ರೂಪವನ್ನು ಬಯಲು ಮಾಡಬಲ್ಲವರು ಮತ್ತು ಬಯಲನ್ನು ರೂಪಗೊಳಿಸಬಲ್ಲವರು ಎಂಬ ಎರಡು ಪ್ರಮುಖ ಮಾದರಿಯ ವ್ಯಕ್ತಿತ್ವಗಳನ್ನು ವಿಮರ್ಶೆ, ಚಿಂತನೆಗಳ ಲೋಕದಲ್ಲೂ ಕಾಣಬಹುದು. ರೂಪವನ್ನು ಬಯಲು ಮಾಡಬಲ್ಲವರು ಒಪ್ಪಿತವಾದ ಅರ್ಥ, ಅಂಗೀಕೃತವಾದ ಕ್ರಮ, ಶಿಸ್ತು ಇಂಥವನ್ನೆಲ್ಲ ಮೀರಿ ಮುಗಿಲ ಮಿಂಚಿನ ಹಾಗೆ ಕಾಣದಿದ್ದುದನ್ನೂ ಊಹಿಸದಿದ್ದುದನ್ನೂ ಪಳಕ್ಕನೆ ತೋರುವವರು.
ಅವರನ್ನು ‘ಕಲಿಯುವ ವಸ್ತು’ ಮಾಡಿಕೊಳ್ಳಲಾಗದು, ಅನುಕರಿಸಲು ಆಗದು. ಹೇಗೆ ನೋಡುತ್ತಾರೆ, ಹೇಗೆ ವಿಚಾರಮಾಡುತ್ತಾರೆ, ಇತ್ಯಾದಿಯೆಲ್ಲ ಅಜ್ಞಾತವೇ ಆಗಿ ಉಳಿಯುತ್ತದೆ. ತಕ್ಷಣಕ್ಕೆ ನೆನಪಿಗೆ ಬರುವ ಹೆಸರು ಕಿ.ರಂ. ನಾಗರಾಜ ಅವರದ್ದು. ಕುರ್ತಕೋಟಿ ಅವರದ್ದು. ಇಂಥ ಮಹನೀಯರು ಹೇಳಿದ್ದನ್ನು ಒಪ್ಪದಿರಬಹುದು, ಆದರೆ ಅವರು ಕಾಣಿಸಿದ್ದನ್ನು ಸುಳ್ಳು ಅನ್ನಲಾಗದು.
ಇನ್ನು ಅರ್ಥವಿರದ ಬಯಲಿಗೆ ಅರ್ಥದ ರೂಪ ಕೊಟ್ಟು ಆಲಯವನ್ನು ನಿರ್ಮಿಸುವವರು. ಆಲೋಚನೆಯಲ್ಲಿ, ಬರವಣಿಗೆಯಲ್ಲಿ ನಿರ್ದಿಷ್ಟ ಕ್ರಮ ಅನುಸರಿಸುವವರು; ಸತಾರ್ಕಿಕವಾಗಿ ಚಿಂತಿಸಿ ತೀರ್ಮಾನಕ್ಕೆ ಬರುವವರು; ತಮ್ಮ ಮಾತು ಅಪಾರ್ಥ, ಅನ್ಯಾರ್ಥ, ಅನುದ್ದೇಶಿತ ಅರ್ಥಗಳನ್ನು ನೀಡಬಾರದೆಂಬ ಎಚ್ಚರದಲ್ಲಿ ತಪಿಸುವವರು. ಸದಾ ಗಟ್ಟಿನೆಲದ ಮೇಲೇ ಹೆಜ್ಜೆ ಇಡುವವರು. ನಾಗರಿಕತೆ, ಶಿಕ್ಷಣ, ಚಿಂತನೆ ಬೆಳೆಯುವುದಕ್ಕೆ ಇಂಥವರು ತೀರ ತೀರ ಮುಖ್ಯರು.
ವಿದ್ವಾಂಸರು, ಬೋಧಕರು ಇವರು. ಇವರನ್ನು ಮಾದರಿಯಾಗಿಟ್ಟುಕೊಂಡು ಅವರು ತೋರಿದ ದಾರಿಯಲ್ಲಿ ಸಾಗುವುದು ಕಷ್ಟವಾದರೂ ಅಸಾಧ್ಯವಲ್ಲ. ನಮ್ಮೊಡನೆ ಇರುವ ಹಿರಿಯರಾದ ಜಿ.ಎಸ್. ಆಮೂರ, ಜಿ.ಎಚ್. ನಾಯಕ ಇಂಥ ಮಹನೀಯರು. ಆಮೂರರ ಕೃತಿಗಳ ರಚನೆಯ ನಕ್ಷೆಯೇ ಕನ್ನಡದಲ್ಲಿ ಬರೆಯುವ ಇಂಗ್ಲಿಷ್ ಅಧ್ಯಾಪಕರು ಎದುರಿಸಿದ ಸಮಸ್ಯೆಗಳನ್ನು, ಹಾಯ್ದು ಬಂದ ಸ್ಥಿತ್ಯಂತರಗಳನ್ನು ಸೂಚಿಸುತ್ತದೆ. ಆಮೂರರು ಹುಟ್ಟಿದ್ದು, ಓದಿದ್ದು ಮಧ್ಯ ಕರ್ನಾಟಕದ ಹಳ್ಳಿಗಾಡಿನಲ್ಲಿ.
