ಶೇಷಶಾಸ್ತ್ರಿಗಳ ಹುಟ್ಟು ಮತ್ತು ಬಾಲ್ಯದ ಬೆಳವಣಿಗೆ ಅಷ್ಟೂ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸಂತೇಕಲ್ಲಹಳ್ಳಿಯಲ್ಲಾಯಿತು. ಅದು ಆಂಧ್ರ- ಕರ್ನಾಟಕಗಳ ಗಡಿಪ್ರಾಂತ. ಅಲ್ಲಿನ ಜನರಿಗೆ ಕನ್ನಡ ಮತ್ತು ತೆಲುಗು ಎರಡೂ ಸಲೀಸಾದ ಭಾಷೆಗಳು. ಹಳ್ಳಿಯ ಎಲ್ಲರಿಗೂ ಬೇಕಾದವರಾಗಿ, ಚಿಕ್ಕಂದಿನಿಂದಲೇ ಜಾತಿಮತಗಳ ಗೊಡವೆಗೆ ತಲೆಕೆಡಿಸಿಕೊಳ್ಳದೆ, ಅವರು ಎಲ್ಲರ ಮನೆಯ ಹುಡುಗನಾಗಿ ಬೆಳೆದರು. ಓದಿಗಾಗಿ ಬೆಂಗಳೂರಿಗೆ ಬಂದರೂ, ಹಳ್ಳಿಯ ಸೊಗಡನ್ನು ಮರೆಯದೆ ಉಳಿಸಿಕೊಂಡರು. ಅವರನ್ನು ಈಗಲೂ ಬೆಂಗಳೂರು ಹುಡುಗ ಎನ್ನಬೇಕಾದರೆ ಸ್ವಲ್ಪ ಯೋಚಿಸಬೇಕು. ಅವರು ಈಗಲೂ ಸಂತೇಕಲ್ಲಹಳ್ಳಿಯ ಹುಡುಗನೇ ಆಗಿ ಉಳಿದಿದ್ದಾರೆ. ನಿಷ್ಕಲ್ಮಶ ಹೃದಯಕ್ಕೆ ಶೇಷಶಾಸ್ತ್ರಿ ಒಳ್ಳೆಯ ಉದಾಹರಣೆ. ಅವರಿಗೆ ಹೆತ್ತ ತಾಯಿಯ ಜೊತೆಗೆ ಸಾಕುತಾಯಂದಿರು ಹಲವರಿದ್ದಾರೆ. ಅವರೆಲ್ಲರ ಬಗ್ಗೆಯೂ ಅವರಿಗೆ ಒಂದೇ ತೆರನ ಗೌರವ.
ಶೇಷಶಾಸ್ತ್ರಿ ಇದ್ದೆಡೆ ನಗುವಿಗೆ ಕೊರತೆಯಿಲ್ಲ. ಎಂತಹ ಗಂಭೀರರನ್ನಾದರೂ ನಗುವಿನ ಹಾದಿಗೆ ಎಳೆದುತರುತ್ತಾರೆ. ತಮ್ಮ ಜೊತೆಯವರನ್ನೇ ನವಿರಾಗಿ ಛೇಡಿಸುತ್ತಾ, ಆ ಛೇಡಿಕೆಯನ್ನು ಅವರು ಸಹಿಸಿಕೊಂಡು, ಮೌನವಾಗಿಯೇ ಸಂತೋಷಪಡುವುದನ್ನು ಕಂಡು ಖುಷಿಪಡುತ್ತಾರೆ. ಆಂಧ್ರದಲ್ಲಿ ಯಾವುದಾದರೂ ಛೇಡಿಕೆಯ ಸಂದರ್ಭ ಎದುರಾದಾಗ, ಛೇಡಿಕೆಗೆ ಗುರಿಯಾದವರು, ಈ ಮನುಷ್ಯನ್ನ ಏನೂ ಅನ್ನೋ ಹಂಗಿಲ್ವಲ್ಲಪ್ಪ. ಇವನು ನಮ್ಮ ಅಳಿಯ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆ. ಯಾವುದೇ ದ್ವೇಷಕ್ಕೆ ಎಡೆಮಾಡದ ಅವರ ಮಾತುಗಳನ್ನು ಕೇಳಿ ಸಂತೋಷಪಡದಿರುವವರು ಅಪರೂಪ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಅವರಿಗೆ ಬೆಂಗಳೂರಿನ ಸಹಪಾಠಿ ಸಾಹಿತಿ ದೊಡ್ಡರಂಗೇಗೌಡರು ಎಷ್ಟು ಪ್ರಿಯರೋ ಅಷ್ಟೇ ಪ್ರಿಯರಾದವರು ಅವರ ಹಳ್ಳಿಯ ಅನ್ವರ್‌ಸಾಬ್, ನಾರಾಯಣಸ್ವಾಮಿ, ರಂಗಣ್ಣ ಮತ್ತು ಮುನಿಯಪ್ಪ. ಪ್ರತ್ಯಕ್ಷ ಮಾರ್ಗದರ್ಶಿ ಚಿದಾನಂದ ಮೂರ್ತಿ ಮತ್ತು ಮತ್ತೊಬ್ಬ ಗುರು ಹಂಪನಾ ಅವರ ಬಗ್ಗೆ ಇರುವಷ್ಟೇ ಗೌರವವನ್ನು ಪರೋಕ್ಷ ಗುರುಗಳಾದ ಬಿ.ಜಿ.ಎಲ್.ಸ್ವಾಮಿ ಮತ್ತು ಕೃಷ್ಣಾನಂದ ಕಾಮತರ ಬಗೆಗೂ ಬೆಳೆಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡ ಬಿ.ಎ.ಆನರ್ಸ್ ಮತ್ತು ಎಂ.ಎ., ಮುಗಿಸಿಕೊಂಡು, ಸಂಶೋಧನೆಯತ್ತ ಮುಖ ಮಾಡಿದ್ದಾಗಲೇ ಹಳ್ಳಿಯಲ್ಲೇ ನೆಲೆನಿಲ್ಲುವ ನಿರ್ಧಾರ ಮಾಡಿದ್ದ ಶೇಷಶಾಸ್ತ್ರಿ, ಕಾರಣಾಂತರಗಳಿಂದ ಹಳ್ಳಿಯನ್ನು ಬಿಟ್ಟರು. ಕರ್ನಾಟಕದಲ್ಲಿ ನೆಲೆಕಾಣಲು ಸಾಧ್ಯವಾಗದೆ, ಆಂಧ್ರದ ಅನಂತಪುರದಲ್ಲಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಉದ್ಯೋಗ ಪಡೆದು, ಅಲ್ಲೇ ಪ್ರಾಧ್ಯಾಪಕರಾಗಿ ನಿವೃತ್ತರಾದರು. ವೃತ್ತಿಯ ಸಂದರ್ಭ ಮತ್ತು ನಿವೃತ್ತಿಯ ನಂತರವೂ ಕನ್ನಡ ಮತ್ತು ತೆಲುಗು ಭಾಷೆ ಮತ್ತು ಸಂಸ್ಕೃತಿಗಳ ನಡುವಿನ ಕೊಂಡಿಯಾಗಿ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅವರು ಬೆಂಗಳೂರಿನಲ್ಲಿದ್ದಾಗಲೂ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನಶಾಸ್ತ್ರ ತರಗತಿಗಳು, ಆಚಾರ್ಯ ಪಾಠಶಾಲಾ ಸಂಜೆ ಕಾಲೇಜುಗಳಲ್ಲಿ ಕೆಲವು ಕಾಲ ಉಪನ್ಯಾಸಕರಾಗಿದ್ದು, ಅನೇಕರಿಗೆ ಮೇಷ್ಟ್ರಾಗಿ ಉಳಿದಿದ್ದಾರೆ. ಕೆಲವು ಕಾಲ ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಭಾಷಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಶೇಷಶಾಸ್ತ್ರಿ ಅವರ ಹೆಸರು ಮುಖ್ಯವಾಗಿರುವುದು ‘ಕರ್ನಾಟಕದ ವೀರಗಲ್ಲುಗಳು’ ಎಂಬ ಅವರ ಸಂಶೋಧನ ಮಹಾಪ್ರಬಂಧದ ಮೂಲಕ. ಸಂಶೋಧನೆ ಮುಂದುವರಿದಿದ್ದಾಗಲೇ, ಶಾಸನ ಲಿಪಿಸ್ವರೂಪವನ್ನು ಅಧ್ಯಯನ ಮಾಡಿ, ಅಧ್ಯಾಪನವನ್ನೂ ಮಾಡಿದ ಶೇಷಶಾಸ್ತ್ರಿ ಇಡಿಯಾಗಿ ಕರ್ನಾಟಕದಲ್ಲಿ ಕ್ಷೇತ್ರಕಾರ್ಯ ಮಾಡಿ, ಸಂಶೋಧನೆಯಲ್ಲಿ ಕ್ಷೇತ್ರಕಾರ್ಯದ ಮಹತ್ವಕ್ಕೆ ಬೆಲೆತಂದುಕೊಟ್ಟಿದ್ದಾರೆ. ಆ ಹೊತ್ತಿನಲ್ಲೇ ವೀರಗಲ್ಲುಗಳಲ್ಲಿನ ವಿಷಯವನ್ನು ಆಧರಿಸಿ, ‘ಪ್ರಜಾವಾಣಿ’ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಹಲವು ಕಥೆಗಳನ್ನು ಪ್ರಕಟಿಸಿದ್ದಾರೆ. ‘ಶಾಸನ ಪರಿಚಯ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.
ವಿವೇಕಾನಂದರ ಪ್ರಭಾವದಿಂದಾಗಿ ಮದುವೆಯಾಗದಿರಲು ತೀರ್ಮಾನಿಸಿದ್ದ ಶೇಷಶಾಸ್ತ್ರಿ ಅವರ ನಿರ್ಧಾರ ತಂದೆಯ ಮಾತಿನ ಮುಂದೆ ನಿಲ್ಲಲಿಲ್ಲ. ಅನಂತಪುರದ ಹೆಣ್ಣುಮಗಳನ್ನು ಮದುವೆಯಾದರು. ಅನಂತಪುರದಲ್ಲೇ ಅವರಿಗೆ ಉದ್ಯೋಗ ದೊರೆಯಿತು. ನಂತರ ಕೇವಲ ಮಾತೃಭಾಷೆಯಾಗಿದ್ದ ತೆಲುಗನ್ನು ಚೆನ್ನಾಗಿಯೇ ಕಲಿತು, ಚೆನ್ನಾಗಿಯೇ ಒಲಿದಿದ್ದ ಕನ್ನಡ ಭಾಷೆ ಮತ್ತು ಕಲಿತಿದ್ದ ತೆಲುಗು ಭಾಷೆಗಳ ಹಾರ್ದಿಕ ಸಂಬಂಧಕ್ಕೆ ಒಳ್ಳೆಯ ಬೆಸುಗೆ ಹಾಕಿದ ಶೇಷಶಾಸ್ತ್ರಿ ಎರಡು ಭಾಷೆಗಳ ವಿದ್ವಾಂಸರಿಗೂ ಅಚ್ಚುಮೆಚ್ಚಿನವರು. ನಿವೃತ್ತಿಯ ನಂತರವಂತೂ ಶೇಷಶಾಸ್ತ್ರಿ ತೆಲುಗು ಭಾಷೆಯ ಹಲವು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವಂತೆಯೇ, ಕೆ.ಎಸ್. ನರಸಿಂಹಸ್ವಾಮಿಯವರ ಕೆಲವು ಕವಿತೆಗಳನ್ನು, ಜೋಸ್ಯಂ ಸದಾನಂದ ಶಾಸ್ತ್ರಿಗಳ ಜೊತೆಗೆ ಮಲಿಪೂತ ಎಂಬ ಹೆಸರಿನಿಂದ ತೆಲುಗಿಗೆ ಅನುವಾದಿಸಿದ್ದಾರೆ. ಮಣಿಹ, ಕಮ್ಮಟಿಗ, ಗುಣಮಧುರ ಇತ್ಯಾದಿ ಕನ್ನಡ ಕೃತಿಗಳ ಸಂಪಾದನೆಯಲ್ಲದೆ ಡಾ. ಆರ್.ಗಣೇಶ್‌ರವರ ಸಹಾಯದಲ್ಲಿ ಸಂಪಾದಿಸಿದ ಆಂಧ್ರಪ್ರದೇಶದ ಕನ್ನಡ ಶಾಸನಗಳು ಶೇಷಶಾಸ್ತ್ರಿಯವರ ಸಂಪಾದನಾ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿವೆ.
