‘ಬೆಳೆಯುವ ಪೈರು ಮೊಳಕೆಯಲ್ಲಿ’ ಎನ್ನುವ ಮಾತನ್ನು ಅನೇಕ ದೊಡ್ಡಮನುಷ್ಯರ ಬಗ್ಗೆ ಕೇಳಿದ್ದೇವೆ. ಇಂತಹ ಒಬ್ಬ ದೊಡ್ಡ ಮನುಷ್ಯ ‘ಭಾರತದ ಬಿಸ್ಮಾರ್ಕ್’, ‘ಉಕ್ಕಿನ ಮನುಷ್ಯ’, ‘ಹಿಮಮುಚ್ಚಿದ ಜ್ವಾಲಾಮುಖಿ’, ‘ಸರ್ದಾರ್‌್’ ಎಂಬ ಬಿರುದುಗಳ ವಲ್ಲಭಬಾಯಿ ಪಟೇಲ್.
ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವ ಗುಣ ವಲ್ಲಭಬಾಯಿ ಪಟೇಲರಲ್ಲಿ ವಿದ್ಯಾರ್ಥಿದೆಸೆಯಲ್ಲೇ ಪ್ರಬಲವಾಗಿತ್ತು. 1875ರ ಅಕ್ಟೋಬರ್ 13ರಂದು ಹುಟ್ಟಿದ ಅವರು ಹೈಸ್ಕೂಲ್ ಕಲಿಯುವ ಸಂದರ್ಭದಲ್ಲಿ ಒಂದು ಪ್ರಸಂಗ ನಡೆಯಿತು. ಅವರಿಗೊಬ್ಬರು ಇಂಗ್ಲಿಷ್ ಮೇಷ್ಟ್ರಿದ್ದರು. ಅಗರ್‌ವಾಲ್ ಅಂತ ಅವರ ಹೆಸರು. ಅವರು ಯಾವಾಗಲೂ ತರಗತಿಗೆ ತಡವಾಗಿಯೇ ಬರುತ್ತಿದ್ದರು. ಒಂದು ದಿನ, ವಲ್ಲಭಬಾಯಿ ಅವರು ಸಮಯ ಕಳೆಯಲು ಇತರ ಹುಡುಗರೊಂದಿಗೆ ಹಾಡು ಹೇಳಲು ಶುರು ಮಾಡಿದರು.
ಸರ್ರಂತ ಒಳಕ್ಕೆ ಬಂದ ಅಗರ್‌ವಾಲ್ ಮೇಷ್ಟ್ರಿಗೆ ಕೋಪ ಬಂದಿತು.
‘ಏನಾಗ್ತಾ ಇದೆ ಇಲ್ಲಿ? ಯಾರು ನಿಮಗೆ ಹಾಡು ಹೇಳೂಂತ ಹೇಳಿದ್ದು. ಇದೇನು ಸಂಗೀತದ ಕ್ಲಾಸಾ’? ಅಂದರು.
ಹುಡುಗರೆಲ್ಲಾ ವಲ್ಲಭಬಾಯಿ ಕಡೆ ನೋಡಿದರು.
‘ಹೌದು ಸರ್... ನಾನೇ ಹಾಡು ಹೇಳೋಕ್ಕೆ ಹೇಳಿದ್ದು. ನೀವು ಟೈಂಗೆ ಸರಿಯಾಗಿ ಬರ್‍ಲಿಲ್ವಲ್ಲಾ. ನಾವು ಅಳ್ತಾ ಇರ್‍ಬೇಕಾಗಿತ್ತಾ?’.
‘ನನಗೇ ಎದುರುತ್ತರ ಕೊಡ್ತೀಯಾ? ಇದು ಸಂಗೀತದ ಕ್ಲಾಸಾ?’
‘ಇದು ಇಂಗ್ಲಿಷ್ ಕ್ಲಾಸೇ. ಆದರೆ ನೀವೇ ಇರ್‍ಲಿಲ್ವಲ್ಲಾ?’
