ನಾನು ಸತ್ತಿದ್ದು ಇಂದೇ ಇರಬೇಕು. ಎಂದಿನಂತೆ ಬೆಳಿಗ್ಗೆ ಏಳದಿದ್ದು ನೋಡಿ ನನ್ನನ್ನು ಎಬ್ಬಿಸಲು ಕೋಣೆಯೊಳಗೆ ಬಂದವರ್ಯಾರೋ ಎಷ್ಟು ತಟ್ಟಿ, ಬಡಿದು ಅಲುಗಾಡಿಸಿದರೂ ಹಂದಾಡದೇ ಮಲಗಿದ್ದು ನೋಡಿ, ನಾನು ಸತ್ತಿರಬೇಕೆಂದು ಬಹುಶಃ ಅವರೇ ನಿರ್ಧರಿಸಿ, ಶರಾ ಬರೆದಿರಬೇಕು. ಮೂಲೆಯಲ್ಲಿ ಯಾರೋ ಆಳುತ್ತಿದ್ದಂತೆ ಮಸುಕು ಮಸುಕು. ತಾಯಿಯಿರಬಹುದೆಂದು ನನ್ನ ಕರುಳು ಹೇಳುತ್ತಿತ್ತು. ನನಗೆ ಗೊತ್ತಿಲ್ಲದ, ಕೇಳಿಯರಿಯದ ಅನೇಕ ವ್ಯಕ್ತಿಗಳು ದಂಡು ಕಟ್ಟಿಕೊಂಡು ಬಂದು ನನ್ನ ಸುತ್ತಮುತ್ತ ಮುತ್ತಿಕೊಂಡಿದ್ದರು. ನಾನು ಇಷ್ಟೊಂದು ಫೇಮಸ್ ಆಗಿದ್ಯಾವಾಗ ನನಗೇ ಅಚ್ಚರಿ!
ಹೊರಗೆ ಚಟ್ಟ ಸಿದ್ಧವಾಗುತ್ತಿತ್ತು. ಮಟಮಟ ಮಧ್ಯಾಹ್ನದ ಉರಿಬಿಸಿಲಿನಲ್ಲಿ ನನ್ನ ಪಾರ್ಥಿವ ಶರೀರವನ್ನು ತಂದು ಮಲಗಿಸಲಾಯಿತು. ಮೈಯಲ್ಲಿ ಕಡೆಯದಾಗಿ ಉಳಿದ ಒಂದೆರಡು ಬಟ್ಟೆ ಚೂರುಗಳನ್ನೂ ಕಿತ್ತೊಗೆದು, ಅರೆಬರೆಗೊಳಿಸಿ, ಒಂದು ಕೊಡಪಾನ ತಣ್ಣೀರು ಸುರಿದಿದ್ದೇ ಹಾಯೆನ್ನಿಸಿ, ಒಳಗೆಲ್ಲೋ ಅರಳಿದ ಅನುಭವವಾಗುತ್ತಿದ್ದಂತೆ ಅಕ್ಕಪಕ್ಕದಲ್ಲಿ ಅಳುವುದು ಕಿರಿಚುವುದು ಜೋರಾಗಿ ಚಿತ್ರ ವಿಚಿತ್ರ ಸದ್ದುಗಳೆಲ್ಲಾ ಮೊಳಗಿ ಮತ್ತೆ ಎಲ್ಲಾ ಗೋಜಲು ಗೋಜಲು.
ಮಧ್ಯಾಹ್ನ ಮೂರಕ್ಕೆ ಅಂತಿಮಯಾತ್ರೆ! ಮುದಿ ವಯಸ್ಸಿನ ನಡುಗುವ ಧ್ವನಿಯೊಂದು ಘೋಷಿಸಿತು. ಅಥವಾ ಚಟ್ಟದಲ್ಲಿ ಮುಸುಕು ಹಾಕಿ ಮಲಗಿಸಿದ್ದರಿಂದ ಹಾಗೆ ಕೇಳಿಸಿತೊ? ನಾನಾ ಸ್ವರಗಳು ನಾನಾ ಸ್ಥಾಯಿಯಲ್ಲಿ ಕೊರಳೆತ್ತಿ ವಿಕಾರವಾಗಿ ಅಳುವ, ಕೂಗುವ ಸದ್ದುಗಳ ನಡುವೆಯೂ ಕಾಲಪ್ರಜ್ಞೆ ಮೆರೆದು ಅಂತಿಮ ವಿದಾಯಕ್ಕೆ ನಿಖರ ವೇಳೆಯನ್ನು ಸಿದ್ಧಪಡಿಸುವಾಗಲೂ ಧ್ವನಿ ನಡುಗಿದ್ಯಾಕೆ?
ಮಧ್ಯಾಹ್ನ ಮೂರಕ್ಕೆ ಕಟ್ಟುಮಸ್ತಾದ ನಾಲ್ವರು ನನ್ನನ್ನು ಹೊತ್ತು, ಮುಖ್ಯರಸ್ತೆಗಳಲ್ಲಿ ಸಂಚರಿಸಿ ಓಣಿಕೇರಿಗಳನ್ನೆಲ್ಲಾ ದಾಟಿ ಸ್ಮಶಾನ ಸೇರಿದಾಗ ಸಂಜೆಯಾಗಿತ್ತು. ಸದ್ಯ, ಟ್ರಾಫಿಕ್ ಜಾಮ್, ಅಕಾರಣ ಮಳೆಗಳೊಂದೂ ಇಲ್ಲದ ಸಲೀಸು ಸಂಜೆಯಾದರೂ ಸ್ಮಶಾನದ ದ್ವಾರದಲ್ಲಿ ಮಾತ್ರ ಸಾಕಷ್ಟು ದೊಡ್ಡ ಕ್ಯೂ... ಗೇಟಿನೆದುರು ಸಾಲಾಗಿ ನಿಂತ ಹೆಣಗಳ ರಾಶಿಯಲ್ಲಿ ಸೆಕ್ಯುರಿಟಿ ಸತ್ತವರ ಪೂರ್ವೇತಿಹಾಸವನ್ನು ಕೂಲಂಕಶವಾಗಿ ವಿಚಾರಿಸಿ, ಒಳಹೋಗಲು ಚೀಟಿ ಕೊಡುತ್ತಿದ್ದ. ನನ್ನನ್ನು ಹೊತ್ತ ನಾಲ್ಕು ಭುಜಗಳು ನೂರೋ ಇನ್ನೂರೋ ಸರದಿಯಲ್ಲಿ ಬಂದುನಿಂತವು. ಅಸಂಖ್ಯಾತ ಹೆಣಗಳ ಸವಿಸ್ತಾರ ವಿವರಗಳನ್ನು ಪಡೆದುಕೊಂಡು ಗೇಟ್ ಪಾಸ್ ಕೊಡುವಷ್ಟರಲ್ಲಿ, ನನ್ನ ಸರದಿ ಬರಬೇಕಾದರೆ ಇನ್ನೆಷ್ಟು ಯುಗಗಳು ಕಳೆಯಬೇಕೋ!
ಚಟ್ಟದಡಿಯಲ್ಲಿ ಏನೋ ಬದಲಾವಣೆಯಾಗಿರಬೇಕು – ಭುಜದಿಂದ ಭುಜಕ್ಕೆ ತಿರುಗಿಸುತ್ತಾ, ಒಂದು ಕಾಲಿಂದ ಇನ್ನೊಂದು ಕಾಲಿಗೆ ಭಾರ ಬಿಡುತ್ತಾ ಬೇಸರದಿಂದ ಚಿಟಿಕಿ ಹಾಕಿ ಆಕಳಿಸಿ, ಮತ್ತೆ ನೆಟ್ಟಗಾಗುತ್ತಾ ನೆಟ್ಟನೋಟದಿಂದ ಸೆಕ್ಯುರಿಟಿಯನ್ನೊಮ್ಮೆ, ಮುಗಿಯದ ಹೆಣಗಳ ರಾಶಿಗಳನ್ನೊಮ್ಮೆ ನಿಟ್ಟಿಸಿ, ನಿಟ್ಟುಸಿರಿಡುತ್ತಾ ಇನ್ನೂ ಬಾರದ ಸರದಿಗಾಗಿ ಗೊಣಗುತ್ತಾ ಕಾಯುತ್ತಿರಬೇಕು!
ಗುಂಪು ಮೆಲ್ಲಗೆ ಕರಗಿ, ಸೆಕ್ಯುರಿಟಿ ನನ್ನನ್ನು ಒಳಬಿಟ್ಟಾಗ ಸಮಯದ ಪರಿವೆ ಯಾರಿಗೂ ಇದ್ದಂತಿರಲಿಲ್ಲ. ಕಟ್ಟುಮಸ್ತಾದ ನಾಲ್ಕಾಳು ಭುಜದ ಮೇಲಿನ ಹೊರೆಯನ್ನು ಕೆಳಗುರುಳಿಸಿ ನಿಶ್ಚಿಂತೆಯಿಂದ ಕೈ ಒರೆಸಿಕೊಂಡು ಹೊರಹೋಗಿರಬೇಕು. ಇಲ್ಲ, ಇಷ್ಟೊತ್ತು ತಮ್ಮ ಭುಜದ ಮೇಲೆ ನನ್ನನ್ನು ಹೊತ್ತಿದ್ದಕ್ಕೆ ಇನ್ನೂ ಚೌಕಾಶಿ ಮಾಡುತ್ತಾ ಇಲ್ಲೆಲ್ಲೋ ನಿಂತಿದ್ದಾರೇನೋ ಯಾರಿಗೆ ಗೊತ್ತು? ಕತ್ತಲಿನಲ್ಲಿ ಯಾವುದೂ ತಿಳಿಯುತ್ತಿರಲಿಲ್ಲ.
