ಖಾಸಗಿತನ’ ಎಂಬುದಕ್ಕೆ ವ್ಯಾಖ್ಯಾನವೇನು? ತೀರಾ ನಿಖರವಾಗಿ ಇದರ ವ್ಯಾಖ್ಯಾನ ಹೇಳಲಾಗದೆ ಇದ್ದರೂ ನಾವು ಈ ಪದದ ಅರ್ಥವನ್ನು ತಕ್ಷಣಕ್ಕೆ ಗ್ರಹಿಸುತ್ತೇವೆ. ‘ತನ್ನ ಪಾಡಿಗೆ ತಾನಿದ್ದುಬಿಡುವ ಹಕ್ಕು ಇದು’ ಎಂದು ನಾವು ಇದನ್ನು ಸಾಮಾನ್ಯವಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಬೇರೆ ಬೇರೆ ಸಂದರ್ಭಗಳಲ್ಲಿ ಇದು ಬೇರೆ ಬೇರೆ ಅರ್ಥ ನೀಡುತ್ತದೆ.
ನೀವೊಬ್ಬ ಪುರುಷ ಎಂದು ಭಾವಿಸಿ. ನೀವು ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದೀರಿ ಎಂಬ ಆರೋಪ ಎದುರಾಗಿದೆ. ಪೊಲೀಸರು ನಿಮ್ಮನ್ನು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ವೀರ್ಯದ ಮಾದರಿ ಬೇಕು. ಹಸ್ತಮೈಥುನ ಮಾಡಿಕೊಳ್ಳಿ ಎಂದು ಪೊಲೀಸರು ಹೇಳುತ್ತಾರೆ. ಹಾಗೆ ಮಾಡಲು ನಿರಾಕರಿಸಿದರೆ, ಬಲವಂತವಾಗಿ ಅದನ್ನು ಮಾಡಿಸಲಾಗುತ್ತದೆ ಎಂದು ಪೊಲೀಸರು ಬೆದರಿಸುತ್ತಾರೆ. ಹಾಗೆ ಮಾಡಲು ಪೊಲೀಸರಿಗೆ ಅಪರಾಧ ದಂಡಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 53(ಎ) ಅಡಿ ಅಧಿಕಾರವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮಗೆ ನಿಮ್ಮ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅನಿಸುತ್ತದೆಯಾ? ಈ ಕಾನೂನು ನಿಮ್ಮಲ್ಲಿ ಆತಂಕ ಮೂಡಿಸುವುದಿಲ್ಲ ಎಂದಾದರೆ ಕಾಲ್ಪನಿಕ ಸಂದರ್ಭವೊಂದರ ಉದಾಹರಣೆ ನೀಡುತ್ತೇನೆ.
ಜನಗಣತಿ ಪ್ರಕ್ರಿಯೆ ಬಗ್ಗೆ ನಿಮಗೆ ಅರಿವಿದ್ದಿರಬೇಕು. ವಯಸ್ಕ ವ್ಯಕ್ತಿ ತನ್ನ ಗುಪ್ತಾಂಗಗಳ ಗಾತ್ರದ ಬಗ್ಗೆ ಮಾಹಿತಿಯನ್ನು ಜನಗಣತಿ ಅಧಿಕಾರಿಗೆ ನೀಡಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಭಾವಿಸಿ. ಇದು ನಿಮ್ಮಲ್ಲಿ ಆಕ್ರೋಶ ಮೂಡಿಸುತ್ತದೆಯೇ? ತುಸು ಸಾವಧಾನವಾಗಿರಿ. ಇದು ಖಾಸಗಿತನಕ್ಕೆ ಸಂಬಂಧಿಸಿದ ವಿಚಾರ.
ಭಾರತದಲ್ಲಿರುವುದು ಲಿಖಿತ ಸಂವಿಧಾನ. ಇದರ ಅಡಿ ಸಂಸತ್ತು ಅಥವಾ ರಾಜ್ಯಗಳ ಶಾಸನಸಭೆಗಳಿಗೆ ಅನಿಯಂತ್ರಿತ ಅಧಿಕಾರ ಇಲ್ಲ. ಕೆಲವು ಹಕ್ಕುಗಳನ್ನು ಪ್ರಜೆಗಳಿಗೆ ಸಂವಿಧಾನ ನೀಡಿದೆ. ಸರ್ಕಾರಗಳು ಕಿತ್ತುಕೊಳ್ಳಲಾಗದ ಇವುಗಳನ್ನು ‘ಮೂಲಭೂತ ಹಕ್ಕುಗಳು’ ಎಂದು ಕರೆಯಲಾಗಿದೆ. ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕಾನೂನನ್ನು ಸಾಂವಿಧಾನಿಕ ಕೋರ್ಟ್‌ಗಳು ರದ್ದು ಮಾಡುತ್ತವೆ. ಈ ಹಕ್ಕುಗಳನ್ನು ಸಂವಿಧಾನದ 14ರಿಂದ 32ರವರೆಗಿನ ವಿಧಿಗಳಲ್ಲಿ ಹೇಳಲಾಗಿದೆ. ಪ್ರತಿ ವಿಧಿಯೂ ಒಂದು ವಿಷಯದ ಬಗ್ಗೆ ಮಾತನಾಡುತ್ತದೆ. ಹಕ್ಕುಗಳನ್ನು ವಿವರಿಸಿದ ನಂತರ, ಅವುಗಳ ಮೇಲೆ ವಿಧಿಸಬಹುದಾದ ನಿರ್ಬಂಧಗಳು ಯಾವುವು ಎಂಬುದನ್ನೂ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಯಾವುದೇ ಮೂಲಭೂತ ಹಕ್ಕು ‘ಖಾಸಗಿತನದ ಹಕ್ಕು’ ಎಂಬ ಮಾತನ್ನು ಹೇಳುವುದಿಲ್ಲ. ಇದರ ಅರ್ಥ ಸಂವಿಧಾನದ ಅಡಿ ಖಾಸಗಿತನದ ಹಕ್ಕು ಇಲ್ಲ ಎಂದಾಗುತ್ತದೆಯೇ?
