ಹುಡುಕಿದ್ದೇನೆ
ನನ್ನ ದೇವಿಯ ನಾನೇ; ಹೆಸರಿಟ್ಟಿದ್ದೇನೆ
ನಾನು ಪೂಜಿಸಿದ್ದಕ್ಕೆ ಅವಳು ದೇವಿ, ನಾನು ಬರೆದದ್ದಕ್ಕೆ ಅವಳು
ಪುರಾಣನಾಮ ಚೂಡಾಮಣಿ;
ಅವಳ ಸೃಷ್ಟಿಸಿದ ನಾನು ಬ್ರಹ್ಮಿಣಿ;
ಈ ಅಕ್ಷರದೇವಿಯ ನಿತ್ಯೋಪಾಸಕಿ; ನಾನು
ವಿಪ್ರಪ್ರಿಯಾ ವಿಪ್ರೋತ್ತಮೆ;
ತೂಗಿ ತೂಗಿ
ಸ್ವರ ವ್ಯಂಜನಗಳ ಸರಂಜಾಮು
ಇತ್ತ ಹಿಸಿದು ಅತ್ತ ಬೆಸೆದು
ಎಂದೂ ಸಮವಾಗದಿದ್ದರು ತ್ರಾಸು
ಕೈ ಚೆಲ್ಲಿಲ್ಲ ಸುಸ್ತೆಂದು, ಕೂಡಿಟ್ಟಿದ್ದೇನೆ ವರ್ಣಭೇದವಿರದ ವರ್ಣಸಂಪತ್ತ
ನಾನುಗ್ರಾಣದ ಜಿಪುಣೆ ಲೇವಾದೇವಿಯಲ್ಲಿ ಅಪ್ಪಟ ಜಾಣೆ
ಹಳೆಬಂಗಾರ ಕಳೆದಿಲ್ಲ, ಶೋಧಿಸಿದ್ದೇನೆ ಹೊಸ ನಮೂನೆ;
ಕಾಸಿಗೆ ಸೋಲದ ಕುಶಲೆ; ನಾನು
ವೈಶ್ಯಕುಲ ರತ್ನಪ್ರಾಯೆ;
ಕಣ್ಣಿಗೆಣ್ಣೆಬಿಟ್ಟು
ಬೆಲೆಕಟ್ಟಲಾಗದ ರೇಸಿಮೆಯಲ್ಲಿ ಬಚ್ಚಿಟ್ಟು
ಏಳುಸುತ್ತಿನ ಕೋಟೆ, ಆಳುದ್ದದ ಅಗಳು, ಚತುರಂಗ ಸೇನೆ
ಈ ಅಕ್ಷರಚಕ್ರಾಧಿಪತ್ಯವ ಕಾವ ಕೊತ್ವಾಲಿಕೆಯಲ್ಲಿ
ನಾನು ಸೋಲೊಪ್ಪಿಕೊಳ್ಳದ ಯೋಧೆ; ರಣತಂತ್ರ ನಿಪುಣೆ
ಜೋಪಾಸನೆಯಲ್ಲಿ ಪಳಗಿದ ಸೇನಾಧಿಪೆ
ಹುಡುಕಿದರೊಬ್ಬಳೆ ; ನಾನು
ನಿಜದಲ್ಲಿ ನಿಜಕ್ಷತ್ರಿಯೆ;
ಈ ಇದಕೆ ತೊಡಗುವ
ಮೊದಲು ಬೇಕಾದ್ದು ಬೇಡದ್ದೆನ್ನದೆ
ಓದಿಗೊದಗಿ ಬಂದದ್ದನ್ನೆಲ್ಲ ರೊಪ್ಪದೆ ಕೂಡಿ
ಒಗ್ಗದ್ದನ್ನೂ ತಿಗುರಿಗಿಟ್ಟು ಆಕಾರ ಮಾಡಿ
ಒರಟೆಂದು ಜನ ಬಿಟ್ಟಿದ್ದನ್ನೂ ಬುರುಡೆಯುಬ್ಬೆಯೊಳು
ಮೆದು ಬೇಯಿಸಿ ಮಡಿಮಾಡಿ
ಹದ ಮೀರಿ ಸೇದಿದ್ದನ್ನೂ ಉಪ್ಪೂರಿಸಿ ರಸನೆಗೆ ತಂದು
ಒಂದೊಂದು ಶಬುದವೂ ಒಬ್ಬೊಬ್ಬ ರಾಜಕುಮಾರಿ
ಯೆಂದೆ ಬಗೆದು ಸೇವಿಸಿದ್ದೇನೆ ಬಗೆಬಗೆ; ದೊಡ್ಡಮಂದೆಗೆ ನುಗ್ಗಿ
ನನ್ನ ಕರು ಹುಡುಕಬಲ್ಲ ನಿಖರ ಚಹರೆಯ ಜಾತಿ
ಹದಿನೆಂಟು ಕಸುಬಿನ ಆಯಗಾತಿ; ನಾನು
ಶೂದ್ರಾತಿಶೂದ್ರೆ ಶೂದ್ರಸಂಪನ್ನೆ;
ಉಟ್ಟ ಸೀರೆಯ
ಮೇಲೇ ಉಚ್ಚಿಬಿಟ್ಟಿವೆ ಅಕ್ಷರಗಳು
ಇಶ್ಶಿಶ್ಶಿಯೆಂದು ನಾನು ಮುಖ ಸೊಟ್ಟಗಿಟ್ಟಿದ್ದರೆ
ಕಸುಬಿನ ಮೇಲಾಣೆ; ಬಾಚಿ ಬಳಿದು ಹೊತ್ತು ಶಿರದಮೇಲೆ
ತಿಪ್ಪೆಗೆಸೆದು ಬರುವಾಗಲೂ ಕಕ್ಕ ಕೆದಕಿದ್ದೇನೆ
ಎರಡು ಕಾಸಿಗೆ ಬರುವಂತದ್ದೇನಾದರೂ
ಎಸೆದುಬಿಟ್ಟೆನೆ ಎಂದನುಮಾನಗೊಂಡು;
ಸಹನೆಯಲಿ ಸಾವಿರವರ್ಷ
ಮುಟ್ಟಿಸಿಗೊಳ್ಳದವರಿಗಿಂತ ಕೊಟ್ಟಕೊನೆ; ನಾನು
ಪಂಚಮರಲ್ಲಿ ಮರುಪಂಚಮೆ;
ಕವಿ ನಾನು ನಾನಾವರ್ಣಿ
ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ
ಕರ್ತರಿ ಕರ್ಮಣಿಗಿಲ್ಲ ತಾವು; ಸಣ್ಣಗೆ ಕೊಯ್ಯಲಾರಿರಿ ನೀವು
ವರ್ಣಾಂತರ ಮರುವರ್ಣಾಂತರ
ನನಗೆ ಸುಲಭ ನೀರು ಕುಡಿದಷ್ಟು ಅಥವಾ ಅದಕ್ಕಿಂತಲೂ;
ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ – ಕವಿ ನಾನು ನಾನಾವರ್ಣಿ
ನೋಡಿ ಈಗೇನು ಮಾಡುತ್ತೀರೋ
ಅದೇನೇನು ಕಾಯಿಸಿ ಅದೆಲ್ಲೆಲ್ಲಿಗೆ ಬಿಡುತ್ತೀರೊ
ಬಣ್ಣಗುರುಡರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.