ಫ್ರೆಂಚ್ ಲೇಖಕ ಆಲ್ಬರ್ಟ್ ಕಮೂ (1913 – 1960) ತಲೆಮಾರುಗಳಿಂದ ತಲೆಮಾರುಗಳಿಗೆ ನವನವೋನ್ಮೇಶಶಾಲಿನಿ ಎನ್ನುವಂತೆ ತಲುಪುತ್ತಿರುವ ಲೇಖಕ. ಅಸಂಗತ ಬದುಕಿನ ಬಗ್ಗೆ ತೀವ್ರತೆಯಿಂದ ಬರೆಯುವ ಕಮೂ, ‘ಈ ಕ್ಷಣಗಳಿಗಾಗಿ ಬದುಕು’ವ ಅನಿವಾರ್ಯತೆಯನ್ನು ಕಾಣಿಸುವ ಕಾರಣದಿಂದಾಗಿ ಈ ತಲೆಮಾರಿಗೂ ಪ್ರಿಯವಾದ ಲೇಖಕ.
ಕಮೂ ಕೃತಿಗಳ ಓದುವಿಕೆಯಲ್ಲಿ ವರ್ತಮಾನದ ಹಲವು ಬಿಕ್ಕಟ್ಟುಗಳನ್ನು ಎದುರುಗೊಳ್ಳಲು ಬೇಕಾದ ಕಿರುದಾರಿಯೊಂದು ಇರುವಂತಿದೆ.
ಎಂಬತ್ತರ ದಶಕವದು. ಕಾಲೇಜ್ ಮೆಟ್ಟಿಲು ಹತ್ತಿದ ಹೊಸತು. ಕನ್ನಡದಲ್ಲಿ ಒಂದಷ್ಟು ಓದಿಕೊಂಡಿದ್ದು ಬಿಟ್ಟರೆ ಮತ್ತುಳಿದ ಭಾಷೆಯ ಗಂಧಗಾಳಿಯೂ ತಿಳಿಯದಿರದಂತಹ ಸಂದರ್ಭವದು. ಹೊಸದಾಗಿ ಬಂದ ಇಂಗ್ಲಿಷ್ ಲೆಕ್ಚರರೊಬ್ಬರು ತಾವು ಬೋಧಿಸುತ್ತಿದ್ದ ವಿಷಯದ ಮಧ್ಯೆ ಆಲ್ಬರ್ಟ್ ಕಮೂ, ಫ್ರಾಂಝ್ ಕಾಫ್ಕ, ಜೀನ್ ಪಾಲ್ ಸಾರ್ತ್ರೆ ಹೆಸರುಗಳನ್ನು ಉದ್ಧರಿಸಿದಾಗ ಹೊಸ ಪ್ರಪಂಚ ಪ್ರವೇಶಿಸಿದಂತಹ ಅನುಭವ ನಮಗೆ.
ಆನಂತರ ದಿನವಿಡೀ ತಲೆಯಲ್ಲಿ ಅದರದ್ದೇ ಮಂಡಿಗೆ. ಸಾಹಿತ್ಯವೆನ್ನುವುದು ನಾವು ತಿಳಿದಿದ್ದಕ್ಕಿಂತ ವಿಸ್ತಾರವಾಗಿದೆ, ಸಮುದ್ರದ ಒಂದು ಹನಿ ಮಾತ್ರ ಗೊತ್ತಿರುವ ನಮಗೆ ಇನ್ನೂ ತಿಳಿದುಕೊಳ್ಳುವುದು ಬಹಳವೇ ಇದೆ ಅನ್ನುವ ಹಪಾಹಪಿ. ಆದರೆ ತಿಳಿದುಕೊಳ್ಳುವುದು ಹೇಗೆ?
ಮಾಹಿತಿ ತಂತ್ರಜ್ಞಾನ ಇಷ್ಟು ಬೆಳೆದಿರದ ಕಾಲವದು. ಅಂತರ್ಜಾಲವೆನ್ನುವ ಪದದ ಅರಿವೂ ಇರಲಿಲ್ಲ. ಶಿವಮೊಗ್ಗದ ಏಕಮಾತ್ರ ಪಬ್ಲಿಕ್ ಲೈಬ್ರರಿಯಿಂದ ಕನ್ನಡ ಪುಸ್ತಕ ತಂದು ಓದುವುದು ಮಾತ್ರ ಗೊತ್ತಿತ್ತು. ಇಂಗ್ಲಿಷ್ ಪುಸ್ತಕಗಳನ್ನಿಟ್ಟ ಕಪಾಟಿನತ್ತ ಸುಳಿದೂ ಗೊತ್ತಿರಲಿಲ್ಲ. ಇಂಗ್ಲಿಷ್ ಪ್ರಖ್ಯಾತ ಬರಹಗಾರರು ಯಾರೆಂದೂ ಅರಿಯದ ವಯಸ್ಸು.
ಇಂತಹ ಸಂದರ್ಭದಲ್ಲೇ ಕಾಫ್ಕನ ‘ಮೆಟಮಾರ್ಫೊಸಿಸ್’ನ ಕನ್ನಡ ಅನುವಾದ ರೂಪಾಂತರ ಕೈಗೆ ಸಿಕ್ಕಿ, ಓದಿದಾಗ ಅದು ಒಂದು ಹೊಸ ಸಾಹಿತ್ಯ ಲೋಕವನ್ನೇ ನನ್ನೆದುರು ತೆರೆದಿಟ್ಟಂತಹ ಕ್ಷಣ. ಫ್ಯಾಂಟಸಿ ತಂತ್ರದ ಅರಿವಿಲ್ಲದೆಯೂ ಆ ಕತೆ ಮೋಡಿ ಮಾಡಿದ ರೀತಿ ಖಂಡಿತಾ ಸಾಧಾರಣವಾದುದಾಗಿರಲಿಲ್ಲ.
