ADVERTISEMENT

ಚಿತ್ರಮಂದಿರದಲ್ಲಿ

ಕವಿತೆ

ಕಾವ್ಯಾ ಕಡಮೆ
Published 18 ಮೇ 2013, 19:59 IST
Last Updated 18 ಮೇ 2013, 19:59 IST
ಚಿತ್ರಮಂದಿರದಲ್ಲಿ
ಚಿತ್ರಮಂದಿರದಲ್ಲಿ   

ಅವರು ಮಬ್ಬು ಬೆಳಕಿನ ಆ ಚಿತ್ರಮಂದಿರದಲಿ
ಕುಳಿತಿದ್ದರು ಮೊದಲೇ ಬಂದು
ಶುರುವಾಗುವ ಮೊದಲು ಕಪ್ಪು ಬಿಳುಪಿನ ಛಾಯಾಪುಟ

ಮುಗ್ಗರಿಸಿ ತಡವರಿಸುತ್ತ ಮುಂದಿನವರ ಕಾಲು ತುಳಿಯುತ್ತ
ಪ್ರತೀ ಸಿನಿಮಾಕ್ಕೂ ತಡವಾಗಿ ಹೋಗುವುದು
ನಮ್ಮ ಖಯಾಲಿ
ತುಸು ಬೆನ್ನು ಬಾಗಿಸಿಯೇ ನಡೆದಿದ್ದೇವೆ ಹುಚ್ಚರಂತೆ
ಥಿಯೇಟರಿನವನು ಬಿಟ್ಟ ಕಿರು ಬೆಳಕಲ್ಲಿ
ಕೈಯೆತ್ತಿ ಕಣ್ಣಗಲಿಸಿ ಮೆಟ್ಟಿಲ ಸವರುತ್ತ

ಒಳಗಿನ ಕತ್ತಲೆಗೆ ಕಣ್ಣುಹೊಂದಿಸಿಕೊಂಡ ಅವರಿಗೆ
ಸುತ್ತಲಿನ ವಿಶ್ವ ಸ್ಪಷ್ಟಚಿತ್ರ
ನಮ್ಮ ಹುಚ್ಚಾಟ ಕಂಡು ಮುಗುಳ್ನಕ್ಕಿದ್ದಾರೆ
ನೆಂಚಿಕೊಂಡು ಸಿನಿಮಾದ ಹಾಸ್ಯದ ಜತೆಗೆ

ADVERTISEMENT

ಬೆಳಕಿಗೆ ಬಂದರೆ ಮಾತ್ರ
ನಮ್ಮ ಚಹರೆಗಳು ಬದಲಾಗುವವು

ಹಾಗೂ ಹೀಗೂ ಅಲ್ಲೊಂದು ಇಲ್ಲೊಂದು ಸೀಟು ಗಿಟ್ಟಿಸಿಕೊಂಡ ನಾವು
ಒಂದಾಗಿ ಅವರೊಡನೆ ನಕ್ಕಾಗ
ನಕ್ಕು ಅತ್ತಾಗ ಅತ್ತು ಸಿನಿಮಾದ ಭಾಗವೇ ಆಗಿಹೋಗಿದ್ದೇವೆ
ಥೇಟು ಅವರಂತೆ

ಇನ್ನೇನು ಬಿಡಬೇಕು ಚಿತ್ರಮಂದಿರವ
ಎಲ್ಲೆಡೆ ಬೆಳಕಾಗುವ ಮೊದಲು
ಮುಂದಿನ ಪಾಳಿಗಾಗಿ ಅವರನ್ನೂ ಕೈಹಿಡಿದು
ನಡೆಸಬೇಕು ಮತ್ತೆ ಮುಗ್ಗರಿಸುತ್ತ ತಡವರಿಸುತ್ತ
ಮಬ್ಬು ಕತ್ತಲಲ್ಲಿ

ಮಜಾ ಅಂದರೆ ಈ ಸಲ ನಮ್ಮ ದೆಸೆಯಿಂದ ಅವರೂ
ನಮ್ಮಂತಾಗಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.