ಜನಗಣತಿ ಎನ್ನುವುದು ಇಂಗ್ಲಿಷ್‌ನ ‘ಸೆನ್ಸಸ್’ ಪದದ ಅನುವಾದ. ‘ಸೆನ್ಸಸ್’ನ ಮೂಲ ಲ್ಯಾಟಿನ್‌ನ ‘ಸೆನ್ಸೆರ್’. ಅದರರ್ಥ ಅಂದಾಜು. ಜನಸಂಖ್ಯೆಯನ್ನು ಕೆಲವು ಸಂಬಂಧಿತ ಮಾಹಿತಿಯ ಸಹಿತ ಲೆಕ್ಕ ಹಾಕುವ ವಿಧಾನವೇ ಜನಗಣತಿ.
ಕ್ರಿ.ಪೂ. 800–600ರ ಅವಧಿಯಲ್ಲಿ ಋಗ್ವೇದದ ಕಾಲದಲ್ಲಿಯೇ ಜನಗಣತಿ ಮಾಡಲಾಗಿತ್ತು. ಚಾಣಕ್ಯನ ‘ಅರ್ಥಶಾಸ್ತ್ರ’ ಕೃತಿಯಲ್ಲಿಯೂ (ಕ್ರಿ.ಪೂ. 300) ಜನಗಣತಿ ಮಾಡುವ ವಿಧಾನದ ಪ್ರಸ್ತಾಪವಿದೆ. ಮೌರ್ಯರ ಕಾಲದಲ್ಲಿ ಪ್ರಕಟವಾದ ಕೃತಿ ಅದು.
ಅಕ್ಬರನ ಕಾಲದಲ್ಲಿ ‘ಐನ್–ಎ–ಅಕ್ಬರಿ’ ಎಂಬ ವರದಿ ಪ್ರಕಟಗೊಂಡಿತ್ತು. ಅದರಲ್ಲಿ ಜನಸಂಖ್ಯೆ, ಕೈಗಾರಿಕೆ, ಸಂಪತ್ತಿನ ವಿವರಗಳಿದ್ದವು.
ಏಕೀಕೃತ ವ್ಯವಸ್ಥೆಯಲ್ಲಿ ದೇಶದಲ್ಲಿ ಮೊದಲ ಜನಗಣತಿ ನಡೆದದ್ದು 1881ರಲ್ಲಿ. ಆಗಿನಿಂದಲೂ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತಾ ಬಂದಿದೆ. ಜನಸಾಂದ್ರತೆ, ವಸತಿ ಸೌಕರ್ಯ, ವಲಸೆ ಮೊದಲಾದ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಜನಗಣತಿ ಮಾಡಲಾಗುತ್ತದೆ.
2001ರಲ್ಲಿ ‘ಇಂಟೆಲಿಜೆಂಟ್ ಕ್ಯಾರೆಕ್ಟರ್ ರೆಕಗ್ನಿಷನ್’ (ಐಸಿಆರ್) ಎಂಬ ತಂತ್ರಾಶವನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಯಿತು. ಸಂಗ್ರಹಿಸಿದ ಮಾಹಿತಿಯನ್ನು ವೇಗವಾಗಿ ದಾಖಲಿಸಿ, ಸಂಗ್ರಹಿಸಿಕೊಳ್ಳಬಹುದಾದ ವ್ಯವಸ್ಥೆ ಅದು. ಅದರಿಂದ ಜನಗಣತಿಗೆ ಬೇಕಾದ ಮಾನವ ಸಂಪನ್ಮೂಲ ಕೂಡ ಕಡಿಮೆಯಾಯಿತು.
2011ರ ಜನಗಣತಿಯು 2010ರ ಏಪ್ರಿಲ್ 1ರಿಂದ ಪ್ರಾರಂಭವಾಗಿತ್ತು. ಸ್ವಾತಂತ್ರ್ಯಾ ನಂತರ ನಡೆದ ಏಳನೇ ಜನಗಣತಿ ಅದು. ದೇಶದ 120 ಕೋಟಿ ಜನಸಂಖ್ಯೆಯನ್ನು ಅಳೆಯುವ ಬೃಹತ್ ಜನಗಣತಿ ಕಾರ್ಯ ಅದಾಗಿತ್ತು.
ಅಮೆರಿಕ, ಇಂಡೊನೇಷ್ಯಾ, ಬ್ರೆಜಿಲ್, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಜಪಾನ್ ಇಷ್ಟೂ ದೇಶಗಳ ಜನಸಂಖ್ಯೆಯನ್ನು ಸೇರಿಸಿದರೆ ಭಾರತದ ಜನಸಂಖ್ಯೆಗೆ ಸಮನಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.