ಗೋಪಾಲನ್-ಕೂಪರ್ ಪ್ರಕರಣ
ಸಂವಿಧಾನ ಜಾರಿಗೆ ಬಂದ ಎರಡು ತಿಂಗಳೊಳಗೆ ಸುಪ್ರೀಂ ಕೋರ್ಟ್‌ಗೆ ಒಂದು ಅರ್ಜಿ ಬಂತು. ಮುಂಜಾಗರೂಕತೆಯ ಕ್ರಮವಾಗಿ ಬಂಧಿಸುವ ಕಾನೂನಿನ ಅಡಿ ಈ ಅರ್ಜಿದಾರರನ್ನು ಮದ್ರಾಸ್ ಸರ್ಕಾರ ಬಂಧಿಸಿತ್ತು. ಮುಂಜಾಗರೂಕತೆ ಕ್ರಮವಾಗಿ ಬಂಧಿಸುವ ಕಾನೂನನ್ನು ಅಮಾನ್ಯಗೊಳಿಸಲು ಸುಪ್ರೀಂ ಕೋರ್ಟ್ ಬೇರೆ ಬೇರೆ ಮೂಲಭೂತ ಹಕ್ಕುಗಳನ್ನು ಒಗ್ಗೂಡಿಸಿ ಓದಿಕೊಳ್ಳಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ಹಾಗೆ ಒಗ್ಗೂಡಿಸಿ ಓದಿಕೊಂಡಾಗ ಮಾತ್ರ ತನಗೆ ಆದ ಅನ್ಯಾಯ ಏನೆಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದ್ದರು. ಆದರೆ, ಈ ಮನವಿಗೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಎರಡೂವರೆ ತಿಂಗಳ ನಂತರ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಆರು ನ್ಯಾಯಮೂರ್ತಿಗಳ ಪೀಠವು, ಪ್ರತಿ ಮೂಲಭೂತ ಹಕ್ಕನ್ನೂ ಪ್ರತ್ಯೇಕವಾಗಿಯೇ ಓದಿಕೊಳ್ಳಬೇಕು ಎಂದು ಹೇಳಿತು. ಎ.ಕೆ. ಗೋಪಾಲನ್ ಪ್ರಕರಣ ಎಂದೇ ಹೆಸರಾದ ಇದರಲ್ಲಿ ಸರ್ಕಾರ ಗೆದ್ದಿತು.
ಎ.ಕೆ. ಗೋಪಾಲನ್ ಪ್ರಕರಣದಲ್ಲಿ ಕೋರ್ಟ್ ಅನುಸರಿಸಿದ ಆಲೋಚನಾಕ್ರಮ ಸಂಪೂರ್ಣವಾಗಿ ಬದಲಾಗಿದ್ದಕ್ಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ನಾವು ಕೃತಜ್ಞರಾಗಿರಬೇಕು. ದೇಶದ ಬ್ಯಾಂಕಿಂಗ್ ವಲಯವನ್ನು ರಾಷ್ಟ್ರೀಕರಣಗೊಳಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ 1969ರ ಜುಲೈ 19ರಂದು ಹೊರಡಿಸಿತು. ಇದಾದ ಏಳು ತಿಂಗಳಲ್ಲಿ, ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ಎ.ಕೆ. ಗೋಪಾಲನ್ ಪ್ರಕರಣದಲ್ಲಿ ನೀಡಿದ ತೀರ್ಪು ಇನ್ನು ಮುಂದೆ ಅನ್ವಯವಾಗದು. ಮೂಲಭೂತ ಹಕ್ಕುಗಳನ್ನು ಒಟ್ಟಾಗಿಯೇ ಓದಲಾಗುತ್ತದೆ’ ಎಂದು ಕೋರ್ಟ್ ಹೇಳಿತು. ಇದಾಗಿದ್ದು 1970ರಲ್ಲಿ. ಇದನ್ನು ಆರ್.ಸಿ. ಕೂಪರ್ ಪ್ರಕರಣ ಎನ್ನಲಾಗುತ್ತದೆ.