ಇಂಗ್ಲಿಷ್ ಅಧ್ಯಾಪಕರಾಗಿ ಉದ್ಯೋಗ ಆರಂಭಿಸಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ. ಅವರ ಸುಮಾರು ಮೂವತ್ತು ಕನ್ನಡ ಪುಸ್ತಕಗಳಲ್ಲಿ ೨೫ನ್ನು ರಚಿಸಿದ್ದು ನಿವೃತ್ತರಾದ ನಂತರ. ಸುಮಾರು ಇಪ್ಪತ್ತು ಇಂಗ್ಲಿಷ್ ಕೃತಿಗಳಲ್ಲಿ ಒಂದೆರಡನ್ನು ಹೊರತುಪಡಿಸಿದರೆ ಮಿಕ್ಕವೆಲ್ಲ ಅವರ ಉದ್ಯೋಗ ಅವಧಿಯಲ್ಲಿ ರಚನೆಗೊಂಡವು.
ಕಾಮಿಡಿ ಕುರಿತು, ಎಲಿಯೆಟ್ ಕುರಿತು, ಭಾರತೀಯಾಂಗ್ಲ ಲೇಖಕರನ್ನು ಕುರಿತು, ಕಾಮನ್ ವೆಲ್ತ್ ಸಾಹಿತ್ಯ ಕುರಿತು, ಭಾರತೀಯ ಲೇಖಕರ ತೌಲನಿಕ ಅಧ್ಯಯನ ಕುರಿತು ಮಾಡಿರುವ ಬರವಣಿಗೆ, ಭಾರತೀಯ ಭಾಷಾ ಸಾಹಿತ್ಯಗಳ ಇಂಗ್ಲಿಷ್ ಅನುವಾದ– ಇವೆಲ್ಲವೂ ಸ್ವಾತಂತ್ರ್ಯಾನಂತರ ನಮ್ಮ ವಿಶ್ವವಿದ್ಯಾಲಯಗಳ ಇಂಗ್ಲಿಷ್ ವಿಭಾಗಗಳು ಪ್ರಸ್ತುತತೆಯನ್ನು ಗಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳ ಪ್ರತಿಫಲನವೂ, ವೃತ್ತಿಗೆ ನಿಷ್ಠರಾದ ಅಧ್ಯಾಪಕರ ಕರ್ತವ್ಯವೂ ಆಗಿ ಕಾಣುತ್ತದೆ.
ಕನ್ನಡನಾಡಿನಿಂದ ದೂರವಾಗಿ ಕನ್ನಡ ಸಾಹಿತ್ಯದಿಂದಲೂ ದೂರವಾಗಿ ಇದ್ದ ದಶಕಗಳು ಹುಟ್ಟಿಸಿದ ಪರಕೀಯ ಭಾವ ನೀಗಿಕೊಳ್ಳುವುದಕ್ಕೆಂದೇ ಆಮೂರರು ಹಟ ತೊಟ್ಟ ಹಾಗೆ 80ರ ದಶಕದಿಂದ ಕನ್ನಡದಲ್ಲೇ ಸತತವಾಗಿ ಬರೆಯುತ್ತ ಬಂದರು ಅನ್ನಿಸುತ್ತದೆ. ‘ಇಂಗ್ಲಿಷಿನ ಸುದೀರ್ಘ ಸಹವಾಸದಿಂದ ಒಂದು ಬಗೆಯ ಪರಕೀಯ ಭಾವನೆ ಬೆಳೆಯಿತು. ಅದನ್ನು ನಿವಾರಿಸುವ ಒಂದು ಉಪಾಯ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು’ ಎಂದು ಆಮೂರರೇ ಒಂದೆಡೆ ಹೇಳಿಕೊಂಡಿದ್ದಾರೆ.
ಆಮೂರರ ಕನ್ನಡದ ಕೃತಿಗಳನ್ನು ನೋಡಿದಾಗ ಅವರ ವಿಮರ್ಶೆಯ ಸ್ವರೂಪ, ಅದರಲ್ಲಿ ಉಂಟಾದ ಸೂಕ್ಷ್ಮ ಬದಲಾವಣೆಗಳು ಗಮನಕ್ಕೆ ಬರುತ್ತವೆ. ಅವರ ವಿಮರ್ಶೆಯ ಉದ್ದೇಶ, ಗುರಿಗಳು ಎಷ್ಟು ಘನವಾದವು ಅನ್ನುವುದು ಅರಿವಾಗುತ್ತದೆ. ‘ಸಮಗ್ರತೆ ಯಾವಾಗಲೂ ಒಂದು ಆದರ್ಶವೇ ಹೊರತು ವಾಸ್ತವವಲ್ಲ’ (‘ಕೊರಳು ಕೊಳಲು’ ಮುನ್ನುಡಿ, 2005) ಎಂಬ ತಿಳಿವಳಿಕೆಯೊಡನೆಯೇ ಆಮೂರರು ತಮ್ಮ ವಿಮರ್ಶೆಯಲ್ಲಿ ಸಮಗ್ರತೆಯನ್ನು ಸಾಧಿಸಲು ಪ್ರಯತ್ನಿಸುತ್ತಾರೆ.
ಆಮೂರರಿಗೆ ಖ್ಯಾತಿಯನ್ನು ತಂದುಕೊಟ್ಟ ‘ಭುವನದ ಭಾಗ್ಯ’ ಕೃತಿಯ ಆರಂಭದಲ್ಲಿ ಅವರು ತಮ್ಮ ಉದ್ದೇಶವನ್ನು ಹೀಗೆ ಹೇಳಿಕೊಂಡಿದ್ದಾರೆ. ‘ಬೇಂದ್ರೆಯವರ ಸಾಹಿತ್ಯವನ್ನು ಇಡಿಯಾಗಿ ನೋಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಬೇಂದ್ರೆಯವರ ಸಾಹಿತ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿಟ್ಟು ಇಡಿಯಾಗಿ ನೋಡುವ ಪ್ರಯತ್ನವಿದೆ... ನಾನು ಆಯ್ದುಕೊಂಡದ್ದು ಅವರ ಸಮಗ್ರ ಸಾಧನೆಯ ಪರಿಪ್ರೇಕ್ಷ್ಯ. ಅವರ ದರ್ಶನದ ಅಖಂಡತೆಯನ್ನು, ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮವನ್ನು, ಅಭಿವ್ಯಕ್ತಿಯ ವೈವಿಧ್ಯವನ್ನು ಗುರುತಿಸಲು ಸಾಧ್ಯವಾಗಬಹುದು...
ಕಾಲಕ್ರಮ ಮತ್ತು ವಸ್ತುಕ್ರಮಗಳೆರಡನ್ನೂ ಒಳಗೊಳ್ಳುವ ನಿರೂಪಣಾವಿಧಾನವನ್ನು ಅನುಸರಿಸಿದ್ದೇನೆ’ ಎಂದಿದ್ದಾರೆ. ಇದರೊಡನೆ ಬೇಂದ್ರೆಯವರನ್ನು ಕುರಿತ ಚರ್ಚೆಗಳ ಮುಖ್ಯಾಂಶಗಳನ್ನೂ ದಾಖಲಿಸಿ, ಪರಿಶೀಲಿಸಿ ತಮ್ಮ ನಿಲುವನ್ನು ಖಚಿತಗೊಳಿಸುತ್ತಾರೆ ಆಮೂರರು. ಅಂದರೆ ಕೃತಿಕಾರರ ಮತ್ತು ಕೃತಿಗಳ ಚರಿತ್ರೆ, ವಸ್ತುಗಳ ವಿನ್ಯಾಸ, ವೈವಿಧ್ಯ ವಿಸ್ತಾರ, ಅಭಿವ್ಯಕ್ತಿ ಇವುಗಳೊಡನೆ ನಿರ್ದಿಷ್ಟ ಕೃತಿಕಾರರನ್ನು ಕುರಿತ ವಿಮರ್ಶಾ ತೀರ್ಮಾನಗಳ ವೈವಿಧ್ಯವೂ ಆಮೂರರ ಸಮಗ್ರತೆಯ ಕಲ್ಪನೆಯಲ್ಲಿ ಸೇರಿಕೊಂಡಿದೆ.
ಬೇಂದ್ರೆಯವರಲ್ಲದೆ ಕನ್ನಡ ಸಾಹಿತ್ಯದ ವಿರಾಟ್ ಪುರುಷ ಶ್ರೀರಂಗ, ಅನಂತಮೂರ್ತಿಯವರ ಕಥಾ ಸಾಹಿತ್ಯ, ಕಾರ್ನಾಡರ ನಾಟಕಗಳು ಕುರಿತೂ ಇಂಥದೇ ಸಮಗ್ರ ಅಧ್ಯಯನಗಳನ್ನು ಆಮೂರರು ನಡೆಸಿದ್ದಾರೆ. ಸಮಗ್ರತೆಯ ಅಪೇಕ್ಷೆ ಆಮೂರರ ವಿಮರ್ಶೆಯ ಮುಖ್ಯ ಪ್ರೇರಣೆಯಾಗಿರುವುದರಿಂದ ಅವರ ಬರವಣಿಗೆ ಸಾಹಿತ್ಯ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಯಾವತ್ತೂ ಅಮೂಲ್ಯವಾದ ಆಕರಗಳಾಗಿ ಉಳಿಯುತ್ತವೆ.
