ಬರಗಾಲ ಪೀಡಿತ ಕೋಲಾರ ಜಿಲ್ಲೆಯ `ಮಿನಿ ಇಂಗ್ಲೆಂಡ್' ಮತ್ತೆ 13 ವರ್ಷದ ಬಳಿಕ ಮತ್ತೊಂದು ಮಗ್ಗುಲಿಗೆ ತಿರುಗಲು ಸಜ್ಜಾಗುತ್ತಿದೆ.
ಗಾಳಿ ಬೆಳಕಿಗೆ ಅವಕಾಶವಿಲ್ಲದ, ಸಂಕೀರ್ಣ ಕತ್ತಲ ಜಗತ್ತೇ ಜೀವಾಳವಾದ ಇದನ್ನು ಚಿನ್ನದ ಗಣಿ ಎನ್ನಿ. ಕೆಜಿಎಫ್ ಎನ್ನಿ.
ಕೋಲಾರ ಗೋಲ್ಡ್ ಫೀಲ್ಡ್ ಎನ್ನಿ. ಬಿಜಿಎಂಎಲ್ -ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಎನ್ನಿ. ಗಣಿ ಮುಚ್ಚಿದ ಬಳಿಕವೂ ಭರವಸೆ ಬಿಡದೆ ಕಾಲೊನಿಗಳಲ್ಲಿ ಬದುಕುತ್ತಿರುವ ಸಾವಿರಾರು ಮಾಜಿ ಕಾರ್ಮಿಕರು ಕರೆಯುವಂತೆ ಸರಳವಾಗಿ `ಕಂಪನಿ' ಎನ್ನಿ. ಒಡಲಾಳದಲ್ಲಿ ಚಿನ್ನದ ಚಕ್ಕೆಗಳನ್ನು ಅದಿರುಗಳ ಅಂತರಾಳದಲ್ಲಿ ಇಟ್ಟುಕೊಂಡಿರುವ ಮಾತು ಬಿದ್ದು ಹೋದ ಆತ್ಮ, ಆಳದ ಅಂಗಗಳನೆಲ್ಲ ಹೆಕ್ಕಿದ ಬಳಿಕ ವೈದ್ಯರು ತಮ್ಮ ಕೆಲಸವಾಯಿತೆಂದು ಶಸ್ತ್ರಚಿಕಿತ್ಸೆಯ ಟೇಬಲ್ ಮೇಲೆಯೇ ಬಿಟ್ಟುಹೋದ ಸೈನೈಡು ಗುಡ್ಡಗಳ ಮಹಾನ್ ದೇಹ ಎಂದರೂ ನಡೆದೀತು.
ಇದು ಆಳರಸರ ಕಾಲದಿಂದ ನೂರಾರು ವರ್ಷ ಎಷ್ಟು ಬಗೆದರೂ ಸುಮ್ಮನಿದ್ದ ಭೂಮಿ. ದೇಶೀಯರು, ವಿದೇಶಿಯರೆನ್ನದೆ ಎಲ್ಲರಿಗೂ ಮೈಕೊಟ್ಟ ಭೂಮಿ. ಈಗ ಈ ಭೂಮಿಯಾಳದ ಕತ್ತಲ ಜಗತ್ತಿನಿಂದ ಮತ್ತೆ ಚಿನ್ನವನ್ನು ತೆಗೆಯಲು ಜಾಗತಿಕ ಟೆಂಡರ್ ಕರೆಯಬಹುದು ಎಂದು ಸುಪ್ರೀಂಕೋರ್ಟು ಹೇಳಿದೆ. ಚಿನ್ನದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶದ ಹಿತ-ಲಾಭದ ದೃಷ್ಟಿಯಿಂದ ಹೊರಗಿನವರಿಗೆ ಅವಕಾಶ ನೀಡದೆ ಕೇಂದ್ರ ಸರ್ಕಾರವೇ ಚಿನ್ನದ ಗಣಿಯನ್ನು ನಡೆಸಬೇಕು ಎಂಬ ಹೈಕೋರ್ಟು ಆದೇಶಕ್ಕೆ ಹಿನ್ನಡೆಯಾಗಿದೆ.
ಇಡೀ ವಿಶ್ವದ ಗಮನ ಸೆಳೆದು 2001 ಫೆ. 28ರಿಂದ ಮೌನವಾಗಿದ್ದ ಕೆಜಿಎಫ್‌ನಲ್ಲಿ 13 ವರ್ಷದ ಸತತ ಹೋರಾಟಗಳ ಬಳಿಕ ಮತ್ತೆ `ಸುವರ್ಣಯುಗ' ಆರಂಭವಾಗುವ ಮಹತ್ವಾಕಾಂಕ್ಷೆ ಗರಿಗೆದರುತ್ತಿದೆ. ಗಣಿಗಾರಿಕೆ ಮಾಡುವ ಹಲವು ದೇಶಗಳ ಕಣ್ಣು ಕೋಲಾರ ಚಿನ್ನದ ಮೇಲೆ ಬಿದ್ದಿದೆ. ಮಾಜಿ ಕಾರ್ಮಿಕರು, ಕಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಹೋರಾಟಗಾರರು ಸೇರಿದಂತೆ ಈ ನಗರದಲ್ಲಿ ವಾಸವಿರುವ ಹಲವರಲ್ಲಿ ಹಲವು ಬಗೆಯ ಆಸೆ-ಆಕಾಂಕ್ಷೆ-ಭರವಸೆಗಳೂ ಚಿಗುರಿವೆ. ಮನೆ ಕಳೆದುಕೊಳ್ಳುವುದೂ ಸೇರಿದಂತೆ ಅಸ್ತಿತ್ವ ಮುಂದುವರಿಕೆಯ ಹೊಸ ಆತಂಕಗಳೂ ಮೂಡಿವೆ.
ಅದೊಂದು `ಕ್ಯಾಂಪ್'.....
