ಭಿಕ್ಷಾಟನೆ, ಲೈಂಗಿಕ ವೃತ್ತಿಯ ಹೊರತಾಗಿ ಲಿಂಗತ್ವ ಅಲ್ಪಸಂಖ್ಯಾತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಉತ್ತರವಾಗಿ ನಿಲ್ಲುತ್ತಾರೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಪೇತ್ರಿಯ ಕಾವೇರಿ ಮೇರಿ ಡಿಸೋಜಾ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತ, ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಕಾವೇರಿ, ಈಗ ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಆಟೊ ಚಾಲಕಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ಕಾವೇರಿಯ ಈ ಸಾಧನೆಯ ಹಾದಿಯಲ್ಲಿ ಅವಮಾನ, ತಿರಸ್ಕಾರ, ಅಪಾರ ನೋವು ಇತ್ತು. ಸ್ವಾಭಿಮಾನದ ಬದುಕಿಗಾಗಿ ನಿರಂತರ ಎರಡು ದಶಕಗಳು ನಡೆಸಿದ ಹೋರಾಟ ಇದೆ. ಜೀವನದುದ್ದಕ್ಕೂ ಎದುರಾದ ಸಂಕಷ್ಟ, ಸವಾಲುಗಳನ್ನೆಲ್ಲ ಮೆಟ್ಟಿನಿಂತು ಮೇಲೆದ್ದು ಬಂದಿರುವ ಕಾವೇರಿ, ಅಂದು ತಿರಸ್ಕಾರಕ್ಕೊಳಗಾದ ನೆಲದಲ್ಲಿಯೇ ಪುರಸ್ಕಾರಕ್ಕೊಳಗಾಗುತ್ತಿದ್ದಾರೆ.
ಸಮಾಜಕ್ಕೆ ಹೆದರಿ ಮನೆಬಿಟ್ಟಿದ್ದ ಕಾವೇರಿ, ನಿಂದಿಸಿದ ಜನರಿಂದಲೇ ಪ್ರೀತಿ, ಗೌರವ ಸಂಪಾದಿಸಿ ಮಾದರಿ ಬದುಕು ರೂಪಿಸಿಕೊಂಡಿದ್ದಾರೆ. ಒಂದು ವರ್ಷದಿಂದ ಆಟೊ ರಿಕ್ಷಾ ಚಾಲಕಿಯಾಗಿ ದುಡಿಯುತ್ತಿದ್ದು, ಪುರುಷ ಚಾಲಕರನ್ನೂ ಮೀರಿಸುವಂತೆ 5 ಸಾವಿರಕ್ಕೂ ಹೆಚ್ಚು ಟ್ರಿಪ್ ಬಾಡಿಗೆ ಮಾಡಿದ್ದಾರೆ. ಅವರ ಆತ್ಮವಿಶ್ವಾಸದ ‘ಬಂಡಿ’ ದಿನ ಕಳೆದಂತೆ ವೇಗ ಹೆಚ್ಚಿಸಿಕೊಂಡು ಸಾಗುತ್ತಿದೆ.
ಭಿಕ್ಷಾಟನೆ, ಲೈಂಗಿಕ ವೃತ್ತಿ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು ಮುಂದಾದಾಗ ಎದುರಾದ ಸವಾಲುಗಳು ಹಲವು. ಖಾಕಿ ಸಮವಸ್ತ್ರ ಧರಿಸಿ ಆಟೊ ಓಡಿಸುವುದಾಗಿ ಹೇಳಿದಾಗ ಮೊದಲು ಎದುರಾಗಿದ್ದು ಅವಮಾನ, ಅಪಹಾಸ್ಯ ಮಾತ್ರ. ‘ಇವಳಿಂದ ಸಾಧ್ಯವೇ?’ ಎಂಬ ಕೊಂಕುಮಾತುಗಳನ್ನು ಆಡಿದವರೇ ಹೆಚ್ಚು. ಸಂಬಂಧಿಗಳ, ನೆರೆಹೊರೆಯವರ ಟೀಕೆಟಿಪ್ಪಣಿಗಳನ್ನೆಲ್ಲ ಬದಿಗಿಟ್ಟು ದೃಢ ಮನಸ್ಸಿನಿಂದ ಆಟೊ ಖರೀದಿಸಿದಾಗಲೂ ಆರಂಭದಲ್ಲಿ ಕಾಡಿದ್ದು ನಿರಾಶೆ ಮತ್ತು ಸೋಲು.