ಅದೇ ಸಮಯದಲ್ಲಿ ಕಮೂ, ಸಾರ್ತ್ರೆ ಹೆಸರೂ ಕಿವಿಗೆ ಬೀಳುತ್ತಿದ್ದು ಅವರ ಬಗ್ಗೆಯೂ ತಿಳಿಯಬೇಕೆನ್ನುವ ಹಂಬಲವಿತ್ತಾದರೂ ಸಾಧ್ಯವಾಗಿರಲಿಲ್ಲ. ಪಿ.ಯು.ಸಿ. ಮುಗಿದು, ಡಿಗ್ರಿ ಮೆಟ್ಟಿಲು ಹತ್ತುವಷ್ಟೊತ್ತಿಗೆ ಅನೇಕ ಹುಡುಗರ ಕೈಯಲ್ಲಿ ಕಮೂ, ಕಾಫ್ಕ, ಸಾರ್ತ್ರೆಯ ಪುಸ್ತಕಗಳು ಕಾಣಿಸಿಕೊಳ್ಳಲು ಆರಂಭವಾಯಿತು. ಕಮ್ಯೂನಿಸ್ಟ್ ವಿಚಾರಗಳಿಂದ ಪ್ರಭಾವಿತರಾದ ಅನೇಕ ವಿದ್ಯಾರ್ಥಿಗಳು ಕೈಯಲ್ಲಿ ಕಾರ್ಲ್ ಮಾರ್ಕ್ಸ್‌ನ ‘ದಾಸ್ ಕ್ಯಾಪಿಟಲ್’ ಹಿಡಿದು ಓಡಾಡುತ್ತಿದ್ದದ್ದೂ ಕಣ್ಣಿಗೆ ಬೀಳುತ್ತಿತ್ತು.
ಕ್ರಮೇಣ ಈ ಪುಸ್ತಕಗಳನ್ನು ಹೊಂದಿದವರೊಂದಿಗೆ ಕೃತಿಗಳ ವಿನಿಮಯ, ಪಾಶ್ಯಾತ್ಯ ಸಾಹಿತ್ಯಗಳೊಂದಿಗೆ ಪ್ರವೇಶ, ಪರಿಚಯಗಳಾಗತೊಡಗಿದವು. ಕಮೂನ ‘ಔಟ್‌ಸೈಡರ್’ನ ಇಂಗ್ಲಿಷ್ ಅವತರಣಿಕೆಯೊಂದಿಗೆ ಪ್ರೊ. ಡಿ.ಎ. ಶಂಕರ್ ಅವರ ಕನ್ನಡ ಅನುವಾದ ‘ಅನ್ಯ’ ಕೂಡಾ ಲಭ್ಯವಿದ್ದ ಕಾಲ. ಎರಡನ್ನೂ ಏಕಕಾಲದಲ್ಲಿ ಓದಿದ ನೆನಪು.
ಪ್ರಾಯಶಃ ಇವತ್ತಿನ ಯುವ ಸಮುದಾಯಕ್ಕೂ ನಮ್ಮ ಕಾಲದ ಯುವ ಮನೋಭಿಲಾಷೆಗೂ ಅಜಗಜಾಂತರ ವ್ಯತ್ಯಾಸವಿದ್ದಿರಬೇಕು. ಅಂದಿನ ದಿನಗಳಲ್ಲಿ ಹುಡುಗರು ಅತ್ಯಂತ ಬುದ್ಧಿವಂತರೆಂದು ತೋರಿಸಿಕೊಳ್ಳಲು, ಹುಡುಗಿಯರನ್ನು ಮೆಚ್ಚಿಸಲು, ಇಂತಹ ಭಾರೀ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ನಮ್ಮ ಹಿಂದೆಮುಂದೆ ಸುತ್ತುತ್ತಿದ್ದರು.
ಕಾಲೇಜ್‌ನ ಕಾರಿಡಾರಿನಲ್ಲಿ, ಕ್ಯಾಂಟೀನ್‌ಗಳಲ್ಲಿ, ಕಾಲೇಜ್ ಎದುರಿನ ಪಾರ್ಕಿನಲ್ಲಿ ನಿಂತು–ಕುಳಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದ ವಿಷಯಗಳಲ್ಲಿ ಆನಂತರ ಕಮೂ, ಕಾಫ್ಕ, ಸಾರ್ತ್ರೆಗಳೇ ಸೇರಿಕೊಳ್ಳುತ್ತಿದ್ದುದು ವಿಶೇಷ. ಅದು ಹೇಗೆ ಕಮೂ, ಸಾರ್ತ್ರೆ, ಕಾಫ್ಕ, ಕಾರ್ಲ್ ಮಾರ್ಕ್ಸ್, ಒಬ್ಬರೊಳಗೊಬ್ಬರು ಮಿಳಿತರಾಗುತ್ತಿದ್ದರೆನ್ನುವುದನ್ನು ಈಗ ನೆನೆದರೂ ಆಶ್ಚರ್ಯವಾಗುತ್ತದೆ.
ಕಮೂ ಇಲ್ಲದೇ ಸಾರ್ತ್ರೆಯ ಅಸ್ತಿತ್ವವಿಲ್ಲ, ಕಮೂ, ಸಾರ್ತ್ರೆ ಇಲ್ಲದೇ ಕಾಫ್ಕನಿಲ್ಲ, ಮಾರ್ಕ್ಸ್ ಇಲ್ಲದಿದ್ದರೆ ಇವರ್‍್ಯಾರೂ ಇಲ್ಲವೆನ್ನುವ ಹಾಗೆ ಉತ್ಸಾಹದಿಂದ ಮಾತನಾಡುತ್ತಾ ನಮ್ಮನ್ನು ಇಂಪ್ರೆಸ್ ಮಾಡುತ್ತಿದ್ದ ಅದೆಷ್ಟೋ ಹುಡುಗರೂ ಮತ್ತು ಅದನ್ನೆಲ್ಲಾ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಆ ಕೃತಿಗಳನ್ನೆಲ್ಲಾ ತಲ್ಲೀನರಾಗಿ ಓದುತ್ತಿದ್ದ ನಾವೊಂದಷ್ಟು ಹುಡುಗಿಯರೂ...
