ಕವಿ–ವಿಮರ್ಶಕರೊಬ್ಬರು ತನ್ನ ಕವಚಕುಂಡಲಗಳನ್ನ ಕಳಚಿಟ್ಟು ಮಕ್ಕಳೊಡನೆ ಆಟಕ್ಕೆ ಇಳಿದುದು, ಅಂಗಳದಲ್ಲಿ ಕುಣಿಯುವುದಕ್ಕೆ ಹೆಜ್ಜೆ ಹಾಕಿದುದು, ಕನ್ನಡದ ಪುಟಾಣಿಗಳ ಪದ–ಪದ್ಯಗಳ ಲೋಕದ ವಿಸ್ಮಯವೂ ಭಾಗ್ಯವೂ ಹೌದು. ಅಂಥ ಸುಮತೀಂದ್ರ ನಾಡಿಗರಿಗೆ, ಎಂಬತ್ತು ವರ್ಷಗಳ ‘ಅಜ್ಜ’ನಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲಸಾಹಿತ್ಯ ಪುರಸ್ಕಾರ’ ಗೌರವ.
ಡಿಡಿಲಕ್ ಡಿಡಿಲಕ್ ಡಿಡಿಲಕ್ಕ
ಡಿಡಿಲಕ್ ಡಿಡಿಲಕ್ ಡಿಡಿಲಕ್ಕ
ಗಣಪತಿ ಕುಣಿದನು ಥೈ ಥಕ ಥಕ್ಕ
ಇಲಿಯೂ ಕುಣಿಯಿತು ಗಣಪತಿ ಪಕ್ಕ
ಗಿಳಿ ಬಿಚ್ಚಿದವು ಹಸುರಿನ ಪುಕ್ಕ
ಕಾಗೆ ತೆರೆದವು ಕಪ್ಪನೆ ಕೊಕ್ಕ
ಡಿಡಿಲಕ್ ಡಿಡಿಲ್ ಡಿಡಿಲಕ್ಕ
ಡಿಡಿಲಕ್ ಡಿಡಿಲ್ ಡಿಡಿಲಕ್ಕ
ಅಕ್ಕಾ ಅಕ್ಕಾ ಗೊತ್ತೇನಕ್ಕ
ನಾನೂ ಕುಣಿದೆ ಧಿಂ ಧಿಂ ಧಿಕ್ಕ
ಪುಟ್ಟ ತಮ್ಮನು ಕಿಲಿ ಕಿಲಿ ನಕ್ಕ
ಡಿಡಿಲಕ್ ಡಿಡಿಲಕ್ ಡಿಡಿಲಕ್ಕ
ಹೀಗೆ ‘ಡಿಡಿಲಕ್ ಡಿಡಿಲಕ್’ ಎಂದು ಮಕ್ಕಳೊಡನೆ ಮೈಮರೆತು ಕುಣಿಯೋದಕ್ಕೆ, ಹಾಡೋದಕ್ಕೆ, ನಗೋದಕ್ಕೆ, ಉಲ್ಲಾಸ ಪಡೋದಕ್ಕೆ ಒಂದು ವಿಶೇಷ ಮನಸ್ಥಿತಿಯೇ ಬೇಕು. ಎಲ್ಲರಿಗೂ ಬರೋದಿಲ್ಲ ಅದು. ಇಂದಿನ ಧಾವಂತದ ದಿನಗಳಲ್ಲಂತೂ ಪುಟ್ಟ ಮಕ್ಕಳೊಡನೆ ಸಮಯ ಹೊಂದಿಸಲು ಹೆಣಗುವ ಅಪ್ಪ–ಅಮ್ಮ, ಸ್ಪರ್ಧೆಯ ಕುದುರೆಯ ಬೆನ್ನಿಗೆ ಬಿದ್ದಿರುವ ಶಾಲೆಗಳು, ಶಿಕ್ಷಕರು ಮಕ್ಕಳೊಡನೆ ಈ ಆಪ್ಯಾಯಮಾನವಾದ ಹುಚ್ಚು ಹಸಿರಿನ ಅವಕಾಶವನ್ನ ಸೃಷ್ಟಿಸಿಕೊಳ್ಳಲೇ ಆರರು. ಮಕ್ಕಳಿಗೂ ನೀಡಲಾರರು, ತಾವೂ ಪಡೆಯಲಾರರು.
