ಚಂದ್ರ ತತ್ತರಿಸಿಹೋದ!
ಪ್ರಸಿದ್ಧ ಕಾದಂಬರಿಕಾರರಾದ ರವಳಪ್ಪರಿಗೆ ಬಿದ್ದ ಕನಸಲ್ಲೂ; ತನ್ನ ಮನದನ್ನೆ ಅನಲೆಯ ಕನಸಲ್ಲೂ ತಾನು ಕಗ್ಗೊಲೆಯಾಗಿ ಹೋದದ್ದಕ್ಕೆ ಚಂದ್ರ ತತ್ತರು ಬಡಿದುಹೋದ.
***
‘ಯಲ ಯಲಾ ಕವಿ ಕೊಲೆಯಾದ್ನಲ್ಲೇ... ಪಾಪಿ ಸೂಳೆಮಕ್ಳು ಕೊಚ್ಚಿ ಹಾಕ್ಬುಟ್ರಲ್ಲೇ... ಅಯ್ಯೋ ಶಿವನೇ... ಹೋದ್ನಲ್ಲೋ ಹುಡ್ಗಾ, ಕೊಲೆಯಾಗಿ ಹೋದ್ನಲ್ಲೋ ಮುತ್ನಂಥ ಹುಡ್ಗ...’ ಎಂದು ರವಳಪ್ಪರು ಒಂದು ಸರು ಹೊತ್ತಲ್ಲಿ ಬಡಬಡಿಸುತ್ತಾ ಎದ್ದು ಕುಂತಿದ್ದಕ್ಕೆ ಅವರ ಧರ್ಮಪತ್ನಿಯೂ ಬಡಬಡಿಸಿ ಎದ್ದು ಗರಬಡಿದು ಕುಂತು, ರವಳಪ್ಪರು ಕಂಡ ಕನಸ ಕೇಳಿ ಎದೆ ಧಸಕ್ಕೆಂದಂತಾಗಿ ಎವೆ ಮುಚ್ಚದೆ ಕಣ್ಣು ಬಿಟ್ಟುಕೊಂಡು ಕುಂತೇಬಿಟ್ಟರು – ರವಳಪ್ಪರೊಂದಿಗೆ ತಾವೂ ಇರುಳು ಪೂರಾ.
‘ಬ್ಯಾಡ ಕಣಯ್ಯ, ಈ ಲೋಕದ ಕಣ್ಣಿಗೆ ಬೀಳ್ಬೇಡ ಕಣಯ್ಯ. ಇಲ್ಲಿ ಇರೋ ತೀರಿನ ಬಗ್ಗೆ ಬರಿಬಾರ್‍ದು. ಸಮಾಜದ ಮುಖಕ್ಕೆ ಕನ್ನಡಿ ಹಿಡೀಬಾರ್ದು. ಅದೂ ನಿನ್ನಂಥೋನು ಇಂಥವರೆದುರುಗಡೆ ಬರಿಯೋದುಂಟಾ? ತಲೆಯೆತ್ತಿಕೊಂಡು ತಿರುಗಾಡೋದುಂಟಾ? ನೀನು ಕವಿ ಕಣಯ್ಯ. ಆದರೆ ಕವನ ಬರಿಬ್ಯಾಡ ಕಣಯ್ಯ. ಇವರ್‍ಯಾರೂ ಸಹಿಸಲ್ಲ. ಹೊಟ್ಟೆಹುರ್‍ಕರು ಇವರು. ಹೊಟ್ಟೆಹುರ್‍ಕಂಡು ಸಾಯ್ತಾರೆ. ಹಾಗೇ ಮೋಕೂಪ್ನಲ್ಲಿ ನಿನ್ ಪಾಡಿಗೆ ನೀನು ಹೆಂಗೋ ಇದ್ಕಂಡು ಇರು. ಎಲೆಮರೆ ಕಾಯಂಗೂ ಅಲ್ಲ; ಹೀಚ್ನಂಗೆ.
ಪದ್ಯ ಗೀಚಿದ್ರೂ ಪತ್ರಿಕೆಗೂ ಕಳಿಸ್ಬೇಡ, ಎಲ್ಲಿಗೂ ಕಳಿಸ್ಬೇಡ. ಇಲ್ಲಿ ಪ್ರಜಾಪ್ರಭುತ್ವ ಇದೆ ಅನ್ನೋದೂ, ಜಾತಿ ಇಲ್ಲ ಅನ್ನೋದೂ ಎಲ್ಲಾ ಬರೀ ಬೂರಿ. ನನ್ನ ತುಪುಟ! ನೀನು ಮಾತಾಡ್ಬೇಡ ಅನ್ನುತ್ತೆ ಕಣಯ್ಯ. ಈ ನನ್‌ಮಗುಂದ್ ದೊಡ್ಡ ಜಾತಿ, ನೀನು ಬರೀಬ್ಯಾಡ ಅನ್ನುತ್ತೆ. ನೀನು ಓದಬ್ಯಾಡ, ಚೆನ್ನಾಗಿರೋ ಕೆಲ್ಸ ತಗೋಬ್ಯಾಡ; ಅಪ್ಪಾರ ಸಂಬಳ ತಗೋಬ್ಯಾಡ; ಮನೆ–ಮಠ ಕಟ್ಟಿಸಬ್ಯಾಡ ಅನ್ನುತ್ತೆ. ನೀನು ಏನಾದ್ರೂ ಯಾಮಾರಿ ನನ್‌ತಾವ ಎಲ್ಲಾ ಐತೆ ಅಂತ ಯಾವ್ದಾದ್ರೂ ಪಕ್ಷದಲ್ಲಿ ಎಲೆಕ್ಷನ್‌ಗೆ ನಿಂತ್‌ಗಿಂತ್ರೆ ಮುಗ್ದೇ ಹೋಯ್ತು, ಗರಗಸ ತಗೊಂಡು ನಿನ್ನ ತಿಕಾನ ಚರಚರಾ ಚರಚರಾ ಅಂತ ಕುಯ್ದಾಕ್ಬುಡ್ತಾರೆ ಹುಷಾರು!
ನೀನು ಬರ್‍ಯೋದು ಈ ನನ್‌ಮಕ್ಳಿಗೆ ಕಿಂಚಿತ್ತೂ ಇಷ್ಟ ಇಲ್ಲ ಕಣಯ್ಯ. ಚೆನ್ನಾಗಿ ಬರೀತಿಯ ಅಂತಲೇ ಬಂದು ನಿನ್ ಮೆಟ್ರೆ ಹಿಸುಕಿ ಸಾಯ್ಸಿಬಿಡ್ತಾರೆ! ಗೊತ್ತಾಗ್ದಂಗೆ ಸೀದಾ ಮರ್ಮಕ್ಕೇ ಒದ್‌ಬಿಡ್ತಾರೆ... ಎಲ್ಲ ಮಚ್ಚರ ಕಣಯ್ಯ. ಕೆಳ ಜಾತಿಯೋರು ಬದುಕೋದುಂಟಾ, ಬರ್‍ಯೋದುಂಟಾ? ಎಲ್ಲಾದ್ರೂ ಇವುರ್‍ನ ಹೋಗಿ ಹೋಗಿ ನೆಚ್ಕಂಬುಟ್ಟೀಯ! ಮಚ್ನಲ್ಲಿ ಕೊಚ್ಚಿ ಮಲಗುಸ್ತಾರೆ. ಅವುನ್ಯಾರೋ ಪೇಪರ್‍ನೋನ್ನ ಕೊಚ್ಚೇ ಹಾಕುದ್ರಲ್ಲ ಹಂಗೆ... ಇಲ್ಲ ಕಣಯ್ಯ, ನಾನು ನಿನ್ನನ್ನ ಹೆದರಿಸೋಕೆ ಹೇಳ್ತಿಲ್ಲ. ನೀನು ನನ್ನ ಮಗನ್ ಥರ. ನೀನು ಮೇಲುಕ್ಕೆ ಬರೋದ್ನ ಇವರು ಸಹಿಸಲ್ಲ ಕಣಯ್ಯ. ಎಲ್ಲಾದ್ರೂ ಯಾವತ್ತಾದ್ರೂ ನಿನ್‌ಗೆ ಏನಾದ್ರೂ ಅಪಾಯ ಮಾಡಿಬಿಡ್ತಾರೆ ಕಣಯ್ಯ...! ಅಂತ ಆ ಹುಡುಗನಿಗೆ ಹೇಳ್ತಿದ್ದೆ ಕಣೆ. ಈಗ ಬಿದ್ದ ಕನಸಲ್ಲೂ ಹಂಗೇ ಹಾಗ್ಹೋಯ್ತಲ್ಲೇ...