ಇಲ್ಲಿ ಚಿನ್ನವಿರಬಹುದೇ ಎಂದು ಹುಡುಕುವ ಸಲುವಾಗಿ ಎರಡು ಶತಮಾನದ ಹಿಂದೆ, 1802ರಲ್ಲಿ ಬ್ರಿಟಿಷ್ ಸೈನ್ಯದ ದಂಡನಾಯಕ ಜಾನ್‌ವಾರೆನ್ ನೇತೃತ್ವದಲ್ಲಿ ಹಾಕಲಾದ `ಕ್ಯಾಂಪ್' ಕೆಜಿಎಫ್‌ನ ಭ್ರೂಣರೂಪ. ಅಲ್ಲಿಂದ ಶುರುವಾದ ಚಿನ್ನದ ಶೋಧನೆ, ಗಣಿ ಕಾರ್ಯಾಚರಣೆ ಕ್ರಮೇಣ ಒಂದು ನಗರವನ್ನೇ ಸೃಷ್ಟಿಸಿತು. ಒಂದೆಡೆ ಗಣಿ ಪ್ರದೇಶ ಇದ್ದರೆ, ಮತ್ತೊಂದೆಡೆ ಗಣಿ ಕೆಲಸ ಮಾಡುವ ಬ್ರಿಟಿಷ್ ಅಧಿಕಾರಿ ಮತ್ತು ತಮಿಳುನಾಡು ಕಡೆಯಿಂದ ಬಂದ, ಬಹುತೇಕ ಪರಿಶಿಷ್ಟರೇ ಇದ್ದ, ತಮಿಳು-ತೆಲುಗು ಭಾಷಿಕರಾದ ವಲಸಿಗ ಕಾರ್ಮಿಕರ ವಾಸಕ್ಕೊಂದು ನಗರ. ಕಾಡು-ಬಂಡೆಗಳ ಪ್ರದೇಶದಲ್ಲಿ ನವನಾಗರಿಕತೆಯ ನಿರ್ಮಾಣಕ್ಕೆ, ಮನುಷ್ಯರ ಚಿನ್ನದ ಮೇಲಿನ ಮೋಹವೇ ದಾರಿ ಮಾಡಿತು. ಚಿನ್ನದ ಗಣಿಗಾರಿಕೆಯ ಜೊತೆಜೊತೆಗೇ, ಪಶ್ಚಿಮ ಮತ್ತು ಪೂರ್ವದ ನಾಗರಿಕತೆಗಳ ಬೆರಕೆಯ ಕೂಸಾಗಿ ಕೆಜಿಎಫ್ ಮತ್ತು ಅಲ್ಲಿನ ಜನ ಜೀವನ-ಸಂಸ್ಕೃತಿಯನ್ನು ರೂಪುಗೊಳಿಸುವ ಕೆಲಸವೂ ಏಕಕಾಲಕ್ಕೆ ಶುರುವಾಗಿದ್ದು ವಿಶೇಷ. ಹೀಗಾಗಿಯೇ ಇದನ್ನು ಬ್ರಿಟಿಷರು `ಮಿನಿ ಇಂಗ್ಲೆಂಡ್' ಎಂದು ಕರೆದರು.
800ಕ್ಕೂ ಹೆಚ್ಚು ಟನ್ ಚಿನ್ನವನ್ನು ಬಿಜಿಎಂಲ್ ನೇತೃತ್ವದಲ್ಲಿ ಉತ್ಪಾದಿಸಿ, ಹರೆಯದಲ್ಲೇ ಮುಪ್ಪಿಗೀಡಾಗಿ, ಈಗ ಕೆಲಸ ನಿಲ್ಲಿಸಿರುವ ಚಿನ್ನದ ಗಣಿ ಅಸ್ತಿತ್ವದ ಜೊತೆಗಲ್ಲದೆ ಬೇರಾವುದರ ಜೊತೆಗೂ ಕೆಜಿಎಫ್ ನಗರವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಇಡೀ ಕರ್ನಾಟಕದ, ಅಷ್ಟೇ ಏಕೆ ವಿಶ್ವದ ಭೂಪಟದಲ್ಲಿ ಚುಕ್ಕೆ ಗಾತ್ರದಲ್ಲಿ ಕಂಡೂ ಕಾಣದಂತಿದ್ದರೂ ಕೆಜಿಎಫ್ ಎಂದರೆ ಚಿನ್ನದ ಗಣಿ ಎಂದೇ ಅರ್ಥ. ಇಲ್ಲಿನ ಜನರ ಮುಂದೆ ಗಣಿಯ ಅವಶೇಷಗಳು ಈಗ ಶ್ರೀಮಂತ ಉದ್ಯಮ ಸಂಸ್ಕೃತಿಯೊಂದರ ಪಳೆಯುಳಿಕೆಯಾಗಷ್ಟೇ ಉಳಿದಿದೆ.
1901ರಲ್ಲಿ 34 ಸಾವಿರಕ್ಕೂ ಹೆಚ್ಚಿದ್ದ ಕಾರ್ಮಿಕರ ಸಂಖ್ಯೆಯು ಗಣಿ ಮುಚ್ಚಿದ 2001ರ ಹೊತ್ತಿಗೆ 3 ಸಾವಿರಕ್ಕೆ ಇಳಿದಿತ್ತು. ಒಂದು ಶತಮಾನದ ಅವಧಿಯಲ್ಲಿ ಗಣಿ ಉದ್ಯಮವು ಕಂಡ ಏರಿಳಿತವನ್ನೂ ಇದು ಸಂಕೇತಿಸುತ್ತದೆ. ಗಣಿಯ ಕಾರ್ಯವೈಖರಿಯ ಪರಿಣಾಮವಾಗಿ ಬಹಳಷ್ಟು ಕಾರ್ಮಿಕರು ಗಣಿಯೊಳಗಿನ ಸ್ಫೋಟ, ಕುಸಿತದಂಥ ಅಪಘಾತಗಳಲ್ಲಿ ಸತ್ತರೆ, ಶ್ವಾಸಕೋಶದ ಕಾಯಿಲೆ ಸಿಲಿಕಾಸಿಯಸ್‌ನಿಂದ, ಸಾಮಾನ್ಯ ಬೆನ್ನುನೋವಿನಿಂದಲೂ ನರಳಿ ಜೀವತೆತ್ತಿದ್ದಾರೆ.
