ಕವಿ, ವಿದ್ವಾಂಸ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರದು ದೊಡ್ಡ ಹೆಸರು. ನೋಡಲು ಮಾತ್ರ ಕೊಂಚವೂ ಬೊಜ್ಜಿಲ್ಲದ ವಾಮನರೂಪಿ. ಆ ವ್ಯಕ್ತಿತ್ವದಲ್ಲಿ ಯಾವುದೇ ಕ್ಷಣದಲ್ಲೂ ವಾದಕ್ಕೆ ಸಿದ್ಧನೆಂಬ ಕೆಚ್ಚಿದೆ.
ಜೀವಂತ ಉತ್ಸಾಹದಿಂದ ಸಾಹಿತ್ಯದ ಎಲ್ಲಾ ಮುಖ್ಯ ಚರ್ಚೆಗಳಲ್ಲೂ ಪಾಲುಗೊಳ್ಳುತ್ತ ಎಪ್ಪತ್ತಾರರ ಹರೆಯ ತಲುಪಿರುವ ಎನ್ನೆಸ್ಸೆಲ್ ಇಂದಿಗೂ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿಯೇ ಉಳಿದಿದ್ದಾರೆ.
ಜನಪ್ರಿಯ ಕನ್ನಡ ಅಧ್ಯಾಪಕ, ಶಾಸ್ತ್ರಗ್ರಂಥಗಳನ್ನು ಬರೆದ ವಿದ್ವಾಂಸ, ಎಲಿಯಟ್, ಯೇಟ್ಸ್, ಷೇಕ್ಸ್‌ಪಿಯರ್ ಕವಿತೆಗಳನ್ನು ಕನ್ನಡಕ್ಕೆ ತಂದು `ತ್ರಿವಿಕ್ರಮ ಸಾಹಸ~ಗೈದ (ಈ ಮಾತು ಜಿ.ಎಸ್.ಎಸ್. ಒಂದು ಸಭೆಯಲ್ಲಿ ಆಡಿದ್ದು) ಸಮರ್ಥ ಅನುವಾದಕ, ಸ್ವತಃ ಉತ್ತಮ ಕವಿ, ಗೀತಗಳನ್ನೂ - ಮಕ್ಕಳ ಪದ್ಯಗಳನ್ನೂ ಚಳವಳಿಯ ತತ್ಪರತೆಯಿಂದ ಬರೆದ ಉತ್ಸಾಹಿ... ಎಂದೆಲ್ಲ ಅವರ ಕುರಿತು ಹೇಳುವಾಗಲೂ ಅವೆಲ್ಲದರ ಹಿಂದೆ ಕಾಣುವುದು ಸಾಹಿತ್ಯದ ಕುರಿತ ಅವರ ನಿತಾಂತ ಶ್ರದ್ಧೆ.
ತೀನಂಶ್ರೀ, ತ.ಸು.ಶಾಮರಾಯ, ಡಿ.ಎಲ್.ಎನ್. ಅವರಂಥ ಹಿರಿಯ ವಿದ್ವಾಂಸರ ನೇರ ವಿದ್ಯಾರ್ಥಿಯಾಗಿದ್ದ ಭಟ್ಟರು ಪುಣ್ಯವಂತರು. ಆದರ್ಶ ಶಿಕ್ಷಕನ ಅಂತರಂಗದ ಶಿಸ್ತನ್ನು ಅವರು ಅಂಥ ಗುರುಗಳಿಂದಲೇ ಪಡೆದುಕೊಂಡಿರಬೇಕು. ಅದನ್ನು ಮುಂದಿನ ಪೀಳಿಗೆಗೂ ಅವರು ನಿರ್ವಂಚನೆಯಿಂದ ದಾಟಿಸಿದ್ದಾರೆ.
