ADVERTISEMENT

ಗೆದ್ದಲು ಬರೆದ ಹಸಿರು ಶಾಸನ

ಕವಿತೆ

ರಂಗನಾಥ ಕಂಟನಕುಂಟೆ
Published 20 ಸೆಪ್ಟೆಂಬರ್ 2014, 19:30 IST
Last Updated 20 ಸೆಪ್ಟೆಂಬರ್ 2014, 19:30 IST

ಇವನು ಕವಿ
ತನ್ನ ಸುತ್ತಲ ಸಂಬಂಧಗಳು
ಕನ್ನಡಿಯ ಹಾಗೆ ಛಿದ್ರಗೊಂಡು
ನಿತ್ಯ ನಡೆವ ದಾರಿಯಲ್ಲಿ
ಹೂವುಗಳಂತೆ ಚೆಲ್ಲಿ
ನಡೆವ ಪಾದಗಳ ಸೀಳಿ
ನೆತ್ತರು ಬಸಿದು 
ಹತ್ಯೆ ಮಾಡುವ ಬಗೆಗೆ
ಕಟ್ಟಿರುವನು ಪಕ್ಕಾ ಕಸುಬುದಾರಿ
ಕವಿತೆ.

ಅವನೂ ಕವಿ
ಕನಸಲ್ಲೂ ಕಚ್ಚಾಡುವ
ಕಚ್ಚಿ ಕಚ್ಚಿ ಅವರಿವರ ನಂಟು
ಕೊಲ್ವ ಕನಸ ಬಗೆಗೆ
ನರರ ದುರಾಶೆಗಳು ಪರಸ್ಪರ ಕೊಂದುಕೊಂಡು
ದನ ಆಡು ಕುರಿ ಕೋಳಿಗಳಂತೆ
ನಿತ್ಯ ನಡೆವ ದಾರಿಯ ಇಕ್ಕೆಲಗಳಲ್ಲಿ
ಬಾಡಿನ ತೋರಣವಾಗಿ ನೇತಾಡುವಂತೆ;
ಕದನ ವೀರರ ಕಾಲಡಿ ಸಿಕ್ಕು ಸತ್ತ ಹೆಂಗಳೆಯರಂತೆ
ಹಸುಗೂಸುಗಳ ಹೆಣಗಳಂತೆ 
ಜಗದ ಹಾದಿಯಲಿ
ನಂಟಿನ ಹೆಣಗಳು ನೇತಾಡುವುದನು ಕುರಿತು
ಇನ್ನಿಲ್ಲದಂತೆ ಕಟ್ಟಿರುವನು ಪಕ್ಕಾ ಕಸುಬುದಾರಿ
ಕವಿತೆ.

ಮೊನ್ನೆ ಇವರಿಬ್ಬರೂ ನಡುಹಗಲಿನಲ್ಲಿ
ಕಂದೀಲು ಹಿಡಿದು ಒಲವಿನ ಪರಿಶೆಯಲ್ಲಿ
ಒಬ್ಬರಿಗೊಬ್ಬರು ಎದುರಾದಾಗ
ಕಣ್ಣುಗಳ ಡಿಕ್ಕಿಯಲಿ ಉರುಳಿ ಬಿದ್ದಿವೆ ಹೆಣಗಳು!
ಟಗರು ಕಾಳಗದಲ್ಲಿ ಟಗರುಗಳು ಉರುಳಿ ಬೀಳ್ವಂತೆ
ಉರುಳಿ ಬಿದ್ದಿವೆ ಅವರ ಹೆಣಗಳು.
ಓದಿನ ಮನೆ
ಸೂತಕದಲ್ಲಿ ಮಾತುಬಿಟ್ಟಿದೆ;
ಎಲ್ಲ ಮರೆತು !

ಪಾಪ, ಯಾವತ್ತೂ ಅವರಂತೆ ತಲೆಕೆಡಿಸಿಕೊಳ್ಳದ ಗೆದ್ದಲು
ಹುಳು ನೆರೆದು ತಮ್ಮ ಕೆಲಸವನೆಂದೂ ಮರೆಯದೆ
ಸೂತಕದ ಮನೆಯ ಹೆಣಗಳ ಜೊತೆ ನಂಟು ಬೆಳೆಸಿವೆ;
ಅಲ್ಲೆ ಪಕ್ಕದಲ್ಲೇ ನೂರಾರು ಸಂತರ ಕಾಲುದಾರಿಗಳಲ್ಲೇ
ಅವಕ್ಕೆ ಕವಿಗಳ ಕವಿತ್ವಕ್ಕೆ
ಸಂತರಂತೆ ಹಿಡಿಮಣ್ಣು ನೀಡಿ
ಅದರ ಮೇಲೊಂದು ಹಿಡಿ
ಬಗೆ ಬಗೆಯ ಕಾಡುಬೀಜಗಳ ಚೆಲ್ಲಿ
ಹೆಣಗಳ ಜಲ್ಲಿಕಲ್ಲು 

ಕರಾಬು ದಾರಿಯಲ್ಲಿ ಮುಂದೆ ಸಾಗಿವೆ
ಮುಂದಿನೂರಿಗೆ ಸಾಗಿವೆ ಮಂದಿಯೂರಿಗೆ ಸಾಗಿವೆ;
ಬಾಕಿ ಬಿದ್ದಿರುವ ಓದು ಬರೆವ ಮನೆಯ ಹೆಣಗಳಿಗೆ
ಹಿಡಿಮಣ್ಣು ಕೊಡುವ ಅದೇ ಕೆಲಸಕ್ಕೆ
ಗೆದ್ದಲು ಗೊಬ್ಬರದ ಹುಳು
ದಂಡು ದಾಪುಗಾಲು ಹಾಕಿದೆ
ಸತ್ತ ಕವಿವರರ ಗೋರಿಗಳ ಮೇಲೆ
ಸದಾ ಹಸಿರಾಗಿರುವ ಸಂಬಂಧಗಳ ಶಾಸನ ಬರೆದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.