ಗಣಿಯನ್ನು ಕೇಂದ್ರ ಸರ್ಕಾರವು ಸಾರ್ವಜನಿಕ ಉದ್ಯಮವನ್ನಾಗಿ ರೂಪಿಸುವ ಮುಂಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿದೇಶಿ ಅಧಿಕಾರಿಗಳು ತಮ್ಮ ದೇಶಕ್ಕೆ ವಾಪಸಾದರು. ಹಲವರು ತಮ್ಮ ಮೂಲಪ್ರದೇಶವಾದ ತಮಿಳುನಾಡಿನ ಗುಡಿಯಾತ್ತಂ, ಕೃಷ್ಣಗಿರಿ, ವೇಲೂರು, ಧರ್ಮಪುರಿ ಚೆನ್ನೈ ಕಡೆಗೆ ಹೋದರು. ಇನ್ನೂ ಹಲವರು ಗಣಿಗಾರಿಕೆ ನಡೆಯುವ ದೇಶದ ವಿವಿಧ ಭಾಗಗಳಿಗೆ ಕೆಲಸ ಹುಡುಕಿ ಹೋದರು. ಗಣಿಯಿಂದ ಬದುಕನ್ನು ಕಟ್ಟಿಕೊಂಡವರು, ಅವರ ಕುಟುಂಬದ ಸಾವಿರಾರು ಮಂದಿ, ಈಗಲೂ ಬಿಜಿಎಂಲ್‌ಗೆ ಸೇರಿದ ಕಾಲೊನಿಗಳಲ್ಲೇ ವಾಸ ಮುಂದುವರಿಸಿ ಜೀವನೋಪಾಯಕ್ಕಾಗಿ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲಸ ಮತ್ತು ಬದುಕು ಹುಡುಕುತ್ತಾ ವಲಸೆ ಬಂದವರ ತಲೆಮಾರಿಗೆ ಸೇರಿದ ಅವರೆಲ್ಲರೂ ಮತ್ತೆ ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ಗಣಿ ಮುಚ್ಚುವ ಮುನ್ನ ಸ್ವಯಂನಿವೃತ್ತಿ ಪಡೆದವರು ತಮಗೆ ಬರಬೇಕಾದ ಕೋಟ್ಯಂತರ ರೂಪಾಯಿ ಗ್ರ್ಯಾಚ್ಯುಟಿ ಹಣ ಕೊಡೋರು ಯಾರು ಎಂದು ಎದುರು ನೋಡುತ್ತಿದ್ದಾರೆ. ಗಣಿ ಕೆಲಸ ಮಾಡಿ ಸಾವಿಗೀಡಾದವರ ವಿಧವೆಯರ ಬದುಕು ಕಷ್ಟದಲ್ಲಿದೆ. ನಿವೃತ್ತಿಯಾಗಿ ಅತಿ ಕಡಿಮೆ ನಿವೃತ್ತಿವೇತನ ಪಡೆಯುತ್ತಿರುವವರೂ ಕಷ್ಟದಲ್ಲಿದ್ದಾರೆ.
ಇಂಥ ಸಂದರ್ಭದಲ್ಲಿ, ಉದ್ಯಮ ಸಂಸ್ಕೃತಿ ಮತ್ತು ಶ್ರಮ ಸಂಸ್ಕೃತಿಯ ವಿಭಿನ್ನ ರೂಪಗಳನ್ನು ಸೃಷ್ಟಿಸಿದ ಚಿನ್ನದ ಗಣಿ ಈಗ ಮತ್ತೆ ಜಾಗತಿಕ ಟೆಂಡರ್ ಮೂಲಕ ಶುರುವಾಗಲಿದೆ.
ಬಿಜಿಎಂಎಲ್‌ನಿಂದ ಬಿಇಎಂಲ್‌ವರೆಗೆ
ಚಿನ್ನದ ಗಣಿ ಪ್ರದೇಶವು ಸೇರಿದಂತೆ ಜಾನ್ ಟೈಲರ್ ಅಂಡ್ ಕಂಪನಿಯು ಪ್ರದೇಶದಲ್ಲಿ ಪಡೆದಿದ್ದ ಆಸ್ತಿ ಎಷ್ಟು ಮತ್ತು ಅವನ್ನು ಹೇಗೆ ಪಡೆಯಲಾಯಿತು ಎಂಬ ಬಗ್ಗೆ ಖಚಿತ ದಾಖಲೆಗಳು ಲಭ್ಯವಿಲ್ಲ. 1956ರಲ್ಲಿ ಕೋಲಾರ ಚಿನ್ನದ ಗಣಿ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮೈಸೂರು ಸರ್ಕಾರವು ರೂ 1.64 ಕೋಟಿ ಪರಿಹಾರಧನ ನೀಡಿ ಒಟ್ಟಾರೆ ಭೂ ಪ್ರದೇಶವನ್ನು ವಶಕ್ಕೆ ಪಡೆಯಿತು. 1964ರಲ್ಲಿ 1641.5 ಎಕರೆ ಮತ್ತು 1965ರಲ್ಲಿ 2908 ಎಕರೆ ಭೂಮಿಯನ್ನು ರಕ್ಷಣಾ ಸಚಿವಾಲಯಕ್ಕೆ ಉಚಿತವಾಗಿ ನೀಡಿದ ಬಳಿಕ ಅಲ್ಲಿ ಬಿಇಎಂಲ್ (ಭಾರತ್ ಅರ್ಥ್ ಮೂವರ್ಸ್ ಲಿ) ಆರಂಭವಾಯಿತು.