ಇದು ಮಕ್ಕಳಿಗೆ ನೀಡುವುದಷ್ಟೇ ಅಲ್ಲ, ಅದರ ದುಪ್ಪಟ್ಟು ದೊಡ್ಡವರು ಪಡೆಯುವುದಿದೆ. ಬೆಳೆದಂತೆ ಬೆಳೆದಂತೆ ಸುತ್ತ ಕಟ್ಟಿಕೊಳ್ಳುತ್ತ ಬಂದ ಅಹಮ್ಮುಗಳು, ಪ್ರತಿಷ್ಠೆಗಳು, ಗೌಜು ಗಮ್ಮತ್ತುಗಳು, ಸೂಕ್ಷ್ಮ ಸೊಫೆಸ್ಟಿಕೇಷನ್‌ಗಳು– ಎಲ್ಲವನ್ನ ಮೈ ಚಳಿ ಬಿಟ್ಟು ಮಕ್ಕಳೊಡನೆ ಒಂದಾಗುತ್ತ ಕಳೆದುಕೊಂಡು ಒಂದು ಗಳಿಗೆಯಾದರೂ ನಿರಾಳವಾಗುವ, ಸ್ವಚ್ಛಂದವನ್ನ ಅನುಭವಿಸುವ, ಆ ಮೂಲಕ ಮನಸ್ಸುಗಳನ್ನ ಕ್ಲೀನ್ ಮಾಡಿಕೊಳ್ಳುವ ಅವಕಾಶ ಇದು. ಹಾಗಾಗಿಯೇ ಇದಕ್ಕೂ ಬೇಕು ವಿಶೇಷವಾದ, ಹುಡುಗಾಟಿಕೆಯ ಹಚ್ಚ ಹಗುರಿನ ಮನಸು.
‘ದಾಂಪತ್ಯಗೀತೆ’, ‘ಪಂಚಭೂತಗಳು’ ಬಗೆಯ ಅಪೂರ್ವ ಗ್ರಂಥಗಳನ್ನ ರಚಿಸಿದ ಡಾ. ಸುಮತೀಂದ್ರ ನಾಡಿಗರೆಂಬ ಕನ್ನಡದ ಗಂಭೀರ ವಿದ್ವಾಂಸ, ಪ್ರತಿಭೆಯ ಕವಿ, ವಿಮರ್ಶಕ ತನ್ನ ಆ ಎಲ್ಲ ಕವಚಕುಂಡಲಗಳನ್ನ ಕಳಚಿಟ್ಟು ಹೀಗೆ ಆಟಕ್ಕೆ ಇಳಿದುದು, ಅಂಗಳದಲ್ಲಿ ಮಕ್ಕಳೊಡನೆ ಕುಣಿಯುವುದಕ್ಕೆ ಹೆಜ್ಜೆ ಹಾಕಿದುದು, ಕನ್ನಡದ ಪುಟಾಣಿಗಳ ಪದ–ಪದ್ಯಗಳ ಲೋಕದ ವಿಸ್ಮಯವೂ ಭಾಗ್ಯವೂ ಹೌದು. ಅವರೊಳಗಿನ ಇನ್ನೊಬ್ಬ ಪುಟಾಣಿ ನಾಡಿಗರನ್ನ ಆಡಲು ಬಿಟ್ಟುದೂ ಹೌದು.
ಸುಮತೀಂದ್ರ ನಾಡಿಗರ ‘ಡಕ್ಕಣಕ್ಕ ಡಕ್ಕಣ’ ಶಿಶುಪ್ರಾಸಗಳ ಬೆನ್ಪುಟದಲ್ಲಿ ಅವರ ಈಗಿನ ತಲೆ ನೆರೆತ ಮುಖದೊಡನೆ, ಬಾಲ್ಯದ ಮುಗ್ಧ ಮುಖದ ಚಿತ್ರವೂ ಅಚ್ಚಾಗಿದೆ. ಅದು ಹಾಗೆ ಇನ್ನೂ ಅವರೊಳಗೆ ಜೀವಂತವಾಗಿದೆ. ಆಸ್ಟ್ರೇಲಿಯಾದ ಮೊಮ್ಮಗಳು ವಿಭಾಳ ನರ್ಸರಿ ರೈಮ್‌ಗಳ ಪುಸ್ತಕಗಳ ಪುಟ ತಿರುವುತ್ತ ‘ಕನ್ನಡದಲ್ಲೂ ಬರೆಯಬಹುದಲ್ಲ’ ಅಂತ ಕನಸುಕಂಡ ಅವರೊಳಗಿನ ಬಾಲ್ಯದ ಮನಸ್ಸು ಬಿಚ್ಚಿಕೊಳ್ಳುತ್ತ ಬಿಚ್ಚಿಕೊಳ್ಳುತ್ತ ಎರಡು ಸಂಕಲನವಾಗುವಷ್ಟು ಪುಟ್ಟ ಪುಟ್ಟ ಪದ್ಯಗಳನ್ನ ಅರಳಿಸಿಬಿಟ್ಟಿತು. ಇಲ್ಲಿನ ಪದ್ಯಗಳೆಂದರೆ ಮೈಚಳೀ ಬಿಟ್ಟ ಮಕ್ಕಳ ಕೇಕೆ, ಕುಣಿದಾಟಗಳದೇ ಜಗತ್ತು ಎಂದರೆ ತಪ್ಪಾಗದು.
