ಕಣ್ಣು ಕಟ್ಟಿನ ಆಟ
ಒಂದೊಂದು ಅಕ್ಷರ ನಾಪತ್ತೆಯಾದ ಪದಗಳನ್ನೂ
ಸರಿಯಾಗಿಯೇ ಓದಿಬಿಡುತ್ತೇವೆ
ಅಕ್ಷರಗಳನ್ನೇ ತಿರುವು ಮುರುವಿಟ್ಟು
ಪದ ಹುಡುಕಲು ತಿಣುಕುತ್ತೇವೆ
ಎಡದಿಂದ ಬಲಕ್ಕೆ ಮೇಲಿಂದ ಕೆಳಕ್ಕೆ
ಇಲ್ಲದ ಪದಗಳ ಜೋಡಿಸುತ್ತೇವೆ
ಒಂದೊಂದು ಗುಣ ನಾಪತ್ತೆಯಾದ ಮನುಷ್ಯರನ್ನೂ
ಸರಿಯಾಗಿಯೇ ತಿಳಿದುಬಿಡುತ್ತೇವೆ
ಒಬ್ಬರೊಳಗೆ ಇನ್ನೊಬ್ಬರನ್ನು ಕಂಡು
ಎದೆ ನೇವರಿಸಿಕೊಳ್ಳುತ್ತೇವೆ
ಹಾಗೂ ಹೀಗೂ ಸೋತೋ ಗೀತೋ
ಬೇಡದ ಸಂಬಂಧವ ಪೋಣಿಸುತ್ತೇವೆ
ವ್ಯಾಕರಣ ಮೀರಿಯೂ ಬಾಳಲು ಸಾಧ್ಯವಿದೆ
ಎಂದು ವ್ಯಾಕರಣಕ್ಕೆ ಗೊತ್ತಿಲ್ಲ
ಜೀವನದ ಸ್ಫೂರ್ತಿಯಿರುವುದೇ ಇಲ್ಲಿ
ಬೊಗಸೆಯನ್ನು ಒಡ್ಡದೆಯೂ ಭಿಕ್ಷೆ ಬೇಡುತ್ತ
ಅದನ್ನೇ ಜಗತ್ತು ಎಂದು ಭಾವಿಸಿಕೊಂಡು
ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿಕೊಂಡು
ಹೊಂದಿಸಿ ಬರೆದು ಬರೆದು ಹೊಂದಿಸಿ ಜೀವಿಸಿಕೊಂಡು
**
ಈಗೀಗ ಸ್ವಲ್ಪ ತ್ರಾಸು
ತಪ್ಪು ಉತ್ತರಕ್ಕೊಂದು ಸರಿಯುತ್ತರ ಬಲಿ ಕೊಡುವ ಕಾಲ ಬಂದು
ಕೆಣಕಿದ್ದು ತಿಣುಕಿದ್ದು ಓದಿದ್ದು ಮರೆತಿದ್ದು ಎಲ್ಲವೂ ಕಲೆಸಿ
ಮೊನ್ನೆ ನನ್ನ ಹೆಸರನ್ನೇ ನಾನು ತಪ್ಪಾಗಿ ಉಚ್ಚರಿಸಿದಾಗಲೂ
ಎಲ್ಲರೂ ಚಪ್ಪಾಳೆ ತಟ್ಟಿದರು
ಯಾರು ಯಾರನ್ನು ಸರಿಯಾಗಿ ತಿಳಿದರೋ ತಿಳಿಯಲಿಲ್ಲವೋ
ನಾಪತ್ತೆಯಾದ ನನ್ನ ಹೆಸರಿನ ಹಿಂದೆ
ಚಪ್ಪಾಳೆಗಳ ದಂಡು ಹೊರಟಾಗ
ವ್ಯಾಕರಣ ನಡುಗುತ್ತ ನನ್ನ ಕೈ ಹಿಡಿಯಿತು
ನಾನು ಯಾರು ಎಂದು ಹೇಳು ಎಂದೆ
ಅದು ನಾಲ್ಕು ಸಂಭಾವ್ಯ ಉತ್ತರಗಳಿವೆ ಎಂದಿತು
ಎಲ್ಲವೂ ಸರಿಯೆನಿಸುತ್ತವೆ
ಯಾವುದೂ ಇರಲಾರದು ಎಂದೂ ಅನಿಸುತ್ತದೆ
ಹೆಸರನ್ನೂ ಅನುಮಾನಿಸಿಕೊಂಡು ಬಾಳುವ ಈ ಹೊತ್ತು ಹೇಗೆ ಬಂತು?
ಯಾರದೋ ಖಾಲಿ ಬಿಟ್ಟ ಜಾಗದಲ್ಲಿ
ಯಾರಿಗೋ ಹೊಂದಿಸಿಕೊಂಡು
ಯಾರದೋ ಬೇಡದ ಉತ್ತರವಾಗಿ
ಆದರೂ ಯಾರೋ ಸರಿಯಾಗಿ ಓದುತ್ತಿದ್ದಾರೆ
ಎಂಬ ಒಂದೇ ನಂಬಿಕೆಯಲ್ಲಿ
ಕಣ್ಣು ಕಟ್ಟಿಸಿಕೊಂಡು
ಕಟ್ಟಿದವರನ್ನೇ ಹುಡುಕಿಕೊಂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.