ADVERTISEMENT

‘ಕಾಮದ ಆಕರ್ಷಣೆಯ ಸಹಜ ಪರಿಣಾಮವನ್ನು ನಿಮ್ಮ ಪತ್ನಿಗೆ ತಿಳಿಸಿ’

ರಂಗನಾಥ ಕಂಟನಕುಂಟೆ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST
‘ಕಾಮದ ಆಕರ್ಷಣೆಯ  ಸಹಜ ಪರಿಣಾಮವನ್ನು ನಿಮ್ಮ ಪತ್ನಿಗೆ ತಿಳಿಸಿ’
‘ಕಾಮದ ಆಕರ್ಷಣೆಯ ಸಹಜ ಪರಿಣಾಮವನ್ನು ನಿಮ್ಮ ಪತ್ನಿಗೆ ತಿಳಿಸಿ’   
ದು.ಸರಸ್ವತಿಯವರು ‘ಜೀವಸಂಪಿಗೆ’ ಎಂಬ ಕವನಸಂಕಲನ, ‘ಈಗೇನ್ ಮಾಡೀರಿ?’ ಎಂಬ ಅನುಭವ ಕಥನ ಸೇರಿದಂತೆ ಹಲವು ಕೃತಿಗಳ ಮೂಲಕ ಲೇಖಕಿಯಾಗಿ ಪ್ರಸಿದ್ಧರು.
 
ಮಹಿಳಾ ಚಳವಳಿಯಲ್ಲಿ ಮತ್ತು ಪೌರಕಾರ್ಮಿಕರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವರ ಹಕ್ಕುಗಳಿಗಾಗಿ, ಘನತೆಯ ಬದುಕಿಗಾಗಿ ನಿರಂತರವಾಗಿ ಹೋರಾಡುತ್ತ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಚಿರಪರಿಚಿತರು. ಅವರೀಗ ‘ಬಚ್ಚೀಸು’ ಎಂಬ ಕಥಾಸಂಕಲನವನ್ನು ಹೊರತಂದಿದ್ದಾರೆ. ಇದು ಅವರ ಸಾಮಾಜಿಕ ಹೋರಾಟದ ಅನುಭವರೂಪಿಯಾದ ಕಥಾಸಂಕಲನವಾಗಿದೆ.
 
ಈ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಎಲ್ಲ ಕಥೆಗಳ ಕೇಂದ್ರ ಪಾತ್ರಗಳು ಮಹಿಳೆಯರೇ. ಲಕ್ಷ್ಮೀ, ಸಾವಿತ್ರಿ, ಶಾರದೆ, ಯಲ್ಲಮ್ಮ, ಪಾರ್ವತಿ, ಆಂಜಿನಮ್ಮ ಮುಂತಾದವರು. ಇವರೇ ನಾಯಕಿಯರು. ಈ ಕಥಾನಾಯಕಿಯರು ತಮ್ಮ ಗೃಹಬಂಧನವನ್ನು ದಾಟಿ ಸಮಾಜದ ತೊರೆಯಲ್ಲಿ ಮೀಯುವಾಗ ಇಲ್ಲಿನ ಕಥೆಗಳು ಹುಟ್ಟಿವೆ. ಇವರೆಲ್ಲ ಅರಿವಿನ ಹಿಂಸೆಗೆ ತಳ್ಳಲಾದ ಹೆಣ್ಣುಗಳು. ಇವರಲ್ಲಿ ಹಲವರು ಸಾಮಾಜಿಕ ಕಾರ್ಯಕರ್ತೆಯರು. 
 
ಇಲ್ಲಿನ ಎಲ್ಲ ಕತೆಗಳ ಕ್ರಿಯಾಭೂಮಿ ಬೆಂಗಳೂರೇ. ಕೆಲವು ಕಥಾನಾಯಕಿಯರು ತುರುವೇಕೆರೆ, ಚಿಕ್ಕಮಗಳೂರು ಮತ್ತು ಬೆಂಗಳೂರುಗಳ ನಡುವೆ ಪ್ರಯಾಣ ಬೆಳೆಸುತ್ತಾರೆ. ನಗರದ ಸಿದಗು ಶಾದರೆಗಳಲ್ಲಿ ಸಿಕ್ಕಿಕೊಂಡಿರುವ ಮಹಿಳೆಯರು ಸಮಾಜವನ್ನು ಎದುರುಗೊಳ್ಳುವ ಬಗೆ ಇಲ್ಲಿನ ಕತೆಗಳಲ್ಲಿ ಸ್ಥಾಯಿಯಾಗಿ ಚಿತ್ರಿತವಾಗಿದೆ. ಇಲ್ಲಿನ ಮುಖ್ಯಕತೆಗಳು ಪೌರಕಾರ್ಮಿಕರ ದಾರುಣ ಬದುಕನ್ನು ಚಿತ್ರಿಸುತ್ತವೆ.
 
