‘ಓದಿರಿ’– ಇದು ಕನ್ನಡದ ಹಿರಿಯ ಕಥೆಗಾರ, ಕಾದಂಬರಿಕಾರ ಬೊಳುವಾರು ಮಹಮದ್ ಕುಂಞಿ ಅವರ ಹೊಸ ಕಾದಂಬರಿ. ಅಕ್ಟೋಬರ್ ಮೊದಲ ವಾರದಲ್ಲಿ ಓದುಗರ ಕೈಸೇರಲಿರುವ ಈ ಕೃತಿ ಬೊಳುವಾರರ ಎಂದಿನ ಪ್ರಯೋಗಶೀಲತೆ ಹಾಗೂ ಓದುಗಸ್ನೇಹಿ ಧೋರಣೆಗಳ ಅಭಿವ್ಯಕ್ತಿಯಂತಿದೆ. ಪ್ರವಾದಿ ಮುಹಮ್ಮದ್‌ರ ಬದುಕಿನ ಕಥೆಯನ್ನು ಚಾರಿತ್ರಿಕ ಕಾದಂಬರಿಯ ರೂಪದಲ್ಲಿ ಹಿಡಿದಿರುವ ಮಹತ್ವಾಕಾಂಕ್ಷೆಯ ಕಾದಂಬರಿ ಇದು. ಪ್ರವಾದಿ ಮುಹಮ್ಮದ್‌ರ ಕುರಿತ ಚಾರಿತ್ರಿಕ ಕಾದಂಬರಿಯ ಪ್ರಯೋಗ ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಭಾಷೆಗಳಲ್ಲಿಯೇ ಇದೇ ಮೊದಲು. ‘ಓದಿರಿ’ ಕಾದಂಬರಿ ರಚನೆಯ ಆಶಯ – ಪ್ರೇರಣೆಗಳ ಕುರಿತು ಬೊಳುವಾರರ ವಿಶೇಷ ಸಂದರ್ಶನವನ್ನು ಎನ್.ಎ.ಎಂ. ಇಸ್ಮಾಯಿಲ್ ‘ಮುಕ್ತಛಂದ’ ಪುರವಣಿಗೆ ಮಾಡಿದ್ದಾರೆ.
* ಅರಬೀ ಕಡಲಿನ ಈಚೆ ಬದಿಯಲ್ಲಿರುವ ಮುತ್ತುಪ್ಪಾಡಿಯ ಪರಿಚಿತ ಪರಿಸರದಿಂದ ಆಚೆ ಬದಿಯಲ್ಲಿರುವ ಅರೇಬಿಯಾದ ‘ಮಕ್ಕಾ’ಕ್ಕೆ ನೀವು ನಡೆಸಿದ ಸೃಜನಶೀಲ ಸೀಮೋಲ್ಲಂಘನಕ್ಕೆ ಪ್ರೇರಣೆ ಏನು?
ಈ ಸೀಮೋಲ್ಲಂಘನಕ್ಕೆ ಎರಡು ಮುಖ್ಯ ಪ್ರೇರಣೆಗಳುಂಟು. ಮೊದಲನೆಯ ಕಾರಣಕ್ಕೆ ಈಗ ಸುಮಾರು ಮೂವತ್ತು ವರ್ಷಗಳ ವಯಸ್ಸು. ಆಗೆಲ್ಲ ‘ಅರಬಿ ಕಲ್ಯಾಣ’ ಎಂಬ ವಸ್ತು ನಮ್ಮ ಸಮೂಹ ಮಾಧ್ಯಮಗಳ Pet ಆಗಿತ್ತು. ಕೇರಳದ ಕಲ್ಲಿಕೋಟೆಯ ಕಡಲತಡಿಯಲ್ಲಿ ‘ಅರಬಿ ಕಲ್ಯಾಣ’ಗಳು ನಡೆಯುತ್ತಿದೆಯೆಂಬ ಸುದ್ದಿ ತಿಳಿದು, ಅಲ್ಲಿಗೂ ಹೋಗಿದ್ದೆ. ಆ ಕಲ್ಯಾಣದ ಕೆಲವು ಸಂತ್ರಸ್ತೆಯರ ಜೊತೆಗೆ ಮಾತುಕತೆ ನಡೆಸಿ, ‘ಮುತ್ತುಚ್ಚೇರಾ’ ಎಂಬ ಕತೆ ಬರೆದಿದ್ದೆ. ಮುಂದೆ ಅದೇ ಕತೆಯನ್ನು ‘ಮುನ್ನುಡಿ’ ಎಂಬ ಹೆಸರಲ್ಲಿ ಚಲನಚಿತ್ರ ನಿರ್ದೇಶಿಸಿದ ಗೆಳೆಯ ಶೇಷಾದ್ರಿಯವರು ತಮ್ಮ ರಾಷ್ಟ್ರಪ್ರಶಸ್ತಿಗಳ ಓಟಕ್ಕೆ ಮುನ್ನುಡಿ ಬರೆದದ್ದು ಈಗ ಹಳೆಯ ಕತೆ.