ಈ ಸಮಗ್ರತೆಯ ಇನ್ನೊಂದು ಮುಖ ಪಾರಿಭಾಷಿಕ, ಪರಿಕಲ್ಪನೆ, ಸೈದ್ಧಾಂತಿಕ ನಿಲುವುಗಳನ್ನು ಕುರಿತ ಬರಹಗಳಲ್ಲಿ ಕಾಣುತ್ತದೆ. ಕಾಮಿಡಿಯನ್ನು ಕುರಿತ ಅವರ ಬರಹ, ‘ಕಥನ ಶಾಸ್ತ್ರ’, ‘ಕನ್ನಡ ಕಾದಂಬರಿಯ ಬೆಳವಣಿಗೆ’ ಇಂಥ ಕೃತಿಗಳು ಕನ್ನಡದಲ್ಲಿ ಸಾಹಿತ್ಯಕ ಅಭಿವ್ಯಕ್ತಿಯನ್ನು ಕುರಿತ ವಿದ್ವತ್ತನ್ನು ನಿರ್ಮಿಸುವ ಉದ್ದೇಶದವು.
ಆಧುನಿಕ ಕನ್ನಡ ಸಾಹಿತ್ಯದ ಪರಂಪರೆಯನ್ನು ಕಲ್ಪಿಸುವುದು ಆಮೂರರ ಬರವಣಿಗೆಗಳ ಇನ್ನೊಂದು ಮುಖ್ಯ ಅಪೇಕ್ಷೆ. ಎರಡು ವರ್ಷಗಳ ಹಿಂದೆ ‘ಧಾರವಾಡದ ಸಾಹಿತ್ಯ ಸಂಭ್ರಮ’ದಲ್ಲಿ ಮಾತನಾಡುತ್ತ ಆಮೂರರು ‘ಪಾಶ್ಚಾತ್ಯ ಸಾಹಿತ್ಯದ ಸಿದ್ಧ ಮಾದರಿಗಳನ್ನು ಆವಾಹಿಸಿಕೊಂಡು ಸಾಹಿತ್ಯ ರಚಿಸಿದ್ದು ನನ್ನ ತಲೆಮಾರು ಮಾಡಿದ ದೊಡ್ಡ ತಪ್ಪು. ಇದರಿಂದ ಈವರೆಗೂ ಜಾಗತಿಕ ಮನ್ನಣೆ ಪಡೆಯುವಂಥ ಅಥವ ಜಗತ್ತನ್ನೇ ಸೆಳೆಯುವಂಥ ಕನ್ನಡ ಸಾಹಿತ್ಯ ಕೃತಿ ರಚಿಸಲಾಗಿಲ್ಲ.
ವಾಸ್ತವವಾಗಿ ಭಾರತೀಯ ಪರಂಪರೆಯನ್ನು ಸಮರ್ಥವಾಗಿ ಬಳಸಿಕೊಂಡು ಸಾಹಿತ್ಯ ರಚಿಸುವ ಸೃಜನಶೀಲ ಕ್ರಿಯೆ ಈಗಲಾದರೂ ನಡೆಯಬೇಕಿದೆ. ನಮ್ಮ ಸಾಹಿತಿಗಳಲ್ಲಿ ಸೃಜನಶೀಲತೆ ಕ್ರಿಯಾಶೀಲತೆ ಜಾಸ್ತಿ ಇದೆ, ಕ್ಷೀಣ ಬೌದ್ಧಿಕ ಚಿಂತನೆ ಇದೆ’ ಎಂದಿದ್ದರು. ಈ ಪಾಶ್ಚಾತ್ಯ ಸಂಸ್ಕೃತಿ ಪ್ರಚಂಡ ಪ್ರವಾಹದಲ್ಲಿ ಸಿಕ್ಕ ನಮಗೆ ಕನ್ನಡ ಪರಂಪರೆಯ ಆಶ್ರಯವೇ ತಪ್ಪಿ ಹೋಗಿದೆ. ‘ಕನ್ನಡ ಸಾಹಿತ್ಯ ಸಂಸ್ಕೃತಿಗಳಲ್ಲಿ ಬೇರು ಬಿಡದೆ ನಾವು ಇತರ ಸಾಹಿತ್ಯ ಸಂಸ್ಕೃತಿಗಳಿಂದ ಬೆಲೆಯುಳ್ಳುದನ್ನು ಪಡೆಯಲಾರೆವು’. ಇದು ಆಮೂರರು ಇತ್ತೀಚೆಗೆ ಹೇಳಿರುವ ಮಾತು.
