ADVERTISEMENT

ಗೊ.ರು.ಚ ನಾನು ಕಂಡಂತೆ

ಚೆನ್ನವೀರ ಕಣವಿ
Published 19 ಜುಲೈ 2014, 19:30 IST
Last Updated 19 ಜುಲೈ 2014, 19:30 IST

ಬೊಗಸೆಗಂಗಳು, ನೀಳನಾಸಿಕ, ದಾಳಿಂಬದ ದಂತಪಂಕ್ತಿ, ತಿದ್ದಿ ತೀಡಿದ ಬೈತಲೆ, ಮಲ್ಲಿಗೆಯಂಥ ಶುಭ್ರವಸನ, ಆತ್ಮೀಯತೆಯ ನರುಗಂಪು– ಇದು ಕಾವ್ಯದಲ್ಲಿ ವರ್ಣಿಸುವ ಹೆಣ್ಣಿನ ಚಿತ್ರವೆಂದು ಬಗೆದರೆ ಅದು ನನ್ನ ತಪ್ಪಲ್ಲ; ಗೊ.ರು. ಚನ್ನಬಸಪ್ಪನವರನ್ನು ನೋಡದಿರುವ ನಿಮ್ಮ ತಪ್ಪು. ಬಣ್ಣವನ್ನು ಪಂಪನ ಮಾತಿನಲ್ಲಿಯೇ ಹೇಳಬೇಕಾದೀತು: ಕದಳೀ ಗರ್ಭಶ್ಯಾಮ.

ಅವರನ್ನು ಮೊದಲ ಬಾರಿಗೆ ಕಂಡಾಗ ಈ ಚಿತ್ರ ನನ್ನ ಮನಸ್ಸಿನಲ್ಲಿ ಮೂಡಿದ್ದು. ಈಗಲೂ ಅಷ್ಟೆ; ಆದರೆ ಕಣ್ಣಿಗೆ ಚಾಳೀಸಿನ ಅಲಂಕಾರ, ಬೈತಲೆಯಲ್ಲಿ ಅಲ್ಲಲ್ಲಿ ಬಿಳಿಗೂದಲು. ಒಪ್ಪ ಓರಣದಲ್ಲಾಗಲಿ, ಸರಳತೆ ಸಜ್ಜನಿಕೆಯಲ್ಲಾಗಲಿ ಯಾವ ಬದಲಾವಣೆಯೂ ಇಲ್ಲ. ಐವತ್ತೇಳು ವರ್ಷಗಳ ಹಿಂದೆ (ಫೆಬ್ರುವರಿ 1957) ಗಿರಿಯಾಪುರದಲ್ಲಿ (ಚಿಕ್ಕಮಗಳೂರು ಜಿಲ್ಲೆ) ಶಿವಾದ್ವೈತ ಪ್ರಚಾರಕ ಸಮಿತಿಯವರು ನಡೆಸುತ್ತಿದ್ದ ಎಂಟನೆಯ ಶಿವಾನುಭವ ಸಮ್ಮೇಳನದಲ್ಲಿ ಭಾಷಣಕಾರನಾಗಿ ನಾನು ಭಾಗವಹಿಸಿದಾಗ ಗೊ.ರು.ಚ ಅವರ ಪ್ರಥಮ ಪರಿಚಯ.

ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದವರೂ ಅವರೇ. ಅಂದಿನಿಂದ ಇಂದಿನವರೆಗೂ ನಾವು ಮೇಲಿಂದ ಮೇಲೆ ಭೆಟ್ಟಿಯಾಗದಿದ್ದರೂ ಭೆಟ್ಟಿಯಾದಾಗೆಲ್ಲ ಅದೇ ಸ್ನೇಹದ ಸುಗಂಧ ಸುಳಿದು, ಸುತ್ತಿಮುತ್ತಿಕೊಳ್ಳುತ್ತದೆ. ಗೊ.ರು.ಚ ಗೋರೋಚನ(ಒಂದು ಸುಗಂಧ ದ್ರವ್ಯ)ಕ್ಕೆ ಸಮೀಪದ ಒಂದು ಸಂಕ್ಷಿಪ್ತ ಹೆಸರಾಗಿ ನನಗೆ ಗೋಚರಿಸುತ್ತದೆ. ಗಿರಿಯಾಪುರದ ಅಂದಿನ ಆ ಸಭೆಯನ್ನು ನಡೆಸಿದ ರೀತಿ, ಸಮಯ ನಿಷ್ಠೆ, ಹೆಚ್ಚು ಕಡಿಮೆಯಾಗದ ಅಚ್ಚುಕಟ್ಟಾದ ಮಾತು, ಆದರಾತಿಥ್ಯ- ಒಂದೊಂದೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ.

