ಹಳೇ ಮಾತಿದು
ಕರಾವಿನ ಹೋರಿಗರ ತೀರಿಕೊಂಡಿತ್ತು
ಅದರ ತೊಗಲ ಕುಯ್ಯಿಸಿ ನೆಲ್ಲುಲ್ಲಿನ ಬೊಂಬೆಗೆ ಹೊಲಿಸಿ
ಭೈರಿದನದ ಮುಂದಿಕ್ಕಿ ಹಾಲು ಕರಕೊಳ್ಳುತ್ತಿತ್ತು
ತುಂಗಮ್ಮಕ್ಕ
ಆ ಕಾಲಕ್ಕೆ
ಈ ಜಗತ್ತೇ ಗಬ್ಬೆದ್ದಿದೆ ನಾನೊಬ್ಬಳು ಪರಮ ಸಾಧ್ವೀ
ತಪ್ಪಿ ಹುಟ್ಟಿಬಿಟ್ಟಿದ್ದೇನೆ ಇದರ ರಿಪೇರಿಗೆ
ಇದನ್ನು ತಿದ್ದುವುದೇ ನನ್ನ ಸದ್ಗುರೀ
ಎಂದು ನಂಬಿಕೊಳ್ಳೊ
ಮುಕ್ಕಾಲು ತಿಕ್ಕಲಿನ ವಯಸ್ಸು ನನ್ನದು
ಎಗರಿಬಿದ್ದೆ
ತುಂಗಮ್ಮಕ್ಕನ ಮೇಲೆ
ಏನಿದು ನಿಮ್ಮ ಅಮಾನವೀಯತೆ
ಕಟ್ಟಬಹುದೇ ಸತ್ತಕರುವಿನ ತೊಗಲುಬೊಂಬೆಯ ಅದರವ್ವನ ಮುಂದೆ
ಕಾಸೇ ಮುಖ್ಯವೇ ಕರುಳಿಗಿಂತ ನಿಮಗೆ ಇತ್ಯಾದಿತ್ಯಾದೀ
ತುಂಬಿದ ಕರೆಮೊಗೆಯ
ಎತ್ತಿ ಹಿಡುಕೊಂಡು ಗೋಬೆಟ್ಟದ ತರ
ಇನ್ನೊಂದು ಕೈಯಲ್ಲಿ ನನ್ನ ಸೋಟೆ ಗಿಲ್ಲುತ್ತ
ಒಳಬಾಯಿ ತಂಬುಲವುಗಿದು ಜಾಗಮಾಡಿಕೊಂಡು
ಅಂದಿತು ತುಂಗಕ್ಕ ‘ಸಂಜೆ ಮ್ಯಾಗೆ ಒಂದಫ ಬಂದೋಗೇ’
ಹೋದೆ ಸಂಜೆಗೆ
ಇನ್ನೂ ನಾಲ್ಕು ಹೊಸಮಾತು ಕತೆಬುಕ್ಕಿಂದೆತ್ತಿಕೊಂಡು
ಭಾಷಣ ಬಲ ಮಾಡಿಕೊಂಡು
ಕೊಟ್ಟಿಗೆಯಲ್ಲಿ ಭೈರಿದನ ಪತರುಗುಟ್ಟುತ್ತಿತ್ತು
ಇತ್ತಿಂದತ್ತ ಅತ್ತಿಂದಿತ್ತ ಬುಸುಗುಡುತ್ತ ತೇಕುತ್ತ
ಜಗ್ಗುವ ಕೆಚ್ಚಲ ಭಾರ ತಡೀಲಾರದೆ ಕಣ್ಣೀರಿಕ್ಕುತ್ತ
ಅಂಯ್ ಅಂಯ್ ಅಂಯ್ ಅಮ್ಬೊ ಅಮ್ಬ್ಂಬೊ
ತೋರಿರೇ ನನ್ನ ಕಂದನ್ನ ತಂದು
ಇಳುಹಿರೇ ಈ ಜೀವಕುಂಭಬಿಂದು
ಹೆಂಗಸರಲ್ಲವೇನೇ ನೀವು
ನಿಂತಿದ್ದೀರಲ್ಲೆ ಕಂಭಗೊಂಡು
ತುಂಗಕ್ಕನ ಕಣ್ಣುಮೂಗಲ್ಲೂ ನೀರು
ಗಡಿಗೆಗೆ ತೂತಿಟ್ಟಂಗೆ ತೊಟತೊಟತೊಟ
ಉಸಿರುಬಿಡದೆತ್ತಿ ತಂದಿಟ್ಟೆ ತೊಗಲಬೊಂಬೆ ಭೈರಿದನದ ಮುಂದೆ
ಕಂಡದ್ದೆ ಅದ ನೆಕ್ಕಿನೆಕ್ಕಿ ಮುಸುಗಾಡಿ ಸೊರಬಿಟ್ಟಳು ಭೈರಕ್ಕ
ಕೆಚ್ಚಲು ತಗ್ಗಿ ಅದರ ಸುಖ ಮೂಗಹೊಳ್ಳೆಯಲಿ ಹೊರಟು
ತುಂಬಿ ಹೊರಳಿತು ಕರೆಮೊಗೆ
ಆಮೇಲೆ,
.....ಏನು ಆಮೇಲೆ? ಅವೊತ್ತೇ ಕೊನೆ
ಗಟ್ಟಿಮಾಡಿಕೊಂಡ ಅಂಥ ಭಾಷಣ ಉಪಯೋಗಿಸಿದ್ದು
ಕೆಲವರು ಉಪಯೋಗಿಸುತ್ತಾರೆ
ಮಾನವ ಹಕ್ಕೆಂದರೆ ಕಷ್ಟಮೂಲಕ್ಕೆ ಒಂದೇ ಕಣ್ಣು
ಎಂದು ತಿಳಿದವರು
ಅದು ಹಲವು ಮೂಲೆಯ ವಜ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.