ಯಾವನೋ ಮೋಕುಪ್ನಲ್ಲಿ ಹಿಂದ್ನಿಂದ ಮೆತ್ತಗೆ ಬಂದು ಮಚ್ನಲ್ಲಿ ಎತ್ತಿ ಎರಡು ಏಟು ಬಿಟ್ಟೇಟಿಗೆ ತಲೆ ಭಡ್ಡನೆ ಎರಡು ಹೋಳು ಸೀಳಿ ಹೋಗಿ ಹೊಳ್ಕೆ ಸೌದೆ ಹಂಗೆ ರಕ್ತ ಅನ್ನೋದು ಭುಗ್ ಅಂತ ಚಿಮ್ಮಿ ಆ ಮುಸ್ಸಂಜೇಲಿ ಕೆಂಪಾನ ಕೆಂಪಗೆ ರಸ್ತೇಲೆಲ್ಲ ಎರಚಾಡಿ ಹೋಯ್ತಲ್ಲ...
‘ಅಯ್ಯಯ್ಯಪ್ಪೋ’ ಅಂತ ಒಂದೇ ಶಬ್ದ ಬಂದಿದ್ದು – ಆ ನನ ಕಂದನ ಬಾಯಿಂದ. ಪ್ರಾಣಪಕ್ಷಿ ಪುರ್ರಂತ ಹಾರೇಹೋಯ್ತು. ಕಣ್ಣಲ್ಲಿ ನೋಡೋಕ್ಕಾಗ್ಲಿಲ್ಲ ಕಣೇ...’ ಅಂತ ಬುಳಬುಳ ಅಳತೊಡಗಿದ ರವಳಪ್ಪರು ಇಡೀ ರಾತ್ರೆ ಎದ್ದು ಕುಂತವರು ಮತ್ತೆ ಮಲಗಿಕೊಳ್ಳಲೇ ಇಲ್ಲ.
ಬೆಳಕು ಹರಿದು, ಆ ಹುಡುಗನ್ನ ಎಷ್ಟು ಹೊತ್ತಿಗೆ ನೋಡ್ತೀನೋ ಅಂತ ತವಕದಲ್ಲಿ ಕುಂತ ಕಾದಂಬರಿಕಾರರಿಗೆ, ಬೆಳಗ್ಗೆ ಹತ್ತರ ಹೊತ್ತಿಗೆ ಚಂದ್ರ ಮನೆಯ ತಲೆಬಾಗಿಲಲ್ಲಿ ಬಂದು ನಿಂತಾಗ ದೊಡ್ಡ ಸಮಾಧಾನ ಉಂಟಾಯಿತು. ನಿಟ್ಟುಸಿರು ಬಿಟ್ಟು, ಹೆಂಗಸರ ತರವಾಗಿ ಕೆನ್ನೆ ಸವರಿ ನೆಟಿಕೆ ತೆಗೆದರು. ಇದೇನು ಇವತ್ತು ಕಾದಂಬರಿಕಾರರು ತನ್ನನ್ನು ಈ ಪರಿಯಲ್ಲಿ ಪ್ರೀತಿಸುತ್ತಿದ್ದಾರಲ್ಲ ಎಂದು ಚಂದ್ರ ಆಶ್ಚರ್ಯಗೊಂಡವನು, ಕಣ್ಣಲ್ಲೇ ಆರ್ತ ಪ್ರಶ್ನೆಯನ್ನು ಮುಂದೆ ಮಾಡಿದ. ಮಾತಾಡಲಾರದವರಾದ ರವಳಪ್ಪರು ಚಂದ್ರನನ್ನು ಬರಸೆಳೆದು ಬಿಗಿದಪ್ಪಿಕೊಂಡು ಬುಳಬುಳ ಕಣ್ಣೀರು ಹಾಕಿದರು. ತಲೆಯ ಕೂದಲೊಳಗೆ ಬೆರಳಾಡಿಸಿ ಮುದ್ದಾಡಿದರು.
ತನ್ನ ತಂದೆಯನ್ನು ಕಳೆದುಕೊಂಡು ದುಃಖದಲ್ಲಿ ನೊಂದಿದ್ದ ಚಂದ್ರನಿಗೆ, ರವಳಪ್ಪರೇ ರೂಬು ರೂಬು ತಂದೆಯಂತೆನಿಸಿ ಯಾವತ್ತೋ ಕಳೆದುಹೋಗಿದ್ದ ಸುಖವನ್ನು ಎದೆಗೆ ತುಂಬಿಕೊಂಡು ನಿರಾಳನಾದ.
ಚಂದ್ರನ ಹೆಗಲ ಮೇಲೆ ಕೈ ಹಾಕಿಕೊಂಡು ತಬ್ಬಿಕೊಂಡು ಒಳಕ್ಕೆ ಪ್ರೀತಿಯಿಂದ ಕರೆದೊಯ್ದ ರವಳಪ್ಪರು ಪಕ್ಕದಲ್ಲೇ ಕೂರಿಸಿಕೊಂಡು, ‘ಹೊಟ್ಟೆ ತುಂಬಾ ತಿನ್ನಯ್ಯ, ಆಮೇಲೆ ಪದ್ಯ ಓದೀವಂತೆ’ ಅಂದರು. ಪದ್ಯದ ಶಬ್ದ ಕಿವಿಗೆ ಬಿದ್ದ ಕೂಡಲೇ ಆನಂದತುಂದಿಲನಾದ ಚಂದ್ರ, ಎದುರಿಗೆ ಬಂದು ಕುಂತ ತಿಂಡಿಯ ತಟ್ಟೆಗೆ ತಂದೆ ಸಮಾನರಾದ ರವಳಪ್ಪರು ತಮ್ಮ ತಟ್ಟೆಗೆ ಕೈ ಹಾಕುವುದಕ್ಕೆ ಮುನ್ನವೇ ಕೈ ಹಾಕಿ ಬಿರಬಿರನೆ ನುಂಗತೊಡಗಿದ. ಪುಟ್ಟ ಮಗು ಊಟವನ್ನು ಚಪ್ಪರಿಸುವುದನ್ನು ಕಂಡು ಆನಂದಗೊಳ್ಳುವ ಎಳೆತಂದೆಯ ತರವಾಗಿ ರವಳಪ್ಪರು ಚಂದ್ರನನ್ನೇ ತದೇಕ ದಿಟ್ಟಿಸುತ್ತಾ ಕಣ್ಣಲ್ಲಿ ನೀರು ತಂದುಕೊಂಡರು.
ಒಂದು ಹನಿ ಕೆನ್ನೆಗೆ ಜಾರಿದ ಕೂಡಲೇ ಟರ್ಕಿ ಟವಲಲ್ಲಿ ಸರಕ್ಕನೆ ಅದನ್ನು ಒರೆಸಿಕೊಂಡು ‘‘ನರಸಿಂಹಸ್ವಾಮಿಯವರ ಕವನ ‘ರೈಲ್ವೆ ನಿಲ್ದಾಣ’ದಲ್ಲಿ ಓದಯ್ಯ, ನೀನು ಚೆನ್ನಾಗಿ ಓದ್ತೀಯ, ಕೇಳೋಣ’’ ಎಂದರು. ತಿಂಡಿ ತಿಂದು ನೀರು ಕುಡಿದು ಕವನ ಓದಲೆಂದೇ ತಯಾರಾಗಿದ್ದವನಂತಿದ್ದ ಚಂದ್ರ, ಆ ಕವನವನ್ನು ರವಳಪ್ಪರ ಕಣ್ಣಿಗೆ ಕಟ್ಟುವಂತೆ, ಹೃದಯದಲ್ಲಿ ಕೂರುವಂತೆ ಭಾವಪೂರ್ಣವಾಗಿ ಓದಿ ಕಣ್ಣಾಲಿಯಲ್ಲಿ ತಾನೂ ನೀರು ತುಂಬಿಕೊಂಡು ಕುಂತ. ಒಂದೂ ಮಾತಾಡದವರಾದ ರವಳಪ್ಪರು ಚಂದ್ರನನ್ನು ತಮ್ಮ ಎದೆಗೆ ಒರಗಿಸಿಕೊಂಡು ನೆತ್ತಿಗೆ ಲೊಚಕ್ಕನೆ ಮುತ್ತಿಕ್ಕಿದರು.
