ADVERTISEMENT

ತುಂಟ ಕಾಳು

ಬಣ್ಣದ ತಗಡಿನ ತುತ್ತೂರಿ

ಗೀರ್ವಾಣಿ
Published 25 ಮೇ 2013, 19:59 IST
Last Updated 25 ಮೇ 2013, 19:59 IST

ದೊಂದು ಗೋಧಿ ಹೊಲ. ಅಲ್ಲಿ ತೆನೆ ಮೂಡಿ ಕಾಳುಗಳು ತುಂಬಿಕೊಂಡಿದ್ದವು. ತಂಪನೆ ಗಾಳಿಗೆ ತಲೆದೂಗುತ್ತ ಎಲ್ಲೆಲ್ಲೂ ಹಸಿರು ಉಕ್ಕಿಸಿ, ದಿನದಿಂದ ದಿನಕ್ಕೆ ಗುಂಡಗೆ ಬೆಳೆಯುತ್ತಿದ್ದವು. ಅದರಲ್ಲಿ ಒಂದು ಗೋಧಿ ಕಾಳಿತ್ತು. ಅದು ಬಲು ತುಂಟ ಕಾಳು. ಅದರ ಬಯಕೆ ಏನೆಂದರೆ, ತಾನು ಎಲ್ಲ ಕಾಳುಗಳಂತೆ ಗಿರಣಿಗೆ ಹೋಗಿ ಹಿಟ್ಟಾಗಬಾರದು, ತಾನು ಮತ್ತೆ ನೆಲಕ್ಕೆ ಬಿದ್ದು ಮೊಳಕೆಯೊಡೆದು ಗಿಡವಾಗಬೇಕು ಎನ್ನುವುದು. ಅದಕ್ಕಾಗಿ ಅದು ಉಳಿದೆಲ್ಲ ಕಾಳುಗಳಿಗಿಂತ ಹೆಚ್ಚು ಸಾರ ಹೀರಿ ದಷ್ಟಪುಷ್ಟವಾಗಿ ಬೆಳೆದಿತ್ತು.

ಇಡೀ ತೆನೆಯಲ್ಲಿ ಅದೊಂದೇ ಕಾಳು ಎದ್ದು ಕಾಣುತ್ತಿತ್ತು. ಇದರಿಂದಾಗಿ ಆ ಹೊಲಕ್ಕೆ ಕಾಳು ತಿನ್ನಲು ಬರುತ್ತಿದ್ದ ಹಕ್ಕಿಗಳಿಗೆ, ಕೀಟಗಳಿಗೆ ಆ ಕಾಳಿನ ಮೇಲೆ ಕಣ್ಣು ಬೀಳುತ್ತಿತ್ತು. ತುಂಟ ಕಾಳು ಹಕ್ಕಿಗಳು ಬಂದಾಗೆಲ್ಲ ಎಲೆ ಮರೆಯಲ್ಲಿ ಅವಿತು ತಪ್ಪಿಸಿಕೊಳ್ಳುತ್ತಿತ್ತು. ಹಕ್ಕಿಗಳು ಬೇರೆ ಕಾಳುಗಳನ್ನು ತಿಂದು ಹೋಗುತ್ತಿದ್ದವು. ಹೀಗೆಯೇ ದಿನಗಳು ಕಳೆದವು. ಗೋಧಿ ಬೆಳೆದ ರೈತ ಕಟಾವು ಮಾಡಲು ಬಂದ. ಈ ಕಾಳಿಗೋ ಚಿಂತೆ ಹತ್ತಿಕೊಂಡಿತು. ಅಯ್ಯೋ, ನನ್ನ ಈಗ ಚೀಲದಲ್ಲಿ ತುಂಬಿ ಉಸಿರುಗಟ್ಟಿಸುತ್ತಾನೆ. ಕೊನೆಗೆ ಗಿರಣಿಗೆ ಒಯ್ದು ಪುಡಿ ಮಾಡುತ್ತಾನೆ.

ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಆಲೋಚಿಸಿತು. ಆದರೆ ಅದಕ್ಕೆ ಏನೂ ಮಾಡಲು ಆಗಲಿಲ್ಲ. ಎಲ್ಲ ಕಾಳುಗಳ ಜೊತೆಗೆ ಚೀಲದಲ್ಲಿ ಸೇರಿಹೋಯಿತು. ಅಲ್ಲಿ ಅದಕ್ಕೊಂದು ಉಪಾಯ ಹೊಳೆಯಿತು. ಈ ಚೀಲದ ಮೂಲೆಗೆ ಅಂಟಿ ಕುಳಿತರೆ ಗಿರಣಿ ಬಾಯಿಂದ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿತು. ಅದರಂತೆ ಚೀಲದ ಮೂಲೆಗೆ ಬಿಗಿಯಾಗಿ ಅಂಟಿ ಕುಳಿತುಬಿಟ್ಟಿತು.