ಹದಿಹರೆಯದ ಅಂದಿನ ಸ್ಥಿತಿಯಲ್ಲಿ, ಹೊಸ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತಾ ಹೋದಂತೆ ಅದುವರೆಗೂ ಕೇಳಿಯೇ ಇರದ ಅಸಂಗತ ಪದ ಮೋಡಿಗೆ ಮಂತ್ರಮುಗ್ಧರಾಗಿ, ಎಲ್ಲವನ್ನೂ ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಹುಂಬತನದಲ್ಲಿ ಕಂಡು, ಕೇಳಿದ್ದೆಲ್ಲವನ್ನೂ ಮೊಗೆದು ಒಡಲೊಳಗೆ ತುಂಬಿಕೊಳ್ಳುತ್ತಾ,
ಅದದನ್ನೇ ಮಂತ್ರದಂತೆ ಉಚ್ಚರಿಸುತ್ತಿದ್ದಂತಹ ಕಾಲವದು. ಅಸಂಗತವಾದ ಅಥವಾ ಅಸ್ತಿತ್ವವಾದ ಪದಪುಂಜಗಳು ಹೊರಡಿಸುತ್ತಿದ್ದ ಭಾವತೀವ್ರತೆಗೆ ನಮ್ಮ ಮನಸ್ಸು ಉತ್ಕಟವಾಗಿ ಸ್ವಂದಿಸಿ, ನಮ್ಮ ಅಂತರಂಗವನ್ನು ಆಳವಾಗಿ ಜಾಲಾಡಿ, ಕಲಕಿದ್ದೂ ಕೂಡ ಅಷ್ಟೇ ನಿಜ.
ಈಗ ಕಮೂ ಹುಟ್ಟಿ, ನೂರು ವರುಷ ಸಂದು, ನೂರರ ನೆನಪು. ಆ ನೆಪದಲ್ಲಿ ದಾವಣಗೆರೆಯ ಡಾ. ಕೆ. ನಾರಾಯಣ ಸ್ವಾಮಿ ಮತ್ತು ಗೋವರ್ಧನ್ ನವಿಲೇಹಾಳ್ ಸಂಪಾದಕತ್ವದಲ್ಲಿ ಮೂಡಿದ ಹೊತ್ತಿಗೆಯೇ ‘ಆಲ್ಬರ್ಟ್ ಕಮೂ ನೂರರ ನೆನಪು’. ಪುಸ್ತಕ ಓದುತ್ತಿದ್ದಂತೆ ನನ್ನ ಭಾವಕೋಶದಲ್ಲಿ ಇನ್ನೂ ನೆನಪಿನಲ್ಲುಳಿದ ಕಮೂನನ್ನು ಬಡಿದೆಬ್ಬಿಸಿದ್ದು ನಿಜ. ಹದಿನೆಂಟು, ಇಪ್ಪತ್ತರ ಯುವ ಮನಸ್ಸನ್ನು ಅವನ ವಿಚಾರಗಳು ಆಕ್ರಮಿಸಿಕೊಂಡ ರೀತಿ,
ಜಾಗ್ರತೆಗೊಳಿಸಿದ ಪರಿ, ಪ್ರಭಾವಿಸಿದ ಬಗೆ ವಿವರಿಸಲು ಅಸಾಧ್ಯ. ಅಲ್ಲಿಯವರೆಗಿನ ನಿರ್ಲಿಪ್ತ ಬದುಕಿನಲ್ಲಿ ಸಟ್ಟನೆ ಏನೋ ಘಟಿಸಿ, ಎಲ್ಲವೂ ಖಚಿತವಾಗಿ ನಿಚ್ಚಳವಾಗಿ ಕಂಡಂತಹ ಅರ್ಥಸ್ಫೋಟದ ಆ ಒಂದು ವಾಕ್ಯವೇ ಸಾಕು: ‘I rebel and therefore we exist’.
ಬಹುಶಃ ಅದುವರೆಗೂ ಯಾರ ಗಮನಕ್ಕೂ ಬಾರದ, ಆದರೆ ನಮ್ಮೊಳಗೇ ತುಡಿಯುತ್ತಿದ್ದು ಸೂಕ್ತ ಅವಕಾಶಕ್ಕೆ ಕಾದು ಪ್ರತಿಭಟಿಸುವ ಮೂಲಕವೇ ಮನುಷ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಸಾರಿದ ಇಂತಹ ಹಲವು ವಿಚಾರಗಳಿಂದ ಕಮೂ ಅಂದಿನ ಯುವ ಸಮುದಾಯವನ್ನು ತನ್ನತ್ತ ಆಯಸ್ಕಾಂತದಂತೆ ಸೆಳೆದುಕೊಂಡುಬಿಟ್ಟಿದ್ದ.
ಎರಡು ಮಹಾಯುದ್ಧಗಳು, ಹಿಂಸೆ, ಕ್ರೌರ್ಯ, ಅನ್ಯಾಯ, ಸಾವು, ನೋವು, ಮನುಷ್ಯನ ಅಸಹಾಯಕತೆ, ಬದುಕಿನ ನಿರರ್ಥಕತೆ ಕಮೂ ಮೇಲೆ ಗಾಢ ಪರಿಣಾಮ ಬೀರಿ, ಅವನನ್ನು ಕಾಡಿ, ಆಳವಾಗಿ ಅವನಲ್ಲಿ ಬೇರೂರಿ, ಅತ್ಯಂತ ವಿಷಾದದಿಂದ ಅಸಂಗತ ಬದುಕನ್ನು ಕುರಿತು ಚಿಂತಿಸುವಂತೆ ಮಾಡಿತ್ತು.
ಯಾವ ಅರ್ಥವೂ ಇಲ್ಲದ ಒಂದು ಜಗತ್ತು ನಮ್ಮ ಸುತ್ತ ಒಂದು ಭದ್ರಕೋಟೆಯಾಗಿ ನಿಂತಿದೆ; ತನ್ನದೇ ಅನೇಕ ಲೋಕ ನಿಯಮಗಳನ್ನು ಹೇರುತ್ತಾ ನಮ್ಮನ್ನು ಒಂದು ಭ್ರಮೆಯಲ್ಲಿ ಸಿಲುಕಿಸಿ, ನಮಗೆ ನಾವೇ ಮೋಸ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಾ, ಅದು ನಮ್ಮನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಿಡುತ್ತಿದೆ.