ಆಮೇಲೆ ನನ್ನ ದೇಹಕ್ಕೆ ಯಾರೋ ಬೆಂಕಿಯಿಟ್ಟರು. ಅದೇ ನಾಲ್ವರೋ ಅಥವಾ ಮತ್ಯಾರೋ? ಉರಿಯುತ್ತಿರುವ ಬೆಂಕಿ ಮೆಲ್ಲಗೆ ಶುರುವಾಗಿ ಆನಂತರ ಚಕಚಕನೆ ಹತ್ತಿಕೊಂಡಿತು. ಹೆಣ ಹೊತ್ತವರು ಸಿಡಿಯುವ ನನ್ನ ತಲೆಗಾಗಿ ದೂರದಲ್ಲಿನ್ನೂ ನಿಂತಿದ್ದಾರೋ ಏನೋ! ದೇಹವೆಲ್ಲಾ ಧಗಧಗನೆ ಹೊತ್ತಿ, ಕೆಂಡವಾದ ಮೇಲೂ ಮೂಲೆಯಲ್ಲೆಲ್ಲೋ ನಿಂತು ಸಿಡಿಯುವ ಒಂದು ತಲೆಗಾಗಿ ಕಾದು, ಬೇಸತ್ತು, ಕಡೆಗೆ ಸಿಡಿಯದ ತಲೆಯಿಂದ ನಿರಾಶರಾಗಿ ನಿರ್ಗಮಿಸಿರಬಹುದು. ದೇಹ ಸುಟ್ಟು ಕರಕಲಾಗುತ್ತಿದ್ದಂತೆ ಎಲ್ಲೋ ಅನಂತದಲ್ಲಿ ತೇಲುತ್ತಿರುವಂತಹ ಅನುಭವ. ಕ್ಷಣಕ್ಷಣಕ್ಕೂ ಜಾರುತ್ತಾ ಪಾತಾಳ ಸೇರುತ್ತಿರುವಂತೊಮ್ಮೆ, ಹಕ್ಕಿಯಂತೆ ಹಾರಾಡುತ್ತಾ ಆಕಾಶದೆತ್ತರ ಚಿಮ್ಮುತ್ತಿರುವಂತೆ ಮತ್ತೊಮ್ಮೆ. ಅದೇ ಸ್ಥಿತಿಯಲ್ಲಿ ಅದೆಷ್ಟೊತ್ತು ಸುಟ್ಟ ದೇಹಕ್ಕಂಟಿಕೊಂಡು ಮಲಗಿದ್ದೆನೇನೋ!
ಡೋಲಾಯಮಾನ ಸ್ಥಿತಿ ಕಳೆದು ತಟಸ್ಥಭಾವಕ್ಕಿಳಿದು ಸಮತಟ್ಟಾದ ಸ್ಥಳದಲ್ಲಿ ಇದ್ದೇನೆನ್ನಿಸಿದ್ದೇ ಮೆಲ್ಲನೆ ಸುಟ್ಟು ಕರಕಲಾದ ದೇಹದಿಂದ ನನ್ನನ್ನು ಕಿತ್ತು ಬೇರ್ಪಡಿಸಿಕೊಂಡೆ. ಮುಸುಕನ್ನು ಸರಿಸಿ, ನೆಟ್ಟ ನೋಟದಿಂದ ಸುತ್ತ ಕಣ್ಣಾಡಿಸಿದೆ. ಮಬ್ಬುಗತ್ತಲಿನಲ್ಲಿ ಹೊಸ ಜಾಗದ ರೂಪುರೇಷೆಗಳು ಅಸ್ಪಷ್ಟವಾಗಿದ್ದವು. ಇಷ್ಟೊತ್ತು ಮುಸುಕಿನಲ್ಲಿದ್ದಿದ್ದರಿಂದಲೋ ಏನೋ ಎಲ್ಲವೂ ಗೋಚರವಾಗಬೇಕಾದರೆ ಸ್ವಲ್ಪ ಸಮಯವೇ ಹಿಡಿಯಿತು. ಎತ್ತ ತಿರುಗಿದರೂ ಬರೀ ಬೃಹಾದಾಕಾರದ ಗೋಡೆಗಳೇ! ಅರೆಗತ್ತಲಲ್ಲಿ ಏನೂ ಸ್ಪಷ್ಟವಾಗದಿದ್ದರೂ ಎಲ್ಲೆಂದರಲ್ಲಿ ಖಾಲಿ ಗೋಡೆಗಳನ್ನು ಉದ್ದಗಲಕ್ಕೂ ನಿರ್ಮಿಸಿದಂತೆ ಕಾಣಿಸುತ್ತಿತ್ತು. ಪುರಾತನ ಕಾಲದ ಮಜಭೂತಾದ ಭಾರೀ ಗೋಡೆಗಳ ಭದ್ರಕೋಟೆಗೆ ಯಾರಾದರೂ ನನ್ನನ್ನು ಕರೆತಂದುಬಿಟ್ಟರೆ?
ಸುಟ್ಟ ಕರಕಲು ವಾಸನೆಯಿನ್ನೂ ಸುತ್ತ ಅಡರಿಕೊಂಡಿದ್ದರಿಂದ ಉಮ್ಮಳಿಸಿ ಬಂದಂತಾಯಿತು. ಅಲ್ಲೆಲ್ಲಾದರೂ ಹೊರಹೋಗುವ ಬಾಗಿಲಿದೆಯೇ ಎಂದು ಹುಡುಕುತ್ತಿರುವಾಗ ಸನಿಹದಲ್ಲಿ ಅಡ್ಡಡ್ಡವಾಗಿ ನುಸುಳುವಂತಹ ಓಣಿಯಾಕಾರದ ಸಣ್ಣ ಹಾದಿಯೊಂದು ಕಾಣಿಸಿ, ಸರಕ್ಕನೆ ನುಸುಳಿಕೊಂಡೆ. ಎರಡು ಗೋಡೆಗಳ ನಡುವೆ ಇಕ್ಕಟ್ಟಾದ, ಕತ್ತಲೋ ಕತ್ತಲಾವರಿಸಿದ ದಾರಿ. ಕಗ್ಗತ್ತಲ ಹೊಸಹಾದಿಯಲ್ಲಿ ತಡವರಿಸುತ್ತಾ ನಡೆಯತೊಡಗಿದೆ.
ಸ್ವಲ್ಪ ದೂರ ನಡೆದಿರಬೇಕು, ಎದುರಿಗೆ ಕಾಲಿನಂತೆ ಕಾಣುವ ಎರಡು ಗಳಕ್ಕೆ ಜೋತುಬಿದ್ದ ಮುಖ ಮಾತ್ರವಿರುವ ವಿಚಿತ್ರ ಆಕೃತಿಯೊಂದು ಎದುರಾಯಿತು. ಕ್ರಮೇಣ ಅಂತಹ ಅನೇಕ ಆಕೃತಿಗಳು ಅಲ್ಲಿರುವಂತೆ ಭಾಸವಾಗತೊಡಗಿತು. ಗುಂಪುಗುಂಪಾಗಿ, ಒಂಟೊಂಟಿಯಾಗಿ, ಮಸುಕು ಮಸುಕಾಗಿ ಕಾಣುವ ಯಾವ ಯಾವುದೋ ಆಕೃತಿಗಳು! ಸತ್ತು ಬಂದವೋ, ಸಾವೇ ಇಲ್ಲದವೋ, ಯಾರಿಗೆ ಗೊತ್ತು? ಕಣ್ಣು ಹಾಯಿಸಿದಲ್ಲೆಲ್ಲಾ ಚಿಕ್ಕದು, ದೊಡ್ಡದು, ಪುಟ್ಟ ಪುಟಾಣಿಗಳ ನಾನಾ ಆಕಾರದ ಆಕೃತಿಗಳು! ಒಂದು ಕ್ಷಣ ಕಂಡಂತೆ, ಮತ್ತೊಂದು ಕ್ಷಣ ತೇಲಿ ಕಣ್ಮರೆಯಾದಂತೆ! ಎಲ್ಲವೂ ಕೂಗುತ್ತಾ, ಕಿರಿಚುತ್ತಾ ಗಲಾಟೆ ಮಾಡುತ್ತಿರಬೇಕು. ಇಲ್ಲದಿದ್ದಲ್ಲಿ ಏನೀ ಸದ್ದು?
ಮಬ್ಬುಗತ್ತಲಿನಲ್ಲಿ ಜೋತು ಬಿದ್ದ ಮುಖಗಳ ನಿಸ್ತೇಜ ಕಣ್ಣುಗಳು, ಹಣ್ಣುಹಣ್ಣು ಮುದುಕಿಯ ಸುಕ್ಕುಗಟ್ಟಿ ಜೋತಾಡುತ್ತಿರುವ ಅನುಪಯುಕ್ತ ಮೊಲೆಗಳನ್ನು ನೆನಪಿಗೆ ತರುತ್ತಿದ್ದವು. ಉದ್ದಾನುದ್ದಕ್ಕೂ ಅಂತಹ ನೂರಾರು ಕಳಾಹೀನ ಮುಖಗಳು, ಅರ್ಥಹೀನ ಆತಂಕದಲ್ಲಿ ಹೊರಳಾಡುತ್ತಿರುವ ಮೂಗಿನ ಹೊಳ್ಳೆಗಳು! ಯಾಕೆ ಹೀಗೆ ಪ್ರೇತಗಳಂತೆ ಕಾಣಿಸುತ್ತಿದ್ದಾವೆ? ಅಥವಾ ಪ್ರೇತಗಳೇ ಆಗಿಬಿಟ್ಟಿದ್ದಾವೋ?
