(ವಿ.ಸೂ. ‘ಶ್ರೀವಧುವಿನಂಬಕಚಕೋರಕಂ ಪೊರೆಯೆ...’ ಎಂಬಂತೆ ವಾಚಿಸಬಹುದು)
ಹೀಗೊಂದು ರಾತ್ರಿಯಲಿ ಹಾಗೊಂದು ಅರೆಗನಸು:
ಗೋಡೆ ಮೇಲಿಳಿಬಿಟ್ಟ ಕಟ್ಟು ಹಾಕಿದ ಚಿತ್ರ
ಹುಲ್ಲು ಮೇಯುತ್ತಿದ್ದ ಕುದುರೆ ಕತ್ತನು ಚಾಚಿ
ಬೀರುವಿನ ಮೇಲಿದ್ದ ಪತ್ರಿಕೆಯನೆಳೆದಾಗ
ಪೇಪರಿನ ಚಿತ್ರದಿಂದಿಳಿದ ಒಂದಿಷ್ಟು ಜನ
ಚೂರಿಚೈನನು ಹಿಡಿದು ಜಲ್ಲಿಕಲ್ಲುಗಳೆತ್ತಿ
ಒಗೆದಾಡತೊಡಗಿದರೆ ನಮ್ಮ ಕಿಟಕಿಯ ಗಾಜು
ಪುಡಿಯಾಗಿ ಸಿಡಿಸಿಡಿದು ಕಿಡಿಹೊತ್ತಿ ಉರಿವಾಗ
ಮೈಬೆವರಿ ಉಬ್ಬರಿಸಿ ಉಸಿರು ನಿಂತಂತಾಗಿ
ಹೊರಗೋಡಲೆಂಬಂತೆ ಬಾಗಿಲೊಳು ಹೊಕ್ಕಾಗ
ಮೂಗು ಗೋಡೆಗೆ ಬಡಿದು ಅದು ಬಾಗಿಲಿನ ಚಿತ್ರ
ಮಾತ್ರವೆಂಬುದು ತಿಳಿದು ಕಿರುಚಿದ್ದು ಅದು ಸತ್ಯ;
ಕುದುರೆ ಸುಳ್ಳಿರಬಹುದು, ಮೆಂದದ್ದು ಸುಳ್ಳಲ್ಲ
ಬೆಂಕಿ ಕಿಡಿ ಸುಳ್ಳು ನಿಜ; ಬೆವರಿದ್ದು ಸುಳ್ಳಲ್ಲ
ಮಾತು ಸುಳ್ಳಿದ್ದೀತು ಅದರರ್ಥ ಸುಳ್ಳಲ್ಲ
ಕಥೆಯಾದರೇನಂತೆ ಕಥನವಿದು ಸುಳ್ಳಲ್ಲ
ಅಂದುಕೊಳ್ಳುತ ನಾನು ಹೊರಹೊರಳಿ ಮಲಗಿದೆನು
ಜೈ ಹಿಂದ್... ಜೈ ಕರ್ನಾ... ಟಕಾ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.