ಅಂಥ ಸಾವಿರಾರು ಸಭೆ ಸಮ್ಮೇಳನಗಳನ್ನು ಅವರು ನಡೆಸಿಕೊಂಡು ಬಂದಿದ್ದಾರೆ. ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಯಾವುದೇ ಆಗಿರಲಿ, ತಮ್ಮ ಸಂಘಟನಾ ಚಾತುರ್ಯದಿಂದ, ಕಾರ್ಯಶ್ರದ್ಧೆಯಿಂದ, ಜನತೆಯ ನಿಕಟ ಸಂಪರ್ಕದಿಂದ ಅದು ಸಫಲವಾಗುವಂತೆ ಅವರು ನೋಡಿಕೊಳ್ಳುತ್ತಾರೆ. 1961ರಲ್ಲಿ ಗಿರಿಯಾಪುರದ ಸಮಿತಿ ಹನ್ನೆರಡನೆಯ ವಾರ್ಷಿಕ ಮಹೋತ್ಸವವನ್ನು ಆಚರಿಸುವ ಕಾಲಕ್ಕೆ ಅನೇಕ ಬೆಲೆಯುಳ್ಳ ಲೇಖನಗಳನ್ನೊಳಗೊಂಡ ವಿಭೂತಿ ಸಂಸ್ಮರಣ ಗ್ರಂಥವೊಂದನ್ನು ಪ್ರಕಟಿಸಿತು.

ಅದು ಗೊ.ರು.ಚ ಸಂಪಾದಿಸಿದ ಮೊದಲ ಗ್ರಂಥವೆಂದು ತೋರುತ್ತದೆ. ಮುಂದೆ ಅದೇ ಬಗೆಯ ಏಳೆಂಟು ಗ್ರಂಥಗಳಿಗೆ ಅವರು ಕಾರಣಕರ್ತರಾದದ್ದುಂಟು. 1962ರಲ್ಲಿ ನನಗೆ ಚನ್ನಬಸಪ್ಪನವರ ಇನ್ನೊಂದು ಮುಖದ ಪರಿಚಯವಾಯಿತು. ಅದು ಜಾನಪದದಲ್ಲಿರುವ ಅವರ ವಿಶೇಷ ಆಸಕ್ತಿ. ತರೀಕೆರೆಯಲ್ಲಿ ಮೊದಲ ಬಾರಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ನೆರವೇರಿದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಪ್ರೇರಕಶಕ್ತಿಯಾಗಿ, ಕಾರ್ಯದರ್ಶಿಯಾಗಿ ಅವರು ಮಾಡಿದ ಕೆಲಸ ಅಪೂರ್ವವಾಗಿದ್ದಿತು.