ಆ ಚೌಕಟ್ಟಿನ ವಿರುದ್ಧ ಪ್ರತಿಭಟಿಸಿಯೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯ ಈ ಜಗತ್ತಿಗೆ ಬಂದ ಪ್ರತಿ ಮನುಜನ ತೀವ್ರ ಹೋರಾಟವಾಗಿದೆ; ಧರ್ಮ, ದೇವರು ಎಂದು ಕೈಚೆಲ್ಲಿ ಕೂತರೆ ನಮ್ಮನ್ನು ನಾವೇ ನಮಗೆ ಒಪ್ಪಿತವಾಗದ ಮೌಲ್ಯಕ್ಕೆ ಅರ್ಪಿಸಿಕೊಂಡ ಹಾಗೆ; ಅದು ಬದುಕನ್ನು ಮರೆಸುತ್ತದೆ,
ಪ್ರತಿಯೊಂದಕ್ಕೂ ದೇವರ ಮೇಲೆ ಭಾರ ಹಾಕಿ, ಅವನ ಮೇಲೆ ಅವಲಂಬಿತನಾದಾಗ, ಮನುಷ್ಯನ ತೀವ್ರ ಹೋರಾಟದ ಮನೋಭಾವವನ್ನೇ ಅದು ಸೆಳೆದುಕೊಳ್ಳುವುದಲ್ಲದೆ ಅವನ ಬದುಕನ್ನೂ ಕಸಿದುಕೊಳ್ಳುತ್ತದೆ. ಅದೇ ದೇವರ ಅಸ್ತಿತ್ವ ಒಂದು ಪ್ರಶ್ನೆಯಾದಾಗ ಅದು ನಮ್ಮ ಬದುಕಿಗೂ ಅನೇಕ ಪ್ರಶ್ನೆಗಳನ್ನು ಒಡ್ಡುತ್ತಾ ಬರುತ್ತದೆ.
ಯಾವ ನಂಬಿಕೆಯ ತಳಹದಿಯೂ ಇಲ್ಲದೆ ಅಸಂಗತ ಬದುಕಿನೆದುರು ಏಕಾಏಕಿ ಒಂಟಿಯಾಗಿ ನಿಲ್ಲುವ ಮನುಷ್ಯ ನಿಜವಾದ ಅರ್ಥದಲ್ಲಿ ಆಗ ಬದುಕಲು ಶುರುಮಾಡುತ್ತಾನೆ. ತನ್ನ ಬದುಕಿನ ಹೊಣೆ ತಾನೇ ಹೊತ್ತು, ತನ್ನ ಅಸ್ತಿತ್ವದ ತೀವ್ರ ಶೋಧದಲ್ಲಿ ತೊಡಗಿಕೊಂಡು, ಜೀವನಕ್ಕೆ ಅರ್ಥ ಕಂಡುಕೊಳ್ಳುವ ಪ್ರಯತ್ನಕ್ಕೆ ಬೀಳುತ್ತಾನೆ.
ಯಾವ ಸಿದ್ಧಾಂತವಾಗಲೀ ದೈವಿಕ ಶಕ್ತಿಗಳ ನಂಬಿಕೆಯ ಬುನಾದಿಯಾಗಲೀ ಇರದ, ಮುಂದಿನ ಜನ್ಮದಲ್ಲಿ ಸಿಗುವ ಫಲಕ್ಕಾಗಿ ಈ ಜನ್ಮ ಪೂರ್ಣ ನಡೆಸುವ ಧಾರ್ಮಿಕ ಚಟುವಟಿಕೆಗಳನ್ನಾಗಲೀ, ಇಂದು ರಕ್ತದೋಕುಳಿಯಾಡಿದರೆ ನಾಳಿನ ಬದುಕು ಸುಗಮವಾಗುತ್ತೆನ್ನುವ ಕ್ರಾಂತಿಕಾರಿ ಮಾರ್ಗದ ಹೋರಾಟವನ್ನಾಗಲೀ ಅಲ್ಲಗಳೆಯುವ ಕಮೂ ಇವತ್ತಿನ ಈ ಕ್ಷಣವಷ್ಟೇ ನಿಜವಾದ್ದರಿಂದ,
ನಾವು ಬದುಕಬೇಕಿರುವುದು ಈಗಿನ ಈ ಕ್ಷಣಗಳಿಗಾಗಿ ಮಾತ್ರವೆನ್ನುತ್ತಾನೆ. ಧರ್ಮದ ಹೆಸರಿನಲ್ಲಿ, ಕ್ರಾಂತಿಯ ಹೆಸರಿನಲ್ಲಿ ನಾಳೆ ಎಂಬ ಭ್ರಮೆಗೆ ಬಿದ್ದು ಸುತ್ತ ಕಟ್ಟಿಕೊಂಡ ಕೋಟೆ ವಿರುದ್ಧ ಸೆಣಸಾಡುತ್ತಲೇ, ಅದರ ವಿರುದ್ಧ ಬಂಡೆದ್ದೇ ಈ ಕ್ಷಣವನ್ನು ನಮ್ಮದಾಗಿಸಿಕೊಳ್ಳುವ ಮನುಷ್ಯನ ನಿರಂತರ ಹೋರಾಟವೇ ನಮ್ಮನ್ನು ನಾವು ಒಪ್ಪಿಕೊಳ್ಳುವ ಸ್ಥಿತಿ.
ಕಮೂ ತನ್ನೆಲ್ಲಾ ಕೃತಿಗಳಲ್ಲೂ ತನ್ನ ವಿಚಾರಕ್ಕೆ ಪುಷ್ಟಿಕೊಡುವಂತಹ ಚಿಂತನಾ ಕ್ರಮವನ್ನು ಅನುಸರಿಸಿರುವುದನ್ನು ಕಾಣುತ್ತೇವೆ. ‘ಮಿಥ್ ಆಫ್ ಸಿಸಿಫಸ್’ನಲ್ಲಿ ಸತ್ತು, ನರಕಕ್ಕೆ ಹೋದ ಸಿಸಿಫಸ್ ಕೆಲ ಸಮಯಕ್ಕಾಗಿ ಭೂಮಿಗೆ ಮರಳಿ ಬರುತ್ತಾನೆ.
