಳುತ್ತಲೇ ಇದೆ. ಪ್ರವಾಸಿಗರ ಅಗತ್ಯ ಈಡೇರಿಸುವ ನಿಟ್ಟಿನಲ್ಲಿ ನಗರದಲ್ಲಿ ಒಳ್ಳೆಯ ಹೋಟೆಲ್‌ಗಳು, ಲಾಡ್ಜ್‌ಗಳು, ಹೋಂ ಸ್ಟೇಗಳು, ಸರ್ವಿಸ್ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚುತ್ತಿದೆ.
ವಾರಾಂತ್ಯದ ದಿನಗಳಲ್ಲಿ ಕೊಠಡಿಗಳು ಭರ್ತಿಯಾಗಿರುತ್ತವೆ. ಸಾಲು ಸಾಲು ರಜೆ, ಹಬ್ಬದ ಸಂದರ್ಭಗಳಲ್ಲಿ ತಿಂಗಳು, ಹದಿನೈದು ದಿನ ಮುಂಚಿತವಾಗಿ ಕೊಠಡಿ ಕಾಯ್ದಿರಿಸಬೇಕಾದ ಪರಿಸ್ಥಿತಿ ಈಗಲೂ ಇದೆ.
ಹಾಗೆ ನೋಡಿದರೆ 2003–04ರ ಅವಧಿಯಲ್ಲಿ ಕಾಫಿ ನಾಡಿಗೆ ಹೋಂ ಸ್ಟೇ ಸಂಸ್ಕೃತಿ ಬಹಳ ಹೊಸತು. ಕೇರಳ, ನೆರೆಯ ಜಿಲ್ಲೆ ಕೊಡಗಿನಷ್ಟು ದೊಡ್ಡ ಮಟ್ಟದಲ್ಲಿ ಹೋಂ ಸ್ಟೇ ಸಂಸ್ಕೃತಿ ಬೆಳೆದಿರಲಿಲ್ಲ. 2011–12ರ ಅವಧಿಯಲ್ಲಿ ಈ ಜಿಲ್ಲೆಯಲ್ಲಿ ಹೋಂ ಸ್ಟೇ, ರೆಸಾರ್ಟ್ ವ್ಯಾಪಕವಾಗಿ ಹರಡಿಕೊಂಡಿದ್ದನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೇನೆ. ಈಗ ಹೋಂ ಸ್ಟೇ ಅಲ್ಲಿ ಎಷ್ಟಾಗಿವೆ ಎಂದರೆ ಸ್ಥಳೀಯರು ಹೇಳುವಂತೆ ‘ನಾಯಿ ಕೊಡೆ’ಯಂತೆ ಹೋ ಸ್ಟೇ, ರೆಸಾರ್ಟ್‌ಗಳಾಗಿವೆ.
ಎರಡು ವರ್ಷಗಳ ಹಿಂದೆ ಪರವಾನಗಿ ಹೊಂದಿದ್ದ ಹೋಂ ಸ್ಟೇ, ರೆಸಾರ್ಟ್‌ಗಳು ನೂರಕ್ಕಿಂತ ಹೆಚ್ಚಿರಲಿಲ್ಲ. ಈಗ ಅವುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ. ತಲಾ ಒಬ್ಬರಿಗೆ ದಿನಕ್ಕೆ ರೂ 1,200ರಿಂದ ರೂ 15,000ವರೆಗೂ ದರ ವಿಧಿಸುವ ಹೋಂ ಸ್ಟೇಗಳೂ ಇವೆ. ರೂ 20 ಸಾವಿರದಿಂದ ರೂ 70–80 ಸಾವಿರದವರೆಗೆ ದರ ವಿಧಿಸುವ ಸ್ಟಾರ್ ಹೊಟೆಲ್‌ಗಳು ಮತ್ತು ರೆಸಾರ್ಟ್‌ಗಳು ಕಾಫಿ ನಾಡಿನಲ್ಲಿವೆ. ಇವುಗಳ ಸಂಖ್ಯೆ ಹೆಚ್ಚಾದಷ್ಟು ಹೊಟೆಲ್, ರೆಸಾರ್ಟ್ ಉದ್ಯಮ ವೃದ್ಧಿಯಾಗಿ ಪ್ರವಾಸೋದ್ಯಮಕ್ಕೆ ಪೂರಕವಾಗುತ್ತವೆ ಎನ್ನುವ ವಾದವೂ ಸ್ಥಳೀಯರದು.