ಅವರ ಕೋರಿಕೆಯಂತೆ ಸಮ್ಮೇಳನದ ಸಾಹಿತ್ಯ ಗೋಷ್ಠಿಯಲ್ಲಿ ನಾನೊಂದು ಪ್ರಬಂಧವನ್ನು (ಜನಪದ ಕಾವ್ಯದಲ್ಲಿ ಪ್ರತಿಮಾ ವಿಧಾನ) ಮಂಡಿಸಿದೆ. ಅದೂ ಅಲ್ಲದೆ, ಕವಿವರ ಬೇಂದ್ರೆಯವರು ಆ ಸಮ್ಮೇಳನದ ಅಧ್ಯಕ್ಷರು. ಅನಾರೋಗ್ಯದ ಮೂಲಕ ಅವರು ಸಮ್ಮೇಳನಕ್ಕೆ ಬಾರದಿದ್ದರೂ ತಮ್ಮ ಭಾಷಣವನ್ನು ನನ್ನ ಕೈಯಲ್ಲಿ ಕೊಟ್ಟು ಕಳಿಸಿದ್ದರು. ಚನ್ನಬಸಪ್ಪನವರಿಗೆ ಅದನ್ನು ತಲುಪಿಸಿದೆ. ಬೇಂದ್ರೆಯವರ ಪರವಾಗಿ ಅವರ ಭಾಷಣವನ್ನು ಸಭೆಯಲ್ಲಿ ನೀವೇ ಓದಬೇಕು ಎಂದು ಅವರು ಒತ್ತಾಯದಿಂದ ಆ ಕೆಲಸವನ್ನು ನನಗೇ ವಹಿಸಿಬಿಟ್ಟರು.

ರಾಜ್ಯಪಾಲರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ನೆರೆದಿದ್ದ ಪ್ರಚಂಡ ಜನಸಮೂಹ ಬೇಂದ್ರೆಯವರ ಗೈರುಹಾಜರಿಯಲ್ಲಿ ಅವರ ಭಾಷಣವನ್ನು ಶಾಂತ ರೀತಿಯಿಂದ ಆಲಿಸಿತು. ನಾನು ಅಗ್ನಿದಿವ್ಯದಿಂದ ಪಾರಾದೆ ಎನಿಸಿತು. ಆ ವರ್ಷದ ಕೊನೆಯಲ್ಲಿಯೇ ಸಂಸ್ಮರಣ ಗ್ರಂಥವೂ ಪ್ರಕಟವಾಯಿತು. ಚನ್ನಬಸಪ್ಪನವರೇ ಅದರ ರೂವಾರಿ ಎಂದು ಬೇರೆ ಹೇಳಬೇಕಿಲ್ಲ. ಅದು ಐವತ್ತಾರು ಜನ ಲೇಖಕರ ಅಮೂಲ್ಯ ಲೇಖನಗಳನ್ನೊಳಗೊಂಡ 835 ಪುಟಗಳ ಬೃಹತ್ ಗ್ರಂಥ ‘ಹೊನ್ನ ಬಿತ್ತೇವು ಹೊಲಕೆಲ್ಲ!’.

ಆಮೇಲೆ ಕನ್ನಡ ನಾಡಿನ ತುಂಬ ನಡೆದ ಜಾನಪದ ಸುಗ್ಗಿಗೆ ಅಂದಿನ ಹದವಾದ ಬಿತ್ತನೆಯೇ ಕಾರಣವಾಯಿತೆಂದರೆ ತಪ್ಪಾಗದು. ಕರ್ನಾಟಕ ಜನಪದ ಕಲೆಗಳು ಅವರಿಂದಲೇ ಸಂಪಾದನೆಗೊಂಡು ಸಾಹಿತ್ಯ ಪರಿಷತ್ತಿನಿಂದ 1977ರಲ್ಲಿ ಪ್ರಕಟವಾದಾಗ ಈ ರೀತಿಯಲ್ಲಿ ಅದು ಮತ್ತೊಂದು ಮೈಲುಗಲ್ಲಾಗಿ ಪರಿಣಮಿಸಿತು. ‘ಗ್ರಾಮ ಜ್ಯೋತಿ’(ಕೆ.ಆರ್. ಲಿಂಗಪ್ಪ ಅಭಿನಂದನ ಗ್ರಂಥ)ಯನ್ನು ಅವರು ಬೆಳಗಿದಾಗ ಆ ಕ್ಷೇತ್ರದಲ್ಲಿ ಮತ್ತಷ್ಟು ಹೊಸ ಫಸಲು ಬರುವಂತಾಯಿತು.