ಸರಿಗಮ ಸರಿಗಮ ಪದನಿ, ಹೂ ಬಿಟ್ಟಿತ್ತು ಬದನಿ
ಪಿಟೀಲು ಬಾರಿಸಿ ಬೆಕ್ಕು, ಪ್ರಿನ್ಸಿ ಹೊಟ್ಟೆ ಹುಣ್ಣಾಯಿತು ನಕ್ಕು
ಹಸು ಹಾರಿತ್ತು ಚಂದ್ರನ ಮುಂದೆ, ತಟ್ಟೆ ಓಡಿತ್ತು ಸ್ಪೂನಿನ ಹಿಂದೆ
ಸರಿಗಮ ಸರಿಗಮ ಪದನಿ, ಹೂ ಬಿಟ್ಟಿತ್ತು ಬದನಿ
ಇಲ್ಲಿ ಏನು ಅರ್ಥವಿದೆ, ಏನು ಪ್ರಸಂಗವಿದೆ, ಏನು ಹೇಳೋದಿದೆ ಅಂತೆಲ್ಲ ತಲೆ ಕೆರೆದುಕೊಂಡು ಸುಸ್ತಾಗುವುದು ಬೇಡವೇ ಬೇಡ, ಅದೆಲ್ಲ ಇಲ್ಲದ ಹೂರಣವೇ ಇಲ್ಲಿದೆ. ಮಕ್ಕಳ ಬಾಯಿಗೆ ಸವಿಸವಿಯಾಗಿ ಮತ್ತೆ ಮತ್ತೆ ಚಪ್ಪರಿಸ ಹಚ್ಚುವ ಕಜ್ಜಾಯ ಇಲ್ಲಿದೆ. ಇಂಗ್ಲಿಷಿನಲ್ಲಿ ‘ನಾನ್ಸೆನ್ಸ್‘ ಎನ್ನುವುದು ‘ನಾನ್ಸೆನ್ಸ್’ ಆಗಿ ಉಳಿದಿಲ್ಲ. ಅದೂ ಕೂಡ ಘನಗಂಭೀರ ಸಂಗತಿ ಎನ್ನುವ ಹಾಗೆ ಅಲ್ಲಿನ ಅನೇಕ ಲೇಖಕರು ಬರೆಯುತ್ತ ಬಂದಿದ್ದಾರೆ. ಎಡ್ವರ್ಡ್ ಲಿಯರ್, ಲುಯಿ ಕೆರೋಲ್ ಅಂಥವರು ಅದನ್ನ ತಲೆ ಮೇಲೆ ಹೊತ್ತು ಸನ್ಮಾನಿಸಿದ್ದಾರೆ.
ಆಲೀಸ್ ನೆಲದ ಹೊದರಿನೊಳಗೆ ಹೊಕ್ಕು ಕೊನೆಯವರೆಗೂ ಎದುರಿಸಿದ ಅಸಂಗತ ಜಗತ್ತು ಇಂದು ಎಷ್ಟೊಂದು ಲೋಕಪ್ರಿಯ ಅಂತ ಮತ್ತೆ ಹೇಳುವುದು ಅಗತ್ಯವಿಲ್ಲ. ಹಳ್ಳಿವಾಡದಲ್ಲಿ ಸಖತ್ತಾಗೆ ಇದ್ದ ಇಂಥದರ ಹತ್ತಿರ ಹೋಗುವುದಕ್ಕೆ ಅದ್ಯಾಕೊ ನಮ್ಮ ಭಾರತೀಯ ಮನಸ್ಸು ಮುಜುಗರ, ಹಿಂಜರಿಕೆ ಪಟ್ಟಿತು. ಇತ್ತೀಚೆಗೆ ಇಂಗ್ಲಿಷಿನಲ್ಲಿ ಬರೆಯುತ್ತ ಖ್ಯಾತರಾಗಿರುವ ಅನುಷ್ಕಾ ರವಿಶಂಕರ್ ಅವರ ‘ನಾನ್ಸೆನ್ಸ್ ಸಾಹಿತ್ಯ’ ಹೆಚ್ಚು ಪ್ರಚುರಗೊಂಡಿರುವುದು ಅಮೆರಿಕದಲ್ಲಿ.