ಆ ದಿನಗಳಿಂದಲೇ ಅರಬಿಗಳ ಈ ಕಲ್ಯಾಣ ಗುಣಗಳಿಗೆ ಕಾರಣಗಳೇನಿರಬಹುದು? ಎಂಬ ಪ್ರಶ್ನೆ ತಲೆ ತಿನ್ನುತ್ತಿತ್ತು. ಬಲ್ಲವರ ಜೊತೆಗೆ ಸಮಾಲೋಚನೆ ನಡೆಸಿದಾಗ, ಕುರ್‌ಆನ್ ಆದೇಶಗಳಂತೆ ಅರಬಿಗಳಲ್ಲಿ ವರದಕ್ಷಿಣೆಗೆ ನಿಷೇಧವಿದೆ. ಆದರ ಬದಲು ಬಹು ದೊಡ್ಡ ಮೊತ್ತದ ವಧುದಕ್ಷಿಣೆ ಕಡ್ಡಾಯ. ಅದನ್ನು ತೆರಲು ಶಕ್ತರಲ್ಲದವರು ಈ ಕಲ್ಯಾಣ ದಾರಿ ಹಿಡಿಯುತ್ತಾರೆ ಎಂದು ವಿವರಿಸಿದ್ದರು. ಕುರ್‌ಆನ್ ಓದಲು ಅರೆಬಿಕ್ ಕಲಿಯಬೇಕು. ಬಾಲ್ಯದಲ್ಲಿ ನನಗೆ ಅರೆಬಿಕ್ ಭಾಷೆ ಕಲಿಯುವ ಅವಕಾಶ ಸಿಗಲಿಲ್ಲ.
ಇಂಗ್ಲಿಷ್ ಭಾಷೆಯಲ್ಲಿರುವ ವಿವರಣೆಗಳಲ್ಲಿ ಧರ್ಮಸೂಕ್ಷಗಳು ಮನದಟ್ಟಾಗುತ್ತಿರಲಿಲ್ಲ. ‘ಮುನ್ನುಡಿ’ ಚಲನಚಿತ್ರಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳಲ್ಲಿ ಎಲ್ಲಕ್ಕೂ ಕುರ್‌ಆನ್ ಆದೇಶಗಳೇ ಕಾರಣ ಎಂಬುದೂ ಸೇರಿಕೊಂಡಿದ್ದಾಗ, ಅದನ್ನು ನಿರಾಕರಿಸಿ ಸಮರ್ಥವಾಗಿ ವಿವರಿಸುವಷ್ಟು ಮಾಹಿತಿಗಳು ನನ್ನ ಬಳಿ ಆಗ ಇರಲಿಲ್ಲ. ಹಾಗಾಗಿ ಸುಮ್ಮನಾಗಿದ್ದೆ. ಕನ್ನಡದಲ್ಲಿ ಕುರ್‌ಆನ್ ಮುದ್ರಣವಾದದ್ದೇ ಎಂಬತ್ತರ ದಶಕದ ಕೊನೆಯಲ್ಲಿ. ಅನುವಾದವನ್ನು ಓದಿದಾಗ ‘ವಧುದಕ್ಷಿಣೆ’ ತೆರಲಾಗದವರು ಹಿಂದೂಸ್ತಾನಕ್ಕೆ ಹೋಗಿ ತಾತ್ಕಾಲಿಕ ಕಲ್ಯಾಣ ಮಾಡಿಕೊಳ್ಳಬಹುದು ಎಂಬ ಆದೇಶಗಳೇನೂ ಕಾಣಿಸಿದ್ದಿರಲಿಲ್ಲ. ಇರಲಿ ಬಿಡಿ.
ಇನ್ನು, ಎರಡನೆಯ ಪ್ರೇರಣೆ. ಅಥವಾ ಇದನ್ನೇ ಮೊದಲನೆಯ ಪ್ರೇರಣೆ ಎನ್ನಬಹುದು. ಇದಕ್ಕೆ ಇನ್ನೂ ಹುಡುಗಾಟ ನಿಲ್ಲಿಸುವ ವಯಸ್ಸಾಗಿಲ್ಲ. ನಮ್ಮ ಸುದ್ದಿ ಮಾಧ್ಯಮಗಳಲ್ಲಿ, ವಿವಿಧ ಧರ್ಮಗ್ರಂಥಗಳು ಪರ ಮತ್ತು ವಿರೋಧಗಳ ನೆಲೆಗಳಲ್ಲಿ ಚರ್ಚಾಹುತಿಯಾಗುತ್ತಿರುವ ಸಂದರ್ಭಗಳಲ್ಲಿ, ‘ನೀವು ನಮ್ಮದನ್ನು ಮಾತ್ರ ಹಿಂಡುತ್ತಿದ್ದೀರಿ, ಅವರದ್ದನ್ನೇಕೆ ಮುಟ್ಟುವುದಿಲ್ಲ?’ ಎಂಬ ಸವಾಲುಗಳನ್ನು ಕೇಳಿಸಿಕೊಂಡಾಗಲೆಲ್ಲ ನಗು ನಿಯಂತ್ರಿಸಲಾಗುತ್ತಿರಲಿಲ್ಲ.
ಸನಾತನವೆಂದು ಕರೆಯಲ್ಪಡುವ ಧರ್ಮಗ್ರಂಥಗಳು ಚಾರ್ವಾಕರ ಕಾಲದಿಂದಲೂ ವಾಗ್ವಾದಗಳಿಗೆ ಆಹಾರವಾಗುತ್ತಿರುವುದು ಈ ನಾಡಿನ ಅನಾದಿ ಧರ್ಮ. ಆದರೆ, ಆಧುನಿಕ ಸುದ್ದಿಮಾಧ್ಯಮ ಯುಗದಲ್ಲಿ ವಾಗ್ವಾದ ನಡೆಸುವವರಲ್ಲಿ ಬಹುತೇಕರು ಧರ್ಮ ಶಾಸ್ತ್ರಗಳನ್ನಾಗಲೀ, ತರ್ಕ ಶಾಸ್ತ್ರಗಳಾಗಲೀ ಆಳವಾಗಿ ಅಧ್ಯಯನ ಮಾಡಿದವರಲ್ಲ. ವೇದ, ಶಾಸ್ತ್ರ, ಪುರಾಣಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಬಹುಪಾಲು ಪಂಡಿತರುಗಳು ಇಂಥಹ ಸಾರ್ವಜನಿಕ ಹಾಸ್ಯಗೋಷ್ಟಿಗಳಲ್ಲಿ ಭಾಗವಹಿಸುವುದೂ ಇಲ್ಲ.