‘ಲಿಂಗತ್ವ ಅಲ್ಪಸಂಖ್ಯಾತೆ’ ಎಂಬ ಕಾರಣಕ್ಕೆ ಮೊದಲು ಆಟೊ ಹತ್ತಲು ಬಹಳಷ್ಟು ಜನರು ಹಿಂದೇಟು ಹಾಕಿದರು. ತಿರಸ್ಕಾರ ಭಾವದಿಂದ ನೋಡಿದರು. ಬಾಡಿಗೆ ಇಲ್ಲದ ದಿನಗಳನ್ನು ನೋಡಬೇಕಾಯಿತು. ಜೀವನದುದ್ದಕ್ಕೂ ಅವಮಾನವನ್ನೇ ಬೆನ್ನಿಗೆ ಕಟ್ಟಿಕೊಂಡು ಬಂದಿದ್ದರಿಂದ ಕಾವೇರಿ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ದಿನ ಕಳೆದಂತೆ ಸ್ಥಳೀಯರ ಪ್ರೀತಿ, ವಿಶ್ವಾಸ ಗಳಿಸುತ್ತಾ ಹೋದರು. ಆಟೊ ಹತ್ತಲು ಹಿಂಜರಿಯುತ್ತಿದ್ದವರೇ ಅವರ ಛಲದ ಬದುಕು ಕಂಡು ಕಾಯಂ ಗ್ರಾಹಕರಾದರು. ಮಾತನಾಡಲೂ ಹಿಂಜರಿಯುತ್ತಿದ್ದವರು ಫೋನ್ ಮಾಡಿ ಬಾಡಿಗೆಗೆ ಕರೆಯಲು ಆರಂಭಿಸಿದರು ಎನ್ನುವಾಗ ಕಾವೇರಿ ಅವರ ಕಣ್ಣಾಲಿಗಳು ತುಂಬಿಬಂದವು.
‘ಬೆಂಗಳೂರಿನಲ್ಲಿ ವಾಸವಿದ್ದಾಗ ಪಕ್ಕದ ಮನೆಯಲ್ಲಿದ್ದ ಆಟೊ ಚಾಲಕರೊಬ್ಬರ ಸಹಾಯದಿಂದ ಆಟೊ ಚಾಲನೆಯನ್ನು ಕಲಿತೆ. ಕುತೂಹಲಕ್ಕಾಗಿ ಕಲಿತದ್ದು ಇದೀಗ ಬದುಕಿಗೆ ದಾರಿಯಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕಾವೇರಿ.
ಆಟೊರಿಕ್ಷಾ ಖರೀದಿಸಲು ಆರ್ಥಿಕ ಸಮಸ್ಯೆ ಎದುರಾದಾಗ ಬ್ರಹ್ಮಾವರದ ಚೇರ್ಕಾಡಿಯ ಸಮೃದ್ಧಿ ಮಹಿಳಾ ಮಂಡಳಿ ಹಾಗೂ ಇನ್ನರ್‌ವೀಲ್ ಕ್ಲಬ್ ₹ 60 ಸಾವಿರ ನೆರವು ನೀಡಿದವು. ಸಹಕಾರ ಸಂಘಗಳು ಉಳಿದ ಹಣವನ್ನು ಸಾಲದ ರೂಪವಾಗಿ ನೀಡಿದವು. ಹ್ಯುಮಾನಿಟಿ ಟ್ರಸ್ಟ್‌ನ ರೋಷನ್ ಬೆಳ್ಮಣ್ಣು ಆಟೊರಿಕ್ಷಾ ಮೇಲಿದ್ದ ಸಂಪೂರ್ಣ ಸಾಲವನ್ನು ಭರಿಸಿದರು. 51 ಚರ್ಚ್‌ಗಳ ಒಕ್ಕೂಟವಾಗಿರುವ ಸುಗಮ್ಯ ಸ್ತ್ರೀ ಸಂಘಟನೆ ಹಾಗೂ ಹ್ಯುಮಾನಿಟಿ ಟ್ರಸ್ಟ್ ಪುಟ್ಟಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಿದವು.