ಮರೆಯಲಾಗದ ಅನುಭವ!
ಕಾಫಿ ತೋಟದ ನಡುವೆ, ಗದ್ದೆ ಬಯಲುಗಳ ಮಧ್ಯೆ, ಅರಣ್ಯದಂಚಿನಲ್ಲಿ, ಬಾಬಾ ಬುಡನ್ ಗಿರಿ ಸಾಲು, ಕುದುರೆಮುಖದ ಆಸುಪಾಸಿನಲ್ಲಿರುವ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ, ಅರಣ್ಯ ಇಲಾಖೆ ಅತಿಥಿ ಗೃಹಗಳಲ್ಲಿ, ಜಂಗಲ್ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿ ರಾತ್ರಿ ಕಳೆಯುವ ಪ್ರವಾಸದ ಅನುಭವ ಅವಿಸ್ಮರಣೀಯ.
ಜಿಲ್ಲೆಯ ರಮ್ಯ ತಾಣಗಳಲ್ಲಿ ಪ್ರಮುಖವಾದ ಕೆಮ್ಮಣ್ಣುಗುಂಡಿ, ಮಲಯಮಾರುತ, ಚಾರ್ಮಾಡಿ, ಕುದುರೆಮುಖ ಪರಿಸರವು ಊಟಿ, ಕೇರಳದ ಮುನ್ನಾರ್‌ಗಿಂತ ಕಡಿಮೆಯದ್ದಲ್ಲ. ಇಲ್ಲಿನ ನಿಸರ್ಗದತ್ತ ಭೂ ದೃಶ್ಯಗಳು, ಮೈಮನಕ್ಕೆ ಕಚಗುಳಿ ಇಡುವ ಮೋಡಗಳನ್ನು ಕೈಸೆರೆ ಮಾಡಿಕೊಳ್ಳುವ ತವಕ, ಗಿರಿ ಮೇಲೆ ಇದ್ದಷ್ಟು ಹೊತ್ತು ಸಿಗುವ ತಣ್ಣನೆಯ ಹಿತಾನುಭವ ಮಲೆನಾಡಿನ ಪ್ರವಾಸವನ್ನು ಸದಾ ಮನಸಿನಲ್ಲಿ ಹಸಿರಾಗಿಡುತ್ತವೆ. ಅದರಲ್ಲೂ ಮಲೆನಾಡಿನ ಮಳೆಗಾಲದ ಅನುಭವ ವರ್ಣಿಸಲು ಪದಗಳೇ ಸಾಲದು.
ಮಲೆನಾಡಿನ ವಿಶೇಷ ಖಾದ್ಯ
ಮಲೆನಾಡಿನ ಹೋಂಸ್ಟೇಗಳಲ್ಲಿ ವಾಸ್ತವ್ಯ ಮಾಡುವ ಅತಿಥಿಗಳಿಗೆ (ಪ್ರವಾಸಿಗರಿಗೆ) ಅಕ್ಕಿ ರೊಟ್ಟಿ, ಕಡುಬು, ನೀರ್ ದೋಸೆ, ಶಾವಿಗೆ, ನಾಟಿ ಕೋಳಿ ಸಾರು, ಅಣಬೆ (ಮಳೆಗಾಲದ ಕಾಡಣಬೆ) ಸಾರು, ಹಳ್ಳದ ಮೀನು, ಏಡಿ ಸಾರು, ಹುರಿದ ಹಂದಿ ಮಾಂಸದ (ಸದಾ ಕಾಲ) ರುಚಿಯನ್ನು ಸವಿಯುವ ಅವಕಾಶವಿದೆ.
ಮತ್ತೇಕೆ ತಡ!
ನಿಸರ್ಗ ಸೌಂದರ್ಯ ಮೈತಳೆದ ತಾಣಗಳು, ಚಾರಣಪ್ರಿಯರಿಗೂ ಅಚ್ಚುಮೆಚ್ಚಿನ ಚಾರಣ ತಾಣಗಳು, ಯಾತ್ರಾರ್ಥಿಗಳಿಗೆ ನೆಮ್ಮದಿ ನೀಡುವ ಶ್ರದ್ಧಾಭಕ್ತಿಯ ಧಾರ್ಮಿಕ ಸ್ಥಳಗಳು ಮಲೆನಾಡಿನ ಮಡಿಲಲ್ಲಿವೆ.