ನಾನೇನಾದರೂ ದಾರಿ ತಪ್ಪಿ ಬರಬಾರದ ನಿಷೇಧ ಸ್ಥಳಕ್ಕೆ ಬಂದೆನೆ? ಇದೇ ಸರಿ ದಾರಿಯೆಂದು ತಿಳಿಯುವುದಾದರೂ ಹೇಗೆ? ಯಾರನ್ನಾದರೂ ಕೇಳಲೆ? ಆದರೆ ಮುಸುಕು ಸರಿಸಿ ಎದ್ದಾಗ ಎದುರಿಗಿದ್ದಿದ್ದು ಇದೊಂದೇ ದಾರಿಯಲ್ಲವೆ? ಕವಲೊಡೆದ ಹಲವು ದಾರಿಗಳಿದ್ದಿದ್ದರೆ ಅನುಮಾನ ಸಹಜ. ಬಹುಶಃ ಜಗಮಗಿಸುವ ಸ್ಪಷ್ಟ ಜಗತ್ತಿನಿಂದ ಬಂದಿದ್ದರಿಂದ ಅಗೋಚರ ಅಸ್ಪಷ್ಟ ಪ್ರಪಂಚ ಅರ್ಥವಾಗಬೇಕಾದರೆ ಸಮಯ ಹಿಡಿಯುತ್ತದೇನೋ?
ಕ್ರಮೇಣ ಕತ್ತಲಿಗೆ ಹೊಂದುತ್ತಿದ್ದಂತೆ ಮಧ್ಯಭಾಗದಲ್ಲಿ ವಿಚಿತ್ರ ವಸ್ತುವೊಂದು ಅಲ್ಲಾಡುತ್ತಿರುವಂತೆ ಕಾಣಿಸಿತು. ಅದನ್ನೇ ಮತ್ತೆ ಮತ್ತೆ ನೋಡಿದೆ. ದೊಡ್ಡ ಆನೆಯನ್ನು ನೆನಪಿಗೆ ತರುವಂತಹ ಆಜಾನುಬಾಹು! ಮಧ್ಯಭಾಗದಲ್ಲಿರುವ ಪೀಠದಲ್ಲಿ ಆಸೀನನಾಗಿರುವಂತೆ ಮಬ್ಬಾಗಿ ಕಾಣುತಿತ್ತು. ಏನೋ ಅವಸರದ ಕೆಲಸದಲ್ಲಿರುವವನಂತೆ ಎದ್ದು, ಕೂತು ಮಾಡುತ್ತಿದ್ದ. ಅಗಲವಾದ ಬಿಳಿ ತೊಗಲಿನ ಮುಖದಲ್ಲಿ ಕುಣಿಯುತ್ತಿರುವ ಭರ್ಜರಿ ಮೀಸೆ, ಗುಡಾಣ ಹೊಟ್ಟೆ. ಆನೆ ಬಸುರಾದರೆ ಪ್ರಾಯಶಃ ಹೀಗೇ ಇರಬಹುದು. ಗಳಿಗೆಗೊಮ್ಮೆ ಹೊಟ್ಟೆ ವಿಸ್ತಾರವನ್ನು ಅಳೆದು ಲೆಕ್ಕವಿಡುವವನಂತೆ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಕೈಯಾಡಿಸುತ್ತಿದ್ದ.
ಅವನ ಸುತ್ತಮುತ್ತ ಆಗಷ್ಟೇ ಕಿರು ಓಣಿ ಹಾದು ಒಳ ಬಂದು ಬಿದ್ದ ಹೆಣಗಳ ನಿಶ್ಚೇಷ್ಟ ರಾಶಿ! ಸೆಕ್ಯುರಿಟಿ ಕೂಲಂಕಶವಾಗಿ ವಿಚಾರಿಸಿ ಸವಿಸ್ತಾರವಾಗಿ ಬರೆದುಕೊಂಡ ಪೂರ್ವೋತಿಹಾಸದ ಚೀಟಿಯೇನಾದರೂ ಈ ಅಜಾನುಬಾಹುವಿಗೆ ಬಂದು ತಲುಪುತ್ತಿದೆಯೆ? ಪ್ರತಿಯೊಂದು ಹೆಣದ ಗತಗಾಲದ ಸುದೀರ್ಘ ಚರಿತ್ರಾ ವಿವರಗಳನ್ನು ಪರಿಶೀಲಿಸುತ್ತಿರುವಂತೆ ದೂರಕ್ಕೆ ಕಾಣಿಸುತ್ತಿತ್ತು. ಅವನ ಅಕ್ಕಪಕ್ಕ ಅಷ್ಟೆತ್ತರ ಬೆಳೆದ ಪುಸ್ತಕಗಳು! ಬಹುಶಃ ಇದೀಗಷ್ಟೇ ಬಂದ ಹೆಣಗಳ ವಿವರಗಳನ್ನೊಳಗೊಂಡ ರಿಜಿಸ್ಟರಿರಬೇಕು. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಭಂಗಿ, ಕೈ ಬಾಯಿ ಹಾವಭಾವ, ಕೊತ ಕೊತ ಕುದಿಯುತ್ತಿರುವ ಕಣ್ಣು! ಸಿಟ್ಟಿನಿಂದ ಧುಮುಗುಟ್ಟುತ್ತಿರುವ ಮುಖ! ಕೆಂಪಗೆ ಉರಿಯುತ್ತಿರುವ ಎರಡು ಕಣ್ಣುಗಳು ರಾತ್ರಿ ಜ್ವಲಿಸುವ ಪ್ರಾಣಿಯ ಕಣ್ಣುಗಳಂತೆ ಹೊಳೆಯುತ್ತಿದ್ದವು!
ಯಾರವನು? ಎಲ್ಲಾ ಬಿಟ್ಟು ಇಲ್ಲಿ ಯಾಕಿದ್ದಾನೆ? ಮತ್ತೊಂದು ಕ್ಷಣದಲ್ಲಿ ಹಠಾತ್ತಾಗಿ ಮೆಟ್ಟಿಲ ಮೇಲಿದ್ದ ಪೀಠದ ಮೇಲೊರಗಿ ಕಾಲ್ಮೇಲೆ ಕಾಲು ಹಾಕಿ ಗದ್ದುಗೆಯಲ್ಲಿ ಕೈಯೂರಿ ಬೆರಳಿನಿಂದ ನಾಜೂಕಾಗಿ ಮೀಸೆ ತಿರುವುತ್ತಾ ಆರಾಮವಾಗಿ ಕೂತುಬಿಟ್ಟನಲ್ಲಾ! ಯಾರಾಗಿರಬಹುದು?
ಮತ್ತೊಂದಿಷ್ಟು ಹೆಣಗಳ ರಾಶಿಗಳು ಧೊಪ್ಪೆಂದು ಬಂದುಬಿದ್ದವು! ತಕ್ಷಣ ಕಾರ್ಯತತ್ಪರನಾಗಿ ಮುಂದಿದ್ದ ರಿಜಿಸ್ಟರೆಳೆದು ಗಂಟಿಕ್ಕಿದ ಮುಖದಲ್ಲೇ ಪುಟ ತಿರುವತೊಡಗಿದ. ಪಟಪಟ ತೆರೆದುಕೊಂಡ ಪುಟಗಳಲ್ಲಿ ಕೈ ಬೆರಳೋಡಿಸಿ ಏನೋ ಹುಡುಕುತ್ತಿದ್ದಂತಿದ್ದವನು ಸಟ್ಟನೆ ಸಿಟ್ಟುಕೊಂಡು ಮುಖ ಕಿವಿಚುತ್ತಾ ದೊಡ್ಡ ಅಚಾತುರ್ಯವಾದಂತೆ ಜೋರಾಗಿ ಕಿರುಚತೊಡಗಿದ.
