ADVERTISEMENT

ಒಂದೂವರೆ ಶತಮಾನದ ‘ಜೀವನ ಶಿಕ್ಷಣ’ ಯಾನ

ಎನ್.ಜಗನ್ನಾಥ ಪ್ರಕಾಶ್
Published 19 ನವೆಂಬರ್ 2016, 19:30 IST
Last Updated 19 ನವೆಂಬರ್ 2016, 19:30 IST
ಒಂದೂವರೆ ಶತಮಾನದ ‘ಜೀವನ ಶಿಕ್ಷಣ’ ಯಾನ
ಒಂದೂವರೆ ಶತಮಾನದ ‘ಜೀವನ ಶಿಕ್ಷಣ’ ಯಾನ   
ಅದು 18–19ನೇ ಶತಮಾನ. ಬ್ರಿಟಿಷರು ಆಧುನಿಕ ಶಿಕ್ಷಣವನ್ನು ಭಾರತದಲ್ಲೂ ಆರಂಭಿಸಿದ್ದ ಕಾಲ. ಮುಂಬೈ ಕರ್ನಾಟಕದಲ್ಲಿ ಕನ್ನಡ ಭಾಷೆ ತೀರಾ ದುಃಸ್ಥಿತಿಯಲ್ಲಿತ್ತು. ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಕಲಿಕೆಗೆ ಅವಕಾಶವಿರಲಿಲ್ಲ. ಒಂದಷ್ಟು ಮಠಗಳಲ್ಲಿ ಮಾತ್ರ ಕನ್ನಡ ಕಲಿಯಲು ಸಾಧ್ಯವಿತ್ತು. ಆಗ ಕನ್ನಡ ಮಾತನಾಡುವ ಪ್ರದೇಶಗಳಿದ್ದರೂ ಕನ್ನಡಕ್ಕೆ ಆದ್ಯತೆ ಇರಲಿಲ್ಲ. ಕನ್ನಡನಾಡೆಂಬ ಹೆಸರಿದ್ದರೂ ಕರ್ನಾಟಕವೆಂಬ ಪ್ರತ್ಯೇಕ ಘಟಕವಿರಲಿಲ್ಲ. ಕನ್ನಡ ಭಾಷಿಕರು ಅಯೋಮಯ ಸ್ಥಿತಿಯಲ್ಲಿದ್ದರು. ಮರಾಠಿಯ ಪ್ರಭಾವದಲ್ಲಿ ಕನ್ನಡ ಕುಗ್ಗಿಹೋಗಿತ್ತು. ಅಲ್ಲಲ್ಲಿ ಕನ್ನಡಿಗರೆಲ್ಲ ಒಂದಾಗುವ ಕೂಗು ಶುರುವಾಗಿತ್ತು.
 
ಕನ್ನಡ ಭಾಷಿಕ ಚೆನ್ನಬಸಪ್ಪನವರು ಪುಣೆಯಲ್ಲಿ ಎಂಜಿನಿಯರಿಂಗ್‌ ಕಲಿತು ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವ ಅವಕಾಶದಿಂದ ವಂಚಿತರಾಗಿದ್ದರು. ಸರ್ಕಾರಿ ಸೇವೆಗೆ ಸೇರಿದ ಚೆನ್ನಬಸಪ್ಪನವರು, ಧಾರವಾಡದ ಗಂಡುಮಕ್ಕಳ ಟ್ರೇನಿಂಗ್‌ ಕಾಲೇಜಿನ ಮೊದಲ ಪ್ರಿನ್ಸಿಪಾಲರಾಗಿ ನಿಯುಕ್ತರಾಗಿದ್ದರು.
 
