‘ದೇವರು ವಿಶ್ವವನ್ನು ಸೃಷ್ಟಿಸಿದ; ಡಚ್ಚರು ಹಾಲೆಂಡನ್ನು ಸೃಷ್ಟಿಸಿದರು’ ಎಂಬುದೊಂದು ಗಾದೆ. ಈ ಗಾದೆಗೆ ಅರ್ಥವಿದೆ. ಭೂ ಸಮಸ್ಯೆಯನ್ನು ನಿವಾರಿಸಲು ಡಚ್ಚರು ಸಮುದ್ರದೊಂದಿಗೆ ಸಮರ ಹೂಡಿ – ಸಮುದ್ರದಿಂದ, ನದಿಗಳಿಂದ ಭೂಭಾಗವನ್ನು ತೆಗೆದುಕೊಂಡಿದ್ದಾರೆ. ಹಾಲೆಂಡಿನ ಅಧಿಕೃತ ಹೆಸರು ‘ನೆದರ್‌ಲ್ಯಾಂಡ್ಸ್’. ಹಾಗೆಂದರೆ ತಗ್ಗು ಪ್ರದೇಶ ಎಂದರ್ಥ.
ನೆಲವನ್ನೇ ಸೃಷ್ಟಿಸಿದ ಡಚ್ಚರು ಹೂದೋಟದ ಕಲೆಯನ್ನು ಬಲ್ಲವರು. ತಮ್ಮ ನೆಲವನ್ನು ಸಿಂಗರಿಸಲು ಬಣ್ಣ ಬಣ್ಣದ ಹೂಗಳನ್ನು ಬೆಳೆಯುತ್ತಾರೆ. ನೆದರ್‌ಲ್ಯಾಂಡ್ಸ್ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಟ್ಯುಲಿಪ್ ಹೂಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ 4.2 ದಶಲಕ್ಷ ಟ್ಯುಲಿಪ್ ಹೂಗಳಲ್ಲಿ ಅರ್ಧದಷ್ಟು ರಫ್ತಾಗುತ್ತವೆ.
ವಿಶ್ವವಿಖ್ಯಾತ ಟ್ಯುಲಿಪ್ ಉದ್ಯಾನ
‘ಗಾರ್ಡನ್ ಆಫ್ ಯೂರೋಪ್’ ಎಂದೇ ಹೆಸರಾದ ವಿಶ್ವವಿಖ್ಯಾತ ಟ್ಯುಲಿಪ್ ಉದ್ಯಾನವನ ಇಲ್ಲಿದೆ. ಇದರ ಹೆಸರು ‘ಕ್ಯೂಕೆನ್‌ಹಾಫ್’. ಡಚ್ ಭಾಷೆಯಲ್ಲಿ ಇದರ ಅರ್ಥ ‘ಕಿಚನ್ ಗಾರ್ಡನ್’ ಎಂದು.
ವಿಶ್ವದಲ್ಲಿ ಮತ್ತೆಲ್ಲೂ ಕಾಣಸಿಗದ ಅತ್ಯಂತ ದೊಡ್ಡ ಹೂಗಳ ವಿಸ್ಮಯ ಲೋಕವಾದ ಕ್ಯೂಕೆನ್‌ಹಾಫ್ ಹೂದೋಟ ನೆದರ್‌ಲ್ಯಾಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್ ನೈಋತ್ಯಕ್ಕೆ ಇರುವ ಲಿಸ್ಸೆ ಎಂಬ ಪುಟ್ಟ ನಗರದಲ್ಲಿದೆ. ಸುಮಾರು 32 ಹೆಕ್ಟೇರ್ (79 ಎಕರೆ) ವ್ಯಾಪ್ತಿಯಲ್ಲಿ, ಲೆಕ್ಕವಿಲ್ಲದಷ್ಟು ನಮೂನೆಯ ಸುಂದರ ವಿವಿಧ ಬಣ್ಣಗಳ ಪುಷ್ಪಗಳನ್ನು ತ್ರಿಕೋನಾಕಾರ, ಚೌಕ, ಉದ್ದನೆಯ ಪಟ್ಟಿ ಹೀಗೆ ಬೇರೆ ಬೇರೆ ಆಕಾರಗಳಲ್ಲಿ ಬೆಳೆಸಿದ್ದಾರೆ. ಕಣ್ಣು ಹಾಯಿಸಿದಷ್ಟೂ ಕಾಣುವ ಹೂವಿನ ರಾಶಿಯ ರಮ್ಯತೆ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ. ಇಂಥ ಸೊಬಗನ್ನು ಸವಿಯುವ ಅವಕಾಶ ವರ್ಷದಲ್ಲಿ ಬರೀ ಎಂಟು ವಾರಗಳು ಮಾತ್ರ!
