ವಿಸ್ಮಯ ಏನೆಂದರೆ, ಒಂದೇ ಪ್ರಭೇದದ ಹಕ್ಕಿಗಳ ಹಾಡುಗಳ ಮೂಲ ಶೈಲಿಯೂ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಸೂಕ್ಷ್ಮವಾಗಿ ವಿಭಿನ್ನವಾಗಿರುತ್ತದೆ (ಚಿತ್ರ 7ರಲ್ಲಿರುವ ಧ್ವನಿ ಚಿತ್ರಗಳಲ್ಲಿನ ಭಿನ್ನತೆಯನ್ನು ಗಮನಿಸಿ). ಉದಾಹರಣೆಗೆ, ಆಡುವುದು ಕನ್ನಡ ಭಾಷೆಯೇ ಆದರೂ ಮೈಸೂರು, ಮಂಡ್ಯ, ಮಂಗಳೂರು ಮತ್ತು ಹುಬ್ಬಳ್ಳಿಯ ಸ್ಥಳೀಯ ಜನರ ಉಚ್ಚಾರಣೆಗಳಲ್ಲಿ ಸ್ಪಷ್ಟ ಭಿನ್ನತೆ ಇದೆಯಲ್ಲ, ಹಾಗೆ!
ಹಕ್ಕಿ ಹಾಡು ಇಷ್ಟೆಲ್ಲ ಸಂಕೀರ್ಣವಾದದ್ದರಿಂದಲೇ ಹಾಡುಗಾರ ಹಕ್ಕಿಗಳು ಗಾನಕಲೆಯನ್ನು ಕೇವಲ ಹುಟ್ಟರಿವಿನಿಂದಲೇ ಕಲಿಯುವುದು ಸಾಧ್ಯವೇ ಇಲ್ಲ. ವಾಸ್ತವ ಏನೆಂದರೆ, ಮೊಟ್ಟೆಯಿಂದ ಹೊರಬಂದ ಕ್ಷಣದಿಂದಲೇ ಹಾಡು ಹಕ್ಕಿಗಳು ತಮ್ಮ ತಂದೆಯ ಮತ್ತು ತಮ್ಮದೇ ಪ್ರಭೇದದ ಇತರ ಗಂಡುಹಕ್ಕಿಗಳ ಹಾಡುಗಳನ್ನು ಆಲಿಸಿ ಆಲಿಸಿ, ಅನುಕರಿಸಿ, ಅಭ್ಯಸಿಸಿ ತಾವೂ ಹಾಡಲು ಕಲಿಯುತ್ತವೆ. ತಮ್ಮದೇ ಪ್ರಭೇದದ ಹಾಡುಗಳನ್ನು ಇತರ ಪ್ರಭೇದಗಳಿಂದ ಪ್ರತ್ಯೇಕಿಸಿ ಗುರುತಿಸುವುದನ್ನೂ ಅರಿಯುತ್ತವೆ. ಸ್ಪಷ್ಟವಾಗಿಯೇ, ತಂದೆ–ತಾಯಿಯರ, ಸಹಚರರ ಸಾಂಗತ್ಯ ಸಿಗದ ಅನಾಥ ಹಕ್ಕಿಗಳಿಗೆ ಗಾನಕಲೆ ಸಿದ್ಧಿಸುವುದಿಲ್ಲ; ಹಾಡುಗಾರಿಕೆಯ ‘ಜೀವನ ಪಾಠ’ ಕಲಿತಿಲ್ಲದ ಅಂತಹ ಹಾಡು ಹಕ್ಕಿಗಳು ಸಮರ್ಥ, ಯಶಸ್ವೀ ಜೀವನ ನಡೆಸುವುದು ಸಾಧ್ಯವಿಲ್ಲ.
ಸಂಶೋಧನೆಗಳು ಸ್ಪಷ್ಟಗೊಳಿಸಿರುವಂತೆ, ಹಾಡುಹಕ್ಕಿಗಳು ತಮ್ಮ ಪ್ರಭೇದದ ವಿಶಿಷ್ಟ ಹಾಡುಗಾರಿಕೆಯ ಮೂಲ ಪಾಠಗಳನ್ನೆಲ್ಲ ತಮ್ಮ ಬದುಕಿನ ಮೊದಲ ಅರವತ್ತು ದಿನಗಳಲ್ಲಿ ಕಲಿಯುತ್ತವೆ. ಮನುಷ್ಯರ ಮಕ್ಕಳು ತಮ್ಮ ತಾಯಿಯ ಮತ್ತು ಸುತ್ತಲಿನ ಇತರರ ಮಾತುಗಳನ್ನು ಆಲಿಸಿ, ಕೆಲವೇ ಪದಗಳ ತೊದಲುವಿಕೆಯಿಂದ ಆರಂಭಿಸಿ, ನಿರರ್ಗಳವಾಗಿ ಮಾತನಾಡಲು ಕಲಿಯುವಂತೆಯೇ ಹಕ್ಕಿಮರಿಗಳೂ ಒಂದೊಂದೇ ಸ್ವರ ಗ್ರಹಿಸುತ್ತ, ಹಾಡಲು ಪ್ರಯತ್ನಿಸುತ್ತ, ಪರಿಶ್ರಮಪಟ್ಟು ಗಾನಕಲೆಯನ್ನು ಮೈಗೂಡಿಸಿಕೊಳ್ಳುತ್ತವೆ.