ಕನ್ನಡದ ನೆಲದಲ್ಲಿ ಅನ್ಯಭಾಷೆಗಳು ಹಿಡಿತ ಸಾಧಿಸಿದ್ದ ಸಂಗತಿ ಬಗ್ಗೆ ಚೆನ್ನಬಸಪ್ಪನವರಿಗೆ ಅರಿವಿತ್ತು. ಶಿಕ್ಷಣದ ಮೂಲಕವೇ ಕನ್ನಡ ಭಾಷೆಗೆ ಕನ್ನಡಿಗರ ಬದುಕಿಗೆ ಹೊಸ ಹಾದಿ ಸಾಧ್ಯವೆಂಬುದನ್ನು ಮನದದಟ್ಟು ಮಾಡಿಕೊಂಡ ಚೆನ್ನಬಸಪ್ಪನವರು ಪುಟಾಣಿ ಮಕ್ಕಳಿಗೆ ತಾಯ್ನುಡಿ ಕನ್ನಡವನ್ನು ಕಲಿಸಿ, ಅದರ ಮೂಲಕ ಶಿಕ್ಷಣ ನೀಡುವ ತಳಹದಿ ರೂಪಿಸಲು ಶಿಕ್ಷಕರನ್ನು ಅಣಿಗೊಳಿಸುವುದಕ್ಕೆ ಆದ್ಯತೆ ನೀಡಿದರು. 
 
ಕನ್ನಡ ಭಾಷೆಯ ಬೆಳವಣಿಗೆಗೆ ಹಾಗೂ ಕನ್ನಡಪರ ಗಟ್ಟಿ ಧ್ವನಿ ಕೇಳುವಂತಾಗಿದ್ದು ಚೆನ್ನಬಸಪ್ಪನವರ ಅಧಿಕಾರಾವಧಿಯಲ್ಲಿ. ಆಗ ಕನ್ನಡ ಪ್ರಾಥಮಿಕ ಶಾಲೆಗಳ ಸ್ಥಾಪನೆಗೆ ಒತ್ತು ಸಿಕ್ಕಿತು. ಅಲ್ಲಿ ಕಲಿಸುವ ಉಪಾಧ್ಯಾಯರಿಗೆ ಕನ್ನಡಪ್ರಜ್ಞೆಯನ್ನು ಉಂಟು ಮಾಡುವ ಕೆಲಸವೂ ನಡೆಯಿತು. ಅದೇ ಕಾಲದಲ್ಲಿ ಕ್ರಿಯಾಶೀಲವಾಗಿದ್ದ ಧಾರವಾಡದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು. ಮುಂದೆ ಚೆನ್ನಬಸಪ್ಪನವರು ‘ಡೆಪ್ಯೂಟಿ ಎಜುಕೇಶನಲ್‌ ಇನ್‌್ಸಪೆಕ್ಟರ್‌’ ಆಗಿ ನೇಮಕವಾಗಿ ಧಾರವಾಡದಲ್ಲಿಯೇ ಕೊನೆಯವರೆಗೂ ಕಾರ್ಯ ನಿರ್ವಹಿಸಿದರು. ಆಗಲೇ ಡೆಪ್ಯೂಟಿ ಎಂಬುದು ಚೆನ್ನಬಸಪ್ಪನವರ ಹೆಸರಿಗೆ ಸೇರಿ ಅದೇ ಶಾಶ್ವತವಾಯಿತು.
 
ಡೆಪ್ಯೂಟಿ ಚೆನ್ನಬಸಪ್ಪನವರು ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಹೊಸಮಾಧ್ಯಮ ಪತ್ರಿಕೆಯನ್ನು ಕನ್ನಡ ಭಾಷೆಯ ಬೆಳವಣಿಗೆಗೆ ಬಳಸಿಕೊಳ್ಳಲು ನಿರ್ಧರಿಸಿದರು. ಅದರ ಫಲವಾಗಿ, 1865ರಲ್ಲಿ ‘ಮಠ ಪತ್ರಿಕೆ’ಯ ಪ್ರಕಟಣೆ ಆರಂಭವಾಯಿತು. 
 
