–ಮೋಹನ ಕುಂಟಾರ್
ಮನದ ಕಣಿವೆಯ
ಇರುಳ ಇರುಕಿನಲ್ಲಿ
ಹೊಳೆದು ಮಾಯವಾಗುತ್ತಿತ್ತು ಶುಭದ ದೀಪ್ತಿ ಕವಿತೆ |೧|
ಒಳಗ ಕೊರೆದ
ಕರುಳ ಚುರುಕಿನಲ್ಲಿ
ತಿವಿದು ತೇವಗೊಳ್ಳುತ್ತಿತ್ತು ಭವ್ಯ ಪ್ರಾಪ್ತಿ ಕವಿತೆ |೨|
ದುಡಿವ ಜನರ ಬೆವರಿನಲ್ಲಿ
ದಣಿದ ಮನದ ಬಿಗುವಿನಲ್ಲಿ
ಮಾನವತೆಯ ಮಾತಿನಲ್ಲಿ ಜೀಕುತ್ತಿತ್ತು ಕವಿತೆ |೩|
ಭಾವ ಬೆಸೆದು ಹೊಸೆಯುವಲ್ಲಿ
ಮೊಟ್ಟೆ ಬಿರಿವ ರಭಸದಲ್ಲಿ
ಹೊಮ್ಮಿ ಬಂದ ಜೀವದಲ್ಲಿ ಮುಲುಕುತಿತ್ತು ಕವಿತೆ |೪|
ಉತ್ಸಾಹದ ಚಿಲುಮೆಯಲ್ಲಿ
ಕುಸಿದ ಮನದ ನೋವಿನಲ್ಲಿ
ಹೊರಳಿ ಕೆರಳಿ ಕೆಂಡದಲ್ಲಿ ಬೇಯುತ್ತಿತ್ತು ಕವಿತೆ |೫|
ಅಳುವ ಮಗುವ ಎಳಮೆಯಲ್ಲಿ
ಸೆಟೆದು ನಿಂತ ಹರೆಯದಲ್ಲಿ
ಬಾಗಿಕೊಂಡ ಮುಪ್ಪಿನಲ್ಲಿ ಇಣುಕುತ್ತಿತ್ತು ಕವಿತೆ |೬|
ಹರಿವ ನೀರ ಜುಳುಕಿನಲ್ಲಿ
ಸುರಿವ ಮಳೆಯ ಲಾಸ್ಯದಲ್ಲಿ
ಸುತ್ತಿ ಸುಳಿವ ಗಾಳಿಯಲ್ಲಿ ತೇಲುತ್ತಿತ್ತು ಕವಿತೆ |೭|
ಹಕ್ಕಿ ಕೊರಳ ಇಂಪಿನಲ್ಲಿ
ಬಳ್ಳಿ ಬೆಳೆವ ಬಳುಕಿನಲ್ಲಿ
ಹಬ್ಬಿ ನಿಂತ ಕಾನಿನಲ್ಲಿ ಅಲೆಯುತ್ತಿತ್ತು ಕವಿತೆ |೮|
ಹೆಣ್ಣು ಮಣ್ಣು ನೆರೆಯುವಲ್ಲಿ
ಗಾಳಿ ಬೆಂಕಿ ಸೇರುವಲ್ಲಿ
ಬೇರು ನೀರ ಒಸರುವಲ್ಲಿ ಜಿನುಗುತ್ತಿತ್ತು ಕವಿತೆ | ೯|
ಮುಗ್ಧ ಜನರ ಅಳುವಿನಲ್ಲಿ
ತುಂಬಿದೊಲವ ಕಣ್ಣಿನಲ್ಲಿ
ಮುಗುಳು ಮುಖದ ನಗುವಿನಲ್ಲಿ ಹೊಮ್ಮುತ್ತಿತ್ತು ಕವಿತೆ |೧೦|
ಭುವಿಯು ಭಾನು ಕೂಡುವಲ್ಲಿ
ಬಿಸಿಲು ನೆರಳು ಬೆರೆಯುವಲ್ಲಿ
ಹರಡಿ ನಿಂತ ಹಸಿರಿನಲ್ಲಿ ಚಿಗಿಯುತ್ತಿತ್ತು ಕವಿತೆ |೧೧|
ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತ್ತಿತ್ತು ಕವಿತೆ |೧೨|
ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತ್ತಿತ್ತು ಕವಿತೆ |೧೩|
ನೀರಮೇಲೆ ಗೆರೆಯನೆಳೆದು
ಗಾಳಿಯಲ್ಲಿ ಗರಿಯ ಬಿಚ್ಚಿ
ನೇಹಕೆಂದು ಗುರುತನಿಟ್ಟು ಹುಟ್ಟಿತೊಂದು ಕವಿತೆ |೧೪|
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.