ಈ ಹೂತೋಟ ಸಾರ್ವಜನಿಕರ ವೀಕ್ಷಣೆಗೆ ಪ್ರತಿ ವರ್ಷ ಮಾರ್ಚ್ ಇಪ್ಪತ್ಮೂರರಿಂದ ಮೇ ಇಪ್ಪತ್ತೊಂದರವರೆಗೆ ಮಾತ್ರ ತೆರೆದಿರುತ್ತದೆ. ಈ ಅವಧಿಯಲ್ಲಿ ಪ್ರವಾಸಿಗರ ಮನರಂಜನೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಂಗೀತಗೋಷ್ಠಿ, ಚಲಿಸುವ ವಾದ್ಯವೃಂದ ಕೂಡ ಇರುತ್ತದೆ. ವಾರಾಂತ್ಯದಲ್ಲಿ ನಡೆಯುವ ಹೂವಿನ ಮಾರುಕಟ್ಟೆಯಲ್ಲಿ ಬೆಳೆಗಾರರೇ ತಾವು ಬೆಳೆದ ಹೂಗಳನ್ನು ತಂದು ಮಾರುತ್ತಾರೆ. ಅವುಗಳನ್ನು ಬೆಳೆಯುವ ಬಗ್ಗೆಯೂ ವಿವರಿಸುತ್ತಾರೆ. ಇದರಿಂದ ಪ್ರೇರಿತರಾಗಿ ಸಾರ್ವಜನಿಕರು ತಮ್ಮ ಮನೆಗಳ ಬಾಲ್ಕನಿಯಲ್ಲೂ ಹೂಗಳನ್ನು ಬೆಳೆಯುತ್ತಾರೆ.
ಮಕ್ಕಳಿಗಾಗಿ ವಿವಿಧ ಮನರಂಜನಾ ಆಟಗಳು, ವಿವಿಧ ಖಾದ್ಯಗಳ ಮೇಳವೂ ನಡೆಯುತ್ತದೆ. ಹಲವು ತಿಂಡಿ ಹಾಗೂ ಪೇಯಗಳನ್ನು ತಯಾರಿಸಲು ಹೂಗಳನ್ನು ಬಳಸಿರುತ್ತಾರೆ. ಹೂಗಳ ನಡುವೆ ಆರ್ಕೆಸ್ಟ್ರಾ, ಶಾಸ್ತ್ರೀಯ ಸಂಗೀತ ಗೋಷ್ಠಿ, ಡಚ್ ಪರಂಪರೆಯ ವಾರಾಂತ್ಯ, ವಿಶಿಷ್ಟ ವಿನ್ಯಾಸದ ವಾರ, ಫ್ಯಾಶನ್ ಹಬ್ಬ, ದೋಣಿ ವಿಹಾರ ಮುಂತಾದ ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.
ಕ್ಯೂಕೆನ್‌ಹಾಫ್ ಉದ್ಯಾನವನ ಪ್ರವೇಶಿಸುತ್ತಿದ್ದಂತೆಯೇ ಉಚಿತವಾಗಿ ಉದ್ಯಾನವನದ ಭೂಪಟ ನೀಡುತ್ತಾರೆ. ಅದರಲ್ಲಿ ನಾವೇನು ನೋಡಬೇಕೆಂದು ಗುರುತು ಹಾಕಿಕೊಂಡು ಸುತ್ತಾಡಬಹುದು. ಇಂಗ್ಲೆಂಡ್ ಲ್ಯಾಂಡ್‌ಸ್ಕೇಪ್ ಉದ್ಯಾನವನ, ಜಪಾನ್ ಉದ್ಯಾನವನ, ಚಾರಿತ್ರಿಕ ಉದ್ಯಾನವನ – ಹೀಗೆ ಹಲವಾರು ಪುಟ್ಟ ಪುಟ್ಟ ಉದ್ಯಾನವನಗಳನ್ನು ರಚಿಸಿದ್ದಾರೆ. ಒಂದು ಭಾಗದಲ್ಲಿ ಗಾಜಿನ ಮನೆಯಿದ್ದು, ಅಲ್ಲಿ ಟ್ಯುಲಿಪ್ ಹಾಗೂ ವಿವಿಧ ಹೂಗಳ ಪ್ರದರ್ಶನವಿರುತ್ತದೆ. ಉದ್ಯಾನವನದ ಒಂದು ಭಾಗದಲ್ಲಿ ಮರದಲ್ಲಿ ಮಾಡಿದ ಅತ್ಯಂತ ಹಳೆಯ ವಿಂಡ್‌ಮಿಲ್ ಕೂಡ ಇದೆ.