ಈ ಕಾರಣಗಳಿಂದಾಗಿ, ಆಳ ಅಧ್ಯಯನ ಇಲ್ಲದೆಯೂ ಯಾವುದೇ ಧರ್ಮದ ಪರ ಅಥವಾ ವಿರೋಧವಾದ ಮಾತು ಗೆಲ್ಲಬಲ್ಲವರೆಲ್ಲರೂ, ನಿಂತ ನೆಲ ಜಾರುತ್ತಿರುವಾಗ ಮಾತ್ರ, ಒಮ್ಮೆಯೂ ಓದಿರದ, ಹೆಸರು ಮಾತ್ರ ತಿಳಿದಿರುವ ಬೇರೆ ಧರ್ಮಗ್ರಂಥಗಳ ‘ಗುಮ್ಮ ತೋರಿಸಿ’ ಚರ್ಚೆಯ ಕಟಕಟೆಯಿಂದ ನುಣುಚಿಕೊಳ್ಳುವುದು ತಮಾಷೆಯಾಗಿ ಕಾಣಿಸುತ್ತಿತ್ತು. ಅವರವರ ಧರ್ಮಗಳಲ್ಲಿರುವ ಕಸಗಳನ್ನು ಅವರವರೇ ತೊಳೆದುಕೊಳ್ಳುವುದು, ತಮ್ಮ ಮತ್ತು ಒಟ್ಟು ಸಮಾಜದ ಆರೋಗ್ಯಕ್ಕೆ ಒಳ್ಳೆಯದು ಎಂಬ ಧರ್ಮಸೂಕ್ಷವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇವೆ ಎಂಬುದನ್ನು ಮರೆತಾಗ ಮಾತ್ರ ಇಂತಹ ಪ್ರಸಂಗಗಳು ಹುಟ್ಟಿಕೊಳ್ಳುತ್ತವೆ.
ಆ ‘ಗುಮ್ಮ’ ನಿಜವಾಗಿಯೂ ಇದೆಯೇ? ಇದ್ದರೆ ಅದು ಹೇಗಿರುತ್ತದೆ? ಎಂಬ ಕುತೂಹಲದ ಮೊಟ್ಟೆ ಒಡೆದರೆ ಹೇಗೆ? ಎಂಬ ಯೋಚನೆ ಹಲವು ವರ್ಷಗಳಿಂದ ಕಾಡುತ್ತಿದ್ದರೂ ಧೈರ್ಯ ಬಂದಿರಲಿಲ್ಲ. ಇಂಥ ಒಂದು ಕೃತಿಯನ್ನು ಕನ್ನಡದ ಓದುಗರು ಸ್ವೀಕರಿಸುತ್ತಾರೆಯೇ ಎಂಬ ಅಳುಕಿನಿಂದ ಕೆಲವು ಹಿತೈಷಿಗಳಲ್ಲಿ ಆತಂಕವನ್ನು ಹಂಚಿಕೊಂಡಿದ್ದೆ. ಅಚ್ಚರಿಯೆಂದರೆ, ಒಬ್ಬರೇ ಒಬ್ಬರಾದರೂ ನಾನು ನಿರೀಕ್ಷಿಸಿದ್ದಂತೆ, ‘ಆ ಪ್ರವಾದಿಯ ಹೆಸರಲ್ಲಿ ಮಾರಣಹೋಮಗಳೇ ನಿತ್ಯ ಸುದ್ದಿಯಾಗುತ್ತಿರುವಾಗ, ಅವರ ತಂಟೆಗೆ ಹೋಗದಿರುವುದೇ ಕ್ಷೇಮ’ ಎಂದು ಹೇಳದೆ, ‘ಕಳೆದ ನಲುವತ್ತು ವರ್ಷಗಳಿಂದ ಮುತ್ತುಪ್ಪಾಡಿ ಮುಸ್ಲಿಮರ ಬದುಕನ್ನು ಕನ್ನಡದ ಓದುಗರಿಗೆ ಪರಿಚಯ ಮಾಡಿಕೊಡುತ್ತಿರುವ ನೀನು, ಅವರ ಬದುಕಿಗೆ ಕಾರಣರಾಗಿರುವ ಆ ಆರೇಬಿಯಾದ ಪ್ರವಾದಿಯ ಕತೆಯನ್ನು ಓದುಗರಿಗೆ ಕಟ್ಟಿಕೊಡದೇ ಇದ್ದರೆ ಅದು ಅಪರಾಧವಾಗುತ್ತದೆ’ ಎಂದೇ ಹುರಿದುಂಬಿಸಿದ್ದರು. ಅವರ ಆದೇಶಗಳೇ ನನ್ನ ಈ ಕಾದಂಬರಿಗೆ ಪ್ರೇರಣೆ. ಆದ್ದರಿಂದ ಓದಿರಿ.