ಹಲವಾರು ಸ್ವಂತ ಕೃತಿ ರಚನೆಯ ಜೊತೆಗೆ ಚಿತ್ರರಂಗ, ಪತ್ರಿಕಾ ಕ್ಷೇತ್ರಕ್ಕೂ ಅವರ ಸೇವೆ ಸಂದಿದೆ. ಸದಾ ಕ್ರಿಯಾಶೀಲರಾಗಿರುವ ಅವರು ತಮ್ಮ ನಿಸ್ವಾರ್ಥ ಸೇವೆಯಿಂದ ಎಲ್ಲರಿಗೂ ಅಚ್ಚುಮೆಚ್ಚು. ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ ಅನೇಕ ಸಂಘ ಸಂಸ್ಥೆಗಳಿಗೆ ಅವರು ನಿವೃತ್ತರಾಗುವುದು ಬೇಕಾಗಿಲ್ಲ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದುದು ಅವರ ಅನುಭವದ ಸದುಪಯೋಗಕ್ಕೆ ಒದಗಿದ ಒಂದು ದೊಡ್ಡ ಅವಕಾಶವೆನ್ನಬಹುದು.

ಹೊಟ್ಟೆಯೊಳಗಿನ ಹಾಡ ಬಿಟ್ಟು ಬಿಡದಲೆ ಹಾಡಿ
ಮುಟ್ಟಿಸಬೇಕ ಕಲಿತ ರುಣವ, ಇಲದಿರಕ
ಹಾಡ ಹಿಂಗ್ಯಾವ ಬಾಯಾಗ!


ಜನಪದ ಕವಿಗಳು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡದ್ದು ಇಂಥ ಕರ್ತವ್ಯನಿಷ್ಠೆಯಿಂದ ಕೂಡಿದ ಸಾಮಾಜಿಕ ಕಳಕಳಿಯಿಂದ. ಗೊ.ರು. ಚನ್ನಬಸಪ್ಪನವರಿಗೆ ಇಂದು ರಾಜ್ಯಮಟ್ಟದಲ್ಲಿ ಅಭಿನಂದನಾ ಸಮಾರಂಭ ನಡೆಯುತ್ತಿರುವುದು ನಾಡಿನ ಜನ ಅವರಿಗೆ ತಮ್ಮ ಋಣ ಮುಟ್ಟಿಸುತ್ತಿರುವುದರ ದ್ಯೋತಕವೆಂದು ನಾನು ಭಾವಿಸಿದ್ದೇನೆ.

ಈಚಿನ ಎರಡು ದಶಕಗಳಿಗೂ ಮಿಕ್ಕಿದ ಅವಧಿಯಲ್ಲಿ, ವಚನ ಸಾಹಿತ್ಯ, ಜಾನಪದ ಮತ್ತು ಸಮಾಜ ಸೇವೆ– ಈ ಮೂರೂ ಕ್ಷೇತ್ರಗಳಲ್ಲೂ ಗೊ.ರು.ಚ ತಮ್ಮ ಕಾರ್ಯವನ್ನು ಮುಂದುವರಿಸಿ, ಗಮನಾರ್ಹವಾದ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ನಲವತ್ತಕ್ಕೂ ಮಿಕ್ಕಿದ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಅವರ ಸೇವೆ ಸಂದಿದೆ. 1994ರ ‘ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತಜ್ಞ ಪ್ರಶಸ್ತಿ’ಯಿಂದ ಹಿಡಿದು 2013ರ ಕೆಂಪೇಗೌಡ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿ ಗೌರವಗಳು ಅವರ ಮಡಿಲಿಗೆ ಬಂದಿವೆ.

ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ವಿಶೇಷ ಸೇವೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2012ರ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಕಳೆದ ಮೇ 28ರಂದು ಸ್ವೀಕರಿಸಿ, ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಭಾರತದಲ್ಲಿಯೇ ಮೊದಲಿನದು ಎನ್ನಬಹುದಾದ ಜಾನಪದ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಗೊಳ್ಳಲು ಕಾರಣಕರ್ತರಾದ ಪ್ರಮುಖರಲ್ಲಿ ಅವರೂ ಒಬ್ಬರೆಂಬುದನ್ನು ಮರೆಯುವಂತಿಲ್ಲ.