ಎಲ್ಲ ತಯಾರಿಯೊಂದಿಗೆ ಎರಡು ಮೂರು ದಿನ ಬಿಡುವು ಮಾಡಿಕೊಂಡು ಕಾಫಿನಾಡಿನತ್ತ ಪಯಣ ಆರಂಭಿಸಿದರೆ ‘ಭೂಮಿ ಮೇಲಿನ ಸ್ವರ್ಗ’ ಕಣ್ಣಾರೆ ನೋಡಿ ಅನುಭವಿಸಬಹುದು. ಅವಿಸ್ಮರಣೀಯ ಬುತ್ತಿಯನ್ನು ಕಟ್ಟಿಕೊಂಡು ಬರಬಹುದು.
**
ಪ್ರವಾಸ ಹೀಗೆ ಆರಂಭಿಸಿ
ಚಿಕ್ಕಮಗಳೂರು ನಗರದಿಂದ ಕೈಮರ ಮಾರ್ಗವಾಗಿ ಸೀತಾಳಯ್ಯನ ಗಿರಿ, ಮುಳ್ಳಯ್ಯನ ಗಿರಿ ನೋಡಿಕೊಂಡು, ಬಾಬಾ ಬುಡನ್ ಗಿರಿಯತ್ತ ಹೊರಟರೆ, ಹೊನ್ನಮ್ಮನ ಹಳ್ಳದಲ್ಲಿ ಧುಮ್ಮಿಕ್ಕುವ ನೀರ ಝರಿ, ಹತ್ತಿರದಲ್ಲೇ ಇರುವ ಮಾಜಿ ಸಚಿವ ಸಗೀರ್ ಅಹ್ಮದ್ ಅವರ ತೋಟದಲ್ಲಿನ ಸಗೀರ್ ಅಹಮದ್ ಫಾಲ್ಸ್ ನೋಡಬಹುದು.
ಕವಿಕಲ್ ಗಂಡಿಯಲ್ಲಿ ನಿಂತರೆ ಸುತ್ತಲೂ ನೋಡಲು ಸಿಗುವ ಕಲಾವಿದನ ಕುಂಚದಲ್ಲಿ ಅರಳಿದಂತೆ ಕಾಣುವ ಚಿತ್ರಕಾವ್ಯದಂತಹ ನೈಸರ್ಗಿಕ ಭೂದೃಶ್ಯ ಎಂಥವರನ್ನೂ ಪುಳಕಿತಗೊಳಿಸುತ್ತದೆ. ಮುಂದೆ ಬಾಬಾ ಬುಡನ್ ಗಿರಿಯತ್ತ ಪ್ರಯಾಣ ಬೆಳೆಸಿದರೆ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಗುಹೆ ನೋಡಿಕೊಂಡು, ಅಲ್ಲಿಂದ ಮುಂದೆ ಸಾಗಿದರೆ ಗಾಳಿಕೆರೆಯ ಸೌಂದರ್ಯ, ಮಾಣಿಕ್ಯಧಾರಾ ಜಲಪಾತದ ಸೊಬಗು ಕಣ್ತುಂಬಿಕೊಳ್ಳಬಹುದು.
ಇದೇ ಸರಹದ್ದಿಗೆ ಹೊಂದಿಕೊಂಡಂತಿರುವ ತರೀಕೆರೆ ತಾಲ್ಲೂಕಿನ ಕೆಮ್ಮಣ್ಣುಗುಂಡಿಗೆ ಪಯಣ ಬೆಳೆಸಿದರೆ ಅಲ್ಲಿನ ರಮಣೀಯ ತಾಣ ಬೆರಗು ಮೂಡಿಸುತ್ತದೆ. ಕೆಮ್ಮಣ್ಣುಗುಂಡಿ ಹತ್ತಿರದಲ್ಲೇ ಇರುವ ಹೆಬ್ಬೆ ಜಲಪಾತ, ಕಲ್ಲತ್ತಗಿರಿ ಜಲಪಾತದ ಅಂದ ಕಣ್ತುಂಬಿಕೊಳ್ಳಬಹುದು.