ಬಿಜಿಎಂಲ್‌ನ ಆಸ್ತಿ ವರ್ಗಾವಣೆ ಸಂಬಂಧ 1969ರ ಜ.23ರಂದು ಕೇಂದ್ರದ ಹಣಕಾಸು ಸಚಿವಾಲಯ ಮತ್ತು ರಾಜ್ಯ ಸರ್ಕಾರದ ನಡುವೆ ಆದ ಒಪ್ಪಂದದ ಪ್ರಕಾರ ಬಿಜಿಎಂಲ್‌ನ ಒಟ್ಟು ಸ್ಥಿರಾಸ್ತಿ 12,253 ಎಕರೆ, 20 ಗುಂಟೆ. ಅದರಲ್ಲಿ ಖಾಸಗಿಯವರ 30 ಎಕರೆ 21ಗುಂಟೆ ಜಮೀನೂ ಸೇರಿದೆ. ಅದೇ ಸಂದರ್ಭದಲ್ಲಿ, ಕಟ್ಟಡಗಳೂ ಸೇರಿದಂತೆ 144 ಎಕರೆ ಜಮೀನನ್ನು ರಾಜ್ಯ ಸರ್ಕಾರವು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನೀಡಿದ ಬಳಿಕ ಈಗ 12,109 ಎಕರೆ 20 ಗುಂಟೆ ಉಳಿದಿದೆ. ಆ ಪೈಕಿ 299 ಎಕರೆ ಪ್ರದೇಶದಲ್ಲಿ ಗಣಿಯ ಕಸ ಸುರಿಯಲಾಗಿದೆ. ಅಲ್ಲಿ ಈಗಲೂ ಚಿನ್ನಕ್ಕಾಗಿ ಹುಡುಕಾಡುವವರು ಕಾಣಿಸುತ್ತಾರೆ. ಸೈನೈಡ್ ಗುಡ್ಡಗಳೆಂದು ಕರೆಯಲಾಗುವ ಪ್ರದೇಶವು ಇಡೀ ಕೆಜಿಎಫ್ ನಿವಾಸಿಗಳಿಗೆ ದೂಳಿನ ದುಷ್ಪರಿಣಾಮಗಳನ್ನು ಪರಿಚಯಿಸಿದೆ. ಈಗ ಅಲ್ಲಿ ಹಸಿರು ಬೆಳೆಸುವ ಪ್ರಯತ್ನಗಳೂ ಸಣ್ಣಮಟ್ಟದಲ್ಲಿ ಶುರುವಾಗಿವೆ.
ಈಗಿನ ಸ್ಥಿತಿ...
ಕೆಜಿಎಫ್‌ನ ಉತ್ತರ ದಿಕ್ಕಿನಿಂದ ದಕ್ಷಿಣದವರೆಗೆ ಪರಸ್ಪರ ಸಂಪರ್ಕವುಳ್ಳ ಹಲವಾರು ಗಣಿಗಳಲ್ಲಿ 2005ರ ಕೊನೆಯ ಹೊತ್ತಿಗೇ, ಆಳದ 12 ಸಾವಿರ ಅಡಿಗಳ ಪೈಕಿ 11,400 ಅಡಿ ಎತ್ತರಕ್ಕೆ ನೀರು ತುಂಬಿಕೊಂಡಿದೆ. ಈಗ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿರುವ ಎಲ್ಲ ಸಾಧ್ಯತೆಗಳೂ ಇವೆ. ವಿಷಯುಕ್ತವಾಗಿರುವ ಈ ನೀರನ್ನು ಸಂಸ್ಕರಿಸಿ ಬರಪೀಡಿತ ಜಿಲ್ಲೆಗೆ ನೀಡಲು ಸಾಧ್ಯವೇ ಎಂಬ ಚಿಂತನೆಯೂ ಕೆಲವು ವರ್ಷದ ಹಿಂದೆ ನಡೆದಿತ್ತು. ಈಗ ಆ ನೀರನ್ನು ಹೊರಚೆಲ್ಲಿದರೆ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಹೆಚ್ಚಾಗಬಹುದೇ ಎಂಬುದು ಜನರ ಲೆಕ್ಕಾಚಾರ. ಆದರೆ ತಜ್ಞರ ಲೆಕ್ಕಾಚಾರ ಬೇರೆಯೇ ಇದೆ.
ಗಣಿ ಮುಚ್ಚಿದ ಬಳಿಕ ಭೂಕುಸಿತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಚಿಸಿದ ಸಮಿತಿಯು ನೀಡಿರುವ ವರದಿ ಪ್ರಕಾರ, ನೀರನ್ನು ಹೊರತೆಗೆದಷ್ಟೂ ಈ ಕುಸಿತಗಳು ಹೆಚ್ಚಾಗುವ ಸಾಧ್ಯತೆ ಇದೆ. ಅದರಿಂದ ಕೆಜಿಎಫ್ ನಗರ ಪ್ರದೇಶಕ್ಕೆ ಹೆಚ್ಚು ಹಾನಿಯಾಗುವ ಸಾಧ್ಯತೆಯೂ ಇದೆ!