ಒಮ್ಮೆ ಈ ಜಗತ್ತಿಗೆ ಬಂದ ನಂತರ ಪುನಃ ಮರಳಿ ನರಕಕ್ಕೆ ಹೋಗಲು ಅವನ ಮನ ಒಪ್ಪುವುದಿಲ್ಲ. ಅವನ ಸಮಯ ಮುಗಿದರೂ ಕೂಡ ನರಕಕ್ಕೆ ಹೋಗುವುದನ್ನು ಮುಂದೂಡುತ್ತಲೇ ಸಾವನ್ನೂ ಧಿಕ್ಕರಿಸಿ, ಬದುಕುಳಿಯುತ್ತಾನೆ. ಅದಕ್ಕಾಗಿ ಅವನಿಗೊಂದು ಘೋರ ಶಿಕ್ಷೆ ವಿಧಿಸಲಾಗುತ್ತದೆ: ಅವನು ಈಗಿರುವ ಈ ಜಗತ್ತಿನಲ್ಲೇ ನರಕ ಸೃಷ್ಟಿಯಾಗಿಬಿಡುತ್ತದೆ.
ಸಿಸಿಫಸ್‌ನಿಗೆ ವಿಧಿಸಲಾದ ಘೋರ ಶಿಕ್ಷೆಯೆಂದರೆ, ಒಂದು ದೊಡ್ಡ ಬೆಟ್ಟದ ತುದಿಯವರೆಗೂ ಒಂದು ಬಂಡೆಯನ್ನು ನಿಧಾನವಾಗಿ ತಳ್ಳಿಕೊಂಡು ಹೋಗುವುದು. ಆದರೆ ಆ ಬಂಡೆ ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಅಲ್ಲಿ ನಿಲ್ಲಲಾರದೆ ಕೆಳಗೆ ಉರುಳಿಬೀಳುತ್ತದೆ. ಹಾಗೆ ಉರುಳುರುಳಿ ಬೀಳುತ್ತಲೇ ಇರುವ ಬಂಡೆಯನ್ನು ಮತ್ತೆ ಮತ್ತೆ ಅವನು ಬೆಟ್ಟದ ತುತ್ತತುದಿಗೆ ಎಳೆದುಕೊಂಡು ಹೋಗುತ್ತಲೇ ಇರಬೇಕು.
ನರಕದಿಂದ ತಪ್ಪಿಸಿಕೊಂಡವನಿಗೆ, ತನ್ಮೂಲಕ ನರಕವನ್ನು ಈ ರೀತಿಯಲ್ಲಿ ಸೃಷ್ಟಿಸಿ, ಈ ಕ್ರಿಯೆಯೇ ಒಂದು ಶಾಪವಾಗುವ ಹಾಗೆ ಶಾಪ ಕೊಟ್ಟವರು ನೋಡಿಕೊಳ್ಳುತ್ತಾರೆ. ಆದರೆ ಹೀಗೊಂದು ಅರ್ಥಹೀನ ಕ್ರಿಯೆಯ ನಿರಂತರ ಪ್ರಕ್ರಿಯೆಯೇ ಮತ್ತೆ ಅವನಿಗೆ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ನೀಡುತ್ತಾ ಹೋಗುತ್ತದೆ.
ಕಮೂನ ‘ಔಟ್‌ಸೈಡರ್’ನಲ್ಲೂ ನಾಯಕ ಮರ್ಸೊ ಮಾಡಿದ ಕೊಲೆ ಶಿಕ್ಷೆಗೆ ಕಾರಣವಾಗದೆ ಅವನ ನಿರ್ಭಾವುಕ ನಡವಳಿಕೆಯೇ ಮೇಲುಗೈಯಾಗಿ, ತಾಯಿಯೊಡನೆಯ ಅವನ ನಿರ್ಲಿಪ್ತ ಸಂಬಂಧವೇ ಪ್ರಮುಖವಾಗಿ, ಬದುಕಿನ ಮತ್ತೊಂದು ಅಸಂಗತದೆದುರು ಅವನನ್ನು ಘೋರ ಅಪರಾಧಿಯಾಗಿ ನಿಲ್ಲಿಸಿಬಿಡುವುದನ್ನು ಕಾಣುತ್ತೇವೆ.
ಮೇಲು ನೋಟಕ್ಕೆ ಕಮೂನ ಅಸಂಗತವಾದ ಮತ್ತು ಸಾರ್ತ್ರೆಯ ಅಸ್ತಿತ್ವವಾದ ಒಂದೇ ರೀತಿಯಂತೆ ಕಾಣಿಸಿದಲ್ಲಿ ಆಶ್ಚರ್ಯವಿಲ್ಲ. ಡಾ. ಕೆ. ನಾರಾಯಣ ಸ್ವಾಮಿ ಮತ್ತು ಗೋವರ್ಧನ್ ನವಿಲೇಹಾಳ್ ಸಂಪಾದಿಸಿದ ‘ಆಲ್ಬರ್ಟ್ ಕಮೂ ನೂರರ ನೆನಪು’ ಪುಸ್ತಕದಲ್ಲಿ, ಪ್ರೊ. ರಾಜೇಂದ್ರ ಚೆನ್ನಿ ಅವರು ಬರೆದಿರುವ ‘ನಿರಂತರ ಬಂಡಾಯ: ಆಲ್ಬರ್ಟ್ ಕಮೂ’ ಎಂಬ ಸುದೀರ್ಘ ಲೇಖನದಲ್ಲಿ, ‘ಅಸಂಗತವಾದ ಅನ್ನೋದು ಒಂದು ತಾತ್ವಿಕವಾದ ನಿಲುವು’ ಎಂದಿದ್ದಾರೆ.