ಕೃತಿಯೊಂದನ್ನು, ಕೃತಿಯ ಭಾಷಿಕ ರೂಪವನ್ನು, ಇವನ್ನು ಮಾತ್ರ ಗಮನಿಸಿ ನೆರವೇರಿಸುವ ನವ್ಯವಿಮರ್ಶೆಯನ್ನು ಕನ್ನಡ ಎಂದೂ ಅನುಸರಿಲಿಲ್ಲ. ಆಮೂರರು ಕೂಡ ಕೃತಿಯು ಸ್ವಯಂಭೂ ಅಲ್ಲ, ಪರಂಪರೆಯ ನಿರಾಕರಣೆ ಸಲ್ಲ ಎಂಬ ನಿಲುವಿಗೆ ಹೊರಳಿದರು. ಲೀವಿಸ್ ಮತ್ತು ಎಲಿಯೆಟ್‌ರ ಮಾರ್ಗದಲ್ಲಿ ಸಾಗುತ್ತಿರುವಾಗಲೇ ವಿಮರ್ಶೆಯಲ್ಲಿ ಅಥೆಂಟಿಕ್ ಆದ ಯಾವ ಪ್ರತಿಕ್ರಿಯೆಗೂ ಸ್ಥಾನವಿದೆ ಎಂದು ಪ್ರತಿಪಾದಿಸಿದರು. ಕೃತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕೆಂಬ ನವ್ಯ ವಿಮರ್ಶೆಯ ವ್ರತವನ್ನೂ ಪರಂಪರೆಯನ್ನು ರೂಪಿಸುವ ಜವಾಬ್ದಾರಿಯನ್ನೂ ಸಮಸಮವಾಗಿ ಆಮೂರರು ಹೊತ್ತಿರುವುದು ಕಾಣುತ್ತದೆ.
ವಸಾಹತುಶಾಹಿ ವಿಕಲ್ಪಗಳಿಂದ ಬಿಡುಗಡೆಗೊಳ್ಳಲು ಜಾಗತಿಕ ಚಿಂತನೆಗಳೊಂದಿಗೆ ಸಂವಾದಿಸುವುದಕ್ಕೆ ಬೇಕಾಗುವ ಆತ್ಮವಿಶ್ವಾಸವನ್ನು ಸಂಪಾದಿಸಿಕೊಳ್ಳುವುದು ಹೇಗೆ ಅನ್ನುವುದೂ ಆಮೂರರ ವಿಮರ್ಶಾ ಲೇಖನಗಳ ಹಿಂದೆ ಇರುವ ಇನ್ನೊಂದು ಕಾಳಜಿ. ಆಮೂರರು ಸಂಪಾದಿಸಿರುವ ಚಿತ್ತಾಲ, ಸದಾಶಿವರ ಕಥೆಗಳು, ಸ್ವಾತಂತ್ರ್ಯೋತ್ತರ ಕಥೆಗಳು ಮತ್ತು ಅವಳ ಕಥೆಗಳು ಇಂಥ ಸಂಕಲನಗಳು ಅವರು ಯಾವುದನ್ನು ಆಧುನಿಕ ಕನ್ನಡದ ಪರಂಪರೆ ಎಂದು ಯಾಕೆ ಗುರುತಿಸುತ್ತಾರೆ ಅನ್ನುವುದನ್ನು ಸೂಚಿಸುತ್ತವೆ.
ಲೀವಿಸ್ ಹೇಗೆ ಇಂಗ್ಲಿಷ್‌ನ ಮಹಾಪರಂಪರೆಯನ್ನು ಬದ್ಧತೆ ಮತ್ತು ಪಾಂಡಿತ್ಯದಿಂದ ಗುರುತಿಸಿದನೋ ಹಾಗೇ ಆಮೂರರೂ ಅಂಥ ಕಾರ್ಯದಲ್ಲಿ ತೊಡಗಿದ್ದಾರೆ ಅನ್ನಿಸುತ್ತದೆ. ಇಂಗ್ಲಿಷ್ ಮತ್ತು ಕನ್ನಡ ಎಂಬೆರಡು ಹಂತ– ಭಾಷಿಕ ಸಂರಚನೆ ಎಂಬುದರಿಂದ ಹೊರಟು ಸಾಂಸ್ಕೃತಿಕ ರಚನೆ ಕೂಡ ಹೌದು, ಕೃತಿ ನಿಷ್ಠ ವಿಮರ್ಶೆಯೊಂದೇ ಪರಿಪೂರ್ಣ ವಿಮರ್ಶಾ ಮಾರ್ಗ, ವಿಮರ್ಶೆಯ ಬಹುತ್ವ, ಬಹುಮುಖತ್ವಗಳ ಸ್ವಾಗತ, ಅನುಮೋದನೆ. ಸಾಹಿತ್ಯದಲ್ಲಿ ರಾಷ್ಟ್ರೀಯತೆಗೆ ಅವಕಾಶವೇ ಇಲ್ಲ ಅನ್ನುವುದರಿಂದ ಹೊರಟು ನಮ್ಮದೇ ಪರಂಪರೆಯನ್ನು ಹುಡುಕಿ ಪ್ರತಿಷ್ಠಾಪಿಸುವ ಕೆಲಸ.
