ಪಾರ್ಲಿಮೆಂಟಿನ ಕಲ್ಲಿನ ಗೋಡೆಗಳನ್ನು ಬಡಿಬಡಿದು ಎಚ್ಚರಿಸುತ್ತಿದ್ದ ದನಿಗಳು ಚದುರಿಹೋಗಿದ್ದವು. ಹಾಗೆಂದು ದೇಶದ ಬಾಯಿಯನ್ನು ಹೊಲಿಯಲಾರರು ಯಾರೂ. ಎರಡೂವರೆ ದಶಕಗಳಿಂದಲೂ ದೆಹಲಿಯ ಜಂತರ್ ಮಂತರ್ ಎಲ್ಲ ಆಂದೋಲನಗಳ ಶಕ್ತಿಕೇಂದ್ರ. ದೇಶದ ಜನರ ಹೃದಯ ಮಿಡಿತ. ಅಡಗಿಸಲೆತ್ನಿಸಿದಷ್ಟೂ ಅಂತಃಸಾಕ್ಷಿ ಮತ್ತೆ ಮತ್ತೆ ದನಿಯೆತ್ತುತ್ತಲೇ ಇರುತ್ತದೆ.
ಕಳೆದ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಹಸಿರು ಪೀಠ ದೆಹಲಿಯ ಆಂದೋಲನ ಸ್ಥಳವಾದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳನ್ನು ನಡೆಸದಂತೆ ನಿಷೇಧ ಹೇರಿದ್ದನ್ನು ಕಂಡು ದೇಶ ಬೆಚ್ಚಿಬಿದ್ದಿತು. ಹಸಿರು ಪೀಠ ತನ್ನ ಅದೇಶ ಹಿಂಪಡೆಯಲಿಲ್ಲ. ಆದರೆ, ನಿರಾಸೆಯೆಲ್ಲವೂ ಆವಿಯಾದಂತೆ ನೆಮ್ಮದಿಯ ಗಾಳಿ ಬೀಸಿತು. ಜಂತರ್ ಮಂತರ್ ಮತ್ತು ಬೋಟ್ ಕ್ಲಬ್ ಪ್ರದೇಶಗಳಲ್ಲಿ ಧರಣಿ, ಪ್ರತಿಭಟನೆ, ಸಾರ್ವಜನಿಕ ಆಂದೋಲನಗಳ ವಿರುದ್ಧ ಹೇರಿದ್ದ ಸಂಪೂರ್ಣ ನಿಷೇಧವನ್ನು ಸುಪ್ರೀಂ ಕೋರ್ಟ್ ಜುಲೈ 23ರಂದು ತೆರವುಗೊಳಿಸಿತು.
ಒಂದು ಮರಕ್ಕೆ ಕಲ್ಲೆಸೆದರೂ ಪಾರ್ಲಿಮೆಂಟಿಗೆ ಕೇಳಿಸುವಷ್ಟು ಹತ್ತಿರವಿದ್ದುದೇ ಇಲ್ಲಿ ನಡೆಯುವ ಧರಣಿ, ಸತ್ಯಾಗ್ರಹಗಳನ್ನು ಅರ್ಥಪೂರ್ಣವಾಗಿಸಿತ್ತು. ಚಳವಳಿಗಾರರ ಕನಸುಗಳನ್ನು ಜೀವಂತವಾಗಿಟ್ಟಿತ್ತು. ದೆಹಲಿಯ ರಣಗುಡುವ ಬಿಸಿಲು, ನೆತ್ತಿ ಕಾದು ಕಣ್ಣು ಕತ್ತಲಿಡುವ ದಾಹ, ಬೆಂಕಿಯುಗುಳುವ ರಸ್ತೆಗಳು, ದಳದಳ ಹರಿವ ಬೆವರು, ಬೇಸಿಗೆಯ ಉರಿವ ಸೂರ್ಯನನ್ನು ಲೆಕ್ಕಿಸದೇ ದೇಶದ ನಾನಾ ಭಾಗಗಳ ಜನ ಇಲ್ಲಿ ಬಂದು ಉಪವಾಸ ಸತ್ಯಾಗ್ರಹ, ಧರಣಿ ನಡೆಸುತ್ತಿದ್ದರು. ತಮ್ಮ ಅಳಲು ಸರ್ಕಾರಕ್ಕೆ ತಲುಪುತ್ತದೆ ಒಂದು ದಿನ ಎಂಬ ಕನಸನ್ನು ದಿನವೂ ಕಾಣುತ್ತಿದ್ದರು. ಇಲ್ಲಿಯೇ ‘ಒನ್ ರ‍್ಯಾಂಕ್, ಒನ್ ಪೋಸ್ಟ್ (OROP)’ ಎಂಬ ಬೇಡಿಕೆ ಮುಂದಿಟ್ಟುಕೊಂಡು ಮೇಜರ್ ಜನರಲ್ ಸತಬೀರ್ ಸಿಂಗರ ಮುಂದಾಳತ್ವದಲ್ಲಿ ಕಳೆದ ಹನ್ನೆರಡು ವರ್ಷಗಳಿಂದಲೂ ನಮ್ಮ ದೇಶದ ನಿವೃತ್ತ ಯೋಧರು ಆಂದೋಲನ ನಡೆಸುತ್ತಿದ್ದುದು. ಅಕ್ಟೋಬರಿನ ಒಂದು ಮುಂಜಾವು ಪೊಲೀಸ್ ಪಡೆ ನುಗ್ಗಿ ಬಂದು ತಮ್ಮ ಶಕ್ತಿ ಪ್ರದರ್ಶನ, ಅಧಿಕಾರ ಬಲದಿಂದ ಈ ಎಲ್ಲ ಹೋರಾಟಗಾರರನ್ನು ಸ್ಥಳದಿಂದ ಓಡಿಸಿದ್ದನ್ನು ಓದಿ -ಪ್ರಜಾಪ್ರಭುತ್ವದ ಕೊಲೆಯಾಯಿತು ಎಂದು ಕಣ್ಣೀರು ಹಾಕಿದವರೆಷ್ಟೋ!
ಅವತ್ತು ಗೌರಕ್ಕನ ಹತ್ಯೆಯ ನಂತರ ದೆಹಲಿಯ ಜಂತರ್ ಮಂತರಿನಲ್ಲಿ ನಡೆದ ಪ್ರತಿಭಟನಾ ಸ್ಥಳದಲ್ಲಿ ನಿಂತು ಕೇಳಿದ ಹತ್ಯಾ ವಿರೋಧಿ ಭಾಷಣಗಳು, ನ್ಯಾಯ ಬೇಡಿಕೆಯ ಮನವಿಗಳು, ಆಕ್ರೋಶದ ಕೂಗುಗಳು ಇನ್ನೂ ಕಿವಿಯಲ್ಲಿ ಅನುರಣಿಸುತ್ತಲೇ ಇವೆ. ಕರ್ನಾಟಕದಿಂದ ಬಂದ ಹೋರಾಟಗಾರರೂ ಅಲ್ಲಿದ್ದರು. ರಾಜಕಾರಣಿಗಳು, ಸಾಮಾಜಿಕ ಸಂಘ ಸಂಸ್ಥೆಗಳ ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಗಳು, ದೇಶದ ನಾನಾ ಕಡೆಯಿಂದ ಬಂದ ಹೋರಾಟಗಾರರು ಅಲ್ಲಿ ಸೇರಿದ್ದರು. ಹೋರಾಟಗಾರ್ತಿ ಕೆ. ನೀಲಾ ಮತ್ತು ಸಂಗಾತಿಗಳೊಡನೆ ಫುಟ್‌ಪಾತಿನ ಮೇಲೆ ಕೂತು ಚಹ ಕುಡಿಯುತ್ತ ಚಳವಳಿಗಾರರ ಮಾತುಗಳನ್ನು ಆಲಿಸುತ್ತಿದ್ದೆವು. ಅಭಿವ್ಯಕ್ತಿ ಸ್ವಾತಂತ್ರ್ಯ, ‘ವೈಚಾರಿಕತೆ’ಗಳ ಮೇಲೆ ನಡೆಯುತ್ತಿರುವ ದಾಳಿಗಳು, ಪ್ರಶ್ನೆ ಮಾಡುವುದೇ ‘ರಾಷ್ಟ್ರದ್ರೋಹ’ ಎಂದು ಬಿಂಬಿಸುವುದು ಫ್ಯಾಸಿಸಂ ವಾತಾವರಣವನ್ನು ಸೃಷ್ಟಿಸಿವೆ. ಅಧಿಕಾರ ಸೂತ್ರವನ್ನು ಹಿಡಿದ ಕೆಲವರ ಬಾಯಿಂದ ‘ಅವರ ತಲೆ ಕಡಿಯುತ್ತೇವೆ, ಇವರ ಕೈ ಕಡಿಯುತ್ತೇವೆ, ದೇಶದಿಂದ ಹೊರಗಟ್ಟುತ್ತೇವೆ’ ಎನ್ನುವ ಅಸಂಬದ್ಧ ಹೇಳಿಕೆಗಳು, ಸುಪಾರಿಗಳು, ಯಾರನ್ನು ಬೇಕಾದರೂ ಕೊಂದರೂ ನ್ಯಾಯಾಂಗ, ಶಾಸಕಾಂಗಗಳೇನೂ ಮಾಡಲಾರವೆಂಬ ಆಘಾತಕರ ಆತಂಕದ ಸಮಯದಲ್ಲಿ ಚಳವಳಿಗಳೇ ನಮ್ಮನ್ನು ಬದುಕಿಸಬೇಕಿವೆ.