ಯಾರೀತ? ಇಲ್ಲಿರುವ ಬೇರೆ ಆಕೃತಿಗಳಿಗೆ ಅವನ ಪರಿಚಯವಿರಬಹುದೆ? ಯಾಕೆ ಹಾಗೆ ಕಿರುಚುತ್ತಿದ್ದಾನೆ? ವಿಚಿತ್ರವೆಂದರೆ ಅವನಷ್ಟು ಅರಚುತ್ತಿದ್ದರೂ ಒಂಚೂರೂ ಕೇಳಿಸುತ್ತಿರಲಿಲ್ಲ; ಶಬ್ದಗಳು ನನ್ನ ಹತ್ತಿರವೂ ಸುಳಿಯುತ್ತಿಲ್ಲವಲ್ಲಾ! ನನ್ನ ನೆನಪಿನ ಶೂನ್ಯ ಗೋಡೆಯನ್ನೆಲ್ಲಾ ತಡಕಾಡಿದೆ. ಈ ಹಿಂದೆ ಅವನನ್ನೆಲ್ಲೂ ನೋಡಿದ ನೆನಪಾಗಲಿಲ್ಲ. ಮಗ್ಗುಲಲ್ಲೇ ಓಡಿಯಾಡುತ್ತಿರುವ ನಾನಾ ಆಕೃತಿಗಳನ್ನು ನೋಡಿದರೆ, ಮತ್ತದೇ ನಿಸ್ತೇಜ ಮುಖಗಳು! ಎದುರಿಗಿದ್ದ ಒಂದನ್ನು ನಿಲ್ಲಿಸಿ, ‘ಯಾರಾತ?’ ಕೇಳಿದೆ. ಕೇಳಿಸಲೇಯಿಲ್ಲವೆನ್ನುವಂತೆ ಮುಂದೆ ಹೋಯಿತು. ಅಕ್ಕಪಕ್ಕದಲ್ಲಿ ಸರಿದಾಡುತ್ತಿದ್ದ ಒಂದೊಂದನ್ನೂ ನಿಲ್ಲಿಸಿ, ‘ಅಲ್ಲಿರುವುದ್ಯಾರು?’ ಕೇಳಿದೆ. ಕಡೆಗೆ ಬೇಸತ್ತು ಮೂಲೆಯಲ್ಲಿ ನಿಂತು ಎತ್ತಲೋ ನಿಟ್ಟಿಸುತ್ತಿದ್ದ ಒಂದನ್ನು ಅಲುಗಿಸಿ, ‘ಯಾರಾತ?’ ಕೇಳಿದೆ. ನಾನು ಕೇಳಿದ್ದು ಅರ್ಥವಾಯಿತೆನ್ನುವುದಕ್ಕಿಂತ ನನ್ನನ್ನು ಸುಮ್ಮನಿರಿಸುವಂತೆ ಸಂಜ್ಞೆ ಮಾಡಿ ಅದು ಮುಂದೆಹೋಯಿತು. ಥತ್ತೇರಿಕೆ! ಹೋಗಿ ಆಜಾನುಬಾಹುನನ್ನೇ ಕೇಳಿಬಿಡಲೆ?
‘ಹೇ ಡ್ಯೂಡ್, ನೀನ್ಯಾರು?’ ಅನ್ನಲೇ ಅಥವಾ ‘ತಾವ್ಯಾರು ಸ್ವಾಮಿ, ನನ್ನ ಅಲ್ಪಮತಿಗೆ ತಿಳಿಯಲಿಲ್ಲ!’ ಎನ್ನಲೆ?
‘ಹೌ ಸ್ಟುಪಿಡ್! ನಾನ್ಯಾರೂಂತಾ ಗೊತ್ತಿಲ್ವಾ? ಹೆಣಗಳ ರಾಶೀಲಿ ಇರೋದನ್ನ ಕಂಡೂ ಅಷ್ಟೂ ಗೊತ್ತಾಗ್ಲಿವೇನಯ್ಯಾ! ವಾಟ್ ಎ ವೇಸ್ಟ್!’ ಎಂದು ಅಟ್ಟಿಬಿಟ್ಟರೆ?
ಕಣ್ಣು ಕಿರಿದುಗೊಳಿಸಿ ಅವನನ್ನೇ ಮತ್ತೊಮ್ಮೆ ನಿಟ್ಟಿಸಿ ನೋಡಿದೆ. ಅವನ ಪೀಠದ ಹಿಂದೆ ಮತ್ತೊಂದು ಇಕ್ಕಟ್ಟಾದ ಕಿರು ಬಾಗಿಲಿರುವುದು ಗೋಚರಿಸಿತು. ಒಳ ಬರುವಾಗ ಕಿರುದಾರಿಯಲ್ಲಿ ಕಂಡಿದ್ದ ಅದೇ ಬಾಗಿಲೋ ಅಥವಾ ಬೇರೆಯೋ ಗೊಂದಲವಾಯಿತು. ಆ ಬಾಗಿಲಿಗಡ್ಡವಾಗಿ ಮತ್ತೊಂದು ಭರ್ಜರಿ ಪೀಠದಲ್ಲಿ ಪೊಗದಸ್ತಾಗಿ ಹೊಟ್ಟೆ ಬೆಳೆಸಿಕೊಂಡ ಕಪ್ಪು ಮೈಯವನೊಬ್ಬ ಕೂತಿದ್ದ. ಪ್ರಾಯಶಃ ಇಬ್ಬರೂ ಆಪ್ತಮಿತ್ರರಿರಬೇಕು. ಅಂತಹದ್ದೇ ಭರ್ಜರಿ ಮೀಸೆ. ದೇಹವನ್ನು ಸುತ್ತುವರೆದಿರುವ ಒಂದು ಕಪ್ಪು ತುಂಡು ಪಂಚೆ. ತನ್ನ ಭಾರೀ ಗಾತ್ರದ ದೇಹವನ್ನು ಡೊಂಬರಾಟದವರಂತೆ ಜೀಕುತ್ತಾ ಪೀಠದೊಳಗೆ ಪ್ರಯಾಸದಿಂದೂರಿ, ಒಂಟಿ ಪೃಷ್ಠವನ್ನೆತ್ತಿ ಹೊಯ್ದಾಡುತ್ತಾ, ಕತ್ತೆತ್ತಿ, ಚೂಪು ಕಣ್ಣನ್ನು ಆಜಾನುಬಾಹುವಿನತ್ತಲೇ ನೆಟ್ಟು ಕುಳಿತಿದ್ದ. ಅವನ ಕೈಯಲ್ಲೂ ಒಂದಷ್ಟು ಚೀಟಿಗಳು. ಏನಿದು? ಚೀಟಿ ವ್ಯವಹಾರಿಗಳ ಮಧ್ಯೆ ನಾನೇನಾದರೂ ಸಿಕ್ಕಿಕೊಂಡಿರುವೆನೆ?
ಅಷ್ಟರಲ್ಲಿ ಅವನ ಮುಂದೆ ಧೊಪ್ಪನೆ ಹೆಣವೊಂದು ಬಂದು ಬಿತ್ತು! ಆಪ್ತಮಿತ್ರ ಕೆಳಗಿದ್ದ ಹೆಣವನ್ನು ಸೂಕ್ಮವಾಗಿ ಪರೀಕ್ಷಿಸಿ, ಚೀಟಿ ಹರಿದು ಬಿದ್ದವನ ಕೈಗಂಟಿಸಿ, ಇಕ್ಕಟ್ಟಾದ ಬಾಗಿಲ ಮೂಲಕ ಅಡ್ಡಡ್ಡವಾಗೆಳೆದು ಹೊರದೂಡುವಂತೆ ಯಾರಿಗೋ ಆಜ್ಞಾಪಿಸಿ ಮತ್ತೆ ಕತ್ತೆತ್ತಿ ಆಜಾನುಬಾಹುವನ್ನು ನೋಡತೊಡಗಿದ. ಓಹೋ, ಆಜ್ಞಾಧಾರಕನೆ?
ಎಲ್ಲವೂ ವಿಚಿತ್ರವೆನ್ನಿಸಿತು. ಯಾರೋ ಒಂದಷ್ಟು ಹೆಣಗಳನ್ನು ದರದರ ಎಳೆದುಕೊಂಡು ಬರುವುದೂ, ಈ ಆಜ್ಞಾಧಾರಕ ಚೀಟಿಯಂಟಿಸಿ ಅವನ್ನು ಬಾಗಿಲಾಚೆ ದೂಡುವಂತೆ ಮತ್ಯಾರಿಗೋ ಆಜ್ಞಾಪಿಸುವುದೂ ನಡೆಯುತ್ತಲೇಯಿತ್ತು. ಒಂದು ನಿಮಿಷ ಪುರುಸೊತ್ತಿಲ್ಲದಂತೆ ನಿರಂತರವಾಗಿ ಗೇಟ್‌ಪಾಸ್ ಪಡೆದು ಸಾಲಾಗಿ ಹೆಣಗಳು ಇಕ್ಕಟ್ಟಾದ ಬಾಗಿಲ ಮೂಲಕ ದಬ್ಬಿಸಿಕೊಂಡು ಎತ್ತಲೋ ಕಣ್ಮರೆಯಾಗಿ ಹೋಗುತ್ತಿದ್ದವು.
ಸುಂದರ ಬೆಳಕಿನ ಕಣ್ಣು ಕೋರೈಸುವ ಮಾಯಾಲೋಕವೊಂದು ಅಲ್ಲಿರಬಹುದೆ? ಆ ಬಾಗಿಲಾಚೆ ಹೋಗಿ ನೋಡಬೇಕೆನ್ನಿಸಿತು. ಸೀದಾ ಅವನಿದ್ದಲ್ಲಿಗೆ ಹೋಗಿ ಕೇಳೋಣವೆಂದರೆ, ಮುಂದೆ ಹೆಜ್ಜೆಯಿಡಲು ಸಾಧ್ಯವಾಗದಂತೆ ಎದುರಿಗೇ ಅಗೋಚರ ಕಂದರವೊಂದು ಉದ್ಭವಿಸಿದಂತೆ ಭಾಸವಾಗತೊಡಗಿತು. ಯಾರನ್ನಾದರೂ ಕೇಳಲೆಂದು ಮಗ್ಗುಲು ಹೊರಳಿ ನೋಡಿದೆ. ಈ ನಡುವೆ ಆಜಾನುಬಾಹುವೂ ಎಲ್ಲೋ ಮರೆಯಾಗಿ ಹೋಗಿದ್ದ. ಸಾಗುವ ದಾರಿಯೊಂದು ಸಟ್ಟನೇ ಕಡಿದುಕೊಂಡಂತಾಗಿ ಎಲ್ಲಿ, ಎತ್ತ, ಹೇಗೆ ಸಾಗಬೇಕು ತಿಳಿಯದೇ ನಿಂತಲ್ಲೇ ನಿಂತುಕೊಂಡೆ!