ನವೋದಯದ ಕಾಲದಲ್ಲಿ ಎ.ಆರ್. ಕೃಷ್ಣಶಾಸ್ತ್ರಿ ಅವರು ಬಂಕಿಂಚಂದ್ರರ ಬಗ್ಗೆ ರಚಿಸಿದ ಸಮಗ್ರ ಸ್ವರೂಪದ ಅಧ್ಯಯನ, ನವೋದಯದ ಹಿರಿಯರು ಕಲ್ಪಿಸಿಕೊಂಡ ಕನ್ನಡ ಪರಂಪರೆ ನೆನಪಿಗೆ ಬರುತ್ತದೆ. ಪ್ರತಿ ತಲೆಮಾರೂ, ಎಲ್ಲ ಪ್ರಮುಖ ಸೃಜನಶೀಲರೂ ಎಲ್ಲ ಪ್ರಮುಖ ವಿಮರ್ಶಕರೂ ತಮ್ಮದೇ ಆದ ಸಾಹಿತ್ಯಕ ಪರಂಪರೆಯನ್ನು ಕಲ್ಪಿಸಿಕೊಳ್ಳುತ್ತಾರೆ. ಆಮೂರರ ಸಮಗ್ರವಿಮರ್ಶೆಯ ಕಲ್ಪನೆಯಲ್ಲಿ ವಿವಿಧ ಕೃತಿಗಳ ತೌಲನಿಕ ಪರಿಶೀಲನೆ, ವಿಮರ್ಶಾತ್ಮಕ ಸ್ಪಂದನಗಳ ಪರಿಶೀಲನೆ ಎರಡೂ ಒಟ್ಟೊಟ್ಟಿಗೆ ಸಾಗುವುದರಿಂದ ಅವರ ವಿಮರ್ಶೆ ಶೈಕ್ಷಣಿಕವಾಗಿ ಮುಖ್ಯವಾಗುತ್ತದೆ.
ಆಮೂರರ ವಿಮರ್ಶೆಯ ಭಾಷೆಯ ಬಗ್ಗೆ ಎರಡು ಮಾತು. ‘ಕಾವ್ಯದ ಸಂದರ್ಭದಲ್ಲಿ ಪ್ರತಿಮಾ ಮಾರ್ಗದ ಅನಿವಾರ್ಯತೆಯನ್ನು ಯಾವ ಸಂಕೋಚವೂ ಇಲ್ಲದೆ ಒಪ್ಪಿಕೊಳ್ಳಬಹುದು, ಸಮಸ್ಯೆ ಇರುವುದು ಈ ಮಾರ್ಗ ಎಷ್ಟರ ಮಟ್ಟಗೆ ವಿಮರ್ಶೆಯ ಮಾರ್ಗವಾಗಬಲ್ಲುದು ಎಂಬುದರಲ್ಲಿ’ ಎಂದು ಆಮೂರರು 2004ರಲ್ಲಿ ಪ್ರಕಟವಾದ ‘ನಿಂದ ಹೆಜ್ಜೆ’ ಪುಸ್ತಕದಲ್ಲಿರುವ ಡಿ.ಆರ್. ನಾಗರಾಜ್ ಕುರಿತ ಲೇಖನದಲ್ಲಿ ಹೇಳುತ್ತಾರೆ. ನಿರ್ಲಿಪ್ತವಾಗಿ, ನಿಷ್ಪಕ್ಷಪಾತವಾಗಿ, ವಿದ್ವದಾಧಾರಿತವಾಗಿ, ಸಮರ್ಪಕವಾಗಿ ಬರೆಯಬೇಕೆಂಬ ನಿಶ್ಚಯದಲ್ಲಿ ಕಟ್ಟುವ ಭಾಷೆ ಕೇವಲ ಅಭಿದಾಶಕ್ತಿಯನ್ನು ಮಾತ್ರ ಒಳಗೊಂಡಿರುತ್ತದೆ.