ಈಗ ನಿಮ್ಮಲ್ಲಿ ಈ ರೀತಿಯ ಪ್ರಶ್ನೆಗಳು ಮೂಡುತ್ತವೆ: ‘ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಎಲ್ಲಿಯೂ ಹೇಳಿಲ್ಲ ಎಂದಾದರೆ, 14ರಿಂದ 32ರವರೆಗಿನ ವಿಧಿಗಳನ್ನು ಒಟ್ಟಾಗಿ ಓದಿದರೂ, ಓದದಿದ್ದರೂ ಆಗುವ ವ್ಯತ್ಯಾಸ ಏನು? ಮೂಲಭೂತ ಹಕ್ಕುಗಳನ್ನು ಒಟ್ಟಿಗೆ ಓದಿಕೊಂಡ ಮಾತ್ರಕ್ಕೆ, ಅಸ್ತಿತ್ವದಲ್ಲೇ ಇಲ್ಲದ ಖಾಸಗಿತನ ಎಂಬ ಹಕ್ಕು ಜನ್ಮತಾಳುತ್ತದೆಯೇ? ಕಾಲ್ಪನಿಕ ಜನಗಣತಿ ಕಾನೂನಿನ ಅಡಿ ಜನಸಾಮಾನ್ಯರು ತೊಂದರೆ ಅನುಭವಿಸಲೇಬೇಕು ಅಲ್ಲವೇ?’
ಇವು ಅಮೂಲ್ಯವಾದ ಪ್ರಶ್ನೆಗಳು. ಹಾಗಂತ, ಈ ಪ್ರಶ್ನೆಗಳಿಗೆ ಉತ್ತರ ಕೂಡ ಸರಳವಾಗಿಯೇ ಇದೆ. ಬೇರೆ ಬೇರೆ ಮೂಲಭೂತ ಹಕ್ಕುಗಳನ್ನು ಸುಪ್ರೀಂ ಕೋರ್ಟ್ ಒಟ್ಟಾಗಿ ಓದಿಕೊಳ್ಳಲು ಆರಂಭಿಸಿದ ನಂತರ ಕೆಲವು ಮೂಲಭೂತ ಹಕ್ಕುಗಳು ವಿಸ್ತೃತ ಅರ್ಥವನ್ನು ಪಡೆದುಕೊಂಡವು. ನಮ್ಮ ಮೂಲಭೂತ ಹಕ್ಕುಗಳನ್ನು ಬಿಡಿಬಿಡಿಯಾಗಿ ಓದಿಕೊಂಡಾಗ ಸಿಗುವ ಅರ್ಥ ಒಂದಾದರೆ, ಒಟ್ಟಾಗಿ ಸೇರಿಸಿ ಓದಿದಾಗ ಸಿಗುವ ಅರ್ಥವೇ ಬೇರೆ. ಒಟ್ಟಾಗಿ ಓದಿದಾಗ, ಮೊದಲು ಕಾಣಿಸದಿದ್ದ ಹಕ್ಕುಗಳು ಕೋರ್ಟ್‌ಗೆ ಕಾಣಿಸಿದವು. ಸಂವಿಧಾನ ಜಾರಿಗೆ ಬಂದ ಮೊದಲ 27 ವರ್ಷಗಳ ಅವಧಿಯಲ್ಲಿ ಗುರುತಿಸದಿದ್ದ ಹೊಸ ಮೂಲಭೂತ ಹಕ್ಕುಗಳನ್ನು ನಮ್ಮ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಕಳೆದ 40 ವರ್ಷಗಳ ಅವಧಿಯಲ್ಲಿ ಕಂಡುಕೊಂಡಿವೆ.
ಖಾಸಗಿತನ ಎನ್ನುವುದು ಮೂಲಭೂತ ಹಕ್ಕೇ ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಧೋರಣೆ ಆರಂಭದ ಕೆಲವು ದಶಕಗಳಲ್ಲಿ ಈ ರೀತಿ ಇತ್ತು: 1954ರಲ್ಲಿ ಪೊಲೀಸರು ಕೆಲವು ಕಂಪೆನಿಗಳ ಆವರಣಗಳ ಮೇಲೆ ದಾಳಿ ನಡೆಸಿದ್ದರು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಈ ಕಂಪೆನಿಗಳ ಅಧಿಕಾರಿಗಳು ತಮ್ಮ ವಾದ ಮಂಡಿಸಿದ್ದರು. ಯಾವುದೇ ಆರೋಪಿ ಕೋರ್ಟ್‌ನಲ್ಲಿ ತಪ್ಪೊಪ್ಪಿಗೆ ನೀಡುವಂತೆ ಒತ್ತಾಯಿಸಬಾರದು ಎಂದು ಸಂವಿಧಾನದ 20(3)ನೇ ವಿಧಿ ಹೇಳುತ್ತದೆ. ಆರೋಪಿಯು, ಅಪರಾಧ ಎಸಗಿದ್ದೇನೆಂದು ಹೇಳುವಂತೆ ಪೊಲೀಸರು ಬಲವಂತ ಮಾಡುವಂತಿಲ್ಲ, ಬಲವಂತದ ಮೂಲಕ ಹೇಳಿಸಿದ ತಪ್ಪೊಪ್ಪಿಗೆಯನ್ನು ನ್ಯಾಯಾಲಯಗಳಲ್ಲಿ ಸಾಕ್ಷ್ಯವಾಗಿ ಹಾಜರುಪಡಿಸುವಂತಿಲ್ಲ. ಶಿಕ್ಷೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿಂದ ವ್ಯಕ್ತಿ ತಾನಾಗಿಯೇ ತಪ್ಪೊಪ್ಪಿಕೊಳ್ಳಲು ನಿರ್ಬಂಧವಿಲ್ಲ.