‘‘ಅಯ್ಯೋ ಮಗನೇ, ನಿನ್ನ ಕೊಂದು ಹಾಕಿಬಿಟ್ರಲ್ಲೋ ಪಾಪಿಗಳು!... ಆ ತಿರುವಲ್ಲಿ, ಮರೆಯಲ್ಲಿ ನಿಂತು, ನಿನ್ನ ಬೆನ್ನ ಹಿಂದೆ ಬಂದು ಸರಸರ ಮಚ್ಚಲ್ಲಿ ಕೊಚ್ಚಿ ನಿನ್ನ ಉತ್ತುರಿಸಿ ಬಿಟ್ರಲ್ಲೋ...’’ ಎಂದು ರಾತ್ರಿ ಕಂಡ ಕನಸ ಹೇಳಿಕೊಂಡು ರವಳಪ್ಪರು ಅಳತೊಡಗಿದ್ದನ್ನು ಕಂಡು ಚಂದ್ರ ಕಂಗಾಲಾಗಿ ಹೋದ.
ಚಂದ್ರನಿಗೆ ಜಂಘಾಬಲವೇ ಉಡುಗಿ ಹೋಗಿ ರವಳಪ್ಪರ ಕಾಲ್ದೆಸೆಯಲ್ಲಿ ಕುಸಿದು ಕೂತ.
***
ಚಂದ್ರನಿಗೆ ಅನಲೆಯ ಭೇಟಿ ಅಚಾನಕ್ಕಾಗಿ ಆಯಿತು. ಘನ ಹುದ್ದೆಯಲ್ಲಿದ್ದ ಅನಲೆ ಚಂದ್ರನನ್ನು ಬಯಸಿದ್ದು ಸೋಜಿಗವೇ. ಬರಹದ ಮುಖೇನ ಅನಲೆಗೆ ಮಾರ್ಗದರ್ಶನ ನೀಡುತ್ತಿದ್ದ ಚಂದ್ರ ಆ ಮೂಲಕವೇ ಹತ್ತಿರವಾಗಿ ಅನಲೆಯ ಅಂತರಂಗದ ಭಾವನೆಗಳ ಅಲೆಯನ್ನು ಬಡಿದೆಬ್ಬಿಸಿಬಿಟ್ಟ. ಪರಿಣಾಮವಾಗಿ ಅನಲೆಗೆ ಚಂದ್ರ ನಿತ್ಯವೂ ಬೇಕೇಬೇಕೆನಿಸಿದ ರಾಗವಾಗಿಬಿಟ್ಟ. ಪತಿ ಮಕ್ಕಳನ್ನೂ ದಾಟಿಕೊಂಡು, ಚಂದ್ರನ ತೋಳತೆಕ್ಕೆಗೆ ಅನಾಯಾಸವಾಗಿಯೇ ಬಂದ ಅನಲೆಯನ್ನು ಚಂದ್ರ ಪ್ರಣಯದ ತಿಂಗಳ ಬೆಳಕಿನಲ್ಲಿ ಮೀಯಿಸತೊಡಗಿದ. ಅವಳ ಕಣ್ಣುಗಳನ್ನು ನಿತ್ಯ ಹೊಳಪು ಮಾಡತೊಡಗಿದ. ಚಂದ್ರನನ್ನು ಅನಲೆ ತನ್ನ ಹೃದಯದಲ್ಲಿ ಜೋಪಾನ ಮಾಡಿಕೊಂಡು ಹಗಲು–ಇರುಳುಗಳನ್ನು ಸ್ವಚ್ಛಂದವಾಗಿ ಕಳೆಯುತ್ತಿರಲು, ಆ ರಾತ್ರೆ ಕೆಟ್ಟ ಕನಸಿನಿಂದ ಚೀರಿ ಎದ್ದು ಕುಳಿತಳು. ‘ಚಂದ್ರಾ... ಚಂದ್ರಾ...’ ಎಂದು ಕತ್ತಲಲ್ಲಿ ಬಾರಾಡತೊಡಗಿದಳು.
ತನ್ನ ಪ್ರಾಣಕಾಂತ ಚಂದ್ರನನ್ನು ತನಗೆ ಗುರುತು ಪರಿಚಯವಿರುವಂಥವರೇ ಇರಿದು ಕೊಂದು, ಹರಿವ ರಕ್ತವನ್ನು ಒಂದು ಬರಲಲ್ಲಿ ಎಜ್ಜಿಕೊಂಡು ಕುಂಚವಾಗಿ ಬಳಸುತ್ತಾ ಟಾರು ರೋಡಿನ ಮೇಲೆ ‘ಚಂದ್ರನನ್ನು ಕೊಂದವರು ನಾವೇ’ ಎಂದು ಬರೆಯುತ್ತಾ ರೋಷ, ಆಕ್ರೋಶ ಕಾರುತ್ತಿದ್ದುದ ಕಂಡು ಅನಲೆ ದಿಗ್ಭ್ರಾಂತಳಾದಳು.
‘ಗಂಡುಳ್ಳ ಗರತಿಯೊಂದಿಗೆ ಸಂಗ ಮಾಡಿದ ಖೂಳನಿಗೆ ದೇವರು ತಿಳಿಸಿದಂತೆ ನಾವು ಶಿಕ್ಷೆ ಕೊಟ್ಟಿದ್ದೇವೆ’ ಎಂದು ಕೆಂಪನೆಯ ಅಕ್ಷರಗಳಲ್ಲಿ ಸೂರ್ಯ ಹುಟ್ಟುವ ಹೊತ್ತಿಗೆ ಬರೆದು ಗದ್ದೆ ಬಯಲಲ್ಲಿ ಹೆಜ್ಜೆಯಿಡುತ್ತಾ ಮರೆಯಾದವರನ್ನು ಅನಲೆ, ‘ಲೇ ರಾಕ್ಷಸರಾ... ನೀಚರಾ... ಪರಮ ಚಾಂಡಾಳರಾ... ಎಂಥ ಕೆಲಸ ಮಾಡಿದ್ರೋ... ನಿಮ್ಮ ವಂಶ ನಿರ್ವಂಶವಾಗ... ನಿಮ್ಮ ಹೆಂಡ್ರು ಮುಂಡೇರಾಗ... ನಿಮ್ ಕೈಯಿ ಸೇದೋಗ... ನಿಮ್ಮ ಮೈಯಾಗಿನ ರಕ್ತ ಹಿಂಗೇ ಕಾಲುವೇಲಿ ಹರಿದು ಹೋಗ...’ ಎಂದೆಲ್ಲ ಬೈಯತೊಡಗುತ್ತಾ, ಕಿರಿಚುತ್ತಾ ಕುಂತಿರಲು, ಮಗ್ಗುಲಲ್ಲಿ ಮಲಗಿದ್ದ ಪತಿಗೆ ‘ಬಿದ್ದ ಕನಸು ಎಂಥದು’ ಎಂಬ ಅರಿವಾಗಿತ್ತು.
ಏನನ್ನೂ ಕೇಳದೆ ಅಡುಗೆ ಮನೆಗೆ ತೆರಳಿ ಒಂದು ಕಪ್ಪು ಹಾಲು ಕುಡಿದು ಬಚ್ಚಲು ಮನೆಗೆ ಹೋಗಿ ಒಂದು ಬಳ್ಳ ಉಚ್ಚೆ ಹುಯ್ದು ಅನಲೆಯನ್ನು ಏನೊಂದೂ ಕೇಳದೆ ಮತ್ತದೇ ಸ್ಥಿತಿಯಲ್ಲಿ, ಆದರೆ ಮನದೊಳಗೆ ನಗುನಗುತ್ತಾ ಪವಡಿಸಿದ.