ಕಣ್ಣು ಹಾಯಿಸಿದಷ್ಟು ದೂರಕ್ಕೂ ಒಂದೇ ಸಮನೆ ಹಿಂಡುಗಟ್ಟಲೆ ಬಂದುಬೀಳುತ್ತಿರುವ ನಿಶ್ಚೇಷ್ಟ ಹೆಣಗಳ ರಾಶಿಗಳು ಮತ್ತು ಜೀವಚ್ಛವದಂತೆ ಓಡಾಡುತ್ತಿರುವ ನಿರ್ಲಿಪ್ತ ಆಕೃತಿಗಳು! ಇಡೀ ಆಯಕಟ್ಟು ಅವುಗಳಿಂದಲೇ ಕಿಕ್ಕಿರಿದು ಕಿಷ್ಕಿಂಧೆಯಂತಾಗಿತ್ತು. ಆಶ್ಚರ್ಯವೆಂದರೆ ಹೆಣಗಳಾಗಲೀ, ಜೀವಚ್ಚವದಂತೆ ಓಡಿಯಾಡುತ್ತಿರುವ ಆಕೃತಿಗಳಾಗಲೀ ಧ್ವನಿ ತೆಗೆದು ಮಾತನಾಡದಿದ್ದರೂ ಯಾವುದೋ ಭಯಂಕರ ಸದ್ದು ನಿರಂತರವಾಗಿ ಮೊಳಗುತ್ತಿರುವಂತೆಯೂ ಮತ್ತು ಆ ಸದ್ದು ನನ್ನ ಮಗ್ಗುಲಲ್ಲೇ ಮೂಡಿದಂತೆಯೂ ಭಾಸವಾಗುತ್ತಿತ್ತು. ಯಾರೋ ವಿಕಾರವಾಗಿ ರೋದಿಸುತ್ತಿರುವ ಶಬ್ದ, ನನ್ನ ಅತ್ಯಂತ ಸಮೀಪದಲ್ಲೇ ಹುಟ್ಟಿಕೊಂಡ ಆಕ್ರಂದನ! ಏನು ಕೂಗಿದು? ನನ್ನ ಕಾಲ ಬುಡದಲ್ಲೇ ಯಾರೋ ಎದೆ ಬಡಿದುಕೊಂಡು ಕೂಗುತ್ತಿರುವಂತೆ! ನನ್ನೊಳಗಿನ ದನಿಯೆ?
ಫಕ್ಕನೇ ಕಾಲು ನೋಡಿದೆ. ನೋಡ ನೋಡುತ್ತಿದ್ದಂತೆ ನನ್ನ ಅಡಿಯಿಂದ ಏನೋ ಮೃದುವಾಗಿ ಅಲ್ಲಾಡಿದಂತೆನ್ನಿಸಿ ಬಗ್ಗಿದರೆ, ಸುದೀರ್ಘವಾದ ಎರಡು ಕಾಲುಗಳು! ಅವು ಈ ಮೊದಲೇ ಇದ್ದವೋ, ಇಲ್ಲಾ ಹೊಸದಾಗಿ ಮೊಳೆತವೋ ಅರಿವಾಗುವುದಕ್ಕೆ ಮುಂಚೆಯೇ ಇದ್ದಕಿದ್ದಂತೆ ಕೊರಡಾಗಿ ಮರದ ಗಳದಂತಾದವು! ಒಳಗೇನೋ ತಣ್ಣಗಿನ ವಸ್ತು ಸಂಚರಿಸಿದ ಅನುಭವ. ಮೈಯೆಲ್ಲಾ ಮಂಜುಗಡ್ಡೆಯಂತೆ ಕೊರೆಯುತ್ತಿರುವಂತೆ ಅನ್ನಿಸಿತು. ನನ್ನ ಸುತ್ತಮುತ್ತ ಆಕೃತಿಗಳು ಸುತ್ತುಗಟ್ಟುತ್ತಿವೆಯಲ್ಲಾ? ಹೊಸಬನೆಂದೆ? ಇರಲಿಕ್ಕಿಲ್ಲ, ಯಾವುದೇ ಹೊಸತನ್ನು ಗುರುತಿಸುವ ಚೈತನ್ಯ ಅವುಗಳಿಗಿದ್ದಂತಿರಲಿಲ್ಲ.
‘ನೀನೀಗ ನಿರ್ಜೀವವಾಗಿದೀಯಾ!’ – ಒಂದು ಸ್ಪಷ್ಟ ಅಪರಿಚಿತ ದನಿ ನನ್ನ ಮುಂದಿನಿಂದ ಕೇಳಿಸಿತು. ಅಂದರೆ ಸತ್ತೆನೆಂದು ನನ್ನ ಸಾವನ್ನು ಎಂದೋ ಯಾರೋ ಘೋಷಿಸಿದಾಗ ನಾನು ಸತ್ತಿರಲಿಲ್ಲವೇ? ಹಾಗಾದರೆ ಮುಸುಕಿನೊಳಗೆ ಅಸ್ಪಷ್ಟವಾಗಿ ಕೇಳಿದ್ದು ಯಾರ ದನಿ? ಹೆಣವಾಗಿ ಮಲಗಿದ್ದಾಗಲೂ ನಿರ್ಜೀವವಾಗಿರಲಿಲ್ಲವೆಂದರೆ? ತೀರಾ ಗೋಜಲು, ಗೋಜಲಾಗಿ ತಕ್ಷಣ ಅಲ್ಲಿಂದ ತಪ್ಪಿಸಿಕೊಳ್ಳಬೇಕೆನ್ನಿಸಿತು. ಓಡಲು ಪ್ರಯತ್ನಿಸಿದರೆ ಓಡಲೇ ಆಗುತ್ತಿಲ್ಲವಲ್ಲಾ!
ನಿರ್ಲಿಪ್ತ ಆಕೃತಿಯೊಂದು ಪ್ರಯಾಸದಿಂದ ಎಳೆದುಕೊಂಡು ಹೋಗುತ್ತಿದ್ದ ಹೆಣವೊಂದನ್ನು ನನ್ನೆದುರು ಕೆಡವಿ, ‘ಇದನ್ನು ತೆಕ್ಕೊಂಡೋಗಿ ಅಲ್ಲಿ ಕುಳಿತಿರೋನಿಗೆ ಕೊಡು! ಇನ್ಮೇಲೆ ಇದೇ ನಿನ್ನ ಕೆಲ್ಸಾ!’ ಎಂದಿತು.
ಹೆಣ ಎತ್ತುವ ಕೆಲಸವೇ? ಶಿಟ್! ಗೊಣಗಿ, ಕೊರಡಿನಂತಾದ ಗಳದ ಕಾಲೆತ್ತಲು ಹೋದರೆ ಅವೂ ಮಣಭಾರ! ಜೊತೆಗೆ ಹೆಣಭಾರ! ಈ ಕಾಯಕಕ್ಕೆ ಸತ್ತು ಬಂದೆನೇ? ಅದನ್ನು ಎಳೆಯುತ್ತಾ ಯಾವುದೋ ದಿಕ್ಕಿನಲ್ಲಿ ತಿರುಗಿ, ತೆವಳುತ್ತಾ ಮತ್ತೊಂದು ಅಗೋಚರ ದಾರಿಯಲ್ಲಿ ಸಾಗಿದೆ. ಎಷ್ಟು ಸವೆದರೂ ಮುಂದಿನ ಗಮ್ಯ ಕಾಣದೆ ತನ್ನಷ್ಟಕ್ಕೇ ಹಿಗ್ಗುತ್ತಾ ಹೋಗುತ್ತಿರುವ ಕೊನೆ ಮೊದಲಿಲ್ಲದ ಹಾದಿ. ಯಾವ ಯಾವುದೋ ಸಂದಿಗೊಂದಿಗಳು, ಕೈಗೆ ಕಾಲಿಗೆ ಅಡರುವ ಹೆಣಗಳು! ಎಲ್ಲೋ ಒಂದು ಕಡೆ ಮತ್ತೆ ದಾರಿ ಸಿಕ್ಕಂತಾಗಿ ನೋಡಿದರೆ ಎದುರಿಗೆ ಮತ್ತದೇ ಆಜಾನುಬಾಹು! ಹೆಣವನ್ನು ಅವನ ಮುಂದೆ ಕೊಡವಿ ನಿಂತೆ.
‘ನೀನೀಗ ನಮ್ ಗೆಳೆಯನಾಗಿದೀಯಾ!’ ಮತ್ತೊಂದು ಸ್ಪಷ್ಟ ದನಿ ಹಿಂದಿನಿಂದ ಕೇಳಿಸಿತು. ಅದು ಅಗತ್ಯವೋ ಅನಗತ್ಯವೋ ಯಾರಿಗೆ ಗೊತ್ತು.