ಭಟ್ಟರ ತರಗತಿಗಳಲ್ಲಿ ಕುಳಿತು ಪಾಠ ಕೇಳಿದ ವಿದ್ಯಾರ್ಥಿ ನಾನಲ್ಲ. ಆದರೆ ಆ ಅವಕಾಶ ಪಡೆದ ನನ್ನ ಅನೇಕ ಕವಿಮಿತ್ರರು ತುಂಬು ಕೃತಜ್ಞತೆಯಿಂದ ಆ ಪಾಠಗಳನ್ನು, ಮುಖ್ಯವಾಗಿ ವ್ಯಾಕರಣ ಸಂಬಂಧದ ಅವರ ತಜ್ಞತೆಯನ್ನು ನೆನಪಿಸಿಕೊಳ್ಳುತ್ತಾರೆ.
ಕವಿ ಸಿದ್ದಲಿಂಗಯ್ಯನವರು ಒಂದು ಕವಿತೆಯಲ್ಲಿ ಭಟ್ಟರ ಆರ್ದ್ರ ವ್ಯಕ್ತಿತ್ವದ ಸ್ನೇಹಶೀಲತೆಯನ್ನು ಪ್ರೀತಿಯಿಂದ ಚಿತ್ರಿಸಿದ್ದಾರೆ. ಶುದ್ಧ ಶಾಕಾಹಾರಿಯಾದರೂ ಭಟ್ಟರು `ತಲೆ~ ತಿನ್ನುತ್ತಾರೆಂದು ಲಕ್ಷ್ಮಣರಾವ್ ಒಂದು ಹನಿಗವಿತೆಯಲ್ಲಿ ವಿನೋದವಾಡಿದ್ದಾರೆ. ಇವೆಲ್ಲ ತಕ್ಷಣಕ್ಕೆ ಭಟ್ಟರ ಕುರಿತು ನೆನಪಾಗುತ್ತಿರುವ ಸಂಗತಿಗಳು.
ಶಿವಮೊಗ್ಗೆಯಲ್ಲಿ ಜನಿಸಿದ ಎನ್ನೆಸ್ಸೆಲ್ (1936) ಇಂಟರ್‌ಮೀಡಿಯೆಟ್‌ವರೆಗೆ ಅಲ್ಲಿಯೇ ಓದಿ ಮುಂದೆ ಮೈಸೂರಿಗೆ ಬಂದು ವಾರಾನ್ನ ಮಾಡಿ ಓದು ಮುಂದುವರಿಸಿದರು. ಎಳೆವಯಸಿನಲ್ಲೇ ತಂದೆಯನ್ನು ಕಳೆದುಕೊಂಡ ಅವರನ್ನು ತಾಯಿ ಕಷ್ಟಪಟ್ಟು ಓದಿಸಿದರು. `ನನ್ನ ತಾಯಿಯ ಜೀವನ ಮಕ್ಕಳಿಗಾಗಿ ಆಕೆ ನಡೆಸಿದ ಒಂದು ಆತ್ಮಯಜ್ಞ~ ಎಂಬ ಅವರ ಮಾತು ಎಲ್ಲವನ್ನೂ ಸೂಚಿಸುವಂತಿದೆ.
ತೀನಂಶ್ರೀ ಅವರ ಮಾರ್ಗದರ್ಶನದಲ್ಲಿ ಭಾಷಾಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಭಟ್ಟರು ಮುಂದೆ ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಅಧ್ಯಾಪಕರಾದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ನಿವೃತ್ತಿಯವರೆಗೂ ಅಲ್ಲಿಯೇ ಸೇವೆ ಸಲ್ಲಿಸಿದರು (1996).