‘ತಪ್ಪನ್ನು ತೋರಿಸುವ ದಾಖಲೆಗಳನ್ನು ಪೊಲೀಸರು ಕಂಪೆನಿಗಳ ಆವರಣದಿಂದ ಬಲವಂತವಾಗಿ ಕೊಂಡೊಯ್ದಿದ್ದಾರೆ. ಇದು 20(3)ನೇ ವಿಧಿಯ ಉಲ್ಲಂಘನೆ. ತಪ್ಪೊಪ್ಪಿಕೊಳ್ಳುವಂತೆ ವೈಯಕ್ತಿಕವಾಗಿ ಬಲವಂತ ಮಾಡದಿದ್ದರೂ, ತಪ್ಪನ್ನು ತೋರಿಸುವ ಸಾಕ್ಷ್ಯವನ್ನು ಬಲವಂತವಾಗಿ ಕೊಂಡೊಯ್ಯಲಾಗಿದೆ’ ಎಂಬಂತಹ ವಾದವನ್ನು ಕಂಪೆನಿಗಳ ಅಧಿಕಾರಿಗಳು ಮಂಡಿಸಿದ್ದರು. ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿರಲಿಲ್ಲ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಖಾಸಗಿತನದ ಹಕ್ಕಿನ ಬಗ್ಗೆ ಒಂದೇ ಒಂದು ಸಾಲು ಬರೆದಿತ್ತು. ಇದು ಎಂ.ಪಿ. ಶರ್ಮ ಮತ್ತು ಸತೀಶ್ ಚಂದ್ರ ನಡುವಿನ ಪ್ರಕರಣ ಎಂದೇ ಹೆಸರಾಗಿದೆ. ಇದೇ ಒಂದು ಸಾಲನ್ನು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ಎರಡು ವಾರಗಳ ಹಿಂದೆ ಪರಿಶೀಲಿಸುತ್ತಿತ್ತು. 1954ರ ತೀರ್ಪಿನಲ್ಲಿದ್ದ ಆ ಒಂದು ಸಾಲಿನ ಕಾರಣಕ್ಕೇ ಕೇಂದ್ರ ಸರ್ಕಾರವು ಒಂಬತ್ತು ಜನ ನ್ಯಾಯಮೂರ್ತಿಗಳಿಂದ ವಿಚಾರಣೆ ನಡೆಯಲಿ ಎಂದು ಹೇಳಿತ್ತು. ಹಾಗಾದರೆ ಆ ಒಂದು ಸಾಲು ಏನು?
ದೇಶದಲ್ಲಿ ಈಗ ಇರುವುದು 1973ರ ಸಿಆರ್‌ಪಿಸಿ. ಅದಕ್ಕೂ ಮೊದಲು 1898ರ ಸಿಆರ್‌ಪಿಸಿ ಇತ್ತು. ಅದಕ್ಕೂ ಮೊದಲು 1861ರದ್ದು ಇತ್ತು. ಅಪರಾಧವೊಂದು ನಡೆದಿದೆ ಎಂಬ ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿ, ಅಪರಾಧ ನಡೆದ ಸ್ಥಳಕ್ಕೆ ಹೋಗಿ, ಬಂಧಿಸಿ, ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದು, ಸಾಕ್ಷ್ಯಗಳನ್ನು ಸಂಗ್ರಹಿಸಿ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲು ಅಗತ್ಯವಿರುವ ಇತರ ಅನೇಕ ಕೆಲಸಗಳನ್ನು ಮಾಡಬಹುದು ಎಂದು ಈ ಎಲ್ಲ ಸಂಹಿತೆಗಳೂ ಹೇಳಿವೆ. ಪೊಲೀಸರಿಗೆ ಇರುವ ಈ ಅಧಿಕಾರಕ್ಕೆ ಕಡಿವಾಣ ಹಾಕಬೇಕೇ ಎಂಬ ಚರ್ಚೆ ಸಂವಿಧಾನದ ಕರಡು ರಚನೆಯ ವೇಳೆ ನಡೆದಿತ್ತು. ವ್ಯಕ್ತಿಯ ಖಾಸಗಿ ಪ್ರದೇಶವನ್ನು ಪ್ರವೇಶಿಸುವ ಮೊದಲು ಪೊಲೀಸರು ಮ್ಯಾಜಿಸ್ಟ್ರೇಟರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕೇ ಎಂಬ ಪ್ರಶ್ನೆ ಸಂವಿಧಾನ ನಿರ್ಮಾತೃರ ಎದುರು ಇತ್ತು.
