ADVERTISEMENT

ತಕರಾರು

ಟಿ.ಎಸ್.ನಾಗರಾಜ ಶೆಟ್ಟಿ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ತಕರಾರು
ತಕರಾರು   

ತರಕಾರಿ ತೆಗೆದವು ತಕರಾರು
ಯಾರ್ರೀ ನ್ಯಾಯವ ಹೇಳೋರು?
ಹಣ್ಣೂ ಬಿಟ್ಟುವು ಕೆಂಗಣ್ಣು
ನಮ್ಮನ್ನು ‘ಕೇರು’ ಮಾಡೋರ್ಯಾರು?

ತೆಗೆದವು ಒಟ್ಟಿಗೆ ರಾದ್ಧಾಂತ
ಸೃಷ್ಟಿಗೆ ಬೇಡವೆ ಸಿದ್ಧಾಂತ?
ನಮ್ಮಲ್ಲೇಕೆ ತರಾವರಿ
ಸುಮ್ಮನೆ ನಮಗೆ ಸದಾ ‘ವರಿ’

ಜಂಬದ ಕುಂಬಳ ಬೀಗುತಿದೆ
ಕಂಬದ ನುಗ್ಗೆ ಕುಗ್ಗುತಿದೆ
ಮಾವು ನಗುತಿದೆ ಮುಸು ಮುಸು
ಬೇವಿಗೆ ಮೂಗಿನ ತುದಿ ಮುನಿಸು!

ADVERTISEMENT

ಹುಣಸೆಗೆ ತೊಡಿಸಿದೆ ಮೇಲಂಗಿ
ಗೆಣಸಿಗೆ ಮಾತ್ರ ಬೆತ್ತಲೆ ಭಂಗಿ
ಆಲೂಗಡ್ಡೆಗೆ ಮೈತುಂಬ ಸಿಪ್ಪೆ
ರುಚಿಯಲಿ ಮಾತ್ರ ಬರಿ ಸಪ್ಪೆ!

ಹಸಿರಿನ ಹೆಮ್ಮೆ ಹುರುಳೀ ಕಾಯಿಗೆ
ಬಿಳುಪಿನ ಬಿಮ್ಮು ಮೂಲಂಗಿ ಮೂತಿಗೆ
ಗುಂಡಗೆ ದುಂಡಗೆ ಬೀಟ್ರೂಟು
ಐಸ್ಕ್ರೀಂ ಕೋನು ಕ್ಯಾರೆಟ್ಟು!

ಈರುಳ್ಳಿಗೆ ಸೀರೆಯೊ ಸೀರೆ
ಬೆಳ್ಳುಳ್ಳಿಗೆ ಮರಿಗಳು ಬೇರೆ
ಬೆಂಡೇಕಾಯಿಗೆ ಬರಿ ಅಂಟು
ತೊಂಡೇಕಾಯಿಯ ನಂಟು!

ಸೃಷ್ಟಿಯ ಗುಟ್ಟು ವಿವಿಧತೆಯೇ
ಬೇಡವೆ ಬೇಡ ಅನುಮಾನ
ಒಂದೊಂದರ ಗುಣವೂ ಬೇರೆ
ಎನ್ನುತ ಬಿಟ್ಟವು ಬಿಗುಮಾನ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.