ರಾತ್ರಿ ಮುಗಿದು ಬೆಳಕು ಹರಿಯುವುದನ್ನೇ ಕಾಯ್ದ ಅನಲೆ ಚಂದ್ರನಿಗಾಗಿ ಹಂಬಲಿಸತೊಡಗಿದಳು. ಸೂರ್ಯ ನಡುನೆತ್ತಿಗೆ ಬರುವ ಹೊತ್ತಿಗೆ ಅನಲೆಯ ಮನೆಗೆ ಗೊತ್ತಾಗದಂತೆ ಹಾಜರಾದ ಚಂದ್ರ, ಯಥಾಪ್ರಕಾರ ಕಣ್ಣಲ್ಲಿ ನಗತೊಡಗಿದ. ಚಂದ್ರನ ಮುಖವನ್ನೇ ಸಂಕಟದಲ್ಲಿ ದಿಟ್ಟಿಸತೊಡಗಿದ ಅನಲೆ ಒಳಗೆ ಮಕ್ಕಳು ಅಡ್ಡಾಡುತ್ತಿದ್ದರೂ, ಚಂದ್ರನನ್ನು ಬಾಚಿ ತಬ್ಬಿಕೊಂಡು ಕಣ್ಣು, ಮೂಗು, ತುಟಿಗಳಿಗೆಲ್ಲಾ ಮುತ್ತಿಡುತ್ತಾ ಆತನ ಎದೆಯ ಮೇಲೆ ಕ್ಷಣಕಾಲ ಮುಖ ಒರಗಿಸಿದಳು.
ನಟ್ಟನಡು ಮಧ್ಯಾಹ್ನ ಯಾರ ಅಂಜಿಕೆಯೂ ಇಲ್ಲದೆ ತನ್ನನ್ನು ತಬ್ಬಿಕೊಂಡು ಮೋಹವನ್ನು ಅಮೃತದ ಹಾಗೆ ಉಣಿಸತೊಡಗಿದ ಅನಲೆಯ ತಲೆಯನ್ನು ನೇವರಿಸುತ್ತಾ ನಿಧಾನ ಅವಳ ಮುಖವನ್ನು ಮೇಲೆತ್ತಿ ಕೊಂಚ ದಪ್ಪವೆನಿಸುವ ಕೆಳತುಟಿಗೆ ಸುಸೂಕ್ಷ್ಮ ಚುಂಬಿಸಿ ಒಲವ ತುಂಬಿದ ಚಂದ್ರ, ಆಕೆಯ ಕಣ್ಣೊಳಗಿನ ಸಂಕಟವನ್ನು ಅರಸತೊಡಗಿದ.
ರಾತ್ರಿ ತಾನು ಕಂಡ ಕರಾಳ ಕನಸಿನ ವಿವರವನ್ನು ಕಣ್ಣಲ್ಲಿ ನೀರು ತುಂಬಿಕೊಂಡು ಅರುಹಿದ ಅನಲೆ, ‘‘ಇನ್ನು ಮೇಲೆ ಬಹಳ ಹುಷಾರಾಗಿರು. ಒಬ್ಬನೇ ಓಡಾಡುವಾಗ ನಿನ್ನ ಮೈಯೆಲ್ಲಾ ಕಣ್ಣಾಗಿರಲಿ. ಮನಸ್ಸು ಪೂರಾ ಎಚ್ಚರವಾಗಿರಲಿ. ಎಲ್ಲಿ, ಯಾವಾಗ, ಯಾರು ನಿನಗೆ ಕೇಡು ಬಗೆಯುತ್ತಾರೆ ಎಂಬುದನ್ನು ಹೇಳಲು ಬರುವುದಿಲ್ಲ. ನಮ್ಮ ಕಡೆಯ ಜನ ನಿನ್ನ ಮೇಲೆ ನಿಗಾ ಇಟ್ಟಿದ್ದಾರೆ.
ನಿನ್ನ ಕಥೆ ‘ಸಂಗ್ಯಾಬಾಳ್ಯ’ದ ಸಂಗ್ಯಾನ ಕಥೆಯಂತಾಗಬಾರದು’’ ಎಂದು ಎಚ್ಚರಿಸಿ, ಚಂದ್ರನನ್ನು ಆ ಹಗಲು ಒಲ್ಲದ ಮನಸ್ಸಿನಿಂದ, ಸಂಕಟದ ಒಡಲಿನಿಂದಲೇ ಬೀಳ್ಕೊಟ್ಟಾಗ ಅನಲೆ ದುಃಖದ ಕಡಲಾಗಿದ್ದಳು. ಚಂದ್ರನ ಎದೆಯೊಳಗೆ ಬೆಳಕು ಹಾರಿ ಕತ್ತಲು ಗಾಢವಾಗಿ ತುಂಬಿಕೊಂಡಿತ್ತು.
ಭಯಗ್ರಸ್ತವಾಗಿ ಹೆಜ್ಜೆ ಹಾಕುತ್ತಾ ತೆರಳುತ್ತಿದ್ದವನನ್ನು ಮನೆಯ ಅಟ್ಟದ ಕಿಟಕಿಯಿಂದ ನೋಡತೊಡಗಿದ ಅನಲೆಗೆ ತನ್ನ ಹೃದಯ ಹಾಗೆ ಡಾಂಬರು ನೆಲದ ಮೇಲೆ ಹರಿದು ಹೋಗುತ್ತಿರುವಂತೆ ಅನ್ನಿಸಿ ಕಿಟಕಿಯೊಳಗಿನಿಂದ ಕೈಯ ತೂರಿಸಿ ‘ತಿರುಗಿ ಬಾ’ ಎಂದು ಸನ್ನೆ ಮಾಡಿದಳು.
ಕರಿಯ ಮೋಡಗಳು ದಟ್ಟೈಸುವ ಸೂಚನೆ ಸಿಕ್ಕಿ ಪತರುಗುಟ್ಟುವ ಚಂದ್ರನಂತೆ, ಈ ಚಂದ್ರ ಅನಲೆ ಅರುಹಿದ ಕರಾಳ ಕನಸಿಗೆ ಕ್ಷಣ ಬೆಚ್ಚಿ ವರಚ್ಚಿಗೆ ರಸ್ತೆಯ ಒಂದು ಕಡೆ ಮಗ್ಗುಲಾಗಿ ನಿಂತುಬಿಟ್ಟ.
***
ಹೀಗೆ ಪ್ರಸಿದ್ಧ ಕಾದಂಬರಿಕಾರ ರವಳಪ್ಪನ ಕನಸಿನಲ್ಲಿ ಹಾಗೂ ಪ್ರಿಯತಮೆ ಅನಲೆಯ ಕನಸಿನಲ್ಲೂ ಚಂದ್ರ ಕಗ್ಗೊಲೆಯಾಗಿ ಹೋದದ್ದಕ್ಕೆ ತತ್ತರು ಬಡಿದು ಹೋದ.
***
ಚಂದ್ರನ ಹಳೆಯ ದಿನಚರಿ ಪುಸ್ತಕ ನಿಮಗೆ ಸಿಕ್ಕರೆ ಆ ಪುಟವನ್ನು ಒಮ್ಮೆ ನೋಡಿ. ಅಲ್ಲಿಯ ಆ ಸಾಲನ್ನು ಗಮನಿಸಿ:
‘ಕೈಯಾರೆ ಹತ್ಯೆಯಿದು
ಕ್ಷಮೆಯಿಲ್ಲ....’
ಏನಿದು? ಯಾಕೆ ಹೀಗೆ ಬರೆದ? ನಾನು ಚಂದ್ರನನ್ನು ಒಂದು ಸಲ ಬಿಡದೇ ಕೇಳಿದೆ: ಏನಿದು ಕಥೆ? ಅದಕ್ಕೆ ಅವನು. ‘‘ಹೌದು, ಅದು ಕತೆಯೇ’’ ಎಂದು ಉತ್ತರಿಸಿದ್ದ.