ಜಾಗತಿಕ ಟೆಂಡರ್ ಮೂಲಕ ಗಣಿ ಆರಂಭಿಸಬೇಕಾದರೆ ಎರಡು ಪ್ರಮುಖ ಸಾಧ್ಯತೆಗಳಿವೆ. ಈಗಿರುವ ಗಣಿಯಾಳದಲ್ಲಿ ಇರುವ ನೀರನ್ನೆಲ್ಲ ಹೊರಚೆಲ್ಲಿ ಮತ್ತೆ ಅಲ್ಲಿಯೇ ಗಣಿಗಾರಿಕೆ ಆರಂಭಿಸುವುದು. ಸುತ್ತಮುತ್ತಲಿನ ಬೇರೆ ಪ್ರದೇಶಗಳಲ್ಲಿ ಬಯಲು ಗಣಿಗಾರಿಕೆ (ಓಪನ್ ಮೈನಿಂಗ್) ನಡೆಸುವುದು. ಈ ಎರಡಕ್ಕೂ ಇರುವ ತೊಂದರೆ ಎಂದರೆ, ಈ ಗಣಿಗಳ ಸುತ್ತಮುತ್ತ ಜನವಸತಿ ಪ್ರದೇಶಗಳು ಇರುವುದು. 12,109 ಎಕರೆ ಪ್ರದೇಶದಲ್ಲಿ ಹಬ್ಬಿರುವ ಬಿಜಿಎಂಲ್ ಪ್ರದೇಶದಲ್ಲಿ ಸುಮಾರು 2500 ಎಕರೆ ವ್ಯಾಪ್ತಿಯಲ್ಲಿ ಮಾತ್ರ ಗಣಿಗಾರಿಕೆ ಮತ್ತು ಕಾಲೊನಿ ಪ್ರದೇಶವಿದೆ. ಅದರಾಚೆಗೆ ಸುತ್ತಲೂ ನಗರ ಬೆಳೆದಿದೆ. ಗಣಿಯನ್ನು ಮತ್ತೆ ತೆರೆಯಲು ಬರುವ ಯಾವುದೇ ಕಂಪನಿಗೆ ಇದು ಅತ್ಯಂತ ದೊಡ್ಡ ಸವಾಲು.
ಗಣಿ ಕೆಲಸಕ್ಕೆ ಬಳಸುತ್ತಿದ್ದ, 25 ಸೈಕಲ್ ಸಾಮರ್ಥ್ಯದ ವಿದ್ಯುತ್‌ನಿಂದ ಚಾಲನೆಗೊಳ್ಳುತ್ತಿದ್ದ ಎಲ್ಲ ಕಬ್ಬಿಣದ ಯಂತ್ರಗಳೂ ತುಕ್ಕು ಹಿಡಿದಿವೆ. ಮರದ ಸಾಮಗ್ರಿಗಳೂ ಮತ್ತೆ ಬಳಸಲು ಯೋಗ್ಯವಾಗಿಲ್ಲ. ಬಿಜಿಎಂಲ್ ಆಡಳಿತಾಧಿಕಾರಿ ನೇತೃತ್ವದಲ್ಲಿ ಪಳೆಯುಳಿಕೆಗಳನ್ನು ಕಳ್ಳರಿಂದ ಕಾಪಾಡುವ ಕೆಲಸ ಮಾತ್ರ ನಡೆಯುತ್ತಿದೆ.
ಮುಂದಿನ ಗತಿ...
ದಶಕಕ್ಕೂ ಮೀರಿದ ಕಾರ್ಮಿಕರ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ಜಾಗತಿಕ ಟೆಂಡರ್ ಮೂಲಕ ಚಿನ್ನದ ಗಣಿ ಮತ್ತೆ ಅತ್ಯಾಧುನಿಕ ರೀತಿಯಲ್ಲಿ ಆರಂಭವಾದರೆ ಕೆಜಿಎಫ್‌ನ ಚಿತ್ರಣವೇ ಬದಲಾಗಿಬಿಡುತ್ತದೆ. ಈಗಿರುವ ಕೆಜಿಎಫ್ ಮರೆಯಾದರೂ ಅಚ್ಚರಿ ಏನಿಲ್ಲ. ಗಣಿ ಸಾಮ್ರಾಜ್ಯಕ್ಕೆ ಎಲ್ಲ ಹೊಸ ಯಂತ್ರಗಳ ಜೊತೆಗೆ ಹೊಸ ವ್ಯವಸ್ಥೆಯೇ ರೂಪುಗೊಳ್ಳಬೇಕು. ಗಣಿಗೆ ಸಂಬಂಧಿಸಿದ ಎಲ್ಲವೂ ಹೊಸ ಬಗೆಯಲ್ಲಿ ನಿರ್ಮಾಣಗೊಳ್ಳಬೇಕು.
ಇಂಥ ಮಗ್ಗುಲು ಬದಲಿಸುವ ಸನ್ನಿವೇಶಕ್ಕೆ ಎದುರಾಗಿರುವ `ಮಿನಿ ಇಂಗ್ಲೆಡ್' ಹೊಸ ಕಾಲಘಟ್ಟದಲ್ಲಿ ಹೇಗೆ ಹೊರಳಿಕೊಳ್ಳುತ್ತದೆ ಎಂಬುದು ಸದ್ಯಕ್ಕಂತೂ ಕಲ್ಪನೆಗೆ ಮೀರಿದ ಕನಸಿನಂತೆಯೇ ಕಾಣುತ್ತಿದೆ.
ಜಲವಿದ್ಯುತ್‌ಗೆ ಮೊದಲ ತೋರಣ....
ಭೂಮಿಯ ಒಳಗೆ ಕಟ್ಟಿಗೆಯ ಬೆಂಕಿಯನ್ನು ಬಳಸಿ, ಅಪಾಯದ ಅಂಚಿನಲ್ಲೇ ನಿಂತು ಬಂಡೆ ಸಿಡಿಸಿ ಶುರುವಾದ ಗಣಿಗಾರಿಕೆಯು ನೂರಾರು ವರ್ಷಗಳ ಅವಧಿಯಲ್ಲಿ ಎಣ್ಣೆಯ ದೀಪ, ಮೇಣದ ಬತ್ತಿ, ಸುಣ್ಣದ ಕಲ್ಲಿನ ದೀಪ, ಬ್ಯಾಟರಿ ದೀಪವನ್ನು ಬಳಸಲಾರಂಭಿಸಿ ಕೊನೆಗೆ ವಿದ್ಯುತ್ ದೀಪದ ಬಳಕೆಯಲ್ಲಿ ನೆಲೆಗೊಂಡಿತು.