ಪೊಲೀಸರ ಅಧಿಕಾರವನ್ನು ಹೀಗೆ ನಿರ್ಬಂಧಿಸುವುದನ್ನು ಆ ಸಂದರ್ಭದಲ್ಲಿ ‘ಪ್ರಜೆಗಳ ಖಾಸಗಿತನದ ಹಕ್ಕು’ ಎಂದು ಹೇಳಲಾಗಿತ್ತು. ಪೊಲೀಸರಿಗೆ ನೀಡಿರುವ ಅಧಿಕಾರವು ಸರಿಸುಮಾರು ಒಂದು ಶತಮಾನದಿಂದ ಜಾರಿಯಲ್ಲಿದೆ. ಹಾಗಾಗಿ ಅದನ್ನು ನಿರ್ಬಂಧಿಸುವುದು ಬೇಡ ಎಂಬ ನಿರ್ಣಯಕ್ಕೆ ಬರಲಾಯಿತು. ಇದನ್ನು ಆಧಾರವಾಗಿ ಇಟ್ಟುಕೊಂಡು, ಕಂಪೆನಿಗಳ ಆವರಣದ ಮೇಲೆ ನಡೆದ ಪೊಲೀಸ್ ದಾಳಿಯು ‘ಖಾಸಗಿತನವೆಂಬ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಕಂಪೆನಿಗಳ ಅಧಿಕಾರಿಗಳು 1954ರಲ್ಲಿ ವಾದಿಸಿದ್ದರು.
ಅಪರಾಧ ಎಸಗಿದ ಆರೋಪ ಎದುರಿಸುತ್ತಿರುವವರಿಗೆ ಇಂಥದ್ದೊಂದು ‘ಖಾಸಗಿತನದ ಹಕ್ಕು’ ಅಗತ್ಯವಿಲ್ಲ ಎಂದು ಸಂವಿಧಾನ ರೂಪಿಸಿದವರು ಹೇಳಿದ್ದು ನಿಜ. ಹಾಗಾಗಿ, ಈ ಬಗೆಯ ಖಾಸಗಿತನವು ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್ 1954ರಲ್ಲಿ ನೇರವಾಗಿ ಹೇಳಿತು. ಆ ಪ್ರಕರಣದಲ್ಲಿ ಹಾಗೆ ಹೇಳಿದ್ದು ಸರಿಯಾಗಿಯೇ ಇತ್ತು.
1962ರಲ್ಲಿ ಸುಪ್ರೀಂ ಕೋರ್ಟ್ ಆರು ನ್ಯಾಯಮೂರ್ತಿಗಳ ಪೀಠವು, ‘ಖಾಸಗಿತನ’ ಮೂಲಭೂತ ಹಕ್ಕಲ್ಲ ಎಂಬುದನ್ನು ಕೆಲವು ಸಾಲುಗಳಲ್ಲಿ ಹೇಳಿತು. ಪೊಲೀಸರ ಕಣ್ಗಾವಲಿನಲ್ಲಿ ಇದ್ದ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಪ್ರಕರಣ ಇದಾಗಿತ್ತು. ಪೊಲೀಸರು ತನ್ನ ಚಲನವಲನಗಳ ಮೇಲೆ ರಹಸ್ಯವಾಗಿ ಕಣ್ಣಿಟ್ಟಿದ್ದಾರೆ ಎಂದು ಆತ ದೂರಿದ್ದ. ಪೊಲೀಸರು ಆ ವ್ಯಕ್ತಿಗೆ ತಿಳಿಯದ ರೀತಿಯಲ್ಲಿ, ಆತನ ಚಲನವಲನಗಳನ್ನು ದೂರದಿಂದಲೇ ಗಮನಿಸುತ್ತಿದ್ದರೆ ಆತ ಆ ಬಗ್ಗೆ ದೂರುವಂತೆ ಇಲ್ಲ ಎಂದು ಕೋರ್ಟ್ ಹೇಳಿತು. ಅಂದರೆ, 1962ರ ಅಂತ್ಯದ ಹೊತ್ತಿಗೆ ಖಾಸಗಿತನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎರಡು ತೀರ್ಪುಗಳನ್ನು (1954ರಲ್ಲಿ ಹಾಗೂ 1962ರಲ್ಲಿ) ಮಾತ್ರ ನೀಡಿತ್ತು. ಮೊದಲು ಹೇಳಿದ ಕಾಲ್ಪನಿಕ ಜನಗಣತಿ ಕಾಯ್ದೆಯಂತಹ ಯಾವುದಾದರೂ ಕಾಯ್ದೆ ಆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆಗೆ ಒಳಗಾಗಿದ್ದರೆ, ಕೋರ್ಟ್ ನ್ಯಾಯಶಾಸ್ತ್ರವನ್ನೇ ಬದಲಿಸುತ್ತಿತ್ತು. ತನ್ನ ದೇಶದ ಪ್ರಜೆಗಳಿಗೆ ನ್ಯಾಯ ಕೊಡಿಸುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಅದು ಆ ಕೆಲಸ ಮಾಡಿದೆ ಎಂಬುದೂ ನಿಜ. ಪ್ರಜೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಆಸ್ತಿ ಹೊಂದುವ ಹಕ್ಕನ್ನು ಸರ್ಕಾರಗಳು ಕಾರಣವಿಲ್ಲದೇ ಹತ್ತಿಕ್ಕುವಂತಿಲ್ಲ ಎಂದು ಸಂವಿಧಾನ ಹೇಳಿರುವಾಗ, ಅದೇ ಸರ್ಕಾರ ವ್ಯಕ್ತಿಯ ಖಾಸಗಿತನವನ್ನು ಗೌರವಿಸಬೇಕಿಲ್ಲ ಎನ್ನುವುದೇ ವಿಚಿತ್ರ ವಾದವಾಗುತ್ತದೆ. ವ್ಯಕ್ತಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಇದೆ. ಆಸ್ತಿ ಸಂಪಾದಿಸುವ ಸ್ವಾತಂತ್ರ್ಯ ಇದೆ. ಆದರೆ, ಖಾಸಗಿತನವನ್ನು ಕಾಯ್ದುಕೊಳ್ಳುವ ಸ್ವಾತಂತ್ರ್ಯವಿಲ್ಲ ಎನ್ನಲು ಸಾಧ್ಯವೇ?
