ADVERTISEMENT

ಕೊಳಲು ಮತ್ತು ಅಮೀನ

ತೇಜಶ್ರೀ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
ಎಸ್.ವಿ. ಹೂಗಾರ
ಎಸ್.ವಿ. ಹೂಗಾರ   

ಹೊನಲೇರಿದಂತೆ ಓಡುತ್ತೋಡುತ್ತ ನಡೆದಳು ಅಮೀನ
ದಟ್ಟ ಮಾವುತೋಪಿನ ಕಡೆಗೆ,
ಹೊಳಹುದೋರಿ ಮರೆಯಾದ ಆ ಬೆಳಕಿನೆಡೆಗೆ.

ತೋಪ ನಡುವಲ್ಲಿ ನಿಟ್ಟಾಲಿಯಂತೆ ಕಲ್ಲುಬಾವಿ,
ಒಂದು ಮೂಲೆಗೆ ಅರಳೀಮರ
ರಾತ್ರಿರಾಣಿ ಮರ ಉಳಿದ ಮೂಲೆಗಳಲ್ಲಿ
ಅದರಕ್ಕಪಕ್ಕಕ್ಕೆ ಮಿಳಿರುವ ಬಾಳೆಹಕ್ಕೆ.

ಹಿಕ್ಕಲು ನೀರ ಹರಿವು ಯಾರೋ ಬಿಕ್ಕಂತೆ ಸುತ್ತಲೂ,
ತೋಪಿನೊಳಕತ್ತಲ ಕಣ್ಣಿಗೆ ಕಣ್ಣುನೆಟ್ಟು ದಿಟ್ಟಿಸಿ ಅಮೀನ
ದಾಟುತ್ತ ಸಾರುವೆಯ ಕತ್ತಲೆಯ ಒಳಹೊಕ್ಕಳು,
ಮೊಗ್ಗೊಳಗೆ ಪರಾಗ ಮಿಲುಗುವಂತೆ.

ಹಕ್ಕೆದಲೆಯಲ್ಲಿ ಸಣ್ಣಗೆ ಮಿಸುಕಾಟ, ರೆಕ್ಕೆಬಡಿತ
ಮತ್ತೆ ಮರುನಿದ್ದೆಯ ಹಂಬು
ಕನಸಿನೂರಿಗೆ ಹಬ್ಬುವ ಪರತತ್ತ್ವ.

ಆಗಲೇ, ಸರಿಯಾಗಿ ಆಗಲೇ
ಕಡುನೀಲಿ ಬಾವಿನೀರು ಕಪ್ಪಾಗಿದ್ದು,
ಚಂದಿರ ನಡುಬಾವಿಯಲ್ಲಿ ತೇಲಿದ್ದು,
ರಾತ್ರಿರಾಣಿ ಹೂವಿನ ಮಳೆ ಸುರಿಸಿದ್ದು.

ಆ ಕ್ಷಣದೆ ಮತ್ತದೇ ಕೊಳಲನಾದ...
ಮಂತ್ರಂಗಾಳಿಯಲ್ಲಿ ಸಗ್ಗದ ಹಿಗ್ಗು,
ಸೋಪಾನ ಕಟ್ಟೆಗೊರಗಿ ಬಾವಿನೀರ ಉಯ್ಯಲಾಟ.

ಧಿಗ್ಗನೆ ಹೊತ್ತಿ ಏನೋ ಎದೆಯೊಳಗೆ
ಅಮೀನ ತಾರಾಡಿದಳು,
ಎಲ್ಲಿಂದ ಹೊಮ್ಮುತ್ತಿದೆ ಈ ಪಾಟಿ ಬೆಳಕು
ಎತ್ತ ಹರಿಯುತ್ತಿದೆ ಇದು ಹೀಗೆ,
ದುರದುರನೆ ನೋಡನೋಡುತ್ತ ಕಲ್ಲುಬಾವಿಯ
ನಗುಮೊಗ್ಗೆಯಾದಳವಳು ಕಂಡು ಆ ಗಮ್ಯವ ಅದರೊಳಗೆ.

ಮರುಗಳಿಗೆ,
ಕದಡಿತು ನಡುಬಾವಿಯ ಚಂದ್ರಬಿಂಬ,
ಗರಬಡಿದು ನಿಂತಿತು ಬಾವಿ ಧಿಕ್ಕನೆ ಹೊಕ್ಕ ಬೆಳಕಿಗೆ,
ಗಳಬಳವಿಲ್ಲದೆ ಬಾಗಿ ನಿಂತವು ರಾತ್ರಿರಾಣಿ,
ಅರಳೀಮರದೆಡೆಯಿಂದ ಸುಯಿಲಿನ ಸುಯ್ಯಲಾಟ.

ಅಮೀನ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.