ತೆಲುಗಿನಿಂದ ಕನ್ನಡಕ್ಕೆ ಶೇಷಶಾಸ್ತ್ರಿಯವರು ಮಾಡಿರುವ ಅನುವಾದಗಳು ಕನ್ನಡ ಭಾಷೆಗೆ ದೊರೆತ ಅಮೂಲ್ಯ ಕೊಡುಗೆಗಳು. ‘ಶುಕಸಪ್ತತಿ’ ಮತ್ತು ‘ಕಲಾಪೂರ್ಣೋದಯ’ ಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿರುವ ಕೃತಿಗಳು. ಇವುಗಳಲ್ಲದೆ ಕೊರಡ ರಾಮಕೃಷ್ಣಯ್ಯ ಅವರ ದಾಕ್ಷಿಣಾತ್ಯ ಭಾಷಾ ಸಾಹಿತ್ಯ ದೇಶೀ ತೆಲುಗು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೆ ಗುರ್ರಂ ಜೊಷುವಾ ಅವರ ಆತ್ಮಕಥೆಯನ್ನು ನಮ್ಮ ತಂದೆಯವರು ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಡಾ. ಶೇಷಶಾಸ್ತ್ರಿಯವರು ಅನುವಾದಿಸಿರುವ ಹಂಪಿಯಿಂದ ಹರಪ್ಪಾದವರೆಗೆ ಕನ್ನಡಕ್ಕೆ ಲಭಿಸಿರುವ ಅನನ್ಯ ಕೃತಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಅವರ ಮಹತ್ವದ ಅನುವಾದವೆಂದರೆ, ಬುದ್ಧನ ಜೀವನಗಾಥೆಯಾದ ‘ಲಲಿತವಿಸ್ತರ’.
ವೃತ್ತಿಯಿಂದ ನಿವೃತ್ತರಾದರೂ, ಬಿಡುವಿಲ್ಲದಂತೆ ಹಲವು ಕೆಲಸಗಳಲ್ಲಿ ತೊಡಗಿಕೊಂಡಿರುವ ಡಾ.ಆರ್. ಶೇಷಶಾಸ್ತ್ರಿ ಅವರನ್ನು ಅಭಿನಂದಿಸುವ ಸಲುವಾಗಿ, ‘ವಿಶೇಷ’ ಎಂಬ ಅಭಿನಂದನಾ ಗ್ರಂಥವನ್ನು ಇದೇ 27ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು. ಡಾ.ಆರ್. ಶೇಷಶಾಸ್ತ್ರಿ ಅವರ ಸಂಶೋಧನೆಯ ವಿಶೇಷ ಕ್ಷೇತ್ರ ಕರ್ನಾಟಕದ ವೀರಗಲ್ಲುಗಳಾಗಿರುವುದರಿಂದ, ವಿಶೇಷ ಸಂಚಿಕೆಯು ಸ್ಮಾರಕಗಳ ಅಧ್ಯಯನವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಿದ್ಧವಾಗಿದೆ. ವ್ಯಕ್ತಿ, ಸ್ಮಾರಕಗಳು ಮತ್ತು ಸಂಕೀರ್ಣ ಎಂಬ ಮೂರು ವಿಭಾಗಗಳಲ್ಲಿ 69 ಲೇಖನಗಳನ್ನೊಳಗೊಂಡಿರುವ ವಿಶೇಷದ ಮೊದಲ ಭಾಗದಲ್ಲಿ ಗುರುಗಳು, ಬಂಧುಗಳು, ಸ್ನೇಹಿತರು ಮತ್ತು ಶಿಷ್ಯರು ತಿಳಿದಿರುವ ಶೇಷಶಾಸ್ತ್ರಿ ಅವರ ವ್ಯಕ್ತಿಚಿತ್ರಣವಿದೆ. ಈ ಭಾಗದಲ್ಲಿ ಶೇಷಶಾಸ್ತ್ರಿ ಎಂಬ ವ್ಯಕ್ತಿಯ ವಿವಿಧ ಮುಖಗಳ ಪರಿಚಯವಾಗುತ್ತದೆ. ವಿಶೇಷವೆಂದರೆ ಅವರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವ ನೆಪದಲ್ಲಿ ಸಂದರ್ಶನ ಮಾಡಿದ ಸಂದರ್ಭದಲ್ಲಿ ಸ್ವಗತದ ರೂಪದಲ್ಲಿ ಶೇಷಶಾಸ್ತ್ರಿ ಅವರು ತೆರೆದಿಟ್ಟ ಅವರ ಸಾಕು ತಾಯಂದಿರ ಮತ್ತು ಗೆಳೆಯರ ಚಿತ್ರ ಒಬ್ಬ ವ್ಯಕ್ತಿ ರೂಪುಗೊಳ್ಳಲು ಅದೆಷ್ಟು ಜನ ಶ್ರಮಿಸಿರುತ್ತಾರೆ ಎಂಬುದರ ಅರಿವು ಮಾಡಿಕೊಟ್ಟಿತು. ಎರಡನೆಯ ಭಾಗದಲ್ಲಿ ಸ್ಮಾರಕಗಳನ್ನು ಕುರಿತಂತೆ ಹಿರಿಯರು ಮತ್ತು ಕಿರಿಯರು ಬರೆದಿರುವ ಸಂಪ್ರಬಂಧಗಳು ಸೇರಿವೆ. ಮೂರನೆಯ ಭಾಗವು ಸಂಕೀರ್ಣ ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಕರ್ನಾಟಕದ ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತ ಹಲವು ಮಹತ್ವದ ಲೇಖನಗಳಿವೆ. ಸಂಶೋಧನ ಲೇಖನಗಳ ವಿಷಯಗಳು ಕೇವಲ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇವೆ.
ಶೇಷಶಾಸ್ತ್ರಿಗಳು ಕರ್ನಾಟಕದ ಮನೆಮಗನಾಗಿ ಮತ್ತು ಆಂಧ್ರದ ಸಾಕುಮಗನಾಗಿ ಮಾಡಿರುವ ಸಾರ್ಥಕ ಸೇವೆಗೆ ಈ ಅಭಿನಂದನೆಯು ಒಂದು ನೆನಪು. ಅವರಿಗೆ ಕರ್ನಾಟಕ ಮತ್ತು ಆಂಧ್ರಗಳೆರಡರಲ್ಲೂ ಗುರುಗಳಿದ್ದಾರೆ; ಸ್ನೇಹಿತರಿದ್ದಾರೆ; ಶಿಷ್ಯರಿದ್ದಾರೆ. ಕರ್ನಾಟಕಾಂಧ್ರಗಳ ಸಾಂಸ್ಕೃತಿಕ ಸೇತುವೆಯಾಗಿರುವ ಶೇಷಶಾಸ್ತ್ರಿಗಳಿಂದ ಮತ್ತಷ್ಟು ಸಂಶೋಧನೆ, ಸೃಜನ ಮತ್ತು ಸಂಕೀರ್ಣ ಸಾಹಿತ್ಯವನ್ನು ಅಪೇಕ್ಷಿಸುವುದು ಆಸೆಯಷ್ಟೇ ಹೊರತು ದುರಾಸೆಯಲ್ಲ.
ವಿಶೇಷ ಅಭಿನಂದನಾ ಗ್ರಂಥದ ಪ್ರಕಟಣೆಯ ಜವಾಬ್ದಾರಿಯನ್ನು ಆಂಧ್ರದ ಕುಪ್ಪಂನ ಚಿತ್ಕಲಾ ಪ್ರಕಾಶನ ಒಪ್ಪಿಕೊಂಡಿದೆ. ಅಭಿನಂದನಾ ಗ್ರಂಥಕ್ಕಾಗಿ, ಸಹಜವಾಗಿಯೇ ಅಭಿನಂದನಾ ಸಮಿತಿ ಶ್ರಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.