‘ಸಾಕು ನಿಲ್ಲಿಸು ನಿನ್ನ ತಲೆಹರಟೆ. ಹೋಗು ಕ್ಲಾಸಿನಿಂದ ಹೊರಕ್ಕೆ’ ಎಂದರು ಮೇಷ್ಟ್ರು. ವಲ್ಲಭಬಾಯಿ ತಮ್ಮ ಪುಸ್ತಕಗಳನ್ನೆಲ್ಲಾ ತೆಗೆದುಕೊಂಡರು. ಹೊರಗೆ ನಡೆಯುವುದಕ್ಕೆ ಮುಂಚೆ ಸಹಪಾಠಿಗಳ ಮುಖ ಒಂದು ಸಾರಿ ನೋಡಿದರು. ಇದಕ್ಕಾಗಿಯೇ ಕಾದಿದ್ದಂತೆ ಎಲ್ಲಾ ಹುಡುಗರೂ ವಲ್ಲಭಬಾಯಿಯನ್ನು ಹಿಂಬಾಲಿಸಿದರು.
ಸ್ವಲ್ಪ ಹೊತ್ತಾದ ಮೇಲೆ ಶಾಲೆಯ ಪ್ರಿನ್ಸಿಪಾಲರು ವಲ್ಲಭಬಾಯಿಯನ್ನು ಕರೆಸಿದರು.
‘ಅಗರ್‌ವಾಲ್ ಮೇಷ್ಟ್ರು ಹೇಳ್ತಿದ್ದಾರೆ, ನೀನು ಒರಟಾಗಿ ಎದುರುತ್ತರ ಕೊಟ್ಟು ಹುಡುಗರಿಗೆಲ್ಲಾ ಚುಚ್ಚಿಕೊಟ್ಟು ಹೊರಕ್ಕೆ ಕರೆದುಕೊಂಡು ಹೋದೆಯಂತೆ. ಅದಕ್ಕೂ ಮೊದಲು ಹಾಡು ಹೇಳ್ತಿದ್ರಂತೆ ಜೋರಾಗಿ?’
‘ಸರ್, ಅಗರ್‌ವಾಲ್ ಮೇಷ್ಟ್ರು ಯಾವತ್ತೂ ಹೊತ್ತಿಗೆ ಸರಿಯಾಗಿ ಕ್ಲಾಸಿಗೆ ಬರೊಲ್ಲ. ಸುಮ್ಮನೆ ಗಲಾಟೆ ಮಾಡೊ ಬದಲು ಹಾಡು ಹೇಳೋಣ ಅಂತ ಹೇಳಿದ್ದು ನಾನೇ ಸರ್’.
ಇದುವರೆಗೂ ಯಾರೊಬ್ಬರೂ ಪ್ರಿನ್ಸಿಪಾಲರ ಎದುರಿಗೆ ನಿಂತು ದಿಟ್ಟವಾಗಿ ಮಾತನಾಡಿರಲಿಲ್ಲ. ವಿದ್ಯಾರ್ಥಿಯೊಬ್ಬನ ಮಾತನ್ನು ಕೇಳಿಕೊಂಡು, ಶಿಕ್ಷಕರನ್ನು ಅಲಕ್ಷಿಸುವುದು ಸರಿಯಲ್ಲ ಅನ್ನಿಸಿತು ಪ್ರಿನ್ಸಿಪಾಲರಿಗೆ.
‘ನೀನು ನಿನ್ನ ಒರಟುತನಕ್ಕೆ ಅಗರ್‌ವಾಲ್‌ರ ಕ್ಷಮಾಪಣೆ ಕೇಳಬೇಕು’ ಅಂದರು.
‘ಸರ್, ಕ್ಷಮಾಪಣೆ ಕೇಳಬೇಕಾದವನು ನಾನಲ್ಲ. ಅವರೇ ಕೇಳಬೇಕು. ಪ್ರತಿ ಕ್ಲಾಸಿಗೂ ತಡವಾಗಿ ಬರುತ್ತಾರೆ. ಜೊತೆಗೆ ಹಾಡು ಹೇಳಿದ್ದಕ್ಕೆ ಬಯ್ಯುತ್ತಾರೆ. ಹಾಡು ಹೇಳುವುದು ಅಪರಾಧವೇ?’ ಎಂದು ವಲ್ಲಭಬಾಯಿ ಕೇಳಿದರು.