‘ನಮ್ಮ ಪ್ರಜ್ಞೆ ಮತ್ತು ಈ ಜಗತ್ತಿನ ನಡುವೆ ಒಂದು ದೊಡ್ಡ ಕಂದರವಿದೆ. ನನ್ನ ಪ್ರಜ್ಞೆಗೂ ನಾನು ಅಂದುಕೊಳ್ಳುವುದಕ್ಕೂ, ನನ್ನ ನಿರೀಕ್ಷೆಗೂ ನನ್ನ ಮನಸ್ಸಿನ ಆಕೃತಿಗೂ, ಈ ವಿಶ್ವವೇನಿದೆಯೋ ಅದರ ನಡುವೆ ಕಂದರವಿದೆ. ಆ ಕಂದರ ಒಂದು ವಿಶಿಷ್ಟ ಕ್ಷಣದಲ್ಲಿ ಕಾಣಲು ಶುರುವಾಗುತ್ತಲೇ ನಾವು ಜಗತ್ತಿನೊಂದಿಗೆ ಒಂದಾಗುತ್ತೇವೆ’ ಎಂದೂ ಹೇಳಿದ್ದಾರೆ.
ಮತ್ತು ಇದನ್ನು ಸುಲಭದಲ್ಲಿ ಅರ್ಥೈಸುವ ಕೆಲವು ಕ್ರಮಗಳೂ ಇಲ್ಲಿವೆ. ಧರ್ಮ, ಸಮಾಜ, ರಾಜಕೀಯ, ಇವೆಲ್ಲದರಲ್ಲೂ ನಂಬಿಕೆಯಿಟ್ಟಾಗಲೇ ಜಗತ್ತಿನ ಜೊತೆ ಸಂಬಂಧವನ್ನು ಕಲ್ಪಿಸಿಕೊಡುತ್ತೆ ಎನ್ನುವ ಮೌಲ್ಯ ವ್ಯವಸ್ಥೆಯೂ ಇದೆ. ಕಮೂನ ಅಸಂಗತವಾದ ಇವೆಲ್ಲವನ್ನೂ ತಿರಸ್ಕರಿಸುತ್ತದೆ. ಈಗಾಗಲೇ ಸ್ವೀಕೃತಗೊಂಡ ಮೌಲ್ಯಗಳಾಗಲೀ ದೇವರ ಅಸ್ತಿತ್ವವಾಗಲೀ ಇಲ್ಲವೆನ್ನುವುದಾದರೆ ಮುಂದೇನು ಅನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಆಗ ನಮ್ಮ ಅರಿವಿಗೆ ಬರುವ ಅಸಂಗತದ ಅನುಭವದಿಂದಲೇ ನಾವು ನಿಜವಾದ ಬದುಕಿನ ಹುಡುಕಾಟಕ್ಕೆ ಇಳಿಯುತ್ತೇವೆ. ಈ ಹುಡುಕಾಟವೇ ನಮ್ಮ ಬದುಕಿನ ಪ್ರಾರಂಭವೆನ್ನುತ್ತಾನೆ ಕಮೂ. ಸಾರ್ತ್ರೆಯ ಅಸ್ತಿತ್ವವಾದದ ಪ್ರಕಾರ, ಅಸ್ತಿತ್ವವೆನ್ನುವುದು ಈಗಾಗಲೇ ಇರುವಂತಹ ಸಿದ್ಧ ಮೌಲ್ಯಗಳಲ್ಲ. ಪ್ರೊ. ಎಚ್. ಪಟ್ಟಾಭಿರಾಮ ಸೋಮಯಾಜಿಯವರು ತಮ್ಮ ಲೇಖನ ‘ಕಮೂ ಎಂಬ ಮಾಂತ್ರಿಕ’ದಲ್ಲಿ ಹೇಳುವಂತೆ, ಅದು ನಮ್ಮನ್ನು ನಾವೇ ‘ಆಗಿಸಿಕೊಳ್ಳುವಂತಹದ್ದು’.
‘ಮನುಷ್ಯನಿಗೆ ಆಯ್ಕೆಗಳನ್ನು ಮಾಡದಿರುವ ಆಯ್ಕೆಗಳಿಲ್ಲವಾದ್ದರಿಂದ ಆಯ್ಕೆಗಳನ್ನು ಮಾಡಲೇಬೇಕು ಮತ್ತು ಆ ಆಯ್ಕೆಗಳಿಗೆ ಅವನೇ ಜವಾಬ್ದಾರ ಕೂಡಾ’. ತನ್ನ ಆಯ್ಕೆಗಳನ್ನು ತಾನೇ ಮಾಡುವ ಸಂಪೂರ್ಣ ಸ್ವಾತಂತ್ರ್ಯವಿರುವ ಮನುಷ್ಯ ತನ್ನ ಆಯ್ಕೆಯನ್ನು ನಿಭಾಯಿಸುವ ಸಂಪೂರ್ಣ ಜವಾಬ್ದಾರಿಯನ್ನು ಕೂಡಾ ತಾನೇ ಭರಿಸಬೇಕಾಗುತ್ತದೆ.
ಡಾ. ವಿ.ಬಿ. ತಾರಕೇಶ್ವರ್, ‘ನಾಳೆ ಒಳ್ಳೆಯ ದಿನಗಳು ಬರಬಹುದೆಂಬ ಆಸೆಯಿಂದ ಇಂದಿನ ನಮ್ಮ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುವುದು ಕಮೂಗೆ ಅಸಂಗತವಾಗಿ ಕಾಣುತ್ತದೆ. ನಮ್ಮ ಹೋರಾಟ ಒಳ್ಳೆಯ ದಿನಗಳಿಗಾದರೆ, ಅದಕ್ಕಾಗಿ ನಾವು ಜೀವ ತೆತ್ತು ಏನು ಪ್ರಯೋಜನ? ಯಾವ ಕಾರಣಕ್ಕಾಗಿ ನಾವು ಬದುಕಬೇಕೋ ಅದೇ ನಾವು ಸಾಯಲೂ ಕೂಡಾ ಅತ್ಯುತ್ತಮವಾದ ಕಾರಣವಾಗುವ ವೈರುಧ್ಯವೇ ಕಮೂನನ್ನು ಸದಾ ಕಾಡಿದ ಪ್ರಶ್ನೆಯಾಗಿದೆ....