ಜಂತರ್ ಮಂತರ್ ಎಂಬುದು ಬರಿ ಗೋಡೆ, ಕಾಂಪೌಂಡುಗಳ, ಫುಟಪಾತು, ಗಿಡ ಮರಗಳ ನೆರಳಿರುವ ಮತ್ತು ನಾಲ್ಕಾರು ರಸ್ತೆಗಳು ಸೇರುವ ಚೌಕವೂ ಅಲ್ಲ, ಓಣಿಯೂ ಅಲ್ಲ. ಸಾವಿರ ಮಾತುಗಳನ್ನು, ಎದೆಯ ನೋವುಗಳ ಒಟ್ಟು ಬಣ್ಣಗಳನ್ನು ಒಣಗಿಸಿಟ್ಟುಕೊಂಡ ಬ್ಯಾನರುಗಳಲ್ಲ: ಅಂಗಿಯ ಮೇಲೊಂದು ಸಂಖ್ಯೆ ಹೊತ್ತ ಕೈದಿಯೂ ಅಲ್ಲ. ಜಂತರ್ ಮಂತರ್ ದೇಶದ ಜೀವಧಾತು, ಉಸಿರಾಡುವ ಜೀವಂತ ಮನುಷ್ಯಲೋಕ.
ರಾಷ್ಟ್ರದ ರಾಜಧಾನಿ ದೆಹಲಿಯ ಹೃದಯ ಭಾಗದಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾಗಿರುವ ಐತಿಹಾಸಿಕ ಜಂತರ್ ಮಂತರ್ ರಸ್ತೆಯಲ್ಲಿ ನಡೆಯುವ ಎಲ್ಲಾ ಬಗೆಯ ಧರಣಿ, ಪ್ರತಿಭಟನೆಗಳನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್. ಜಿ.ಟಿ) ಕಳೆದ ಅಕ್ಟೋಬರ್ ತಿಂಗಳಲ್ಲಿ ದೆಹಲಿ ಸರ್ಕಾರಕ್ಕೆ ಆದೇಶಿಸಿತ್ತು.
ಈ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲ ಪ್ರತಿಭಟನೆಗಳಿಂದಾಗಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಂರಕ್ಷಣೆಯ ಕಾನೂನುಗಳ ಸಾರಾ ಸಗಟು ಉಲ್ಲಂಘನೆಯಾಗಿದೆ ಎಂದು ಹಸಿರು ಪೀಠ ಹೇಳಿದೆ. ಜಂತರ್ ಮಂತರ್ ರಸ್ತೆಯ ಉದ್ದಕ್ಕೂ ಕಂಡು ಬರುವ ಎಲ್ಲ ತಾತ್ಕಾಲಿಕ ರಚನೆಗಳನ್ನು, ಲೌಡ್ ಸ್ಪೀಕರ್‌ಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದು ನ್ಯಾಯಮೂರ್ತಿ ಆರ್.ಎಸ್. ರಾಠೋಡ್ ನೇತೃತ್ವದ ಹಸಿರು ಹಸಿರು ಪೀಠ ದೆಹಲಿ ಮುನಿಸಿಪಲ್ ಕೌನ್ಸಿಲ್‌ಗೆ (ಎನ್.ಎಂ.ಡಿ.ಸಿ) ಸೂಚಿಸಿತು.