* 1851ರಷ್ಟು ಹಿಂದೆಯೇ ಫ್ರೆಂಚ್ ವಿದ್ವಾಂಸ ಅರ್ನೆಸ್ಟ್ ರೆನಾನ್ ‘ಪ್ರವಾದಿ ಮುಹಮ್ಮದರು ಚರಿತ್ರೆಯ ಪ್ರಖರ ಬೆಳಕಿನಡಿಯಲ್ಲೇ ಹುಟ್ಟಿದರು’ ಎಂಬ ಮಾತು ಹೇಳಿದ್ದಾರೆ. ಹೀಗೆ ಚರಿತ್ರೆಯ ಪ್ರಖರ ಬೆಳಕಿನಡಿಯಲ್ಲಿರುವ ವಿಚಾರಗಳ ಕುರಿತ ಕಾದಂಬರಿ ಬರೆಯುವಾಗ ‘ಚಾರಿತ್ರಿಕ ಸಮರ್ಪಕತೆ’ ಎಂಬುದು ಸೃಜನಶೀಲತೆಯನ್ನು ನಿಯಂತ್ರಿಸುತ್ತಿರುತ್ತದೆ. ಪ್ರವಾದಿ ಮುಹಮ್ಮದರ ವಿಚಾರಕ್ಕೆ ಬಂದರೆ ಇದು ಇನ್ನಷ್ಟು ಸೂಕ್ಷ್ಮವಾದ ವಿಚಾರವಾಗಿಬಿಡುತ್ತದೆ. ಅಂಥದ್ದರಲ್ಲಿ ನೀವು ಪ್ರವಾದಿ ಚರಿತ್ರೆಯ ಬದಲಿಗೆ ಚಾರಿತ್ರಿಕ ಕಾದಂಬರಿಯ ಮಾರ್ಗವನ್ನೇಕೆ ಆರಿಸಿಕೊಂಡಿರಿ?
ಪ್ರವಾದಿ ಮುಹಮ್ಮದರ ಬಗ್ಗೆ ನೀವು ಹೇಳಿರುವ ವಿದ್ವಾಂಸರ 1851ರ ಹೇಳಿಕೆಯನ್ನು ನನಗಿನ್ನೂ ಓದಲಾಗಿಲ್ಲ; ಕ್ಷಮಿಸಿ. ಆದರೆ, ಮುಸ್ಲಿಮರೂ ತಮ್ಮ ಪೂರ್ವ ಪ್ರವಾದಿಯೆಂದು ವಿಶ್ವಾಸವಿರಿಸಿರುವ ಪ್ರವಾದಿ ಯೇಸುಕ್ರಿಸ್ತರು ನಿರ್ಗಮಿಸಿದ 540 ವರ್ಷಗಳ ಬಳಿಕ ಹುಟ್ಟಿದ್ದ ಮುಹಮ್ಮದರು ಚರಿತ್ರೆಯ ಪ್ರಖರ ಬೆಳಕಿನಲ್ಲೇ ಇದ್ದರೆ ಅದು ಅಸಹಜವಲ್ಲ.
‘ಅಂತಿಮ ಸತ್ಯ ನಮ್ಮದೇ’ ಎಂಬ ವಾದ-ವಿವಾದಗಳೊಂದಿಗೆ ಮುಸ್ಲಿಮ್ ಹಾಗೂ ಮುಸ್ಲಿಮೇತರ ವಿದ್ವಾಂಸರು ಇಸ್ಲಾಮ್ ಧರ್ಮ ಮತ್ತು ಆ ಧರ್ಮದ ಅಂತಿಮ ಪ್ರವಾದಿ ಮುಹಮ್ಮದರ ಬಗ್ಗೆ ಬರೆದಿರುವ ಸಾವಿರಾರು ಗ್ರಂಥಗಳು ಜಗತ್ತಿನ ವಿವಿಧ ಭಾಷೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ. ಅಂತರ್ಜಾಲಕ್ಕೆ ಹೋದರೆ ಹತ್ತಾರು ಸಿನೆಮಾಗಳೂ ಕಾಣಸಿಗುತ್ತವೆ. ಅವುಗಳಲ್ಲಿ ಕೆಲವನ್ನು ಕೆಲವರು ವಿರೋಧಿಸಿದರೆ, ಮತ್ತೆ ಕೆಲವರು ಕೆಲವನ್ನು ಸಮರ್ಥಿಸುತ್ತಾರೆ.
ಹತ್ತು ತಲೆಮಾರುಗಳ ಹಿಂದಿನ ನಮ್ಮ ಕುಟುಂಬಗಳ ಪೂರ್ವಜರ ಜಾತಿ ಧರ್ಮ ದಾಖಲೆಗಳೇ ನಂಬಿಕೆಯ ಮೇಲೆ ನಡೆಯುವಂತದ್ದು. ವಸ್ತುಸ್ಥಿತಿ ಹೀಗಿರುವಾಗ ಯಾರು ದಾಖಲಿಸಿರುವ ಚರಿತ್ರೆಯ ಮೇಲೆ ವಿಶ್ವಾಸವಿರಿಸುವುದು? ಇನ್ನು, ನಿಮ್ಮ ಪ್ರಶ್ನೆಯ ಕೊನೆಯ ಭಾಗ– ‘ಚಾರಿತ್ರಿಕ ಸಮರ್ಪಕತೆ’ಯು ಸೃಜನಶೀಲತೆಯನ್ನು ನಿಯಂತ್ರಿಸುವ ಬಗ್ಗೆ. ಈ ಅಪಾಯವನ್ನು ಮುಂದಾಗಿಯೇ ಗಮನಿಸಿದ್ದ ನಾನು, ‘ಚಾರಿತ್ರಿಕ ಸಮರ್ಪಕತೆ’ಯನ್ನು ‘ಸೃಜನಶೀಲತೆಯಿಂದಲೇ’ ನಿಯಂತ್ರಿಸುವ ಹೊಸ ದಾರಿ ಕಂಡುಕೊಂಡಿದ್ದೆ. ಆದರೆ, ನಾನು ಎದುರಿಸಿದ ಸಮಸ್ಯೆ ಬೇರೆ ಬಗೆಯದ್ದು.