‘ಮಠ ಶಾಲಾ ಪತ್ರಕ’ (1865), ‘ಶಾಲಾ ಪತ್ರಕ’ (1866), ‘ಕನ್ನಡ ಶಾಲಾ ಪತ್ರಕ’ (1871), ‘ಕನ್ನಡ ಪ್ರಾಥಮಿಕ ಶಿಕ್ಷಣ’ (1929) – ಹೀಗೆ ಆಯಾ ಕಾಲಕ್ಕೆ, ಅನುಕೂಲಕ್ಕೆ ತಕ್ಕಂತೆ ಹೆಸರು ಬದಲಾದರೂ ನಿರಂತರವಾಗಿ ಒಂದೂವರೆ ಶತಮಾನದಿಂದ ಪ್ರಕಟವಾಗುತ್ತಿರುವ ಈ ಪತ್ರಿಕೆಗೆ ‘ಜೀವನ ಶಿಕ್ಷಣ’ ಎಂಬ ಹೆಸರು ಬಂದಿದ್ದು 1956ರಲ್ಲಿ, ಕರ್ನಾಟಕ ಏಕೀಕರಣವಾದ ವರ್ಷದಲ್ಲಿ.
 
ಶೈಕ್ಷಣಿಕ ಮಾಸಪತ್ರಿಕೆಯಾಗಿ ಡೆಪ್ಯೂಟಿ ಚೆನ್ನಬಸಪ್ಪನವರು ಶುರುಮಾಡಿದ ‘ಮಠ ಪತ್ರಿಕೆ’ಯ (ಜೀವನ ಶಿಕ್ಷಣ) ಮುಖ್ಯ ಉದ್ದೇಶ ಕನ್ನಡಕ್ಕೆ ಮುಖ್ಯಸ್ಥಾನ ಕಲ್ಪಿಸುವುದು. ಕನ್ನಡದ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುವುದು ಇನ್ನೊಂದು ಗುರಿ.
 
ಮೊದಲ ಸಂಚಿಕೆಯ ಸಂಪಾದಕೀಯದಲ್ಲಿಯೇ ಕನ್ನಡ ಕುರಿತ ಅವರ ದೂರಾಲೋಚನೆ ಸ್ಪಷ್ಟವಾಗಿ ವ್ಯಕ್ತವಾಗಿದೆ. ಶಿಕ್ಷಣದಿಂದ ಶುರುವಾಗಲಿರುವ ಕನ್ನಡ ಧ್ವನಿ ಕರ್ನಾಟಕ ಏಕೀಕರಣಕ್ಕೂ ಕಾರಣವಾಗಬೇಕೆನ್ನುವ ಭವಿಷ್ಯದ ಯೋಚನೆಯೂ ಅವರಲ್ಲಿತ್ತು.
 
ಕನ್ನಡ ಭಾಷಿಕರ ಪ್ರದೇಶಗಳನ್ನು ಆಗಲೇ ‘ಕರ್ನಾಟಕ’ ಎಂದು ಕರೆದ ‘ಜೀವನ ಶಿಕ್ಷಣ’ (ಮಠ ಪತ್ರಿಕೆ) ಆರಂಭದಲ್ಲಿ ಕೈಬರಹದ ಪತ್ರಿಕೆ. ನಂತರ ಕಲ್ಲಚ್ಚಿನಿಂದ ಮುದ್ರಣವಾಗುತ್ತಿತ್ತು, ಬಳಿಕ ಅಚ್ಚುಮೊಳೆಯಿಂದ ಸಿದ್ಧವಾಗುತ್ತಿತ್ತು.
 
ಕನ್ನಡದ ಹಿರಿಯ ಶೈಕ್ಷಣಿಕ ಮಾಸಿಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜೀವನ ಶಿಕ್ಷಣ’ ಮಕ್ಕಳ ಬಹುಮುಖ ಅಭಿವೃದ್ಧಿಗಾಗಿ ನಡೆಸಿರುವ ಪ್ರಯೋಗಗಳು ಅಪೂರ್ವ. ಶುರುವಿನಲ್ಲಿ ಅನ್ಯಭಾಷೆಯ ಪ್ರಭಾವವನ್ನು ಎದುರಿಸಲು ಬೇಕಾದ ಉಪಕ್ರಮಗಳನ್ನು ತಿಳಿ ಹೇಳಿದ ಪತ್ರಿಕೆ ಕನ್ನಡಭಾಷಾ ಜಾಗೃತಿಗೆ ಮುಂದಾಯಿತು.
 