ದೇಶ ಅಂದರೆ ಬರಿ ಮಣ್ಣಲ್ಲ, ಉಸಿರಾಡುವ ಮನುಷ್ಯರು ಎಂದು ತೆಲುಗು ಕವಿ ಗುರುಜಾಡ ಅಪ್ಪಾರಾವ್ ಹೇಳಿದ್ದರು ಅಲ್ಲವೇ? ಹಾಗೆ, ಈ ದೇಶದ ನಾನಾ ಕಡೆಗಳಿಂದ ಜನ ದೆಹಲಿಗೆ ಬಂದು ಆಳುವ ಸರ್ಕಾರದೆದುರು ತಮ್ಮ ಅಸಹನೆ, ದೂರು, ಬೇಡಿಕೆಗಳನ್ನು ಸಲ್ಲಿಸದಿದ್ದರೆ, ‘ನ್ಯಾಯದ ಗಂಟೆ’ ಬಾರಿಸದಿದ್ದರೆ ಮತ್ತೆಲ್ಲಿ ಹೇಳಿಕೊಳ್ಳಬೇಕು? ಮತ್ತು ಅಂಥ ಅವಕಾಶವನ್ನು ನಮ್ಮ ಸಂವಿಧಾನ ನಮಗೆ ಒದಗಿಸಿದೆ. ಪ್ರಜಾತಂತ್ರದಲ್ಲಿ ಪ್ರತಿ ನಾಗರಿಕನಿಗೂ ಮಾತಾಡುವ, ತನ್ನ ಅಭಿಪ್ರಾಯ ವ್ಯಕ್ತಮಾಡುವ, ತನ್ನ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ, ಸ್ವತಂತ್ರ ಭಾರತದಲ್ಲಿ ನೆಮ್ಮದಿಯಾಗಿ ಬದುಕುವ ಎಲ್ಲ ಹಕ್ಕುಗಳನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಅದಕ್ಕೆ ಈ ದೇಶದ ಪ್ರತಿಯೊಬ್ಬನೂ ಹಕ್ಕುದಾರ. ಕಾಡುಮೇಡಿನಲ್ಲಿ ಬದುಕುವ ಪ್ರಾಣಿ, ಪಕ್ಷಿ ಸಂಕುಲವೂ ತಮ್ಮ ಸಾತಂತ್ರ್ಯಕ್ಕೆ ಧಕ್ಕೆಬಾರದಂತೆ ಶಿಸ್ತುಬದ್ಧವಾಗಿಯೇ ಬದುಕುತ್ತವೆ.
2007ರಿಂದ ಮಚಿಂದರ್ ನಾಥ ಎಂಬುವರು– ‘ಜೂತಾ ಮಾರೋ’ ರಾಷ್ಟ್ರೀಯ ಆಂದೋಲನ ನಡೆಸಿದ್ದಾರೆ. ಅವರ ಹೋರಾಟ ಒಂದು ಸೀಮಿತ ಉದ್ದೇಶಕ್ಕಾಗಿರದೇ, ಭೂ ಸಮಸ್ಯೆಯಿಂದ ಸರ್ಕಾರಿ ಉದ್ಯೋಗದವರೆಗೆ, ಖಾಸಗಿ ಉದ್ಯೋಗದಿಂದ ಬಗೆಹರಿಯದ ಕಗ್ಗೊಲೆ, ಹತ್ಯೆಗಳಂಥ ಕೇಸುಗಳವರೆಗೂ ವಿಸ್ತರಿಸಿತ್ತು. ಮದುಸೂಧನ್ ಬಿಶ್ವಾಸ್ ಎಂಬ ಯುವಕ ದೂರದ ಕೋಲ್ಕತ್ತಾದಿಂದ ಬಂದು ಇಲ್ಲಿ ಭೂಮಿಯ ಬಹುಭಾಗವನ್ನು ಆಕ್ರಮಿಸಿ ಮನುಕುಲಕ್ಕೆ ಮಾರಕವಾಗುತ್ತಿರುವ– ಪ್ಲಾಸ್ಟಿಕ್, ಥರ್ಮೊಕೋಲ್ ಇವುಗಳನ್ನು ನಿಷೇಧಿಸಲು ಆಂದೋಲನ ನಡೆಸುತ್ತಿದ್ದಾನೆ.