‘ಹೊನ್ನಹೇಲು’, ‘ಬಚ್ಚೀಸು’, ‘ಮಲ್ಲಿಗೆ ತೋಟ’ ಕಥೆಗಳು ಸ್ವಚ್ಛತಾ ಕಾರ್ಮಿಕರ ದಿನನಿತ್ಯದ ದುಡಿಮೆಯ ಬದುಕನ್ನು ಮತ್ತು ಅವರನ್ನು ಹೀನಾಯವಾಗಿ ದುಡಿಸಿಕೊಳ್ಳುವ ವ್ಯವಸ್ಥೆಯ ಅಸೂಕ್ಷ್ಮತೆಯನ್ನು ಚಿತ್ರಿಸಿವೆ. ನಗರವನ್ನು ಸ್ವಚ್ಛಗೊಳಿಸುವ ಜನರ ಬದುಕು ಅಸಹನೀಯವಾಗುವಂತೆ ಮಾಡಿರುವ ವ್ಯವಸ್ಥೆಯನ್ನು ಮನಕಲಕುವಂತೆ ಚಿತ್ರಿಸಿವೆ. ‘ಎಚ್ಚರದ ಪ್ರೀತಿಯಲಿ ಬೆಳಕಾಗೋ ಉರಿಗಾಮ’ ಮತ್ತು ‘ಗುರುತಿರದ ವಿಳಾಸ’ ಕಥೆಗಳ ನಾಯಕಿಯರು ಸಾಮಾಜೀಕರಣಗೊಳ್ಳುವ ಇಲ್ಲವೇ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವಾಗ ಕಂಡುಬರುವ ನಡೆ–ನುಡಿಗಳ ನಡುವೆ ಇರುವ ಕಂದರಗಳನ್ನೂ ಸೂಚಿಸುತ್ತಾರೆ.
 
ಅಕ್ಷರವೆಂಬ ಊರುಗೋಲು ಹಿಡಿದು ನಡೆಯುವ ಹೆಣ್ಣುಮಕ್ಕಳು ಎದುರಿಸುವ ಭೀಕರ ವಾಸ್ತವಗಳನ್ನು ಇಲ್ಲಿನ ಕಥೆಗಳು ತೆರೆದಿಡುತ್ತವೆ. ಹಾಗಾಗಿ ಈ ಸಂಕಲನದ ಎಲ್ಲ ಕಥೆಗಳ ಕೇಂದ್ರ ನೆಲೆ ಸಮಾಜ ಮತ್ತು ಅದರ ಕ್ರೂರ ವಾಸ್ತವ ನಡೆಗಳು. ಬಿಡುಗಡೆಯ ದಾರಿಯಲ್ಲಿ ಮಹಿಳೆಯರು ಎದುರಿಸುವ ಸವಾಲುಗಳ ಚಿತ್ರವೂ ಇಲ್ಲಿದೆ. ಪೌರಕಾರ್ಮಿಕ ದುಡಿಮೆ ಮತ್ತು ಕರಾಳ ಬದುಕನ್ನು ಚಿತ್ರಿಸುವ ಮೂಲಕ ಕನ್ನಡ ಸಣ್ಣಕತೆಗಳ ಲೋಕಕ್ಕೆ ಸರಸ್ವತಿ ಹೊಸ ವಸ್ತುವನ್ನು ಸೇರಿಸಿದ್ದಾರೆ. ಹಾಗೆ ಸೇರಿಸಿರುವ ವಸ್ತುಗಳನ್ನು ಹೆಣ್ಣಿನ ಕಣ್ಣೋಟದಿಂದ ನೋಡಲು ಪ್ರಯತ್ನಿಸಲಾಗಿದೆ. 
 