‘ಪ್ರೌಢಾವಸ್ಥೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಾಗಿ ಮನೆ ತೊರೆಯುವುದರಿಂದ ವಿದ್ಯಾಭ್ಯಾಸ ಮೊಟಕುಗೊಳ್ಳುತ್ತದೆ. ಹೆಚ್ಚಿನವರು ಎಸ್ಸೆಸ್ಸೆಲ್ಸಿ ಕೂಡ ಮುಗಿಸಿರುವುದಿಲ್ಲ. ವಿದ್ಯೆಯೇ ಉದ್ಯೋಗಕ್ಕೆ ಪ್ರಮುಖ ಮಾನದಂಡವಾಗಿರಬಾರದು, ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ದೊರೆಯಬೇಕು. ಭಿಕ್ಷಾಟನೆ, ಲೈಂಗಿಕ ವೃತ್ತಿ ಇಷ್ಟಪಟ್ಟು ಮಾಡುವ ಕೆಲಸವಲ್ಲ; ಬದುಕಲು ಅನಿವಾರ್ಯತೆಗೆ ಆಯ್ಕೆ ಮಾಡಿಕೊಳ್ಳುವ ವೃತ್ತಿಯಷ್ಟೆ. ಬಹಳಷ್ಟು ಲಿಂಗತ್ವ ಅಲ್ಪಸಂಖ್ಯಾತರು ಸ್ವಾಭಿಮಾನದ ಬದುಕಿನ ಕನಸು ಕಾಣುತ್ತಿದ್ದು ಸಮಾಜ ಅವಕಾಶ ನೀಡಬೇಕು’ ಎನ್ನುತ್ತಾರೆ ಕಾವೇರಿ.
ಮಾನಸಿಕ ತೊಳಲಾಟ, ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಸಾವಿರಾರು ಲಿಂಗತ್ವ ಅಲ್ಪಸಂಖ್ಯಾತರು ಒಲ್ಲದ ಮನಸ್ಸಿನಿಂದ ಭಿಕ್ಷಾಟನೆ, ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದು, ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಅವರನ್ನೆಲ್ಲ ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಹಭಾಗಿತ್ವದಲ್ಲಿ ಉದ್ಯಮ ಆರಂಭಿಸುವ ದೊಡ್ಡ ಕನಸನ್ನು ಕಾವೇರಿ ಹೊಂದಿದ್ದಾರೆ. ಅವರ ಕನಸುಗಳು ನನಸಾಗಲಿ.
ಅಡ್ಡದಾರಿ ಬಿಟ್ಟು ಸರಿದಾರಿಯಲ್ಲಿ ಸಾಗಿದಾಗ ಸಮಾಜ ಕೂಡ ಬೆನ್ನಿಗೆ ನಿಲ್ಲುತ್ತದೆ ಎಂಬುದಕ್ಕೆ ನಾನೇ ನಿದರ್ಶನಕಾವೇರಿ ಮೇರಿ ಡಿಸೋಜಾ, ಲಿಂಗತ್ವ ಅಲ್ಪಸಂಖ್ಯಾತ ಆಟೊ ಚಾಲಕಿ
24 ವರ್ಷಗಳ ಹಿಂದೆ ಈಗಿನ ಕಾವೇರಿ ಮೇರಿ ಡಿಸೋಜಾ, ಸ್ಟ್ಯಾನಿ ಡಿಸೋಜಾ ಆಗಿ ಊರಿನವರಿಗೆ ಪರಿಚಿತ. ಪ್ರೌಢಾವಸ್ಥೆಯಲ್ಲಿ ದೇಹದಲ್ಲಾದ ಬದಲಾವಣೆಯಿಂದ ಯುವಕನೊಬ್ಬ ಯುವತಿಯಾಗಿ ಬದಲಾದಾಗ ಕುಟುಂಬ ಹಾಗೂ ಸಮಾಜದ ಮುಂದೆ ಧೈರ್ಯವಾಗಿ ಹೇಳಿಕೊಳ್ಳಲಾಗದೆ ಮನೆಬಿಟ್ಟು ಮೈಸೂರು ಸೇರಿದರು. ಬಸ್ ನಿಲ್ದಾಣಗಳಲ್ಲಿ ಮಲಗಿ, ಮದುವೆ ಸಮಾರಂಭಗಳಲ್ಲಿ ಊಟ ಮಾಡಿ ಆರಂಭದ ದಿನ ಕಳೆದಿದ್ದರು. ಲಿಂಗತ್ವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ‘ಗೆಳೆಯ’ ಎಂಬ ಎನ್‌ಜಿಒ ಸಂಪರ್ಕಕ್ಕೆ ಸಿಕ್ಕು ಸಣ್ಣ ಉದ್ಯೋಗ ಪಡೆದುಕೊಂಡರು. ಬಳಿಕ ಬೆಂಗಳೂರು ಸೇರಿದ ಸ್ಟ್ಯಾನಿ, ಕಾವೇರಿ ಮೇರಿ ಡಿಸೋಜಾ ಆಗಿ ಬದಲಾದರು.