ಇಂದಿರಾಗಾಂಧಿ ಅವರು ವೈಯಕ್ತಿಕವಾಗಿ ಎದುರಿಸುತ್ತಿರುವ ಅಭದ್ರತೆಯ ಭಾವವು, ಸಂವಿಧಾನದ 21ನೇ ವಿಧಿಗೆ ಸುಪ್ರೀಂ ಕೋರ್ಟ್ ವಿಸ್ತೃತ ಅರ್ಥವನ್ನು ಮುಂದಿನ ದಿನಗಳಲ್ಲಿ ಕೊಡುವುದಕ್ಕೆ ಕಾರಣವಾಯಿತು. ತಮ್ಮ ಸೊಸೆ ಮೇನಕಾ ಗಾಂಧಿ ಅವರು 1977ರಲ್ಲಿ ದೇಶದಿಂದ ಹೊರಗೆ ಹೋಗುವುದು ಇಂದಿರಾ ಅವರಿಗೆ ಇಷ್ಟವಿರಲಿಲ್ಲ. ಮೇನಕಾ ಗಾಂಧಿ ಅವರ ಪಾಸ್‌ಪೋರ್ಟ್ ಅನ್ನು 1977ರ ಜುಲೈ 2ರಂದು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಈ ಪ್ರಕರಣದಲ್ಲಿ ಕೋರ್ಟ್ 21ನೇ ವಿಧಿಗೆ ವಿಶಾಲ ಅರ್ಥ ನೀಡಿತು. ಆರ್.ಸಿ. ಕೂಪರ್ಸ್ ಪ್ರಕರಣ ಹಾಗೂ ಮೇನಕಾ ಗಾಂಧಿ ಪ್ರಕರಣ 21ನೇ ವಿಧಿಗೆ ವಿಶಾಲ ಅರ್ಥವನ್ನು ನೀಡಿದವು. ಈ ಎರಡು ಪ್ರಕರಣಗಳು ದೇಶದ ಸಾಂವಿಧಾನಿಕ ನ್ಯಾಯಶಾಸ್ತ್ರದ ದಿಕ್ಕನ್ನೇ ಬದಲಾಯಿಸಿದವು.
ಆರ್.ಸಿ. ಕೂಪರ್ಸ್ ಪ್ರಕರಣದ ಪರಿಣಾಮವಾಗಿ, ಖಾಸಗಿತನವನ್ನು 21ನೇ ವಿಧಿಯ ಭಾಗವನ್ನಾಗಿ ಕಂಡು 1975ರಲ್ಲಿ ಸುಪ್ರೀಂ ಕೋರ್ಟ್‌ನ ಸಣ್ಣ ನ್ಯಾಯಪೀಠವೊಂದು ‘ಖಾಸಗಿತನ ಮೂಲಭೂತ ಹಕ್ಕು’ ಎಂದು ಹೇಳಿತ್ತು. ಇದಾದ ನಂತರ ಖಾಸಗಿತನ ಎಂಬುದನ್ನು ಮೂಲಭೂತ ಹಕ್ಕನ್ನಾಗಿಯೇ ಕಾಣಲಾಯಿತು. ಇದರಲ್ಲಿ ಹಿಂದಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ. 1954 ಅಥವಾ 1962ರ ತೀರ್ಪುಗಳನ್ನು ಉಲ್ಲೇಖಿಸಿ ಸರ್ಕಾರ ಅಥವಾ ಬೇರೆ ಯಾರಾದರೂ, ‘ಖಾಸಗಿತನ ಮೂಲಭೂತ ಹಕ್ಕಲ್ಲ’ ಎಂದಿದ್ದರೆ ಅಂತಹ ವಾದವನ್ನು ನ್ಯಾಯಾಲಯಗಳು ನಿರ್ಲಕ್ಷಿಸುತ್ತಿದ್ದವು.