‘ಬಚ್ಚೀಸು’ ಸಂಕಲನದ ಕಥೆಗಳು ವೈಯಕ್ತಿಕವಾದ ಅನುಭವಗಳನ್ನು ಹೆಚ್ಚು ಆತುಕೊಳ್ಳುವುದಿಲ್ಲ. ಇಲ್ಲಿ ವೈಯಕ್ತಿಕತೆಯೂ ಸಾಮಾಜಿಕವೇ. ಇಲ್ಲಿ ವ್ಯಕ್ತಿ ಮತ್ತು ಸಮಾಜದ ನಡುವೆ ಹೆಚ್ಚು ಅಂತರವಿಲ್ಲ. ಹೆಣ್ಣುನೋಟದಿಂದ ನೋಡುವಾಗ ಇದುವರೆಗೂ ನಡೆದು ಬಂದಂತೆ ಗಂಡನ್ನು ಕಟಕಟೆಯಲ್ಲಿ ನಿಲ್ಲಿಸುವುದಿಲ್ಲ.
 
ಬದಲಿಗೆ ಆ ನೆಲೆಯನ್ನು ದಾಟಿ, ಹೆಣ್ಣಿನ ವೈಯಕ್ತಿಕ ಸಮಸ್ಯೆಗಳಿಂದಲೂ ಜಿಗಿದು ಸಮಾಜದ ಮುಖ್ಯನೆಲೆಯಲ್ಲಿ ಕಥೆಗಳು ಬಿಚ್ಚಿಕೊಳ್ಳುತ್ತವೆ. ಅಂದರೆ ಹೆಣ್ಣಿನ ಸಮಸ್ಯೆಗಳನ್ನು ಮಾತ್ರ ಇಲ್ಲಿ ನಿರೂಪಿಸಿಲ್ಲ. ಬದಲಿಗೆ ಒಟ್ಟು ಸಮಾಜವನ್ನು, ಅಲ್ಲಿನ ಕ್ರೌರ್ಯವನ್ನು ಹೆಣ್ಣುನೋಟದ ಮೂಲಕ ನಿರೂಪಿಸಲಾಗಿದೆ. ಜೋರುದನಿ ಚೀರಾಟಗಳಿರದೆ ಮೆದುಮಾತಿನಲ್ಲಿಯೇ ತಣ್ಣಗೆ ಸಾಮಾಜಿಕ ಸಂಘರ್ಷವನ್ನು ನಡೆಸಲಾಗಿದೆ.
 
ಸರಸ್ವತಿಯವರು ತಮ್ಮ ಹೋರಾಟದ ಜೀವನದಲ್ಲಿ ಕಂಡುಕೊಂಡ ಸಾಮಾಜಿಕ ವಾಸ್ತವವನ್ನು ಈ ಕಥೆಗಳ ಮೂಲಕ ದಾಖಲಿಸಿದ್ದಾರೆ ಎನ್ನಬಹುದು. ಅವರ ಆತ್ಮಕಥಾನಕದಂತೆಯೂ ಕಥೆಗಳಿವೆ. ಕಥೆಗಾರರ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಕಾರ್ಯಕರ್ತರ ಸಾರ್ವಜನಿಕ ಬದುಕುಗಳೆರಡೂ ಒಂದಾದಾಗ ಹುಟ್ಟಿಕೊಳ್ಳುವ ಬರಹಗಳಂತೆಯೂ, ಅಂಬೇಡ್ಕರ್ ಹಚ್ಚಿದ ಹೋರಾಟದ ಹಣತೆಯನ್ನು ಮಹಿಳೆಯರು ಕಾಪಿಡುವಂತೆಯೂ ಇವುಗಳನ್ನು ನೋಡಬಹುದು. 
 
ಒಂದು ಸಂಗತಿಯನ್ನು ಇಲ್ಲಿ ಚರ್ಚಿಸಬೇಕು. ಅದೆಂದರೆ, ಪ್ರಸ್ತುತ ಹೆಣ್ಣಿನ ಮೇಲೆ ನಿತ್ಯ ನಡೆಯುವ ಲೈಂಗಿಕ ಮತ್ತು ಇತರೆ ಬಗೆಯ ದೌರ್ಜನ್ಯಗಳನ್ನು ತಡೆಯಲು ರೂಪಿಸಿರುವ ಎಲ್ಲ ಬಗೆಯ ಕಾನೂನುಗಳು ಪುರುಷ ಕೇಂದ್ರಿತವಾದವು. ಅಂದರೆ ದೌರ್ಜನ್ಯಗಳನ್ನು ತಡೆಯಲು ಕಾನೂನು ರೂಪಿಸುವ ಕೆಲಸದಲ್ಲಿ ತೊಡಗಿರುವುದು ಬಹುತೇಕ ಪುರುಷರೇ. ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವವರು ಪುರುಷರೇ.
 