ಅನಿವಾರ್ಯ ಪರಿಸ್ಥಿತಿಗೆ ಸಿಲುಕಿ ಭಿಕ್ಷಾಟನೆ, ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡು ಹೊರಬರಲು ಒದ್ದಾಡುತ್ತಿದ್ದ ಕಾವೇರಿಗೆ ಪರಿಚಿತರೊಬ್ಬರಿಂದ ‘ಡಿ’ ಗ್ರೂಪ್ ನೌಕರಿ ದೊರೆಯಿತು. ಜೀವನ ಸರಿದಾರಿಗೆ ಬರುತ್ತಿರುವಾಗಲೇ ಟಿ.ಬಿ (ಕ್ಷಯ) ಕಾಯಿಲೆಯಿಂದಾಗಿ ಕೆಲಸ ತೊರೆದು ತವರು ಸೇರಿದರು. ಲಿಂಗತ್ವ ಅಲ್ಪಸಂಖ್ಯಾತರು ಎಂಬ ಹಣೆಪಟ್ಟೆಯೊಂದಿಗೆ ಕ್ಷಯವೂ ಅಂಟಿಕೊಂಡಿದ್ದರಿಂದ ಸ್ನೇಹಿತರು, ಹಿತೈಷಿಗಳು, ರಕ್ತ ಸಂಬಂಧಿಗಳು, ನೆರೆಹೊರೆಯವರು ದೂರವಾದರು. ಕಷ್ಟದ ದಿನಗಳಲ್ಲಿ ತಾಯಿ ಮಾತ್ರ ಗಟ್ಟಿಯಾಗಿ ನಿಂತರು. ಯಾವ ಹಂತದಲ್ಲೂ ಜೀವನೋತ್ಸಾಹ ಕಳೆದುಕೊಳ್ಳದ ಕಾವೇರಿ ಕ್ಷಯದಿಂದ ಗುಣಮುಖವಾಗಿ ಮತ್ತೆ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡಬೇಕಾಯಿತು.
ಗಾರ್ಮೆಂಟ್ ಸೇರಿದರು, ಜಾತ್ರೆ, ಧಾರ್ಮಿಕ ಉತ್ಸವಗಳಲ್ಲಿ ಚುರುಮುರಿ, ಐಸ್‌ಕ್ಯಾಂಡಿ ಮಾರಿದರು. ಸಣ್ಣದೊಂದು ಕಿರಾಣಿ ಅಂಗಡಿ ತೆರೆದರು. ತಿಂಗಳು ಕಳೆಯುವಷ್ಟರಲ್ಲಿ ಕೋವಿಡ್ ಲಾಕ್‌ಡೌನ್‌ನಿಂದ ಅಂಗಡಿ ಮುಚ್ಚಬೇಕಾಯಿತು. ಕೊನೆಗೆ ಆಟೊರಿಕ್ಷಾ ಕೈಹಿಡಿಯಿತು. ಇದೀಗ ಅವರ ಬದುಕಿನ ಬಂಡಿ ಸರಿದಾರಿಯಲ್ಲಿ ಸಾಗುತ್ತಿದೆ.