ಆಮೂರರ ಕೃತಿಗಳ ಶೀರ್ಷಿಕೆಯಲ್ಲಿ ಕಾಣುವ ‘ನಿಂದ ಹೆಜ್ಜೆ’, ‘ಕೊರಳು-ಕೊಳಲು’, ‘ಭುವನದ ಭಾಗ್ಯ’ ಇಂಥ ರೂಪಕಗಳು ಶೀರ್ಷಿಕೆಗೆ ಮಾತ್ರ ಸೀಮಿತ. ಬರವಣಿಗೆಯ ಶೈಲಿ ಬಲುಮಟ್ಟಿಗೆ ನಿರಾಡಂಬರ, ನಿರಾಲಂಕೃತ, ನಿರ್ಲಿಪ್ತ ಶೈಲಿ. ಹಾಗಿದ್ದರೂ ಬೇಂದ್ರೆ, ಶ್ರೀರಂಗ, ಕಾರ್ನಾಡ, ಅನಂತಮೂರ್ತಿ ಇಂಥ ಆಧುನಿಕ ಲೇಖಕರ ಬಗ್ಗೆ ತಿಳಿಯಲು, ಅಧ್ಯಯನ ಮಾಡಲು ಬಯಸುವವರಿಗೆ ಸಂಪೂರ್ಣ ವಿಶ್ವಾಸಾರ್ಹವಾದ ಆಕರಗಳಾಗಿ ಆಮೂರರ ಬರವಣಿಗೆ ಒದಗಿಬರುತ್ತದೆ.
ಆಮೂರರು ತಮ್ಮ ವಿಮರ್ಶೆಯ ಸಾಧನೆಗಳಿಗಾಗಿ ಕನ್ನಡ ಸಮುದಾಯದ ಮನ್ನಣೆಗೆ ಪಾತ್ರರಾಗಿದ್ದಾರೆ. ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಭಾಷಾ ಪರಿಷತ್ ಮನ್ನಣೆಗಳು ಮಾತ್ರವಲ್ಲದೆ ಪಂಪ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ವಿಮರ್ಶೆಯನ್ನು ಕುರಿತು ಮೂರು ಪುಸ್ತಕಗಳೂ ಹಲವು ಲೇಖನಗಳೂ ರಚನೆಗೊಂಡಿವೆ.
ನೀರಲ್ಲಿ ಮುಳುಗಿದವ ಚಡಪಡಿಸುವಂತುಸಿಗೆ, ನಿಮಗೆ ಸದಾ ಸಾಹಿತ್ಯದ ಚಡಪಡಿಕೆ. ಹೊಸದಾಗಿ ಕಂಡದ್ದ ಕಾಣಬಂದವರಿಗೆ ಫಡಫಡ ತಿಳಿಸುವವರೆಗೆ ನಿಲ್ಲದ ನುಡಿ..
ಶಾಲೆ ಮಕ್ಕಳ ಕ್ಯೂನಲ್ಲಿ ಮೊಗದ ಹಿಂದಿನ ಅರೆಮೊಗದ ತವಕದಿಣುಕಿನ ಕತ್ತರಿಗಣ್ಣು. ಮುಗಿಯದ ಮಾತು
ಎಂದು ಎಚ್.ಎಸ್. ವೆಂಟಕೇಶಮೂರ್ತಿಯವರು ಆಮೂರರನ್ನು ವರ್ಣಿಸಿದ್ದಾರೆ. ನಮ್ಮ ಹಿರಿಯ ತಲೆಮಾರಿನ ವಿಮರ್ಶಕರು, ಚಿಂತಕರು ನಿಸ್ಪೃಹತೆಯಿಂದ, ನಿಷ್ಠೆಯಿಂದ ತಮ್ಮ ಪಾಲಿನ ಸಾಂಸ್ಕೃತಿಕ ಜವಾಬ್ದಾರಿ ನಿರ್ವಹಿಸಿದ್ದಾರೆ. ಈಗಿನ ಶಿಕ್ಷಣ ಕ್ರಮ, ಪರೀಕ್ಷಾ ಕ್ರಮ, ಸಮಾಜದಲ್ಲಿ ವ್ಯಾಪಕವಾಗಿರುವ ಮನೋಧರ್ಮ ಇವುಗಳ ಕಾರಣದಿಂದ ಸಾಹಿತ್ಯ, ವಿಮರ್ಶೆ, ವಿದ್ವತ್ತು ಇವೆಲ್ಲವೂ ಅಪ್ರಸ್ತುತವಾಗಿವೆ ಅನ್ನುವ ವಿಷಾದ ಆವರಿಸಿರುವ ಕಾಲದಲ್ಲಿದ್ದೇವೆ.