ನಿರ್ಭಯಾಳಿಗೆ ಎದುರಾದ ಪರಿಸ್ಥಿತಿ ಖಂಡಿಸಿ ನಡೆಸಿದ ಪ್ರತಿಭಟನೆಯಿರಬಹುದು, ಮಹದಾಯಿ ವಿವಾದ, ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು, ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಸದಸ್ಯರು ನಡೆಸಿದ ಪ್ರತಿಭಟನೆ, ಇತ್ತೀಚೆಗೆ ತಮಿಳುನಾಡಿನ ರೈತರು ತಮ್ಮ ಮೂತ್ರ ಕುಡಿದು ತೋರಿದ ಉಗ್ರ ಪ್ರತಿಭಟನೆ, ಕೆಟ್ಟ ಕನಸು ಕಂಡು ಬೆಚ್ಚಿದಂತೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಜನಸಾಮಾನ್ಯರನ್ನು ಗೋಳಾಡಿಸಿದ ‘ನೋಟು ಅಮಾನ್ಯೀಕರಣ’ ವಿರೋಧಿಸಿ ನಡೆದ ಪ್ರತಿಭಟನೆ... ಇವೆಲ್ಲವನ್ನೂ ಜಂತರ್ ಮಂತರ್‌ನಲ್ಲಿ ನಡೆದ ಕೆಲವು ಪ್ರಮುಖ ಪ್ರತಿಭಟನೆಗಳು ಎಂದು ಉಲ್ಲೇಖಿಸಬಹುದು.
ನಮ್ಮವರೇ ಆದ ಬೇಜವಾಡ ವಿಲ್ಸನ್ ಅವರು ಮೂರು ದಶಕಗಳಿಂದಲೂ ನಡೆಸುತ್ತಿರುವ ‘ಸಫಾಯಿ ಕರ್ಮಚಾರಿ ಆಂದೋಲನ’ ಇಂದು ದೇಶದಾದ್ಯಂತ ಪ್ರಬಲ ಆಂದೋಲನವಾಗಿ ರೂಪುಗೊಂಡಿದೆ. ಮಲಹೊರುವ ಪದ್ಧತಿ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ನಾವಿಂದು ‘ಸ್ವಚ್ಛ ಭಾರತ್’ ಎಂದು ಮೆರೆಯುತ್ತಿರುವ ಹೊತ್ತಿನಲ್ಲಿ ಭಾರತದಲ್ಲಿ ಇನ್ನೂ ಮಲಹೊರುವ ಪದ್ಧತಿ ಜೀವಂತವಾಗಿದೆ. ಮಲ ಹೊರುವವರ ಬದುಕನ್ನು ಬದಲಿಸಲು ಆಗಿಲ್ಲ.
ಇದೇ ಜಂತರ್ ಮಂತರಿನಲ್ಲಿ ಆಂದೋಲನಕಾರರು ಮಲದ ಬುಟ್ಟಿಗಳನ್ನು ಸುಟ್ಟು ತಮ್ಮ ಆಂದೋಲನವನ್ನು ನಡೆಸಿದ್ದರು.
