ಬರೆಯಲಾಗದ ಪದ ಎದೆಯಲ್ಲಿ ತುಂಬಿದಂತೆ ಜೀವರಕ್ತವೆಲ್ಲ ಕಣ್ಣೀರು, ನಗುವ
ಆ ಕೇಡಿನ ಕಲ್ಲುಗಳನ್ನು ಗುದ್ದಿ ಗುದ್ದಿ ಪುಡಿ ಮಾಡುತ್ತೇನೆ ಮುಷ್ಠಿಯಲ್ಲಿ,
ನೋವು ಯಾರಿಗಾದರೇನು
ಮಾತು ಕೇಳದ ರೇಖೆಗಳಲ್ಲೇ ಅವಳ ರೂಪಕ್ಕೆ ಜೀವ ಕೊಡಬೇಕು, ಜಗದ
ಎಲ್ಲ ಕಲಾವಿದರೂ ಸೋತಿರುವ ಈ ಸವಾಲಿಗೆ ನನ್ನ ಹೆಸರೂ ಸೇರಿಕೊಳ್ಳಲಿ.
ತಹತಹದ ಪ್ರತಿ ದಿನ ಮುಖದ ತುಂಬ ಬೇಡವೆಂದರೂ ಹುಟ್ಟುವ
ಮುಸುನಗುವಿನ ಹುಣ್ಣುಗಳಿಗೆ ಬೇಕಾದಷ್ಟು ಜಾಗ ಮಾಡಿಕೊಟ್ಟು ಹೊರಬೀಳುತ್ತೇನೆ, ಕಜ್ಜಿನಾಯಿಗಳಿಗೂ ಪ್ರೀತಿ ಹುಟ್ಟುವಂತೆ, ನಾನೂ ಹಾಗೆಯೇ
ಆಗಲಿರುವ ಪುಣ್ಯಕ್ಕೆ ಮನಸೋತು, ಬಾಗಿನಮಿಸುವ ವಿಧೇಯತೆ
ಬಲಿಗಾಗಿಯಲ್ಲ, ಕುತ್ತಿಗೆ ಕೊಯ್ಯಲು ತಯಾರಾಗಿರುವವರಿಗೆ ಹೇಳುವವರಾರು
ಸುತ್ತಲೂ ಸುತ್ತುತ್ತಿರುವ ತರಹೇವಾರಿ ನೆರಳು ನಾನೇ ಇಲ್ಲ, ನನ್ನ ನೆರಳ
ಕರುಳೂ, ಯಾರೋ ಚಿತ್ರಿಸಿರುವ ಈ ಬೆಸೆತಕ್ಕೆ ಬೆನ್ನಿಗಾದ ಗಾಯಗಳು,
ಎದೆಯೇರಿಸಿ ನಡೆವ ನನಗೆ ಏನೂ ಅಲ್ಲ
ಬೇಕಾದವರು ಬೇಡವಾದವರು ಅದಲು ಬದಲಾಗುತ್ತಾರೆ ತಮಗೆ ಬೇಕಾದಂತೆ,
ಬೆಂಕಿ ಪಾದಗಳು ಈ ಗರಿಕೆಯ ನೆತ್ತಿಯ ಮೇಲೆ ಸರದಿಯಂತೆ, ಚಿಗುರಿಗೀಗ
ಹಲವು ಬಣ್ಣ, ಹಸಿರು ಹಳದಿ ಕೆಂಪು ಕಪ್ಪು
ಒಲಿಸಿಕೊಳ್ಳುವ ನಿವೇದನೆಯ ಮಂತ್ರಗಳ ಭಾಷೆ ನನಗೆ ಗೊತ್ತಿಲ್ಲ, ಬಿಲ್ಲು,
ಬೆರಳು, ಬಾಣ, ಹೂಡುವ ಕೈ, ಕೈಕೈ ಮಿಲಾಯಿಸಿರುವ ಈ ಸಮಯ,
ರಣಾಂಗಣವೆಲ್ಲ ಶತ್ರುಗಳು ಈಗೀಗ ನಾನೂ ಜೊತೆಗಿಲ್ಲ ನನ್ನೊಂದಿಗೆ
ತಲೆಯ ತುಂಬ ತಲೆ ಕಡಿಯುವ ಹಂಬಲ ಹೊತ್ತವರೇ ಪ್ರೀತಿಯ ಹನಿ
ತುಂಬುತ್ತಾರೆ ಕಣ್ಣ ಕೊಳದಲ್ಲಿ, ನಾನು ಕರುಣೆಯ ಬೀಜ ಊರಿ ನೈದಿಲೆಯ
ತೋಟ ಬೆಳೆಯಬೇಕು ನನ್ನದೇ ಕೆಸರಲ್ಲಿ. ನನ್ನಾತ್ಮವ ಹೀಗೆ ಹನಿ ಹನಿ
ಬಸಿಯಬೇಕು ಆಗಾಗ ಖಾಲಿಯಾಗಲು ಮತ್ತೆ ಮತ್ತೆ ತುಂಬಿಕೊಳ್ಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.