`ಬರಿ ಆಡುಮಾತೂ ಅಲ್ಲದ, ಬರಿ ಗ್ರಾಂಥಿಕವೂ ಅಲ್ಲದ, ಸಂಭಾವಿತವೆನ್ನಿಸಿದರೂ ಶಕ್ತಿಹೀನವಲ್ಲದ~ ಕಾವ್ಯಭಾಷೆಯನ್ನು ಭಟ್ಟರು ಕಂಡುಕೊಂಡಿದ್ದಾರೆಂದು ಅವರ ಎರಡನೆಯ ಕವನ ಸಂಕಲನದ ಹೊತ್ತಿಗೇ ಡಾ.ಯು.ಆರ್.ಅನಂತಮೂರ್ತಿಯವರು ಗುರುತಿಸಿದರು. ಅತ್ಯಂತ ಶ್ರೇಷ್ಠವಾದುದನ್ನು ಸಾಹಿತ್ಯದಿಂದ ಅಪೇಕ್ಷಿಸುವ, ಅಲ್ಪ ಯಶಸ್ಸಿನಿಂದ ತೃಪ್ತಿ ಪಡದ ಸಾಹಿತ್ಯ ಪರಿಸರದಲ್ಲಿ ಆ ಅರಿವಿನಿಂದ ಎನ್ನೆಸ್ಸೆಲ್ ಕಾವ್ಯಸೃಷ್ಟಿಯಲ್ಲಿ ತೊಡಗಿದ್ದಾರೆಂಬ ಅವರ ಮಾತು ನನಗೆ ಭಟ್ಟರ ಒಟ್ಟು ಕಾವ್ಯೋದ್ಯೋಗದ ಹಿನ್ನೆಲೆಯಲ್ಲಿ ಮಹತ್ವದ್ದಾಗಿ ಕಾಣುತ್ತದೆ.
`ಕತ್ತಲನ್ನು ತೊಳಸಿ ಅಲ್ಲಿರುವ ಚಿಲುಮೆಗಳನ್ನು ಪ್ರಜ್ಞೆಯ ಬಯಲಿಗೆ ಹಾಯಿಸುವ ಕೆಲಸ~ (ಅಡಿಗ) ಭಟ್ಟರ ಕಾವ್ಯಕೃಷಿಯಲ್ಲಿ ಸತತವಾಗಿ ನಡೆದಿದೆ. ಅದಕ್ಕಾಗಿ ಅವರು ದೇವರೊಡನೆ ಸೆಣೆಸಿದಂತೆ ದೆವ್ವಗಳೊಡನೆಯೂ ಮಾತುಕತೆಯಾಡಿದ್ದಾರೆ. ಅಧೋಲೋಕಗಳ ಕದ ತೆರೆದಿದ್ದಾರೆ.
ಪಾಶ್ಚಾತ್ಯ ಕವಿಗಳ ಬೆನ್ನು ಬಿದ್ದು ಅವರಿಂದ ಕಲಿಯಬೇಕಾದ್ದನ್ನು ಕಲಿತು ಪರಂಪರೆಯ ಕಾವ್ಯಕ್ಕೆ ಹೊಸ ಧಾತು ಸೇರಿಸಿದ್ದಾರೆ. `ಭಾವಗೆಡಲು ಎದೆ, ಮನೆಯೊಳಗೆ ಹಾವು ಎಲ್ಲೋ ಅಡಗಿದಂತೆ~- ಇದು ಭಟ್ಟರ ಒಂದು ಸಾನೆಟ್ ಸಾಲು. ಅದರ ಕುರಿತು ಗಮನ ಸೆಳೆಯುತ್ತ ಕೀರ್ತಿನಾಥ ಕುರ್ತಕೋಟಿ ಹೇಳುತ್ತಾರೆ: `ಮನೆಯೊಳಗೆ ಅಡಗಿಕೊಂಡು ಆತಂಕ ಹೆಚ್ಚಿಸುವ ಹಾವಿನ ಪ್ರತಿಮೆ ನೂರಕ್ಕೆ ನೂರರಷ್ಟು ಭಾರತೀಯ ಪ್ರತಿಮೆಯಾದರೂ ಅದು ಸೃಷ್ಟಿಸುವ ಭಾವಪ್ರಪಂಚದ ಹದವನ್ನರಿತು ಉಪಯೋಗಿಸುವ ರೀತಿ ಮಾತ್ರ ಶೇಕ್ಸ್‌ಪಿಯರ್‌ನದು~.
`ಅರುಣಗೀತ~, `ಮಗನಿಗೊಂದು ಪತ್ರ ಕವಿತೆಗಳು~- ಒಟ್ಟು ಕನ್ನಡ ಕಾವ್ಯದ ದೃಷ್ಟಿಯಿಂದಲೂ ಮಹತ್ವದ ರಚನೆಗಳೆಂಬ ಮನ್ನಣೆ ಗಳಿಸಿವೆ. `ದೀಪಿಕಾ~, `ಎಲ್ಲಿ ಜಾರಿತೋ~, `ಎಂಥ ಮರುಳಯ್ಯಾ~ ಮುಂತಾದ ಹಾಡುಗಳೂ, `ಗೇರ್ ಗೇರ್ ಮಂಗಣ್ಣ~, `ಭಾಳ ಒಳ್ಳೇವ್ರ ನಂ ಮಿಸ್ಸು~ ಮುಂತಾದ ಶಿಶುಗೀತಗಳೂ ಈ ಕವಿಗೆ ಅಪಾರ ಜನಪ್ರೀತಿ ಒದಗಿಸಿವೆ.
ರಮಣರ ಹಾಡುಗಳು, ಅಕ್ಷರಮಣಮಾಲೆ ಮುಂತಾದ ರಮಣ ಸಾಹಿತ್ಯಕೃತಿಗಳ ಅನುವಾದ ಅನುಭಾವಿಕ ಸಾಹಿತ್ಯಕ್ಕೆ ಭಟ್ಟರ ಅಮೂಲ್ಯ ಕೊಡುಗೆಗಳು. ಮೂಲ ತಮಿಳು ರಚನೆಗಳ ಜೊತೆ ಕೈಹಿಡಿದು ನಡೆದಷ್ಟು ಆ ಅನುವಾದಗಳು ಸಹಜವಾಗಿವೆ, ಸಾರ್ಥಕವಾಗಿವೆ.
ಸಾಹಿತ್ಯ ಮೀಮಾಂಸೆ, ವಿಮರ್ಶೆ ಭಟ್ಟರ ಸಾಹಿತ್ಯ ವ್ಯಕ್ತಿತ್ವದ ಇನ್ನೊಂದು ಮುಖ, `ಕಾವ್ಯಪ್ರತಿಮೆ~ ಅವರ ಇತ್ತೀಚಿನ ಕೃತಿ (2010). ಕಾವ್ಯದಲ್ಲಿ ಪ್ರತಿಮೆಗಳ ಸ್ವರೂಪ, ವಿನ್ಯಾಸಗಳ ಕುರಿತ ಚಿಂತನೆಗಳ ಅಧ್ಯಯನದ ಈ ಕೃತಿ ಕನ್ನಡ ಸಾಹಿತ್ಯಮೀಮಾಂಸೆಯ `ಆಚಾರ್ಯಕೃತಿ~ ಶಿಖರಗಳ ಸಾಲಿಗೆ ಸೇರಿದೆ.
ಕನ್ನಡ ಮಾತ್ರವಲ್ಲ, ಜಗತ್ತಿನ ಹಲವು ಶ್ರೇಷ್ಠ ಕವಿ ಕಾವ್ಯಗಳ ಓದು ಮತ್ತು ಅನುವಾದಗಳಿಂದ ಪಕ್ವಗೊಂಡ ಈ ಕಾವ್ಯಮೀಮಾಂಸು ಎರಡು ವರ್ಷ ತದೇಕಚಿತ್ತರಾಗಿ ಕೂತು ತನ್ನೆಲ್ಲ ಅನುಭವ ಮತ್ತು ಚಿಂತನೆಗಳನ್ನು ಒಳಗೊಂಡ ಈ ಕೃತಿಯನ್ನು ಬರೆದು ಕನ್ನಡ ವಿದ್ವತ್ ವಲಯದ ಓದಿಗೆ ಒಪ್ಪಿಸಿದ್ದಾರೆ. ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಈ `ಹಿರಿಯ ವಿದ್ಯಾರ್ಥಿ~ ಕೊಟ್ಟ ಕೊಡುಗೆ ಬಹುಕಾಲ ಬಾಳುವಂಥದು.