ಆಟೋಟ, ಚಿತ್ರಕಲೆ, ವಿಜ್ಞಾನ ಪ್ರಯೋಗ, ಪ್ರಬಂಧ ರಚನೆ, ಆರೋಗ್ಯ – ಇತ್ಯಾದಿಗಳನ್ನು ಪ್ರಕಟಿಸುವ ಮೂಲಕ, ‘ಜೀವನ ಶಿಕ್ಷಣ’ ವಿದ್ಯಾರ್ಥಿ ವೃಂದದ ಸಮಗ್ರ ಅಭಿವೃದ್ಧಿಗೆ ಸ್ಪಂದಿಸಿದೆ. ಕನ್ನಡ ಗೊತ್ತಿದ್ದರೂ ಮಾತನಾಡಲು, ಬರೆಯಲು ಹಿಂಜರಿಯುತ್ತಿದ್ದ ಕನ್ನಡಿಗರಿಗೆ ಧೈರ್ಯ ತುಂಬಿದ ಪತ್ರಿಕೆ, ಶಿಕ್ಷಕರು ಕಚೇರಿ ರುಜುವನ್ನು ಕನ್ನಡದಲ್ಲಿಯೇ ಮಾಡಬೇಕೆಂದು ಒತ್ತಾಯಿಸಿತ್ತು. ಕನ್ನಡ ಶಾಲೆಗಳಲ್ಲಿ ಅಂಕಿ–ಮಗ್ಗಿಗಳನ್ನು ಕನ್ನಡದಲ್ಲಿಯೇ ಕಲಿಸುವಂತೆ ಒತ್ತಾಯಿಸುತ್ತಿದ್ದ ‘ಜೀವನ ಶಿಕ್ಷಣ’, ಮಕ್ಕಳು ಹಾಗೂ ಪೋಷಕರಲ್ಲಿ ಕನ್ನಡದ ಪ್ರೀತಿ ಹುಟ್ಟುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿತು. 
 
ಕನ್ನಡ ಭಾಷಾ ಬೆಳವಣಿಗೆಗೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ವೇದಿಕೆ ಒದಗಿಸಿದ ‘ಜೀವನ ಶಿಕ್ಷಣ’ ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಾಗಿಲ್ಲ. ಇದರಲ್ಲಿ ಮಕ್ಕಳ ಸೃಜನಶೀಲ ವಿಚಾರಗಳಿಗೂ ಜಾಗ ಮಾಡಿಕೊಟ್ಟಿದೆ. ಪುಟಾಣಿಗಳ ಚಿತ್ರಗಳು, ಚಿಣ್ಣರ ಪದ್ಯಗಳು ಮೂಡಿಬಂದಿವೆ. ಸಾಹಿತ್ಯ–ವಿಜ್ಞಾನ ವಿಷಯಗಳಿಗೂ ಅವಕಾಶವಿದೆ. 
 
‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಹಾದಿ ಅನೇಕ ಏಳುಬೀಳುಗಳಿಂದ ಕೂಡಿದೆ. ಪ್ರಸ್ತುತ ಶಿಕ್ಷಣ ಇಲಾಖೆ ನಿರ್ವಹಿಸುತ್ತಿರುವ ‘ಜೀವನ ಶಿಕ್ಷಣ’ 150 ವರ್ಷಗಳ ಇತಿಹಾಸದೊಂದಗೆ ಮುಂದುವರೆಯುತ್ತಿರುವುದು ಪತ್ರಿಕೋದ್ಯಮ ಇತಿಹಾಸದಲ್ಲೊಂದು ಗಮನಾರ್ಹ ಗುರುತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.