ಸುಮತೀಂದ್ರ ನಾಡಿಗರು ಯಾವ ಹೇಚುಪೇಚಿಲ್ಲದೆ ಇವನ್ನ ದಂಡಿಯಾಗಿ ಬರೆದುದು ಅಚ್ಚರಿ, ದಿಗಿಲು, ಬಲು ಸೊಗಸು ಸೊಗಸು. ನಮ್ಮ ಗೆಳೆಯರ ಬಳಗ ‘ಸಂಧ್ಯಾ ಸಾಹಿತ್ಯ ವೇದಿಕೆ’ಯ ಕಾರ್ಯಕ್ರಮಗಳಲ್ಲಿ ಅವರ ಈ ರೈಮ್‌ಗಳನ್ನ ಆಕಾಶವಾಣಿಯ ಅಧಿಕಾರಿಗಳಾದ ಎಮ್.ಎಸ್. ನಾಗೇಂದ್ರ, ಎನ್. ಸುಧೀಂದ್ರ ಹಾಡಿ ಕುಣಿದು ಪ್ರಸ್ತುತಪಡಿಸಿದಾಗ ಹಳ್ಳಿಯ ಹುಡುಗರು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಇಂದು ಇಂಗ್ಲಿಷಿನ ರೈಮ್‌ಗಳದೇ ದರ್ಬಾರು ನಡೆದಿರುವಾಗ ಸುಮತೀಂದ್ರರ ಈ ಚಿನಕುರುಳಿ ರೈಮ್‌ಗಳ ಕಡೆಗೆ ಎಲ್ಲರೂ ಒಂದಿಷ್ಟು ಹೊರಳಿ ನೋಡಬೇಕಿದೆ.
ಡಿಂಗು ಅಂತ ಒಬ್ಳು ಹುಡುಗಿ ಮಾಡ್ತಾ ಇದ್ಲು ತರ್ಲೆ
ಅವಳಿಗೆ ಪಾಠಾ ಕಲಿಸೋಕ್ ಬಂತು ಕೆಂಪು ಮೀಸೆ ಜಿರ್ಲೆ
* * *
ಮೋಂಬತ್ತಿ ಮೋಂಬತ್ತಿ
ಅಳ್ತಾ ಇರ್ತೀಯಾ
ಹೀಗೆ ನೀನು ಅಳ್ತಾ ಇದ್ರೆ
ಸಣ್ಣಗ್ ಆಗ್ತೀಯಾ
* * *
ಇಡೀ ಮಾವಿನ ಹಣ್ಣು ತಿಂದು
ನುಂಗಿ ಬಿಟ್ಟ ಓಟೆ
ಓಟೆ ಒಳಗೆ ಕೂತ್ಕೊಂಡಿತ್ತು
ಟಿಪ್ಪೂ ಸುಲ್ತಾನ್ ಕೋಟೆ
ಇವುಗಳನ್ನು ಯಾವ ಮಕ್ಕಳು ನಾಲಿಗೆ ಸೆಳೆದು ಚಪ್ಪರಿಸುವುದಿಲ್ಲ ಹೇಳಿ? ನಾಡಿಗರು ತಮ್ಮ ಬಾಲ್ಯಕ್ಕೆ, ಹುಡುಗತನಕ್ಕೆ ಪುಟ್ಟಪೂರ ಇಳಿದುದಕ್ಕೇ ಇದು ಸಾಧ್ಯವಾಗಿದೆ. ಅದಕ್ಕೆ ಅವರು ಮನಸ್ಸು ಮಾಡಿದ್ದಾರೆ. ‘ಡಿಡಿಲಕ್ ಡಿಡಿಕ್ ಡಿಡಿಲಕ್ಕ’ ಮತ್ತು ‘ಡಕ್ಕಣಕ್ಕ ಡಕ್ಕಣ’ ಎರಡು ಸಂಕಲನವಾಗಿ ಇವು ಹಿಡಿಹಿಡಿಯಾಗಿ ಬಂದಿವೆ. ನಾಡಿಗರು ಮಕ್ಕಳ ಕಾವ್ಯಲೋಕಕ್ಕೆ ಈ ಬಗೆಯ ಕಿಲಿಕಿಲಿ ಹಾಡುಗಳಿಂದಾಚೆ ಮತ್ತಷ್ಟು ಪ್ರವೇಶ ಪಡೆಯುವುದು ತಮ್ಮದೇ ಆದ ವಿಶಿಷ್ಟ ಸ್ವಭಾವ, ಮನೋಸ್ಥಿತಿಯಿಂದ.