ನಮಗೆಲ್ಲ ಅಲ್ಪ ಸ್ವಲ್ಪವಾದರೂ ಗೊತ್ತಿರುವ ‘ಸೀತಾಪಹರಣ’ ಅಥವಾ ‘ಕರ್ಣಾವಸಾನ’ ಪ್ರಸಂಗಗಳನ್ನು ಬರೆಯುವಾಗ ಮಂಥರೆ, ಮಾರೀಚ ಅಂದರೆ ಯಾರು, ಶಲ್ಯ ಅಂದರೆ ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಹಿನ್ನೆಲೆ ಒದಗಿಸುವ ಅಗತ್ಯವಿರುವುದಿಲ್ಲ. ಆದರೆ, ಏಳನೆಯ ಶತಮಾನದ ಅರೇಬಿಯದ ಐತಿಹಾಸಿಕ ವ್ಯಕ್ತಿಯ ಬದುಕನ್ನು, ಕನ್ನಡಿಗರಿಗೆ ತೀರಾ ಅಪರಿಚಿತವಾಗಿರುವ ನೆಲ, ಜಲ, ಪರಿಸರ, ಮನೆ, ಆಹಾರ ಕ್ರಮ, ವಿವಾಹ, ಕುಟುಂಬ ಪದ್ಧತಿ, ಪೂಜಾವಿಧಾನ, ಸಂಪ್ರದಾಯ, ಆಚರಣೆ, ಗಂಡು ಹೆಣ್ಣುಗಳ ಮನಸ್ಥಿತಿ, ಆಡಳಿತ ವಿಧಾನ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನೆನಪಿಡಲಾಗದಷ್ಟು ಹೆಸರುಗಳೊಂದಿಗೆ ಮೊತ್ತ ಮೊದಲ ಬಾರಿಗೆ ಕಾದಂಬರಿ ರೂಪದಲ್ಲಿ ಪರಿಚಯಿಸುವಾಗ ಎದುರಾಗುವ ಒತ್ತಡಗಳು ಹಲವು.
ಅವೆಲ್ಲವನ್ನೂ ನನ್ನದೇ ಆದ ರೀತಿಯಲ್ಲಿ ಬಗೆಹರಿಸಿಕೊಂಡು, ಕೇವಲ 20 ಪ್ರಮುಖ ಪಾತ್ರಗಳ ಮೂಲಕ ಓದುಗರಿಗೆ ಸುಲಭ ಗ್ರಾಹ್ಯವಾಗುವಂತೆ ಕತೆ ಹೆಣೆದಿರುವೆ. ಅಂತೆಯೇ, ನನ್ನಿಂದ ಓದಲು ಸಾಧ್ಯವಾಗಿರುವ ಬೇರೆ ಬೇರೆ ಬಗೆಯ ಚಾರಿತ್ರಿಕ ಮಾಹಿತಿಗಳಲ್ಲಿ, ನನ್ನ ಕೃತಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಕಲಸಿ, ಬೆರೆಸಿ ಅಪಾಯದ ಮಟ್ಟ ಮೀರಿ ಹರಿಯದಂತೆ ಈ ಚಾರಿತ್ರಿಕ ಕಾದಂಬರಿಯನ್ನು ಹೆಣೆದಿರುವೆ. ಆದ್ದರಿಂದ ಓದಿರಿ.
* ಇಸ್ಲಾಮಿನ ಒಳಗಿನ ಭಿನ್ನತೆಗಳು ಪ್ರವಾದಿ ಚರಿತ್ರೆಯಲ್ಲಿಯೂ ಪ್ರತಿಬಿಂಬಿಸಿವೆ. ಮಜೀದ್ ಮಜ್ದಿ ಇತ್ತೀಚೆಗೆ ನಿರ್ಮಿಸಿರುವ ಪ್ರವಾದಿ ಮುಹಮ್ಮದರ ಕುರಿತ ಚಲನಚಿತ್ರವೊಂದು ಮುಸ್ಲಿಮರ ಒಂದು ವರ್ಗಕ್ಕೆ ಅಪಥ್ಯವೆನ್ನಿಸಿರುವುದೂ ಇದೇ ಕಾರಣಕ್ಕೆ. ನಿಮ್ಮ ಕಾದಂಬರಿ ಯಾರು ಒಪ್ಪುವ ಚರಿತ್ರೆಗೆ ಬದ್ಧವಾಗಿದೆ ಎಂಬ ಪ್ರಶ್ನೆ ಏಳುತ್ತದೆಯಲ್ಲವೇ?
ಎಲ್ಲರೂ ಒಪ್ಪುವ ಚರಿತ್ರೆಯೊಂದು ಇದೆಯೆಂಬುದೂ ಒಂದು ನಂಬಿಕೆಯೇ. ಇದು ಒಂದು ಬಗೆಯಲ್ಲಿ ನಮ್ಮ ದೇಶದಲ್ಲಿ ಹಲವಾರು ವರ್ಷಗಳಿಂದ ಚರ್ಚೆಯಲ್ಲಿರುವ ‘ಆರ್ಯ-ದ್ರಾವಿಡ’ ಚರಿತ್ರೆಯಂತೆ ನಿತ್ಯ ನೂತನ ಮತ್ತು ಅಜರಾಮರ. ಅವರು ಹೇಳಿದ್ದನ್ನು, ‘ಅವರು ಹೇಳುತ್ತಿದ್ದಾರೆ’ ಎಂಬ ಒಂದೇ ಕಾರಣಕ್ಕೆ ಇವರು ನಿರಾಕರಿಸಿದರೆ, ಇವರು ಹೇಳಿದ್ದನ್ನು ‘ಇವರು ಹೇಳುತ್ತಿದ್ದಾರೆ’ ಎಂಬ ಒಂದೇ ಕಾರಣಕ್ಕೆ ಅವರು ವಿರೋಧಿಸುತ್ತಿರುತ್ತಾರೆ. ಆದ್ದರಿಂದ ಎಲ್ಲರೂ ಒಪ್ಪುವ ಚರಿತ್ರೆಯೆಂಬುದೇ ಇಲ್ಲ. ಮೊನ್ನೆ ಮೊನ್ನೆ ತೀರಿಕೊಂಡ, ನಮ್ಮ ದೇಶದ ಸ್ವಾತ್ರಂತ್ರ್ಯ ಸೇನಾನಿ ಸುಭಾಸ್ ಚಂದ್ರ ಭೋಸರ ಮರಣದ ಬಗ್ಗೆಯೇ ನೂರು ಚಾರಿತ್ರಿಕ ದಾಖಲೆಗಳಿಲ್ಲವೆ?