ಅವುಗಳನ್ನು ನಿಯಂತ್ರಿಸುವ ಕಾನೂನುಗಳನ್ನು ರೂಪಿಸುವವರೂ ಅವರೇ. ಇಂತಹ ಸಂದರ್ಭದಲ್ಲಿ ದೌರ್ಜನ್ಯವು ಹಿಂಸೆಯನ್ನು ಹುಟ್ಟಿಸಿದಂತೆ ಅದನ್ನು ನಿಯಂತ್ರಿಸುವ ಕಾನೂನುಗಳು ಕೂಡ ಹಿಂಸೆಯನ್ನು ವ್ಯವಸ್ಥಿತವಾಗಿ ಉತ್ಪಾದಿಸುತ್ತವೆ. ಒಳ್ಳೆಯ ಕಾನೂನುಗಳು ಇದ್ದರೂ ಅವುಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಲಿಂಗಸಂವೇದನೆಯ ಸೂಕ್ಷ್ಮತೆ ನ್ಯಾಯ ಪರಿಪಾಲಕರಿಗೆ ಇಲ್ಲದ ಕಾರಣಕ್ಕಾಗಿ ನ್ಯಾಯವನ್ನು ಪಡೆಯುವುದು ಈ ವ್ಯವಸ್ಥೆಯಲ್ಲಿ ಸಾಧ್ಯವಾಗುವುದೇ ಇಲ್ಲ. ಕೆಲವೊಮ್ಮೆ ಕಾನೂನುಗಳೇ ನ್ಯಾಯವನ್ನು ತಡೆಯುತ್ತವೆ. 
 
ಬಹುಶಃ ಈ ದೌರ್ಜನ್ಯಗಳನ್ನು ನಿಯಂತ್ರಿಸುವ ಅಧಿಕಾರವು ಮಹಿಳೆಯರಿಗೆ ಇದ್ದು ಅವರೇ ಕಾನೂನು ರೂಪಿಸಿದರೆ ಅವುಗಳ ಸ್ವರೂಪ ಬೇರೆಯದೇ ಇರಬಹುದು. ತನ್ನ ಮೇಲೆ ನಡೆಯುವ ದೌರ್ಜನ್ಯದ ವಿಚಾರದಲ್ಲಿ ಹೆಣ್ಣು ತೆಗೆದುಕೊಳ್ಳುವ ತೀರ್ಮಾನವೂ ಭಿನ್ನವಾಗಿರಬಹುದು. ಹೀಗೆ ಹೇಳಲು ಒಂದು ಉದಾಹರಣೆಯಾಗಿ ‘ಎಚ್ಚರದ ಪ್ರೀತಿಯಲಿ ಬೆಳಕಾಗೋ ಉರಿಗಾಮ’ ಕಥೆಯ ಪಾರ್ವತಿಯನ್ನು ಗಮನಿಸಬಹುದು. ಬಹಳ ಶ್ರಮವಹಿಸಿ ದುಡಿದು ವಿದ್ಯಾಭ್ಯಾಸ ಪಡೆಯುತ್ತಲೇ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದಿರುತ್ತಾಳೆ.
 
ಗೆಳೆಯರ ಸಂಪರ್ಕದಿಂದಾಗಿ ಸ್ವಯಂಸೇವಾ ಸಂಸ್ಥೆಯ ಪರಿಚಯವಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾಳೆ. ಅಲ್ಲಿಗೆ ರಾಜಕೀಯ ಪಾಠಗಳನ್ನು ತೆಗೆದುಕೊಳ್ಳಲು ಬರುತ್ತಿದ್ದ ರಾಜನ್ ಎಂಬುವರ ಮಾತುಗಳಿಗೆ ಮನಸೋತು ಬಸಿರಾಗುತ್ತಾಳೆ. ವಿಷಯ ತಿಳಿದ ಆತ, ‘ಇದೆಲ್ಲ ಕಾಮ ಸಹಜ ಕ್ರಿಯೆ’ ಎಂದು, ಐದು ಸಾವಿರ ರೂಪಾಯಿ ನೀಡಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಹೇಳುತ್ತಾನೆ. ಬೇಸತ್ತು ಅಲ್ಲಿಂದ ಹೊರಟ ಪಾರ್ವತಿ ತಮಟೆಯ ಬಡಿತಕ್ಕೆ ಕುಣಿದಾಗ ಗರ್ಭಪಾತವಾಗುತ್ತದೆ.
 