ಭಟ್ಟರು ಚಿಕ್ಕವರಾಗಿದ್ದಾಗ, ಅ.ನ.ಕೃಷ್ಣರಾಯರ ಭಾಷಣದಲ್ಲಿ ಶಿಶುನಾಳ ಷರೀಫರ ಹೆಸರು ಕೇಳಿ ಆಕರ್ಷಿತರಾದರು. ಯಾವ ಬೀಜ ಎಲ್ಲಿ ಬೀಳಬೇಕೋ ಅಲ್ಲೇ ಬಿದ್ದು ಗಿಡ ಮೊಳಕೆಯೊಡೆಯಿತು. ಮುಂದೆ ಭಟ್ಟರು ನಾಡಿನೆಲ್ಲೆಡೆ ಶಿಶುನಾಳರ ಹಾಡು ಕೇಳುವಂತೆ ಮಾಡಿದರು. ಸಂತಕವಿಯ ಈ ಪುನರವತರಣ ಕಾರ್ಯದಿಂದ ಇವರಿಗೂ `ಶರೀಫಭಟ್ಟ~ರೆಂಬ ಖ್ಯಾತಿ ಪ್ರಾಪ್ತವಾಯಿತು! ಪರಂಪರೆ ಮುಂದುವರಿಯುವುದೇ ಹೀಗೆನ್ನೋಣವೆ? ಈಗ ಆ ಹಿರಿಯ ಸಾಹಿತಿ ಕೃಷ್ಣರಾಯರ ಹೆಸರಿನ ಪ್ರಶಸ್ತಿ ಭಟ್ಟರಿಗೆ ಸಲ್ಲುತ್ತಿದೆ. ಶರೀಫರ ಬೆಳವ ~ಕೂಕೂ~ ಎಂದು ಕೂಗುತ್ತಿದೆ.
ಹ್ಞಾಂ, ಇದೀಗ ಭಟ್ಟರು `ಅರುಣಾಚಲದ ಜ್ಯೋತಿ ರಮಣ ಮಹರ್ಷಿ~ ಎಂಬ ಶೀರ್ಷಿಕೆಯಲ್ಲಿ ರಮಣರ ಜೀವನಚರಿತ್ರೆ ಬರೆಯುತ್ತಿದ್ದಾರೆ. ಏನನ್ನೇ ಆದರೂ ಉತ್ಕಟವಾಗಿ ಮಾಡುವುದು ಭಟ್ಟರ ಸ್ವಭಾವ (ಜಗಳವನ್ನೂ!). ಭಟ್ಟರ ಮನಸನ್ನು ಈಗ ರಮಣರೇ ಪೂರ್ತಿಯಾಗಿ ಆವರಿಸಿಬಿಟ್ಟಿದ್ದಾರೆ. ಮಹಾಮೌನಿ ರಮಣರು ಮಹಾಮಾತುಗಾರ ಭಟ್ಟರನ್ನು ಸೆಳೆದಿರುವ ಈ ಪರಿಗೆ ನಾನು ಬೆರಗಾಗಿ ಹೋಗಿದ್ದೇನೆ.
ಜುಲೈ 22ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕವಿ ಲಕ್ಷ್ಮೀನಾರಾಯಣ ಭಟ್ಟರಿಗೆ `ಅನಕೃ ಪ್ರಶಸ್ತಿ~ ಪ್ರದಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.