ಡೀಸೆಲ್ ಯಂತ್ರಗಳನ್ನು ಬಳಸಿ ನಡೆಯುತ್ತಿದ್ದ ಗಣಿಗಾರಿಕೆಯ ಅಪಾಯವನ್ನು ತಡೆಯಲು ಮತ್ತು ಗಣಿಗಾರಿಕೆಗೆ ವೇಗ ನೀಡಲು 131 ಕಿಮೀ ದೂರದ ಶಿವನಸಮುದ್ರದಲ್ಲಿ ಜಲ ವಿದ್ಯುತ್ ತಯಾರಿಸಿ ಕೆಜಿಎಫ್‌ಗೆ ನೀಡಲಾಯಿತು. ಮೈಸೂರು ಅರಸರು ಇದ್ದ ಮೈಸೂರಿಗಿಂತಲೂ (1904) ಮುಂಚೆಯೇ ಕೆಜಿಎಫ್ 1902ರಲ್ಲಿ ವಿದ್ಯುತ್ ಸೌಲಭ್ಯ ಪಡೆದ ಮೊದಲ ನಗರವಾಯಿತು. ಇಡೀ ಏಷ್ಯಾ ಖಂಡದಲ್ಲಿ ಜಪಾನಿನ ಟೋಕಿಯೋ ನಗರವನ್ನು ಬಿಟ್ಟರೆ ಮೊದಲು ವಿದ್ಯುತ್ ಪಡೆದ ಎರಡನೇ ನಗರ ಕೆಜಿಎಫ್. ಈಗಲೂ ಅಲ್ಲಿ ಜಲವಿದ್ಯುತ್ ಪೂರೈಕೆಯ ಪಳೆಯುಳಿಕೆಗಳು ಕಾಲದ ಹೊಡೆತಕ್ಕೆ ಅಲುಗದೆ ನಿಂತಿವೆ.
ಮರೆಯಲಾಗದ ಜಾನ್‌ಟೈಲರ್
ಕೆಜಿಎಫ್‌ನ ಚಿನ್ನದ ಗಣಿಯ ಅಸಲಿ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ ಕೀರ್ತಿ ಗಣಿತಜ್ಞ ಜಾನ್‌ಟೈಲರ್‌ಗೆ ಸೇರುತ್ತದೆ. ಇಲ್ಲಿ ಗಣಿಗಾರಿಕೆಯ ಸನ್ನಿವೇಶವನ್ನೇ ಬದಲಿಸಿದ ಆತ 17ನೇ ಶತಮಾನದಲ್ಲಿ ಸ್ಥಾಪಿಸಿದ `ಜಾನ್ ಟೈಲರ್ ಅಂಡ್ ಸನ್ಸ್ ಕಂಪನಿ' ವಿಶ್ವದ ಎಲ್ಲೆಡೆ ಗಣಿ ಕಾರ್ಯಾಚರಣೆ ಸಂಬಂಧ ಪ್ರಮುಖ ಪಾತ್ರ ವಹಿಸಿದೆ ಎಂದೇ ಹೇಳಲಾಗುತ್ತದೆ. 1880ರಲ್ಲಿ ಟೇಲರ್ ನೇತೃತ್ವ ವಹಿಸಿದ ನಂತರವಷ್ಟೇ ಕೆಜಿಎಫ್ ಗಣಿಯ ವ್ಯವಸ್ಥಿತ ಕಾರ್ಯಾಚರಣೆ ಆರಂಭವಾಯಿತು ಎಂಬುದು ವಿಶಿಷ್ಟ ದಾಖಲೆ.
ಉಳ್ಳ ಪೋನ ಪೊನಂ..
ಉಳ್ಳ ಪೋನ ಪೊನಂ, ಮೇಲೆ ವಂದ ಪಣಂ (ಆಳಕ್ಕೆ ಇಳಿದರೆ ಹೆಣ, ಮೇಲೆ ಬಂದರೆ ಹಣ) - ಇದು ಕೆಜಿಎಫ್‌ನಲ್ಲಿ ಚಿನ್ನದ ಗಣಿ ಕಾರ್ಯನಿರ್ವಹಿಸುತ್ತಿದ್ದ ಅಷ್ಟೂ ವರ್ಷ ಜನಜನಿತವಾಗಿದ್ದ ಗಾದೆ. ತಮ್ಮ ಜೀವಕ್ಕೆ ಯಾವುದೇ ಭದ್ರತೆ ಇಲ್ಲದೆ ಗಣಿಗಿಳಿದು ದುಡಿಯುತ್ತಿದ್ದ ಕಾರ್ಮಿಕರ ಶೋಚನೀಯ ಸ್ಥಿತಿಯನ್ನು ಸಂಕೇತಿಸುವ ನಾಣ್ಣುಡಿ. ಗಣಿಯ ಒಳಗೆ ಬಂಡೆ ಸಿಡಿಸುವ ಪ್ರತಿ ಬಾರಿಯೂ ಆಗುತ್ತಿದ್ದ ಭೂಕಂಪನ ಕಿಲೋಮೀಟರುಗಟ್ಟಲೆ ಹರಡಿ ಕಾರ್ಮಿಕರ ಕುಟುಂಬದ ಸದಸ್ಯರಲ್ಲಿ ಆತಂಕವನ್ನು ಮೂಡಿಸುತ್ತಿತ್ತು. ಕಾರ್ಮಿಕರ ಜೀವನವೇ ಒಂದು ಗಾದೆ ಮಾತಿನ ಸೃಷ್ಟಿಗೆ ದಾರಿ ಮಾಡಿದ ವ್ಯಂಗ್ಯವೂ ಇಲ್ಲಿದೆ.