ಹೀಗಾಗಿ ಅದಕ್ಕೆ ಅವರದೇ ಛಾಪು. ‘ಗಾಳೀಪಟ’, ‘ಇಲಿ ಮದುವೆ’ ಎರಡು ಹೊತ್ತಿಗೆಗಳಲ್ಲಿ ಸಂಕಲನಗೊಂಡಿರುವ ಅವು ಮಕ್ಕಳ ಮುಂದೆ ಹರವಿಕೊಳ್ಳುವ ಕವಿತೆ ರಮ್ಯ–ಕನಸಿನ ಲೋಕದ್ದಲ್ಲ. ಎಚ್.ಎಸ್.ವಿ ಅವರ ‘ಕಿನ್ನರಿ’ ಅಲ್ಲಿ ಇಳಿಯುವುದಿಲ್ಲ, ಹೊಯ್ಸಳರ ‘ಕಿನ್ನರ ಕೂಟ’ ಅಲ್ಲಿ ಸೇರುವದಿಲ್ಲ, ಕುವೆಂಪು ಅವರಲ್ಲಿಯಂತೆ ಚಂದ್ರ ದೇವರ ಪೆಪ್ಪರಮೆಂಟಾಗುವುದಿಲ್ಲ. ಬದಲಿಗೆ ನಮ್ಮ ನಡುವೆ ದಿನ ನಿತ್ಯ ನಡೆಯುವ ಮಕ್ಕಳ ಸಿಟ್ಟು ಸೆಡುವು, ಅಳು ನಗುಗಳೇ ಅಲ್ಲಿ ಕೇಳುವುದು.
ಪುಟ್ಟಿ ಪುಟ್ಟಿ ಅಳಬೇಡಮ್ಮ
ಅಮ್ಮಾ ಬರ್ತಾಳೆ
ಇಲ್ಲೇ ಹತ್ರ ಅಂಗ್ಡಿಗ್ಹೋಗಿ
ಬಿಸ್ಕಿಟ್ ತರ್ತಾಳೆ
ಪುಟ್ಟೀ ಪುಟ್ಟೀ ಅಳಬೇಡಮ್ಮ
ಅಮ್ಮಾ ಬರ್ತಾಳೆ
ಬರೋವಾಗ ಜೊತೇಲೇನೆ
ಐಸ್ ಕ್ರೀಂ ತರ್ತಾಳೆ
ಅಂತೆಲ್ಲ ಪುಟ್ಟಿಯನ್ನ ಸಂತೈಸಿ ಸಂತೈಸಿ ಅವಳು ಬಾಯಿ ಮುಚ್ಚದೆ ಹೋದಾಗ ಸೋತು ಹೋಗಿ -ಹೀಗೆ ನೀನು ಅಳ್ತಾ ಇದ್ರೆ ನನ್ನನ್ ಬೈತಾಳೆ
ಮಗೂನ್ ಆಡ್ಸೋಕ್ ಬರೋದಿಲ್ಲ
ದಡ್ಡ ಅಂತಾಳೆ
ಕತ್ತೇ ಹಾಗೆ ಬೆಳ್ದಿದ್ದೀಯ
ಅಂತಾ ಬೈತಾಳೆ
ಅಂತ ತನ್ನ ಗೋಳನ್ನ ಹೊರಹಾಕುತ್ತಾನೆ ಪುಟ್ಟ ಅಣ್ಣ. ಅದು ಅವನ ವಾಸ್ತವದ ಸಂಕಟ. ಕೊನೆಗೂ ಅವ್ನು ಹೇಳೋದು ‘ನಾನು ನಿಂಗೆ ಅಣ್ಣ ಅಲ್ವ ಹೇಳಿದ್ ಕೇಳ್ಬೇಕು, ಅಮ್ಮ ಬಿಸ್ಕೀಟ್ ಐಸ್ಕ್ರೀಂ ತಂದ್ರೆ ನಂಗೂ ಕೊಡ್ಬೇಕು!’ ಅಂತ. ಇನ್ನೊಂದು ಹುಡುಗನ್ನ ನೋಡಿ, ಅವನಿಗೆ ಸೈಕಲ್ ಬೇಕು, ಅಪ್ಪ ಸುಲಭದಲ್ಲಿ ಹೂಂ ಅನ್ನೋನಲ್ಲ.