ಶರಣ ಸಾಹಿತ್ಯ ಮತ್ತು ಸಂಸ್ಕೃತಿಗಳ ಸಂದೇಶವನ್ನು ಸಮಕಾಲೀನ ಜನಸಮುದಾಯಕ್ಕೆ ಮುಟ್ಟಿಸುವ ಧ್ಯೇಯದಿಂದ ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಮೈಸೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಪ್ರಸಿದ್ಧ ಸಾಹಿತಿ ಹಾಗೂ ವಿದ್ವಾಂಸರಾದ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು ಪ್ರಥಮ ಅಧ್ಯಕ್ಷರಾಗಿ ಅದಕ್ಕೆ ಗಟ್ಟಿ ತಳಹದಿಯನ್ನು ಹಾಕಿದರು.

ಅವರ ಅಕಾಲಿಕ ನಿಧನದ ನಂತರ ಪ್ರೊ. ಎಚ್. ಗಂಗಾಧರನ್ ಕೆಲಕಾಲ ಅಧ್ಯಕ್ಷತೆ ವಹಿಸಿ ಕಾರ್ಯನಿರ್ವಹಿಸಿದರು. ಅವರ ನಂತರ 1995ರಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ ಗೊ.ರು.ಚ ಅವರನ್ನು ಸಹಜವಾಗಿಯೇ ಅರಸಿಕೊಂಡು ಬಂದಿತು. ಯಾಕೆಂದರೆ ಅಖಿಲ ಕರ್ನಾಟಕ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅಪಾರ ಅನುಭವ ಅವರದಾಗಿದ್ದಿತು. ಶರಣ ಸಾಹಿತ್ಯ ಪರಿಷತ್ತಿನ ಆಡಳಿತ ಕಾರ್ಯಾಲಯವನ್ನು ಜೆ.ಎಸ್.ಎಸ್. ಮಹಾವಿದ್ಯಾಪೀಠದ ಬೆಂಗಳೂರು ಶಿಕ್ಷಣ ಸಂಕೀರ್ಣದ ಕಟ್ಟಡಕ್ಕೆ ವರ್ಗಾಯಿಸಿದ್ದರಿಂದ ಗೊ.ರು.ಚ ಅವರು ತಮ್ಮ ಸಂಪೂರ್ಣ ಅವಧಿಯನ್ನು ಪರಿಷತ್ತಿನ ಕೆಲಸಗಳಿಗೆ ಮೀಸಲಿಡಲು ಅನುಕೂಲವಾಯಿತು.

ಕರ್ನಾಟಕವಂತೂ ಸರಿಯೆ, ಭಾರತದ ಇತರ ರಾಜ್ಯಗಳ ಮತ್ತು ವಿದೇಶಗಳಲ್ಲಿರುವ ಶರಣ ಸಾಹಿತ್ಯಾಭಿಮಾನಿಗಳೂ ಸೇರಿದಂತೆ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ ಹೆಚ್ಚುತ್ತ ಬಂದಿದೆ (ಸದ್ಯಕ್ಕೆ 7,300). ಗೊ.ರು.ಚ ಅವರು ಯಾವಾಗಲೂ ದೂರದೃಷ್ಟಿಯಿಂದ ವ್ಯಾಪಕವಾದ ಯೋಜನೆಗಳನ್ನೇ ಕೈಗೆತ್ತಿಕೊಳ್ಳುತ್ತಾರೆ. ಕರ್ನಾಟಕದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಹಾಗೂ ನೆರೆಯ ರಾಜ್ಯಗಳಲ್ಲಿ ಪರಿಷತ್ತಿನ ಕ್ಷೇತ್ರ ಘಟಕಗಳನ್ನು ರಚಿಸಲಾಗಿದೆ.