ಆಜಾನುಬಾಹು ನನ್ನನ್ನು ಗಮನಿಸಿದಂತೆ ಕಾಣಲಿಲ್ಲ. ಅವನ ಹಾರಾಟ, ಚೀರಾಟ ಮೊದಲಿಗಿಂತಾ ಜಾಸ್ತಿಯಾದಂತಿತ್ತು. ಅವನನ್ನು ಅಷ್ಟು ಹತ್ತಿರದಲ್ಲಿ ನೋಡಿದ್ದಕ್ಕೆ ಹಾಗೆನ್ನಿಸುತ್ತಿದೆಯೇ? ಅವನ ಮುಂದೆ ದೈನೇಸಿಯಾಗಿ ಬಾಗಿ ನಿಂತೆ.
‘ನನ್ನನ್ನು ಬಿಟ್ಟುಬಿಡು. ನಾನು ಹೊರಹೋಗುತ್ತೇನೆ!’. ಮೆಲ್ಲನೆಂದೆ. ಕಾರ್ಯದಲ್ಲಿ ಮಗ್ನನಾಗಿದ್ದ ಅಜಾನುಬಾಹುವಿಗೆ ನನ್ನ ಮಾತು ಕೇಳಿಸಿರಲಿಕ್ಕಿಲ್ಲ. ಮತ್ತೆ ಅದನ್ನೇ ಹೇಳಿದೆ. ಒಂದು ಕ್ಷಣ ಮಾಡುತ್ತಿದ್ದ ಕೆಲಸ ಬಿಟ್ಟು ನನ್ನನ್ನೊಮ್ಮೆ ಅಪಾದಮಸ್ತಕ ನಿಟ್ಟಿಸಿ,
‘ಯಾರಯ್ಯ ನೀನು? ನಿನ್ನ ಹೆಸರೇನು?’ ಸಿಟ್ಟಿನಿಂದಲೇ ಗುಡುಗಿದ.
ಈ ಮೊದಲು ಯಾಕಿದು ಹೊಳೆದಿರಲಿಲ್ಲ! ಹೌದು, ಯಾರು ನಾನು? ನನ್ನ ಹೆಸರೇನು? ನಿಜಕ್ಕೂ ಫಜೀತಿಗಿಟ್ಟುಕೊಂಡಿತು. ನಾನು ಕೂಡಾ ಯಾರಾದರೂ ಆಗಿರಬಹುದಾದ ಮತ್ತು ಆಗಿರಲೇಬೇಕಾದ ಸಾಧ್ಯತೆಗಳೊಂದೂ ನೆನಪಿನಲ್ಲಿ ಉಳಿಯದಿರುವುದು ಎಂತಹ ಆಶ್ಚರ್ಯ! ಫಕ್ಕನೇ ನನ್ನನ್ನು ಹೊತ್ತು ತಂದ ಕಟ್ಟುಮಸ್ತಾದ ನಾಲ್ಕಾಳುಗಳು ನೆನಪಾದರು. ಮಧ್ಯಾಹ್ನದ ಸುಡುಬಿಸಿಲಿನಲ್ಲಿ ನನ್ನನ್ನು ಹೊತ್ತ ನಾಲ್ಕು ಭುಜಗಳು ಸರದಿಗಾಗಿ ಕಾಯುತ್ತಾ ನಿಂತಾಗ, ಮುಂದಿನವನೋ ಹಿಂದಿನವನೋ ಕಾದು ಬೇಸತ್ತು, ಆಕಳಿಸುತ್ತಾ, ‘ಯಾರದಯ್ಯಾ ಹೆಣ?’ ಎಂದು ಕೇಳಿದ್ದರೆ ನಾಲ್ಕರಲ್ಲಿ ಒಂದಾದರೂ ನನ್ನ ಹೆಸರು ಉಲಿಯುತ್ತಿತ್ತೇನೋ? ಯಾರಿಗೆ ಗೊತ್ತು, ಅವು ಉಲಿಯುವ ಹೆಸರಿಗೂ ಚಟ್ಟದ ಮೇಲೆ ಮಲಗಿರುವ ನನಗೂ ಸಂಬಂಧವೇಯಿಲ್ಲದಿರಬಹುದು. ಅಥವಾ ಒಂದು ಕ್ಷಣ ಕೈ ಬಿಡುವಾಗಿದ್ದೇ ಸಾಕೆನ್ನುವಂತೆ ರಪರಪ ಅಂಡು ಕೆರೆದುಕೊಳ್ಳುತ್ತಾ, ‘ಯಾರಿಗೆ ಗೊತ್ತಯ್ಯಾ? ಯಾವ್ನೋ ಕಳ್ಳ್ ಬಡ್ಡೀಮಗಂದು! ಬದುಕ್ದಾಗ ಅದ್ಯೇನ್ ಮಾಡಿದ್ನೋ! ಬೇವಾರ್ಸಿ ನನ್ಮಗಂದ್ ಭಲೇ ಭಾರ ಹೆಣ!’ – ಉಸ್ಸೆಂದು ಉಸಿರು ಬಿಟ್ಟು ಮತ್ತೆ ಭುಜದಿಂದ ಭುಜಕ್ಕೆ ಬದಲಾಯಿಸುತ್ತಿದ್ದನೇನೋ!
‘ಸತ್ತಾಗ ನಿಂಗೆಷ್ಟಯ್ಯಾ ವಯಸ್ಸು?’
ಮಟಮಟ ಮಧ್ಯಾಹ್ನದಂದು ನನ್ನ ಪಾರ್ಥಿವ ಶರೀರವನ್ನು ಚಟ್ಟದಲ್ಲಿ ಮಲಗಿಸುವಾಗ, ‘ಮಧ್ಯಾಹ್ನ ಮೂರಕ್ಕೆ ಅಂತಿಮಯಾತ್ರೆ!’ ಎಂದು ಮುದಿ ದನಿಯೊಂದು ನಡುಗುತ್ತಾ ಘೋಷಿಸಿದ್ದು ಬಿಟ್ಟರೆ, ಸುತ್ತಲೂ ಅಳುವ, ಕಿರಿಚುವ ನಾನಾ ಸ್ವರಗಳಲ್ಲಿ ನನ್ನ ವಯಸ್ಸಿನ ಬಗ್ಗೆಯಾಗಲೀ, ನನ್ನ ಬಗ್ಗೆಯಾಗಲೀ ಯಾರೂ ಚಕಾರವೆತ್ತಿದ್ದು ನೆನಪಾಗುತ್ತಿಲ್ಲ. ಆ ಗಲಾಟೆ ನೆನೆದರೆ ಪ್ರಾಯಶಃ ಸಾಯುವ ವಯಸ್ಸಾಗಿರಲಿಕ್ಕಿಲ್ಲವೇನೋ!
‘ಹೆಂಗೆ ಸತ್ತೆ? ನ್ಯಾಚುರಲ್ ಡೆತ್ತಾ?’
ಇವೆಲ್ಲಾ ಮೊದಲೇ ಗೊತ್ತಿದ್ದರೆ ಇಂತಹ ಪ್ರಶ್ನೆಗಳಿಗೆಲ್ಲಾ ಸಿದ್ಧ ಉತ್ತರವಿಟ್ಟುಕೊಂಡೇ ಬರಬಹುದಿತ್ತೇನೋ! ಸಾವಿನಲ್ಲೂ ಸ್ವಾಭಾವಿಕ, ಅಸ್ವಾಭಾವಿಕವೇ? ಸತ್ತಿದ್ದು ಖಾತ್ರಿಯಾದ ಮೇಲೆ ಸಾವಷ್ಟೇ ನಿಜವಲ್ಲವೇ? ನನ್ನಲ್ಲಿ ಯಾವ ಕುಂದುಕೊರತೆಯೂ ಕಾಣಿಸುತ್ತಿಲ್ಲವಾದ್ದರಿಂದ ಸಹಜ ಸಾವಿರಬೇಕು. ಸತ್ತ ನಂತರ ನ್ಯಾಚುರಲ್, ಅನ್‌ನ್ಯಾಚುರಲ್ ಕ್ಯಾಟಗೆರಿಯಾದರೂ ಯಾವುದು?
‘ನಿನ್ನ ನಂಬರೆಷ್ಟು?’
ಒಂದು ಕ್ಷಣ ಗಲಿಬಿಲಿಯಾಯಿತು. ಏನು ಹಾಗಂದರೆ? ಯಾವ ನಂಬರ್ ಕೇಳುತ್ತಿದ್ದಾನೆ? ಏನೊಂದೂ ಅರ್ಥವಾಗದೇ, ‘ಸ್ವಾಮಿ, ಸ್ವಲ್ಪ ರಿಜಿಸ್ಟರ್ ತೆಗೆದು ನೋಡಿ. ತಮಗೇ ಗೊತ್ತಾಗುತ್ತೆ’. ಮನಸ್ಸಿನಲ್ಲಿದ್ದಿದ್ದು ಬಹಿರಂಗಗೊಳಿಸಿದ್ದೇ, ಸರಕ್ಕನೆ ಕೆಂಡಾಮಂಡಲನಾದ ಆಜಾನುಬಾಹು, ಕುಳಿತಲ್ಲಿಂದ ಧಡಕ್ಕನೆದ್ದು,
‘ಏಯ್, ಮುಚ್ಕಂಡ್‌ಯಿದ್ದೇಂದ್ರೆ ನಿಂಗೊಂದು ಗತಿ ಕಾಣ್ಸೋದು! ಇಲ್ಲಾಂದ್ರೆ ಇದೇ ಗತಿ! ಸತ್ತು ಮೂರ್ ದಿನ ನೆಟ್ಟಿಗಾಗಿಲ್ಲ, ನ್ಯಾಯ ಕೇಳೋಷ್ಟು ತಿಮಿರಾ! ಅಷ್ಟು ಆಯಸ್ಸಿತ್ತಲಾ ಅದೇನ್ ಗಂಟ್ ಕಡ್ದು ಬಂದೆ ನೀನ್? ಎಂತೆಂತಾ ಹೆಣಗಳ್ ಬಂದ್ ಬೀಳತಾವಿಲ್ಲಿ! ಒಂದ್ ಪುಟ್ಕೋಸಿ ನ್ಯಾಚುರಲ್ ಡೆತ್‌ಯಿಟ್ಕಂಡ್ ಬಂದಿಯಲಾ? ಒಂದ್ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಅಪಘಾತ! ಒಂಚೂರಾದ್ರೂ ಗ್ಲಾಮರ್ ಬೇಡ್ವಾ!