1975ರ ನಂತರ ದೇಶದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಖಾಸಗಿತನವನ್ನು ಮೂಲಭೂತ ಹಕ್ಕು ಎಂದೇ ಹೇಳಿವೆ. ಇದರ ಆಧಾರದ ಮೇಲೆ ಬೇರೆ ಬೇರೆ ಕಾನೂನುಗಳನ್ನು ಪರಿಶೀಲನೆಗೆ ಒಳಪಡಿಸಿವೆ. ವೇಶ್ಯೆಯೊಬ್ಬಳು ತನಗೆ ತನ್ನ ಪಾಡಿಗೆ ಇರುವ ಹಕ್ಕು ಇದೆ ಎಂದಾಗ, ಗೋಹತ್ಯೆ ತಡೆ ಕಾನೂನುಗಳ ಸಾಂವಿಧಾನಿಕ ಮಾನ್ಯತೆ ಪ್ರಶ್ನೆಗೆ ಒಳಗಾದಾಗ, ಚುನಾವಣೆ ವೇಳೆ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ನೀಡುವ ಮಾಹಿತಿಗಳ ಪ್ರಶ್ನೆ ಬಂದಾಗ, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವವರ ಮಂಪರು ಪರೀಕ್ಷೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ರಾಜಕೀಯ ವಿರೋಧಿಗಳ ಟೆಲಿಫೋನ್ ಕದ್ದಾಲಿಕೆ ಪ್ರಕರಣಗಳಲ್ಲಿ ಕೋರ್ಟ್‌ಗಳು ‘ಖಾಸಗಿತನ ಮೂಲಭೂತ ಹಕ್ಕು’ ಎಂಬ ಗಟ್ಟಿ ನಿಲುವಿನ ಆಧಾರದಲ್ಲೇ ವಿಚಾರಣೆ ನಡೆಸಿವೆ. ಖಾಸಗಿತನ ಎಂಬುದು ಮೂಲಭೂತ ಹಕ್ಕು ಎಂಬುದನ್ನೇ ನೆಲೆಗಟ್ಟಾಗಿ ಇಟ್ಟುಕೊಂಡು ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ನಾಲ್ಕುನೂರಕ್ಕೂ ಹೆಚ್ಚು ಆದೇಶ, ತೀರ್ಪುಗಳನ್ನು ನೀಡಲಾಗಿದೆ.
2012ರ ನವೆಂಬರ್
ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಅವರು ಸುಪ್ರೀಂ ಕೋರ್ಟ್‌ನಲ್ಲಿ 2012ರ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದರು. ಈ ಯೋಜನೆಗೆ ವೈಯಕ್ತಿಕ ವಿವರ, ಕೈಯ ಎಲ್ಲ ಬೆರಳುಗಳ ಅಚ್ಚು, ಕಣ್ಣಿನ ಪಾಪೆಯ ವಿವರ ಸಂಗ್ರಹಿಸಲಾಗುತ್ತದೆ. ಜಗತ್ತಿನ ಯಾವುದೇ ಮುಂದುವರಿದ ರಾಷ್ಟ್ರ ಇಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒತ್ತಾಯಪೂರ್ವಕವಾಗಿ ಸಂಗ್ರಹಿಸುವುದಿಲ್ಲ ಎಂಬುದು ನಿಮಗೆ ಗೊತ್ತಿರಲಿ.
ಇಬ್ಬರು ಹಾಗೂ ಮೂವರು ನ್ಯಾಯಮೂರ್ತಿಗಳು ಇದ್ದ ಪೀಠ ಈ ಅರ್ಜಿಯ ವಿಚಾರಣೆಯನ್ನು ಆರಂಭದ ದಿನಗಳಲ್ಲಿ ನಡೆಸಿತು. ವಿಸ್ತೃತವಾಗಿ ವಿಚಾರಣೆ ನಡೆಸಿದರೂ ಈ ಪೀಠಗಳು ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಕೇಂದ್ರ ಸರ್ಕಾರ ನಿರೀಕ್ಷಿತ ಪ್ರತಿವಾದವನ್ನು ಮುಂದಿಟ್ಟಿತು. 1954 ಹಾಗೂ 1962ರ ತೀರ್ಪುಗಳನ್ನು ಉಲ್ಲೇಖಿಸಿ, ಖಾಸಗಿತನ ಎಂಬ ಮೂಲಭೂತ ಹಕ್ಕು ಸಂವಿಧಾನದಲ್ಲಿ ಇಲ್ಲ ಎಂದಿತು. 1975ರ ತೀರ್ಪು ಹಾಗೂ ಅದರ ನಂತರ ನೀಡಿದ ತೀರ್ಪುಗಳೆಲ್ಲವೂ ಅಜ್ಞಾನದಿಂದ, ತಿಳಿವಳಿಕೆಯ ಕೊರತೆಯಿಂದ ನೀಡಿದಂಥವು ಎಂದೂ ವಾದಿಸಿತು! ಇದಂತೂ ತೀರಾ ಆಶ್ಚರ್ಯಕರ ವಾದವಾಗಿತ್ತು. ‘ಹಾಗಾದರೆ, ಆರೋಪಿಗಳ ಮಂಪರು ಪರೀಕ್ಷೆ ನಡೆಸುವುದು, ಸರ್ಕಾರಗಳು ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಸುವುದು ಕೂಡ ಕಾನೂನುಬದ್ಧವೇ ಆಗುತ್ತವೆಯೇ? ಇಂಥ ಕೃತ್ಯಗಳಿಗೆ ಕಡಿವಾಣ ಹಾಕಿದ ತೀರ್ಪುಗಳು ತಪ್ಪೇ’ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಕೇಳಲಿಲ್ಲ. ಆದರೂ, 1954 ಹಾಗೂ 1962ರ ಪ್ರಕರಣಗಳಲ್ಲಿ ಸರಿಯಾಗಿ ತೀರ್ಪು ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಒಂಬತ್ತು ಜನ ನ್ಯಾಯಮೂರ್ತಿಗಳ ಪೀಠ ರಚಿಸಲಾಯಿತು.ಈ ಪೀಠವು ವಿಚಾರಣೆಯನ್ನು ಪೂರ್ಣಗೊಳಿಸಿದೆ. ಇದರ ತೀರ್ಪು ಶೀಘ್ರದಲ್ಲೇ ಬರಬಹುದು. ಖಾಸಗಿತನ ಎಂಬುದು ಮೂಲಭೂತ ಹಕ್ಕೇ ಎಂಬ ಪ್ರಶ್ನೆಗೆ ಮಾತ್ರ ಇದು ಉತ್ತರ ನೀಡಲಿದೆ. ಆದರೆ, ಆಧಾರ್ ಯೋಜನೆಯು ಅಸಾಂವಿಧಾನಿಕವೇ ಎಂಬ ಪ್ರಶ್ನೆಯ ಬಗ್ಗೆ ಇನ್ನೊಂದು ಪೀಠ ವಿಚಾರಣೆ ನಡೆಸಲಿದೆ. ಆಧಾರ್ ಯೋಜನೆಯ ಐದು ವರ್ಷಗಳು ಕಳೆದರೂ ತೀರ್ಮಾನ ಕೈಗೊಳ್ಳಲು ಆಗಿಲ್ಲ.