ರೈತ ಕಾಳುಗಳನ್ನು ಸಂತೆಗೆ ಒಯ್ದು, ಗಿರಣಿಗೆ ಹಾಕಿದ. ಆ ತುಂಟ ಕಾಳು ಮಾತ್ರ ಚೀಲದಲ್ಲೇ ಉಳಿಯಿತು. ತನ್ನ ಸ್ನೇಹಿತರೆಲ್ಲ ಪುಡಿ, ಪುಡಿಯಾಗಿದ್ದನ್ನು ನೋಡಿ ಮರುಗಿತು. ಜೊತೆಗೆ, `ಅಬ್ಬಾ, ನಾನು ಬಚಾವಾದೆ' ಅಂದುಕೊಂಡಿತು. ಈಗ ಅದರ ಗುರಿ ಏನಿದ್ದರೂ ನೆಲವನ್ನು ಸೇರಿ ಮೊಳಕೆಯೊಡೆಯುವುದಾಗಿತ್ತು. ಹಾಗಾದರೆ ಹೇಗೆ ನೆಲ ಸೇರುವುದು? ದಾರಿ ತಿಳಿಯಲಿಲ್ಲ. ಸುಮ್ಮನೆ ಚೀಲದಲ್ಲೇ ಮುದುರಿ ಕುಳಿತುಕೊಂಡಿತು.

ಅಷ್ಟರಲ್ಲಿ ಒಬ್ಬಾಕೆ ಬಂದು ಗೋಧಿಹಿಟ್ಟನ್ನು ಮನೆಗೆ ಒಯ್ದಳು. ಮನೆಗೆ ಹೋದವಳೇ ಚಪಾತಿ ಮಾಡಬೇಕು ಎನ್ನುತ್ತ ಆ ಚೀಲದಿಂದ ಸ್ವಲ್ಪ ಹಿಟ್ಟನ್ನು ತೆಗೆದು ನೀರು ಹಾಕಿ ನಾದಿ ಚಪಾತಿ ಹಿಟ್ಟನ್ನು ತಯಾರಿಸಿದಳು. ಹಾಗೆ ಚಪಾತಿ ಮಾಡುವಾಗ ಅರೆಬರೆ ಹಿಟ್ಟಾದ ಕಾಳುಗಳನ್ನು ತೆಗೆದು ಪಕ್ಕದಲ್ಲಿರುವ ಕೈ ತೊಳೆಯುವ ತೊಟ್ಟಿಯಲ್ಲಿ ಎಸೆದಳು. ಇದನ್ನು ತುಂಟ ಕಾಳು ನೋಡಿತು. `ಓಹೋ ಮುಂದಿನ ಸಲ ನಾನು ಇವಳ ಕೈಗೆ ಸಿಕ್ಕರೆ ಇವಳು ನನ್ನ ಎತ್ತಿ ಬಿಸಾಕುತ್ತಾಳೆ. ಆಗ ನಾನು ಈ ಮನೆಯಿಂದ ತಪ್ಪಿಸಿಕೊಂಡು ಮಣ್ಣು ಸೇರಬಹುದು' ಎಂದು ಲೆಕ್ಕ ಹಾಕಿತು. ಹಾಗೆಯೇ ಚೀಲದ ಮೇಲ್ಭಾಗಕ್ಕೆ ತೆವಳಿ ಬರತೊಡಗಿತು.