ಅಪ್ಪಾ ಅಪ್ಪಾ ಸೈಕಲ್ ಕೊಡಿಸಿ
ನಾನು ಸೈಕಲ್ ಬಿಡಬೇಕು
ಮೂರ್‌ಗಾಲೀದು ಬೋರ್ ಆಗಿದೆ
ಎರಡ್‌ಗಾಲೀದು ಬೇಕು
ಸೈಕಲ್ ಹೊಡೆದು ನಿಧಾನವಾಗಿ
ಚೆನ್ನಾಗ್ ಬಿಡೋದು ಕಲಿತೀನಿ
ಆಮೇಲ್ ನಂಗೆ ಸ್ಕೂಟರ್ ಕೊಡಿಸಿ
ಒಂದಿನದಲ್ಲೆ ಕಲಿತೀನಿ
ಹೀಗೆ ಅವನ ಬೇಡಿಕೆಗಳ ಪಟ್ಟಿ ಈಗಲೇ ಸಿದ್ಧವಾಗ್ತಾ ಹೋಗುತ್ತದೆ, ಕೊನೆಗೆ ಒಂಚೂರಾದ್ರೂ ಕೆಲಸಾ ಆಗಲಿ ಅಂತ. ಅಪ್ಪ ಯಾವುದಕ್ಕೂ ಗೋಣಾಡಿಸುವುದಿಲ್ಲ. ಸರಿ ಹುಡುಗ ಸುಮ್ಮನೆ ಉಳಿದಾನೆ?, ತನ್ನ ಈ ಅಸ್ತ್ರವನ್ನೂ ಬಿಡುತ್ತಾನೆ–
ಓದ್ತೀನಪ್ಪ ಇವತ್ತಿನಿಂದ
ಕನ್ನಡ ಇಂಗ್ಲೀಷ್ ಹಿಂದಿ
ಲೆಕ್ಕ ಮಾಡೋದ್ ಕಲೀದಿದ್ರೆ
ಬೈಯ್ರಿ ಕತ್ತೆ ಹಂದಿ...
ಇನ್ನೊಬ್ಬ ಹುಡುಗ ‘ದೆವ್ವ ಗಿವ್ವ ಇರೋದಿಲ್ಲ ಇಲ್ವೇಇಲ್ಲ, ಅಲ್ವ?’ ಅಂತೆಲ್ಲ ಆ ತನ್ನ ಮಾತನ್ನ ಪುಷ್ಟೀಕರಿಸಲು ಏನೇನೆಲ್ಲ ಹೇಳುತ್ತ ಹೋಗುತ್ತಾನೆ ನೋಡಿ:
ಕೆಲವೊಂದ್ಸಾರಿ ತುಂಬಾ ಕುಳ್ಳ
ಕೆಲವೊಂದ್ಸಾರಿ ಆಕಾಶ್ದೆತ್ರ
ಕಪ್ಪಗಿರತ್ತೆ ಅಂತಾರೆ,
ಬೆಳ್ಳಗಿರತ್ತೆ ಅಂತಾರೆ,
ದೆವ್ವ ಅನ್ನೋದ್ ಇಲ್ವೇ ಇಲ್ಲ, ಇಲ್ವೇ ಇಲ್ಲ ಅಲ್ವ?
ಹಾಗೆಲ್ಲ ಹೇಳ್ತಾ ಹೇಳ್ತಾ ಹುಡುಗ ಇದನ್ನೂ ಹೇಳುತ್ತಾನೆ:
ರಾತ್ರಿ ಹೊತ್ತು ಒಬ್ನೆ ಇದ್ರೆ
ದೆವ್ವ ಇದೆ ಅನಿಸ್ತಿರುತ್ತೆ
ಇದ್‌ಕಿದ್ಹಾಗೆ ಏನೋ ಶಬ್ದ
ದೆವ್ವ ಬಂತು ಅನಿಸ್ತಿರುತ್ತೆ.
ಶಿವಾ ಶಿವಾ ಅಂತಾ ಇದ್ರೆ
ರಾಮಾ ಅಂದ್ರೂ ಕೃಷ್ಣಾ ಅಂದ್ರೂ
ಓಡೇ ಹೋಗುತ್ತಂತೆ.
ಅದ್ಕೇ ನಾನು ದೇವರ್ ಹೆಸರನ್ನ
ಜಪಿಸ್ತಾ ಕೂತ್ಕೋತೀನಿ
ದೆವ್ವ ಒಂದೂ ಬರೋದಿಲ್ಲ
ಅಂತಾ ಅಂದ್ಕೋತೀನಿ
ಅಂತಾ ಅಸಲು ಬಿಚ್ಚಿಡುತ್ತಾನೆ. ಸುಮತೀಂದ್ರರು ಈಗ ನಡುವೆ ಪ್ರವೇಶಿಸಿ, ‘ಬಡತನಾನೆ ದೆವ್ವ ಕಣ್ರೋ, ಕೊಳಕುತನಾನೆ ದೆವ್ವ, ರೋಗ ದೆವ್ವ, ಅಲಸಿಕೆ ದೆವ್ವ, ಭಯವೇ ದೆವ್ವ ಕಣ್ರೋ’ ಅಂತ ಅವನ ಬಾಯಲ್ಲೇ ಹೇಳಿಸ್ತಾರೆ.