ಪ್ರಿನ್ಸಿಪಾಲರಿಗೆ ವಿದ್ಯಾರ್ಥಿಯ ಪ್ರಾಮಾಣಿಕತೆ ಅರ್ಥವಾಯಿತು. ಆದ್ದರಿಂದ ನೆಪಮಾತ್ರಕ್ಕೆ ಎಚ್ಚರಿಕೆ ಕೊಟ್ಟು ಕಳುಹಿಸಿದರು.
ವಲ್ಲಭಬಾಯಿ ಅವರ ವಿದ್ಯಾರ್ಥಿದೆಸೆಯ ಮತ್ತೊಂದು ಘಟನೆ ಹೀಗಿದೆ. ವಲ್ಲಭಬಾಯಿ ಬರೋಡ ಹೈಸ್ಕೂಲಿನಲ್ಲಿದ್ದಾಗ ಸಂಸ್ಕೃತ ಅಥವಾ ಗುಜರಾತಿ ಭಾಷೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿತ್ತು. ಅವರು ಗುಜರಾತಿ ಭಾಷೆಯನ್ನು ಆರಿಸಿಕೊಂಡಿದ್ದರು. ಇವರನ್ನು ಛೇಡಿಸಲಿಕ್ಕಾಗಿ ಗುಜರಾತೀ ಕಲಿಸುವ ಮೇಷ್ಟ್ರು ಚೋಟಾಲಾಲ್ ಕೇಳಿದರು, ‘ಏನು ಮಹಾಪುರುಷರು ಸಂಸ್ಕೃತ ಕಲಿಯಬಾರದು ಅಂತ ನಿರ್ಧರಿಸಿದ ಹಾಗಿದೆ. ಯಾಕೇಂತ ಕೇಳಬಹುದೇ?’
‘ಸರ್, ನಾವೆಲ್ಲರೂ ಸಂಸ್ಕೃತವನ್ನೇ ಆರಿಸಿಕೊಂಡುಬಿಟ್ಟರೆ, ನಿಮ್ಮ ಪಾಠ ಕೇಳುವವರು ಯಾರು? ಆಗ ನಿಮ್ಮ ಕೆಲಸವೇ ಹೋಗಿಬಿಡತ್ತದಲ್ಲ?’
ಚೋಟಾಲಾಲ್ ಮೇಷ್ಟ್ರು, ಇನ್ನೂರು ಬಾರಿ ಮಗ್ಗಿ (=ಪಾದ) ಬರೆದುಕೊಂಡು ಬರುವ ಶಿಕ್ಷೆಯನ್ನು ಕೊಟ್ಟರು. ವಲ್ಲಭಬಾಯಿ ಬರೆದು ತೋರಿಸಲಿಲ್ಲ. ಕೇಳಿದ್ದಕ್ಕೆ ಜಾಣ ಉತ್ತರ ಕೊಟ್ಟರು. ಗುಜರಾತಿ ಭಾಷೆಯಲ್ಲಿ ಪಾದ ಎಂದರೆ, ಮಗ್ಗಿ ಮತ್ತು ಕೋಣ ಎಂದು ಅರ್ಥವಾಗುತ್ತದೆ.
ವಲ್ಲಭಬಾಯಿ ಹೇಳಿದರು, ‘ನನ್ನ ಕೊನೆಯ ಪೇಜಿನಲ್ಲಿ 200 ಪಾದಗಳನ್ನು ಬರೆದಿದ್ದೆ. ಅವು ಓಡಿಹೋದವು. ಅದಕ್ಕೆ ಪೇಜೆಲ್ಲಾ ಖಾಲಿ’.
