ADVERTISEMENT

ಉಳಿದುಬಿಡು ಒಂದು ಬಿಂದುವಾಗಿ

ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ 2016

ಕೆ.ಪಿ.ಮೃತ್ಯುಂಜಯ
Published 26 ನವೆಂಬರ್ 2016, 19:30 IST
Last Updated 26 ನವೆಂಬರ್ 2016, 19:30 IST
ಚಿತ್ರ–  ಸಿ. ರವೀಂದ್ರನಾಥ್
ಚಿತ್ರ– ಸಿ. ರವೀಂದ್ರನಾಥ್   

ಇಲ್ಲವಾಗಿರುವೆ, ವಿದೇಹಿಯಿನ್ನು, ಅಮ್ಮ ನೀನು.
ಇಲ್ಲವಾಗಿಲ್ಲ ನನ್ನೊಳಗೆ, ಇರುವೆ ನೀ ಖಾಯಮ್ಮು.

ನೀ ಬಿಟ್ಟುಹೋದ
ಜಗವಿಹುದು ಹಾಗೇ:
ಅದೇ ಜಾತಿ; ರೀತಿ–ರಿವಾಜು
ಅದೇ ಹಾದಿ–ನೊರಜು

ಅಕ್ಕನಿಗದೇ ಕೋಟಲೆ, ಅಣ್ಣನದೇ ರಗಳೆ;
ನನಗದೇ ಸಂದಿಗ್ಧತೆ
ನಗುವೆ ಅಲ್ಲೇ ನೀ ಇರುವಲ್ಲೆ!
ಕಲ್ಲಕೆರೆ ತುಂಬೇಪುರ
ಡೊಂಕಿಹಳ್ಳಿ ಆಯರಹಳ್ಳಿ ಗೊಲ್ಲರಹಟ್ಟಿ
ಗೊರಾಘಟ್ಟ ವಡವನಘಟ್ಟ...
ಆ ಎಲ್ಲ ಹಳ್ಳಿಗಳ ಸವೆಸಿದ ಹಾದಿಗಳಲ್ಲಿ
ಇನ್ನೊಮ್ಮೆ ಪಯಣಿಸು ತಾಯಿ
–ಒಲೆಗೆಂದು ಸೌದೆಗೆ;
ಸಾರಿಗೆಂದು ಕಾಯಿಗೆ;
ಸೊಪ್ಪುಸೆದೆಗೆ;
ಮತ್ತು ನಮಗೆಂದು ಕಬ್ಬಿನ ಜಲ್ಲೆಗೆ.

ADVERTISEMENT

ಮತ್ತು ಹೊರಟುಬಿಡು ಅಮ್ಮ ನಿನ್ನ ತವರಿಗೆ
–ಮಣಿಕುಪ್ಪೆಗೆ – ನಾನೆಂದೂ ಕಾಣದೂರಿಗೆ
ಸುತ್ತು ಮತ್ತೆ ಅಲ್ಲಿಯ ಹೊಲಮಾಳದಲ್ಲಿ
ದನಗಳ ಹಿಡಿದು. ಮೇಯಿಸು ಚೆನ್ನಾಗಿ ಅವುಗಳ.
ಮತ್ತು ಅಮ್ಮ ನೀನು ಅಲ್ಲೇ ಹಾಗೇ ಇರು –

ಅಯ್ಯನ ಮದುವೆಯಾಗದ ಕನ್ನೆಯಾಗಿ;
ನಮ್ಮನು ಹಡೆಯದ ತಾಯಾಗಿ.
ಆಗು ನಿನ್ನಯ್ಯನ ಕುವರಿಯಾಗಿ–
ಬರಿದೆ ನಗುವ ಅನಕ್ಕರದ ಮುಗುದೆಯಾಗಿ.
ನಿನ್ನಮ್ಮನ ಸೆರಗನ್ನೇ ಹಿಡಿಯದೇ ಹೋದ
ನಿರ್ಭಾಗ್ಯೆ ನೀನು. ಸಾಧ್ಯವಾದರೆ ನಿನ್ನಮ್ಮನನು
ಹುಡುಕಿ
ಅವಳ ಗರ್ಭಗೂಡನು ಹೊಕ್ಕಿ
ಉಳಿದುಬಿಡು ತಾಯಿ ಒಂದು ಬಿಂದುವಾಗಿ,
ಒಂದು ಬಿಂದುವಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.