ಇದಕ್ಕೆ ಸಮೀಪದ ಲಕ್ಕವಳ್ಳಿಯ ಜಲಾಶಯದ ನಡುಗಡ್ಡೆಗಳಲ್ಲಿರುವ ಜಂಗಲ್ ರೆಸಾರ್ಟ್ ವಾಸ್ತವ್ಯ ಮತ್ತು ಭದ್ರಾ ಹಿನ್ನೀರಿನ ದೋಣಿ ವಿಹಾರವೂ ರೋಮಾಂಚನಕಾರಿ. ಮಲ್ಲಂದೂರು ಮಾರ್ಗವಾಗಿ ಮುತ್ತೋಡಿ ಅಭಯಾರಣ್ಯ ಹೊಕ್ಕರೆ ಹುಲಿ ಸಫಾರಿ ಸಿಗುತ್ತದೆ. ಕೊಟ್ಟಿಗೆಹಾರದ ಮಲಯಮಾರುತ, ಕಳಸ, ಬಾಳೆಹೊನ್ನೂರು ಸುತ್ತಮುತ್ತಲಿನ ಚಹಾ ತೋಟಗಳು, ಕುದುರೆಮುಖದ ನೈಸರ್ಗಿಕ ಭೂದೃಶ್ಯಗಳು ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬವೇ ಸರಿ.
**
ವಾಸ್ತವ್ಯಕ್ಕೆ ಸೌಲಭ್ಯ:ಬಾಬಾಬುಡನ್ ಗಿರಿ ಶ್ರೇಣಿ, ಭದ್ರಾ ಅಭಯಾರಣ್ಯ, ಕುದುರೆಮುಖ, ಭದ್ರಾ ನದಿ ಅಂಚುಗಳಲ್ಲಿ, ಕಾಫಿ ತೋಟಗಳ ನಡುವೆ ಹೋಂ ಸ್ಟೇಗಳು ದಂಡಿಯಾಗಿವೆ. ಪ್ರವಾಸಿ ತಾಣಗಳ ಸುತ್ತಮುತ್ತ 10ರಿಂದ 15 ಕಿ.ಮೀ ವ್ಯಾಪ್ತಿಯೊಳಗೆ ವಾಸ್ತವ್ಯಕ್ಕೆ, ಊಟ ತಿಂಡಿಗೆ ಸೌಕರ್ಯಗಳೂ ಉಂಟು.
ಸಾರಿಗೆ ಸೌಲಭ್ಯ:ಬೆಂಗಳೂರಿನಿಂದ ಬಸ್, ರೈಲು ಸೌಲಭ್ಯವೂ ಇದೆ. ಮಂಗಳೂರು, ಉಡುಪಿ, ಶಿವಮೊಗ್ಗ, ಮೈಸೂರು, ದಾವಣಗೆರೆ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿಯಿಂದಲೂ ನೇರ ಬಸ್ ಸೌಲಭ್ಯ ಇದೆ. ಟ್ಯಾಕ್ಸಿ, ಜೀಪು, ಕ್ಯಾಬ್, ಬೈಕುಗಳು ಬಾಡಿಗೆಗೆ ದೊರೆಯುತ್ತವೆ.
**
ನೋಡಲೇ ಬೇಕಾದ ಸ್ಥಳಗಳು
ಜಲಪಾತಗಳು
01 | ಮಾಣಿಕ್ಯಧಾರಾ ಜಲಪಾತ |
02 | ಹೆಬ್ಬೆ ಜಲಪಾತ |
03 | ಕಲ್ಲತ್ತಗಿರಿ ಜಲಪಾತ |
04 | ಸಗೀರ್ ಅಹಮದ್ ಫಾಲ್ಸ್ |
05 | ಕಾಡಂಬಿ |
06 | ಸಿರಿಮನೆ ಜಲಪಾತ |
ಇವು ವರ್ಷಪೂರ್ತಿ ಧುಮ್ಮಿಕ್ಕುವ ಜಲಪಾತಗಳು. ಇದಲ್ಲದೆ, ಮಳೆಗಾಲದಲ್ಲಿ ಬಾಬಾ ಬುಡನ್ ಗಿರಿ ಶ್ರೇಣಿ, ಕುದುರೆಮುಖ ರಾಷ್ಟ್ರೀಯ ಉದ್ಯಾನ, ಚಾರ್ಮಾಡಿಯಲ್ಲಿ, ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಹಲವು ‘ಜಲ ಕನ್ಯೆಯರು’ ಜೀವ ತಳೆದು, ನಿಸರ್ಗ ಸೌಂದರ್ಯ ಇಮ್ಮಡಿಗೊಳಿಸುತ್ತವೆ.