ಅವಳು ಮರಳಿ ಬಂದು ಐದು ಸಾವಿರ ರೂಪಾಯಿಯನ್ನು ವಾಪಸ್ಸು ಕೊಟ್ಟು, ‘ನಮ್ಮ ನಡುವಿನ ಕಾಮದ ಆಕರ್ಷಣೆಯ ಸಹಜ ಪರಿಣಾಮವನ್ನು ನೀವು ಪ್ರೀತಿಸಿ ಮದುವೆಯಾದ ಹೆಂಡತಿಗೆ ತಿಳಿಸಿ’ ಎಂದು ದಿಟ್ಟವಾಗಿ ನುಡಿದು ಅಲ್ಲಿಂದ ಹೊರಡುತ್ತಾಳೆ. ನಾವು ಸಾಮಾನ್ಯವಾಗಿ ನೋಡುವ ಕ್ರಮಕ್ಕಿಂತ ಇಲ್ಲಿನ ತೀರ್ಮಾನ ಭಿನ್ನವಾಗಿದೆ. ಆತನ ಮೇಲೆ ಸೇಡಿನ ನುಡಿಗಳನ್ನಾಡದೆ ಆತನನ್ನು ದಿಟ್ಟಿಸಿ ಹೇಳುವ ಆ ಮಾತು ಕಾಡಿಸುತ್ತದೆ.
 
ಮಹಾಶ್ವೇತಾ ದೇವಿ ಅವರ ಕತೆಯ ‘ದೋಪ್ದಿ’ ನೆನಪಾಗುತ್ತಾಳೆ. ‘ದಿ ಸೇಲ್ಸ್‌ಮನ್’ ಎಂಬ ಸಿನಿಮಾದಲ್ಲಿ ಅದರ ನಾಯಕಿಯ ಮೇಲೆ ವಯೋವೃದ್ಧನಾದ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸುತ್ತಾನೆ. ತಪ್ಪಿಸಿಕೊಂಡಿದ್ದ ಆತ ಸಿಕ್ಕಿಕೊಂಡ ನಂತರ ಆಕೆಯ ಗಂಡ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದರೆ, ಆಕೆ ‘ಆತನನ್ನು ಶಿಕ್ಷಿಸಿದರೆ ನನ್ನ ನಿನ್ನ ಸಂಬಂಧ ಇಂದಿಗೆ ಕೊನೆಯಾಗುತ್ತದೆ’ ಎಂದು ಗಂಡನಿಗೆ ಹೇಳುತ್ತಾಳೆ.
 
ಈ ನಿರ್ಧಾರ ನೋಡುಗರಲ್ಲಿ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತದೆ. ಹಾಗೆಯೇ ಮಣಿಪುರದ ಮಹಿಳೆಯರು ತಮ್ಮ ಬೆತ್ತಲೆಯ ದೇಹವನ್ನು ಸೇನೆಯ ವಿರುದ್ಧ ಪ್ರತಿಭಟನೆಯ ಅಸ್ತ್ರವನ್ನಾಗಿ ಬಳಸಿ ಎದುರು ನಿಂತದ್ದೂ ಇದೆ. ಇವೆಲ್ಲ ಪ್ರಸಂಗಗಳು ಪುರುಷ ಯೋಚಿಸುವುದಕ್ಕಿಂತ ಭಿನ್ನವಾಗಿ ಹೆಣ್ಣು ಯೋಚಿಸುವುದು ತಿಳಿಯುತ್ತದೆ. ಗಂಡು ನಡೆಸುವ ದೌರ್ಜನ್ಯಗಳಿಗೆ ಹೆಣ್ಣು ತೋರುವ ಈ ಪ್ರತಿಕ್ರಿಯೆಗಳು ಕಾನೂನಿಗೂ ಮಿಗಿಲಾದ ಮಾನವೀಯ ಪಾಠಗಳನ್ನು ಹೇಳುತ್ತಿವೆ. ಈ ದಿಸೆಯಲ್ಲಿ ಯೋಚಿಸಿದರೆ ಲೈಂಗಿಕ ದೌರ್ಜನ್ಯಗಳಿಗೆ ಬೇರೊಂದು ಬಗೆಯ ಸಾಮಾಜಿಕ ಪರಿಹಾರದ ಕಡೆಗೆ ಯೋಚಿಸಬೇಕಿರುವುದು ಗಮನಕ್ಕೆ ಬರುತ್ತದೆ. ಹೆಣ್ಣು ತನ್ನ ಮೇಲಿನ ದೌರ್ಜನ್ಯವನ್ನೇ ಪ್ರತಿಭಟನೆಯಾಗಿ, ಹಿಂಸೆಯೇ ಇಲ್ಲದೆ ದೌರ್ಜನ್ಯ ಎದುರಿಸುವ ಬಗೆ ಪುರುಷ ಕೇಂದ್ರಿತ ಕಾನೂನು ಮತ್ತು ಪರಿಹಾರಗಳ ಬಗೆಗೆ ಮರುಯೋಚಿಸುವಂತೆ ಮಾಡುತ್ತವೆ. 
 