ಹೂ ಉದ್ಯಮ!
1949ರಲ್ಲಿ ಅಂದಿನ ಲಿಸ್ಸೆ ನಗರದ ಮೇಯರ್ ದೇಶದ ಹೂ ಬೆಳೆಗಾರರನ್ನು ಪ್ರೋತ್ಸಾಹಿಸಲು, ತನ್ಮೂಲಕ ಹೂ ಬೆಳವಣಿಗೆಯನ್ನು ಹೆಚ್ಚಿಸಿ ದೇಶದ ರಫ್ತನ್ನು ವೃದ್ಧಿಸುವ ಉದ್ದೇಶದಿಂದ ಇದರ ಸ್ಥಾಪನೆ ಮಾಡಿದರು. ಆಗ ದೇಶದ ಎಲ್ಲ ತರಹದ ಪುಷ್ಪ ಬೆಳೆಗಾರರು ಸರ್ಕಾರದ ಯೋಜನೆಯಂತೆ ತಮ್ಮ ತಮ್ಮ ಉತ್ಪನ್ನಗಳನ್ನು ತಂದು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಅದರಲ್ಲಿ ಆಯ್ದ ಪುಷ್ಪಗಳನ್ನು ರಫ್ತು ಮಾಡಲಾಗುತ್ತದೆ.
ಈ ಯೋಜನೆ ಯಶಸ್ಸಿನಿಂದಾಗಿ ಇಂದು ನೆದರ್‌ಲ್ಯಾಂಡ್ಸ್ ವಿಶ್ವದ ಅತಿ ದೊಡ್ಡ ‘ಪುಷ್ಪ ರಫ್ತು’ ದೇಶ ಎನ್ನಿಸಿಕೊಂಡಿದೆ. ಈ ತೋಟವನ್ನು ಟ್ಯುಲಿಪ್ ಹೂತೋಟವೆಂದು ಕರೆದರೂ ಇದರ ವ್ಯಾಪ್ತಿಯಲ್ಲಿಯೇ ತರತರಹದ ಹೂಗಳು, ವಿಭಿನ್ನ ರೂಪದ ತೋಟಗಳೂ ಇವೆ. ಅದರಲ್ಲಿ ಟ್ಯುಲಿಪ್‌ನದೇ ಸಿಂಹಪಾಲು. ಎಲ್ಲಾ ಸೇರಿ ಪ್ರತಿವರ್ಷ ಇಲ್ಲಿ ಒಟ್ಟು ಸುಮಾರು ಏಳು ದಶಲಕ್ಷ ಹೂಗಳನ್ನು ಬೆಳೆಯಲಾಗುತ್ತದೆ.
ಕ್ಯೂಕೆನ್‌ಹಾಫ್‌ನ 32 ಹೆಕ್ಟೇರ್‌ನಲ್ಲಿ ನೆಡಲು ದೇಶದ 100 ಮಂದಿ ಹೂಬೆಳೆಗಾರರು ಉಚಿತವಾಗಿ ಹೂಗಡ್ಡೆಗಳನ್ನು ಒದಗಿಸುತ್ತಾರೆ. ಎಂಟು ವಾರಗಳ ಕಾಲ ಅರಳಿ ನಗುತ್ತಾ ನಿಲ್ಲುವ ಹೂಗಳ ಗಡ್ಡೆಗಳನ್ನು ಆಯ್ದು ಆಯ್ದು ಕೈಯಾರೆ ನೆಡುವ ಹೂತಜ್ಞರಿಲ್ಲಿದ್ದಾರೆ. ಹೂಗಳ ಋತು ಮುಗಿಯುತ್ತಿದ್ದಂತೆ ಎಲ್ಲವನ್ನೂ ಅಗೆದು, ಬಹಳಷ್ಟನ್ನು ಜಾನುವಾರುಗಳಿಗೆ ಆಹಾರವಾಗಿ ಬಳಸಿ ಉಳಿದದ್ದನ್ನು ನಾಶಪಡಿಸಲಾಗುತ್ತದೆ. ಪ್ರತಿವರ್ಷವೂ ಕ್ಯೂಕೆನ್‌ಹಾಫ್ ಅನ್ನು ಒಂದೊಂದು ವಿಷಯದ ಆಧಾರದ ಮೇಲೆ ಸಿಂಗರಿಸಲಾಗುತ್ತದೆ.