ಆ ಕಥೆ ಹೀಗೆ: ಚಂದ್ರನ ಸಖಿಯಾಗಿದ್ದ ನೀಲಿ, ಚಂದ್ರನಿಂದ ಬಯಸಿ ಪಡೆದಿದ್ದ ಜೀವಫಲವನ್ನು ಹೊಸಕಿ ಹಾಕಲು ಮನಸು ಮಾಡಿದುದಕ್ಕೆ ಚಂದ್ರ, ತೀವ್ರ ಘಾಸಿಗೊಂಡಿದ್ದ. ಚಿಂತಾಕ್ರಾಂತನಾಗಿದ್ದ.
‘‘ನಾನು ‘ಇತರೆ’ ಜಾತಿಯವನನ್ನು ಮದುವೆಯಾಗುವುದು ಕಷ್ಟ ಕಣೋ’’ ಎಂದು ಚಂದ್ರನನ್ನುದ್ದೇಶಿಸಿ ಹೇಳುತ್ತಲೇ ಅವನಿಂದ ಲೈಂಗಿಕ ಸಖ್ಯ ಅನುಭವಿಸಿದ ನೀಲಿ, ತಾನು ಗರ್ಭಿಣಿ ಎಂದು ಗೊತ್ತಾದ ಕೂಡಲೇ ಕಾಗೆ ಮುಟ್ಟಿದವಳಂತೆ ಹೌಹಾರಿ ಹೋಗಿ, ಚಂದ್ರನತ್ತ ಧಾವಿಸಿ ಬಂದು ‘‘ಮೊದಲು ಇದನ್ನು ತೆಗೆಸೋ’’ ಎಂದು ಚಂದ್ರನ ಪ್ರಾಣ ಹಿಂಡತೊಡಗಿದಳು.
ಯಾವ ಕೆಲಸ ಕಾರ್ಯವೂ ಇಲ್ಲದೆ ಇನ್ನೂ ಓದು ಬರಹದಲ್ಲೇ ಉಳಿದಿದ್ದ ಚಂದ್ರನಿಗೆ ಈಗ ತಾನು ಏನು ಮಾಡಬೇಕು ಎಂದು ತೋಚದೆ ದಿಗ್ಭ್ರಾಂತನಾದ. ಕಣ್ಣಲ್ಲಿ ಕತ್ತಲು ಕವಿದಂತಾಗಿ ದಿಕ್ಕೆಟ್ಟು ಹೋದ.
‘‘ನಮ್ಮ ಕರುಳಕುಡಿಯನ್ನು ಹೆಂಗಾದರೂ ಉಳಿಸಿಕೊಂಡು ಒಟ್ಟಿಗೇ ಬದುಕಲು ಸಾಧ್ಯವಿಲ್ಲವಾ ನೀಲಿ? ಯಾಕೆ ಕೊಲ್ಲುವ ಮಾತಾಡುತ್ತಿದ್ದೀಯ?’’ ಎಂದು ಚಂದ್ರ ಕೇಳಿದುದಕ್ಕೆ, ‘‘ನೋಡು, ಮದ್ವೆಗಿದ್ವೆ... ಅದೆಲ್ಲ ನಕೋ’’ ಎಂದು ಮುಖ ಸಿಂಡರಿಸಿದ ನೀಲಿ, ‘‘ಇದೇನಾದ್ರೂ ನಮ್ಮಮ್ಮನಿಗೆ ಗೊತ್ತಾದ್ರೆ ನನ್ನನ್ನು ಸಾಯಿಸಿಬಿಡ್ತಾರೆ ಅಷ್ಟೇ... ಅಟ್‌ಲೀಸ್ಟ್, ನೀನು ಸ್ಮಾರ್ತರೋ, ಲಿಂಗಾಯಿತರೋ ಆಗಿದ್ದರೆ ಮದ್ವೆ ಆಗಬಹುದಿತ್ತು’’ ಎಂದು ಕಡ್ಡಿ ಎರಡು ತುಂಡಾಗುವಂತೆ ಹೇಳಿದಳು. ಮಾತಿಲ್ಲದೆ ಸುಮ್ಮನೆ ಕುಂತ ಚಂದ್ರನ ತಲೆ ಮೇಲೆ ಮಟ್ಟಿ, ‘‘ಹೇಗಾದ್ರೂಮಾಡಿ ‘ಇದನ್ನು’ ತೆಗೆಸೋ, ಪ್ಲೀಸ್, ನಿನ್ನ ದಮ್ಮಯ್ಯ ಅಂತೀನಿ’’ ಎಂದು ನೀಲಿ ಸಿಟ್ಟಿನಲ್ಲೇ ಗೋಗರೆದಳು.
ಆಕಾಶ ತಲೆ ಮೇಲೆ ಕುಸಿದ ಅನುಭವಕ್ಕೀಡಾದ ಚಂದ್ರ, ‘‘ಹಂಗಾದ್ರೆ ನಮ್ಮ ಮದ್ವೆ ಸಾಧ್ಯವೇ ಇಲ್ವಾ? ಒಟ್ಟಿಗೇ ಸಂಸಾರ? ಈ ಮಗು?’’ ಎಂದು ಗೋಗರೆದು ಕೇಳಿದ. ‘ಲೋ ಪೆಕರು, ನಿನಗೆ ಎಷ್ಟು ಸಾರಿ ಹೇಳಲೋ... ಅದೆಲ್ಲ ಸಾಧ್ಯ ಇಲ್ಲ ಅಂತ. ಈಗಾಗ್ಲೇ ನನಗೆ ಮನೇಲಿ ಗಂಡು ನೋಡ್ತಾ ಇಲ್ವಾ? ಆಗಲೇ ಒಬ್ಬರು ಒಪ್ಪಿಕೊಂಡು ಹೋಗವ್ರೆ. ಈಗ ನಾನು ಈ ಸ್ಥಿತೀಲಿ ಇದ್ದೀನಿ. ಈ ವಿಷಯ ಏನಾದ್ರೂ ಲೀಕೌಟ್ ಆದ್ರೆ ನನ್ನ ಕಥೆ ಮುಗೀತು... ಅದಕ್ಕೇ ಆದಷ್ಟು ಬೇಗ ವ್ಯವಸ್ಥೆ ಮಾಡೋ’’ ಎಂದು ನೀಲಿ ಮೊರೆಯಿಟ್ಟಳು.
‘‘ಮುಂದೆ ನಿನ್ನನ್ನು ಕಟ್ಟಿಕೊಳ್ಳುವವನಿಗೆ ಏನುಳಿಸಿದ್ದೀಯ?’’ ಎಂದು ಕೇಳಬೇಕೆಂದುಕೊಂಡರೂ, ಕೇಳದೆ ಹಾಗೇ ಮೌನವಾಗುಳಿದ ಚಂದ್ರನ ತಲೆಗೆ ತಿವಿದ ನೀಲಿ, ‘‘ನೋಡು ಈ ಊರಲ್ಲಂತೂ ಬೇಡ, ಬೇರೆ ಯಾವ್ದಾರ ಊರಲ್ಲಿ ‘ತೆಗೆಸು.’ ನಿನ್ನ ಸ್ನೇಹಿತರು ಯಾರಾದ್ರೂ ಇರೋ ಕಡೆ’’ ಎಂದೂ ಸೂಚನೆ ನೀಡಿದವಳ ಮಾತಿಗೆ ಎದುರಾಡಲಾಗದೆ ಧರ್ಮಸಂಕಟದಲ್ಲಿ ತಲೆತಗ್ಗಿಸಿ ಕುಂತ ಚಂದ್ರನಿಗೆ,
‘‘ನೋಡು ನಾಳೆ ಬೆಳಿಗ್ಗೆ ಸಿಕ್ತೀನಿ. ನಾಳಿದ್ದು ಅದು ವ್ಯವಸ್ಥೆ ಆಗಲೇಬೇಕು. ಇಲ್ಲದಿದ್ದರೆ ಕಷ್ಟವಾಗುತ್ತೆ. ಮನೆಯವರಿಗೆ ಏನಾದ್ರೂ ಸುಳಿವು ಗೊತ್ತಾದ್ರೆ ನನ್ನನ್ನು ಹಿಡಿದು ಬಾವೀಗೇ ತಳ್ಳೋದು. ಹೇಗಾದ್ರೂ ಮಾಡು, ಸರೀನಾ?’’ ಎಂದು ಹೇಳಿ ಸಂಜೆ ಸಿಕ್ಕಿ ಕತ್ತಲಲ್ಲಿ ಕರಗಿ ಹೋದವಳ ಬಗ್ಗೆ ಒಂದು ಕ್ಷಣ ಸಿಟ್ಟು ಉಕ್ಕಿಬಂದರೂ, ಮರುಕ್ಷಣವೇ ಒಂದು ನಿಷ್ಪಾಪಿ ಜೀವದ ಹತ್ಯೆಯನ್ನು ಹೇಗೆ ಮಾಡುವುದು ಶಿವನೇ! ಎಂದು ಚಿಂತಾಕ್ರಾಂತನಾದ.