ಇಂದಿನ ಸಮಾಜದ ಹಿಂಸೆ–ದೌರ್ಜನ್ಯಗಳಿಗೆ ಹೆಣ್ಣುನೋಟದ ಪರ್ಯಾಯ ಚಿಂತನೆಗಳೇ ಬೇರೆ ಇರಲು ಸಾಧ್ಯವಿದೆ ಎಂಬುದನ್ನು ಇಂತಹ ಕಥೆಗಳು ತೋರಿಸಿಕೊಡುತ್ತವೆ. ಯಾವುದೇ ಸಮಾನತೆಯ ಚಿಂತನೆ ಮತ್ತು ಚರಿತ್ರೆಯನ್ನು ಕಟ್ಟುವವರಿಗೆ ತಮ್ಮನ್ನು ತಾವು ಅರಿತುಕೊಳ್ಳಲು ಈ ಕಥೆಗಳು ನೆರವಾಗುತ್ತವೆ. 
 
ಎಚ್ಚರಗೊಂಡ ಹೆಣ್ಣಿನ ಕಣ್ಣಿಗೆ ಕಾಣುವ ಬಾಹ್ಯ ಜಗತ್ತಿನ ಹಿಂಸೆ ಮತ್ತು ದೌರ್ಜನ್ಯಗಳಿಗೆ ಬೇರೆಯದೇ ಆದ ಪರಿಹಾರವಿದೆ ಎಂಬುದನ್ನು ಸೂಚಿಸುವ ಹಿನ್ನೆಲೆಯಿಂದ ನೋಡಿದಾಗ ‘ಬಚ್ಚೀಸು’ ಸಂಕಲನವು ಮಹತ್ವದ್ದಾಗಿ ಕಂಡುಬರುತ್ತದೆ. ಇಲ್ಲಿನ ಕಥೆಗಳ ಭಾಷೆಯು ಆಡುನುಡಿ ಮತ್ತು ಬರಹಗಳ ಭಾಷೆ ಕೂಡಿ ರೂಪುಗೊಂಡಿದೆ. ಆದರೆ ಇಲ್ಲಿನ ಎಲ್ಲ ಕಥೆಗಳು ಕಣ್ಣಳತೆಗೆ ಸಿಕ್ಕವುಗಳೇ ಆಗಿದ್ದು, ಕರುಳರಿಯುವಲ್ಲಿ ಕೊಂಚ ತೆಳುವಾದಂತೆ ಕಾಣಿಸುತ್ತವೆ. ಕೆಲವೆಡೆ ಕಥೆಗಳನ್ನು ಸರಳವಾದ ಗೆರೆಗಳಲ್ಲಿಯೇ ನಿರೂಪಿಸಿದಂತೆಯೂ ಕಾಣಿಸುತ್ತದೆ. ಕೆಲವೆಡೆ ಸಾಮಾಜಿಕ ಕಾರ್ಯಕರ್ತರಿಗಿರುವ ವೈಚಾರಿಕ ಸ್ಪಷ್ಟತೆಗಳು ಕಥೆಗಳ ಒಳಗೆ ಪ್ರವೇಶಿಸುವುದರಿಂದ ಅದು ಸಂಕೀರ್ಣತೆಯನ್ನು ಸರಳಗೊಳಿಸಿರುವಂತೆಯೂ ಎನ್ನಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.