1988ರಲ್ಲಿ ಮಹಿಂದರ್ ಸಿಂಗ್ ತಿಖೈತ್ ಎಂಬ ಜಾಟ್ ರೈತ ಮುಖಂಡ ಸಾವಿರಾರು ಜನ ರೈತರೊಂದಿಗೆ ದೆಹಲಿಯ ಬೋಟ್ ಕ್ಲಬ್ ಪ್ರತಿಭಟನಾ ಸ್ಥಳದಲ್ಲಿ ಧರಣಿ ಕುಳಿತಾಗ ಸುತ್ತಲಿನ ಪಾರ್ಲಿಮೆಂಟಿನ ಪ್ರದೇಶ, ರಾಷ್ಟ್ರಪತಿ ಭವನದಿಂದ ಹಿಡಿದು ಪ್ರಧಾನ ಮಂತ್ರಿಯವರ ನಿವಾಸದವರೆಗಿನ ಜಾಗವನ್ನು ಮಲಿನಗೊಳಿಸಿದ್ದರಂತೆ. ಧರಣಿಯ ಜನ ಅಲ್ಲಿಯೇ ಅಡುಗೆ ಮಾಡಿಕೊಳ್ಳುವುದರಿಂದ ಹಿಡಿದು ತಮ್ಮ ಸ್ನಾನ, ಶೌಚ ಇತ್ಯಾದಿಗಳಿಂದ ಆಯಕಟ್ಟಿನ ಜಾಗವನ್ನೆಲ್ಲ ಆಕ್ರಮಿಸಿ ಗಲೀಜುಗೊಳಿಸಿದ್ದರು. ಅದನ್ನು ತಪ್ಪಿಸುವುದಕ್ಕಾಗಿಯೇ ಮುಂದೆ 1993ರಲ್ಲಿ ಬೋಟ್ ಕ್ಲಬ್ಬಿನಿಂದ ಜಂತರ್ ಮಂತರ್‍ಗೆ ಪ್ರತಿಭಟನಾ ಸ್ಥಳವನ್ನು ವರ್ಗಾಯಿಸಲಾಯಿತು.
ಈ ಚಳವಳಿಗಾರರ ಮನೆಯೆಂದರೆ ಈ ಜಂತರ್ ಮಂತರ್‌ನಫುಟಪಾತ್. ಅಲ್ಲಿಯೇ ಚಾಯ್ ವಾಲಾಗಳು, ಛೊಲೇ ಕುಲ್ಚೆ ಮಾರುವವರು, ತಿಂಡಿ ತಿನಿಸಿನ ಗೂಡಂಗಡಿಗಳು, ಚಳವಳಿಗಾರರ ಟೆಂಟುಗಳು, ಊಟ ತಿಂಡಿ, ಸ್ನಾನ ಎಲ್ಲವೂ ಇಲ್ಲಿಯೇ. ಮೇಲೆ ಖುಲಾ ಆಕಾಶ್… ಮಲಗಲು ಭೂತಾಯಿಯ ಸೆರಗು, ಕಂಡು ಮಾತಾಡಿಸಿದವರೇ ಬಂಧುಗಳು, ಬದುಕಿನ ಉದ್ದೇಶ ನಿಸ್ವಾರ್ಥ ಸೇವೆ, ಸಮಾಜಪರ ಹೋರಾಟ. ಸಮಾಜದ ಒಳಿತಿಗಾಗಿ ಎಲ್ಲವನ್ನೂ ಬದಿಗಿಟ್ಟು ಟೊಂಕ ಕಟ್ಟಿ ನಿಂತ ಜೀವಗಳಿಗೆ ಸುಪ್ರೀಂ ಕೋರ್ಟ್ ಆದೇಶ ಬತ್ತಿಹೋದ ಕಣ್ಣುಗಳಲ್ಲಿ ಮತ್ತೆ ಭರವಸೆಯ ಕಿರಣ ಮೂಡಿಸಿದೆ.
ಪ್ರಜಾತಂತ್ರದ ಈ ಚರಿತ್ರೆ ಬ್ರಿಟಿಷರ ಕಾಲದಿಂದಲೂ ತನ್ನ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. 1911ರಲ್ಲಿ ದೆಹಲಿ ಮುಕುಟಕ್ಕೆ ರಾಷ್ಟ್ರದ ರಾಜಧಾನಿಯ ಗರಿ ಮೂಡಿದಾಗ ಚಾಂದನಿಚೌಕಿನ ಟೌನ್ ಹಾಲ್ ಎದುರು ನಾಗರಿಕರು ತಮ್ಮ ಪ್ರತಿಭಟನೆಯ ಪ್ರದರ್ಶನ ಮಾಡುತ್ತಿದ್ದರಂತೆ. ಮುಂದೆ 1950ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದೇ ಟೌನ್ ಹಾಲಿನೆದುರು – ‘ಪೋರ್ಚುಗೀಸರೇ ಗೋವೆಯನ್ನು ಬಿಟ್ಟು ತೊಲಗಿ’ ಎಂಬ ಉದ್ಘೋಷಣೆಗಳನ್ನು ಕೂಗಿ ಆಂದೋಲನ ನಡೆಸಿದ್ದರೆಂಬ ಇತಿಹಾಸವಿದೆ.