ರಾತ್ರಿಯೆಲ್ಲಾ ನಿದ್ದೆ ಹತ್ತದೆ ಕೊರಕೊರಗಿ ನರಳಾಡಿದ ಚಂದ್ರನಿಗೆ ಅನಿವಾರ್ಯವಾಗಿ ತನ್ನ ಸ್ನೇಹಿತರ ಎದುರು ಈ ವಿಚಾರವನ್ನೆಲ್ಲಾ ಬಿಚ್ಚಿ ಹೇಳಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಬೆಳಗ್ಗೆ ಸೂರ್ಯ ಕಣ್ಣು ಬಿಡುವಷ್ಟರಲ್ಲಿ ಸ್ನೇಹಿತರ ಮನೆ ಬಾಗಿಲಲ್ಲಿ ನಿಂತ ಚಂದ್ರ, ಅವರಲ್ಲಿ ಗುಟ್ಟಾಗಿ ತನ್ನ ಸಂಕಟವನ್ನು ನಿವೇದಿಸಿಕೊಂಡ. ಹೆಂಗಾದರೂ ಮಾಡಿ ಈ ಘನಘೋರ ಪರಿಸ್ಥಿತಿಯಿಂದ ಪಾರು ಮಾಡುವಂತೆ ಅವರಲ್ಲಿ ಬೇಡಿಕೊಂಡ.
ಕರುಣಾಳು ಸ್ನೇಹಿತರು ಚಂದ್ರನ ಸಂಕಟ ಅರಿತು ನೆರವಿಗೆ ಮುಂದಾದರು. ಯಾವುದೋ ಆಸ್ಪತ್ರೆಯ ಹೆಸರು ಹೇಳಿ, ‘ಅಲ್ಲಿಗೆ ಕರೆದೊಯ್ಯಿ’ ಎಂದು ಹೇಳಿ ಧೈರ್ಯ ತುಂಬಿದರು. ಅಂತೆಯೇ ಎಲ್ಲವೂ ನೆರವೇರಿತು.
ತನ್ನ ಗರ್ಭದಿಂದ ಭ್ರೂಣವನ್ನು ಹೊಸಕಿಸಿಕೊಂಡ ನೀಲಿ ನಿಟ್ಟುಸಿರ ದೇಹವಾಗಿ ಹಾಸಿಗೆಯ ಮೇಲೆ ಮಲಗಿದ್ದ ಕಂಡು ಚಂದ್ರ ನಿರಾಳವೇನೂ ಆಗಲಿಲ್ಲ. ಬದಲಿಗೆ ಆಕೆಯ ಬಗ್ಗೆ ಆಕ್ರೋಶ ತಪ್ತನಾದ. ಎಂಥ ಕೆಲಸ ಮಾಡಿದೆ – ಪುಟಾಣಿ ಜೀವವನ್ನು ಕೈಯಾರೆ ಹತ್ಯೆಗೈದೆನಲ್ಲ ಎಂದು ಪಾಪಪೀಡಿತ ಮನಸ್ಸಿನವನಾಗಿ ಹೊರಳಾಡಿದ.
‘‘ಸದ್ಯ! ಪಿಂಡ ತೆಗೆಸಿಕೊಂಡನಲ್ಲ, ಮುಂದೆ ಬರುವ ಗಂಡನ ಮುಂದೆ ನಿಷ್ಕಳಂಕಿತಳಾಗಿ ನಿಂತಂತಾಯಿತಲ್ಲ’’ ಎಂಬ ಮನೋಭಾವದವಳಾಗಿ ನೀಲಿ ಕಣ್ಣುಮುಚ್ಚಿ ಆ ಕೆಟ್ಟ ರಾತ್ರಿ ನಿರುಮ್ಮಳವಾಗಿ ನಿದ್ರೆಹೋದರೆ, ‘ಕೈಯಾರೆ ಹತ್ಯೆಯಿದು, ಕ್ಷಮೆಯಿಲ್ಲ’ ಎಂದು ಚಂದ್ರ ನರಳಿದ. ಕೊಲೆಗಾರನಾದೆನಲ್ಲ ನಾನು – ಎಂದು ಸಂಕಟಪಟ್ಟ. ಆ ಪಾಪಕ್ಕೆ ಪ್ರಾಯಶ್ಚಿತ್ತವಾಗದೇ ಇರದು ಎಂದು ಹಳಿದುಕೊಂಡ. ನನಗೆ ಕ್ಷಮೆಯಿಲ್ಲ, ಕ್ಷಮೆಯೇ ಇಲ್ಲ ಎಂದು ರೋದಿಸುತ್ತಾ ಆ ಇರುಳು ಆಸ್ಪತ್ರೆಯೆಂಬ ಜೇಲಿನಲ್ಲಿ ಬಂದಿಯಾಗುಳಿದ.
ಆ ರಾತ್ರಿ ಮುಗಿಯುತ್ತಿದ್ದ ಹೊತ್ತಲ್ಲಿ ಬರೆಯದೇ ಇರಲಾರದೆ ಬರೆದ ಒಂದು ಪುಟದಲ್ಲಿ:
‘ಕೈ ಯಾರೆ ಹತ್ಯೆಯಿದು
ಕ್ಷಮೆಯಿಲ್ಲ...’
***
ನೀಲಿಯಿಂದ ತ್ಯಜಿಸಲ್ಪಟ್ಟ ಚಂದ್ರ ಪ್ರಕ್ಷುಬ್ಧ ಮನಸ್ಥಿತಿಯಲ್ಲಿ ವಿಲವಿಲಿಸುತ್ತಾ ತನ್ನ ಬದುಕನ್ನೇ ನೀಗಿಕೊಂಡ. ಬದುಕು ಸರ್ವನಾಶವಾಯಿತು ಎಂದುಕೊಂಡಾಗ ಚಂದ್ರನ ಜೀವವನ್ನು ನಿಲೆ ಹಾಕಿದ್ದು ಬರವಣಿಗೆ. ಬರವಣಿಗೆಯನ್ನೇ ತನ್ನ ಕಾಯಕವನ್ನಾಗಿಸಿಕೊಂಡ ಚಂದ್ರನಿಗೆ ಲೇಖನಿಯೇ ಸರ್ವಸ್ವವಾಯಿತು. ಅದೇ ಅವನ ತಲೆ ಕಾಯ್ದಿತು.