ಕೇಂದ್ರ ಸಮಿತಿಯ ಸದಸ್ಯರ ಸಹಕಾರ ಹಾಗೂ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನಿರಂತರ ಪ್ರೋತ್ಸಾಹದಿಂದ ಕರ್ನಾಟಕದ ಒಳಗೂ ಹೊರಗೂ ಹತ್ತು ಸ್ಥಳಗಳಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನಗಳನ್ನು ಸ್ಥಳೀಯ ಸಂಸ್ಥೆಗಳ ನೆರವಿನಿಂದ ಯಶಸ್ವಿಯಾಗಿ ನೆರವೇರಿಸಿದ್ದಾರೆ. 11ನೇ ಸಮ್ಮೇಳನ ಡಿಸೆಂಬರ್ 27 ರಿಂದ ಮೂರು ದಿನ ಧಾರವಾಡದಲ್ಲಿ ಮುರುಘಾಮಠದ ಶ್ರೀಮಲ್ಲಿಕಾರ್ಜುನ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದಿದೆ. 2004ರಲ್ಲಿ ಗದಗಿನ ತೋಂಟದಾರ್ಯ ಮಠದ ಆಶ್ರಯದಲ್ಲಿ ನಡೆದ ಸಮ್ಮೇಳನವನ್ನು ಪ್ರತ್ಯಕ್ಷ ಕಂಡಿರುವ ನನಗೆ ಗೊ.ರು.ಚ ಅವರ ಶಿಸ್ತು, ಸಂಘಟನಾ ಸಾಮರ್ಥ್ಯದ ಬಗೆಗೆ ವಿಶ್ವಾಸ ಹೆಚ್ಚುತ್ತಲೇ ಬಂದಿದೆ.

ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಶರಣ ಸಾಹಿತ್ಯ ಪ್ರಕಟಣೆ ಒಂದು ಪ್ರಮುಖ ಭಾಗವೆಂದು ಪರಿಗಣಿಸಿದ ಗೊ.ರು.ಚ ಎಂಬತ್ತಕ್ಕೂ ಮಿಕ್ಕಿ ಬೆಲೆಯುಳ್ಳ ಗ್ರಂಥಗಳನ್ನು ಪರಿಷತ್ತಿನಿಂದ ಪ್ರಕಟಿಸಿದ್ದು ಆರು ಗ್ರಂಥಗಳನ್ನು ಸ್ವತಃ ಅವರೇ ಸಂಪಾದಿಸಿಕೊಟ್ಟಿದ್ದಾರೆ. ಇವುಗಳಲ್ಲಿ ‘12ನೆಯ ಶತಮಾನದ ಶರಣ ಕ್ಷೇತ್ರಗಳು’ ಸಚಿತ್ರ ಸಂಪುಟ ಗಾತ್ರದಲ್ಲಿ ಮತ್ತು ಸತ್ವದಲ್ಲಿ ಒಂದು ಅದ್ಭುತ ಕೃತಿಯೆಂದರೆ ಅತಿಶಯೋಕ್ತಿಯಾಗದು (ಪ್ರಧಾನ ಸಂಪಾದಕ: ಗೊ.ರು.ಚ, ಸಂಪಾದಕ: ಡಾ. ಬಸವರಾಜ ಮಲಶೆಟ್ಟಿ).

ತಜ್ಞರ ಸಮಿತಿಯ ಮಾರ್ಗದರ್ಶನ ಹಾಗೂ ಕರ್ನಾಟಕ ಸರಕಾರದ ಆರ್ಥಿಕ ನೆರವು ಎರಡನ್ನೂ ಪಡೆಯುವಲ್ಲಿ ಗೊ.ರು.ಚ ಯಶಸ್ವಿಯಾಗಿದ್ದಾರೆ. ಶರಣ ಪರಂಪರೆಯಲ್ಲಿ ನಂತರ ಅಸ್ತಿತ್ವಕ್ಕೆ ಬಂದಿರುವ ಮತ್ತು ಶರಣ ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿರುವ ಕ್ಷೇತ್ರಗಳನ್ನು ದಾಖಲಿಸುವ ಸಚಿತ್ರ ಸಂಪುಟವನ್ನು ಶರಣ ಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸುವ ಯೋಜನೆಯನ್ನು ಅವರು ಈಗಾಗಲೇ ಹಾಕಿಕೊಂಡಿದ್ದಾರೆ. ಇವುಗಳ ಜೊತೆಗೆ ಕನ್ನಡೇತರ ಭಾಷೆಗಳಲ್ಲಿ-ಇಂಗ್ಲಿಷ್, ಹಿಂದಿ, ತಮಿಳು, ತೆಲುಗು - ಶರಣ ಸಂದೇಶ ಪ್ರಸಾರೋದ್ದೇಶದಿಂದ ಕೆಲವು ಮಹತ್ವದ ಕೃತಿಗಳನ್ನೂ ಪ್ರಕಟಿಸಲಾಗಿದೆ.