ಪೌರಾಣಿಕ ಹಾಗೂ ಐತಿಹಾಸಿಕ ಘಟನೆಗಳೆಲ್ಲ ಚಿತ್ರ-ರೂಪಕಗಳಾಗಿ ಪ್ರದರ್ಶನಗೊಂಡಿರುವ ಹಿಂದೂ ಮಂದಿರಗಳಲ್ಲಿ, ಕ್ರೈಸ್ತರ ಆರಾಧನಾಲಯಗಳಲ್ಲಿ, ಅಜಂತಾ, ಎಲ್ಲೋರಾ, ಖಜರಾಹೋ, ಬೇಲೂರು ಹಳೆಬೀಡುಗಳಂತಹ ಪ್ರೇಕ್ಷಣೀಯ ಸ್ಥಳಗಳಲ್ಲಿ, ಚಿತ್ರ, ಫೋಟೋ ಗ್ಯಾಲರಿಗಳಲ್ಲಿ ದೇವಾಸುರ ಸುಂದರಸುಂದರಿಯರನ್ನು ಕಣ್ಣು ತುಂಬಿಸಿಕೊಂಡಿರುವವರು ನಾವು. ಭಕ್ತಿ ಪ್ರಧಾನ ಚಲನಚಿತ್ರಗಳಲ್ಲಿ ದೇವ ದೇವತೆಗಳು ಗೌರವಾನ್ವಿತವಾಗಿ ಪ್ರತ್ಯಕ್ಷರಾಗುವ ವಿಸ್ಮಯವನ್ನೂ, ವ್ಯಾಪಾರೀ ಸಿನಿಮಾಗಳಲ್ಲಿ ಶತದಡ್ಡರಂತೆ ವರ್ತಿಸುವ ತಮಾಷೆಗಳನ್ನೂ ಗಮನಿಸಿರುವವರು ನಾವು.
ಈ ಅಂತಿಮಸತ್ಯವನ್ನು ಊಹಿಸಿಯೇ ಮನುಷ್ಯರೂಪಗಳ ಮರುಸೃಷ್ಟಿಯನ್ನು ಸಾವಿರ ವರ್ಷಗಳ ಹಿಂದೆಯೇ ಇಸ್ಲಾಮ್ ನಿಷೇಧಿಸಿದ್ದಿರಬಹುದೇ? ಇಲ್ಲವಾದಲ್ಲಿ, ಹಿಂದೂ ದೇವಾನುದೇವತೆಗಳಿಗೆ ಬಣ್ಣ ತುಂಬಿದ ರವಿವರ್ಮನಂತೆ, ಕ್ರೈಸ್ತ ಕತೆಗಳಿಗೆ ಜೀವ ಕೊಟ್ಟ ಮೈಕಲ್ ಏಂಜೆಲೋನಂತೆ, ಇಸ್ಲಾಮ್ ಧರ್ಮದಲ್ಲೂ ಚಿತ್ರಕಲಾವಿದರು ಜನಿಸುತ್ತಿದ್ದರೇನೋ?
ಇಂದು ಜಗದಗಲ ಹರಡಿಕೊಂಡಿರುವ ಸುನ್ನೀ, ಶಿಯಾ ಮುಂತಾದ ಎಲ್ಲ ಪ್ರಮುಖ ಶಾಖೆಗಳೂ ಶಾಫೀ, ಹನಫೀ, ಹಂಬಲೀ, ಮಾಲಿಕೀ, ಸೂಫೀ ಇತ್ಯಾದಿ ಪಂಗಡಗಳೂ, ಸಲಫೀ, ಜಮಾತೆ ಇಸ್ಲಾಮೀ, ತಬ್ಲೀಗ್ ಜಮಾತ್ ಇತ್ಯಾದಿ ಉಪ ಪಂಗಡಗಳಿಗೆ ಅಂಟಿಕೊಂಡಿರುವ ಮುಸ್ಲಿಮರೂ ಪವಿತ್ರ ಕುರ್‌ಆನ್‌ನಲ್ಲಿ ದಾಖಲಾಗಿರುವ ‘ಆಯತ್’(ವಿಭಾಗ) ಗಳೆಲ್ಲವನ್ನು ಅಪೌರುಷೇಯವೆಂದು (ಮನುಷ್ಯ ನಿರ್ಮಿತವಲ್ಲವೆಂದು) ಪ್ರಶ್ನಾತೀತವಾಗಿ ವಿಶ್ವಾಸವಿರಿಸಿದ್ದಾರೆ. ಆದರೆ, ಪ್ರವಾದಿಯವರ ಸಂಗಾತಿಗಳೇ ಸ್ವತಃ ದಾಖಲಿಸಿದ್ದಾರೆ ಎಂದು ನಂಬಲಾಗುವ ‘ಹದೀಸ್’ (ಪುರಾಣ ವಚನ)ಗಳ ಬಗ್ಗೆ ಈ ರೀತಿಯ ಒಮ್ಮತವಿಲ್ಲ.