ಇದ್ದಕ್ಕಿದ್ದಂತೆ ಜಂತರ್ ಮಂತರ್ ಪ್ರದೇಶವನ್ನು ತೆರವುಗೊಳಿಸಿ ರಾಮಲೀಲಾ ಮೈದಾನಕ್ಕೆ ಪ್ರತಿಭಟನೆಗಳನ್ನು ತಳ್ಳಿದ್ದರಲ್ಲೂ ವಾಸ್ತವಕ್ಕೆ ಬೆನ್ನುಹಾಕಿ ನಡೆಯುವ ನಡೆಯೇ ಇದೆ. ರಾಮಲೀಲಾ ಮೈದಾನ್ ಇರುವುದು ದೆಹಲಿಯ ಹೃದಯಭಾಗದಿಂದ ದೂರ ಪಾದದ ಕಡೆಗೆ. ಪಾರ್ಲಿಮೆಂಟಿನ ಹತ್ತಿರವೇ ಇರುವ ಜಂತರ್ ಮಂತರಿನ ಗೋಡೆಗಳಿಂದ, ಹಕ್ಕಿಗೂಡುಗಳಿಂದ ಹೊರಡುವ ದನಿಗಳು ಆಳುವ ಪ್ರಭುತ್ವಕ್ಕೆ ಬೇಡ. ರಾಷ್ಟ್ರೀಯ ಹಸಿರು ಪೀಠಕ್ಕೆ ಪರಿಸರ ಕಾನೂನು ಉಲ್ಲಂಘನೆಯಾಗುತ್ತಿದೆಯೆಂದು ಎಲ್ಲಾದರೂ ಚಳವಳಿ ಮಾಡಲಿ ಅಂತ ರಾಮಲೀಲಾ ಮೈದಾನದ ಸಂಚು ಹೂಡಿದ್ದಾರೆನ್ನುತ್ತಾರೆ ಅಲ್ಲಿ ದಶಕಗಳಿಂದ ಆಂದೋಲನ ನಡೆಸುತ್ತಿರುವ ಚಳವಳಿಗಾರರು.
ಮುಂದೆ ಹೋರಾಟಗಾರರ ಕೈಕಾಲುಗಳಿಗೆ ಕೋಳವನ್ನು ತೊಡಿಸುವ ಕಾಲವೂ ಬರಬಹುದು. ವಾಸ್ತವದಲ್ಲಿ ರಾಮಲೀಲಾ ಮೈದಾನದಲ್ಲಿ ಊಟ, ತಿಂಡಿ, ಶೌಚ, ನೀರಿನ ಯಾವ ವ್ಯವಸ್ಥೆಯೂ ಇಲ್ಲ. ಕುಳಿತುಕೊಳ್ಳಲು ಮರದ ನೆರಳೂ ಇಲ್ಲ. ಮತ್ತು ದಿನವೊಂದಕ್ಕೆ ₹ 50,000 ಬಾಡಿಗೆ. ಅದನ್ನೆಲ್ಲಿಂದ ಹೊಂದಿಸಬೇಕು ನಮ್ಮ ಬರಿಗೈ ಚಳವಳಿಗಾರ? ಇತ್ತ ಜಂತರ್ ಮಂತರಿನ ನಿವಾಸಿಗಳು ‘ಶಬ್ದಮಾಲಿನ್ಯದಿಂದ ಬದುಕಿನ ನೆಮ್ಮದಿಯೆ ಇಲ್ಲವಾಗಿದೆ. ನಮಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ’ ಎಂದು ವಾದಿಸುತ್ತಾರೆ.
ರಾಷ್ಟ್ರೀಯ ಹಸಿರು ಪೀಠದ ನಿಷೇಧವನ್ನು ಪ್ರಶ್ನಿಸಿ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಸಾರ್ವಜನಿಕರು ಸೇರುವ ಇಂಥ ತಾಣಗಳಲ್ಲಿ ಪ್ರತಿಭಟನೆ ಮತ್ತು ಧರಣಿಗಳಿಗೆ ಸಂಪೂರ್ಣ ನಿಷೇಧ ಹೇರುವಂತಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.