ಜನಿಸಿದ ದಿನದಿಂದ ಹತ್ತು ತಿಂಗಳ ಕಾಲ ಹೀಗೇ ಕಲಿಕೆಯಲ್ಲೇ ಮಗ್ನವಾಗಿದ್ದು, ಜನನಾನಂತರದ ಮೊದಲ ವಸಂತದಲ್ಲಿ ಸ್ವತಂತ್ರವಾಗಿ ಹಾಡಲು ಆರಂಭಿಸುತ್ತವೆ. ಕೆಲವು ಪ್ರಭೇದಗಳಂತೂ ಬದುಕಿನುದ್ದಕ್ಕೂ ಇತರರ ಹಾಡುಗಳನ್ನು ಆಲಿಸುತ್ತ, ತಮ್ಮ ಮನೋಧರ್ಮವನ್ನು ಬೆರೆಸುತ್ತ, ವರ್ಷದಿಂದ ವರ್ಷಕ್ಕೆ ತಮ್ಮ ಹಾಡುಗಾರಿಕೆಯನ್ನು ಉತ್ತಮಗೊಳಿಸಿಕೊಳ್ಳುತ್ತ, ನಿಷ್ಣಾತ ಹಾಡುಗಾರರಾಗುತ್ತವೆ. ಕೋಗಿಲೆ, ಗುಬ್ಬಚ್ಚಿ, ಬುಲ್ ಬುಲ್, ಸಿಂಪಿಗ, ಸೂರಕ್ಕಿ, ಥ್ರಶ್, ರಾಬಿನ್, ಆರಿಯೋಲ್, ವಾರ್ಬ್ಲರ್... ಇಂಥವೆಲ್ಲ ಖಗ ಹಾಡುಗಾರರು ಆ ಬಗೆಯ ಗಾನ ವಿಶಾರದರ ಪಟ್ಟಿಯಲ್ಲಿವೆ.
2. ವಲಸೆ ಹಕ್ಕಿಗಳಿಗೆ ಹಾದಿ ತಿಳಿಯುವುದು ಹೇಗೆ?
ಪಕ್ಷಿ ವಲಸೆ – ನಿಸರ್ಗ ವಿಸ್ಮಯದ ಪರಾಕಾಷ್ಠೆಯ ಒಂದು ವಿದ್ಯಮಾನ. ಪ್ರತಿ ವರ್ಷ ಸುಮಾರು ಐದಾರು ಸಾವಿರ ಪ್ರಭೇದಗಳ ನೂರಾರು ಕೋಟಿ ಹಕ್ಕಿಗಳು ಚಳಿಗಾಲದಲ್ಲಿ ಉತ್ತರ ಗೋಳಾರ್ಧದ ತಮ್ಮ ನೆಲೆಗಳಿಂದ ದಕ್ಷಿಣ ಗೋಳಾರ್ಧದ ಬೆಚ್ಚಗಿನ ನಿರ್ದಿಷ್ಟ ನೆಲೆಗಳಿಗೆ ವಲಸೆ ಹೋಗುತ್ತವೆ; ಚಳಿಗಾಲ ಮುಗಿದೊಡನೆ ಮತ್ತೆ ತಮ್ಮ ತವರಿಗೇ ಹಿಂದಿರುಗುತ್ತವೆ. ಈ ಪಯಣ ಕೆಲ ನೂರು ಕಿಲೋಮೀಟರ್‌ಗಳಿಂದ ಹಲವು ಹತ್ತು ಸಾವಿರ ಕಿಲೋ ಮೀಟರ್‌ಗಳಷ್ಟು ದೀರ್ಘವಾಗಿರುತ್ತದೆ. ಉದಾಹರಣೆಗೆ ‘ಆರ್ಕ್ಟಿಕ್ ಟರ್ನ್’ ಹಕ್ಕಿಯ ಒಂದು ವರ್ಷದ ಎರಡೂ ಪಯಣಗಳ ಒಟ್ಟು ದೂರ 66,000 ಕಿ.ಮೀ! ‘ಸೂಟಿ ಶಿಯರ್ ವಾಟರ್’ ಹಕ್ಕಿಯದು 64,000 ಕಿ.ಮೀ! ‘ಗುಡ್ ವಿಟ್’ ಹಕ್ಕಿಯ ಪ್ರತಿ ತಡೆರಹಿತ ಪಯಣದ ದೂರ 7,145 ಕಿ.ಮೀ. ‘ಗ್ರೇಟ್ ಸ್ನೈಪ್’ ತಾಸಿಗೆ ತೊಂಬತ್ತಾರು ಕಿಲೋ ಮೀಟರ್ ವೇಗದಲ್ಲಿ ಪ್ರತಿ ಪಯಣದ 7,000 ಕಿ.ಮೀ. ದೂರವನ್ನು ತಡೆರಹಿತವಾಗಿ ಹಾರಿ ಮುಗಿಸುತ್ತದೆ!