ADVERTISEMENT

ಏನ್ ಪವ್ವರಲ್ವಾ ಮಾತಿಗೆ

ಕವಿತೆ

ಲಲಿತಾ ಸಿದ್ಧಬಸವಯ್ಯ
Published 20 ಫೆಬ್ರುವರಿ 2016, 19:40 IST
Last Updated 20 ಫೆಬ್ರುವರಿ 2016, 19:40 IST
-ಲಲಿತಾ ಸಿದ್ಧಬಸವಯ್ಯ
-ಲಲಿತಾ ಸಿದ್ಧಬಸವಯ್ಯ   

“ಅಕ್ಕೋ ಸಿದ್ರಾಮೇಸ್ವರ ಒಂಟೊದ್ನಾ”

ಎಗರೆಗರಿ ಬೆನ್ನಿಗೆರಗಿದ ಪ್ರಶ್ನೆಗೆ ಉತ್ತರಿಸುವುದಕು ಮೊದಲು
ಚಿತ್ತ ನೆನೆದು ಮೆತ್ತಗಾಯ್ತು; ಆಹಾ ಆ ಲಯನಾಂಟ್ಯ ಆ ರಚನಾವಿನ್ಯಾಸ
ಆ ಸ್ವರಪ್ರಸ್ತಾರ ಅಹಹಾ ಬಿದ್ದಿತೇ ಕಿವಿಗೆ
ಇದೇ ಇದೇ ನನ್ನ ಮಾತು
ಹಲವು ಕನ್ನಡಂಗಳಲ್ಲಿ ಇದು ನನ್ನ ಕನ್ನಡ ಇದೇ ನನ್ನ ಕನ್ನಡ
ಇದು ಮಾತ್ರ ನನ್ನ ಕನ್ನಡ
ಇದೊಂದೇ ಮಾತು ಇದೊಂದೇ ಮಾತಿಗೆ
ಗೆಳತಿಯರಾಗಿಬಿಟ್ಟೆವು ನಾವು

ಬಸ್ಟಾಂಡಿನ ಆ ತಲೆಹೊಲದ ತೆನೆನಡುವೆಯೆ ಹೊರಚ್ಚಿಗೆ ಕುಂತು
ಶುರುವಾಯಿತು ಬೈಠಕ್ಕು; ಪಿಚ್ಚರು ಸೂಟಿಂಗಿಗೆ ಚೆಂಡುಹುವ್ವಿನ
ಲಾರಿಲೋಡುಗಳ ತಂದದ್ದು, ಪೇಮೆಂಟಾದ ಮೇಲೆ ಊರಕಡೆ ಹೊಂಟದ್ದು
ಗಂಡನೊಬ್ಬನ್ನೆ ಕಳುಹಿದರೆ ದುಡ್ಡು ಅರ್ಧ ಗಡಂಗಿಗೆ ಜಮಾ
ಬಂದ ಸೊಸೆ ಹೋದ ಮಗಳು ಇರುವ ನಗೆಹೊಗೆಗಳ
ಇತ್ತೇಪಾರ ನಡೆದು ಮಲೆತಿದ್ದ ಎದೆಕೆರೆಯ ತೂಬೆತ್ತಿ
ಕಿಟ್ಟಗಟ್ಟಿದ್ದ ಭಾವಕಾಲುವೆ ಸ್ವಚ್ಛಗೊಳ್ಳುವ ಹೊತ್ತಿಗೆ
ಥಟ್ಟನೆ ಅಂದಳು

ADVERTISEMENT

“ಅಕ್ಕೊ ನಿನ್ ಪೇಸ್ಕಟ್ಟು ಎಲ್ಲೊ ನೋಡ್ದಂಗೈತೆ
ಕಾಡಯ್ಯನೋರ ಮನೆತಾವು ಇದ್ದೋರಲ್ವ ನೀವು
ಅಯ್ಯೊ... ಮಕಾವಲಿಕೆ ನೋಡ್ದೇಟ್ಗೆ ಅಂದ್ಕಂಡೆ
ನಾನಲ್ವ ಮಣೆಮ್ಮ ಬಾರೆಮನೆ ಮಣೆಮ್ಮಾ
ತೋ ಗುರ್ತು ಮರೆತಾ... ಚೆಂಡುಮಣಿ ಚೆಂಡುಮಣಿ”

ಹ್ಹೊಹ್ಹೊಹ್ಹೊಹ್ಹೊಹ್ಹೊಹ್ಹೊಹ್ಹೊ
ನಕ್ಕೆವು ನಕ್ಕೆವು ದಿಕ್ಕಾಪಾಲಾದರು ದಿಕ್ಪಾಲಕರು
ನೆತ್ತಿಗುಣಿಗೆ ಹರಳೆಣ್ಣೆ, ಜಡೆಬುಡಕ್ಕೆ ತಪ್ಪದೆ ಚೆಂಡುವ್ವ

ಅದೇ ಕಾರಣವಾಗಿ ಅಡ್ಡಹೆಸರು ಚೆಂಡುಮಣಿ
ಮೈನೆರೆದ ದೆಸೆಯಿಂದ ಏಳನೇ ಕ್ಳಾಸಿಗೇ ಸ್ಕೂಲು
ತೊರೆಸಲ್ಪಟ್ಟ ಚಿಂತಾಮಣಿ
ಅಲ್ಲಿಂದಾಚೆಗೆ ನಮ್ಮ ಮಾತೆಲ್ಲ ‘ಲೇ’ ಕಾರಾದಿಯಾಗಿ
‘ಕಣೇ’ ಪ್ರತ್ಯಯಾಂತ್ಯ!!

ಬಸ್ಸು ಹತ್ತುವಾಗ ಅಂದಳು
ಮಚ್ಚಲ್ಲಿ ಕೊಚ್ಚಿದಂತೆ “ಏನ್ ಬೇವರ್ಸಿ ಊರೇ ಇದು
ನಂ ಬಾಸೆ ಆಡೊ ಒಂದ್ ನಾಯ್ಕುನ್ನಿ ಸೈತ ಇಲ್ಲ
ಥೋ ಎಲ್ಲೊ ಕಳದೋದಂಗಾಗಿತ್ತು ಕಣೇ ನೆನ್ನ್ಯಿಂದ ನಂಗೆ
ನೋಡು ಒಂದ್ ಮಾತಿಂದ ನೀನು ಸಿಕ್ದೆ
ಏನ್ ಪವ್ವರಲ್ವ ಮಾತಿಗೆ”

ಮುತ್ತಿನಂಥ ಮಾತಾಡಿದ್ದಳು ಮಣೆಮ್ಮ
ಒಂದು ಮಾತಿಗೆ ಎಂಥ ಶಕ್ತಿ ಅಲ್ಲವಾ
ಹುಡುಕಿಕೊಡುತ್ತದೆ  ಬೇರುಗಳ ತಡವುತ್ತದೆ ಬದುಕುಗಳ
ಬೇರುಗಳೇ ಬೇಡ ಅಂದರೆ...
ತೆಗಿರೀ ಎಂಥ ಮಾತು, ಅದೊಂದು ಜನ್ಮವಾ

೧. ಪೇಸ್ಕಟ್ಟು = ಫೇಸ್ ಕಟ್
೨. ಇತ್ತೇಪಾರ= ಇತ್ಯೋಪರಿ
೩. ಮಕಾವಲಿಕೆ = ಮುಖಹೋಲಿಕೆ
೪. ಬಾಸೆ = ಭಾಷೆ
೩. ಪವ್ವರ್ = ಪವರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.