ನಮ್ಮ ಶಾಲೆ ಮರದಲೊಂದು
ಕಾಗೆ ಗೂಡು ಕಟ್ಟಿತು
ಕರಿಯ ಕಾಗೆ ಬಿಳಿಯ ಮೊಟ್ಟೆ
ಗೂಡಿನೊಳಗೆ ಇಟ್ಟಿತು
ಕಾಗೆ ಗೂಡನರಸಿ ಬಂತು
ಕಪ್ಪು ಕಪ್ಪು ಕೋಗಿಲೆ
ಇಲ್ಲೆ ಅಲ್ಲೇ ಸುಳಿಯುತ್ತಿತ್ತು
ಅನುದಿನವೂ ಕೋಗಿಲೆ
ಚುಕ್ಕೆ ಬಿಳಿಯನಿಟ್ಟುಕೊಂಡು
ಅದುರುತ್ತಿತ್ತು ಎಲೆ ಎಲೆ
ಎಲೆಯದಲ್ಲ ಬಣ್ಣ ಅದುವು
ಅರೆ! ಹೆಣ್ಣು ಕೋಗಿಲೆ
ಬಿಸಿಯ ಊಟ ರೆಡಿಯು ಆಗಿ
ಢಣಾ ಢಣಾ ಗಂಟೆಯಾಯ್ತು
ನಾವು ನಮ್ಮ ಗೆಳೆಯರೆಲ್ಲ
ಧಡಾ ಧಡಾ ಬಂದಾಯ್ತು
ನಾವು ಎಸೆದ ಅಗುಳ ಕಂಡು
ಕಾಗೆ ಬಂತು ಈಚೆಗೆ
ಪುರ್ರನೆ ಕೋಗಿಲೆ ಹಾರಿ
ಸೀದಾ ಹೋಯ್ತು ಗೂಡಿಗೆ
ಮೊಟ್ಟೆ ಇಟ್ಟು ಫಕ್ಕ ಬಂತು
ಚತುರ ಕಳ್ಳ ಕೋಗಿಲೆ
ಹೊಟ್ಟೆ ತುಂಬ ಉಂಡ ಕಾಗೆ
ಮೋಸ ಹೋಯ್ತು ಆಗಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.