24 ವರ್ಷಗಳ ಹಿಂದೆ ಈಗಿನ ಕಾವೇರಿ ಮೇರಿ ಡಿಸೋಜಾ ಅವರು ಸ್ಟ್ಯಾನಿ ಡಿಸೋಜಾ ಆಗಿ ಊರಿನವರಿಗೆ ಪರಿಚಿತ. ಪ್ರೌಢಾವಸ್ಥೆಯಲ್ಲಿ ದೇಹದಲ್ಲಾದ ಬದಲಾವಣೆಯಿಂದ ಯುವಕನೊಬ್ಬ ಯುವತಿಯಾಗಿ ಬದಲಾದಾಗ ಕುಟುಂಬ ಹಾಗೂ ಸಮಾಜದ ಮುಂದೆ ಧೈರ್ಯವಾಗಿ ಹೇಳಿಕೊಳ್ಳಲಾಗದೆ ಮನೆಬಿಟ್ಟು ಮೈಸೂರು ಸೇರಿದರು. ಬಸ್ ನಿಲ್ದಾಣಗಳಲ್ಲಿ ಮಲಗಿ ಮದುವೆ ಸಮಾರಂಭಗಳಲ್ಲಿ ಊಟ ಮಾಡಿ ಆರಂಭದ ದಿನ ಕಳೆದಿದ್ದರು. ಲಿಂಗತ್ವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ‘ಗೆಳೆಯ’ ಎಂಬ ಎನ್‌ಜಿಒ ಸಂಪರ್ಕಕ್ಕೆ ಸಿಕ್ಕು ಸಣ್ಣ ಉದ್ಯೋಗ ಪಡೆದುಕೊಂಡರು.
ಬಳಿಕ ಬೆಂಗಳೂರು ಸೇರಿದ ಸ್ಟ್ಯಾನಿ ಕಾವೇರಿ ಮೇರಿ ಡಿಸೋಜಾ ಆಗಿ ಬದಲಾದರು. ಅನಿವಾರ್ಯ ಪರಿಸ್ಥಿತಿಗೆ ಸಿಲುಕಿ ಭಿಕ್ಷಾಟನೆ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡು ಹೊರಬರಲು ಒದ್ದಾಡುತ್ತಿದ್ದ ಕಾವೇರಿಗೆ ಪರಿಚಿತರೊಬ್ಬರಿಂದ ‘ಡಿ’ ಗ್ರೂಪ್ ನೌಕರಿ ದೊರೆಯಿತು. ಜೀವನ ಸರಿದಾರಿಗೆ ಬರುತ್ತಿರುವಾಗಲೇ ಟಿ.ಬಿ (ಕ್ಷಯ) ಕಾಯಿಲೆಯಿಂದಾಗಿ ಕೆಲಸ ತೊರೆದು ತವರು ಸೇರಿದರು. ಲಿಂಗತ್ವ ಅಲ್ಪಸಂಖ್ಯಾತರು ಎಂಬ ಹಣೆಪಟ್ಟೆಯೊಂದಿಗೆ ಕ್ಷಯವೂ ಅಂಟಿಕೊಂಡಿದ್ದರಿಂದ ಸ್ನೇಹಿತರು ಹಿತೈಷಿಗಳು ರಕ್ತ ಸಂಬಂಧಿಗಳು ನೆರೆಹೊರೆಯವರು ದೂರವಾದರು. ಕಷ್ಟದ ದಿನಗಳಲ್ಲಿ ತಾಯಿ ಮಾತ್ರ ಗಟ್ಟಿಯಾಗಿ ನಿಂತರು.
ಯಾವ ಹಂತದಲ್ಲೂ ಜೀವನೋತ್ಸಾಹ ಕಳೆದುಕೊಳ್ಳದ ಕಾವೇರಿ ಕ್ಷಯದಿಂದ ಗುಣಮುಖವಾಗಿ ಮತ್ತೆ ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡಬೇಕಾಯಿತು. ಗಾರ್ಮೆಂಟ್ ಸೇರಿದರು ಜಾತ್ರೆ ಧಾರ್ಮಿಕ ಉತ್ಸವಗಳಲ್ಲಿ ಚುರುಮುರಿ ಐಸ್‌ಕ್ಯಾಂಡಿ ಮಾರಿದರು. ಸಣ್ಣದೊಂದು ಕಿರಾಣಿ ಅಂಗಡಿ ತೆರೆದರು. ತಿಂಗಳು ಕಳೆಯುವಷ್ಟರಲ್ಲಿ ಕೋವಿಡ್ ಲಾಕ್‌ಡೌನ್‌ನಿಂದ ಅಂಗಡಿ ಮುಚ್ಚಬೇಕಾಯಿತು. ಕೊನೆಗೆ ಆಟೊರಿಕ್ಷಾ ಕೈಹಿಡಿಯಿತು. ಇದೀಗ ಅವರ ಬದುಕಿನ ಬಂಡಿ ಸರಿದಾರಿಯಲ್ಲಿ ಸಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.