ಟ್ಯುಲಿಪ್ ಹುಟ್ಟು
ಚೀನಾ ಮತ್ತು ಕಿರ್ಗಿಸ್ತಾನ್ ನಡುವೆ ಇರುವ ಟಿಯಾನ್ ಶಾನ್ ಹಿಮಾಲಯ ಪರ್ವತ ಶ್ರೇಣಿಯು ಟ್ಯುಲಿಪ್ ಜನ್ಮಸ್ಥಳ. ಆದರೆ ನೆದರ್‌ಲ್ಯಾಂಡ್ಸ್‌ಗೆ ಬಂದದ್ದು ಟರ್ಕಿ ದೇಶದಿಂದ. ಮುಂಡಾಸಿಗೆ ಟರ್ಕಿ ಭಾಷೆಯಲ್ಲಿ ಟ್ಯೂಲೆಬೆಂಡ್ ಎಂದೂ ಕರೆಯುತ್ತಾರೆ. ಇದನ್ನು ಲಿಲಿ ಹೂವು ಎಂದೂ ಕರೆಯುವರು.
ಸುಮಾರು 2000 ಬಗೆಯ ಟ್ಯುಲಿಪ್‌ಗಳು ಈಗ ವಿಶ್ವದಾದ್ಯಂತ ಇದ್ದು, ಇವುಗಳಲ್ಲಿ 700 ಕ್ಕೂ ಹೆಚ್ಚು ವಿಧದ ಟ್ಯುಲಿಪ್‌ಗಳನ್ನು ಕ್ಯೂಕೆನ್‌ಹಾಫ್‌ನಲ್ಲಿ ಪ್ರದರ್ಶಿಸುವರು. ಕೆಲವು ಬಗೆಗಳಲ್ಲಿ ಹೂಗಳು ಎರಡು ಬಣ್ಣಗಳಲ್ಲಿ ಇರುತ್ತವೆ.
ಕಾಶ್ಮೀರದ ಸಂಬಂಧ
ಭಾರತದ ಕಾಶ್ಮೀರದ ದಾಲ್ ಸರೋವರದ ದಡದಲ್ಲಿ 60ಕ್ಕೂ ಹೆಚ್ಚು ಬಗೆಯ ಟ್ಯುಲಿಪ್ ಹೂಗಳನ್ನು ಬೆಳೆಯಲಾಗುತ್ತದೆ. ‘ಇಂದಿರಾ ಗಾಂಧಿ ಟ್ಯುಲಿಪ್ ಉದ್ಯಾನ’ ಎಂದು ಹೆಸರಾದ ಇದು ಏಷ್ಯಾದಲ್ಲೇ ಅತಿ ದೊಡ್ಡದಾದ ಟ್ಯುಲಿಪ್ ಹೂಗಳ ಉದ್ಯಾನ. ಒಂದು ಕಡೆ ಝಬರ್‍ಬನ್ ಬೆಟ್ಟಸಾಲುಗಳು, ಮತ್ತೊಂದೆಡೆ ಪುಷ್ಪರಾಶಿ ಮನತಣಿಸುತ್ತವೆ. ಹಾಲಂಡ್ ದೇಶದಿಂದ ಟ್ಯುಲಿಪ್ ಹೂಗಳನ್ನು ಆಮದು ಮಾಡಿಕೊಂಡು ಕೃಷಿ ಮಾಡಲಾಗುತ್ತಿದೆ.