ನಮಾಜು ಮಾಡುವಾಗ ಎದೆಗೆ ತಾಗುವಂತೆ ಕೈಗಳನ್ನು ಕಟ್ಟಿಕೊಳ್ಳಬೇಕೇ ಅಥವಾ ಎದೆ ಮತ್ತು ಹೊಕ್ಕುಳ ನಡುವಿನ ಜಾಗದಲ್ಲಿರಿಸಬೇಕೇ ಎಂಬ ಚರ್ಚೆಗಳೂ ಇನ್ನೂ ಮುಗಿದಿಲ್ಲ. ಇಂತಿಪ್ಪೆಡೆಯಲ್ಲಿ, ಅವರು ಮಾಡಿದ ಸಿನೆಮಾವನ್ನು ‘ಅವರು ಮಾಡಿದರು’ ಎಂಬ ಕಾರಣಕ್ಕೆ ಇವರು ವಿರೋಧಿಸುವುದು ಸಹಜವೇ. ನಾಲ್ಕು ದಶಕಗಳ ಹಿಂದೆ ಕುರ್‌ಆನ್ ಕನ್ನಡ ಅನುವಾದ ಪ್ರಕಟವಾದಾಗಲೂ ಪರ ವಿರೋಧಗಳಿದ್ದವು. ನನ್ನ ಅಭಿಪ್ರಾಯ ಇಷ್ಟೇ. ಯಾವುದೇ ಒಂದು ಕೃತಿಯನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮೊದಲು ಒಮ್ಮೆಯಾದರೂ ‘ಓದುವುದು’ ಅಥವ ‘ನೋಡುವುದು’ ಒಳಿತಲ್ಲವೇ? ಆದ್ದರಿಂದ ‘ಓದಿರಿ’.
* ಈ ಕಾದಂಬರಿ ಬರೆಯುವ ಕ್ರಿಯೆಯಲ್ಲಿ ನಿಮಗೆ ಅತಿ ದೊಡ್ಡ ಸವಾಲು ಎದುರಾದದ್ದು ಯಾವಾಗ?
ನಗಬೇಡಿ. ಪುಟಗಳ ಸಂಖ್ಯೆ 550 ರ ಗಡಿ ದಾಟಿದಾಗ ಭಯವಾಗಿತ್ತು. ನಾಲ್ಕು ವರ್ಷಗಳ ಹಿಂದೆ ಸಾವಿರಕ್ಕೂ ಮಿಕ್ಕಿದ ಪುಟಗಳ ‘ಸ್ವಾತಂತ್ರ್ಯದ ಓಟ’ ಕಾದಂಬರಿ ಬರೆದು ಪ್ರಕಟಿಸಿದ್ದಾಗ ಬಹಳಷ್ಟು ಸಾಹಿತಿ ಮಿತ್ರರು, ‘ನಿಮ್ಮ ಕಾದಂಬರಿಯ ಇಷ್ಟೂ ಪುಟಗಳನ್ನು ಓದುತ್ತಾ ಕುಳಿತರೆ ನಾವು ಬರೆಯುವುದು ಯಾವಾಗ?’ ಎಂದು ಎಚ್ಚರಿಕೆಯ ನೋಟೀಸನ್ನೇ ನೀಡಿದ್ದರು. ಆದ್ದರಿಂದ ಈ ಕೃತಿಯನ್ನು 300 ಪುಟಗಳಿಗೇ ಮಿತಿಗೊಳಿಸಿರುವೆ. ಆದ್ದರಿಂದ ಓದಿರಿ.
* ಈಗಾಗಲೇ ಕನ್ನಡದಲ್ಲಿ ಪ್ರವಾದಿ ಮುಹಮ್ಮದರ ಬಗ್ಗೆ ನೂರಾರು ಪುಸ್ತಕಗಳು ಇವೆಯಲ್ಲವೇ? ನೀವು ಹೊಸದೇನನ್ನು ಕಟ್ಟಿಕೊಡಲು ಸಾಧ್ಯ?
ನಿಜ; ನೂರಾರು ಇವೆ. ಆದರೆ, ಜಾತಿ-ಧರ್ಮ ಯಾವುದೇ ಇರಲಿ, ಬರಹಗಳಲ್ಲಿ ತಮ್ಮ ನಂಬಿಕೆಗಳು ಮಾತ್ರ ಅಂತಿಮ ಸತ್ಯವೆಂದು ಸ್ಥಾಪಿಸುವುದರಲ್ಲೇ ಧನ್ಯತೆ ಅನುಭವಿಸುವವರಿಗೆ, ಮೋಕ್ಷಕ್ಕೆ ಅದೂ ಒಂದು ದಾರಿಯೆಂದು ನಂಬಿದ ಬರಹಗಾರರಿಗೆ ಓದುಗರು ಮುಖ್ಯರಾಗುವುದೇ ಇಲ್ಲ. ಅಧ್ಯಾತ್ಮ, ತತ್ವಶಾಸ್ತ್ರ, ತರ್ಕ ಶಾಸ್ತ್ರ, ಧರ್ಮಶಾಸ್ತ್ರಗಳ ಗಂಭೀರ ಅಭ್ಯಾಸಿಗಳಲ್ಲದವರು, ಧಾರ್ಮಿಕ ವಸ್ತುವನ್ನಾಧರಿಸಿ ಪ್ರಕಟವಾಗಿರುವ, ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಸಂಸ್ಥೆಗಳಿಂದಲೇ ನೇರವಾಗಿ ಪ್ರಕಟವಾಗುವ ಗ್ರಂಥಗಳನ್ನು ಓದುವುದಕ್ಕೆ ಆಸಕ್ತಿ ವಹಿಸುವುದಿಲ್ಲ. ಈ ಕಾದಂಬರಿ ‘ಓದಿರಿ’ ಹೆಸರೇ ಹೇಳುವಂತೆ ಓದುಗರನ್ನು ಗುರಿಯಾಗಿರಿಸಿಕೊಂಡು ಬರೆದ ಕಾದಂಬರಿ. ಆದ್ದರಿಂದ ಓದಿರಿ.
* ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿದ್ದ ‘ಬೊಳುವಾರು’, ಈ ಕಾದಂಬರಿಯ ಮೂಲಕ ಪಕ್ಷಾಂತರ ಮಾಡಿದ್ದಾರೆ ಎಂದುಕೊಳ್ಳಬಹುದೇ? ನಿಮ್ಮ ನಿಜವಾದ ಉದ್ದೇಶವಾದರೂ ಏನೂ?
ಹಹ್ಹಾ.., ಇದು ನನಗೆ ಹೊಳೆದೇ ಇರಲಿಲ್ಲ. ಧರ್ಮ ಪ್ರಚಾರ ನನ್ನ ಉದ್ಯೋಗವಲ್ಲ. ‘ಓದಿರಿ’ ಒಂದು ಧರ್ಮ ಶಾಸ್ತ್ರವಲ್ಲ. ಅದೊಂದು ಸೃಜನಶೀಲ ಐತಿಹಾಸಿಕ ಕಾದಂಬರಿ ಅಷ್ಟೇ.. ಧರ್ಮಾವತಾರಿಗಳಿರಲಿ ಅಥವಾ ಧರ್ಮ ಪ್ರವರ್ತಕರೇ ಆಗಿರಲಿ, ‘ಕಲ್ಲಂಗಡಿ ಹಣ್ಣುಗಳಲ್ಲಿ ಕಲ್ಲುಗಳಿರುವುದಿಲ್ಲ’ ಎಂಬ ಸರಳ ಸತ್ಯವನ್ನು ಸಾಮ, ದಾನ, ದಂಡ, ಭೇದ ಇತ್ಯಾದಿ ವಿಧಾನಗಳನ್ನು ಬಳಸುವ ಮೂಲಕ ಕಣ್ಣೆದುರಿನ ಕಸವನ್ನು ಗುಡಿಸಿ ಸಾರಿಸುವಲ್ಲಿ ಅಷ್ಟಿಷ್ಟು ಯಶಸ್ವಿಯೂ ಆಗಿದ್ದರೆಂಬುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಆದರೆ, ಕಾಲಾನಂತರ ನಾಗರಿಕತೆಯ ರಾಜಾಕಾಲುವೆಯಲ್ಲಿ ಹರಿದು ಬಂದ ಕೊಳಚೆ ನೀರು ಅವರ ಹೆಸರಿಗೂ ಕೆಸರೆರಚುತ್ತಿರುವುದೂ ನಿಜವೇ.
ಆಯಾ ಗ್ರಂಥಾವಲಂಬಿಗಳ ಬಹಿರಂಗ ವರ್ತನೆಗಳ ಅನುಸಾರವಾಗಿ ಆಯಾ ಗ್ರಂಥದ ಮೌಲ್ಯಗಳು ಶೇರು ಮಾರುಕಟ್ಟೆಯಂತೆ ಏರಿಳಿಕೆಯಾಗುತ್ತಲೇ ಇರುತ್ತವೆ. ವೇದ, ಉಪನಿಷತ್, ತ್ರಿಪಿಟಕಾ, ಭಗವದ್ಗೀತೆ, ತೌರಾತ್, ಝಬೂರ್, ಬೈಬಲ್, ಕುರ್‌ಆನ್, ಗ್ರಂಥ ಸಾಹಿಬ್, ಇತ್ಯಾದಿ ಎಲ್ಲ ಧಾರ್ಮಿಕ ಗ್ರಂಥಗಳ ಪಾಡೂ ಇದುವೇ. ಈ ಕಾದಂಬರಿಯ ಬರವಣಿಗೆಯ ಹಿಂದಿರುವ ಆಸೆ ಬಹಳ ಸಣ್ಣದು. ಹೋಟೆಲೊಂದರೊಳಗೆ ಪಕ್ಕದ ನಲ್ಲಿಯಲ್ಲಿ ಕೈ ತೊಳೆಯುತ್ತಿದ್ದವರು ನಮ್ಮ ಉಡುಪಿನ ಮೇಲೆ ಅಕಾಸ್ಮಾತ್ ನೀರು ಚೆಲ್ಲಿದರೆ, ಅವರು ಅಪರಿಚಿತರಾಗಿದ್ದರೆ ಮುನಿಸಿಕೊಳ್ಳುತ್ತೇವೆ. ಪರಿಚಿತರಾಗಿದ್ದರೆ ‘ಪರವಾಗಿಲ್ಲ ಬಿಡಿ’ ಎಂದು ನಕ್ಕು ಮನ್ನಿಸುತ್ತೇವೆ.
ಕನ್ನಡದ ಓದುಗರೆಲ್ಲ ಪರಸ್ಪರ ಅಲ್ಪ ಸ್ವಲ್ಪವಾದರೂ ಪರಿಚಿತರಾದರೆ, ಅವರವರ ಸಣ್ಣ ಪುಟ್ಟ ದೋಷಗಳಾದರೂ ಮನ್ನಿಸಲ್ಪಡಬಹುದೇನೋ ಎಂಬುದು ಈ ಆಸೆ ನನ್ನದು. ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕನಾಗಿದ್ದ ದಿನಗಳಲ್ಲೂ ನನ್ನಲ್ಲಿದ್ದ ಆಸೆಯೂ ಇದುವೇ. ಉದ್ದೇಶವೂ ಇದುವೇ. ಅದರಲ್ಲೇನೂ ಪಕ್ಷಾಂತರವಿಲ್ಲ. ಆದ್ದರಿಂದ ಓದಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.