ಧಾರ್ಮಿಕ ತಾಣಗಳು
01 | ಶೃಂಗೇರಿ ಶಾರದೆ ಪೀಠ |
02 | ಕಿಗ್ಗದ ಋಷ್ಯ ಶೃಂಗ (ಮಳೆ ದೇವರು ಎಂಬ ಹೆಸರಿದೆ) |
03 | ಹೊರನಾಡು ಅನ್ನಪೂರ್ಣೇಶ್ವರಿ |
04 | ಕಳಸದ ಕಳಸೇಶ್ವರ |
05 | ಖಾಂಡ್ಯದ ಮಾರ್ಖಂಡೇಶ್ವರ |
06 | ಬಾಳೆಹೊನ್ನೂರು ರಂಭಾಪುರಿ ಪೀಠ |
07 | ಸೀತಾಳಯ್ಯನ ಗಿರಿ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ |
08 | ಮುಳ್ಳಯನಗಿರಿ ಮುಳ್ಳಪ್ಪ ಸ್ವಾಮಿ ಗದ್ದುಗೆ |
09 | ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ (ದತ್ತಾತ್ರೇಯ ಪೀಠ) |
10 | ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ದೇವಸ್ಥಾನ |
ನಿಸರ್ಗ ಸೊಬಗಿನ ತಾಣಗಳು
01 | ಬಾಬಾ ಬುಡನ್ ಗಿರಿಯ ಶೋಲಾ ಅರಣ್ಯಗಳು |
02 | ಕೆಮ್ಮಣ್ಣುಗುಂಡಿ |
03 | ಅಯ್ಯನಕೆರೆ |
04 | ಹಿರೆಕೊಳಲೆ ಕೆರೆ |
05 | ರತ್ನಗಿರಿ ಬೋರೆ(ಮಹಾತ್ಮ ಗಾಂಧಿ ಪಾರ್ಕ್) |
06 | ಭದ್ರಾ ಅಭಯಾರಣ್ಯ |
07 | ಭದ್ರಾ ಜಲಾಶಯ |
08 | ಕುದುರೆಮುಖದ ನಿಸರ್ಗ ಭೂದೃಶ್ಯಗಳು |
09 | ಗಣಿ ತ್ಯಾಜ್ಯದ ಹೂಳು ಸಂಗ್ರಹಿಸಿರುವ ಲಕ್ಯಾ ಡ್ಯಾಂ |
10 | ಕಳಸ- ಬಾಳೆಹೊನ್ನೂರು ಸುತ್ತಮುತ್ತಲಿನ ಚಹಾ ತೋಟಗಳು |
11 | ಮಲಯಮಾರುತ |
ಚಾರಣಕ್ಕೆ ಪ್ರಮುಖ ತಾಣಗಳು
01 | ಕುದುರೆಮುಖ ಶಿಖರ |
02 | ನರಸಿಂಹ ಪರ್ವತ |
03 | ಗಂಗಡಿ ಕಲ್ಲು |
04 | ಕುರಿ ಅಂಗಲ್ |
05 | ಎತ್ತಿನ ಭುಜ |
06 | ಶಿಲ್ಪ ಕಲೆಯ ದೇಗುಲಗಳು |
07 | ಬೆಳವಾಡಿಯ ವೀರನಾರಾಯಣ ದೇವಸ್ಥಾನ |
08 | ತರಿಕೆರೆಯ ಅಮೃತಾಪುರದ ಅಮೃತೇಶ್ವರ ದೇವಸ್ಥಾನ |
ಇಷ್ಟೆ ಅಲ್ಲ, ಕಾಫಿ ನಾಡಿನ ಸನಿಹದಲ್ಲೇ ಇರುವ ಬೇಲೂರು, ಹಳೆಬೀಡಿನ ಹೊಯ್ಸಳರ ದೇವಾಲಯಗಳ ಶಿಲ್ಪಕಲೆ ಕಣ್ತುಂಬಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.