ಅರ್ಥದ ಕಟ್ಟಡ ಒಡೆದು ಬಯಲಾಗಿಸಿ ಮಿಂಚುವ ವ್ಯಕ್ತಿತ್ವಗಳಾಗುವುದು ಸ್ವಂತ ಇಚ್ಛೆಯಿಂದ ಆಗುವಂಥದಲ್ಲ. ಆಮೂರರು ತಮ್ಮ ಆಯ್ಕೆಯ ಸಾಹಿತ್ಯಾನುಭವದ ಬಯಲಿಗೆ ಶಿಸ್ತಿನಿಂದ, ತನ್ಮಯತೆಯಿಂದ, ನಿಷ್ಠೆಯಿಂದ, ಶ್ರಮಪೂರ್ವಕವಾಗಿ ದುಡಿದು ರೂಪು ನೀಡುವ ಕಾರ್ಯ ಹೇಗೆ ನಿರ್ವಹಿಸಬೇಕೆನ್ನುವುದಕ್ಕೆ ಮಾದರಿಯಾಗಿದ್ದಾರೆ. ನಮ್ಮ ತಲೆಮಾರನ್ನು ಪ್ರಭಾವಿಸಿದ, ತಿದ್ದಿದ ಕನ್ನಡದ ಹಿರಿಯರ ಸಾಲಿನಲ್ಲಿರುವ ಆಮೂರರಿಗೆ ತೊಂಬತ್ತು ತುಂಬುವ ಹೊತ್ತಿನಲ್ಲಿ ಹೀಗೆ ಕೃತಜ್ಞತೆ ಹೇಳುವ ಅವಕಾಶ ದೊರೆತಿದೆ.
(ಓ.ಎಲ್. ನಾಗಭೂಷಣ ಸ್ವಾಮಿ ಕನ್ನಡದ ಹಿರಿಯ ವಿಮರ್ಶಕರು. ಅನುವಾದದಲ್ಲೂ ಆಸಕ್ತಿ ಹೊಂದಿರುವ ಅವರು ಟಾಲ್‌ಸ್ಟಾಯ್, ಸಿಂಗರ್, ನೆರೂಡ, ಮುಂತಾದ ವಿಶ್ವಶ್ರೇಷ್ಠರ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.)
ಜಿ.ಎಸ್. ಆಮೂರ
ಹುಟ್ಟಿದ್ದು: ಮೇ 8, 1925, ಬೊಮ್ಮನ ಹಳ್ಳಿಯಲ್ಲಿ: ತಂದೆ, ತಾಯಿ-ಶ್ಯಾಮಾಚಾರ್ಯ, ಗಂಗಾಬಾಯಿ; ಪತ್ನಿ-ಶಾಂತಾ; ಮಕ್ಕಳು-ರವಿ, ಶಶಿ, ಶ್ಯಾಮ, ಜಯಂತ.
ಓದಿದ್ದು-ಸೂರಣಗಿ, ಬೊಮ್ಮನಹಳ್ಳಿ, ಕರ್ಜಗಿ, ಹಾವೇರಿ, ಧಾರವಾಡ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ; ಅಧ್ಯಾಪಕ ವೃತ್ತಿ-1949-64 ಕರ್ನಾಟಕದ ವಿವಿಧ ಊರುಗಳ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕ; 1964-68 ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕ; 1968-85 ಮರಾಠವಾಡಾ ವಿಶ್ವವಿದ್ಯಾಲಯ, ಔರಂಗಾಬಾದ್ ಇಂಗ್ಲಿಷ್ ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ.
ಪ್ರಕಟಿತ ಕೃತಿಗಳು ಸುಮಾರು 50; ಕನ್ನಡದಲ್ಲಿ 29, ಇಂಗ್ಲಿಷಿನಲ್ಲಿ 21 ಕೆಲವು ಮುಖ್ಯ ಕೃತಿಗಳು- ಭುವನದ ಭಾಗ್ಯ, ಆಧುನಿಕ ಕನ್ನಡದ ವಿರಾಟ್ ಪುರುಷ, ಕಥನ ಶಾಸ್ತ್ರ, ನಿಂದ ಹೆಜ್ಜೆ
ಪ್ರಮುಖ ಮನ್ನಣೆ, ಗೌರವ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1988, 1996; ಭಾರತೀಯ ಭಾಷಾ ಪರಿಷತ್-1991; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1996; ಕರ್ನಾಟಕ ರಾಜ್ಯ ಪ್ರಶಸ್ತಿ: 2000; ಪಂಪ ಪ್ರಶಸ್ತಿ 2006
ಆಮೂರರನ್ನು ಕುರಿತು ಮುಖ್ಯ ಕೃತಿಗಳು: ‘ಸಹೃದಯ ಸಂವಾದ’ (ಸಂಪಾದಕರು, ವಿದ್ಯಾಶಂಕರ ಮತ್ತು ಜಿ.ಎಂ ಹೆಗಡೆ), ‘ಜಿ.ಎಸ್. ಆಮೂರ’ (ಲೇ: ಬಾಲಸುಬ್ರಹ್ಮಣ್ಯ ಕಂಜರ್ಪಣೆ), ‘ಕನ್ನಡ ಸಾಹಿತ್ಯ ವಿಮರ್ಶೆಗೆ ಡಾ. ಆಮೂರರ ಕೊಡುಗೆ’ (ಲೇ: ಗೋವಿಂದರಾಜ ತಳಕೋಡ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.