ಅಲ್ಲೇ ಎರಡು ದಿನ ಕುಳಿತಿತು. ಮನೆಯಾಕೆ ಚಪಾತಿ ಮಾಡಲೇ ಇಲ್ಲ. `ಛೇ ಇವಳ್ಯಾಕೆ ಚಪಾತಿ ಮಾಡುತ್ತಿಲ್ಲ' ಎಂದುಕೊಳ್ಳುತ್ತ ಬೇಸರದಿಂದ ಇದ್ದಾಗ, ಒಂದು ದಿನ ಆಕೆ ಚೀಲದಿಂದ ಹಿಟ್ಟು ತೆಗೆದು ಮತ್ತೆ ಚಪಾತಿ ಹಿಟ್ಟು ತಯಾರಿಸತೊಡಗಿದಳು. ಅವಳು ಚೀಲಕ್ಕೆ ಕೈ ಹಾಕಿದ ತಕ್ಷಣ ಹಿಟ್ಟಿನೊಂದಿಗೆ ಸೇರಿಕೊಂಡ ತುಂಟ ಕಾಳು ಬೇಕೆಂದೇ ಅವಳ ಕೈಗೆ ಸಿಲುಕಿಕೊಂಡಿತು. `ಥೂ, ಗಟ್ಟಿ ಕಾಳು. ಅದೇನ್ ಹಿಟ್ಟು ಮಾಡಿದ್ದಾನೊ' ಎಂದು ಗಿರಣಿಯವನನ್ನು ಬೈಯ್ದುಕೊಳ್ಳುತ್ತ ಕಾಳನ್ನು ತೆಗೆದು ಸಿಂಕಿಗೆ ಎಸೆದಳು.
ಸಿಂಕಿಗೆ ಬಿದ್ದಿದ್ದೇ ಕಾಳು ನೀರಿನೊಂದಿಗೆ ಜೋರಾಗಿ ತೂರುತ್ತ ಹೊರಗೆ ಚರಂಡಿಗೆ ಹೋಗಿ ಬಿದ್ದಿತು.

ಚರಂಡಿಗೆ ಬೀಳುತ್ತಿದ್ದಂತೆ, ಅದಕ್ಕೆ ಚರಂಡಿಯ ಗಬ್ಬು ನಾತ ತಡೆಯಲು ಆಗಲಿಲ್ಲ. `ಛೇ, ಎಂಥ ಜಾಗಕ್ಕೆ ಬಂದು ಬಿಟ್ಟೆ' ಎಂದು ಹಳಹಳಿಸಿತು. `ಇಲ್ಲಿ ನಾನು ಮೊಳಕೆಯೊಡೆಯುವ ಬದಲು ಕೊಳೆತು ಹೋಗುತ್ತೇನೆ. ಹಾಗಾದರೆ ನಾನು ಗಿಡವಾಗಲು ಸಾಧ್ಯವೇ ಇಲ್ಲವೆ? ದೇವರೆ ನನ್ನ ಹೇಗಾದರೂ ಈ ನರಕದಿಂದ ತಪ್ಪಿಸು' ಎಂದು ಮೊರೆ ಇಟ್ಟಿತು. ದೇವರ ದಯೆಯೋ, ಅದರ ಅದೃಷ್ಟವೋ ಒಟ್ಟಿನಲ್ಲಿ ಆ ಕಾಳನ್ನು ಒಂದು ಹಕ್ಕಿ ಬಂದು ಕಚ್ಚಿಕೊಂಡು ಹೊರಟಿತು. ಹಕ್ಕಿ ಬಾಯಲ್ಲಿ ಕುಳಿತ ತುಂಟ ಕಾಳಿಗೆ ಇನ್ನಿಲ್ಲದಷ್ಟು ಭಯವಾಯಿತು.

ADVERTISEMENT

`ಆಯ್ತು. ಇನ್ನು ಇದು ನನ್ನ ತಿಂದೇ ಬಿಡುತ್ತೆ. ನಾನು ಗಿಡವಾಗುವ ಕನಸು ಮುಗಿದಂತೆಯೇ' ಎಂದುಕೊಂಡಿತು. ಅಷ್ಟರಲ್ಲಿ ಆ ಹಕ್ಕಿ ಹೋಗಿ ಒಂದು ದೊಡ್ಡ ಮರದ ಮೇಲೆ ಕುಳಿತುಕೊಂಡಿತು. ಇನ್ನೇನು ಕಾಲಲ್ಲಿ ಹಿಡಿದು ಕಾಳನ್ನು ಕುಕ್ಕಿ ತಿನ್ನಬೇಕು ಎನ್ನುವಷ್ಟರಲ್ಲಿ, ಆ ಹಕ್ಕಿಗೆ ಅದೇನು ಕಂಡಿತೊ, ಆ ಕಾಳನ್ನು ಹಾಗೇ ಬಿಟ್ಟು ಹಾರಿ ಹೋಯಿತು. ಹಕ್ಕಿ ಕಾಲಿನಿಂದ ತಪ್ಪಿಸಿಕೊಂಡ ಕಾಳು ಸೀದಾ ಹೋಗಿ ಮರದ ಪೊಟರೆಯೊಳಗೆ ಬಿದ್ದು ಬಿಟ್ಟಿತು.