ಚಂದ್ರನೆಂಬ ಹುಡುಗ ಲೇಖನಿ ಹಿಡಿದು ಸಮಾಜದಲ್ಲಿ ಗಣ್ಯನಾಗಿ ಜಾತಿಯನ್ನು ಬೆನ್ನಾಡುತ್ತಾ, ಆತನನ್ನು ಲೇವಡಿ ಮಾಡತೊಡಗುವ; ಬರೆದದ್ದರ ಬಗ್ಗೆ ಈರ್ಷ್ಯೆಯಿಂದ ಫೂತ್ಕರಿಸುವ; ಬೆನ್ನಿನ ಹಿಂದೆ ರಾಕ್ಷಸ ನೆರಳಾಗುವ ಮನುಷ್ಯರ ಬಗ್ಗೆ ಚಂದ್ರ ಕಂಗಾಲಾಗುತ್ತಾ, ಇನ್ನಷ್ಟೂ ಹುಷಾರಾಗುತ್ತಾ; ತನ್ನ ನೆರಳನ್ನು ತಾನೇ ನಂಬದವನಾಗುತ್ತಾ ಹೋದ. ನೆರಳುಗಳನ್ನು ಬಗೆ ಬಗೆಯ ನೋಡುವ ಕಸುಬಿಗಿಳಿದ. ಅಪಮಾನದೊಡಲಲ್ಲೇ ಸತ್ಕಾರದ ಮಾನವೂ ಎದುರಾಗಿ ಚಂದ್ರ ಎಂಬ ಹುಡುಗ ಮನಸ್ಸಿನ ಸ್ತಿಮಿತಕ್ಕೆ ಧೋಕಾ ಮಾಡಿಕೊಳ್ಳದೆ ತನ್ನ ಹಾದಿಯಲ್ಲಿ ತನ್ನ ಪಾಡಿಗೆ ತಾನು ನಡೆಯತೊಡಗಿದ.
ಹೀಗೆ ತನ್ನ ಪಾಡಿಗೆ ತಾನು ನಡೆಯುವುದೇ ದಪ್ಪ ಮೀಸೆಯವರಿಗೆ ಆಗದೇ ಹೋಯಿತು. ಗಡಸು ದನಿಯಲ್ಲಿ ರಾವಣಾಸುರರಾಗಿ ಗದರಿಸುತ್ತಾ; ವಿಕ್ಷಿಪ್ತ ವ್ಯಕ್ತಿಯ ಮುಖೇನ ಹಿಂಸೆಯ ಹೊಗೆ ಸೂಸಿಸುತ್ತಾ, ಎಲ್ಲೆಲ್ಲಿ ಸಲ್ಲುವಂಥ ಸ್ಥಾನಗಳಿಂದ ಅಮಾಯಕ ಹುಡುಗನಿಗೆ ಅರ್ಧಚಂದ್ರ ಕಾಣಿಸುತ್ತಾ; ಜಾತಿಯ ಆಯುಧದಿಂದ ಸದೆಬಡಿಯಲು ಪ್ರಯತ್ನಿಸುತ್ತಾ ಚಿತ್ರಹಿಂಸೆ ನೀಡತೊಡಗಿದರೂ ನಾಜೂಕಿನಿಂದ ತನ್ನ ‘ಚೀನೀ’ತನವನ್ನು ನಿರೂಪಿಸುತ್ತಾ ದಪ್ಪ ಮೀಸೆಯವರಿಗೆ ನೀರಿಳಿಸತೊಡಗಿದ.
ಇದನ್ನು ಸಹಿಸದಾದ ಅವರು ಚಂದ್ರನ ಮೇಲೆ ಕೈ ಮಾಡುವ ಮಟ್ಟಕ್ಕೂ ತಲುಪಿದ ವಿಷಯ ಕಾದಂಬರಿಕಾರ ರವಳಪ್ಪರ ಕಿವಿಗೂ ಮುಟ್ಟಿ, ‘ಯಲಲೆ, ಹುಷಾರಾಗಿರಬೇಕೋ ಕಂದಮ್ಮ ನೀನಿಲ್ಲಿ. ನೀನೂ ಆ ಪತ್ರಕರ್ತನಂತೇ ಕೊಲೆಯಾದೀಯೇ!’ ಎಂದು ಗಾಬರಿಪಟ್ಟುಕೊಂಡು ಹೇಳಿದ್ದರು. ಆ ಆತಂಕದಲ್ಲೇ ಇದ್ದ ರವಳಪ್ಪರು ಆವತ್ತು ರಾತ್ರಿ ಆ ಕನಸು ಕಂಡು ನಡುಗಿ ಕುಳಿತರು.
***
ಅನಲೆ ತನಗೆ ಬೇಕುಬೇಕಾದಾಗಲೆಲ್ಲ ಚಂದ್ರನನ್ನು ಕರೆಸಿಕೊಂಡು ಲಲ್ಲೆ ಹೊಡೆಯತೊಡಗಿದರೆ ಕಟ್ಟಿಕೊಂಡ ಗಂಡನಿಗೆ ಏನಾಗಬೇಡ! ‘ಸಂಗ್ಯಾ ಬಾಳ್ಯಾ’ದಲ್ಲಿ ಗಂಗಿಯ ಗಂಡ ಕ್ರುದ್ಧನಾದಂತೆ ಆತನೂ ಆದ. ಈರ್ವರ ಸಂಗಮ ಎಂದು ತನ್ನ ಕಣ್ಣಿಗೆ ರೂಬು ರೂಬು ಕಾಣಿಸುವುದೋ ಎಂದು ಕಾದೂ ಕಾದೂ ಆಯುಷ್ಯವನ್ನು ಹಿಂಗಿಸಿಕೊಂಡ. ಆದರದು ಮೇಲ್ನೋಟಕ್ಕಷ್ಟೇ ಎಂಬ ಸತ್ಯ ಚಂದ್ರನಿಗೂ ಅರಿವಿತ್ತು, ಅನಲೆಗೂ. ಇಬ್ಬರೂ ಸಂಧಿಸುವ ಗಳಿಗೆ ನೋಡಿ ಚಂದ್ರನನ್ನು ಹೇಗಾದರೂ ಮುಗಿಸಬೇಕೆಂದು ತನ್ನ ಕಡೆಯವರಿಗೆ ಗುಪ್ತ ಸೂಚನೆಯೆನ್ನು ಆ ಇಸುಮು ನೀಡಿತ್ತು.
ಹೇಗೆ ದಪ್ಪ ಮೀಸೆಯವರು ಸುಮ್ಮನಾಗಲಿಲ್ಲವೋ ಅವರ ಹೊಟ್ಟೆ ತಣ್ಣಗಾಗಲಿಲ್ಲವೋ; ಹಾಗೆಯೇ ಆ ಇಸುಮಿನ ತಳಮಳವೂ ತಹಬಂದಿಗೆ ಬರದೇ ಹೋಯಿತು. ದಪ್ಪಮೀಸೆಯವರು ಹಾಗೂ ಆ ಇಸುಮಿನ ಕಡೆಯವರು ಯಾರಾದರೂ ಸರಿ ತನ್ನನ್ನು ಯಾವತ್ತಿದ್ದರೂ ಮುಗಿಸುವರೆಂಬ ಭಯದಲ್ಲಿ, ಎಚ್ಚರದಲ್ಲಿ ಚಂದ್ರ ಕಾಲ ಹಾಕತೊಡಗಿದ.
ಅರಾಜಕತೆಯ ತಾಣದಲ್ಲಿ, ಕಾನೂನು ಕೈ ಕಟ್ಟಿ ಕೂತ ಜಾಗದಲ್ಲಿ; ತಾರತಮ್ಯವೆಂಬುದು ಗೂಟ ಹೊಡೆದುಕೊಂಡ ಗೊಂತಲ್ಲಿ ತಾನು ಬಿದ್ದಿರುವೆನೇನೊ; ಜಾತಿಯ ಕುದಿಯುವ ಲಾವಾರಸದೊಳಗೆ ಬಿಸಾಕಲ್ಪಟ್ಟಿರುವೆನೇನೋ ಎಂಬ ಕುದಿತಗಳಲ್ಲಿ ನೆಗೆನೆಗೆಯುವ ಮನಸ್ಸಿನವನಾದ ಚಂದ್ರ ತನ್ನ ಸುತ್ತ ಬೆಳಕು ಹಾಯದ ಮೋಡಗಳನ್ನು ಕಟ್ಟಿಕೊಂಡ. ಕಣ್ಣೊಳಗೆ ನೋವು ಕುದಿವ ಪತ್ತುಗಳನ್ನು ಇರಿಸಿಕೊಂಡ. ಎದೆಗೂಡಲ್ಲಿ ಮಾತ್ರ ಆತ ಪತರುಗುಟ್ಟುವ ಗುಬ್ಬಚ್ಚಿಯನ್ನು ಮಾತ್ರ ಸಾಕಿಕೊಂಡವನಾಗಿದ್ದ.