ಧರ್ಮಕ್ಕಾಗಿ ಮಹಾಯುದ್ಧವೇ ನಡೆತಾಯಿದೆ! ನಿಮಿಷ್ ನಿಮಿಷ್ಕೂ ಜಿಹಾದಿ ಹೆಸ್ರಲ್ಲಿ ಎಳೇ ಲಿಂಬೆಹಣ್ಣಿನಂತ ಬಿಸಿರಕ್ತದ ಹುಡುಗ್ರ ಹೆಣ ಲಾಟ್ಗಟ್ಲೆ ಬಂದ್ ಬೀಳ್ತಾಯಿದಾವೆ! ಎಡ–ಬಲ, ಮುಗ್ಧರು, ಉಗ್ರರು, ನಕ್ಸಲೇಟರು, ಪ್ರತ್ಯೇಕವಾದಿಗಳು, ಸೂಸೇಡ್ ಬಾಂಬರ್‌ಗಳು, ಆಕ್ರಮಣಧಾರಿಗಳೂಂತಾ ಒಂದು ಕ್ಷಣ ಪುರುಸೊತ್ತಿಲ್ದಂಗೆ ದಾಳಿಯಿಡ್ತಾಯಿದಾವೆ! ಅಂತವನ್ನೇ ಎಲ್ಲ್ ದಬ್ಬೋದೂಂತಾ ಇತ್ಯರ್ಥವ್ಗಾತ್ತಾಯಿಲ್ಲ! ಪವಿತ್ರ ಭಗವಂತನ್ನ ಹೆಸರಲ್ಲಿ ಜೀವ ತೆಗ್ದು, ಜೀವ ಬಿಡೋರ್ರೇ ಹಿಂಡ್‌ಗಟ್ಲೆಯಿರುವಾಗ ನಿಂದೇನು ಸಾವ್ ಹೋಗಯ್ಯಾ! ನಂಬರ್ ಕೂಡಾ ಗೊತ್ತಿಲ್ಲ, ಮಾತಾಡ್‌ತಾನೆ!’ – ಮುಂದಿದ್ದ ಅಗಾಧ ರಿಜಿಸ್ಟರ್ ರಾಶಿಗಳನ್ನು ಸರಕ್ಕನೆ ಬದಿಗೊತ್ತಿ, ನನ್ನ ಇರುವಿಕೆಯನ್ನು ಸಂಪೂರ್ಣ ಮರೆತು ಕಾಲ್ಮೇಲೆ ಕಾಲು ಹಾಕಿ ಹಿಂಬದಿಯ ಪೀಠಕ್ಕೊರಗುತ್ತಾ ಚೂಪುಗಣ್ಣನ್ನು ಎತ್ತಲೋ ತಿರುಗಿಸತೊಡಗಿದ ಆಜಾನುಬಾಹು!
‘ನೀನೀಗ ನಮ್ಮಂತೆ ಸಮಾನ ದುಃಖಿ!’. ನನ್ನ ಹಿಂದೆ ಸ್ಪಷ್ಟವಾಗಿ ಮೊಳಗಿದ ಸಂತಾಪದ ದನಿ. ಮತ್ತದೇ ಇಕ್ಕಟ್ಟಾದ ಹಾದಿ, ಎಲ್ಲೆಂದರಲ್ಲಿ ಧುತ್ತೆಂದು ಎದುರಾಗುವ ಬೃಹದಾಕಾರದ ಗೋಡೆಗಳು, ಸಾಲು ಹಿಡಿದು ನಿಂತ ನಾನಾ ಆಕಾರದ ಆಕೃತಿಗಳ ನಿಸ್ತೇಜ ಕಣ್ಣುಗಳು, ಮತ್ಯಾರೋ ಮತ್ತೆಲ್ಲೋ ದರದರ ಎಳೆದುಕೊಂಡು ಹೋಗುತ್ತಿರುವ ನಿಶ್ಚೇಷ್ಟ ಹೆಣಗಳು!
ಯಾರು ನಾನು? ಇಲ್ಲಿಗ್ಯಾಕೆ ಬಂದೆ? ಎಲ್ಲಿಗೆ ಹೋಗಬೇಕಿತ್ತು? ಇದೇನು ಸ್ವರ್ಗವೇ, ನರಕವೇ, ತ್ರಿಶಂಕು ಸ್ಥಿತಿಯೇ? ಸಹಜ ಸಾವು ಸಾವಲ್ಲವೇ? ಅರೆಬರೆ ಕತ್ತಲಲ್ಲಿ ಎಲ್ಲವೂ ಮಸುಕು ಮಸುಕಾಗಿ ಗೋಜಲಾಗತೊಡಗಿತು. ನಂಬರ್ ಅಂದರೇನು? ಈ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುವ ಮತ್ತೊಂದು ಅಗೋಚರ ವಸ್ತುವೇ? ಅಥವಾ ಕೈಗೆ ಸಿಗುವಂತಹ ಸ್ಪಷ್ಟವಾದ ನಿಖರ ವಸ್ತುವೇ? ಮೃದುವಾದ, ಸುಂದರ ವಸ್ತುವೊಂದು ನಿಧಾನವಾಗಿ ಆಕಾರ ಪಡೆದುಕೊಳ್ಳುತ್ತಾ ಪಕ್ಕದಲ್ಲಿ ಉರುಳಿಬಂದಂತೆ ಭಾಸವಾಯಿತು. ಅದಕ್ಕೊಂದು ನಿಖರ ರೂಪ ಕೊಡಲು ಸಾಧ್ಯವಾಗದಿದ್ದರೂ, ದುಂಡಗಿನ ಸುರುಳಿ ಸುರುಳಿಯಾದ ವೃತ್ತಾಕಾರದಲ್ಲಿ ಚಲಿಸಿದಂತೆನ್ನಿಸಿ, ಪ್ರಾಯಶಃ ಅದೇ ನಂಬರಾಗಿರಬಹುದೆನ್ನಿಸಿದ್ದೇ ಗಬ್ಬಕ್ಕನೆ ಅದನ್ನು ಹಿಡಿಯಲು ಪ್ರಯತ್ನಿಸಿದೆ. ಆದರೆ ಕೈ ಹಾಕಿದ ಹಾಗೂ ಅದು ದೂರ ಓಡುತ್ತಿತ್ತು. ನಿರುಪಾಯನಾಗಿ ಸಿಕ್ಕ ಆಕೃತಿಗಳನ್ನೆಲ್ಲಾ ವಿಚಾರಿಸತೊಡಗಿದೆ. ಆದರೆ ಅವುಗಳ ನಿಸ್ತೇಜ ಪ್ರತಿಕ್ರಿಯೆಯಿಂದ ಇದ್ದಿರಬಹುದೆಂದುಕೊಂಡ ಅಂತಹದನ್ನು ಇಲ್ಲವೆನ್ನಿಸುವ ನಿಶ್ಚೇಷ್ಟದಿಂದ ಇನ್ನಷ್ಟೂ ಗೊಂದಲವಾಯಿತು. ಆದರೂ ಪ್ರಯತ್ನ ಬಿಡದೆ ಕೈ ಕಾಲಿಗೆ ತೊಡರುವ ಪ್ರತಿಯೊಂದನ್ನೂ ವಿಚಾರಿಸತೊಡಗಿದೆ.
‘ನಮ್ದು ಬೆಳೀತಿರೋ ಸಂಖ್ಯೆಗಳ ಸಂಖ್ಯೆ!’ ಸ್ಪಷ್ಟ ದನಿಯೊಂದು ಉತ್ತರಿಸಿತು.
‘೦೦೦೦೦೦೦೦೦೦೦೦೦೦೦೦೦೦೦೦೦೦...... ಅಸಂಖ್ಯಾತಕ್ಕೆ ಮತ್ತೊಂದು ಸೊನ್ನೆ ಸೇರಿಸಿದ್ರೆ ನಿನ್ನ ಸಂಖ್ಯೆ!’