ನೆನಪಿನ ಕಾಣಿಕೆ
ಪ್ರವಾಸಿಗರು ನೆನಪಿನ ಕಾಣಿಕೆಯಾಗಿ ತೆಗೆದುಕೊಂಡು ಹೋಗಲು ವೈವಿಧ್ಯಮಯ ಹೂಗಳು, ಹೂಗಳ ಪ್ರತಿಕೃತಿಗಳು, ಹೂ ಪ್ರತಿಕೃತಿಗಳು, ಪುಸ್ತಕಗಳು, ಪೋಸ್ಟ್‌ಕಾರ್ಡ್‌ಗಳು, ಮ್ಯಾಗ್ನೆಟ್‌ಗಳು, ಅಂಚೆಚೀಟಿಗಳು, ಗೊಂಬೆಗಳು, ಚಿತ್ರಗಳನ್ನು ಸಾಕಷ್ಟು ವ್ಯವಸ್ಥಿತವಾಗಿ ಮಾರಾಟ ಮಾಡಲಾಗುತ್ತದೆ. ಪ್ರವಾಸಿಗರು ಯಾರೂ ಬರೀ ಕೈಲಿ ಬರಲಾಗದಂತಹ ಆಕರ್ಷಕ ಸಂಗತಿಗಳು ಇಲ್ಲಿವೆ.
****
ಭಾರತೀಯ ಚಲನಚಿತ್ರದ ನಂಟು
‘ಪ್ರಣಯ ಚಿತ್ರಗಳ ರಾಜ’ ಎಂದೇ ಕರೆಸಿಕೊಳ್ಳುವ ಯಶ್ ಚೋಪ್ರಾ ಅವರ ‘ಸಿಲ್‌ಸಿಲಾ’ ಚಿತ್ರದ ಸುಪ್ರಸಿದ್ಧ ಹಾಡು ‘ದೇಖಾ ಏಕ್ ಖ್ಯಾಬ್ ತೊ ಏ ಸಿಲ್‌ಸಿಲೇ ಹುಯೇ’ ಚಿತ್ರೀಕರಿಸಿರುವುದು ಕ್ಯೂಕೆನ್‌ಹಾಫ್‌ನಲ್ಲಿಯೇ. ಈ ಪ್ರಣಯ ಗೀತೆ ಅಷ್ಟೊಂದು ಜನಮನ ಸೂರೆಗೊಳ್ಳಲು ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರಷ್ಟೇ ಇಲ್ಲಿನ ಟ್ಯುಲಿಪ್ ಹೂಗಳೂ ಕಾರಣವಾಗಿದ್ದವು.
‘ದರ್ಶಕೇಂದ್ರ’ ಎಂದೇ ಹೆಸರಾದ ತೆಲುಗು ಖ್ಯಾತ ಚಿತ್ರ ನಿರ್ದೇಶಕ ಕೆ. ರಾಘವೇಂದ್ರರಾವ್ – ವೆಂಕಟೇಶ್ ಮತ್ತು ಟಬು ನಟನೆಯ ‘ಕೂಲಿ ನಂ 1’ ಚಿತ್ರದ ‘ಕೊತ್ತ ಕೊತ್ತಗಾ ಉನ್ನದಿ’ ಹಾಡನ್ನು ಕ್ಯೂಕೆನ್‌ಹಾಫ್‌ನ ಹೂ–ಸಮುದ್ರದ ನಡುವೆ ಚಿತ್ರೀಕರಿಸಿದ್ದಾರೆ. ರಾಜ್‌ಕಪೂರ್ ನಿರ್ದೇಶನದ ‘ಪ್ರೇಮ್ ರೋಗ್’ ಚಲನಚಿತ್ರದ ‘ಭವರೇನೆ ಖಿಲಾಯಾ ಫೂಲ್‘ ಹಾಡು, ತಮಿಳಿನ ‘ಅನ್ನಿಯನ್’ ಚಲನಚಿತ್ರದ ‘ಕುಮಾರಿ’ ಎಂಬ ಹಾಡು, ಮಹೇಶ್‌ಭಟ್ ನಿರ್ದೇಶನದ ಹಿಂದಿಯ ‘ದಿ ಜಂಟಲ್‌ಮನ್’ ಚಲನಚಿತ್ರದ ಚಿರಂಜೀವಿ ಮತ್ತು ಜೂಹಿಚಾವ್ಲ ನಟನೆಯ ‘ಹಮ್ ಅಪನೆ ಗಮ್‌ಕೊ ಸಜಾಕರ್’ ಗೀತೆಯನ್ನು ಇಲ್ಲಿಯೇ ಚಿತ್ರೀಕರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.