ಅಕ್ಕದಲ್ಲಿ, ಪಕ್ಕದಲ್ಲಿ, ಮುಂದೆ–ಹಿಂದೆ ಎಲ್ಲೇ ಸೂಜಿಬಿದ್ದ ಸದ್ದಾದರೂ ಡವಗುಡುವ ಎದೆ ಹೊಂದಿದ ಚಂದ್ರ, ರವಳಪ್ಪರು ಕಂಡ ಕನಸಿಗೂ; ಅನಲೆ ಕಂಡ ಕನಸಿಗೂ ಕೊಂಡಿ ಹಾಕುತ್ತಾ ದಿಗಿಲಿನ ಮೂರ್ತಿಯಾಗಿ ಅಡ್ಡಾಡತೊಡಗಿದ. ಒಬ್ಬಂಟಿ ನಡೆದಾಗ ತನ್ನ ಹಿಂದೆ ಹಿಂದೆ ಯಾರೋ ದಾಪುಗಾಲು ಹಾಕುತ್ತಾ, ಕೈಯಲ್ಲಿ ಮಚ್ಚು ಝಳಪಿಸುತ್ತಾ ಬಂದ ಹಾಗಾಗಿ ಗಕ್ಕನೆ ನಿಂತು ಹಿಂದೆ ತಿರುಗಿ ನೋಡುವುದನ್ನೇ ರೂಢಿ ಮಾಡಿಕೊಂಡ.
***
ಭಯದ ಉರಿಯಲ್ಲೇ ಉರಿಉರಿದು ಹೋದ ಚಂದ್ರ ಈಗ ಬೇರೊಂದು ಥರ ಬದಲಾಗಿ ಹೋದ ಹಾಗೆ ಕಂಡುಬಂದ. ಸೂರ್ಯನು ಮುಳುಗಿ ಸಂಜೆಯಾಗುತ್ತಲೇ ಗೂಡು ಸೇರಿಕೊಳ್ಳುವ ಹಕ್ಕಿಯಂತೆ ತಾನೂ ಸಾಯಂಕಾಲದ ಹೊತ್ತಿಗೆ ಮನೆ ಸೇರುವನಂತಾಗಿದ್ದ ಚಂದ್ರನಿಗೆ ಇದೀಗ ತಾನು ಕೊಲೆಯಾಗುವ ಭಯ ಇದ್ದಂತಿಲ್ಲ.
ಪ್ರಾಣದ ಮೇಲೆ ಇದ್ದ ಆಸೆ ಹೊರಟುಹೋಗಿದೆ ಎಂದು ಅಲ್ಲ. ಮಚ್ಚಿನೇಟಿಗೆ ಪ್ರಾಣ ಹೇಗೆ ವಿಚ್ಛಿದ್ರ ದೇಹದಿಂದ ಹೊರಟು ಹೋಗುತ್ತದೆ ಎಂಬ ಸಂಗತಿ ಪತ್ರಕರ್ತ ಸ್ನೇಹಿತನ ಕೊಲೆಯಿಂದ ಚಂದ್ರನಿಗೆ ಮನದಟ್ಟಾದಂತಿದೆ. ಕೊಲೆಯಾಗುವ ವ್ಯಕ್ತಿಯ ಹುಯ್ಲು, ಸಂಕಟ, ನೋವು, ಹೃದಯ ವಿದ್ರಾವಕತೆ ಹೀಗೆ ಏನೆಲ್ಲಾ ಅವನಿಗೆ ಅರಿವಿಗೆ ಬಂದಂತಿದೆ. ಹಾಗೆಯೇ ಕೊಲೆಗೈಯುವಾಗಿನ ವ್ಯಕ್ತಿ ಇಲ್ಲವೇ ವ್ಯಕ್ತಿಗಳು ತಂದುಕೊಳ್ಳುವ ಆಕ್ರೋಶದ ಅರಿವೂ ಅವನಿಗೆ ಲಭ್ಯವಾದಂತಿದೆ. ಈ ಕಾರಣಕ್ಕಾಗಿಯೇ ಏನೋ ರವಳಪ್ಪರ ಕನಸಿಗೂ, ಅನಲೆಯ ಕನಸಿಗೂ ತೀರಾ ಬೆಚ್ಚುವುದನ್ನು ಚಂದ್ರ ಬಿಟ್ಟಂತಿದೆ.
ಇಬ್ಬರ ಕನಸುಗಳಲ್ಲಿ ಘಟಿಸುವಂತೆ ತಾನು ಮುಂದೊಂದು ದಿನ ಹಾಗೆಯೇ ಕೊಲೆ ಆಗಬಹುದೇನೋ ಎಂಬ ಸಂಗತಿಗಿಂತ; ಗೆಳೆಯರ ಸಹಾಯ, ಸಹಕಾರ ಪಡೆದು ನೀಲಿಯ ಗರ್ಭದಲ್ಲಿ ಅಡಗಿದ್ದ ಜೀವವನ್ನು ವ್ಯವಸ್ಥಿತವಾಗಿ ಕೊಲೆ ಮಾಡಿಸಿದ್ದೇ ಚಂದ್ರನಿಗೆ ಕೊಲೆಗಾರನಾಗಿ ಹೋದ ಭಯವಾಗಿ ಕಾಡತೊಡಗಿದೆ. ತಾನು ಯಾವತ್ತೂ ಪಾಪಿಯೇ ಆಗಿ ಉಳಿದಹೋದ ಕರಾಳ ಸಂಗತಿಯೇ, ಆ ದೋಷವೇ ಚಂದ್ರನಿಗೆ ಈಗ ಭಯಂಕರ ವಿಷಯವಾಗಿ ಕಾಡತೊಡಗಿದೆ.
ದಪ್ಪಮೀಸೆಯವರ ಕಡೆಯವರೋ ಅಥವಾ ಆ ಇಸುಮಿನ ಕಡೆಯವರೋ ಮಚ್ಚು ಹಿಡಿದು ತನ್ನ ಬೆನ್ನ ಹಿಂಬಾಲಿಸಿದರೂ ಚಂದ್ರನಿಗೆ ಭಯವಾಗದೀಗ. ಆದರೆ ಬೆನ್ನಹಿಂದೆ ಯಾವುದಾದರೂ ನಿಷ್ಪಾಪಿ ಕೂಸು ಬಾಯಿಬಿಟ್ಟು ‘ಅಪ್ಪಾ’ ಎಂದು ಕರೆದೇಬಿಟ್ಟಾಗ ಎದೆ ಧಸಕ್ಕೆಂದು ಹೋಗುವುದು.
ಯಾವುದೋ ಕಸದ ತೊಟ್ಟಿಯಲ್ಲಿ ಮಾಂಸದ ಮುದ್ದೆಯಾಗಿ, ನಾಯ ಬಾಯೊಳಗಿನ ತುತ್ತಾಗಿ ಹೋದ ಮಿಡಿಜೀವವು ಎಳೆ ನಾಗರಹಾವಾಗಿ ಹಿಮ್ಮಡಿ ಹಿಂದೆ ಹೆಡೆ ಬಿಚ್ಚಿ ನಿಂತು ಬುಸುಗುಟ್ಟಿ ಥರಗುಟ್ಟಿಸುವ ಥರದಲ್ಲಿ ತಾನು ಕೊಂದ – ಕಾಣದ ಕೂಸಿನ – ನಿಶಬ್ದ ಆಕ್ರಂದನಕ್ಕೆ ಚಂದ್ರ ಈಗ ಬೆಚ್ಚಿ ಬೀಳುತ್ತಿದ್ದಾನೆ.
ಕೊಲೆಯಾಗುವ ವ್ಯಕ್ತಿಯ ಭಯಕ್ಕಿಂತ ಕೊಲೆಗಾರನಲ್ಲಿ ಅಡಗಿದ ಭಯವೇ ಮಿಗಿಲಾದಂತೆ ಚಂದ್ರ ಈಗ ಬೆಚ್ಚತೊಡಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.