ನಮ್ಮ ದೇಶದಲ್ಲಿ ಖಾಸಗಿತನ ಎಂಬ ಮೂಲಭೂತ ಹಕ್ಕು ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ, ಆಡಳಿತ ವ್ಯವಸ್ಥೆ ಗೊಂದಲಗಳಿಂದ ತುಂಬಿಹೋಗಬಹುದು. ಖಾಸಗಿತನದ ವಿಚಾರದಲ್ಲಿ ಮುಂದೇನಾಗಬಹುದು ಎಂಬ ಪ್ರಶ್ನೆಗೆ ‘ಕಾಲ’ ಶೀಘ್ರದಲ್ಲೇ ಉತ್ತರ ನೀಡಲಿದೆ.
**
ದೇಶದಲ್ಲಿ 15 ಕೋಟಿ ಪಡಿತರ ಚೀಟಿಗಳು, 115 ಕೋಟಿ ಆಧಾರ್ ಕಾರ್ಡ್‌ಗಳು ಇವೆ. ಆಧಾರ್ ಯೋಜನೆಯ ಕಾನೂನುಬದ್ಧತೆ ಬಗ್ಗೆ ಪ್ರಶ್ನೆ ಇದ್ದ ಸಂದರ್ಭದಲ್ಲೇ ಕೇಂದ್ರ ಸರ್ಕಾರವು ಶೇಕಡ 90ರಷ್ಟು ಜನರನ್ನು ಆಧಾರ್ ವ್ಯಾಪ್ತಿಗೆ ತಂದಿದೆ.
**
ಕೇಂದ್ರ ಸರ್ಕಾರ ಜಾರಿಗೆ ತಂದ ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆ ಹಾಗೂ ಅದು ಎಷ್ಟು ಕಾನೂನುಬದ್ಧ ಎಂಬುದನ್ನು ಪ್ರಶ್ನಿಸಿ ಸುಮಾರು ಐದು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾದವು. ಈ ಪ್ರಕರಣವು ಐದು ವರ್ಷಗಳ ಹಿಂದೆ ಎಲ್ಲಿತ್ತೋ, ಈಗಲೂ ಅಲ್ಲೇ ಇದೆ. ಈ ಪ್ರಕರಣದ ಒಂದು ಆಯಾಮದ ಬಗ್ಗೆ, ಅಂದರೆ ಖಾಸಗಿತನವು ಪ್ರಜೆಗಳ ಮೂಲಭೂತ ಹಕ್ಕೇ ಎಂಬ ಬಗ್ಗೆ, ಒಂಬತ್ತು ಜನ ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠ ಎರಡು ವಾರಗಳ ಹಿಂದೆ ವಿಚಾರಣೆ ನಡೆಸಿತು. ಖಾಸಗಿತನ ಎಂಬುದರ ಎಲ್ಲೆಗಳು ಏನು ಎಂಬುದನ್ನು ತೀರ್ಮಾನಿಸಲಿರುವ ಈ ಪ್ರಕರಣ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆ ಹೊಂದಿರುವಂಥದ್ದು.
**
ಆಧಾರ್ ಕಾರ್ಡ್ ಪ್ರಕರಣದಲ್ಲಿ ನಾನು ಅರ್ಜಿದಾರ ಅಥವಾ ಅರ್ಜಿದಾರರ ಪರ ವಕೀಲ ಆಗಿದ್ದಿದ್ದರೆ, ವಿಚಾರಣೆ ವಿಳಂಬ ಆಗುತ್ತಿರುವುದನ್ನು ಗಮನಿಸಿ ಅರ್ಜಿಯನ್ನೇ ವಾಪಸ್ ಪಡೆಯುತ್ತಿದ್ದೆ. ಹಾಗೆ ಮಾಡುವುದೇ ಎಲ್ಲ ಬಗೆಯ ವಾದಗಳಿಗಿಂತ ಹೆಚ್ಚಿನ ಅರ್ಥ ನೀಡುತ್ತದೆ- ಏಕೆಂದರೆ, ಐದು ವರ್ಷಗಳಲ್ಲಿ ಈ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.
*
(ಅನುವಾದ– ವಿಜಯ್ ಜೋಷಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.