ವೈರುಧ್ಯಗಳು ವೈಚಾರಿಕವಾಗಿ ಬದುಕನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಾಗ ನಾವು ಬದುಕನ್ನು ಹೇಗೆ ಪರಿಭಾವಿಸಬೇಕೆನ್ನುವುದೇ ಕಮೂನ ಹುಡುಕಾಟವಾಗಿತ್ತು. ವೈಚಾರಿಕತೆಯ ಮಿತಿಯನ್ನು ಒಪ್ಪಿಕೊಂಡು, ಬದುಕನ್ನು ಅದರ ಅಸಂಗತತೆಯಲ್ಲೇ ಎದುರಿಸಬೇಕೆನ್ನುವುದು ಅವನ ನಿಲುವಾಗಿತ್ತು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ಇರುವುದನ್ನು ವಿರೋಧಿಸದೆ ಒಪ್ಪಿಕೊಂಡು, ನಮ್ಮ ಸುತ್ತಲಿನ ದಮನಕಾರಿ ರಾಜಕೀಯ ಮತ್ತು ಸಾಮಾಜಿಕ ಸಂರಚನೆಯನ್ನು ಮೀರುವ ಅಗತ್ಯವನ್ನೂ ಅವನು ಸೂಚಿಸುತ್ತಿರುವಂತಿದೆ’ ಎಂದು ಮುಂದುವರಿಸಿ, ‘ಕಲೆಯನ್ನು ಪ್ರಸ್ತುತ ಉಸಿರುಗಟ್ಟಿಸುವ ಸಂದರ್ಭವನ್ನು ಮೀರುವ ಸಾಧನೆಯಾಗಿಯೂ ಕಂಡು, ಅವನೊಬ್ಬ ಮಾನವತಾವಾದಿ ವಿಚಾರಧಾರೆಯ ಭಾಗವಾಗಿಯೇ ಕಾಣುತ್ತಾನೆ’ ಎಂದೂ ಹೇಳಿದ್ದಾರೆ.
‘ದುರಂತ, ದಮನಗಳ ಸಂದರ್ಭದಲ್ಲಿ ಬದುಕನ್ನು ಅರ್ಥಪೂರ್ಣವಾಗಿ ಕಂಡು ಸಾಮಾಜಿಕ ಹೊಣೆಗಾರಿಕೆಯ ಪ್ರಾಗ್ಮಾಟಿಕ್ ಸಿದ್ಧಾಂತವನ್ನು ಮಂಡಿಸಿ, ಹಿಂಸೆಯ ಅನಿವಾರ್ಯತೆ, ಸೆಳೆತಗಳನ್ನು ಎದುರಿಸುವ ಮಾರ್ಗವನ್ನು ಹುಡುಕುತ್ತಿರುವಂತೆಯೂ ಕಾಣುತ್ತದೆ!’ ಎಂಬುದು ಅವರ ಲೇಖನದಲ್ಲಿ ಗಮನ ಸೆಳೆದ ವಿಷಯ.
ನೂರು ವರುಷಗಳ ನಂತರ, ಒಂದು ಕಾಲದಲ್ಲಿ ನನ್ನಂತಹ ಹಲವರನ್ನು ತನ್ನ ವಿಚಾರಧಾರೆಯಿಂದ ಸೆಳೆದಿದ್ದ ಕಮೂನ ಕುರಿತಾದ ಈ ಪುಸ್ತಕ, ಮೂವತ್ತು ವರುಷದ ಹಿಂದಿನ ನನ್ನ ನೆನಪನ್ನೂ ಓದನ್ನೂ ಕೆದಕಿದ್ದು ನಿಜ. ‘ಧರ್ಮ ಎಂಬುದು ಅಫೀಮಿನ ಹಾಗೆ. ಧರ್ಮದ ಅಮಲು ಹತ್ತಿಸಿಕೊಂಡವನು ತನ್ನ ವಿವೇಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ!’
– ಕಾರ್ಲ್ ಮಾರ್ಕ್ಸ್ ಹೇಳಿದ ಈ ಮಾತನ್ನು ನಮ್ಮ ಕಾಲೇಜ್ ದಿನಗಳಲ್ಲಿ ಬೈಬಲ್‌ನ ದೈವೋಕ್ತಿಯೆಂಬಂತೆ ನಾವು ಎಲ್ಲೆಂದರಲ್ಲಿ ಉದ್ಧರಿಸಿದ್ದುಂಟು. ಹಲವು ದಾರ್ಶನಿಕರಿಗೆ ಕಾರ್ಲ್ ಮಾರ್ಕ್ಸ್‌ನ ಈ ಉದ್ಘೋಷ, ಹಲವು ಬಗೆಯ ಚಿಂತನೆಗೆ ಹಚ್ಚಿದ್ದಂತೂ ಸುಳ್ಳಲ್ಲ. ಶ್ರೇಷ್ಠಾತಿಶ್ರೇಷ್ಠ ಸಾಹಿತಿಗಳನ್ನೂ ಚಿಂತಕರನ್ನೂ, ರಾಜಕೀಯ ಮುತ್ಸದ್ದಿಗಳನ್ನೂ ಸೃಷ್ಟಿಸಲು ಕಾರಣವಾಗಿದ್ದೂ ಅಷ್ಟೇ ನಿಜ.
ಇಂಥವರ ವಿಚಾರಧಾರೆಗಳಿಂದ ಬದುಕು ಬದಲಾಗಿದೆಯೇ? ಮನುಷ್ಯ ಸುಧಾರಿಸಿದ್ದಾನೆಯೇ? ಎಂಬ ಪ್ರಶ್ನೆಗಿಂತ ಹೆಚ್ಚಾಗಿ ಒಂದು ಕಾಲಘಟ್ಟದ ಸಮಷ್ಟಿ ಪ್ರಜ್ಞೆಯನ್ನು ಆಳವಾಗಿ ಕಲಕಿದ ವಿಚಾರಗಳು, ಬೌದ್ಧಿಕ ನಿಲುವುಗಳು ಕಾಲಕ್ರಮೇಣ ಪೇಲವಗೊಳ್ಳುವುದಕ್ಕೆ ಕಾರಣವೇನು? ಭೂತದ ಗರ್ಭದಲ್ಲಿ ಹುಗಿದು, ಸಂದುಹೋದ ದಾರುಣ ಬದುಕಿನ ಅನೇಕ ಅವಶೇಷಗಳನ್ನು ಮರೆತು ಸಾಗುವಷ್ಟು ಬದುಕು ನಿರ್ಭಾವುಕವಾಗುತ್ತಿದೆಯೇ?