ಅಂದರೆ ಸೊನ್ನೆಗಳ ಸಾಮ್ರಾಜ್ಯದಲ್ಲಿ ನಾನಿದ್ದೇನೆ! ಬರೀ ಶೂನ್ಯ ಸಂಪಾದನೆ! ಸೊನ್ನೆ, ಸೊನ್ನೆ, ಸೊನ್ನೆ ಸೊನ್ನೆ... ಎಂದು ಪಠಿಸತೊಡಗಿದೆ. ಬೃಹಾದಾಕಾರದಲ್ಲಿ ಬೆಳೆಯುತ್ತಿರುವ ಪ್ರತಿ ಸೊನ್ನೆಯ ನಂತರ ಇನ್ನೆಷ್ಟು ಸೊನ್ನೆ ತಿಳಿಯದೇ ಕೈಕೊಡುತ್ತಿದ್ದವು, ಇಲ್ಲಾ ಉರುಳಿಹೋಗುತ್ತಿದ್ದವು! ಆದರೂ ತನ್ಮಯತೆಯಿಂದ ಆ ಸೊನ್ನೆಗಳನ್ನೆಲ್ಲಾ ಉರುಹೊಡೆದು ಸ್ವಾಧೀನಗೊಳಿಸಿಕೊಂಡ ಮೇಲೆ ಅದು ಚೆನ್ನಾಗಿ ನನ್ನಲ್ಲಿ ಬೇರೂರಿತು. ಅಸಂಖ್ಯಾತ ಸೊನ್ನೆಗಳ ಪ್ರಭುತ್ವ ಸಾಧಿಸಿದ ನಂತರ, ಅವೆಲ್ಲವೂ ನನ್ನದೇಯೆಂದು ನಿಖರವಾದ ಮೇಲೆ ಮತ್ತೆ ಆಜಾನುಬಾಹುವಿನ ಬಳಿ ಹೋಗಲು ತಡಮಾಡಲಿಲ್ಲ.
ತಮಾಷೆಯೆಂದರೆ, ಕೈಗೆಟುಕುವ ಅಂತರದಲ್ಲಿ ಆಜಾನುಬಾಹು ಗೋಚರಿಸುತ್ತಿದ್ದರೂ, ಎಷ್ಟು ನಡೆದರೂ ಅವನ ಸನಿಹ ತಲುಪಲು ಸಾಧ್ಯವಾಗುತ್ತಿಲ್ಲ! ಎಂಥಾ ಸೋಜಿಗ! ಈ ಮಧ್ಯೆ, ಪ್ರತಿ ಹೆಜ್ಜೆಗೂ ಧುತ್ತೆಂದು ಎದುರಾಗುವ ಒಂದೊಂದು ಗೋಡೆಯೆದುರೂ ನಂಬರ್ ಉರುಳಿಹೋಗುತ್ತಿರುವ ಅನುಭವ, ಅಸಂಖ್ಯಾತ ಸೊನ್ನೆಗಳ ನಿರ್ದಿಷ್ಟ ಸಂಖ್ಯೆಗಳು ಸವೆಯುವ ಹಾದಿಯಲ್ಲಿ ಹಾರಿಹೋಗಿ, ನಂಬರೆಲ್ಲಿ ತಪ್ಪಿಹೋಗುವುದೋ ಅನ್ನುವ ದಿಗಿಲು. ಎಲ್ಲಿ ಹೋದ ಆಜಾನುಬಾಹು?
ಕಿರು ಓಣಿ ಬಳಸಿ ಕಡಿದಾದ ಹಾದಿ ದಾಟಿ, ತೀಕ್ಷ್ಣ ಬೆಳಕಿಗೆ ಅಭಿಮುಖವಾಗುತ್ತಿದ್ದಂತೇ, ಕಣ್ಣು ಕಿರಿದುಗೊಳಿಸಿ ನೋಡಿದರೆ ಮತ್ತೆ ಹೊರ ಬಾಗಿಲೆದುರು ನಿಂತಿದ್ದೇನೆ! ಆಜಾನುಬಾಹುವಿನ ಆಪ್ತಮಿತ್ರನ ಪೀಠದ ಬಳಿ! ಸಖೇದಾಶ್ಚರ್ಯದಿಂದ ಅವನನ್ನೇ ನೋಡುತ್ತಾ, ಭಯಭಕ್ತಿಯಿಂದ ಕೈ ಮುಗಿದು, ‘ಸ್ವಾಮಿ, ನಾನು ಹೊರಗೆ ಹೋಗಬೇಕು!’ ವಿನಮ್ರವಾಗಿ ವಿನಂತಿಸಿಕೊಂಡೆ. ಇವನೂ ಏನೂ ಕಮ್ಮಿಯಿಲ್ಲ. ಮಹಾ ಸಿಟ್ಟಿನವನೇ! ಕೊಪ್ಪರಿಕೆಯೊಳಗಿನ ಅಡಿಕೆಯಂತೆ ಕುದಿಯುತ್ತಿದ್ದ!
‘ಯಾರಯ್ಯಾ ನೀನ್? ಎಲ್ಲಿಗ್ ಹೋಗಬೇಕು?’ ಅಸಹನೆಯಿಂದಲೇ ಸಿಡುಕಿದ.
‘ಆರ್ಡರ್ ಲೆಟರ್ ತಂದಿದೀಯಾ? ಎಲ್ಲಿ, ಕೊಡು!’
ಆರ್ಡರ್ ಲೆಟರೇ? ಏನು ಹಾಗಂದರೆ? ಯಾರಿಂದ, ಎಲ್ಲಿಗೆ, ಯಾವುದಕ್ಕೆ? ಏನಿದು, ಬರೀ ಗೊಂದಲಗಳೇ ತುಂಬಿವೆಯಲ್ಲಾ!
‘ಏನು ಲೆಟರ್?’ ಅಂಜುತ್ತಲೇ ಕೇಳಿದೆ.
‘ಆಜ್ಞಾಪತ್ರ! ಅಲ್ಲಿಂದಾಜ್ಞೆ ಬರೊವಗ್ಗೂ ಯಾರ್ನೂ ಆಚೆ ಕಳ್ಸೋಕ್ಕಾಗಲ್ಲಯ್ಯಾ!’. ಪೀಠದತ್ತ ಬೊಟ್ಟು ಮಾಡಿ ಗಡುಸಾಗಿ ಹೇಳಿದ.
‘ಯಾರು ಅವನು?’ ಸಟ್ಟನೇ ಹೊರಟ ಪ್ರಶ್ನೆಯಿಂದ ಅವನ ಸಿಟ್ಟು ಇಮ್ಮಡಿಗೊಂಡಿತು. ತಕ್ಷಣ ನೆನಪಾಗಿ, ‘ಸರ್, ನನ್ನ ನಂಬರ್...’ ಎಂದು ಹೇಳುವಷ್ಟರಲ್ಲಿ ‘ಏಯ್, ಹೋಗಯ್ಯಾ.! ಅದನ್ ನಿನ್ ತಿಕಕ್ಕೆ ಬಳ್ಕೋ!’ – ನನ್ನನ್ನು ಕಸವೇನೋ ಅನ್ನುವಂತೆ ದೂಡಿ ಮತ್ತೆ ತಲೆಯೆತ್ತಿ ಅತ್ತ ನೋಡತೊಡಗಿದ!
‘ನಿಂದೂ ನಮ್ಮಂಗೇ ವೈಟಿಂಗ್ ಲಿಸ್ಟ್!’, ನನ್ನ ಹಿಂದೆ ಉಲಿದ ಅದೇ ಸ್ಪಷ್ಟ ದನಿ! ವೈಟಿಂಗ್ ಲಿಸ್ಟಾ? ಎಲ್ಲವೂ ಆಯೋಮಯವೆನ್ನಿಸಿ, ಏನೂ ತೋಚದೆ ಅರೆಕೊರೆ ಕಂಡ ಅಂಕುಡೊಂಕಿನ ಕಿರುಹಾದಿ, ಇಕ್ಕಟ್ಟಾದ ಓಣಿ, ಬೃಹಾದಾಕಾರದ ಗೋಡೆಯನ್ನು ಎವೆಯಿಕ್ಕದೇ ದಿಟ್ಟಿಸುತ್ತಾ ನಿಂತೆ.
‘ಏಯೀ, ಕ್ಯೂನಲ್ಲಿ ಬಾಪ್ಪಾ!’ ಯಾರ ದನಿಯಿದು?
ಫಕ್ಕನೇ ಗೋಡೆಯಲ್ಲಿ ಸಣ್ಣ ಚಲನೆ ಕಂಡಂತಾಗಿ ಕಣ್ಣು ಕಿರಿದುಗೊಳಿಸಿ ನೋಡಿದೆ. ಮೊದಲ ಬಾರಿಗೆ ಅದು ಗೋಡೆಯಲ್ಲವೆಂದು ಸ್ಪಷ್ಟವಾಗುತ್ತಿದ್ದಂತೆ ಅದರ ಅತ್ಯಂತ ಹತ್ತಿರ ಸರಿದು ನಿರುಕಿಸಿದೆ. ಎರಡು ಗಳಕ್ಕೆ ಜೋತು ಬಿದ್ದ ತಲೆಗಳ, ಅವೇ ನಿಸ್ತೇಜ ಕಣ್ಣುಗಳ ಅಸಂಖ್ಯಾತ ಆಕೃತಿಗಳು ಒಂದರ ಹಿಂದೊಂದು ಒತ್ತೊತ್ತಾಗಿ ಬೃಹಾದಾಕಾರದ ಗೋಡೆಯೇನೋ ಎಂಬಂತೆ ಹನುಮಂತನ ಬಾಲದೋಪಾದಿಯಲ್ಲಿ ಸಹಸ್ರಾರು ಮೈಲುಗಟ್ಟಲೆಯಲ್ಲಿ ನಿಂತು ಹೊರ ಬಾಗಿಲಾಚೆಯಿರುವ ಕೋರೈಸುವ ಜಗಕ್ಕೆ ಪ್ರವೇಶ ಪಡೆಯಲು ತಮ್ಮ ಸರದಿಗಾಗಿ ಚೀಟಿ ಹಿಡಿದು ಕಾಯುತ್ತಿದ್ದವು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.