ಮಕ್ಕಳಿಗಾಗಿ ನಾನಾ ಬಗೆಯ ಪದ್ಯಗಳನ್ನ ಅವರು ರಚಿಸಿದ್ದಾರೆ. ಪರಿಸರದ ಪ್ರೀತಿ ಬೆಳೆಸುವ, ವೈಜ್ಞಾನಿಕ ಆಸಕ್ತಿ ಬೆಳೆಸುವ, ಸುತ್ತಲಿನ ವಾಸ್ತವವನ್ನ ಅರಿವಿನ ಕಣ್ಣಿಂದ ನೋಡುವ ಮಕ್ಕಳಿಗೆ ಇವನ್ನೆಲ್ಲ ನೀಡಬೇಕು ಎನ್ನುವಂಥವನ್ನ ನಾಡಿಗರು ನೀಡಿದ್ದಾರೆ. ಅವರದು ವಾಸ್ತವದ, ನಮ್ಮ ಸದ್ಯದ ತುರ್ತಿನ, ನಮ್ಮ ಸುತ್ತಲಿನ ಸಂಗತಿಗಳನ್ನೇ ಮುಂದಿಡುವ ಸಾಲು ಸಾಲು ರಚನೆಗಳು.
ಎಲ್ಲಾ ಮಕ್ಕಳು ದೇವರೆ ಅಂತೆ!
ದೇವರಿಗೆಂತಹ ಶಿಕ್ಷೆ!
ನಾವು ನಿಜವಾಗಿ ಮನುಷ್ಯರಾದರೆ
ಆಗ ದೇವರಿಗೆ ರಕ್ಷೆ
ಅನ್ನುವಂಥ ಸಾಲುಗಳು ಅಲ್ಲಿ ಕೇಳಿದರೆ ಅದು ಸಹಜವೇ. ನಾಡಿಗರು ಮಕ್ಕಳಿಗಾಗಿ ಪುಟ್ಟ ಪುಟ್ಟ ಕತೆಗಳನ್ನೂ ಬರೆದರು, ಕಾದಂಬರಿಯನ್ನೂ ಬರೆದಿದ್ದಾರೆ. ‘ಗೂಬೆಯ ಕಥೆ’ ಅನ್ನೋ ಸಂಕಲನದಲ್ಲಿ ಗೂಬೆಯ ಕಣ್ಣಿಗೆ ಆದ ಗಾಯಕ್ಕೆ ಕೋಗಿಲೆ ಡಾಕ್ಟರು ಗುಣವಾಗೋ ಉಪಾಯ ಹೇಳುತ್ತಾರೆ. ಹಾಗೆ ಮಾಡಿದ ಗೂಗೆ ಕಣ್ಣಿನ ಗಾಯವನ್ನ ಗುಣವಾಗಿಸಿಕೊಳ್ಳುತ್ತದೆ. ಆದರೆ ‘ಈ ಡಾಕ್ಟರ್ ನನಗೆ ಔಷಧಿಯನ್ನೇನು ಕೊಟ್ಟಿಲ್ಲವಲ್ಲ’ ಅಂತ ಫೀಸನ್ನೇ ಕೊಡಲೊಪ್ಪುವುದಿಲ್ಲ. ಗೂಗೆಯನ್ನ ಡಾಕ್ಟರ್ ಹತ್ತಿರ ಕರೆದುಕೊಂಡು ಬಂದವರು ಕಾಗೆ.
ಸರಿ, ಕಾಗೆಯನ್ನೇ ಕೊಡು ಅಂತ ಕೇಳಲು ಗೂಬೆ ಹೋಗುತ್ತದೆ. ಕಾಗೆ ‘ತಾಳು, ಇಸಿದುಕೊಂಡು ಬರುತ್ತೇನೆ’ ಅಂತ ಹಾರಿಹೋದುದು ವಾಪಸು ಬರುವುದೇ ಇಲ್ಲ. ಊರಲ್ಲಿನ ಮಾರಮ್ಮನ ಬಳಿಗೆ ಕೋಗಿಲೆ ಡಾಕ್ಟರ್ ದೂರು ಒಯ್ಯುತ್ತದೆ. ಮಾರಮ್ಮ ಇಬ್ಬರನ್ನೂ ಕರೆಸಿ ದಂಡವಿಧಿಸುತ್ತಾಳೆ. ಹಗಲುಹೊತ್ತು ಕಣ್ಣು ಕಾಣಿಸದಿರಲಿ ಅಂತ ಗೂಬೆಗೆ ದಂಡ. ಕೋಗಿಲೆಯ ಮರಿಗಳನ್ನ ಸಾಕಿ ಜೋಪಾನಮಾಡುವುದು ಕಾಗೆಗೆ ದಂಡ. ಹಾಗಾಗಿ ಕಾಗೆಗೆ ಈ ಗೂಬೆಯಿಂದ ನಾನೊಳ್ಳೆ ಸಿಕ್ಕುಹಾಕಿಕೊಂಡೆ ಅಂತ ಗೂಬೆಯಮೇಲೆ ಸಿಟ್ಟು.