ಮಹಾಯುದ್ಧದ ಭೀತಿ, ಹಿಟ್ಲರ್‌ನ ನರಹತ್ಯೆ, ಯಹೂದಿಗಳ ಮಾರಣ ಹೋಮ, ನಾಗಾಸಾಕಿ ಬಾಂಬ್ ದಾಳಿ, ಆಂತರಿಕ ಕಲಹಗಳನ್ನೆಲ್ಲಾ ದಾಟಿ ಹೊರಬಂದು, ಹೊಸ ಬದುಕನ್ನು ಕಟ್ಟಿಕೊಂಡು, ನವ ನಾವೀನ್ಯದ ಆವಿಷ್ಕಾರಗಳೊಂದಿಗೆ ಶರವೇಗದಲ್ಲಿ ಮುಂದೋಡುತ್ತಿರುವ ಬದುಕಿನಲ್ಲಿ ಕಮೂ, ಕಾಫ್ಕ, ಸಾರ್ತ್ರೆ, ಕಾರ್ಲ್ ಮಾರ್ಕ್ಸ್, ಔಟ್–ಡೇಟೆಡ್ ಆಗಿ ಕಾಣಿಸುತ್ತಿದ್ದಾರೆಯೆ?
ಒಂದಿಡೀ ಜಗತ್ತೇ ಬದಲಾಗುತ್ತಿರುವ ಪರಿಸ್ಥಿತಿಯ ಸಂಕೇತವಾಗಿ ಇತಿಹಾಸವನ್ನೇ ಮಗುಚಿ ಹೊರಳಿ ನಿಂತಿರುವಾಗ, ಸಾಮಾಜಿಕ ಬದುಕಿನ ಪ್ರಾಮುಖ್ಯ ಮತ್ತು ಮೌಲ್ಯಗಳಲ್ಲಿ ಗಣನೀಯ ಮಾರ್ಪಾಟುಗಳಾಗುವುದೂ ಕೂಡ ಪಲ್ಲಟಗೊಂಡ ಪ್ರಕ್ರಿಯೆಯಲ್ಲಿನ ಅನಿವಾರ್ಯ ಸ್ಥಿತಿಯೇ?
ಗೊತ್ತಿಲ್ಲ. ಕಾಲಾಯ ತಸ್ಮೇ ನಮಃ. ಕಮೂ ಬಾಳಿ ನೂರು ವರುಷ ಸಂದ ಈ ಸಂದರ್ಭದಲ್ಲಿ, ಎಂಬತ್ತರ ದಶಕದಲ್ಲಿ ಪ್ರಪಂಚದಾದ್ಯಂತ ಜನಜೀವನದ ನರನಾಡಿಯಾಗಿದ್ದ, ಆ ಕಾಲದ ಬೆಸ್ಟ್ ಸೆಲ್ಲರ್ ‘ಔಟ್‌ಸೈಡರ್’ನ ಕರ್ತೃವಾಗಿದ್ದ ಕಮೂನನ್ನು ಕುರಿತು ಪ್ರಾಂಜಲ ಮನಸ್ಸಿನಿಂದ ‘ಆಲ್ಬರ್ಟ್ ಕಮೂ ನೂರರ ನೆನಪು’ ಎಂಬ ಪುಸ್ತಕವನ್ನು ಸಂಪಾದಿಸುವುದರ ಮೂಲಕ ಡಾ. ಕೆ. ನಾರಾಯಣ ಸ್ವಾಮಿ ಮತ್ತು ಗೋವರ್ಧನ ನವಿಲೇಹಾಳ್,
ಉತ್ಕೃಷ್ಟ ಲೇಖನಗಳನ್ನು ಕಲೆಹಾಕಿದ್ದಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲದೆ, ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಸಿಸುತ್ತಿರುವ ಸಾಹಿತ್ಯಾಸಕ್ತರಿಗೂ ಕಮೂನನ್ನು ಅರ್ಥೈಯಿಸಿಕೊಳ್ಳುವುದಕ್ಕೂ ಇದೊಂದು ಉತ್ತಮ ಕೈಪಿಡಿ. ಸುಮ್ಮನೆ ಓದಿ ತಿಳಿಯಬಯಸುವವರೆಗೂ ಇದೊಂದು ಮಾರ್ಗದರ್ಶಿಯಾಗುವುದರಲ್ಲಿ ಸಂದೇಹವಿಲ್ಲ.
‘ಅಹಿಂಸೆ, ಸಾವು, ಕಾರುಣ್ಯ, ಸಮಾನತೆ, ಸ್ವಾತಂತ್ರ್ಯ ಈ ಎಲ್ಲಾ ಆದಿ ಸತ್ಯಗಳೂ ಕಮೂನ ಕೃತಿಗಳಲ್ಲಿ ವ್ಯಕ್ತವಾದ ರೀತಿಯೇ ಅನನ್ಯ’– ಬುದ್ಧನ ಆದಿಸತ್ಯಗಳ ಪ್ರತಿಪಾದನೆ ಕಮೂನ ವಿಚಾರದಲ್ಲೂ ಇತ್ತೆನ್ನುವುದಕ್ಕೆ ಪುಷ್ಠಿ ನೀಡಲು ಈ ಮಾತನ್ನು ಕೃತಿಯ ಮುನ್ನುಡಿಯಲ್ಲಿ ಬಳಸಿದ್ದಾರೆ.
ಕಮೂನ ವಿಚಾರಗಳ ಮೇಲೆ ಬುದ್ಧನ ಪ್ರಭಾವ ಎಷ್ಟಿತ್ತೆಂಬುದಕ್ಕೆ ಯಾವುದೇ ಆಧಾರವಿಲ್ಲ, ಆದರೆ ಕಮ್ಯುನಿಸಂನಿಂದ ದೂರವೇ ಉಳಿದ ಕಮೂ ಅಖಂಡ ಮಾನವತಾವಾದಿ ಎನ್ನುವುದು ಮಾತ್ರ ಅಕ್ಷರಶಃ ನಿಜ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.