ಮಣ್ಣಿನಲ್ಲೂ ಚಿನ್ನ!
ಚಿನ್ನಕ್ಕಾಗಿ ಅಗೆದು ಸಂಸ್ಕರಿಸಿ ರಾಶಿ ಹಾಕಲಾಗಿರುವ ಲಕ್ಷಾಂತರ ಟನ್ ಅದಿರಿನಲ್ಲಿ ಈಗಲೂ ಚಿನ್ನವಿದೆ ಎನ್ನುತ್ತವೆ ಬಿಜಿಎಂಲ್ ಮೂಲಗಳು. ಅದಕ್ಕಾಗಿಯೇ ಆ ಅದಿರಿನ ಕಲ್ಲು-ಮಣ್ಣಿನ ರಾಶಿಯಲ್ಲಿ ಚಿನ್ನ ಹುಡುಕುವ ಕೆಲಸವನ್ನೇ ಮಾಡುವ ಮಹಿಳೆಯರು ಈಗಲೂ ಇದ್ದಾರೆ. ಅಂಥ ಅದಿರನ್ನು ಕಳ್ಳತನ ಮಾಡುವ ಸ್ಥಳೀಯರೂ ಇದ್ದಾರೆ.
ಇದುವರೆಗೆ 40 ಲಕ್ಷ ಟನ್ ಅದಿರಿನ ರಾಶಿಯನ್ನು ಹೊರ ಹಾಕಲಾಗಿದೆ. ಅದರಲ್ಲಿ ಏನಿಲ್ಲವೆಂದರೂ, 1 ಟನ್ ಅದಿರಿಗೆ .08 ಗ್ರಾಂನಂತೆ, 20 ಟನ್‌ನಷ್ಟಾದರೂ ಚಿನ್ನ ಸಿಗುತ್ತದೆ ಎಂಬ ಅಂದಾಜಿದೆ.
ಬ್ರಿಟಿಷರ ತಾರತಮ್ಯ....
ನಾಯಿಗಳು ಮತ್ತು ಸ್ಥಳೀಯರಿಗೆ ಪ್ರವೇಶವಿಲ್ಲ (ಡಾಗ್ಸ್ ಅಂಡ್ ನೇಟಿವ್ಸ್ ಆರ್ ನಾಟ್ ಅಲೋವ್ಡ್) ಎಂಬ ಫಲಕವನ್ನು ಚಿನ್ನದ ಗಣಿಯ ಉನ್ನತ ಅಧಿಕಾರಿಗಳು ವಾಸಿಸುತ್ತಿದ್ದ ಪ್ರದೇಶದಲ್ಲಿ ಹಾಕಲಾಗಿತ್ತು ಎಂದು ಇಲ್ಲಿನ ಜನ ಈಗಲೂ ಸ್ಮರಿಸುತ್ತಾರೆ. ಇದು ಆಡಳಿತದಲ್ಲಿದ್ದ ಅಮಾನವೀಯ ತಾರತಮ್ಯದ ಕಡೆಗೂ ಗಮನ ಸೆಳೆಯುತ್ತದೆ.
ಬ್ರಿಟಿಷ್ ನಾಗರಿಕತೆಯನ್ನು ಚಿನ್ನದ ಮೆರುಗಿನಿಂದ ಅಲಂಕರಿಸಿದ ಕಪ್ಪು ಕಾರ್ಮಿಕರನ್ನು, ಸ್ಥಳೀಯರನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ ಬ್ರಿಟಿಷರ ಮನಃಸ್ಥಿತಿಯ ಪ್ರತೀಕವಾಗಿದ್ದ ಇಂಥ ಫಲಕಗಳು ಇದ್ದ ಸ್ಥಳಗಳಲ್ಲಿ ನೀರವ ಮೌನ ಮನೆ ಮಾಡಿದೆ. ಆ ರಸ್ತೆಗಳಲ್ಲಿ ಓಡಾಡುವ ಇಲ್ಲಿನ ಜನ ಈಗ ಆ ಕಡೆಗೂ ನೋಡುವುದಿಲ್ಲ.
ನಾಯಕತ್ವದ ಆರಾಧನೆ
ತಮಿಳುನಾಡಿನಿಂದ ವಲಸೆ ಬಂದ ಕಾರ್ಮಿಕರು ಅಲ್ಲಿನ ನಾಯಕತ್ವದ ಆರಾಧನೆಯ ಗುಣವನ್ನು ಬಿಡದ ಪರಿಣಾಮವಾಗಿ ಕೆಜಿಎಫ್‌ನಲ್ಲಿ ಇಂದಿಗೂ ಈ ಆರಾಧನೆ ಪ್ರಮುಖ ಸಂಸ್ಕೃತಿಯಾಗಿಯೇ ಉಳಿದಿದೆ. ನಾಯಕತ್ವದ ಆರಾಧನೆಯ ಪರಿಣಾಮವಾಗಿಯೇ ಇಲ್ಲಿ ಸುಮಾರು 18 ಕಾರ್ಮಿಕರ ಸಂಘಗಳು ಇವೆ. ಎಲ್ಲರಿಗೂ ನಾಯಕರಾಗುವ ತುಡಿತ. ಈಗ ಸಂಘಗಳ ಸಂಖ್ಯೆ ಒಂದಂಕಿಗೆ ಇಳಿದಿದೆ.