ಗೂಬೆ ಕೊನೆಗೂ ದುಡ್ಡುಕೊಡದೇ ಹೋದುದಕ್ಕೆ ಕೋಗಿಲೆಗೂ ಗೂಬೆಯಮೇಲೆ ಸಿಟ್ಟು. ಗೂಬೆ ಇಬ್ಬರ ಕಣ್ಣನ್ನೂ ತಪ್ಪಿಸಿ ರಾತ್ರಿ ಮಾತ್ರ ಅಡ್ಡಾಡಿಕೊಂಡಿರುತ್ತದಂತೆ. ಈ ಸಂಕಲನದಲ್ಲಿ ರಾಮು ಅನ್ನೋ ಹುಡುಗ ಗೆಳೆಯ ವಾಸುವಿನ ಮನೆಗೆ ಕೇರಮ್ ಆಡಲು ಹೋಗಿ, ತಾನು ಫೌಲು ಆಟ ಆಡದಿದ್ದರೂ ಸೋಲನ್ನ ತಾಳದೆ ಹಾಗೆ ಹಂಗಿಸಿದ್ದರಿಂದ ಬೇಜಾರೋ ಬೇಜಾರು ಆಗಿ, ವಾಪಸು ಬಂದು ಮನೆಯ ಅಂಗಳದಲ್ಲಿ ಫೂಟ್‌ರಗ್ಗಿನ ಮೇಲೆ ಕೂತಕೊಳ್ತಾನೆ.
ಆಹಾ, ಈಗ ಆ ಫೂಟ್‌ರಗ್ಗು ಮಂತ್ರದ ರತ್ನಗಂಬಳಿಯಾಗಿ ಗಲಿವರ್‌ನ ಪ್ರವಾಸದ ಹಾಗೆ ಲಿಲಿಪುಟ್ಟರಂಥ ಪುಟ್ಟರಿರುವಲ್ಲೂ, ದೈತ್ಯರಿರುವಲ್ಲಿಗೂ ಕರೆದೊಯ್ಯುತ್ತ ಸಂತಸಪಡಿಸುವ ಕತೆಯನ್ನೂ ಅವರು ಹೆಣೆದುದಿದೆ. ಇನ್ನೂ ಏನೇನೊ ಕತೆಗಳಿವೆ, ಅವೆಲ್ಲ ಮಕ್ಕಳಿಗೇ ಆದುವು, ದೊಡ್ಡವರಿಗಲ್ಲವೇ ಅಲ್ಲ. ಮಕ್ಕಳಾಗಲು ಪ್ರಯಾಸಪಟ್ಟರೆ ಅವರೂ ಓದಬಹುದು. ನಾಡಿಗರು ೧೯೭೮ರಷ್ಟು ಹಿಂದೆಯೇ ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮಕ್ಕಳ ಸಾಹಸದ ಕಾದಂಬರಿಯನ್ನು ಬರೆದಿದ್ದರು. ಅದಕ್ಕೆ ಅವರಿಗೆ ಬಹುಮಾನವೂ ಬಂದಿತ್ತು.
ಅದು ಪುಸ್ತಕವೂ ಆಗಿ ಈಗ ಮರುಮುದ್ರಣಗೊಳ್ಳುತ್ತಲೇ ಇದೆ. ಸುಮತೀಂದ್ರ ನಾಡಿಗರು ತಮ್ಮ ಒಂದು ಪುಸ್ತಕದಲ್ಲಿ ‘ನನ್ನನ್ನು ಅಜ್ಜ, ತಾತ ಎನ್ನುವ ಎಲ್ಲ ಮೊಮ್ಮಕ್ಕಳಿಗೂ ಅರ್ಪಿಸುತ್ತಿದ್ದೇನೆ’ ಎಂದಿರುವುದಿದೆ. ಹೀಗೆ ಅಜ್ಜ ಆಗುವ ಉಮೇದು ಎಷ್ಟು ಜನಕ್ಕೆ ಇದ್ದೀತು? ಅದಕ್ಕೇ ಅವರಿಗೆ ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಬಂದಿದೆ. ಈ ಡಿಡಿಲಕ್ ಅಜ್ಜ ಇನ್ನೂ ಹಲವರಿಗೆ ಹೀಗೆ ಅಜ್ಜ ಆಗುವ ಆಸೆ ಹುಟ್ಟಿಸಲಿ, ಕನ್ನಡದ ಮಕ್ಕಳ ಸಂಪದ ಹೆಚ್ಚಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.