ಕಾಳಿಗೆ ಮರುಜನ್ಮ ಸಿಕ್ಕಂತಾಯಿತು. ಆದರೆ ಇದೆಲ್ಲಿ ಬಂದೆ ತಾನು ಎಂದು ಸುತ್ತ ನೋಡಿದರೆ ಚಿಕ್ಕ ಪೊಟರೆಯೊಳಗೆ ಬಂದಿರುವುದು ತಿಳಿಯಿತು. `ಅಯ್ಯೋ ಇದು ಮರದ ಪೊಟರೆ. ಇಲ್ಲಿಂದ ನನ್ನ ಪಾರು ಮಾಡುವವರು ಯಾರು? ಇಲ್ಲೇ ಇದ್ದರೆ ಇರುವೆಗಳು ಮುತ್ತಿ ತಿಂದುಬಿಡುತ್ತವೆ. ಛೇ! ಆ ಹಕ್ಕಿ ನನ್ನ ನೆಲದ ಮೇಲಾದರೂ ಎಸೆದಿದ್ದರೆ...' ಅಂದುಕೊಂಡು ಅಲ್ಲೇ ಸುಮ್ಮನೆ ಕುಳಿತಿತು. ದಿನಗಳು ಕಳೆದವು. ಯಾರೂ ಬರಲಿಲ್ಲ. ಕಣ್ಣೆದುರೇ ಹತ್ತಾರು ಹಕ್ಕಿಗಳು ಹಾರಾಡುವುದು ಕಾಣುತ್ತಿತ್ತು. ಯಾರೂ ಕಾಳಿನತ್ತ ಸುಳಿಯಲಿಲ್ಲ.

ಅಷ್ಟರಲ್ಲಾಗಲೇ ಒಂದೆರಡು ಇರುವೆಗಳು ಬಂದು ಮೂಸಿ ಹೋಗಿದ್ದವು. ವಾರಗಳು, ತಿಂಗಳುಗಳು ಕಳೆದವು. ಮಳೆ ಸುರಿಯತೊಡಗಿತು. ಸುತ್ತೆಲ್ಲ ತಂಪನೆಯ ವಾತಾವರಣ. ಈ ತುಂಟ ಕಾಳಿಗೋ ಮೊಳಕೆಯೊಡೆಯುವ ಬಯಕೆ. ಮಣ್ಣಿನ ಬಯಕೆ. ಆದರೂ ಏನೂ ಮಾಡಲಾಗದೆ ಸುಮ್ಮನೆ ಕುಳಿತಿತ್ತು.

ಒಂದು ದಿನ ಇದ್ದಕ್ಕಿದ್ದಂತೆ ಒಂದು ಅಳಿಲು ಆ ಪೊಟರೆಯನ್ನು ಪ್ರವೇಶಿಸಿತು. ಅತ್ತಿತ್ತ ನೋಡುತ್ತ, ಅಲ್ಲಿದ್ದ ಕಸಗಳನ್ನು ಕಾಲಿಂದ ಕೆದರಿ ಹೊರ ಹಾಕತೊಡಗಿತ್ತು. ಬಹುಶಃ ಅದು ಅಲ್ಲಿ ಮನೆ ಮಾಡಲು ನೋಡುತ್ತಿತ್ತು. ಆ ಸಂದರ್ಭದಲ್ಲಿ ಅಳಿಲು ಈ ತುಂಟ ಕಾಳನ್ನೂ ಕಾಲಿನಿಂದ ಕೆದರಿ ಕೆಳಕ್ಕೆ ಬೀಳಿಸಿತು. ಕಾಳಿಗೋ ಎತ್ತರದ ಮರದಿಂದ ಕೆಳಕ್ಕೆ ಬೀಳುತ್ತಿರುವಾಗ ತಲೆಯೇ ತಿರುಗಿತು. ಆದರೂ ತಾನು ಮಣ್ಣು ಸೇರಲಿದ್ದೇನೆ ಎಂಬ ಸಂಭ್ರಮದಲ್ಲಿ ಉಸಿರು ಬಿಗಿಹಿಡಿಯಿತು. ರಪ್ಪನೆ ನೆಲಕ್ಕೆ ಬಿದ್ದ ಕಾಳು ಹಸಿ ಮಣ್ಣ ಸೇರಿತು. ಮಳೆ ನಿರಂತರ ಸುರಿಯಿತು. ನಾಲ್ಕೇ ದಿನ. ತುಂಟ ಕಾಳು ಮೊಳಕೆಯೊಡೆದೇ ಬಿಟ್ಟಿತು!
-ಗೀರ್ವಾಣಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.