ಮತ್ತೊಮ್ಮೆ ಪ್ರಿನ್ಸಿಪಾಲರ ಮುಂದೆ ನಿಂತರು ವಲ್ಲಭಬಾಯಿ. ಅವರು ಬೆದರಿಕೆ ಹಾಕಿ ಹೊರಕ್ಕೆ ಕಳುಹಿಸಿದರು.
ಇನ್ನೊಂದು ಸಾರಿ ವಲ್ಲಭಬಾಯಿ ಅವರು ತಮ್ಮ ತರಗತಿಯ ಬೀಜಗಣಿತದ ಮೇಷ್ಟ್ರಿಗೆ ಅರ್ಥವಾಗದ ಲೆಕ್ಕವನ್ನು ತಾವೇ ಸರಿಯಾಗಿ ಮಾಡಿ ತೋರಿಸಿದರು.
‘ಸರಿಯಾಗಿ ಮಾಡಿ ತೋರಿಸಿದ್ದಕ್ಕೆ ನನ್ನ ಕುರ್ಚಿಯಲ್ಲೇ ಕುಳಿತುಕೊ’ ಅಂದರು ಗಣಿತದ ಮೇಷ್ಟ್ರು. ವಲ್ಲಭಬಾಯಿ ಕುಳಿತೇಬಿಟ್ಟರು. ಇದನ್ನು ಕೇಳಿಸಿಕೊಂಡ ಪ್ರಿನ್ಸಿಪಾಲರು, ‘ನಿನ್ನನ್ನು ಸ್ಕೂಲಿನಿಂದಲೇ ಕಳಿಸಿಬಿಡ್ತೀನಿ’ ಅಂದರು. ‘ನೀವು ಕಳುಹಿಸುವುದಕ್ಕೆ ಮೊದಲೇ ನಾನು ಹೋಗ್ತೀನಿ’, ಅಂತ ಹೇಳಿ ಪುನಃ ನಡಿಯಾಡ್‌ನ ತಮ್ಮ ಹಿಂದಿನ ಶಾಲೆಗೇ ಸೇರಿಕೊಂಡರು.
ನಡಿಯಾಡ್ ಸ್ಕೂಲಿನ ಒಬ್ಬರು ಮೇಷ್ಟ್ರು ವ್ಯಾಪಾರ ಮಾಡುತ್ತಿದ್ದರು. ಅವರ ಅಂಗಡಿಯಲ್ಲಿ ಬೆಲೆ ಹೆಚ್ಚು. ಆದರೂ ಹುಡುಗರು ಇಲ್ಲಿಯೇ ಕೊಂಡುಕೊಳ್ಳಬೇಕು ಅನ್ನುತ್ತಿದ್ದರು. ಇದನ್ನು ವಿರೋಧಿಸಿದ ವಲ್ಲಭಬಾಯಿ, ಹುಡುಗರನ್ನು ಸಂಘಟಿಸಿ, ‘ತರಗತಿಗಳನ್ನು ಬಹಿಷ್ಕರಿಸೋಣ; ಸತ್ಯಾಗ್ರಹ ಮಾಡೋಣ, ನ್ಯಾಯಕ್ಕಾಗಿ ಮುನ್ನುಗ್ಗೋಣ’ ಎಂದು ಹುರಿದುಂಬಿಸಿ ಗೆದ್ದರು.
ಹೀಗೆ ಮುಂದಾಳತ್ವದ ಗುಣಗಳು ವಲ್ಲಭಬಾಯಿ ಪಟೇಲರಲ್ಲಿ ಬಾಲ್ಯದಿಂದಲೂ ಇತ್ತು. ದೊಡ್ಡವರಾದ ಮೇಲೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಷ್ಟ್ರಭಕ್ತಿಯನ್ನು ಮೆರೆದರು. ಅರ್ಧ ಶತಮಾನಕ್ಕೂ ಹೆಚ್ಚುಕಾಲ ದೇಶಸೇವೆ ಮಾಡಿದ ಪಟೇಲರು 1950ರ ಡಿಸೆಂಬರ್ 15 ರಂದು ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.