ಇದೇ ಕಾರಣದಿಂದ ಕೆಜಿಎಫ್‌ನಲ್ಲಿ ಬೇರೆಲ್ಲ ತಾಲ್ಲೂಕುಗಳಿಗಿಂತ ಭಿನ್ನವಾಗಿ ತಮಿಳುನಾಡು ಶೈಲಿಯ ರಾಜಕಾರಣವೇ ವಿಜೃಂಭಿಸುತ್ತದೆ. ಕನ್ನಡ-ಕನ್ನಡಿಗರಿಗೆ ಇಲ್ಲಿ ಎರಡನೇ ದರ್ಜೆ ಪ್ರಜೆಗಳ ಸ್ಥಾನವಿತ್ತು. ಆದರೆ, ಬಿಜಿಎಂಎಲ್ ಮುಚ್ಚಿದ ಬೆಮೆಲ್ ಆರಂಭವಾಗಿ ಕನ್ನಡ ಸಂಘಗಳು ಹುಟ್ಟಿಕೊಂಡ ಬಳಿಕ ಈ ಟ್ರೆಂಡ್ ಈಗ ಕಡಿಮೆಯಾಗಿದೆ.
1802 ಬ್ರಿಟಿಷ್ ದಂಡನಾಯಕ ಜಾನ್‌ವಾರೆನ್ ರಾಜ್ಯದ ಗಡಿ ಸಮೀಕ್ಷೆಗೆ ಆಗಮನ. ಉರಿಗಾಂ, ಮಾರಿಕುಪ್ಪಂನಲ್ಲಿ ಚಿನ್ನವಿರುವ ಪುರಾವೆ ಲಭ್ಯ
1873 ಗಣಿಗಾರಿಕೆ ನಡೆಸಲು ಐರಿಷ್‌ನ ಮೈಕೇಲ್ ಲೆವೆಲೆ ಮೈಸೂರು ಸರ್ಕಾರಕ್ಕೆ ಅರ್ಜಿ
1875 ಊರಿಗಾಂ ಬಳಿ ಗಣಿಯ ಮೊದಲ ಶಾಫ್ಟ್ ಆರಂಭ
1877 ಮದ್ರಾಸ್ ಸಾಫ್ಟ್‌ಕೋರ್ ಮತ್ತಿತರರಿಗೆ ಗಣಿಗಾರಿಕೆ ಹಕ್ಕು ವರ್ಗಾವಣೆ
1881 ಹನ್ನೊಂದು ಕಂಪನಿಗಳ ಜಂಟಿ ಕಾರ್ಯಾಚರಣೆ
1950 ಕಂಪನಿಗಳನ್ನು ಭಾರತದಲ್ಲಿ ನೋಂದಾಯಿಸಲು ಮೈಸೂರು ಸರ್ಕಾರ ಸೂಚನೆ
1956 ಮೈಸೂರು ಸರ್ಕಾರದಿಂದ ಗಣಿಗಾರಿಕೆ ರಾಷ್ಟ್ರೀಕರಣ. ಗಣಿಗಳ ಮೇಲಿನ ಅಧಿಕಾರ ಸರ್ಕಾರಕ್ಕೆ ಹಸ್ತಾಂತರ
1962 ಕೇಂದ್ರ ಸರ್ಕಾರದ ಅಧೀನಕ್ಕೆ ಗಣಿ ಪ್ರದೇಶ (ಕೆಜಿಎಂಯು-ಕೋಲಾರ ಗೋಲ್ಡ್ ಮೈನ್ ಅಂಡರ್‌ಟೇಕಿಂಗ್). ಕೇಂದ್ರ ಹಣಕಾಸು ಇಲಾಖೆಯ ಸಚಿವರ ಅಧ್ಯಕ್ಷತೆಯ ಆಡಳಿತ ಮಂಡಳಿ ಸ್ಥಾಪನೆ
1971 ಗಣಿ ಮತ್ತು ಉಕ್ಕು ಕಾರ್ಖಾನೆಗೆ ಕೆಜಿಎಂಯು ಅಧಿಕಾರ ಹಸ್ತಾಂತರ
1972 ಸಾರ್ವಜನಿಕ ವಲಯದ ಕಂಪನಿಯಾಗಿ ಕೆಜಿಎಂಯು ಮಾರ್ಪಾಡು. ಭಾರತ್ ಗೋಲ್ಡ್ ಮೈನ್ಸ್ ಲಿ. ಸ್ಥಾಪನೆ
2001 ನಷ್ಟದ ಕಾರಣ ಗಣಿಗಾರಿಕೆಗೆ ಅಂತ್ಯ. ಹೈಕೋರ್ಟಿಗೆ ಕಾರ್ಮಿಕರ ಮೊರೆ
2006 ಗಣಿ ಮತ್ತೆ ಆರಂಭಕ್ಕೆ ಎನ್‌ಡಿಎ ಸರ್ಕಾರ ನಿರ್ಧಾರ
2009 ಜಾಗತಿಕ ಟೆಂಡರ್ ಕರೆದು ನಡೆಸಬಹುದು: ಹೈಕೋರ್ಟ್ ಏಕನ್ಯಾಯಮೂರ್ತಿ ಪೀಠದ ತೀರ್ಪು. ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಬಿಜಿಎಂಲ್ ಮೇಲ್ಮನವಿ
2010 ಗಣಿಯನ್ನು ಕೇಂದ್ರವೇ ನಡೆಸಲಿ: ಹೈಕೋರ್ಟ್ ವಿಭಾಗೀಯ ಪೀಠ ಆದೇಶ
2013 ಜಾಗತಿಕ ಟೆಂಡರ್ ಕರೆದು ಗಣಿ ನಡೆಸಿ- ಸುಪ್ರೀಂ ಕೋರ್ಟ್
(ಚಿನ್ನದ ಗಣಿಯನ್ನು ಮತ್ತೆ ಆರಂಭಿಸಬೇಕು ಎಂಬ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ 2014ರ ಸೆಪ್ಟೆಂಬರ್ 14ಕ್ಕೆ ಮುಂದೂಡಿತ್ತು. ಆದರೆ ಕೇಂದ್ರ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳ ಒತ್ತಡದ ಪರಿಣಾಮವಾಗಿ ಬಹಳ ಮುಂಚೆಯೇ ತೀರ್ಪು ಜುಲೈ 9ರಂದು ಪ್ರಕಟಗೊಂಡಿದೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.