ಶರಣ ಸಾಹಿತ್ಯ ಪ್ರಸಾರದ ಒಂದು ಕ್ರಮವಾಗಿ ಪರಿಷತ್ತಿನಿಂದ ‘ಮಹಾಮನೆ’ ಮಾಸಪತ್ರಿಕೆ 1997ರಿಂದಲೇ ಪ್ರಕಟಗೊಳ್ಳುತ್ತಿದೆ. ಅದರ ಪ್ರಥಮ ಸಂಚಿಕೆಯನ್ನು ಧಾರವಾಡದಲ್ಲಿ ಬಿಡುಗಡೆಗೊಳಿಸುವ ಸುಯೋಗವನ್ನು ಗೊ.ರು.ಚ ನನಗೆ ಒದಗಿಸಿದ್ದರು. ಬಸವ ಜಯಂತಿ ಶತಮಾನೋತ್ಸವ ಸಮಾರೋಪ ಸಮಾರಂಭ ಧಾರವಾಡದ ಮುರುಘಾಮಠದಲ್ಲಿ ನೆರವೇರಿದ ಸಂದರ್ಭದಲ್ಲಿ ‘ಮಹಾಮನೆ’ಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸುವ ಭಾಗ್ಯವೂ ನನ್ನದಾಗಿತ್ತು.

ಇದಕ್ಕೆ ಗೊ.ರು.ಚ ಅವರೇ ಕಾರಣರೆಂದು ಬೇರೆ ಹೇಳಬೇಕಿಲ್ಲ. ಧಾರವಾಡದಲ್ಲಿ ನೆರವೇರಿರುವ 11ನೇ ಶರಣ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕೆಲವು ಹೊಸ ಗ್ರಂಥಗಳ ಲೋಕಾರ್ಪಣೆಯೂ ನನ್ನಿಂದಲೇ ಆಗುವಂತೆ ನೋಡಿಕೊಂಡಿದ್ದಾರೆ. ವಿ.ಸೀ.ಯವರ ಕವಿತೆಯ ಸಾಲು ನೆನಪಾಗುತ್ತದೆ: ಸ್ವರ್ಗದೊಳಗೀ ಸ್ನೇಹ ದೊರೆವುದೇನು? 84ರ ಇಳಿವಯಸ್ಸಿನಲ್ಲಿಯೂ ಇಷ್ಟೊಂದು ಕ್ರಿಯಾಶೀಲರಾಗಿರುವ ಸರಳ ಶುಭ್ರ ವ್ಯಕ್ತಿತ್ವದ ಗೊಂಡೇದಹಳ್ಳಿಯ ಈ ಗಾಂಧೀವಾದಿ ನಮ್ಮ ಮಧ್ಯೆ ಆರೋಗ್ಯವಂತರಾಗಿ ನೂರ್ಕಾಲ ಬಾಳಲಿ.

‘ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ’ ಎನ್ನುತ್ತದೆ ಈಶಾವಾಸ್ಯೋಪನಿಷತ್ತು. ಅಂದರೆ ಸಕ್ರಿಯ ಜೀವನವನ್ನು ನಡೆಸುತ್ತ ಮನುಷ್ಯರು ನೂರು ವರ್ಷ ಬಾಳಲು ಬಯಸಬೇಕು ಎಂದರ್ಥ. 
ಕೃತಾರ್ಥರಾದ ಗೊ.ರು. ಚನ್ನಬಸಪ್ಪನವರಿಗೆ ಎಲ್ಲ ಶುಭಗಳೂ ದೊರೆಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT